ಅಪೊಸ್ತಲರ ಕಾರ್ಯ
14 ಪೌಲ ಮತ್ತು ಬಾರ್ನಬ ಇಕೋನ್ಯದಲ್ಲಿ ಯೆಹೂದ್ಯರ ಸಭಾಮಂದಿರಕ್ಕೆ ಹೋದ್ರು. ಅವರು ಎಷ್ಟು ಚೆನ್ನಾಗಿ ಮಾತಾಡಿದರಂದ್ರೆ ಯೆಹೂದ್ಯರಲ್ಲಿ ಮತ್ತು ಗ್ರೀಕರಲ್ಲಿ ತುಂಬ ಜನ ಶಿಷ್ಯರಾದ್ರು. 2 ಆದ್ರೆ ಶಿಷ್ಯರಾಗದ ಯೆಹೂದ್ಯರು ಸಹೋದರರ ಬಗ್ಗೆ ಬೇರೆ ಜನ್ರ ಮನಸ್ಸಲ್ಲಿ ವಿಷಬೀಜ ಬಿತ್ತಿದ್ರು.+ 3 ಹಾಗಾಗಿ ಪೌಲ ಮತ್ತು ಬಾರ್ನಬ ತುಂಬ ಸಮಯ ಅಲ್ಲಿದ್ರು. ಯೆಹೋವ* ಅವ್ರಿಗೆ ಶಕ್ತಿ ಕೊಟ್ಟಿದ್ರಿಂದ ಅದ್ಭುತಗಳನ್ನ ಮಾಡಿದ್ರು. ಧೈರ್ಯದಿಂದ ದೇವ್ರ ಅಪಾರ ಕೃಪೆಯ ಸಂದೇಶವನ್ನ ಸಾರಿದ್ರು.+ 4 ಆದ್ರೆ ಆ ಊರಿನ ಜನ್ರಲ್ಲಿ ಎರಡು ಪಕ್ಷ ಆಯ್ತು. ಕೆಲವರು ಯೆಹೂದ್ಯರ ಪಕ್ಷದಲ್ಲಿದ್ರೆ ಇನ್ನು ಕೆಲವರು ಅಪೊಸ್ತಲರ ಪಕ್ಷದಲ್ಲಿದ್ರು. 5 ಯೆಹೂದ್ಯರು, ಬೇರೆ ಜನ್ರು ಮತ್ತು ಯೆಹೂದ್ಯರ ನಾಯಕರು ಅಪೊಸ್ತಲರಿಗೆ ಅವಮಾನ ಮಾಡಿ ಕಲ್ಲು ಹೊಡೆದು ಸಾಯಿಸಬೇಕಂತ ಇದ್ರು.+ 6 ಈ ವಿಷ್ಯ ಪೌಲ ಮತ್ತು ಬಾರ್ನಬನಿಗೆ ಗೊತ್ತಾದಾಗ ಅವರು ಓಡಿಹೋದ್ರು. ಅವರು ಲುಕವೋನ್ಯ, ಲುಸ್ತ್ರ, ದೆರ್ಬೆ ಪಟ್ಟಣಗಳಿಗೆ ಮತ್ತು ಅಕ್ಕಪಕ್ಕ ಇದ್ದ ಊರುಗಳಿಗೆ ಹೋದ್ರು.+ 7 ಅಲ್ಲಿ ಸಹ ಅವರು ಸಿಹಿಸುದ್ದಿ ಸಾರ್ತಾ ಹೋದ್ರು.
