ಒಂದನೇ ಅರಸು
10 ಯೆಹೋವನ ಹೆಸ್ರಿನಿಂದಾಗಿ ಸೊಲೊಮೋನನಿಗೆ ಸಿಕ್ಕಿದ ಕೀರ್ತಿ ಬಗ್ಗೆ ಶೆಬದ ರಾಣಿ ಕೇಳಿಸ್ಕೊಂಡಿದ್ದಳು.+ ಅದಕ್ಕೇ ಅವಳು ಕಷ್ಟವಾದ ಪ್ರಶ್ನೆಗಳನ್ನ* ಕೇಳಿ ಅವನನ್ನ ಪರೀಕ್ಷಿಸೋಕೆ ಬಂದಳು.+ 2 ಅವಳು ಮಹಾ ವೈಭವದಿಂದ ತನ್ನ ದೊಡ್ಡ ಕುಟುಂಬದ ಜೊತೆ ಯೆರೂಸಲೇಮಿಗೆ ಬಂದಿದ್ದಳು.+ ಅವಳು ಅಲ್ಲಿಗೆ ಸುಗಂಧ ತೈಲ,+ ತುಂಬ ಚಿನ್ನ ಮತ್ತು ಅಮೂಲ್ಯ ರತ್ನಗಳನ್ನ ಒಂಟೆ ಮೇಲೆ ಹೊರಿಸ್ಕೊಂಡು ತಂದಿದ್ದಳು. ಅವಳು ತನ್ನ ಮನಸ್ಸಲ್ಲಿದ್ದ ಎಲ್ಲ ಪ್ರಶ್ನೆಗಳನ್ನ ಕೇಳಿದಳು. 3 ಸೊಲೊಮೋನ ಅವಳ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟ. ಯಾವ ವಿಷ್ಯವನ್ನೂ ವಿವರಿಸಿ ಹೇಳೋಕೆ ಅವನಿಗೆ ಕಷ್ಟ ಆಗಲಿಲ್ಲ.*
4 ಶೆಬದ ರಾಣಿ ರಾಜ ಸೊಲೊಮೋನನ ಸರಿಸಾಟಿ ಇಲ್ಲದ ವಿವೇಕವನ್ನ,+ ಅವನು ಕಟ್ಟಿಸಿದ ಅರಮನೆಯನ್ನ,+ 5 ಅವನ ಮೇಜಿನ ಮೇಲೆ ಇಡ್ತಿದ್ದ ಆಹಾರವನ್ನ,+ ಅವನ ಅಧಿಕಾರಿಗಳಿಗೆ ಕೂತ್ಕೊಳ್ಳೋಕೆ ಮಾಡಿದ್ದ ಏರ್ಪಾಡನ್ನ, ಆಹಾರ ಬಡಿಸ್ತಿದ್ದವ್ರನ್ನ ಮತ್ತು ಅವರು ಹಾಕಿದ್ದ ವಿಶೇಷ ಬಟ್ಟೆಯನ್ನ, ಅವನ ಪಾನದಾಯಕರನ್ನ ಮತ್ತು ಅವನು ಯೆಹೋವನ ಆಲಯದಲ್ಲಿ ತಪ್ಪದೆ ಕೊಡ್ತಿದ್ದ ಸರ್ವಾಂಗಹೋಮ ಬಲಿಗಳನ್ನ ನೋಡಿ ಆಶ್ಚರ್ಯದಿಂದ ಅವಳಿಗೆ ಮಾತೇ ಬರಲಿಲ್ಲ. 6 ಅವಳು ರಾಜನಿಗೆ “ನಾನು ನನ್ನ ದೇಶದಲ್ಲಿ ನಿನ್ನ ಸಾಧನೆಗಳ ಬಗ್ಗೆ, ನಿನ್ನ ವಿವೇಕದ ಬಗ್ಗೆ ಕೇಳಿದ್ದೆಲ್ಲ ನಿಜ ಅಂತ ನಂಗೊತ್ತಾಯ್ತು. 7 ಆದ್ರೆ ನಾನು ಇಲ್ಲಿಗೆ ಬಂದು ಇದನ್ನೆಲ್ಲ ನನ್ನ ಕಣ್ಣಾರೆ ನೋಡೋ ತನಕ ನಂಬಿರಲಿಲ್ಲ. ನಾನು ನೋಡಿದ್ದಕ್ಕೆ ಹೋಲಿಸಿದ್ರೆ ಅವರು ಹೇಳಿದ್ದು ಏನೇನೂ ಅಲ್ಲ ಅಂತ ಈಗ ಗೊತ್ತಾಯ್ತು. ನಾನು ಕೇಳಿಸ್ಕೊಂಡಿದ್ದಕ್ಕಿಂತ ಎಷ್ಟೋ ಹೆಚ್ಚು ವಿವೇಕ ಮತ್ತು ಸಿರಿಸಂಪತ್ತು ನಿನ್ನ ಹತ್ರ ಇದೆ. 