2 ಪೇತ್ರ
2 ಹಾಗಿದ್ದರೂ ಜನರ ಮಧ್ಯೆ ಸುಳ್ಳು ಪ್ರವಾದಿಗಳು ಎದ್ದಂತೆ ನಿಮ್ಮಲ್ಲಿಯೂ ಸುಳ್ಳು ಬೋಧಕರು ಏಳುವರು. ಇಂಥವರು ರಹಸ್ಯವಾಗಿ ವಿನಾಶಕರವಾದ ಪಂಥಗಳನ್ನು ಒಳತರುವವರೂ ತಮ್ಮನ್ನು ಕೊಂಡುಕೊಂಡ ಒಡೆಯನನ್ನು ಸಹ ಅಲ್ಲಗಳೆಯುವವರೂ ಆಗಿದ್ದು ತಮ್ಮ ಮೇಲೆ ಕ್ಷಿಪ್ರ ನಾಶನವನ್ನು ಬರಮಾಡಿಕೊಳ್ಳುವರು. 2 ಇದಲ್ಲದೆ, ಅನೇಕರು ಅವರ ಸಡಿಲು ನಡತೆಯ ಕೃತ್ಯಗಳನ್ನು ಅನುಸರಿಸುವರು ಮತ್ತು ಇದರಿಂದಾಗಿ ಸತ್ಯಮಾರ್ಗಕ್ಕೆ ದೂಷಣೆ ಉಂಟಾಗುವುದು. 3 ಮಾತ್ರವಲ್ಲದೆ, ಅವರು ತಮ್ಮ ದುರಾಶೆಯಿಂದ ಕೃತಕ ಮಾತುಗಳ ಮೂಲಕ ನಿಮ್ಮನ್ನು ಸ್ವಪ್ರಯೋಜನಕ್ಕಾಗಿ ಬಳಸಿಕೊಳ್ಳುವರು. ಅವರಿಗಾದರೊ ಬಹಳ ಕಾಲದಿಂದಿರುವ ನ್ಯಾಯತೀರ್ಪು ನಿಧಾನಿಸುತ್ತಿಲ್ಲ ಮತ್ತು ಅವರ ನಾಶನವು ತೂಕಡಿಸುತ್ತಿಲ್ಲ.
4 ಪಾಪಮಾಡಿದ ದೇವದೂತರನ್ನು ದೇವರು ಸುಮ್ಮನೆ ಬಿಡದೆ, ಅವರನ್ನು ಟಾರ್ಟರಸ್ಗೆ ದೊಬ್ಬುವ ಮೂಲಕ ನ್ಯಾಯತೀರ್ಪನ್ನು ಹೊಂದುವುದಕ್ಕೆ ಕಾದಿರಿಸಲ್ಪಟ್ಟವರಾಗಿ ದಟ್ಟವಾದ ಕತ್ತಲೆ ಗುಂಡಿಗಳಿಗೆ ಒಪ್ಪಿಸಿದನು. 5 ಇದಲ್ಲದೆ, ಆತನು ಪುರಾತನ ಲೋಕವನ್ನು ಸುಮ್ಮನೆ ಬಿಡದೆ, ಭಕ್ತಿಹೀನ ಜನರ ಆ ಲೋಕದ ಮೇಲೆ ಜಲಪ್ರಳಯವನ್ನು ಬರಮಾಡಿದನು; ಆದರೆ ನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ರಕ್ಷಿಸಿದನು. 6 ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ಸುಟ್ಟು ಬೂದಿಮಾಡುವ ಮೂಲಕ ಆತನು ಅವುಗಳನ್ನು ಖಂಡಿಸಿದನು; ಈ ಮೂಲಕ ಭಕ್ತಿಹೀನ ವ್ಯಕ್ತಿಗಳಿಗೆ ಸಂಭವಿಸಲಿರುವ ಸಂಗತಿಗಳ ಕುರಿತು ಒಂದು ನಮೂನೆಯನ್ನು ಇಟ್ಟನು. 7 ನಿಯಮವನ್ನು ಉಲ್ಲಂಘಿಸುವ ಜನರು ಸಡಿಲು ನಡತೆಯಲ್ಲಿ ಮುಳುಗಿರುವುದನ್ನು ಕಂಡು ಬಹಳವಾಗಿ ದುಃಖಿತನಾಗಿದ್ದ ನೀತಿವಂತನಾದ ಲೋಟನನ್ನು ಆತನು ಪಾರುಮಾಡಿದನು— 8 ಏಕೆಂದರೆ ಆ ನೀತಿವಂತನು ಅವರ ಮಧ್ಯೆ ವಾಸಿಸುತ್ತಿದ್ದಾಗ ತಾನು ನೋಡಿದ ಮತ್ತು ಕೇಳಿಸಿಕೊಂಡ ನಿಯಮರಹಿತ ಕೃತ್ಯಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಪ್ರಾಣವನ್ನು ಯಾತನೆಗೊಳಪಡಿಸುತ್ತಾ ಇದ್ದನು— 9 ಯೆಹೋವನು ದೇವಭಕ್ತಿಯುಳ್ಳ ಜನರನ್ನು ಪರೀಕ್ಷೆಯಿಂದ ತಪ್ಪಿಸುವುದಕ್ಕೂ ಅನೀತಿವಂತರನ್ನು ತೆಗೆದುಹಾಕಲಿಕ್ಕಾಗಿ ನ್ಯಾಯತೀರ್ಪಿನ ದಿನದ ತನಕ ಅವರನ್ನು ಕಾದಿರಿಸುವುದಕ್ಕೂ ತಿಳಿದವನಾಗಿದ್ದಾನೆ. 10 ಆದರೆ ವಿಶೇಷವಾಗಿ, ಆತನು ಶರೀರವನ್ನು ಮಲಿನಗೊಳಿಸುವ ಇಚ್ಛೆಯಿಂದ ಶರೀರಭಾವಾನುಸಾರ ನಡೆಯುವವರನ್ನು ಮತ್ತು ಪ್ರಭುತ್ವವನ್ನು ತಿರಸ್ಕಾರಭಾವದಿಂದ ಕಾಣುವವರನ್ನು ಶಿಕ್ಷಿಸುವನು.
