ಕೊರಿಂಥದವರಿಗೆ ಬರೆದ ಮೊದಲನೇ ಪತ್ರ
3 ಸಹೋದರರೇ, ಪವಿತ್ರಶಕ್ತಿಯ ಮಾರ್ಗದರ್ಶನದ ಪ್ರಕಾರ ನಡಿಯುವವ್ರ+ ಜೊತೆ ಮಾತಾಡೋ ತರ ನಾನು ನಿಮ್ಮ ಜೊತೆ ಮಾತಾಡೋಕೆ ಆಗ್ಲಿಲ್ಲ. ಲೋಕದ ಯೋಚ್ನೆ ಇರುವವ್ರ ಜೊತೆ, ಕ್ರಿಸ್ತನ ವಿಷ್ಯದಲ್ಲಿ ಕೂಸುಗಳಾಗಿ ಇರುವವ್ರ+ ಜೊತೆ ಮಾತಾಡೋ ತರ ಮಾತಾಡಿದ್ದೀನಿ. 2 ನಿಮಗೆ ನಾನು ಹಾಲು ಕುಡಿಸಿದೆ, ಗಟ್ಟಿಯಾದ ಆಹಾರ ತಿನ್ನಿಸಲಿಲ್ಲ. ಯಾಕಂದ್ರೆ ಅದನ್ನ ಜೀರ್ಣ ಮಾಡ್ಕೊಳ್ಳೋ ಶಕ್ತಿ ನಿಮಗಿರಲಿಲ್ಲ, ನಿಜ ಹೇಳಬೇಕಂದ್ರೆ ಈಗ್ಲೂ ಇಲ್ಲ.+ 3 ನೀವು ಈಗ್ಲೂ ಲೋಕದವ್ರ ತರಾನೇ ಯೋಚ್ನೆ ಮಾಡ್ತೀರ.+ ನಿಮ್ಮಲ್ಲಿ ಹೊಟ್ಟೆಕಿಚ್ಚು, ಜಗಳ ಇದೆ ಅಂದ್ಮೇಲೆ ನೀವು ಲೋಕದವ್ರ ತರ ಯೋಚ್ನೆ ಮಾಡ್ತಿದ್ದೀರ,+ ಅವ್ರ ಹಾಗೆ ನಡ್ಕೊತಿದ್ದೀರ ಅಂತ ತಾನೇ? 4 ಒಬ್ಬ, “ನಾನು ಪೌಲನ ಶಿಷ್ಯ,” ಇನ್ನೊಬ್ಬ “ನಾನು ಅಪೊಲ್ಲೋಸನ+ ಶಿಷ್ಯ” ಅಂತ ಹೇಳ್ತಿದ್ದಾನಲ್ವಾ. ಅಂದ್ಮೇಲೆ ನೀವು ಲೋಕದವ್ರ ತರ ನಡ್ಕೊಳ್ತಿದ್ದೀರ ಅಂತರ್ಥ ಅಲ್ವಾ?
