ಕೆಟ್ಟದ್ದನ್ನು ನಾವು ಹೇಸೋಣ
ಯೆಹೋವನು ಒಬ್ಬ ಪರಿಶುದ್ಧ ದೇವರಾಗಿದ್ದಾನೆ. ಪುರಾತನ ಸಮಯಗಳಲ್ಲಿ ಆತನು “ಇಸ್ರಾಯೇಲಿನ ಪರಿಶುದ್ಧ”ನಾಗಿದ್ದನು (NW), ಮತ್ತು ಅಂತೆಯೇ ಆತನು ಇಸ್ರಾಯೇಲ್ಯರನ್ನು ಶುದ್ಧರೂ, ನಿಷ್ಕಳಂಕರೂ ಆಗಿರುವಂತೆ ಕೇಳಿಕೊಂಡನು. (ಕೀರ್ತನೆ 89:18) ತಾನಾದುಕೊಂಡ ಜನರಿಗೆ ಆತನು ಹೇಳಿದ್ದು: “ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು.” (ಯಾಜಕಕಾಂಡ 11:45) “ಯೆಹೋವನ ಪರ್ವತವನ್ನು ಹತ್ತ”ಲು ಬಯಸುವ ಯಾವನಾದರೂ, “ಅಯೋಗ್ಯಕಾರ್ಯಗಳಲ್ಲಿ ಮನಸ್ಸಿಡದೆ ಮೋಸ ಪ್ರಮಾಣಮಾಡದೆ ಶುದ್ಧಹಸ್ತವೂ ನಿರ್ಮಲಮನಸ್ಸೂ ಉಳ್ಳವನಾಗಿ”ರಬೇಕಿತ್ತು. (ಕೀರ್ತನೆ 24:3, 4) ಕೇವಲ ಪಾಪಪೂರ್ಣ ಕೃತ್ಯಗಳಿಂದ ದೂರವಿರುವುದಕ್ಕಿಂತಲೂ ಹೆಚ್ಚಿನ ಅರ್ಥ ಇದಕ್ಕಿತ್ತು. “ಕೆಟ್ಟದ್ದನ್ನು ದ್ವೇಷಿಸುವುದು” ಅದರ ಅರ್ಥವಾಗಿತ್ತು.—ಜ್ಞಾನೋಕ್ತಿ 8:13, NW.
ಪ್ರೀತಿಪೂರ್ಣವಾಗಿ ಯೆಹೋವನು ವಿವರವಾದ ನಿಯಮಗಳನ್ನು ವಿಧಿಸಿದನು. ಇದರಿಂದಾಗಿ ಇಸ್ರಾಯೇಲ್ ಜನಾಂಗವು, ತಪ್ಪುಗೈಯುವಿಕೆಯನ್ನು ಗುರುತಿಸಿ, ಅದನ್ನು ಮಾಡುವುದರಿಂದ ದೂರವಿರಸಾಧ್ಯವಿತ್ತು. (ರೋಮಾಪುರ 7:7, 12) ಈ ನಿಯಮಗಳಲ್ಲಿ ನೈತಿಕತೆಯ ಕುರಿತಾದ ಕಟ್ಟುನಿಟ್ಟಿನ ಮಾರ್ಗದರ್ಶನೆಗಳು ಸೇರಿದ್ದವು. ವ್ಯಭಿಚಾರ, ಸಲಿಂಗಿ ಕಾಮದ ಕೃತ್ಯಗಳು, ಅಗಮ್ಯಗಮನದ ಅಕ್ರಮ ಸಂಬಂಧಗಳು, ಮತ್ತು ಪಶುಸಂಭೋಗಗಳು ಅಪರಿಶುದ್ಧ ಆತ್ಮಿಕ ಮಲಿನಕಾರಕಗಳಾಗಿ ಗುರುತಿಸಲ್ಪಟ್ಟಿದ್ದವು. (ಯಾಜಕಕಾಂಡ 18:23; 20:10-17) ಅಂತಹ ಕೀಳ್ಮಟ್ಟದ ಕೃತ್ಯಗಳ ದೋಷಾರೋಪವುಳ್ಳವರು, ಇಸ್ರಾಯೇಲ್ ಜನಾಂಗದಿಂದ ನಾಶಪಡಿಸಲ್ಪಟ್ಟರು.
ಅಭಿಷಿಕ್ತ ಕ್ರೈಸ್ತರ ಸಭೆಯು, “ದೇವರ ಇಸ್ರಾಯೇಲ್” ಆಗಿ ಪರಿಣಮಿಸಿದಾಗ, ಅವರಿಗಾಗಿ ತದ್ರೀತಿಯ ನೈತಿಕ ಮಟ್ಟಗಳು ವಿಧಿಸಲ್ಪಟ್ಟವು. (ಗಲಾತ್ಯ 6:16) ಕ್ರೈಸ್ತರು ಸಹ ‘ಕೆಟ್ಟತನವನ್ನು ಹೇಸ’ಬೇಕಾಗಿತ್ತು. (ರೋಮಾಪುರ 12:9) ‘ನಾನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ಪರಿಶುದ್ಧರಾಗಿರಬೇಕು’ ಎಂದು ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದ ಮಾತುಗಳು, ಅವರಿಗೂ ಅನ್ವಯಿಸಿದವು. (1 ಪೇತ್ರ 1:15, 16) ಜಾರತ್ವ, ವ್ಯಭಿಚಾರ, ಸಲಿಂಗಿ ಕಾಮದ ಕೃತ್ಯಗಳು, ಪಶುಸಂಭೋಗ, ಮತ್ತು ಅಗಮ್ಯಗಮನಗಳಂತಹ ಅಪರಿಶುದ್ಧ ರೂಢಿಗಳು, ಕ್ರೈಸ್ತ ಸಭೆಯನ್ನು ಭ್ರಷ್ಟಗೊಳಿಸಬಾರದಿತ್ತು. ಅಂತಹ ವಿಷಯಗಳಲ್ಲಿ ಒಳಗೂಡುವುದನ್ನು ನಿಲ್ಲಿಸಲು ನಿರಾಕರಿಸುವವರು, ದೇವರ ರಾಜ್ಯದಿಂದ ಬಹಿಷ್ಕರಿಸಲ್ಪಡಸಾಧ್ಯವಿದೆ. (ರೋಮಾಪುರ 1:26, 27; 2:22; 1 ಕೊರಿಂಥ 6:9, 10; ಇಬ್ರಿಯ 13:4) ಈ “ಕಡೇ ದಿವಸಗಳ”ಲ್ಲಿ, ಅದೇ ಮಟ್ಟವು “ಬೇರೆ ಕುರಿಗಳಿ”ಗೆ ಅನ್ವಯಿಸುತ್ತದೆ. (2 ತಿಮೊಥೆಯ 3:1; ಯೋಹಾನ 10:16) ಫಲಿತಾಂಶವಾಗಿ, ಅಭಿಷಿಕ್ತ ಕ್ರೈಸ್ತರು ಹಾಗೂ ಬೇರೆ ಕುರಿಗಳು, ಯೆಹೋವನ ಸಾಕ್ಷಿಗಳೋಪಾದಿ ತಮ್ಮ ದೇವರ ಹೆಸರನ್ನು ಧರಿಸಲು ಶಕ್ತರಾಗಿದ್ದು, ಶುದ್ಧವೂ ಹಿತಕರವೂ ಆದ ಒಂದು ಜನಾಂಗವನ್ನು ರಚಿಸುತ್ತಾರೆ.—ಯೆಶಾಯ 43:10.