8 ಲುಸ್ತ್ರದಲ್ಲಿ ಕಾಲು ಬಿದ್ದುಹೋಗಿದ್ದ ಒಬ್ಬ ವ್ಯಕ್ತಿ ಕೂತಿದ್ದ. ಅವನು ಹುಟ್ಟಿದಾಗಲೇ ಕುಂಟ. ಯಾವತ್ತೂ ನಡೆದೇ ಇರ್ಲಿಲ್ಲ.9 ಪೌಲ ಮಾತಾಡ್ತಾ ಇದ್ದಾಗ ಅವನು ಕೇಳಿಸ್ಕೊಳ್ತಾ ಇದ್ದ. ಪೌಲ ಅವನ ಕಡೆ ನೋಡಿದ. ದೇವ್ರ ಸಂದೇಶದ ಮೇಲೆ ಆ ವ್ಯಕ್ತಿಗೆ ನಂಬಿಕೆ ಇದೆ ಅಂತ ಅವನಿಗೆ ಗೊತ್ತಾಯ್ತು. ವಾಸಿಯಾಗ್ತೀನಿ ಅನ್ನೋ ಭರವಸೆನೂ ಅವನಿಗಿತ್ತು.+ ಹಾಗಾಗಿ ಪೌಲ ಅವನಿಗೆ 10 “ಎದ್ದು ನಿನ್ನ ಕಾಲ ಮೇಲೆ ನಿಂತ್ಕೊ” ಅಂತ ಜೋರಾಗಿ ಹೇಳಿದ. ಆಗ ಅವನು ಪಟ್ಟಂತ ಜಿಗಿದು ಎದ್ದು ನಿಂತು ನಡೆಯೋಕೆ ಶುರುಮಾಡಿದ.+ 11 ಪೌಲ ಮಾಡಿದ ಈ ಅದ್ಭುತ ನೋಡಿ ಜನ “ದೇವರು ಈ ಮನುಷ್ಯರ ರೂಪದಲ್ಲಿ ನಮ್ಮ ಹತ್ರ ಇಳಿದು ಬಂದಿದ್ದಾರೆ!”+ ಅಂತ ಲುಕವೋನ್ಯ ಭಾಷೆಯಲ್ಲಿ ಜೋರಾಗಿ ಕೂಗಿದ್ರು. 12 ಹಾಗಾಗಿ ಅವರು ಬಾರ್ನಬನಿಗೆ ಸ್ಯೂಸ್ ದೇವ ಅಂತ, ಪೌಲನಿಗೆ ಹರ್ಮೀಸ್ ದೇವ ಅಂತ ಕರೆಯೋಕೆ ಶುರುಮಾಡಿದ್ರು. ಅವರಿಬ್ರಲ್ಲಿ ಪೌಲ ಜಾಸ್ತಿ ಮಾತಾಡಿದ್ರಿಂದ ಅವನನ್ನ ಹರ್ಮೀಸ್ ಅಂತ ಕರೆದ್ರು. 13 ಆ ಊರಿನ ಮುಖ್ಯ ಬಾಗಿಲ ಹತ್ರ ಸ್ಯೂಸ್ ದೇವಸ್ಥಾನ ಇತ್ತು. ಅದ್ರ ಪೂಜಾರಿ ಎತ್ತುಗಳನ್ನ, ಹೂವಿನ ಹಾರಗಳನ್ನ ತಂದ. ಅವನು ಜನ್ರ ಜೊತೆ ಸೇರಿ ಪೌಲ ಮತ್ತು ಬಾರ್ನಬನಿಗೆ ಆ ಎತ್ತುಗಳನ್ನ ಬಲಿ ಅರ್ಪಿಸಬೇಕು ಅಂತ ಅಂದ್ಕೊಂಡ.
