ಯಾಕೋಬ
3 ನನ್ನ ಸಹೋದರರೇ, ನಾವು ಕಠಿನವಾದ ನ್ಯಾಯತೀರ್ಪನ್ನು ಹೊಂದುವೆವು ಎಂಬುದನ್ನು ತಿಳಿದವರಾಗಿ ನಿಮ್ಮಲ್ಲಿ ಅನೇಕರು ಬೋಧಕರಾಗಬಾರದು. 2 ಏಕೆಂದರೆ ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ. ಯಾವನಾದರೂ ಮಾತಿನಲ್ಲಿ ಎಡವದಿರುವುದಾದರೆ ಅಂಥವನು ಪರಿಪೂರ್ಣನೂ ತನ್ನ ಇಡೀ ದೇಹಕ್ಕೆ ಕಡಿವಾಣ ಹಾಕಲು ಶಕ್ತನೂ ಆಗಿದ್ದಾನೆ. 3 ಕುದುರೆಗಳು ನಮಗೆ ವಿಧೇಯವಾಗುವಂತೆ ನಾವು ಅವುಗಳ ಬಾಯಿಗಳಿಗೆ ಕಡಿವಾಣಗಳನ್ನು ಹಾಕುವುದಾದರೆ ಅವುಗಳ ದೇಹವನ್ನೆಲ್ಲ ನಿಯಂತ್ರಿಸಲು ಸಹ ನಮ್ಮಿಂದಾಗುತ್ತದೆ. 4 ಹಡಗುಗಳನ್ನು ನೋಡಿರಿ. ಅವು ಬಹಳ ದೊಡ್ಡವಾಗಿದ್ದರೂ ಬಲವಾದ ಗಾಳಿಯಿಂದ ಹೊಡೆಸಿಕೊಂಡು ಹೋಗುತ್ತವೆ; ಆದರೂ ಅವುಗಳನ್ನು ನಡಿಸುವವನು ಬಹು ಚಿಕ್ಕದಾದ ಒಂದು ಚುಕ್ಕಾಣಿಯಿಂದ ಅವುಗಳನ್ನು ತಾನು ಬಯಸಿದ ಕಡೆಗೆ ತಿರುಗಿಸುತ್ತಾನೆ.
5 ಹಾಗೆಯೇ ನಾಲಿಗೆಯು ಸಹ ಒಂದು ಚಿಕ್ಕ ಅಂಗವಾಗಿದ್ದರೂ ದೊಡ್ಡ ರೀತಿಯಲ್ಲಿ ಕೊಚ್ಚಿಕೊಳ್ಳುತ್ತದೆ. ಎಷ್ಟೋ ದೊಡ್ಡ ಕಾಡನ್ನು ಸುಟ್ಟುಬಿಡಲು ಎಷ್ಟು ಚಿಕ್ಕ ಬೆಂಕಿ ಸಾಕಾಗುತ್ತದೆ ಎಂದು ನೋಡಿ! 6 ವಾಸ್ತವದಲ್ಲಿ, ನಾಲಿಗೆಯು ಬೆಂಕಿಯಾಗಿದೆ. ನಮ್ಮ ಅಂಗಗಳ ನಡುವೆ ನಾಲಿಗೆಯು ಅನೀತಿಯ ಲೋಕವನ್ನೇ ನಿಯೋಜಿಸಿದೆ. ಏಕೆಂದರೆ ಅದು ದೇಹವನ್ನೆಲ್ಲಾ ಮಲಿನಮಾಡುತ್ತದೆ ಮತ್ತು ಪ್ರಾಕೃತಿಕ ಜೀವನದ ಚಕ್ರಕ್ಕೇ ಬೆಂಕಿಹಚ್ಚುತ್ತದೆ ಮತ್ತು ಅದು ಗೆಹೆನ್ನದಿಂದ * ಹೊತ್ತಿಸಲ್ಪಡುತ್ತದೆ. 7 ಪ್ರತಿಯೊಂದು ಜಾತಿಯ ಕಾಡು ಮೃಗ, ಪಕ್ಷಿ, ಹರಿದಾಡುವ ಜೀವಿ, ಸಮುದ್ರಜೀವಿಯು ಪಳಗಿಸಲ್ಪಡಬೇಕು ಮತ್ತು ಮಾನವಕುಲವು ಅವುಗಳನ್ನು ಪಳಗಿಸಿದ್ದುಂಟು. 8 ಆದರೆ ಮಾನವಕುಲದಲ್ಲಿ ಯಾವನೂ ನಾಲಿಗೆಯನ್ನು ಪಳಗಿಸಲಾರನು. ಅದು ಹತೋಟಿಗೆ ಬಾರದ ಹಾನಿಕರ ಅಂಗವಾಗಿದ್ದು ಮರಣಕಾರಕ ವಿಷದಿಂದ ತುಂಬಿದೆ. 9 ಅದರಿಂದ ನಾವು ತಂದೆಯಾದ ಯೆಹೋವನನ್ನು ಸ್ತುತಿಸುತ್ತೇವೆ, ಅದರಿಂದಲೇ “ದೇವರ ಸ್ವರೂಪದಲ್ಲಿ” ಅಸ್ತಿತ್ವಕ್ಕೆ ಬಂದಿರುವ ಮನುಷ್ಯರನ್ನು ಶಪಿಸುತ್ತೇವೆ. 10 ಒಂದೇ ಬಾಯಿಂದ ಸ್ತುತಿಯೂ ಶಾಪವೂ ಬರುತ್ತದೆ.
