2 ಪೇತ್ರ
3 ಪ್ರಿಯರೇ, ಇದು ನಾನು ನಿಮಗೆ ಬರೆಯುತ್ತಿರುವ ಎರಡನೆಯ ಪತ್ರ; ಮೊದಲ ಪತ್ರದಲ್ಲಿ ಮಾಡಿದಂತೆ ಇದರಲ್ಲಿಯೂ ಮರುಜ್ಞಾಪನದ ಮೂಲಕ ನಿಮ್ಮ ಸ್ಪಷ್ಟವಾದ ಆಲೋಚನಾ ಸಾಮರ್ಥ್ಯವನ್ನು ಪ್ರಚೋದಿಸುತ್ತಿದ್ದೇನೆ. 2 ಈ ಮುಂಚೆ ಪವಿತ್ರ ಪ್ರವಾದಿಗಳಿಂದ ತಿಳಿಸಲ್ಪಟ್ಟ ಮಾತುಗಳನ್ನು ಮತ್ತು ಕರ್ತನೂ ರಕ್ಷಕನೂ ಆಗಿರುವವನು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಆಜ್ಞೆಯನ್ನು ನೀವು ಜ್ಞಾಪಕಮಾಡಿಕೊಳ್ಳಬೇಕು. 3 ಕಡೇ ದಿವಸಗಳಲ್ಲಿ ಕುಚೋದ್ಯಗಾರರು ತಮ್ಮ ಕುಚೋದ್ಯದ ಮಾತುಗಳೊಂದಿಗೆ ಬರುವರು ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಿರಿ; ಅವರು ತಮ್ಮ ಸ್ವಂತ ಇಚ್ಛೆಗಳಿಗನುಸಾರ ನಡೆಯುತ್ತಾ 4 “ಅವನ ವಾಗ್ದತ್ತ ಸಾನ್ನಿಧ್ಯವು ಎಲ್ಲಿದೆ? ನಮ್ಮ ಪೂರ್ವಜರು ಮರಣದಲ್ಲಿ ನಿದ್ರೆಹೋದ ದಿನದಿಂದ ಎಲ್ಲವೂ ಸೃಷ್ಟಿಯ ಆರಂಭದಿಂದಿದ್ದ ಹಾಗೆಯೇ ಮುಂದುವರಿಯುತ್ತಿದೆಯಲ್ಲಾ” ಎಂದು ಹೇಳುವರು.
5 ಅವರ ಅಪೇಕ್ಷೆಗನುಸಾರ ಈ ವಾಸ್ತವಾಂಶವು ಅವರ ಗಮನಕ್ಕೆ ಬರುವುದಿಲ್ಲ; ಅದೇನೆಂದರೆ, ದೇವರ ವಾಕ್ಯದಿಂದಲೇ ಪೂರ್ವಕಾಲದಿಂದಲೂ ಆಕಾಶಗಳೂ ನೀರಿನೊಳಗಿಂದ ಮತ್ತು ನೀರಿನ ಮಧ್ಯದಿಂದ ಅಚ್ಚುಕಟ್ಟಾಗಿ ಎದ್ದುನಿಂತಿದ್ದ ಭೂಮಿಯೂ ಇದ್ದವು. 6 ಮತ್ತು ಅವುಗಳ ಮೂಲಕ ಆ ಕಾಲದ ಲೋಕವು ಜಲಪ್ರಳಯ ಬಂದಾಗ ನಾಶವಾಯಿತು. 7 ಆದರೆ ಅದೇ ವಾಕ್ಯದ ಮೂಲಕ ಈಗ ಇರುವ ಆಕಾಶ ಮತ್ತು ಭೂಮಿಯು ಬೆಂಕಿಗಾಗಿ ಇಡಲ್ಪಟ್ಟಿದ್ದು, ನ್ಯಾಯತೀರ್ಪಿನ ದಿನಕ್ಕಾಗಿ ಮತ್ತು ದೇವಭಕ್ತಿಯಿಲ್ಲದ ಜನರ ನಾಶನಕ್ಕಾಗಿ ಕಾದಿರಿಸಲ್ಪಡುತ್ತಿವೆ.
8 ಹಾಗಿದ್ದರೂ ಪ್ರಿಯರೇ, ಯೆಹೋವನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ ಎಂಬ ಒಂದು ವಾಸ್ತವಾಂಶವನ್ನು ಮರೆಯಬೇಡಿರಿ. 9 ತಡಮಾಡುವ ವಿಷಯದಲ್ಲಿ ಕೆಲವರು ನೆನಸುವ ಪ್ರಕಾರ ತನ್ನ ವಾಗ್ದಾನದ ವಿಷಯದಲ್ಲಿ ಯೆಹೋವನು ತಡಮಾಡುವವನಲ್ಲ, ಬದಲಾಗಿ ಯಾವನಾದರೂ ನಾಶವಾಗುವುದನ್ನು ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪವನ್ನು ಹೊಂದುವುದನ್ನು ಬಯಸುವಾತನಾಗಿರುವುದರಿಂದ ನಿಮ್ಮ ವಿಷಯದಲ್ಲಿ ತಾಳ್ಮೆಯಿಂದಿದ್ದಾನೆ. 10 ಆದರೂ ಯೆಹೋವನ ದಿನವು ಕಳ್ಳನಂತೆ ಬರುವುದು; ಆಗ ಆಕಾಶವು ಹಿಸ್ಸೆಂಬ ಶಬ್ದದಿಂದ ಗತಿಸಿಹೋಗುವುದು; ಘಟಕಾಂಶಗಳು ತೀಕ್ಷ್ಣವಾದ ಕಾವಿನಿಂದಾಗಿ ಉರಿದು ಕರಗಿ ಹೋಗುವವು; ಭೂಮಿಯೂ ಅದರಲ್ಲಿರುವ ಕೆಲಸಗಳೂ ಬಯಲಾಗುವವು.