ಸಭೆಯನ್ನು ಶುದ್ಧವಾಗಿಡುವುದು
ಇದಕ್ಕೆ ವ್ಯತಿರಿಕ್ತವಾಗಿ, ಲೋಕವು ಸರ್ವ ರೀತಿಯ ಅನೈತಿಕತೆಯನ್ನು ಮನ್ನಿಸುತ್ತದೆ. ಸತ್ಯ ಕ್ರೈಸ್ತರು ಭಿನ್ನರಾಗಿದ್ದರೂ, ಈಗ ಯೆಹೋವನ ಸೇವೆಮಾಡುತ್ತಿರುವ ಅನೇಕರು, ಒಂದು ಕಾಲದಲ್ಲಿ ಲೋಕದ ಭಾಗವಾಗಿದ್ದರು ಎಂಬುದನ್ನು ಅವರು ಮರೆಯಬಾರದು. ಅವರು ನಮ್ಮ ಪರಿಶುದ್ಧ ದೇವರನ್ನು ತಿಳಿಯುವ ಮೊದಲು, “ಅಪರಿಮಿತವಾದ ಪಟಿಂಗತನದಲ್ಲಿ” ಮುಳುಗಿದ್ದು, ತಮ್ಮ ಪತಿತ ಶರೀರದ ಅಪೇಕ್ಷೆಗಳನ್ನೂ ಭ್ರಾಂತಿಗಳನ್ನೂ ಯಾಕೆ ತೃಪ್ತಿಪಡಿಸಬಾರದು ಎಂಬುದರ ಕಾರಣವನ್ನು ಗ್ರಹಿಸದಿದ್ದ ಅನೇಕ ಜನರಿದ್ದಾರೆ. (1 ಪೇತ್ರ 4:4) ಜನಾಂಗಗಳ ಕೀಳ್ಮಟ್ಟದ ಜನರ ಅಸಹ್ಯಕರವಾದ ರೂಢಿಗಳನ್ನು ವರ್ಣಿಸಿದ ಬಳಿಕ, ಅಪೊಸ್ತಲ ಪೌಲನು ಹೇಳಿದ್ದು: “ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ.” ಆದರೆ, ಅವನು ಮುಂದುವರಿಸುತ್ತಾ ಹೇಳಿದ್ದು: “ಆದರೂ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಲ್ಲಿಯೂ ತೊಳೆದುಕೊಂಡಿರಿ, ದೇವಜನರಾದಿರಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.”—1 ಕೊರಿಂಥ 6:11.
ಎಂತಹ ಸಾಂತ್ವನದಾಯಕ ಹೇಳಿಕೆ ಅದಾಗಿದೆ! ವ್ಯಕ್ತಿಯೊಬ್ಬನು ಜೀವಿತದಲ್ಲಿ ಈ ಮುಂಚೆ ಏನನ್ನೇ ಮಾಡಿರಲಿ, ತನ್ನ ಹೃದಯದ ಮೇಲೆ ಕ್ರಿಸ್ತನ ಮಹಿಮಾಯುತ ಸುವಾರ್ತೆಯು ಪ್ರಭಾವವನ್ನು ಬೀರಿದಾಗ, ಅವನು ಬದಲಾಗುತ್ತಾನೆ. ಅವನು ನಂಬಿಕೆಯನ್ನು ಅಭ್ಯಾಸಿಸಿ, ಯೆಹೋವ ದೇವರಿಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ. ದೇವರ ದೃಷ್ಟಿಯಲ್ಲಿ ಶುದ್ಧಗೊಳಿಸಲ್ಪಟ್ಟು, ಅಂದಿನಿಂದ ಅವನು ನೈತಿಕವಾಗಿ ನಿರ್ಮಲವಾದ ಒಂದು ಜೀವಿತವನ್ನು ನಡೆಸುತ್ತಾನೆ. (ಇಬ್ರಿಯ 9:14) ಈ ಹಿಂದೆ ಅವನು ಮಾಡಿದಂತಹ ಪಾಪಗಳು ಕ್ಷಮಿಸಲ್ಪಡುತ್ತವೆ. ಮತ್ತು ಅವನು ‘ಮುಂದಿರುವ ವಿಷಯಗಳನ್ನು ಹಿಡಿಯುವುದಕ್ಕೆ ಎದೆಬೊಗ್ಗಿದವನಾ’ಗಸಾಧ್ಯವಿದೆ.a—ಫಿಲಿಪ್ಪಿ 3:13, 14; ರೋಮಾಪುರ 4:7, 8.
ಕೊಲೆ ಹಾಗೂ ವ್ಯಭಿಚಾರಕ್ಕಾಗಿ ಯೆಹೋವನು, ಪಶ್ಚಾತ್ತಾಪಪಟ್ಟ ದಾವೀದನನ್ನು ಕ್ಷಮಿಸಿದನು. ಅನೈತಿಕ ವಿಗ್ರಹಾರಾಧನೆ ಹಾಗೂ ರಕ್ತಪಾತಕ್ಕಾಗಿ ಪಶ್ಚಾತ್ತಾಪಪಟ್ಟ ಮನಸ್ಸೆಯನ್ನು ಆತನು ಕ್ಷಮಿಸಿದನು. (2 ಸಮುವೇಲ 12:9, 13; 2 ಪೂರ್ವಕಾಲವೃತ್ತಾಂತ 33:2-6, 10-13) ನಾವು ಪಶ್ಚಾತ್ತಾಪಪಟ್ಟು, ಪ್ರಾಮಾಣಿಕತೆ ಹಾಗೂ ದೀನಭಾವದಿಂದ ಆತನನ್ನು ಸಮೀಪಿಸುವುದಾದರೆ, ಆತನು ನಮ್ಮನ್ನೂ ಕ್ಷಮಿಸಲು ಸಿದ್ಧನಾಗಿದ್ದಾನೆ ಎಂಬುದಕ್ಕಾಗಿ ನಾವು ನಿಜವಾಗಿಯೂ ಕೃತಜ್ಞರಾಗಿರಸಾಧ್ಯವಿದೆ. ಆದರೂ, ಯೆಹೋವನು ದಾವೀದನಿಗೆ ಹಾಗೂ ಮನಸ್ಸೆಗೆ ಕ್ಷಮೆನೀಡಿದ್ದರ ಹೊರತಾಗಿಯೂ, ಈ ಇಬ್ಬರು ಪುರುಷರು ಮತ್ತು ಅವರೊಂದಿಗೆ ಇಸ್ರಾಯೇಲ್ಯರು, ತಮ್ಮ ಪಾಪಪೂರ್ಣ ಕೃತ್ಯಗಳ ಪರಿಣಾಮಗಳೊಂದಿಗೆ ಜೀವಿಸಬೇಕಾಗಿತ್ತು. (2 ಸಮುವೇಲ 12:11, 12; ಯೆರೆಮೀಯ 15:3-5) ತದ್ರೀತಿಯಲ್ಲಿ, ಯೆಹೋವನು ಪಶ್ಚಾತ್ತಾಪಪಡುವ ಪಾಪಿಗಳನ್ನು ಕ್ಷಮಿಸುವಾಗಲೂ, ಅವರ ವರ್ತನೆಗಳಿಗಾಗಿ ತಪ್ಪಿಸಲಸಾಧ್ಯವಾದ ಪರಿಣಾಮಗಳು ಬಂದೇಬರಬಹುದು.