14 ಆದ್ರೆ ಅಪೊಸ್ತಲರಾದ ಬಾರ್ನಬ ಮತ್ತು ಪೌಲನಿಗೆ ಈ ವಿಷ್ಯ ಗೊತ್ತಾದಾಗ ಅವರು ತಮ್ಮ ಬಟ್ಟೆ ಹರ್ಕೊಂಡು ಜನ್ರ ಗುಂಪಲ್ಲಿ ನುಗ್ಗಿ ಜೋರಾಗಿ ಹೀಗೆ ಹೇಳಿದ್ರು 15 “ನೀವೆಲ್ಲ ಯಾಕೆ ಹೀಗೆ ಮಾಡ್ತಾ ಇದ್ದೀರಾ? ನಾವೂ ನಿಮ್ಮ ತರಾನೇ ಮನುಷ್ಯರು.+ ನಿಮ್ಮ ತರಾನೇ ನಾವೂ ತಪ್ಪು ಮಾಡ್ತೀವಿ. ನಾವು ನಿಮಗೆ ಸಿಹಿಸುದ್ದಿ ಹೇಳೋಕೆ ಬಂದ್ವಿ. ಯಾಕಂದ್ರೆ ಕೆಲಸಕ್ಕೆ ಬಾರದ ಇವುಗಳನ್ನ ಆರಾಧಿಸೋದನ್ನ ಬಿಟ್ಟು ಜೀವ ಇರೋ ದೇವರನ್ನ ಆರಾಧಿಸಿ. ಆತನೇ ಆಕಾಶ, ಭೂಮಿ, ಸಮುದ್ರ ಮತ್ತು ಎಲ್ಲಾ ಸೃಷ್ಟಿ ಮಾಡಿದ್ದಾನೆ.+ 16 ಈ ಮುಂಚೆ ಆತನು ಎಲ್ಲಾ ಜನ್ರಿಗೆ ತಮಗಿಷ್ಟ ಬಂದ ಹಾಗೆ ನಡ್ಕೊಳೋಕೆ ಬಿಟ್ಟುಬಿಟ್ಟನು.+ 17 ಆದ್ರೆ ಒಳ್ಳೇದನ್ನ ಮಾಡ್ತಾ ತಾನು ಎಂಥವನು ಅಂತ ತೋರಿಸ್ತಾ ಬಂದನು.+ ಹೇಗಂದ್ರೆ, ಆತನು ನಿಮಗೆ ಆಕಾಶದಿಂದ ಮಳೆ ಸುರಿಸಿದನು. ಚೆನ್ನಾಗಿ ಬೆಳೆ ಬರೋ ತರ ಬೇರೆಬೇರೆ ಕಾಲಗಳನ್ನ ಕೊಟ್ಟನು.+ ತೃಪ್ತಿಯಾಗುವಷ್ಟು ಆಹಾರ ಕೊಡ್ತಾ ನಿಮ್ಮ ಮನಸ್ಸನ್ನ ಖುಷಿಪಡಿಸಿದನು.”+ 18 ಇಷ್ಟೆಲ್ಲಾ ಹೇಳಿದ ಮೇಲೂ ಆ ಜನ್ರು ಬಲಿ ಅರ್ಪಿಸೋದನ್ನ ನಿಲ್ಲಿಸೋಕೆ ಅವರು ತುಂಬ ಕಷ್ಟಪಟ್ರು.
19 ಆದ್ರೆ ಅಂತಿಯೋಕ್ಯ ಮತ್ತು ಇಕೋನ್ಯದಿಂದ ಯೆಹೂದ್ಯರು ಬಂದು ಜನ್ರನ್ನ ತಮ್ಮ ಪಕ್ಷಕ್ಕೆ ಸೇರಿಸ್ಕೊಂಡ್ರು.+ ಹಾಗಾಗಿ ಅವರು ಪೌಲನಿಗೆ ಕಲ್ಲುಗಳಿಂದ ಹೊಡೆದ್ರು. ಆಮೇಲೆ ಅವನು ಸತ್ತಿದ್ದಾನೆ ಅಂತ ನೆನಸಿ ಊರ ಹೊರಗೆ ಎಳ್ಕೊಂಡು ಹೋದ್ರು.