11 ಇವುಗಳೆಲ್ಲವೂ ಹೀಗೆ ಲಯವಾಗಿ ಹೋಗುವುದರಿಂದ ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿರಿ. ನೀವು ಪವಿತ್ರ ನಡತೆಯುಳ್ಳವರೂ ದೇವಭಕ್ತಿಯ ಕ್ರಿಯೆಗಳುಳ್ಳವರೂ ಆಗಿರಬೇಕು, 12 ಏಕೆಂದರೆ ನೀವು ಯೆಹೋವನ ದಿನದ ಸಾನ್ನಿಧ್ಯವನ್ನು ಎದುರುನೋಡುತ್ತಾ ಮನಸ್ಸಿನಲ್ಲಿ ನಿಕಟವಾಗಿ ಇಡುತ್ತಾ ಇದ್ದೀರಲ್ಲಾ. ಆ ದಿನದಲ್ಲಿ ಆಕಾಶವು ಬೆಂಕಿ ಹೊತ್ತಿ ಲಯವಾಗಿ ಹೋಗುವುದು ಮತ್ತು ಘಟಕಾಂಶಗಳು ಅತಿಯಾದ ಉಷ್ಣತೆಯಿಂದ ಕರಗಿಹೋಗುವವು. 13 ಆದರೆ ಆತನ ವಾಗ್ದಾನಕ್ಕನುಸಾರ ನಾವು ನೂತನ ಆಕಾಶವನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಿದ್ದೇವೆ ಮತ್ತು ಇವುಗಳಲ್ಲಿ ನೀತಿಯು ವಾಸವಾಗಿರುವುದು.
14 ಆದುದರಿಂದ ಪ್ರಿಯರೇ, ನೀವು ಇವುಗಳನ್ನು ಎದುರುನೋಡುತ್ತಿರುವುದರಿಂದ ಕೊನೆಗೆ ಆತನ ದೃಷ್ಟಿಯಲ್ಲಿ ಕಳಂಕವಿಲ್ಲದವರು, ನಿರ್ದೋಷಿಗಳು ಮತ್ತು ಶಾಂತಿಯಿಂದಿರುವವರು ಆಗಿ ಕಂಡುಬರಲು ನಿಮ್ಮ ಕೈಲಾದದ್ದೆಲ್ಲವನ್ನು ಮಾಡಿರಿ. 15 ಇದಲ್ಲದೆ, ನಮ್ಮ ಕರ್ತನ ತಾಳ್ಮೆಯನ್ನು ರಕ್ಷಣೆಯಾಗಿ ಎಣಿಸಿಕೊಳ್ಳಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಕೊಡಲ್ಪಟ್ಟ ವಿವೇಕಕ್ಕೆ ಅನುಸಾರ ಇದೇ ವಿಷಯಗಳನ್ನು ಬರೆದನು. 16 ಅವನು ತನ್ನ ಎಲ್ಲ ಪತ್ರಗಳಲ್ಲಿ ಈ ವಿಷಯಗಳ ಕುರಿತು ಮಾತಾಡುತ್ತಾನೆ. ಆದರೂ ಅವುಗಳಲ್ಲಿರುವ ಕೆಲವು ವಿಷಯಗಳು ಅರ್ಥಮಾಡಿಕೊಳ್ಳಲು ಕಷ್ಟಕರವಾಗಿವೆ; ಅಜ್ಞಾನಿಗಳೂ ಚಂಚಲರೂ ಶಾಸ್ತ್ರಗ್ರಂಥದ ಉಳಿದ ಭಾಗಗಳನ್ನು ತಿರುಚುವಂತೆಯೇ ಇವುಗಳನ್ನು ಸಹ ತಿರುಚಿ ತಮಗೇ ನಾಶನವನ್ನು ಉಂಟುಮಾಡಿಕೊಳ್ಳುತ್ತಾರೆ.
17 ಆದುದರಿಂದ ಪ್ರಿಯರೇ, ಈ ವಿಷಯಗಳನ್ನು ನೀವು ಮುಂದಾಗಿಯೇ ತಿಳಿದುಕೊಂಡಿರುವುದರಿಂದ ನಿಯಮವನ್ನು ಉಲ್ಲಂಘಿಸುವಂಥ ಜನರ ತಪ್ಪಿನಿಂದ ನೀವು ಅವರೊಂದಿಗೆ ನಡೆಸಲ್ಪಟ್ಟು ನಿಮ್ಮ ಸ್ಥಿರತೆಯನ್ನು ಕಳೆದುಕೊಳ್ಳದಂತೆ ಎಚ್ಚರಿಕೆಯಾಗಿರಿ. 18 ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ಅಪಾತ್ರ ದಯೆ ಮತ್ತು ಜ್ಞಾನದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾ ಇರಿ. ಅವನಿಗೆ ಇಂದೂ ಎಂದೆಂದಿಗೂ ಮಹಿಮೆಯು ಸಲ್ಲುತ್ತಾ ಇರಲಿ.