ಅವರು ಮೊಂಡರೂ ಸ್ವೇಚ್ಛಾಪರರೂ ಆಗಿದ್ದು ಮಹಿಮಾನ್ವಿತರಿಗೆ ಹೆದರದೆ ಅವರ ವಿಷಯದಲ್ಲಿ ದೂಷಣಾತ್ಮಕವಾಗಿ ಮಾತಾಡುತ್ತಾರೆ. 11 ದೇವದೂತರಾದರೊ ಬಲದಲ್ಲಿಯೂ ಶಕ್ತಿಯಲ್ಲಿಯೂ ಶ್ರೇಷ್ಠರಾಗಿದ್ದರೂ ಯೆಹೋವನ ಕಡೆಗಿರುವ ಗೌರವದ ಕಾರಣದಿಂದ ಮಹಿಮಾನ್ವಿತರ ವಿರುದ್ಧ ದೂಷಣಾತ್ಮಕ ಮಾತುಗಳನ್ನಾಡಿ ಅವರನ್ನು ತೆಗಳುವುದಿಲ್ಲ. 12 ಆದರೆ ಹಿಡಿಯಲ್ಪಟ್ಟು ಕೊಲ್ಲಲ್ಪಡಲು ಸ್ವಾಭಾವಿಕವಾಗಿ ಹುಟ್ಟಿರುವ ವಿಚಾರಹೀನ ಪ್ರಾಣಿಗಳಂತೆ ಈ ಪುರುಷರು ತಮಗೆ ತಿಳಿದಿಲ್ಲದ ವಿಷಯಗಳ ಕುರಿತು ದೂಷಣಾತ್ಮಕವಾಗಿ ಮಾತಾಡುವವರಾಗಿದ್ದಾರೆ. ಇವರು ತಮ್ಮ ಸ್ವಂತ ವಿನಾಶಕರ ಮಾರ್ಗದಲ್ಲಿ ನಾಶನವನ್ನು ಹೊಂದುವರು. 13 ಹೀಗೆ ತಪ್ಪುಮಾಡುವುದರ ಫಲವಾಗಿ ತಮಗೇ ತಪ್ಪನ್ನು ಮಾಡಿಕೊಳ್ಳುವರು.
ಹಗಲು ಹೊತ್ತಿನಲ್ಲಿ ಐಷಾರಾಮವಾಗಿ ಜೀವಿಸುವುದನ್ನು ಅವರು ಸುಖವೆಂದೆಣಿಸುತ್ತಾರೆ. ಇವರು ನಿಮ್ಮೊಂದಿಗೆ ಔತಣಮಾಡುತ್ತಿರುವಾಗ ತಮ್ಮ ವಂಚನಾತ್ಮಕ ಬೋಧನೆಗಳಲ್ಲಿ ನಿಯಂತ್ರಣವಿಲ್ಲದ ಆನಂದದೊಂದಿಗೆ ತೊಡಗುವ ಕಳಂಕಿತರೂ ದೋಷಿಗಳೂ ಆಗಿದ್ದಾರೆ. 14 ಇವರ ಕಣ್ಣುಗಳು ವ್ಯಭಿಚಾರದಿಂದ ತುಂಬಿದ್ದು ಪಾಪದಿಂದ ದೂರವಾಗಲು ಅಶಕ್ತವಾಗಿವೆ; ಇವರು ಚಂಚಲ ವ್ಯಕ್ತಿಗಳನ್ನು ಮರುಳುಗೊಳಿಸುತ್ತಾರೆ. ಅವರು ದುರಾಶೆಯಲ್ಲಿ ತರಬೇತುಹೊಂದಿದ ಹೃದಯವನ್ನು ಹೊಂದಿದ್ದಾರೆ. ಅವರು ಶಾಪಗ್ರಸ್ತ ಮಕ್ಕಳೇ. 15 ಅವರು ನೇರವಾದ ಮಾರ್ಗವನ್ನು ಬಿಟ್ಟು ದಾರಿತಪ್ಪಿಸಲ್ಪಟ್ಟಿದ್ದಾರೆ. ಅವರು ಬೆಯೋರನ ಮಗನಾದ ಬಿಳಾಮನ ಮಾರ್ಗವನ್ನು ಅನುಸರಿಸಿದ್ದಾರೆ. ಆ ಬಿಳಾಮನು ದುಷ್ಕೃತ್ಯದ ಪ್ರತಿಫಲವನ್ನು ಪ್ರೀತಿಸಿದನು. 16 ಆದರೆ ಅವನು ಸರಿಯಾದದ್ದನ್ನು ಉಲ್ಲಂಘಿಸಿದ್ದಕ್ಕಾಗಿ ಗದರಿಸಲ್ಪಟ್ಟನು. ಒಂದು ಮೂಕ ಪ್ರಾಣಿಯು ಮನುಷ್ಯರ ಸ್ವರದಲ್ಲಿ ಮಾತಾಡಿ ಆ ಪ್ರವಾದಿಯ ದುರ್ಮಾರ್ಗವನ್ನು ತಡೆಯಿತು.
