1 ತಿಮೊತಿ
6 ದೇವರ ನಾಮ ಮತ್ತು ಬೋಧನೆಯು ಎಂದಿಗೂ ನಿಂದೆಗೆ ಗುರಿಯಾಗದಂತೆ ಒಂದೇ ನೊಗದಡಿಯಲ್ಲಿ ದಾಸರಾಗಿರುವವರೆಲ್ಲರೂ ತಮ್ಮ ಯಜಮಾನರನ್ನು ಪೂರ್ಣವಾದ ಗೌರವಕ್ಕೆ ಯೋಗ್ಯರಾದವರೆಂದು ಪರಿಗಣಿಸುತ್ತಾ ಇರಲಿ. 2 ಮಾತ್ರವಲ್ಲದೆ ವಿಶ್ವಾಸಿಗಳಾದ ಯಜಮಾನರನ್ನು ಹೊಂದಿರುವವರು, ಆ ಯಜಮಾನರು ಸಹೋದರರಾಗಿರುವುದರಿಂದ ಅವರನ್ನು ಕಡೆಗಣಿಸದಿರಲಿ. ಬದಲಿಗೆ ತಮ್ಮ ಒಳ್ಳೇ ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿರುವವರು ವಿಶ್ವಾಸಿಗಳೂ ಪ್ರಿಯರೂ ಆಗಿರುವುದರಿಂದ ಅವರಿಗೆ ಹೆಚ್ಚು ಸಿದ್ಧಮನಸ್ಸಿನಿಂದ ಸೇವೆಸಲ್ಲಿಸಲಿ.
ಈ ವಿಷಯಗಳನ್ನು ಬೋಧಿಸುತ್ತಾ ಇರು ಮತ್ತು ಈ ಬುದ್ಧಿವಾದಗಳನ್ನು ತಿಳಿಸುತ್ತಾ ಇರು. 3 ಯಾವನಾದರೂ ಬೇರೊಂದು ಸಿದ್ಧಾಂತವನ್ನು ಬೋಧಿಸುತ್ತಾ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕುರಿತಾದ ಸ್ವಸ್ಥಕರವಾದ ಮಾತುಗಳನ್ನು ಅಥವಾ ದೇವಭಕ್ತಿಗೆ ಅನುಸಾರವಾಗಿರುವ ಬೋಧನೆಯನ್ನು ಸಮ್ಮತಿಸದೇ ಹೋದರೆ 4 ಅಂಥವನು ಅಹಂಕಾರದಿಂದ ಉಬ್ಬಿಕೊಂಡವನಾಗಿದ್ದು ಏನನ್ನೂ ಅರ್ಥಮಾಡಿಕೊಳ್ಳದೆ, ಪದಗಳ ಕುರಿತು ಪ್ರಶ್ನೆಗಳನ್ನು ಹಾಕುತ್ತಾ ವಾಗ್ವಾದಗಳನ್ನು ಮಾಡುತ್ತಾ ಮಾನಸಿಕವಾಗಿ ರೋಗಹಿಡಿದವನಾಗಿದ್ದಾನೆ. ಇವುಗಳಿಂದ ಹೊಟ್ಟೆಕಿಚ್ಚು, ಜಗಳ, ನಿಂದಾತ್ಮಕ ಮಾತುಗಳು, ದುಸ್ಸಂಶಯಗಳು ಉಂಟಾಗುತ್ತವೆ. 5 ಮಾತ್ರವಲ್ಲದೆ ಮನಸ್ಸಿನಲ್ಲಿ ಭ್ರಷ್ಟಗೊಂಡಿರುವ ಮತ್ತು ಸತ್ಯದಿಂದ ದೂರ ಸರಿದಿರುವ ಜನರಲ್ಲಿ ನಿರರ್ಥಕ ವಿಷಯಗಳ ಕುರಿತು ಹಿಂಸಾತ್ಮಕ ವಾಗ್ವಾದಗಳು ಉಂಟಾಗುತ್ತವೆ; ಅವರು ದೇವಭಕ್ತಿಯನ್ನು ಲಾಭಪಡೆಯುವ ಮಾಧ್ಯಮವಾಗಿ ಎಣಿಸುತ್ತಾರೆ. 6 ಸ್ವಸಂತೃಪ್ತಿಸಹಿತವಾದ ದೇವಭಕ್ತಿಯು ದೊಡ್ಡ ಲಾಭವಾಗಿದೆ ಎಂಬುದಂತೂ ಖಂಡಿತ. 7 ನಾವು ಲೋಕದೊಳಗೆ ಏನನ್ನೂ ತೆಗೆದುಕೊಂಡು ಬಂದಿಲ್ಲ ಮತ್ತು ನಾವು ಅದರೊಳಗಿಂದ ಏನನ್ನೂ ತೆಗೆದುಕೊಂಡು ಹೋಗಲಾರೆವು. 8 ಆದುದರಿಂದ ಅನ್ನವಸ್ತ್ರಗಳಿದ್ದರೆ ಸಾಕು, ನಾವು ಈ ವಿಷಯಗಳಲ್ಲಿ ತೃಪ್ತರಾಗಿರುವೆವು.