ಅನಿವಾರ್ಯ ಪರಿಣಾಮಗಳು
ಉದಾಹರಣೆಗೆ, ಅನೈತಿಕ ಹಾದರದ ಜೀವಿತವನ್ನು ಜೀವಿಸಿ, ಏಯ್ಡ್ಸ್ ರೋಗವನ್ನು ಸೋಂಕಿಸಿಕೊಳ್ಳುವ ಒಬ್ಬ ವ್ಯಕ್ತಿಯು, ಸತ್ಯವನ್ನು ಅಂಗೀಕರಿಸಬಹುದು. ಅವನು ಸಮರ್ಪಣೆ ಮತ್ತು ದೀಕ್ಷಾಸ್ನಾನದ ಹಂತವನ್ನು ತಲಪುವ ಮಟ್ಟಿಗೆ ತನ್ನ ಜೀವಿತದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಈಗ ಅವನು ಆತ್ಮಿಕವಾಗಿ ಶುದ್ಧನಾಗಿರುವ ಒಬ್ಬ ಕ್ರೈಸ್ತನಾಗಿದ್ದಾನೆ. ಅವನು ದೇವರೊಂದಿಗೆ ಸುಸಂಬಂಧವನ್ನು ಹೊಂದಿದ್ದಾನೆ. ಭವಿಷ್ಯತ್ತಿಗಾಗಿ ಒಂದು ಅದ್ಭುತಕರವಾದ ನಿರೀಕ್ಷೆ ಅವನಿಗಿದೆ. ಆದರೆ ಅವನಿಗೆ ಇನ್ನೂ ಏಯ್ಡ್ಸ್ ರೋಗವಿದೆ. ಕಟ್ಟಕಡೆಗೆ ಅವನು ಆ ರೋಗದಿಂದ ಸಾಯಬಹುದು. ಆದರೆ ಇದು ಒಂದು ದುಃಖಕರವಾದ, ಅದೇ ಸಮಯದಲ್ಲಿ ಅವನ ಹಿಂದಣ ನಡತೆಯ ತಪ್ಪಿಸಿಕೊಳ್ಳಲಸಾಧ್ಯವಾದ ಪರಿಣಾಮವಾಗಿದೆ. ಕೆಲವು ಕ್ರೈಸ್ತರಿಗಾದರೊ ಹಿಂದಣ ಘೋರ ಅನೈತಿಕತೆಯ ಪರಿಣಾಮಗಳು ಬೇರೆ ರೀತಿಗಳಲ್ಲಿ ಪಟ್ಟುಹಿಡಿಯಬಹುದು. ಅವರ ದೀಕ್ಷಾಸ್ನಾನದ ನಂತರ ಹಲವಾರು ವರ್ಷಗಳ ವರೆಗೆ, ಈ ವಿಷಯಗಳ ವ್ಯವಸ್ಥೆಯಲ್ಲಿನ ಅವರ ಉಳಿದ ಜೀವಮಾನದಲ್ಲೆಲ್ಲಾ, ತಮ್ಮ ಹಿಂದಿನ ಅನೈತಿಕ ಜೀವನ ಶೈಲಿಗೆ ಹಿಂದೆರಳುವಂತೆ ತಮ್ಮ ಶರೀರದಲ್ಲಿ ಉಂಟಾಗುವ ಪ್ರಚೋದನೆಗಳೊಂದಿಗೆ ಅವರು ಹೋರಾಡಬೇಕಾಗಿದ್ದೀತು. ಯೆಹೋವನ ಆತ್ಮದ ಸಹಾಯದಿಂದ, ಇದನ್ನು ಪ್ರತಿರೋಧಿಸುವುದರಲ್ಲಿ ಅನೇಕರು ಸಫಲರಾಗುತ್ತಾರೆ. ಆದರೆ ಅವರು ಸತತವಾದ ಹೋರಾಟವನ್ನು ನಡೆಸಬೇಕಾಗಿದೆ.—ಗಲಾತ್ಯ 5:16, 17.
ಅಂಥವರು ತಮ್ಮ ಪ್ರಚೋದನೆಗಳನ್ನು ನಿಯಂತ್ರಿಸಿಕೊಳ್ಳುವಷ್ಟು ಸಮಯದ ವರೆಗೆ ಪಾಪಮಾಡುವುದಿಲ್ಲ. ಆದರೆ ಅವರು ಪುರುಷರಾಗಿರುವಲ್ಲಿ, ಪ್ರಬಲವಾದ ಶಾರೀರಿಕ ಪ್ರೇರಣೆಗಳೊಂದಿಗೆ ಇನ್ನೂ ಹೋರಾಟ ನಡೆಸಬೇಕಾಗಿರುವಾಗ, ಅವರು ವಿವೇಕಯುತವಾಗಿ ಸಭೆಯಲ್ಲಿನ ಜವಾಬ್ದಾರಿಗಾಗಿ ‘ಎಟುಕಿಸಿಕೊಳ್ಳ’ದಿರುವ (NW) ನಿರ್ಧಾರವನ್ನು ಮಾಡಬಹುದು. (1 ತಿಮೊಥೆಯ 3:1) ಏಕೆ? ಏಕೆಂದರೆ ಸಭೆಯು ಹಿರಿಯರಲ್ಲಿ ಇಡುವ ವಿಶ್ವಾಸದ ಕುರಿತು ಅವರು ತಿಳಿದಿದ್ದಾರೆ. (ಯೆಶಾಯ 32:1, 2; ಇಬ್ರಿಯ 13:17) ಅನೇಕ ವೈಯಕ್ತಿಕ ವಿಷಯಗಳ ಕುರಿತಾದ ಸಲಹೆಗಾಗಿ ಹಿರಿಯರನ್ನು ಸಂಪರ್ಕಿಸಲಾಗುತ್ತದೆ ಮತ್ತು ಅವರು ಸೂಕ್ಷ್ಮ ಸನ್ನಿವೇಶಗಳನ್ನು ನಿರ್ವಹಿಸಬೇಕಾಗುತ್ತದೆ ಎಂಬುದನ್ನು ಇವರು ಗ್ರಹಿಸಿಕೊಳ್ಳುತ್ತಾರೆ. ಅಶುದ್ಧವಾದ ಶಾರೀರಿಕ ಬಯಕೆಗಳೊಂದಿಗೆ ಸತತವಾಗಿ ಹೋರಾಡುವ ಒಬ್ಬನಿಗೆ, ಅಂತಹ ಜವಾಬ್ದಾರಿಯ ಸ್ಥಾನಕ್ಕಾಗಿ ಪ್ರಯತ್ನಿಸುವುದು, ಪ್ರೀತಿ ಮತ್ತು ವಿವೇಕದ್ದಾಗಿರುವುದೂ ಇಲ್ಲ, ನ್ಯಾಯಸಮ್ಮತವೂ ಅಲ್ಲ.—ಜ್ಞಾನೋಕ್ತಿ 14:16; ಯೋಹಾನ 15:12, 13; ರೋಮಾಪುರ 12:1.