+ 20 ಆದ್ರೆ ಶಿಷ್ಯರು ಅವನ ಸುತ್ತಲೂ ಬಂದು ನಿಂತಾಗ ಅವನು ಎದ್ದು ಊರೊಳಗೆ ಹೋದ. ಮಾರನೇ ದಿನ ಅವನು ಬಾರ್ನಬನ ಜೊತೆ ದೆರ್ಬೆಗೆ+ ಹೋದ. 21 ಅಲ್ಲಿ ಸಿಹಿಸುದ್ದಿ ಸಾರಿ ತುಂಬ ಜನ್ರನ್ನ ಶಿಷ್ಯರನ್ನಾಗಿ ಮಾಡಿದ ಮೇಲೆ ಅವರು ಲುಸ್ತ್ರಕ್ಕೆ ಹೋದ್ರು. ಅಲ್ಲಿಂದ ಇಕೋನ್ಯಕ್ಕೆ, ಇಕೋನ್ಯದಿಂದ ಅಂತಿಯೋಕ್ಯಕ್ಕೆ ಹೋದ್ರು. 22 ಅಲ್ಲಿ ಪೌಲ ಮತ್ತು ಬಾರ್ನಬ ಶಿಷ್ಯರಿಗೆ ನಂಬಿಕೆಯಲ್ಲಿ ಬಲವಾಗಿ ಇರೋಕೆ ಪ್ರೋತ್ಸಾಹಿಸಿದ್ರು.+ “ತುಂಬ ಕಷ್ಟಗಳನ್ನ ಎದುರಿಸಿ ನಾವು ದೇವ್ರ ಆಳ್ವಿಕೆಯಲ್ಲಿ ಸೇರಬೇಕು”+ ಅಂತ ಹೇಳಿ ಧೈರ್ಯ ತುಂಬಿದ್ರು. 23 ಅಷ್ಟೇ ಅಲ್ಲ ಅವರು ಒಂದೊಂದು ಸಭೆಯಲ್ಲೂ ಹಿರಿಯರನ್ನ ನೇಮಿಸಿದ್ರು.+ ಪ್ರಾರ್ಥನೆ, ಉಪವಾಸ ಮಾಡಿ+ ಅವರನ್ನ ಯೆಹೋವನ* ಕೈಗೆ ಒಪ್ಪಿಸಿದ್ರು. ಈ ಹಿರಿಯರಿಗೆ ದೇವ್ರ ಮೇಲೆ ತುಂಬ ನಂಬಿಕೆ ಇತ್ತು.
24 ಆಮೇಲೆ ಅವರು ಪಿಸಿದ್ಯ ದಾಟ್ಕೊಂಡು ಪಂಫುಲ್ಯಕ್ಕೆ+ ಬಂದ್ರು. 25 ಪೆರ್ಗದಲ್ಲಿ ದೇವ್ರ ಸಂದೇಶ ಹೇಳಿದ ಮೇಲೆ ಅತಾಲ್ಯಕ್ಕೆ ಹೋದ್ರು. 26 ಅಲ್ಲಿಂದ ಹಡಗು ಹತ್ತಿ ಅಂತಿಯೋಕ್ಯಕ್ಕೆ ಹೊರಟ್ರು. ಈ ಊರಲ್ಲೇ ಸಹೋದರರು ಅಪೊಸ್ತಲರ ಕೆಲಸದ ಮೇಲೆ ದೇವ್ರ ಅಪಾರ ಕೃಪೆಗಾಗಿ ಬೇಡ್ಕೊಂಡಿದ್ರು. ಆ ಕೆಲಸವನ್ನ ಅವರು ಈಗ ಮುಗಿಸಿದ್ರು.+
27 ಅವರು ಅಂತಿಯೋಕ್ಯಕ್ಕೆ ಬಂದಾಗ ಅಲ್ಲಿದ್ದ ಸಹೋದರರನ್ನ ಒಂದು ಕಡೆ ಸೇರಿಸಿದ್ರು. ದೇವರು ತಮ್ಮ ಮೂಲಕ ಮಾಡಿದ್ದನ್ನೆಲ್ಲ ಅವ್ರಿಗೆ ಹೇಳಿದ್ರು. ಅಷ್ಟೇ ಅಲ್ಲ ದೇವರು ಯೆಹೂದ್ಯರಲ್ಲದ ಜನ್ರಿಗೂ ಶಿಷ್ಯರಾಗೋ ಅವಕಾಶ ಹೇಗೆ ಕೊಟ್ಟನು ಅಂತ ವಿವರಿಸಿದ್ರು.+ 28 ಆಮೇಲೆ ಅವರು ಆ ಶಿಷ್ಯರ ಜೊತೆ ತುಂಬ ಸಮಯ ಇದ್ರು.