8 ಯಾವಾಗ್ಲೂ ನಿನ್ನ ಮುಂದೆ ನಿಂತು ನಿನ್ನ ವಿವೇಕದ ಮಾತುಗಳನ್ನ ಕೇಳಿಸ್ಕೊಂಡು ನಿನ್ನ ಜನ್ರು, ನಿನ್ನ ಸೇವಕರು ಸಂತೋಷವಾಗಿ ಇದ್ದಾರೆ!+ 9 ನಿನ್ನನ್ನ ಮೆಚ್ಚಿ ಇಸ್ರಾಯೇಲಿನ ರಾಜನಾಗಿ ಮಾಡಿರೋ ನಿನ್ನ ದೇವರಾದ ಯೆಹೋವನನ್ನ ಎಲ್ರೂ ಹೊಗಳೋ ತರ ಆಗ್ಲಿ.+ ಯೆಹೋವ ಇಸ್ರಾಯೇಲ್ಯರನ್ನ ಶಾಶ್ವತಕ್ಕೂ ಪ್ರೀತಿಸ್ತಾನೆ. ಹಾಗಾಗಿ ಆತನು ನಿನ್ನನ್ನ ಅವ್ರ ರಾಜನಾಗಿ ಮಾಡಿ ಅವ್ರನ್ನ ನ್ಯಾಯ, ನೀತಿಯಿಂದ ಆಳೋ ತರ ಮಾಡಿದ್ದಾನೆ” ಅಂದಳು.
10 ಆಮೇಲೆ ಅವಳು ರಾಜನಿಗೆ 120 ತಲಾಂತು* ಚಿನ್ನ, ಸಾಕಷ್ಟು ಸುಗಂಧ ತೈಲವನ್ನ,+ ಅಮೂಲ್ಯ ರತ್ನಗಳನ್ನ ಕೊಟ್ಟಳು.+ ಶೆಬದ ರಾಣಿ ಕೊಟ್ಟಷ್ಟು ಸುಗಂಧ ತೈಲವನ್ನ ರಾಜ ಸೊಲೊಮೋನನಿಗೆ ಯಾವತ್ತೂ ಯಾರೂ ಕೊಡಲಿಲ್ಲ.
11 ಹೀರಾಮನ ಹಡಗು ಪಡೆ ಓಫೀರಿನಿಂದ+ ಚಿನ್ನ ತಗೊಂಡು ಬರೋದ್ರ ಜೊತೆ ಅಮೂಲ್ಯ ರತ್ನಗಳನ್ನ, ಬೇಕಾದಷ್ಟು ಗಂಧದ ಮರಗಳನ್ನೂ+ ತರ್ತಿತ್ತು.+ 12 ರಾಜ ಸೊಲೊಮೋನ ಆ ಗಂಧದ ಮರಗಳಿಂದ ಯೆಹೋವನ ಆಲಯಕ್ಕೆ ಮತ್ತು ತನ್ನ ಅರಮನೆಗೆ ಆಧಾರ ಕಂಬಗಳನ್ನ, ಗಾಯಕರಿಗಾಗಿ ತಂತಿವಾದ್ಯಗಳನ್ನ ಮಾಡಿಸಿದ.+ ಅಷ್ಟು ಗಂಧದ ಮರಗಳನ್ನ ಅವತ್ತಿಂದ ಇವತ್ತಿನ ತನಕ ಯಾರೂ ತರಲಿಲ್ಲ, ನೋಡಕ್ಕೂ ಸಿಗಲಿಲ್ಲ.
13 ರಾಜ ಸೊಲೊಮೋನ ಉದಾರ ಮನಸ್ಸಿಂದ ಶೆಬದ ರಾಣಿಗೆ ಉಡುಗೊರೆಗಳನ್ನ ಕೊಟ್ಟ. ಜೊತೆಗೆ ಅವಳು ಇಷ್ಟಪಟ್ಟು ಕೇಳಿದ್ದನ್ನೆಲ್ಲ ಕೊಟ್ಟ. ಇದಾದ್ಮೇಲೆ ಅವಳು ತನ್ನ ಸೇವಕರ ಜೊತೆ ಸ್ವದೇಶಕ್ಕೆ ಹೋದಳು.+
14 ಸೊಲೊಮೋನನಿಗೆ ಪ್ರತಿ ವರ್ಷ 666 ತಲಾಂತು ಚಿನ್ನ ಸಿಗ್ತಿತ್ತು.+ 15 ಅದ್ರ ಜೊತೆ ಅವನಿಗೆ ವ್ಯಾಪಾರಿಗಳಿಂದ, ಅರಬ್ ದೇಶದ ಎಲ್ಲ ರಾಜರಿಂದ ಮತ್ತು ದೇಶದ ರಾಜ್ಯಪಾಲರಿಂದ ತೆರಿಗೆ ಸಿಗ್ತಿತ್ತು.