ದೀಕ್ಷಾಸ್ನಾನವನ್ನು ಪಡೆದುಕೊಳ್ಳುವುದಕ್ಕೆ ಮೊದಲು, ಶಿಶುಪೀಡಕನಾಗಿದ್ದ ವ್ಯಕ್ತಿಯೊಬ್ಬನಿಗೆ, ಬೇರೊಂದು ಪರಿಣಾಮವಿರಬಹುದು. ಅವನು ಸತ್ಯವನ್ನು ಕಲಿಯುವಾಗ, ಈ ಕ್ರೂರ ಪಾಪವನ್ನು ಸಭೆಯೊಳಕ್ಕೆ ತರದೆ, ಪಶ್ಚಾತ್ತಾಪಪಟ್ಟು, ಜೀವಿತದಲ್ಲಿ ಬದಲಾವಣೆಗಳನ್ನು ಮಾಡುತ್ತಾನೆ. ತದನಂತರ ಅವನು ಒಳ್ಳೆಯ ಪ್ರಗತಿಯನ್ನು ಮಾಡಿ, ತನ್ನ ಕೆಟ್ಟ ಪ್ರೇರಣೆಗಳನ್ನು ಸಂಪೂರ್ಣವಾಗಿ ಜಯಿಸಬಹುದು. ಮತ್ತು ಸಭೆಯಲ್ಲಿನ ಜವಾಬ್ದಾರಿಯುತ ಸ್ಥಾನಕ್ಕಾಗಿ ಅವನು ‘ಎಟುಕಿಸಿಕೊಳ್ಳುವ’ ಪ್ರವೃತ್ತಿಯುಳ್ಳವನೂ ಆಗಿರಬಹುದು. ಆದರೂ, ಹಿಂದೆ ಶಿಶುಪೀಡಕನಾಗಿದ್ದವನೊಬ್ಬನು, ಈಗಲೂ ಅವನು ಸಮುದಾಯದಲ್ಲಿನ ಅಪಕೀರ್ತಿಯ ಪರಿಣಾಮಗಳೊಂದಿಗೆ ಜೀವಿಸಬೇಕಾಗಿರುವಲ್ಲಿ ಆಗೇನು? ಅವನು “ದೋಷಾರೋಪಣೆಯಿಲ್ಲದವನೂ . . . ಹೊರಗಣ ಜನರಿಂದ ಒಳ್ಳೆಯವನೆನಿಸಿಕೊಂಡಿರುವವನೂ, . . . ನಿಂದಾರಹಿತನೂ [ಆಗಿ]”ರಲು (NW) ಸಾಧ್ಯವಿದೆಯೊ? (1 ತಿಮೊಥೆಯ 3:1-7, 10; ತೀತ 1:7) ಇಲ್ಲ, ಅವನು ಹಾಗಿರಲು ಸಾಧ್ಯವಿಲ್ಲ. ಆದುದರಿಂದ, ಅವನು ಸಭಾ ಸುಯೋಗಗಳಿಗಾಗಿ ಅರ್ಹನಾಗುವುದಿಲ್ಲ.
ಸಮರ್ಪಿತ ಕ್ರೈಸ್ತನೊಬ್ಬನು ಪಾಪಮಾಡುವಾಗ
ನಾವು ದುರ್ಬಲರಾಗಿದ್ದೇವೆ ಮತ್ತು ದೀಕ್ಷಾಸ್ನಾನದ ಬಳಿಕವೂ ನಾವು ಪಾಪಕ್ಕೆ ವಶವಾಗಬಹುದು ಎಂಬುದನ್ನು ಯೆಹೋವನು ಅರ್ಥಮಾಡಿಕೊಳ್ಳುತ್ತಾನೆ. ಅಪೊಸ್ತಲ ಯೋಹಾನನು ತನ್ನ ದಿನದ ಕ್ರೈಸ್ತರಿಗೆ ಬರೆದುದು: “ನೀವು ಪಾಪಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ, ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ.” (1 ಯೋಹಾನ 2:1, 2) ಹೌದು, ಪಾಪಕ್ಕೆ ವಶರಾಗುವ ದೀಕ್ಷಾಸ್ನಾತ ಕ್ರೈಸ್ತರು, ನಿಜವಾಗಿಯೂ ಪಶ್ಚಾತ್ತಾಪಪಟ್ಟು, ತಮ್ಮ ಕೆಟ್ಟ ಮಾರ್ಗವನ್ನು ತೊರೆಯುವುದಾದರೆ, ಯೇಸುವಿನ ಯಜ್ಞದ ಆಧಾರದ ಮೇಲೆ, ಯೆಹೋವನು ಅವರನ್ನು ಕ್ಷಮಿಸುವನು.
ಇದರ ಒಂದು ಉದಾಹರಣೆಯು, ಕೊರಿಂಥದಲ್ಲಿದ್ದ ಪ್ರಥಮ ಶತಮಾನದ ಸಭೆಯಲ್ಲಿ ಕಂಡುಬಂದಿತ್ತು. ಹೊಸದಾಗಿ ಸ್ಥಾಪಿತವಾದ ಆ ಸಭೆಯಲ್ಲಿ ಅಗಮ್ಯಗಮನದ ಜಾರತ್ವದ ಒಂದು ವಿದ್ಯಮಾನವಿತ್ತೆಂಬುದು ಅಪೊಸ್ತಲ ಪೌಲನಿಗೆ ತಿಳಿದುಬಂತು. ಮತ್ತು ಅದರಲ್ಲಿ ಒಳಗೂಡಿದ ಮನುಷ್ಯನನ್ನು ಬಹಿಷ್ಕರಿಸಬೇಕೆಂದು ಅವನು ಸೂಚನೆಗಳನ್ನು ಕೊಟ್ಟನು. ತದನಂತರ, ಆ ಪಾಪಿಯು ಪಶ್ಚಾತ್ತಾಪಪಟ್ಟನು. ಮತ್ತು ಅವನನ್ನು ಪುನಃಸ್ಥಾಪಿಸುವಂತೆ ಪೌಲನು ಆ ಸಭೆಯನ್ನು ಹುರಿದುಂಬಿಸಿದನು. (1 ಕೊರಿಂಥ 5:1, 13; 2 ಕೊರಿಂಥ 2:5-9) ಹೀಗೆ, ಯೆಹೋವನ ಪ್ರೀತಿಪೂರ್ಣ ಕೃಪೆ ಹಾಗೂ ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಅಪಾರ ಮೌಲ್ಯದ ಗುಣಪಡಿಸುವ ಶಕ್ತಿಯಿಂದಾಗಿ, ಆ ಮನುಷ್ಯನು ತನ್ನ ಪಾಪದಿಂದ ಶುದ್ಧೀಕರಿಸಲ್ಪಟ್ಟನು. ತದ್ರೀತಿಯ ಘಟನೆಗಳು ಇಂದು ಸಂಭವಿಸಬಹುದು. ಆದರೂ, ಪುನಃ ಗಂಭೀರವಾದ ಪಾಪವನ್ನು ಮಾಡಿರುವ ದೀಕ್ಷಾಸ್ನಾನಿತ ವ್ಯಕ್ತಿಯೊಬ್ಬನು, ಪಶ್ಚಾತ್ತಾಪಪಟ್ಟು, ಯೆಹೋವನ ದೃಷ್ಟಿಯಲ್ಲಿ ಕ್ಷಮಿಸಲ್ಪಟ್ಟಿರುವುದಾದರೂ, ಅವನ ಪಾಪದ ಮುಂದುವರಿಯುತ್ತಿರುವ ಪರಿಣಾಮಗಳು ಇನ್ನೂ ಇರಬಹುದು.—ಜ್ಞಾನೋಕ್ತಿ 10:16, 17; ಗಲಾತ್ಯ 6:7.
