ಅಪೊಸ್ತಲರ ಕಾರ್ಯ
16 ಆಮೇಲೆ ಪೌಲ ದೆರ್ಬೆಗೆ ಬಂದ. ಅಲ್ಲಿಂದ ಲುಸ್ತ್ರಕ್ಕೆ+ ಹೋದ. ಅಲ್ಲಿ ತಿಮೊತಿ+ ಅನ್ನೋ ಒಬ್ಬ ಶಿಷ್ಯನಿದ್ದ. ಯೆಹೂದ್ಯಳಾಗಿದ್ದ ಅವನ ಅಮ್ಮ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದಳು. ಆದ್ರೆ ಅವನ ಅಪ್ಪ ಒಬ್ಬ ಗ್ರೀಕನಾಗಿದ್ದ. 2 ತಿಮೊತಿ ಲುಸ್ತ್ರ ಮತ್ತು ಇಕೋನ್ಯದಲ್ಲಿದ್ದ ಸಹೋದರರ ಹತ್ರ ಒಳ್ಳೇ ಹೆಸ್ರು ಪಡ್ಕೊಂಡಿದ್ದ. 3 ಹಾಗಾಗಿ ಅವನನ್ನ ತನ್ನ ಜೊತೆ ಕರ್ಕೊಂಡು ಹೋಗಬೇಕಂತ ಪೌಲ ಆಸೆಪಟ್ಟ. ಅದನ್ನ ಅವನಿಗೆ ಹೇಳಿ ಅವನನ್ನ ಕರ್ಕೊಂಡು ಪ್ರಯಾಣ ಶುರುಮಾಡಿದ. ಆದ್ರೆ ಮೊದಲು ಅವನಿಗೆ ಸುನ್ನತಿಮಾಡಿಸಿದ. ಯಾಕಂದ್ರೆ ತಿಮೊತಿಯ ಅಪ್ಪ ಗ್ರೀಕಿನವನು ಅಂತ ಆ ಪ್ರದೇಶದಲ್ಲಿದ್ದ ಯೆಹೂದ್ಯರಿಗೆಲ್ಲ ಗೊತ್ತಿತ್ತು.+ 4 ಅವರು ಒಂದು ಊರಿಂದ ಇನ್ನೊಂದು ಊರಿಗೆ ಹೋಗ್ತಾ ಇದ್ದಾಗ ಯೆರೂಸಲೇಮಲ್ಲಿದ್ದ ಅಪೊಸ್ತಲರು ಮತ್ತು ಹಿರಿಯರು ತಗೊಂಡಿದ್ದ ತೀರ್ಮಾನಗಳನ್ನ ಪಾಲಿಸೋಕೆ ಸಹೋದರರಿಗೆ ನೆನಪು ಹುಟ್ಟಿಸಿದ್ರು.+ 5 ಇದ್ರಿಂದಾಗಿ ಸಭೆಯಲ್ಲಿದ್ದ ಸಹೋದರರ ನಂಬಿಕೆ ಹೆಚ್ಚಾಯ್ತು. ಶಿಷ್ಯರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಾ ಹೋಯ್ತು.
