ಯೋಹಾನ ಬರೆದ ಮೊದಲನೇ ಪತ್ರ
4 ಪ್ರೀತಿಯ ಸಹೋದರ ಸಹೋದರಿಯರೇ, ಎಷ್ಟೋ ಸುಳ್ಳು ಪ್ರವಾದಿಗಳು ಲೋಕಕ್ಕೆ ಬಂದಿದ್ದಾರೆ.+ ಹಾಗಾಗಿ ಎಲ್ಲ ಸಂದೇಶಗಳನ್ನ ನಂಬಬೇಡಿ. ಕೆಲವು ಸಂದೇಶಗಳು ದೇವರಿಂದಾನೇ ಬಂದಿದೆ ಅನ್ನೋ ತರ ಕಾಣಿಸುತ್ತೆ.+ ಆದ್ರೆ ಅದು ನಿಜವಾಗ್ಲೂ ದೇವರಿಂದಾನೇ ಬಂದಿರೋ ಸಂದೇಶನಾ ಅಂತ ಪರೀಕ್ಷೆ ಮಾಡಿ ನೋಡಿ.+
2 ಒಂದು ಸಂದೇಶ ನಿಜವಾಗ್ಲೂ ದೇವರಿಂದ ಬಂದಿದ್ಯಾ ಇಲ್ವಾ ಅಂತ ತಿಳ್ಕೊಳ್ಳೋಕೆ ಆಗುತ್ತೆ. ಹೇಗಂದ್ರೆ ಯೇಸು ಕ್ರಿಸ್ತ ಮನುಷ್ಯನಾಗಿ ಬಂದಿದ್ದಾನೆ ಅಂತ ಒಪ್ಕೊಳ್ಳೋ ಸಂದೇಶಗಳೆಲ್ಲ ದೇವರಿಂದ ಬಂದಿರುತ್ತೆ.+ 3 ಆದ್ರೆ ಯೇಸುವನ್ನ ಒಪ್ಪದೆ ಇರೋ ಸಂದೇಶಗಳೆಲ್ಲ ದೇವರಿಂದ ಬಂದಿರಲ್ಲ.+ ಅದು ಕ್ರಿಸ್ತ ವಿರೋಧಿಯ ಸಂದೇಶ. ಅಂಥ ಸಂದೇಶಗಳು ಬರುತ್ತೆ ಅಂತ ನೀವು ಮೊದಲೇ ಕೇಳಿಸ್ಕೊಂಡಿದ್ರಿ.+ ಅದು ಈಗ ಲೋಕಕ್ಕೆ ಬಂದೇ ಬಿಟ್ಟಿದೆ.+
4 ಪ್ರೀತಿಯ ಮಕ್ಕಳೇ, ನೀವು ದೇವರಿಂದ ಬಂದವರು. ನೀವು ಸುಳ್ಳು ಪ್ರವಾದಿಗಳನ್ನ ಜಯಿಸಿದ್ದೀರ.+ ಯಾಕಂದ್ರೆ ದೇವರು ನಿಮಗೆ ಬೆಂಬಲ ಕೊಡ್ತಿದ್ದಾನೆ.+ ಲೋಕವನ್ನ ಬೆಂಬಲಿಸೋ ಸೈತಾನನಿಗಿಂತ ದೇವರಿಗೆ ತುಂಬ ಶಕ್ತಿ ಇದೆ.+ 5 ಈ ಸುಳ್ಳು ಪ್ರವಾದಿಗಳು ಲೋಕದಿಂದ ಬಂದವರು.+ ಹಾಗಾಗಿ ಅವರು ಈ ಲೋಕ ಹೇಳೋದನ್ನೇ ಹೇಳ್ತಾರೆ, ಲೋಕ ಅವರು ಹೇಳೋದನ್ನ ಕೇಳಿಸ್ಕೊಳ್ಳುತ್ತೆ.+ 6 ಆದ್ರೆ ನಾವು ದೇವರಿಂದ ಬಂದವರು. ದೇವರ ಬಗ್ಗೆ ಗೊತ್ತಿರುವವರು ಮಾತ್ರ ನಾವು ಹೇಳೋದನ್ನ ಕೇಳಿಸ್ಕೊಳ್ತಾರೆ.+ ದೇವರಿಂದ ಬರದೇ ಇರೋ ಜನ್ರು ನಾವು ಹೇಳೋದನ್ನ ಕಿವಿಗೆ ಹಾಕೊಳ್ಳಲ್ಲ.+ ಇದ್ರಿಂದಾನೇ ನಮಗೆ ಯಾವ ಸಂದೇಶ ಸತ್ಯ ಯಾವ ಸಂದೇಶ ಸುಳ್ಳು ಅಂತ ಗೊತ್ತಾಗುತ್ತೆ.+