16 ರಾಜ ಸೊಲೊಮೋನ ಗಟ್ಟಿ ಚಿನ್ನದಿಂದ 200 ದೊಡ್ಡದೊಡ್ಡ ಗುರಾಣಿ ಮಾಡಿಸಿದ.+ (ಪ್ರತಿಯೊಂದು ಗುರಾಣಿಗೆ 600 ಶೆಕೆಲ್* ಚಿನ್ನ ಬಳಸಿದ್ರು)+ 17 ಅಷ್ಟೇ ಅಲ್ಲ, 300 ಚಿಕ್ಕಚಿಕ್ಕ ಗುರಾಣಿ* ಮಾಡಿಸಿದ. (ಪ್ರತಿಯೊಂದು ಗುರಾಣಿಗೆ 3 ಮೈನಾ* ಚಿನ್ನ ಹಿಡಿತು.) ಆಮೇಲೆ ರಾಜ ಇವನ್ನ “ಲೆಬನೋನಿನ ವನ”+ ಅಂತ ಕರೀತಿದ್ದ ಅರಮನೆಯಲ್ಲಿ ಇಡಿಸಿದ.
18 ರಾಜ, ಆನೆ ದಂತದಿಂದ ದೊಡ್ಡ ಸಿಂಹಾಸನ+ ಮಾಡಿಸಿ ಅದಕ್ಕೆ ಅಪ್ಪಟ ಚಿನ್ನದ ತಗಡನ್ನ ಹೊದಿಸಿದ.+ 19 ಆ ಸಿಂಹಾಸನಕ್ಕೆ ಆರು ಮೆಟ್ಟಿಲು ಇತ್ತು. ಸಿಂಹಾಸನದ ಮೇಲೆ ಒಂದು ಛತ್ರಿ ಇತ್ತು. ಸಿಂಹಾಸನಕ್ಕೆ ಎರಡು ಕೈಗಳಿತ್ತು ಮತ್ತು ಆ ಕೈಗಳ ಬದಿಯಲ್ಲಿ ಎರಡು ಸಿಂಹಗಳು+ ನಿಂತಿರೋ ಪ್ರತಿಮೆ ಇತ್ತು. 20 ಪ್ರತಿ ಮೆಟ್ಟಿಲಿನ ಎರಡೂ ಕೊನೆಯಲ್ಲಿ ಒಂದೊಂದು ಸಿಂಹದ ಪ್ರತಿಮೆ ಇತ್ತು. ಹೀಗೆ ಆರು ಮೆಟ್ಟಿಲಿಗೆ ಒಟ್ಟು 12 ಸಿಂಹದ ಪ್ರತಿಮೆಗಳು ಇದ್ವು. ಬೇರೆ ಯಾವ ರಾಜ್ಯದಲ್ಲೂ ಈ ತರದ ಸಿಂಹಾಸನ ಇರಲಿಲ್ಲ.
21 ರಾಜ ಸೊಲೊಮೋನನ ಪಾನಪಾತ್ರೆಗಳೆಲ್ಲ ಚಿನ್ನದ್ದಾಗಿತ್ತು. “ಲೆಬನೋನಿನ ವನ”+ ಅಂತ ಕರೀತಿದ್ದ ಅರಮನೆಯಲ್ಲಿ ಇದ್ದ ಪಾತ್ರೆಗಳೆಲ್ಲ ಅಪ್ಪಟ ಚಿನ್ನದ್ದಾಗಿತ್ತು. ಬೆಳ್ಳಿ ಪಾತ್ರೆಗಳು ಒಂದೂ ಇರಲಿಲ್ಲ. ಯಾಕಂದ್ರೆ ಸೊಲೊಮೋನನ ಕಾಲದಲ್ಲಿ ಬೆಳ್ಳಿಗೆ ಬೆಲೆನೇ ಇರಲಿಲ್ಲ.+ 22 ರಾಜನಿಗೆ ತಾರ್ಷೀಷಿನ+ ಹಡಗು ಪಡೆನೂ ಇತ್ತು. ಅದು ಹೀರಾಮನ ಹಡಗು ಪಡೆಯ ಜೊತೆ ಸಮುದ್ರ ಪ್ರಯಾಣಕ್ಕೆ ಹೋಗ್ತಿತ್ತು. ಮೂರು ವರ್ಷಕ್ಕೆ ಒಂದುಸಲ ತಾರ್ಷೀಷಿನ ಹಡಗುಪಡೆ ಚಿನ್ನ, ಬೆಳ್ಳಿ, ಆನೆಯ ದಂತ,+ ಕೋತಿ ಮತ್ತು ನವಿಲುಗಳನ್ನ ತುಂಬಿಸ್ಕೊಂಡು ಬರ್ತಿತ್ತು.