9 ಆದರೆ ಐಶ್ವರ್ಯವಂತರಾಗಬೇಕೆಂದು ದೃಢನಿರ್ಧಾರಮಾಡಿಕೊಂಡಿರುವವರು ಪ್ರಲೋಭನೆಯಲ್ಲಿಯೂ ಉರ್ಲಿನಲ್ಲಿಯೂ ಬುದ್ಧಿಹೀನವಾದ ಮತ್ತು ಹಾನಿಕರವಾದ ಆಶೆಗಳಲ್ಲಿಯೂ ಬೀಳುತ್ತಾರೆ; ಇವು ಅವರನ್ನು ನಾಶನ ಮತ್ತು ಧ್ವಂಸದಲ್ಲಿ ಮುಳುಗಿಸುತ್ತವೆ. 10 ಹಣದ ಪ್ರೇಮವು ಎಲ್ಲ ರೀತಿಯ ಹಾನಿಕರವಾದ ವಿಷಯಗಳಿಗೆ ಮೂಲವಾಗಿದೆ ಮತ್ತು ಕೆಲವರು ಈ ಪ್ರೇಮವನ್ನು ಬೆನ್ನಟ್ಟುತ್ತಾ ನಂಬಿಕೆಯಿಂದ ದಾರಿತಪ್ಪಿದವರಾಗಿ ಅನೇಕ ವೇದನೆಗಳಿಂದ ತಮ್ಮನ್ನು ಎಲ್ಲ ಕಡೆಗಳಲ್ಲಿ ತಿವಿಸಿಕೊಂಡಿದ್ದಾರೆ.
11 ಆದರೆ ದೇವರ ಮನುಷ್ಯನಾಗಿರುವ ನೀನು ಇವುಗಳಿಂದ ಓಡಿಹೋಗು. ನೀತಿ, ದೇವಭಕ್ತಿ, ನಂಬಿಕೆ, ಪ್ರೀತಿ, ತಾಳ್ಮೆ, ಸೌಮ್ಯಭಾವವನ್ನು ಬೆನ್ನಟ್ಟು. 12 ನಂಬಿಕೆಯ ಉತ್ತಮ ಹೋರಾಟವನ್ನು ಮಾಡು ಮತ್ತು ನೀನು ಯಾವುದಕ್ಕಾಗಿ ಕರೆಯಲ್ಪಟ್ಟಿಯೋ ಹಾಗೂ ಅನೇಕ ಸಾಕ್ಷಿಗಳ ಮುಂದೆ ನೀನು ಯಾವುದಕ್ಕಾಗಿ ಒಳ್ಳೇ ರೀತಿಯ ಬಹಿರಂಗ ಅರಿಕೆಯನ್ನು ಮಾಡಿದಿಯೋ ಆ ನಿತ್ಯಜೀವವನ್ನು ಭದ್ರವಾಗಿ ಹಿಡಿದುಕೊ.