7 ಪ್ರೀತಿಯ ಸಹೋದರ ಸಹೋದರಿಯರೇ, ನಾವು ಒಬ್ರನ್ನೊಬ್ರು ಪ್ರೀತಿಸ್ತಾ ಇರೋಣ.+ ಯಾಕಂದ್ರೆ ಪ್ರೀತಿ ದೇವರಿಂದ ಬಂದಿದೆ. ಬೇರೆಯವ್ರನ್ನ ಪ್ರೀತಿ ಮಾಡುವವರು ದೇವರಿಂದ ಹುಟ್ಟಿದವರು. ಅವ್ರಿಗೆ ದೇವರ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ.+ 8 ಬೇರೆಯವ್ರನ್ನ ಪ್ರೀತಿ ಮಾಡ್ದೇ ಇರುವವ್ರಿಗೆ ನಿಜವಾಗ್ಲೂ ದೇವರ ಬಗ್ಗೆ ಗೊತ್ತಿಲ್ಲ. ಯಾಕಂದ್ರೆ ದೇವರು ಪ್ರೀತಿಯಾಗಿದ್ದಾನೆ.+ 9 ನಾವು ಶಾಶ್ವತ ಜೀವ ಪಡೀಬೇಕಂತ ದೇವರು ತನ್ನ ಒಬ್ಬನೇ ಮಗನನ್ನ+ ಈ ಲೋಕಕ್ಕೆ ಕಳಿಸ್ಕೊಟ್ಟು ಆತನಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸಿದ್ದಾನೆ.+ 10 ನಮ್ಮ ಪಾಪವನ್ನ ತೆಗೆದು ಹಾಕೋಕೆ ದೇವರು ತನ್ನ ಮಗನ ಜೀವವನ್ನ ಬಲಿಯಾಗಿ ಕೊಡೋಕೆ ಲೋಕಕ್ಕೆ ಕಳಿಸ್ಕೊಟ್ಟನು. ಆ ಬಲಿಯಿಂದ*+ ನಾವು ಮತ್ತೆ ದೇವರ ಜೊತೆ ಶಾಂತಿ ಸಂಬಂಧಕ್ಕೆ ಬರೋಕೆ ಆಗುತ್ತೆ.+ ನಾವು ದೇವರನ್ನ ಪ್ರೀತಿಸ್ತೀವಿ ಅಂತ ದೇವರು ಇದನ್ನ ಮಾಡಿಲ್ಲ, ಬದಲಿಗೆ ದೇವರೇ ನಮ್ಮನ್ನ ಪ್ರೀತಿಸೋದ್ರಿಂದ ಹೀಗೆ ಮಾಡಿದನು.
11 ಪ್ರೀತಿಯ ಸಹೋದರ ಸಹೋದರಿಯರೇ, ಹೀಗೆ ದೇವರು ನಮ್ಮನ್ನ ಪ್ರೀತಿಸಿದ್ದಾನೆ ಅಂದ್ಮೇಲೆ, ನಾವೂ ಒಬ್ರನ್ನೊಬ್ರು ಪ್ರೀತಿಸೋದು ನಮ್ಮ ಕರ್ತವ್ಯ.+ 12 ದೇವರನ್ನ ಯಾರೂ ಯಾವತ್ತೂ ನೋಡಿಲ್ಲ.+ ನಾವು ಒಬ್ರನ್ನೊಬ್ರು ಪ್ರೀತಿಸ್ತಾ ಇದ್ರೆ ದೇವರು ನಮ್ಮ ಜೊತೆ ಇರ್ತಾನೆ. ಆತನ ಪ್ರೀತಿ ನಮ್ಮಲ್ಲಿ ಪೂರ್ತಿಯಾಗಿ ಇರುತ್ತೆ.+ 13 ಆತನು ನಮಗೆ ಪವಿತ್ರಶಕ್ತಿ ಕೊಟ್ಟಿರೋದ್ರಿಂದ ನಾವು ಆತನಿಗೆ ಆಪ್ತರಾಗಿದ್ದೀವಿ ಮತ್ತು ಆತನು ನಮಗೆ ಆಪ್ತನಾಗಿದ್ದಾನೆ ಅಂತ ಗೊತ್ತಾಗುತ್ತೆ. 