5 ಅಪೊಲ್ಲೋಸ ಯಾರು? ಪೌಲ ಯಾರು? ನಾವೂ ಸೇವಕರು,+ ಒಡೆಯ ಕೊಟ್ಟ ಕೆಲಸವನ್ನ ಮಾಡುವವರು. ನೀವು ಕ್ರೈಸ್ತರಾಗೋಕೆ ನಾವು ಸಹಾಯ ಮಾಡಿದ್ದೀವಷ್ಟೆ. 6 ನಾನು ಬೀಜ ಬಿತ್ತಿದೆ,+ ಅಪೊಲ್ಲೋಸ ನೀರು ಹಾಕಿದ,+ ಆದ್ರೆ ಅದನ್ನ ಬೆಳೆಸ್ತಾ ಬಂದಿದ್ದು ದೇವರು. 7 ಹಾಗಾಗಿ ಹೊಗಳ ಬೇಕಾಗಿರೋದು ಬಿತ್ತುವವನನ್ನ ಅಲ್ಲ, ನೀರು ಹಾಕಿದವನನ್ನೂ ಅಲ್ಲ, ಬೆಳೆಸೋ ದೇವರನ್ನೇ.+ 8 ಬಿತ್ತುವವನೂ ನೀರು ಹಾಕಿದವನೂ ಒಂದಾಗಿ* ಕೆಲಸ ಮಾಡ್ತಾರೆ. ಆದ್ರೆ ಪ್ರತಿಯೊಬ್ಬನಿಗೂ ಅವನು ಪಟ್ಟ ಶ್ರಮಕ್ಕೆ ತಕ್ಕ ಹಾಗೆ ಪ್ರತಿಫಲ ಸಿಗುತ್ತೆ.+ 9 ಯಾಕಂದ್ರೆ ನಾವು ದೇವರ ಜೊತೆ ಕೆಲಸ ಮಾಡುವವರು. ನೀವು ಕೃಷಿ ಮಾಡ್ತಿರೋ ದೇವರ ಹೊಲ, ದೇವರ ಕಟ್ಟಡ ಆಗಿದ್ದೀರ.+
10 ದೇವರು ನನಗೆ ಅಪಾರ ಕೃಪೆ ತೋರಿಸಿದ್ರಿಂದ ಕುಶಲ ನಿರ್ಮಾಣಿಕನ* ತರ ನಾನು ಅಡಿಪಾಯ ಹಾಕ್ದೆ.+ ಇನ್ನೊಬ್ಬ ಅದ್ರ ಮೇಲೆ ಕಟ್ತಾ ಇದ್ದಾನೆ. ಆದ್ರೆ ಅಡಿಪಾಯದ ಮೇಲೆ ತಾನು ಹೇಗೆ ಕಟ್ತಾ ಇದ್ದೀನಿ ಅಂತ ಪ್ರತಿಯೊಬ್ಬನು ಗಮನಿಸ್ತಾ ಇರಲಿ. 11 ಯಾಕಂದ್ರೆ ಈಗಾಗ್ಲೇ ಹಾಕಿರೋ ಅಡಿಪಾಯ ಯೇಸು ಕ್ರಿಸ್ತನಾಗಿದ್ದಾನೆ.+ ಆ ಅಡಿಪಾಯವನ್ನ ಬಿಟ್ಟು ಬೇರೆ ಯಾವ ಅಡಿಪಾಯನೂ ಯಾರೂ ಹಾಕೋಕೆ ಆಗಲ್ಲ. 12 ಯಾರಾದ್ರೂ ಆ ಅಡಿಪಾಯದ ಮೇಲೆ ಚಿನ್ನ, ಬೆಳ್ಳಿ, ಅಮೂಲ್ಯ ರತ್ನಗಳು, ಮರ ಅಥವಾ ಒಣಗಿರೋ ಹುಲ್ಲಿಂದ ಕಟ್ಟಡ ಕಟ್ಟಬಹುದು. 13 ಪ್ರತಿಯೊಬ್ಬನು ಹೇಗೆ ಕೆಲಸ ಮಾಡಿದ್ದಾನೆ ಅಂತ ಅದನ್ನ ಬೆಂಕಿಯಿಂದ ಪರೀಕ್ಷಿಸೋ ದಿನ ಗೊತ್ತಾಗುತ್ತೆ.+ ಪ್ರತಿಯೊಬ್ಬನ ಕೆಲಸ ಯಾವ ತರ ಇದೆ ಅಂತ ಬೆಂಕಿ ತೋರಿಸ್ಕೊಡುತ್ತೆ. 14 ಆ ಅಡಿಪಾಯದ ಮೇಲೆ ಕಟ್ಟಿರೋದು ಬೆಂಕಿಯಿಂದ ಸುಟ್ಟು ಹೋಗದೆ ಇದ್ರೆ ಅದನ್ನ ಕಟ್ಟಿದವನಿಗೆ ಪ್ರತಿಫಲ ಸಿಗುತ್ತೆ. 15 ಒಂದುವೇಳೆ ಸುಟ್ಟುಹೋದ್ರೆ ಅವನಿಗೆ ನಷ್ಟ ಆಗುತ್ತೆ. ಆದ್ರೆ ಅವನು ತನ್ನ ಜೀವ ಉಳಿಸ್ಕೊಳ್ತಾನೆ. ಆದ್ರೂ ಅವನು ಬೆಂಕಿಯಿಂದ ತಪ್ಪಿಸ್ಕೊಂಡವನ ತರ ಇರ್ತಾನೆ.