6 ಇದಾದ ಮೇಲೆ ಏಷ್ಯಾ ಪ್ರದೇಶಕ್ಕೆ ಹೋದಾಗ ಪವಿತ್ರಶಕ್ತಿ ಅವ್ರಿಗೆ ಸಿಹಿಸುದ್ದಿ ಸಾರದ ಹಾಗೆ ತಡಿತು. ಹಾಗಾಗಿ ಅವರು ಫ್ರುಗ್ಯ ಮತ್ತು ಗಲಾತ್ಯ+ ದೇಶವನ್ನ ಹಾದು ಮುಂದೆ ಹೋದ್ರು. 7 ಅವರು ಮೂಸ್ಯಕ್ಕೆ ಬಂದ್ರು. ಅಲ್ಲಿಂದ ಬಿಥೂನ್ಯಕ್ಕೆ+ ಹೋಗೋಕೆ ಪ್ರಯತ್ನಿಸಿದ್ರು. ಆದ್ರೆ ಯೇಸು ಪವಿತ್ರಶಕ್ತಿ ಮೂಲಕ ಅವ್ರಿಗೆ ಹೋಗೋಕೆ ಬಿಡಲಿಲ್ಲ. 8 ಹಾಗಾಗಿ ಅವರು ಮೂಸ್ಯ ಪ್ರದೇಶವನ್ನ ದಾಟಿ ತ್ರೋವಕ್ಕೆ ಬಂದ್ರು. 9 ಆದ್ರೆ ಪೌಲನಿಗೆ ರಾತ್ರಿ ಒಂದು ದರ್ಶನ ಬಂತು. ಆ ದರ್ಶನದಲ್ಲಿ ಮಕೆದೋನ್ಯದ ಒಬ್ಬ ವ್ಯಕ್ತಿ ಪೌಲನ ಮುಂದೆ ನಿಂತು “ಮಕೆದೋನ್ಯಕ್ಕೆ ಬಂದು ನಮಗೆ ಸಹಾಯಮಾಡು” ಅಂತ ಬೇಡ್ಕೊಳ್ತಾ ಇದ್ದ. 10 ಪೌಲ ಈ ದರ್ಶನ ನೋಡಿದ ತಕ್ಷಣ ನಾವು ಮಕೆದೋನ್ಯಕ್ಕೆ ಹೊರಟ್ವಿ. ಯಾಕಂದ್ರೆ ಅಲ್ಲಿನ ಜನ್ರಿಗೆ ಸಿಹಿಸುದ್ದಿ ಹೇಳೋಕೆ ದೇವರು ನಮ್ಮನ್ನ ಕರೆದಿದ್ದಾನೆ ಅಂತ ಅರ್ಥಮಾಡ್ಕೊಂಡ್ವಿ.
11 ಹಾಗಾಗಿ ನಾವು ತ್ರೋವದಿಂದ ಹಡಗನ್ನ ಹತ್ತಿ ನೇರವಾಗಿ ಸಮೊಥ್ರಾಕೆ ಅನ್ನೋ ದ್ವೀಪಕ್ಕೆ ಬಂದ್ವಿ. ಮಾರನೇ ದಿನ ನೆಯಾಪೊಲಿ ಅನ್ನೋ ಊರಿಗೆ ಹೋದ್ವಿ. 12 ಅಲ್ಲಿಂದ ಫಿಲಿಪ್ಪಿ+ ಅನ್ನೋ ರೋಮ್ನ ಒಂದು ಪಟ್ಟಣಕ್ಕೆ ತಲಪಿದ್ವಿ. ಇದು ಮಕೆದೋನ್ಯ ಜಿಲ್ಲೆಯ ಪ್ರಮುಖ ಪಟ್ಟಣವಾಗಿತ್ತು. ನಾವು ಸ್ವಲ್ಪ ದಿನ ಆ ಪಟ್ಟಣದಲ್ಲೇ ಉಳ್ಕೊಂಡ್ವಿ. 