ನನ್ನ ಸಹೋದರರೇ, ಇಂಥ ವಿಷಯಗಳು ಹೀಗೆ ಸಂಭವಿಸುತ್ತಾ ಇರುವುದು ಯೋಗ್ಯವಲ್ಲ. 11 ಬುಗ್ಗೆಯ ಒಂದೇ ಬಾಯಿಂದ ಸಿಹಿನೀರೂ ಕಹಿನೀರೂ ಬರುವುದಿಲ್ಲ, ಅಲ್ಲವೆ? 12 ನನ್ನ ಸಹೋದರರೇ, ಅಂಜೂರದ ಮರವು ಆಲೀವ್ ಹಣ್ಣುಗಳನ್ನಾಗಲಿ ದ್ರಾಕ್ಷಿಯ ಬಳ್ಳಿಯು ಅಂಜೂರದ ಹಣ್ಣುಗಳನ್ನಾಗಲಿ ಫಲಿಸಲಾರದು, ಅಲ್ಲವೆ? ಹಾಗೆಯೇ ಉಪ್ಪುನೀರು ಸಿಹಿನೀರನ್ನು ಉಂಟುಮಾಡಲಾರದು.
13 ನಿಮ್ಮಲ್ಲಿ ವಿವೇಕಿಯೂ ತಿಳಿವಳಿಕೆಯುಳ್ಳವನೂ ಯಾರು? ಅಂಥವನು ಉತ್ತಮ ನಡತೆಯಿಂದ ವಿವೇಕಕ್ಕೆ ಸೇರಿದ್ದಾಗಿರುವ ಸೌಮ್ಯಭಾವದೊಂದಿಗೆ ತನ್ನ ಕ್ರಿಯೆಗಳನ್ನು ತೋರಿಸಲಿ. 14 ಆದರೆ ನಿಮ್ಮ ಹೃದಯಗಳಲ್ಲಿ ತೀಕ್ಷ್ಣವಾದ ಹೊಟ್ಟೆಕಿಚ್ಚೂ ಕಲಹಶೀಲ ಮನೋಭಾವವೂ ಇರುವುದಾದರೆ ಜಂಬಕೊಚ್ಚಿಕೊಳ್ಳುತ್ತಾ ಸತ್ಯಕ್ಕೆ ವಿರುದ್ಧವಾಗಿ ಸುಳ್ಳಾಡುತ್ತಾ ಇರಬೇಡಿ. 15 ಇದು ಮೇಲಣಿಂದ ಬರುವ ವಿವೇಕವಾಗಿರದೆ, ಭೂಸಂಬಂಧವಾದದ್ದೂ ಪಶುಭಾವದ್ದೂ ಪೈಶಾಚಿಕವಾದದ್ದೂ ಆಗಿದೆ. 16 ಏಕೆಂದರೆ ಹೊಟ್ಟೆಕಿಚ್ಚೂ ಕಲಹಶೀಲ ಮನೋಭಾವವೂ ಇರುವ ಕಡೆ ಅವ್ಯವಸ್ಥೆಯೂ ಪ್ರತಿಯೊಂದು ಕೆಟ್ಟ ವಿಷಯವೂ ಇರುತ್ತದೆ.
17 ಆದರೆ ಮೇಲಣಿಂದ ಬರುವ ವಿವೇಕವು ಮೊದಲು ಶುದ್ಧವಾದದ್ದು, ತರುವಾಯ ಶಾಂತಿಶೀಲವಾದದ್ದು, ನ್ಯಾಯಸಮ್ಮತವಾದದ್ದು, ವಿಧೇಯತೆ ತೋರಿಸಲು ಸಿದ್ಧವಾದದ್ದು, ಕರುಣೆ ಮತ್ತು ಒಳ್ಳೇ ಫಲಗಳಿಂದ ತುಂಬಿರುವಂಥದ್ದು ಆಗಿದೆ; ಅದು ಪಕ್ಷಭೇದಗಳನ್ನು ಮಾಡುವುದಿಲ್ಲ, ಅದರಲ್ಲಿ ಕಪಟವೂ ಇಲ್ಲ. 18 ಇದಲ್ಲದೆ, ನೀತಿಯ ಫಲದ ಬೀಜವು ಶಾಂತ ಪರಿಸ್ಥಿತಿಗಳಲ್ಲಿ ಶಾಂತಿಕರ್ತರಿಗಾಗಿ ಬಿತ್ತಲ್ಪಡುತ್ತದೆ.