16 ನೀವು ದೇವರ ಆಲಯ ಆಗಿದ್ದೀರ,+ ದೇವರ ಪವಿತ್ರಶಕ್ತಿ ನಿಮ್ಮಲ್ಲಿದೆ+ ಅಂತ ನಿಮಗೆ ಗೊತ್ತಿಲ್ವಾ? 17 ಯಾವನಾದ್ರೂ ದೇವರ ಆಲಯ ನಾಶಮಾಡಿದ್ರೆ ದೇವರು ಅವನನ್ನ ನಾಶ ಮಾಡ್ತಾನೆ. ಯಾಕಂದ್ರೆ ದೇವರ ಆಲಯ ಪವಿತ್ರವಾಗಿದೆ. ಆ ಆಲಯ ನೀವೇ.+
18 ನಿಮಗೆ ನೀವೇ ಮೋಸ ಮಾಡ್ಕೊಬೇಡಿ. ಈ ಲೋಕದಲ್ಲಿ* ‘ನಾನೇ ವಿವೇಕಿ’ ಅಂತ ಅಂದ್ಕೊಂಡವನು ಮೂರ್ಖ ಆಗಬೇಕು. ಮೂರ್ಖನಾದ್ರೆ ಅವನು ದೇವರ ದೃಷ್ಟಿಯಲ್ಲಿ ವಿವೇಕಿ ಆಗ್ತಾನೆ. 19 ಯಾಕಂದ್ರೆ ಈ ಲೋಕದ ವಿವೇಕ ದೇವರ ದೃಷ್ಟಿಯಲ್ಲಿ ಹುಚ್ಚುತನ. “ವಿವೇಕಿಗಳು ಅವ್ರ ಕುತಂತ್ರಗಳಲ್ಲೇ ಸಿಕ್ಕಿಬೀಳೋ ಹಾಗೆ ದೇವರು ಮಾಡ್ತಾನೆ”+ ಅಂತ ಬರೆದಿದೆ. 20 ಅಷ್ಟೇ ಅಲ್ಲ “ವಿವೇಕಿಗಳ ಆಲೋಚನೆಗಳು ವ್ಯರ್ಥ ಅಂತ ಯೆಹೋವನಿಗೆ* ಗೊತ್ತು”+ ಅಂತಾನೂ ಬರೆದಿದೆ. 21 ಹಾಗಾಗಿ ಮನುಷ್ಯರು ಮಾಡೋ ವಿಷ್ಯಗಳ ಬಗ್ಗೆ ಹೆಮ್ಮೆಪಡಬೇಡಿ. ಯಾಕಂದ್ರೆ ಎಲ್ಲ ನಿಮಗೆ ಸೇರಿದ್ದು. 22 ಪೌಲ, ಅಪೊಲ್ಲೋಸ, ಕೇಫ,*+ ಈ ಲೋಕ, ಜೀವ, ಮರಣ, ಈಗಿನ ವಿಷ್ಯಗಳು, ಮುಂದೆ ಬರೋ ವಿಷ್ಯಗಳು ಎಲ್ಲ ನಿಮಗೆ ಸೇರಿದ್ದು. 23 ನೀವು ಕ್ರಿಸ್ತನಿಗೆ ಸೇರಿದವರು,+ ಕ್ರಿಸ್ತ ದೇವರಿಗೆ ಸೇರಿದವನು.