13 ಸಬ್ಬತ್ ದಿನದಲ್ಲಿ, ಪಟ್ಟಣದ ಹೊರಗೆ ನದಿ ತೀರದಲ್ಲಿ ಪ್ರಾರ್ಥನೆ ಮಾಡೋಕೆ ಜನ ಕೂಡಿಬರ್ತಾರೆ ಅಂತ ಅಂದ್ಕೊಂಡು ಅಲ್ಲಿಗೆ ಹೋದ್ವಿ. ನಾವು ಅಲ್ಲಿ ಕೂತು ಸೇರಿಬಂದಿದ್ದ ಸ್ತ್ರೀಯರ ಜೊತೆ ಮಾತಾಡೋಕೆ ಶುರುಮಾಡಿದ್ವಿ. 14 ಆ ಗುಂಪಲ್ಲಿದ್ದ ಲುದ್ಯ ಅನ್ನೋ ಸ್ತ್ರೀ ನಾವು ಹೇಳೋದನ್ನ ಕೇಳಿಸ್ಕೊಳ್ತಾ ಇದ್ದಳು. ಅವಳು ನೇರಳೆ ಬಣ್ಣದ ಬಟ್ಟೆಗಳನ್ನ ಮಾರ್ತಿದ್ದ ಥುವತೈರದ+ ಒಬ್ಬ ದೇವಭಕ್ತ ಸ್ತ್ರೀ ಆಗಿದ್ದಳು. ಪೌಲ ಹೇಳ್ತಿದ್ದ ವಿಷ್ಯಗಳನ್ನ ಗಮನಕೊಟ್ಟು ಕೇಳಿಸ್ಕೊಂಡು ಒಪ್ಕೊಳ್ಳೋ ತರ ಯೆಹೋವ* ಅವಳ ಹೃದಯವನ್ನ ಪೂರ್ತಿ ತೆರೆದನು. 15 ಅವಳು ಮತ್ತು ಅವಳ ಮನೆಯವರು ದೀಕ್ಷಾಸ್ನಾನ ತಗೊಂಡ್ರು.+ ಆಮೇಲೆ ಅವಳು ನಮ್ಮ ಹತ್ರ ಬಂದು “ನನಗೆ ಯೆಹೋವನ* ಮೇಲೆ ನಂಬಿಕೆ ಇದೆ ಅಂತ ನಿಮಗೆ ಅನಿಸಿದ್ರೆ ದಯವಿಟ್ಟು ನನ್ನ ಮನೆಗೆ ಬಂದು ಉಳ್ಕೊಳ್ಳಿ” ಅಂತ ಬೇಡ್ಕೊಂಡಳು. ನಾವು ಅವಳ ಮನೆಗೆ ಹೋಗೋ ತನಕ ಅವಳು ಬಿಡಲೇ ಇಲ್ಲ.
16 ಒಂದಿನ ನಾವು ಪ್ರಾರ್ಥನಾ ಸ್ಥಳಕ್ಕೆ ಹೋಗ್ತಿದ್ದಾಗ, ಕೆಟ್ಟ ದೇವದೂತ ಹಿಡಿದಿದ್ದ ಒಬ್ಬ ಸೇವಕಿ ನಮ್ಮ ಮುಂದೆ ಬಂದಳು. ಅವಳು ಭವಿಷ್ಯ ಹೇಳ್ತಾ+ ಇದ್ದಳು. ಅವಳಿಂದ ಅವಳ ಯಜಮಾನರಿಗೆ ತುಂಬ ಲಾಭ ಸಿಗ್ತಾ ಇತ್ತು. 17 ಆ ಹುಡುಗಿ ಪೌಲನ ಮತ್ತು ನಮ್ಮ ಹಿಂದೆ ಬರ್ತಾ “ಇವರು ಸರ್ವೋನ್ನತ ದೇವ್ರ ಸೇವಕ್ರು.+ ರಕ್ಷಣೆ ಸಿಗಬೇಕಂದ್ರೆ ಏನು ಮಾಡಬೇಕು ಅಂತ ಇವರು ನಿಮಗೆ ಹೇಳ್ತಾರೆ” ಅಂತ ಜೋರಾಗಿ ಹೇಳ್ತಾ ಇದ್ದಳು. 