ಉದಾಹರಣೆಗೆ, ಸಮರ್ಪಿತ ಹುಡುಗಿಯೊಬ್ಬಳು ಜಾರತ್ವವನ್ನು ಮಾಡುವುದಾದರೆ, ಅವಳು ತನ್ನ ಕೃತ್ಯಕ್ಕಾಗಿ ತೀವ್ರವಾಗಿ ವಿಷಾದಿಸಬಹುದು ಮತ್ತು ಕಟ್ಟಕಡೆಗೆ ಸಭೆಯ ಸಹಾಯದಿಂದ ಆತ್ಮಿಕ ಆರೋಗ್ಯವನ್ನು ಪುನಃ ಪಡೆದುಕೊಳ್ಳಬಹುದು. ಆದರೆ ಅವಳು ತನ್ನ ಅನೈತಿಕತೆಯಿಂದಾಗಿ ಗರ್ಭಿಣಿಯಾಗಿರುವುದಾದರೆ ಆಗೇನು? ಆಗ ಅವಳು ಯಾವ ಕೃತ್ಯವನ್ನು ಮಾಡಿದಳೋ ಅದರಿಂದ ಅವಳ ಇಡೀ ಜೀವಿತವು ಅನಿವಾರ್ಯವಾಗಿ ಬದಲಾಯಿಸಲ್ಪಟ್ಟಿರುತ್ತದೆ. ವ್ಯಭಿಚಾರಮಾಡುವ ಪುರುಷನೊಬ್ಬನು ಪಶ್ಚಾತ್ತಾಪಪಡಬಹುದು, ಹಾಗೂ ಬಹಿಷ್ಕರಿಸಲ್ಪಡದಿರಬಹುದು. ಆದರೆ ಅವನಿಗೆ ವಿವಾಹ ವಿಚ್ಛೇದವನ್ನು ನೀಡುವ ಶಾಸ್ತ್ರೀಯ ಆಧಾರಗಳು ಅವನ ಮುಗ್ಧ ಸಂಗಾತಿಗಿವೆ. ಮತ್ತು ಅವಳು ಹಾಗೆ ಮಾಡುವ ಆಯ್ಕೆಮಾಡಬಹುದು. (ಮತ್ತಾಯ 19:9) ಅವಳು ಹಾಗೆ ಮಾಡುವುದಾದರೆ, ಆ ಮನುಷ್ಯನು ಯೆಹೋವನಿಂದ ಕ್ಷಮಿಸಲ್ಪಟ್ಟಿರುವುದಾದರೂ, ತನ್ನ ಉಳಿದ ಜೀವಮಾನವನ್ನೆಲ್ಲಾ ತನ್ನ ಪಾಪದ ಈ ಘೋರ ಪರಿಣಾಮದೊಂದಿಗೆ ಜೀವಿಸುವನು.—1 ಯೋಹಾನ 1:9.
ಮತ್ತೊಬ್ಬ ಸ್ತ್ರೀಯನ್ನು ವಿವಾಹವಾಗುವ ಸಲುವಾಗಿ, ಅಪ್ರೀತಿಯಿಂದ ತನ್ನ ಹೆಂಡತಿಗೆ ವಿಚ್ಛೇದ ನೀಡುವ ಒಬ್ಬ ಮನುಷ್ಯನ ಕುರಿತಾಗಿ ಏನು? ಬಹುಶಃ ಅವನು ಕಾಲಕ್ರಮದಲ್ಲಿ ಪಶ್ಚಾತ್ತಾಪಪಟ್ಟು, ಸಭೆಯಲ್ಲಿ ಪುನಃಸ್ಥಾಪಿಸಲ್ಪಡುವನು. ಸಮಯವು ಗತಿಸುವುದರೊಂದಿಗೆ ಅವನು ಪ್ರಗತಿಮಾಡಿ, “ಪ್ರೌಢತೆಗೆ ಸಾಗ”ಬಹುದು (NW). (ಇಬ್ರಿಯ 6:1) ಆದರೆ ಅವನ ಮೊದಲ ಹೆಂಡತಿಯು, ಒಬ್ಬ ಸಂಗಾತಿಯಿಲ್ಲದೆ ಜೀವಿಸುವಷ್ಟರ ವರೆಗೆ, ಅವನು ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯನಡಿಸಲು ಅರ್ಹನಾಗುವುದಿಲ್ಲ. ಅವನು “ಏಕಪತ್ನಿಯುಳ್ಳ”ವನಾಗಿರುವುದಿಲ್ಲ. ಏಕೆಂದರೆ ತನ್ನ ಮೊದಲ ಪತ್ನಿಗೆ ವಿವಾಹ ವಿಚ್ಛೇದ ನೀಡಲು ಅವನಿಗೆ ಶಾಸ್ತ್ರೀಯ ಆಧಾರವಿರಲಿಲ್ಲ.—1 ತಿಮೊಥೆಯ 3:2, 12.
ಕ್ರೈಸ್ತನೊಬ್ಬನು ಕೆಟ್ಟದ್ದರ ಕುರಿತು ಹೇಸಿಕೆಯ ಭಾವನೆಯನ್ನು ಏಕೆ ಬೆಳೆಸಿಕೊಳ್ಳಬೇಕು ಎಂಬುದಕ್ಕೆ ಇವುಗಳು ಬಲವಾದ ಕಾರಣಗಳಾಗಿಲ್ಲವೊ?
ಒಬ್ಬ ಶಿಶುಪೀಡಕನ ಕುರಿತಾಗಿ ಏನು?
