1 ತಿಮೊತಿ
3 ಆ ಹೇಳಿಕೆಯು ನಂಬತಕ್ಕದ್ದಾಗಿದೆ.
ಯಾವನಾದರೂ ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವಲ್ಲಿ ಅವನು ಒಳ್ಳೇ ಕಾರ್ಯವನ್ನು ಅಪೇಕ್ಷಿಸುವವನಾಗಿದ್ದಾನೆ. 2 ಆದುದರಿಂದ, ಮೇಲ್ವಿಚಾರಕನು ದೋಷಾರೋಪಣೆಯಿಲ್ಲದವನೂ ಏಕಪತ್ನಿಯುಳ್ಳವನೂ ಮಿತಸ್ವಭಾವದವನೂ ಸ್ವಸ್ಥಬುದ್ಧಿಯುಳ್ಳವನೂ ವ್ಯವಸ್ಥಿತನೂ ಅತಿಥಿಸತ್ಕಾರಮಾಡುವವನೂ ಬೋಧಿಸಲು ಅರ್ಹನೂ ಆಗಿರಬೇಕು. 3 ಅವನು ಕುಡಿದು ಜಗಳಮಾಡುವವನೂ ಹೊಡೆಯುವವನೂ ಆಗಿರದೆ ನ್ಯಾಯಸಮ್ಮತನಾಗಿರಬೇಕು; ಆಕ್ರಮಣಶೀಲನೂ ಹಣದಾಸೆಯುಳ್ಳವನೂ ಆಗಿರದೆ 4 ತನ್ನ ಸ್ವಂತ ಮನೆವಾರ್ತೆಯವರನ್ನು ಉತ್ತಮವಾದ ರೀತಿಯಲ್ಲಿ ಮೇಲ್ವಿಚಾರಣೆಮಾಡುವವನೂ ಪೂರ್ಣ ಗಂಭೀರತೆಯೊಂದಿಗೆ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡವನೂ ಆಗಿರಬೇಕು. 5 (ತನ್ನ ಸ್ವಂತ ಮನೆವಾರ್ತೆಯನ್ನು ಹೇಗೆ ಮೇಲ್ವಿಚಾರಣೆಮಾಡಬೇಕೆಂದು ತಿಳಿಯದವನು ದೇವರ ಸಭೆಯನ್ನು ಹೇಗೆ ತಾನೇ ನೋಡಿಕೊಳ್ಳುವನು?) 6 ಅವನು ನವಶಿಷ್ಯನಾಗಿರಬಾರದು, ಏಕೆಂದರೆ ಅಂಥವನು ಹೆಮ್ಮೆಯಿಂದ ಉಬ್ಬಿಕೊಂಡವನಾಗಿ ಪಿಶಾಚನಿಗೆ ಪ್ರಾಪ್ತವಾದ ನ್ಯಾಯತೀರ್ಪಿಗೆ ಒಳಗಾಗಬಹುದು. 7 ಇದಲ್ಲದೆ, ಅವನು ನಿಂದೆಗೂ ಪಿಶಾಚನ ಉರ್ಲಿಗೂ ಬೀಳದಂತೆ ಹೊರಗಿನ ಜನರಿಂದಲೂ ಉತ್ತಮ ಸಾಕ್ಷಿಯನ್ನು ಹೊಂದಿದವನಾಗಿರಬೇಕು.
8 ಅದೇ ರೀತಿಯಲ್ಲಿ, ಶುಶ್ರೂಷಾ ಸೇವಕರು ಸಹ ಗಂಭೀರ ವ್ಯಕ್ತಿಗಳಾಗಿರಬೇಕು, ಎರಡು ಮಾತಿನವರೂ ಅತಿಯಾಗಿ ದ್ರಾಕ್ಷಾಮದ್ಯವನ್ನು ಸೇವಿಸುವವರೂ ಅಪ್ರಾಮಾಣಿಕ ಲಾಭಕ್ಕಾಗಿ ಆಶೆಪಡುವವರೂ ಆಗಿರದೆ 9 ಶುದ್ಧ ಮನಸ್ಸಾಕ್ಷಿಯೊಂದಿಗೆ ನಂಬಿಕೆಯ ಪವಿತ್ರ ರಹಸ್ಯವನ್ನು ಬಿಗಿಯಾಗಿ ಹಿಡಿದುಕೊಂಡವರೂ ಆಗಿರಬೇಕು.