18 ತುಂಬ ದಿನ ಅವಳು ಹೀಗೇ ಮಾಡ್ತಾ ಇದ್ದಳು. ಕೊನೆಗೆ ಒಂದಿನ ಪೌಲನಿಗೆ ಅದನ್ನ ಕೇಳಿಕೇಳಿ ಸುಸ್ತಾಯ್ತು. ಆಗ ಅವನು ಅವಳ ಕಡೆ ತಿರುಗಿ ಆ ಕೆಟ್ಟ ದೇವದೂತನಿಗೆ “ಯೇಸು ಕ್ರಿಸ್ತನ ಹೆಸ್ರಲ್ಲಿ ನಾನು ನಿನಗೆ ಹೇಳ್ತೀನಿ, ಅವಳನ್ನ ಬಿಟ್ಟು ಹೊರಗೆ ಬಾ” ಅಂದ. ತಕ್ಷಣ ಆ ಕೆಟ್ಟ ದೇವದೂತ ಹೊರಗೆ ಬಂದ.+
19 ಇದ್ರಿಂದ ಅವಳ ಯಜಮಾನರಿಗೆ ಬರ್ತಿದ್ದ ಹಣ ನಿಂತುಹೋಯ್ತು.+ ಆಗ ಅವರು ಪೌಲ ಮತ್ತು ಸೀಲನನ್ನ ಹಿಡಿದು ಸಂತೆಯಲ್ಲಿ ಎಳ್ಕೊಂಡು ಹೋಗಿ ನಾಯಕರ ಮುಂದೆ ನಿಲ್ಲಿಸಿದ್ರು.+ 20 ಅವರು ಆ ಇಬ್ಬರನ್ನ ಪಟ್ಟಣದ ನ್ಯಾಯಾಧೀಶರ ಹತ್ರ ಕರ್ಕೊಂಡು ಹೋಗಿ ಹೀಗೆ ಹೇಳಿದ್ರು “ಇವರು ಯೆಹೂದ್ಯರು. ನಮ್ಮ ಪಟ್ಟಣದಲ್ಲಿ ತುಂಬ ಗಲಿಬಿಲಿ ಹುಟ್ಟಿಸ್ತಾ ಇದ್ದಾರೆ.+ 21 ರೋಮಿನ ಜನ್ರಾದ ನಮಗೆ ಪಾಲಿಸೋಕಾಗದ ತಪ್ಪುತಪ್ಪು ಆಚಾರ-ವಿಚಾರಗಳನ್ನ ಇವರು ಕಲಿಸ್ತಾ ಇದ್ದಾರೆ” ಅಂದ್ರು. 22 ಆಗ ಜನ್ರೆಲ್ಲ ಸೇರಿ ಪೌಲ ಮತ್ತು ಸೀಲನಿಗೆ ಬಯ್ತಾ ಇದ್ರು. ಅವ್ರ ಬಟ್ಟೆ ಹರಿದು ಅವ್ರಿಗೆ ಕೋಲಿಂದ ಹೊಡಿಯೋಕೆ ನ್ಯಾಯಾಧೀಶರು ಅಪ್ಪಣೆಕೊಟ್ರು.+ 23 ಅವರು ಪೌಲ ಮತ್ತು ಸೀಲನಿಗೆ ತುಂಬ ಹೊಡೆದು ಜೈಲಿಗೆ ಹಾಕಿದ್ರು. ಅವ್ರನ್ನ ಭದ್ರವಾಗಿ ಕಾಯೋಕೆ ಜೈಲಿನ ಅಧಿಕಾರಿಗೆ ಆಜ್ಞೆ ಕೊಟ್ರು.+ 24 ಹಾಗಾಗಿ ಅವನು ಅವ್ರನ್ನ ಜೈಲಲ್ಲೇ ಒಳಗಡೆ ಇದ್ದ ಕೋಣೆಯಲ್ಲಿಟ್ಟು ಅವ್ರ ಕಾಲಿಗೆ ಬೇಡಿ* ಹಾಕಿಸಿದ.