14 ಅಷ್ಟೇ ಅಲ್ಲ, ತಂದೆ ತನ್ನ ಮಗನನ್ನ ಲೋಕದ ರಕ್ಷಕನಾಗಿ ಕಳಿಸಿದ+ ಅಂತ ನಾವೇ ನೋಡಿದ್ದೀವಿ, ಅದ್ರ ಬಗ್ಗೆ ಜನ್ರಿಗೆ ಹೇಳ್ತಿದ್ದೀವಿ. 15 ಯೇಸು ದೇವರ ಮಗ ಅಂತ ಯಾರು ಒಪ್ಕೊಳ್ತಾರೋ+ ಅಂಥವ್ರ ಜೊತೆ ದೇವರು ಆಪ್ತನಾಗಿ ಇರ್ತಾನೆ. ಅಷ್ಟೇ ಅಲ್ಲ ದೇವರ ಜೊತೆ ಅವರೂ ಆಪ್ತರಾಗಿ ಇರ್ತಾರೆ.+ 16 ದೇವರು ನಮ್ಮನ್ನ ಪ್ರೀತಿಸ್ತಾನೆ ಅಂತ ನಮಗೆ ಚೆನ್ನಾಗಿ ಗೊತ್ತು, ಆ ನಂಬಿಕೆ ನಮಗಿದೆ.+
ದೇವರು ಪ್ರೀತಿಯಾಗಿದ್ದಾನೆ.+ ದೇವರನ್ನ ಮತ್ತು ಜನ್ರನ್ನ ಪ್ರೀತಿ ಮಾಡ್ತಾ ಇರೋ ವ್ಯಕ್ತಿ ದೇವರ ಜೊತೆ ಆಪ್ತನಾಗಿ ಇರ್ತಾನೆ, ದೇವರು ಅವನ ಜೊತೆ ಆಪ್ತನಾಗಿ ಇರ್ತಾನೆ.+ 17 ಹೀಗೆ ನಾವು ತೋರಿಸೋ ಪ್ರೀತಿ ಪೂರ್ತಿಯಾಗಿದ್ರೆ ನ್ಯಾಯತೀರ್ಪಿನ ದಿನ ಬಂದಾಗ ಧೈರ್ಯವಾಗಿ ಇರ್ತಿವಿ.+ ಯಾಕಂದ್ರೆ ಈ ಲೋಕದಲ್ಲಿ ನಾವು ಕ್ರಿಸ್ತನ ತರ ಇದ್ದೀವಿ. 18 ದೇವರನ್ನ ಪ್ರೀತಿಸೋ ವ್ಯಕ್ತಿಗೆ ಭಯ ಇರಲ್ಲ.+ ಪರಿಪೂರ್ಣವಾದ ಪ್ರೀತಿ ಹೆದರಿಕೆಯನ್ನ ಓಡಿಸಿಬಿಡುತ್ತೆ. ಯಾಕಂದ್ರೆ ಭಯ ಇದ್ದಾಗ ನಮ್ಮ ಕೈಕಾಲು ಓಡಲ್ಲ. ನಿಜ ಹೇಳಬೇಕಂದ್ರೆ, ಹೇಡಿಗೆ ಪರಿಪೂರ್ಣ ಪ್ರೀತಿ ಇರಲ್ಲ.+ 19 ದೇವರು ಮೊದ್ಲು ನಮ್ಮನ್ನ ಪ್ರೀತಿಸಿರೋದ್ರಿಂದ ನಾವು ಪ್ರೀತಿ ತೋರಿಸ್ತೀವಿ.+
20 ಯಾರಾದ್ರೂ “ನಾನು ದೇವರನ್ನ ಪ್ರೀತಿಸ್ತೀನಿ” ಅಂತ ಹೇಳಿ ತನ್ನ ಸಹೋದರನ ಮೇಲೆ ದ್ವೇಷ ಬೆಳಿಸ್ಕೊಂಡ್ರೆ ಅವನು ಹೇಳ್ತಿರೋದು ಸುಳ್ಳು.+ ಕಣ್ಣಿಗೆ ಕಾಣೋ ಸಹೋದರನನ್ನ ಪ್ರೀತಿ ಮಾಡಿಲ್ಲಾಂದ್ರೆ+ ಕಣ್ಣಿಗೆ ಕಾಣದ ದೇವರನ್ನ ಹೇಗೆ ಪ್ರೀತಿ ಮಾಡಕ್ಕಾಗುತ್ತೆ?+ 21 ದೇವರನ್ನ ಪ್ರೀತಿ ಮಾಡೋ ವ್ಯಕ್ತಿ ತನ್ನ ಸಹೋದರನನ್ನೂ ಪ್ರೀತಿಸಬೇಕು ಅನ್ನೋ ಈ ಆಜ್ಞೆಯನ್ನ ಆತನೇ ನಮಗೆ ಕೊಟ್ಟಿದ್ದಾನೆ.+