10 ಇದಲ್ಲದೆ, ಇವರು ಮೊದಲಾಗಿ ಯೋಗ್ಯರಾಗಿದ್ದಾರೋ ಎಂದು ಪರೀಕ್ಷಿಸಲ್ಪಡಲಿ, ತರುವಾಯ ಅವರು ನಿಂದಾರಹಿತರಾಗಿರುವುದರಿಂದ ಶುಶ್ರೂಷಕರಾಗಿ ಸೇವೆಮಾಡಲಿ.
11 ಅದೇ ರೀತಿಯಲ್ಲಿ ಸ್ತ್ರೀಯರೂ ಗಂಭೀರತೆಯಿಂದಿರಬೇಕು, ಮಿಥ್ಯಾಪವಾದಿಗಳಾಗಿರದೆ ಮಿತಸ್ವಭಾವದವರೂ ಎಲ್ಲ ವಿಷಯಗಳಲ್ಲಿ ನಂಬಿಗಸ್ತರೂ ಆಗಿರಬೇಕು.
12 ಶುಶ್ರೂಷಾ ಸೇವಕರು ಏಕಪತ್ನಿಯುಳ್ಳವರೂ ತಮ್ಮ ಮಕ್ಕಳನ್ನು ಮತ್ತು ಸ್ವಂತ ಮನೆವಾರ್ತೆಯನ್ನು ಒಳ್ಳೇ ರೀತಿಯಲ್ಲಿ ಮೇಲ್ವಿಚಾರಣೆಮಾಡುವವರೂ ಆಗಿರಲಿ. 13 ಒಳ್ಳೇ ರೀತಿಯಲ್ಲಿ ಶುಶ್ರೂಷೆ ಮಾಡುತ್ತಿರುವ ಪುರುಷರು ತಮಗಾಗಿ ಒಳ್ಳೇ ನಿಲುವನ್ನೂ ಕ್ರಿಸ್ತ ಯೇಸುವಿನ ಸಂಬಂಧವಾದ ನಂಬಿಕೆಯಲ್ಲಿ ಬಹಳ ವಾಕ್ಸರಳತೆಯನ್ನೂ ಪಡೆದುಕೊಳ್ಳುತ್ತಾ ಇರುತ್ತಾರೆ.
14 ನಾನು ಬೇಗನೆ ನಿನ್ನ ಬಳಿಗೆ ಬರಲು ನಿರೀಕ್ಷಿಸುತ್ತಿರುವುದಾದರೂ ಈ ವಿಷಯಗಳನ್ನು ನಿನಗೆ ಬರೆಯುತ್ತಿದ್ದೇನೆ; 15 ಏಕೆಂದರೆ ಒಂದುವೇಳೆ ನಾನು ಬರುವುದು ತಡವಾದರೂ, ಜೀವವುಳ್ಳ ದೇವರ ಸಭೆಯೂ ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿರುವ ದೇವರ ಮನೆವಾರ್ತೆಯಲ್ಲಿ ನೀನು ನಡೆದುಕೊಳ್ಳಬೇಕಾದ ರೀತಿಯು ನಿನಗೆ ತಿಳಿದಿರಬೇಕು. 16 ಈ ದೇವಭಕ್ತಿಯ ಪವಿತ್ರ ರಹಸ್ಯವು ಮಹತ್ತರವಾದದ್ದು ಎಂಬುದು ಒಪ್ಪಿಕೊಳ್ಳತಕ್ಕದ್ದೇ. ಅದೇನೆಂದರೆ, ‘ಅವನು ಶರೀರದಲ್ಲಿ ಪ್ರತ್ಯಕ್ಷನಾದನು, ಆತ್ಮಸಂಬಂಧದಲ್ಲಿ ನೀತಿವಂತನೆಂದು ನಿರ್ಣಯಿಸಲ್ಪಟ್ಟನು, ದೇವದೂತರಿಗೆ ಕಾಣಿಸಿಕೊಂಡನು, ಅನ್ಯಜನಾಂಗಗಳ ಮಧ್ಯೆ ಸಾರಲ್ಪಟ್ಟನು, ಲೋಕದಲ್ಲಿ ನಂಬಲ್ಪಟ್ಟನು, ಮಹಿಮೆಯೊಂದಿಗೆ ಮೇಲೆ ಅಂಗೀಕರಿಸಲ್ಪಟ್ಟನು.’