25 ಆದ್ರೆ ಸುಮಾರು ಮಧ್ಯರಾತ್ರಿ ಸಮಯದಲ್ಲಿ ಪೌಲ ಮತ್ತು ಸೀಲ ಪ್ರಾರ್ಥನೆ ಮಾಡ್ತಾ ಗೀತೆ ಹಾಡ್ತಾ ದೇವ್ರ ಗುಣಗಾನ ಮಾಡ್ತಾ ಇದ್ರು.+ ಇದನ್ನ ಬೇರೆ ಕೈದಿಗಳು ಕೇಳಿಸ್ಕೊಳ್ತಾ ಇದ್ರು. 26 ಆಗ ಇದ್ದಕ್ಕಿದ್ದ ಹಾಗೆ ದೊಡ್ಡ ಭೂಕಂಪ ಆಯ್ತು. ಜೈಲಿನ ಅಡಿಪಾಯ ನಡುಗಿತು. ತಕ್ಷಣ ಜೈಲಿನ ಎಲ್ಲ ಬಾಗಿಲು ತೆರೆದವು. ಎಲ್ರ ಬೇಡಿಗಳು ಕಳಚಿ ಬಿದ್ದವು.+ 27 ಜೈಲಿನ ಅಧಿಕಾರಿ ನಿದ್ದೆಯಿಂದ ಎದ್ದಾಗ ಜೈಲಿನ ಬಾಗಿಲು ತೆರೆದಿರೋದನ್ನ ನೋಡಿದ. ಕೈದಿಗಳೆಲ್ಲ ಓಡಿಹೋಗಿದ್ದಾರೆ ಅಂತ ನೆನಸಿ ತನ್ನ ಕತ್ತಿ ತೆಗೆದು ಆತ್ಮಹತ್ಯೆ ಮಾಡ್ಕೊಳ್ಳೋಕೆ ಮುಂದಾದ.+ 28 ಆದ್ರೆ ಪೌಲ ಜೋರಾಗಿ ಅವನಿಗೆ “ಹಾಗೆ ಮಾಡಬೇಡ. ನಾವೆಲ್ಲ ಇಲ್ಲೇ ಇದ್ದೀವಿ” ಅಂದ. 29 ಆಗ ಆ ಅಧಿಕಾರಿ ತನ್ನ ಸೇವಕನಿಗೆ ದೀಪ ತರೋಕೆ ಹೇಳಿ ಪೌಲ ಮತ್ತು ಸೀಲ ಇದ್ದ ಕೋಣೆಗೆ ಓಡಿಹೋದ. ಅವ್ರ ಮುಂದೆ ನಡುಗ್ತಾ ಮಂಡಿಯೂರಿ ಬಿದ್ದ. 30 ಆಮೇಲೆ ಅವ್ರನ್ನ ಹೊರಗೆ ಕರ್ಕೊಂಡು ಬಂದು “ನನಗೆ ರಕ್ಷಣೆ ಸಿಗಬೇಕಂದ್ರೆ ನಾನೇನು ಮಾಡ್ಬೇಕು?” ಅಂತ ಕೇಳಿದ. 31 ಅದಕ್ಕೆ ಅವರು “ಯೇಸು ಪ್ರಭು ಮೇಲೆ ನಂಬಿಕೆ ಇಡು. ಆಗ ನಿನಗೂ ನಿನ್ನ ಕುಟುಂಬಕ್ಕೂ ರಕ್ಷಣೆ ಸಿಗುತ್ತೆ” ಅಂದ್ರು.+ 32 ಆಮೇಲೆ ಅವನಿಗೆ, ಅವನ ಕುಟುಂಬಕ್ಕೆ ಯೆಹೋವನ* ಸಂದೇಶವನ್ನ ಹೇಳಿದ್ರು. 33 ಆ ಅಧಿಕಾರಿ ರಾತ್ರಿನೇ ಅವ್ರನ್ನ ಕರ್ಕೊಂಡು ಹೋಗಿ ಅವ್ರ ಗಾಯಗಳಿಗೆ ಔಷಧಿ ಹಚ್ಚಿದ. ಆಮೇಲೆ ತಡಮಾಡದೆ ಅವನು, ಅವನ ಕುಟುಂಬದವ್ರೆಲ್ಲ ದೀಕ್ಷಾಸ್ನಾನ ತಗೊಂಡ್ರು.+ 34 ಆಮೇಲೆ ಅವನು ಪೌಲ ಮತ್ತು ಸೀಲನನ್ನ ತನ್ನ ಮನೆಗೆ ಕರ್ಕೊಂಡು ಹೋಗಿ ಊಟಕ್ಕೆ ಏರ್ಪಾಡು ಮಾಡಿದ. ದೇವ್ರ ಮೇಲೆ ನಂಬಿಕೆ ಇಟ್ಟಿದ್ರಿಂದ ಆ ಅಧಿಕಾರಿಗೆ, ಅವನ ಕುಟುಂಬದವ್ರಿಗೆಲ್ಲ ತುಂಬ ಖುಷಿ ಆಯ್ತು.