ದೀಕ್ಷಾಸ್ನಾನಪಡೆದುಕೊಂಡಿರುವ ಒಬ್ಬ ವಯಸ್ಕ ಕ್ರೈಸ್ತನು, ಒಂದು ಶಿಶುವನ್ನು ಲೈಂಗಿಕವಾಗಿ ಪೀಡಿಸುವಲ್ಲಿ ಆಗೇನು? ಆ ಪಾಪಿಯು, ಯೆಹೋವನು ಅವನನ್ನು ಎಂದಿಗೂ ಕ್ಷಮಿಸಲಾರದಷ್ಟು ದುಷ್ಟನಾಗಿದ್ದಾನೊ? ಖಂಡಿತವಾಗಿಯೂ ಅವನು ಅಷ್ಟೊಂದು ದುಷ್ಟನಾಗಿರುವುದಿಲ್ಲ. ‘ಪವಿತ್ರಾತ್ಮಕ್ಕೆ ವಿರುದ್ಧವಾಗಿ ದೂಷಣೆಮಾಡುವವನಿಗೆ’ ಕ್ಷಮಾಪಣೆಯಿಲ್ಲ ಎಂದು ಯೇಸು ಹೇಳಿದನು. ಮತ್ತು ಪೌಲನು ಹೇಳಿದ್ದೇನೆಂದರೆ, ಸತ್ಯವನ್ನು ತಿಳಿದಿರುವ ಹೊರತಾಗಿಯೂ ಉದ್ದೇಶಪೂರ್ವಕವಾಗಿ ಪಾಪವನ್ನು ಮಾಡುತ್ತಾ ಇರುವ ಒಬ್ಬ ವ್ಯಕ್ತಿಗೆ, ಅವನ ಪಾಪಗಳಿಗಾಗಿ ಯಾವುದೇ ಯಜ್ಞವಿಲ್ಲ. (ಲೂಕ 12:10; ಇಬ್ರಿಯ 10:26, 27) ಆದರೆ, ಅಗಮ್ಯಗಮನದಿಂದಾಗಲಿ ಇತರ ರೀತಿಯಲ್ಲಾಗಲಿ, ಒಂದು ಶಿಶುವನ್ನು ಲೈಂಗಿಕವಾಗಿ ಅಪಪ್ರಯೋಗಿಸುವ ವಯಸ್ಕ ಕ್ರೈಸ್ತನಿಗೆ ಕ್ಷಮಾಪಣೆಯಿಲ್ಲವೆಂದು, ಬೈಬಲು ಎಲ್ಲಿಯೂ ಹೇಳುವುದಿಲ್ಲ. ವಾಸ್ತವವಾಗಿ, ಅವನು ಆಂತರ್ಯದಿಂದ ಯಥಾರ್ಥವಾಗಿ ಪಶ್ಚಾತ್ತಾಪಪಟ್ಟು, ತನ್ನ ನಡತೆಯನ್ನು ಸಂಪೂರ್ಣವಾಗಿ ಬದಲಾಯಿಸುವುದಾದರೆ, ಅವನ ಪಾಪಗಳು ಸಂಪೂರ್ಣವಾಗಿ ಅಳಿಸಿಹಾಕಲ್ಪಡಸಾಧ್ಯವಿದೆ. ಆದರೂ, ತಾನು ಬೆಳೆಸಿಕೊಂಡಿರುವ ತಪ್ಪಾದ ಶಾರೀರಿಕ ಪ್ರೇರಣೆಗಳೊಂದಿಗೆ ಅವನು ಇನ್ನೂ ಹೋರಾಡಲಿಕ್ಕಿರಬಹುದು. (ಎಫೆಸ 1:7) ಮತ್ತು ಅವನಿಂದ ತಪ್ಪಿಸಲು ಅಸಾಧ್ಯವಾದ ಪರಿಣಾಮಗಳು ಬಂದೇಬರಬಹುದು.
ಅವನು ಜೀವಿಸುತ್ತಿರುವ ದೇಶದ ನಿಯಮದ ಮೇಲೆ ಆಧಾರಿಸಿ, ಆ ಪೀಡಕನು, ತನ್ನ ದೇಶದಿಂದ ಕೊಡಲ್ಪಡುವ ಒಂದು ಸೆರೆಮನೆ ಶಿಕ್ಷೆಯನ್ನು ಅಥವಾ ಇನ್ನಿತರ ದಂಡನೆಗಳನ್ನು ಅನುಭವಿಸಲೇಬೇಕಾಗಿರುವುದು ಸಂಭವನೀಯ. ಇದರಿಂದ ಸಭೆಯು ಅವನನ್ನು ಸಂರಕ್ಷಿಸುವುದಿಲ್ಲ. ಇದಲ್ಲದೆ, ಇನ್ನು ಮುಂದೆ ಪರಿಗಣಿಸಲ್ಪಡಬೇಕಾದ ಒಂದು ಗಂಭೀರ ದೌರ್ಬಲ್ಯವನ್ನು ಈ ಮನುಷ್ಯನು ಬಯಲುಮಾಡಿದ್ದಾನೆ. ಅವನು ಪಶ್ಚಾತ್ತಾಪಪಡುವವನಾಗಿ ಕಂಡುಬರುವುದಾದರೆ, ಅವನು ಆತ್ಮಿಕ ಪ್ರಗತಿಯನ್ನು ಮಾಡುವಂತೆ, ಕ್ಷೇತ್ರ ಸೇವೆಯಲ್ಲಿ ಪಾಲುತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಲ್ಪಡುವನು. ಹಾಗೂ ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಭಾಗಗಳನ್ನು ಪಡೆಯುವಂತೆ ಮತ್ತು ಸೇವಾ ಕೂಟದಲ್ಲಿ ಉಪದೇಶಮಾಡಲಿಕ್ಕಿಲ್ಲದ ಭಾಗಗಳನ್ನು ಸಹ ಮಾಡುವಂತೆ ಅವನನ್ನು ಉತ್ತೇಜಿಸಲಾಗುವುದು. ಆದರೂ, ಅವನು ಸಭೆಯಲ್ಲಿ ಜವಾಬ್ದಾರಿಯ ಸ್ಥಾನವೊಂದರಲ್ಲಿ ಕಾರ್ಯನಡಿಸಲು ಅರ್ಹನಾಗುವನೆಂಬುದನ್ನು ಇದು ಅರ್ಥೈಸುವುದಿಲ್ಲ. ಇದಕ್ಕೆ ಯಾವ ಶಾಸ್ತ್ರೀಯ ಕಾರಣಗಳು ಇವೆ?