23 ರಾಜ ಸೊಲೊಮೋನನ ಸಿರಿಸಂಪತ್ತು+ ಮತ್ತು ವಿವೇಕ+ ಭೂಮಿ ಮೇಲಿದ್ದ ಬೇರೆ ಎಲ್ಲ ರಾಜರಿಗಿಂತ ಎಷ್ಟೋ ಮಿಗಿಲಾಗಿತ್ತು. 24 ದೇವರು ಸೊಲೊಮೋನನಿಗೆ ವಿವೇಕ ಕೊಟ್ಟಿದ್ದನು.+ ಅವನ ವಿವೇಕದ ಮಾತನ್ನ ಕೇಳೋಕೆ ಜನ ಭೂಮಿಯ ಮೂಲೆಮೂಲೆಯಿಂದ ಅವನ ಹತ್ರ ಬರ್ತಿದ್ರು. 25 ಅವ್ರಲ್ಲಿ ಯಾರೇ ಬಂದ್ರೂ ಅವನಿಗೆ ಉಡುಗೊರೆಯಾಗಿ ಚಿನ್ನ-ಬೆಳ್ಳಿಯ ವಸ್ತುಗಳನ್ನ, ಬಟ್ಟೆಗಳನ್ನ, ಆಯುಧಗಳನ್ನ, ಸುಗಂಧ ತೈಲವನ್ನ, ಕುದುರೆಗಳನ್ನ, ಹೇಸರಗತ್ತೆಗಳನ್ನ ತರ್ತಿದ್ರು. ಈ ಪದ್ಧತಿ ವರ್ಷಾನುಗಟ್ಟಲೆ ಮುಂದುವರಿತು.
26 ರಾಜ ಸೊಲೊಮೋನ ರಥಗಳನ್ನ ಕುದುರೆಗಳನ್ನ ಕೂಡಿಸ್ಕೊಳ್ತಾ ಹೋದ. ಅವನ ಹತ್ರ 1,400 ರಥ ಮತ್ತು 12,000 ಕುದುರೆ ಇತ್ತು.+ ಅವನು ಅವುಗಳನ್ನ ರಥಗಳ ಪಟ್ಟಣಗಳಲ್ಲಿ ಇಟ್ಟ. ಆ ಪಟ್ಟಣಗಳು ಯೆರೂಸಲೇಮಿಗೆ ಹತ್ರ ಇತ್ತು.+
27 ರಾಜ ಬೆಳ್ಳಿಯನ್ನ ಕಲ್ಲುಗಳ ಹಾಗೆ, ದೇವದಾರು ಮರಗಳನ್ನ ಷೆಫೆಲಾದಲ್ಲಿದ್ದ ಅತ್ತಿ ಮರಗಳ ಹಾಗೆ ಯೆರೂಸಲೇಮಲ್ಲಿ ತುಂಬ ಕೂಡಿಸಿಟ್ಟ.+
28 ಸೊಲೊಮೋನ ಕುದುರೆಗಳನ್ನ ಈಜಿಪ್ಟಿಂದ ತರಿಸ್ತಿದ್ದ. ರಾಜನ ವ್ಯಾಪಾರಿಗಳು ಕುದುರೆಗಳನ್ನ ಗುಂಪುಗುಂಪಾಗಿ* ಇಷ್ಟು ಬೆಲೆಗೆ ಅಂತ ಕೊಂಡ್ಕೊಳ್ತಿದ್ರು.+ 29 ಈಜಿಪ್ಟಿಂದ ತರಿಸ್ತಿದ್ದ ಒಂದೊಂದು ರಥದ ಬೆಲೆ 600 ಬೆಳ್ಳಿ ಶೆಕೆಲ್ ಮತ್ತು ಒಂದೊಂದು ಕುದುರೆಯ ಬೆಲೆ 150 ಬೆಳ್ಳಿ ಶೆಕೆಲ್ ಆಗಿತ್ತು. ಹೀಗೆ ಅದನ್ನ ತರಿಸಿ ಹಿತ್ತಿಯರ+ ಮತ್ತು ಅರಾಮ್ಯರ ರಾಜರಿಗೆ ಮಾರುತ್ತಿದ್ರು.