13 ಎಲ್ಲವನ್ನು ಸಜೀವವಾಗಿ ಸಂರಕ್ಷಿಸುವವನಾದ ದೇವರ ಮುಂದೆಯೂ ಪೊಂತ್ಯ ಪಿಲಾತನ ಮುಂದೆ ಒಬ್ಬ ಸಾಕ್ಷಿಯಾಗಿ ಬಹಿರಂಗ ಅರಿಕೆಯನ್ನು ಮಾಡಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಆಜ್ಞಾಪಿಸುವುದೇನೆಂದರೆ, 14 ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯ ವರೆಗೆ ನೀನು ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾದ ರೀತಿಯಲ್ಲಿಯೂ ಕಾಪಾಡಿಕೊಳ್ಳಬೇಕು. 15 ಈ ಪ್ರತ್ಯಕ್ಷತೆಯನ್ನು ಸಂತೋಷಭರಿತನಾದ ಏಕಾಧಿಪತಿಯು ಅದರ ನೇಮಿತ ಸಮಯಗಳಲ್ಲಿ ತೋರಿಸುವನು; ಅವನು ರಾಜರಾಗಿ ಆಳುವವರ ರಾಜನೂ ಕರ್ತರಾಗಿ ಆಳುವವರ ಕರ್ತನೂ ಆಗಿದ್ದಾನೆ. 16 ಅವನೊಬ್ಬನೇ ಅಮರತ್ವವನ್ನು ಹೊಂದಿರುವವನೂ ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನೂ ಆಗಿದ್ದಾನೆ; ಮನುಷ್ಯರಲ್ಲಿ ಯಾರೂ ಅವನನ್ನು ನೋಡಿಲ್ಲ, ಯಾರೂ ನೋಡಲಾರರು. ಅವನಿಗೆ ಗೌರವವೂ ಬಲವೂ ಸದಾಕಾಲ ಇರಲಿ. ಆಮೆನ್.
17 ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಐಶ್ವರ್ಯವಂತರಾಗಿರುವವರು ಅಹಂಕಾರಿಗಳಾಗಿರದೆ ತಮ್ಮ ನಿರೀಕ್ಷೆಯನ್ನು ಅನಿಶ್ಚಿತವಾದ ಐಶ್ವರ್ಯದ ಮೇಲಲ್ಲ, ನಮ್ಮ ಆನಂದಕ್ಕಾಗಿ ನಮಗೆ ಎಲ್ಲವನ್ನೂ ಹೇರಳವಾಗಿ ಒದಗಿಸುವ ದೇವರ ಮೇಲೆ ಇಡುವಂತೆಯೂ 18 ಒಳ್ಳೇದನ್ನು ಮಾಡುವವರಾಗಿರುವಂತೆಯೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರುವಂತೆಯೂ ಉದಾರಿಗಳಾಗಿರುವಂತೆಯೂ ಹಂಚಿಕೊಳ್ಳಲು ಸಿದ್ಧರಾಗಿರುವಂತೆಯೂ 19 ವಾಸ್ತವವಾದ ಜೀವನವನ್ನು ಭದ್ರವಾಗಿ ಹಿಡಿಯುವಂತಾಗಲು ಭವಿಷ್ಯತ್ತಿಗಾಗಿ ಒಳ್ಳೇ ಅಸ್ತಿವಾರವನ್ನು ತಮಗಾಗಿ ಜಾಗರೂಕತೆಯಿಂದ ಶೇಖರಿಸಿಟ್ಟುಕೊಳ್ಳುವವರಾಗಿಯೂ ಇರುವಂತೆ ಅವರಿಗೆ ಆಜ್ಞಾಪಿಸು.
20 ಎಲೈ ತಿಮೊಥೆಯನೇ, ಪವಿತ್ರವಾದದ್ದನ್ನು ಹೊಲೆಮಾಡುವ ವ್ಯರ್ಥಮಾತುಗಳಿಂದಲೂ “ಜ್ಞಾನ” ಎಂಬುದಾಗಿ ಸುಳ್ಳಾಗಿ ಕರೆಯಲ್ಪಡುವ ವಿರೋಧೋಕ್ತಿಗಳಿಂದಲೂ ದೂರವಾಗಿದ್ದು ನಿನ್ನ ವಶಕ್ಕೆ ಕೊಡಲ್ಪಟ್ಟಿರುವುದನ್ನು ಕಾಪಾಡಿಕೊ. 21 ಕೆಲವರು ಅಂಥ ಸುಳ್ಳಾದ ಜ್ಞಾನವನ್ನು ಪ್ರದರ್ಶಿಸುತ್ತಾ ನಂಬಿಕೆಯಿಂದ ಪಥಭ್ರಷ್ಟರಾಗಿದ್ದಾರೆ.
ದೇವರ ಅಪಾತ್ರ ದಯೆಯು ನಿಮ್ಮೊಂದಿಗಿರಲಿ.