35 ಬೆಳಗಾದಾಗ ಪಟ್ಟಣದ ನ್ಯಾಯಾಧೀಶರು ಕಾವಲುಗಾರರ ಮೂಲಕ “ಅವ್ರನ್ನ ಬಿಟ್ಟುಬಿಡಿ” ಅಂತ ಹೇಳಿಕಳಿಸಿದ್ರು. 36 ಜೈಲಿನ ಅಧಿಕಾರಿ ಅದನ್ನ ಪೌಲನಿಗೆ ಹೇಳ್ತಾ “ನಿಮ್ಮಿಬ್ಬರನ್ನ ಬಿಟ್ಟುಬಿಡಬೇಕು ಅಂತ ಪಟ್ಟಣದ ನ್ಯಾಯಾಧೀಶರು ಹೇಳಿಕಳಿಸಿದ್ದಾರೆ. ಹೊರಗೆ ಬನ್ನಿ. ನೀವೀಗ ಎಲ್ಲಿ ಬೇಕಾದ್ರೂ ಹೋಗಬಹುದು” ಅಂದ. 37 ಆದ್ರೆ ಅದಕ್ಕೆ ಪೌಲ “ನಾವು ರೋಮಿನ ಪ್ರಜೆಗಳು.+ ಅವರು ನಮ್ಮನ್ನ ವಿಚಾರಣೆ ಮಾಡದೆ ಎಲ್ರ ಮುಂದೆ ಹೊಡೆದು ಜೈಲಿಗೆ ಹಾಕಿದ್ರು. ಈಗ ಯಾರಿಗೂ ಗೊತ್ತಾಗದ ಹಾಗೆ ನಮ್ಮನ್ನ ಕಳಿಸಿಬಿಡಬೇಕಂತ ಇದ್ದಾರಾ? ಅದಾಗಲ್ಲ! ಅವ್ರೇ ಬಂದು ನಮ್ಮನ್ನ ಹೊರಗೆ ಕರ್ಕೊಂಡು ಹೋಗಬೇಕು” ಅಂದ. 38 ಕಾವಲುಗಾರರು ಇದನ್ನ ಪಟ್ಟಣದ ನ್ಯಾಯಾಧೀಶರಿಗೆ ಹೇಳಿದ್ರು. ಪೌಲ ಮತ್ತು ಸೀಲ ರೋಮಿನ ಪ್ರಜೆಗಳು ಅಂತ ಕೇಳಿ ಅವ್ರಿಗೆ ಭಯ ಶುರುವಾಯ್ತು.+ 39 ಹಾಗಾಗಿ ಅವರು ಬಂದು ಕ್ಷಮೆ ಕೇಳಿದ್ರು. ಆಮೇಲೆ ಅವ್ರನ್ನ ಹೊರಗಡೆ ಕರ್ಕೊಂಡು ಬಂದು ಪಟ್ಟಣವನ್ನ ಬಿಟ್ಟುಹೋಗಬೇಕು ಅಂತ ಬೇಡ್ಕೊಂಡ್ರು. 40 ಪೌಲ ಮತ್ತು ಸೀಲ ಜೈಲಿಂದ ಹೊರಗೆ ಬಂದು ಲುದ್ಯಳ ಮನೆಗೆ ಹೋದ್ರು. ಅಲ್ಲಿದ್ದ ಸಹೋದರರನ್ನ ನೋಡಿದಾಗ ಅವ್ರನ್ನ ಪ್ರೋತ್ಸಾಹಿಸಿ+ ಅಲ್ಲಿಂದ ಹೋದ್ರು.