ಒಂದು ಕಾರಣವೇನೆಂದರೆ, ಹಿರಿಯನು “ಆತ್ಮನಿಯಂತ್ರಣ”ವುಳ್ಳವನಾಗಿರಬೇಕು. (ತೀತ 1:8, NW) ನಮ್ಮಲ್ಲಿ ಯಾರಿಗೂ ಪರಿಪೂರ್ಣವಾದ ಆತ್ಮನಿಯಂತ್ರಣವಿಲ್ಲವೆಂಬುದು ನಿಜ. (ರೋಮಾಪುರ 7:21-25) ಆದರೆ ಶಿಶು ಲೈಂಗಿಕ ಅಪಪ್ರಯೋಗದ ಪಾಪಕ್ಕೆ ವಶನಾಗುವ ಒಬ್ಬ ಸಮರ್ಪಿತ ವಯಸ್ಕ ಕ್ರೈಸ್ತನು, ಅಸ್ವಾಭಾವಿಕವಾದ ಒಂದು ಶಾರೀರಿಕ ದೌರ್ಬಲ್ಯವನ್ನು ಹೊರಪಡಿಸುತ್ತಾನೆ. ಅಷ್ಟೇಕೆ, ಅಂತಹ ವಯಸ್ಕನು ಬೇರೆ ಮಕ್ಕಳನ್ನೂ ಪೀಡಿಸಬಹುದೆಂದೂ ಅನುಭವವು ತೋರಿಸಿದೆ. ಪ್ರತಿಯೊಬ್ಬ ಶಿಶುಪೀಡಕನು ಪಾಪವನ್ನು ಪುನರಾವರ್ತಿಸುವುದಿಲ್ಲವಾದರೂ, ಅನೇಕರು ಪುನರಾವರ್ತಿಸುತ್ತಾರೆಂಬುದು ನಿಜ. ಪುನಃ ಮಕ್ಕಳನ್ನು ಯಾರು ಪೀಡಿಸುವ ಸಂದರ್ಭವಿದೆ, ಯಾರು ಪೀಡಿಸುವ ಸಂದರ್ಭವಿಲ್ಲವೆಂದು ಹೇಳಲು, ಸಭೆಯು ಹೃದಯಗಳನ್ನು ಓದಸಾಧ್ಯವಿಲ್ಲ. (ಯೆರೆಮೀಯ 17:9) ಆದುದರಿಂದ, ಪೌಲನು ತಿಮೊಥೆಯನಿಗೆ ಕೊಟ್ಟ ಸಲಹೆಯು, ಮಕ್ಕಳನ್ನು ಪೀಡಿಸಿರುವ ದೀಕ್ಷಾಸ್ನಾತ ವಯಸ್ಕರ ವಿಷಯದಲ್ಲಿ ವಿಶೇಷ ಒತ್ತಿನೊಂದಿಗೆ ಅನ್ವಯವಾಗುತ್ತದೆ: “ಅವಸರದಿಂದ ಯಾರ ತಲೆಯ ಮೇಲೆಯಾದರೂ ಹಸ್ತವನ್ನಿಟ್ಟು ಸಭೆಯ ಉದ್ಯೋಗಕ್ಕೆ ನೇಮಿಸಬೇಡ. . . . ಮತ್ತೊಬ್ಬರು ಮಾಡಿದ ಪಾಪದಲ್ಲಿ ನೀನು ಪಾಲುಗಾರ”ನಾಗಬೇಡ. (1 ತಿಮೊಥೆಯ 5:22) ನಮ್ಮ ಮಕ್ಕಳ ಅಭ್ಯುದಯಕ್ಕಾಗಿ, ಒಬ್ಬ ಶಿಶುಪೀಡಕನೆಂದು ಪ್ರಖ್ಯಾತನಾಗಿದ್ದ ಮನುಷ್ಯನೊಬ್ಬನು, ಸಭೆಯಲ್ಲಿನ ಜವಾಬ್ದಾರಿಯುತ ಸ್ಥಾನಕ್ಕಾಗಿ ಅರ್ಹನಾಗುವುದಿಲ್ಲ. ಇದಲ್ಲದೆ, ಅವನು ಒಬ್ಬ ಪಯನೀಯರನಾಗಲು ಅಥವಾ ಇನ್ನಿತರ ವಿಶೇಷ, ಪೂರ್ಣಸಮಯದ ಸೇವೆಯಲ್ಲಿ ಸೇವೆಸಲ್ಲಿಸಲು ಸಾಧ್ಯವಿಲ್ಲ.—ವಿಮೋಚನಕಾಂಡ 21:28, 29 ರಲ್ಲಿರುವ ಮೂಲತತ್ವವನ್ನು ಹೋಲಿಸಿರಿ.
ಕೆಲವರು ಹೀಗೆ ಕೇಳಬಹುದು, ‘ಕೆಲವರು ಇನ್ನಿತರ ರೀತಿಯ ಪಾಪವನ್ನು ಮಾಡಿ, ತೋರಿಕೆಗೆ ಪಶ್ಚಾತ್ತಾಪಪಟ್ಟು, ತದನಂತರ ತಮ್ಮ ಪಾಪವನ್ನು ಪುನರಾವರ್ತಿಸಿಲ್ಲವೊ?’ ಹೌದು, ಅದು ಸಂಭವಿಸಿದೆ. ಆದರೆ ಪರಿಗಣಿಸಲು ಬೇರೆ ಅಂಶಗಳಿವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಇನ್ನೊಬ್ಬ ವಯಸ್ಕನೊಂದಿಗೆ ಅನೈತಿಕ ಪ್ರಣಯ ಸಂಧಾನಗಳನ್ನು ಮಾಡುವಲ್ಲಿ, ಆ ವಯಸ್ಕನು ಅವನ ಅಥವಾ ಅವಳ ಅನೈತಿಕ ಸಂಧಾನಗಳನ್ನು ಪ್ರತಿರೋಧಿಸಲು ಶಕ್ತನಾಗಿರತಕ್ಕದ್ದು. ಮಕ್ಕಳನ್ನು ವಂಚಿಸುವುದು, ಅವರಿಗೆ ಗಲಿಬಿಲಿಯನ್ನುಂಟುಮಾಡುವುದು, ಅಥವಾ ಭಯಗೊಳಿಸುವುದು ಹೆಚ್ಚು ಸುಲಭ. ಶಿಶುವಿನ ವಿವೇಕದ ಕೊರತೆಯ ಕುರಿತು ಬೈಬಲು ಮಾತಾಡುತ್ತದೆ. (ಜ್ಞಾನೋಕ್ತಿ 22:15; 1 ಕೊರಿಂಥ 13:11) ಯೇಸು ಮಕ್ಕಳನ್ನು ದೀನಭಾವದ ಮುಗ್ಧತೆಯ ಒಂದು ಮಾದರಿಯೋಪಾದಿ ಉಪಯೋಗಿಸಿದನು. (ಮತ್ತಾಯ 18:4; ಲೂಕ 18:16, 17) ಶಿಶುವಿನ ಮುಗ್ಧತೆಯು, ಸಂಪೂರ್ಣ ಅನುಭವದ ಕೊರತೆಯನ್ನು ಒಳಗೊಳ್ಳುತ್ತದೆ. ಹೆಚ್ಚಿನ ಮಕ್ಕಳು ಬಿಚ್ಚುಮನಸ್ಸಿನವರೂ, ಸಂತೋಷನೀಡಲು ತವಕವುಳ್ಳವರೂ ಆಗಿರುತ್ತಾರೆ. ಮತ್ತು ಹೀಗೆ ಅವರು ತಮಗೆ ತಿಳಿದಿರುವ ಮತ್ತು ತಾವು ಭರವಸವಿಡುವ, ತಂತ್ರಹೂಡುವ ವಯಸ್ಕನಿಂದ ಅಪಪ್ರಯೋಗಕ್ಕೆ ಸುಲಭಭೇದ್ಯರಾಗುತ್ತಾರೆ. ಆದುದರಿಂದ, ಯೆಹೋವನ ಮುಂದೆ, ತನ್ನ ಮಕ್ಕಳನ್ನು ಸಂರಕ್ಷಿಸುವ ಜವಾಬ್ದಾರಿ ಸಭೆಗಿದೆ.