17 ಇವರು ನೀರಿಲ್ಲದ ಬುಗ್ಗೆಗಳೂ ಪ್ರಚಂಡ ಬಿರುಗಾಳಿಯಿಂದ ಬಡಿಸಿಕೊಂಡು ಹೋಗುವ ಮಂಜೂ ಆಗಿದ್ದಾರೆ; ಇವರಿಗಾಗಿ ಕಾರ್ಗತ್ತಲೆಯು ಕಾದಿರಿಸಲ್ಪಟ್ಟಿದೆ. 18 ಇವರು ಲಾಭವಿಲ್ಲದ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ ಮತ್ತು ತಪ್ಪಾದ ಮಾರ್ಗದಲ್ಲಿ ನಡೆಯುವಂಥ ಜನರಿಂದ ಈಗ ತಾನೇ ತಪ್ಪಿಸಿಕೊಳ್ಳುತ್ತಿರುವವರನ್ನು ಶಾರೀರಿಕ ಇಚ್ಛೆಗಳಿಂದಲೂ ಸಡಿಲು ಹವ್ಯಾಸಗಳಿಂದಲೂ ಮರುಳುಗೊಳಿಸುತ್ತಾರೆ. 19 ಅವರಿಗೆ ಸ್ವಾತಂತ್ರ್ಯ ಕೊಡುತ್ತೇವೆಂದು ಮಾತುಕೊಡುತ್ತಾರಾದರೂ ಅವರು ತಾವೇ ಭ್ರಷ್ಟತೆಯ ದಾಸರಾಗಿದ್ದಾರೆ. ಏಕೆಂದರೆ ಯಾವನಾದರೂ ಇನ್ನೊಬ್ಬನಿಗೆ ಸೋತುಹೋಗುವಲ್ಲಿ ಅವನು ಅವನ ದಾಸನಾಗುತ್ತಾನೆ. 20 ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ಕುರಿತಾದ ನಿಷ್ಕೃಷ್ಟ ಜ್ಞಾನದ ಮೂಲಕ ಲೋಕದ ಮಾಲಿನ್ಯಗಳಿಂದ ಬಿಡಿಸಿಕೊಂಡವರು ಪುನಃ ಅದೇ ವಿಷಯಗಳಲ್ಲಿ ಒಳಗೂಡಿ ಸೋತುಹೋಗುವುದಾದರೆ ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು ಎಂಬುದು ಖಂಡಿತ. 21 ಅವರು ನೀತಿಯ ಮಾರ್ಗವನ್ನು ನಿಷ್ಕೃಷ್ಟವಾಗಿ ತಿಳಿದು ತಮಗೆ ಕೊಡಲ್ಪಟ್ಟ ಪವಿತ್ರ ಆಜ್ಞೆಯಿಂದ ದೂರಹೋಗುವುದಕ್ಕಿಂತ ಆ ಮಾರ್ಗವನ್ನು ತಿಳಿಯದೇ ಇರುತ್ತಿದ್ದಲ್ಲಿ ಮೇಲಾಗುತ್ತಿತ್ತು. 22 “ನಾಯಿ ತಾನು ಕಕ್ಕಿದ್ದನ್ನು ನೆಕ್ಕಲು ಹಿಂದಿರುಗಿತು, ತೊಳೆದ ಹಂದಿ ಕೆಸರಿನಲ್ಲಿ ಹೊರಳುವುದಕ್ಕೆ ಹೋಯಿತು” ಎಂಬ ನೈಜ ಗಾದೆಯು ಅವರ ವಿಷಯದಲ್ಲಿ ಸಂಭವಿಸಿದೆ.