ಸುಶಿಕ್ಷಿತ ಮಕ್ಕಳು, ತಮ್ಮ ಹೆತ್ತವರು, ಹಿರಿಯರು, ಮತ್ತು ಇತರ ವಯಸ್ಕರಿಗೆ ವಿಧೇಯರಾಗಲು ಹಾಗೂ ಮರ್ಯಾದೆ ತೋರಿಸಲು ಕಲಿಯುತ್ತಾರೆ. (ಎಫೆಸ 6:1, 2; 1 ತಿಮೊಥೆಯ 5:1, 2; ಇಬ್ರಿಯ 13:7) ಜವಾಬ್ದಾರಿಯುತ ಸ್ಥಾನದಲ್ಲಿರುವ ಈ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು, ಶಿಶುವಿನ ಮುಗ್ಧ ಭರವಸೆಯನ್ನು ವಂಚಿಸಲು ಅಥವಾ ಅವನನ್ನು ಅಥವಾ ಅವಳನ್ನು ಲೈಂಗಿಕ ಕೃತ್ಯಗಳಿಗೆ ಒತ್ತಾಯಿಸಲು ದುರುಪಯೋಗಿಸುವವರಾಗಿದ್ದಲ್ಲಿ, ಅದು ಒಂದು ಆಘಾತಕರ ವಿಕೃತಕಾಮವಾಗಿರಸಾಧ್ಯವಿದೆ. ಈ ರೀತಿಯಲ್ಲಿ ಲೈಂಗಿಕವಾಗಿ ಪೀಡಿಸಲ್ಪಟ್ಟಿರುವವರು, ಅದರ ಫಲಿತಾಂಶವಾಗಿ ಬರುವ ಭಾವನಾತ್ಮಕ ಪೆಟ್ಟನ್ನು ನಿಭಾಯಿಸಲು, ಅನೇಕ ವರ್ಷಗಳ ವರೆಗೆ ಹೋರಾಟ ನಡೆಸುತ್ತಾರೆ. ಆದುದರಿಂದ, ಒಬ್ಬ ಶಿಶುಪೀಡಕನನ್ನು, ಗಂಭೀರವಾದ ಸಭಾ ಶಿಸ್ತಿಗೂ ಕಟ್ಟುಪಾಡುಗಳಿಗೂ ಒಳಪಡಿಸಲಾಗುತ್ತದೆ. ಅಧಿಕಾರವುಳ್ಳ ಒಬ್ಬ ಪ್ರಮುಖ ವ್ಯಕ್ತಿಯೋಪಾದಿ ಅವನ ಸ್ಥಾನಮಾನವು ಪ್ರಾಮುಖ್ಯವಾದ ವಿಷಯವಾಗಿರುವುದಿಲ್ಲ, ಬದಲಾಗಿ ಸಭೆಯ ಕಳಂಕರಹಿತ ಶುದ್ಧತೆಯೇ ಪ್ರಾಮುಖ್ಯವಾಗಿದೆ.—1 ಕೊರಿಂಥ 5:6; 2 ಪೇತ್ರ 3:14.
ಒಬ್ಬ ಶಿಶುಪೀಡಕನು ಯಥಾರ್ಥವಾಗಿ ಪಶ್ಚಾತ್ತಾಪಪಡುವಲ್ಲಿ, ಅವನು ಬೈಬಲ್ ಮೂಲತತ್ವಗಳನ್ನು ಅನ್ವಯಿಸಿಕೊಳ್ಳುವುದರಲ್ಲಿನ ವಿವೇಕವನ್ನು ಗ್ರಹಿಸುವನು. ಅವನು ನಿಜವಾಗಿಯೂ ಕೆಟ್ಟದ್ದನ್ನು ಹೇಸಲು ಕಲಿಯುವಲ್ಲಿ, ತಾನು ಮಾಡಿದ್ದನ್ನು ಅವನು ಹೇಯವಾಗಿ ಕಾಣುತ್ತಾನೆ ಮತ್ತು ತನ್ನ ಪಾಪವನ್ನು ಪುನರಾವರ್ತಿಸುವುದನ್ನು ದೂರಮಾಡಲು ಹೋರಾಟ ನಡೆಸುತ್ತಾನೆ. (ಜ್ಞಾನೋಕ್ತಿ 8:13; ರೋಮಾಪುರ 12:9) ಇದಲ್ಲದೆ, ಖಂಡಿತವಾಗಿಯೂ ಅವನು ಯೆಹೋವನ ಪ್ರೀತಿಯ ಹಿರಿಮೆಗಾಗಿ ಆತನಿಗೆ ಉಪಕಾರಸಲ್ಲಿಸುವನು. ಇದರ ಫಲಿತಾಂಶವಾಗಿ, ಅವನಂತಹ ಪಶ್ಚಾತ್ತಾಪಪಡುವ ಪಾಪಿಯು, ಇನ್ನೂ ನಮ್ಮ ಪರಿಶುದ್ಧ ದೇವರನ್ನು ಆರಾಧಿಸಸಾಧ್ಯವಿದೆ. ಮತ್ತು ಭೂಮಿಯ ಮೇಲೆ ಸದಾಕಾಲ ಬಾಳುವ “ಯಥಾರ್ಥವಂತರ” ನಡುವೆ ಇರುವ ನಿರೀಕ್ಷೆಯುಳ್ಳವನಾಗಿರಸಾಧ್ಯವಿದೆ.—ಜ್ಞಾನೋಕ್ತಿ 2:21.
[ಅಧ್ಯಯನ ಪ್ರಶ್ನೆಗಳು]
a ಕಾವಲಿನಬುರುಜು ಪತ್ರಿಕೆಯ ಮೇ 1, 1996ರ ಸಂಚಿಕೆಯಲ್ಲಿನ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನವನ್ನು ನೋಡಿರಿ.
[ಪುಟ 28 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಯೆಹೋವನು ಪಶ್ಚಾತ್ತಾಪಪಡುವ ಪಾಪಿಗಳನ್ನು ಕ್ಷಮಿಸುವಾಗಲೂ, ಅವರ ವರ್ತನೆಗಳಿಗಾಗಿ ತಪ್ಪಿಸಲಸಾಧ್ಯವಾದ ಪರಿಣಾಮಗಳು ಬಂದೇಬರಬಹುದು