ಗಲಾತ್ಯದವರಿಗೆ ಬರೆದ ಪತ್ರ
4 ನಾನು ಏನು ಹೇಳ್ತಾ ಇದ್ದೀನಂದ್ರೆ, ವಾರಸುದಾರ ಚಿಕ್ಕ ಹುಡುಗನಾಗಿದ್ರೆ ಎಲ್ಲ ಅವನದ್ದೇ ಆಗಿದ್ರೂ ಅವನು ದೊಡ್ಡವನಾಗೋ ತನಕ ದಾಸನ ತರಾನೇ. 2 ಅವನ ಅಪ್ಪ ತೀರ್ಮಾನಿಸಿದ ದಿನ ಬರೋ ತನಕ ಅವನು ಪೋಷಕರ ಮತ್ತು ಮನೆಯ ಉಸ್ತುವಾರಿ ನೋಡ್ಕೊಳ್ಳೋರ ಕೈಕೆಳಗೆ ಇರ್ತಾನೆ. 3 ಅದೇ ತರ ನಾವೂ ಮಕ್ಕಳಾಗಿದ್ದಾಗ ಈ ಲೋಕದ ಯೋಚ್ನೆ ಮತ್ತು ವರ್ತನೆಗೆ ದಾಸರಾಗಿದ್ವಿ.+ 4 ಆದ್ರೆ ತೀರ್ಮಾನಿಸಿದ ಸಮಯ ಬಂದಾಗ* ದೇವರು ತನ್ನ ಮಗನನ್ನ ಕಳಿಸಿದನು. ಆತನು ಒಬ್ಬ ಸ್ತ್ರೀಗೆ ಹುಟ್ಟಿದನು+ ಮತ್ತು ನಿಯಮ ಪುಸ್ತಕಕ್ಕೆ ಅಧೀನನಾಗಿದ್ದನು.+ 5 ನಿಯಮ ಪುಸ್ತಕದ ಕೈಕೆಳಗೆ ಇದ್ದವ್ರನ್ನ ಕೊಂಡ್ಕೊಳ್ಳೋ ಮೂಲಕ ಬಿಡಿಸೋಕೆ+ ದೇವರು ಆತನನ್ನ ಕಳಿಸಿದನು. ಇದ್ರಿಂದ ದೇವರು ನಮ್ಮನ್ನ ಮಕ್ಕಳಾಗಿ ದತ್ತು ತಗೊಳ್ಳೋಕೆ ಆಗುತ್ತೆ.+
6 ನೀವೀಗ ಮಕ್ಕಳಾಗಿರೋದ್ರಿಂದ, ದೇವರು ತನ್ನ ಮಗನಲ್ಲಿರೋ ಪವಿತ್ರಶಕ್ತಿಯನ್ನ+ ನಮ್ಮ ಹೃದಯಗಳಲ್ಲಿ ಇಟ್ಟಿದ್ದಾನೆ+ ಮತ್ತು ಆ ಪವಿತ್ರಶಕ್ತಿ “ಅಪ್ಪಾ,* ತಂದೆಯೇ!” ಅಂತ ನಾವು ಕರಿಯೋ ತರ ಮಾಡುತ್ತೆ.+ 7 ಹಾಗಾಗಿ ನೀವು ಇನ್ಮೇಲೆ ದಾಸರಲ್ಲ, ಮಕ್ಕಳು. ನೀವು ಮಕ್ಕಳು ಅಂದ್ಮೇಲೆ ದೇವರು ನಿಮ್ಮನ್ನ ವಾರಸುದಾರರಾಗೂ ಮಾಡಿದ್ದಾನೆ.+
8 ಮುಂಚೆ ನಿಮಗೆ ದೇವರ ಬಗ್ಗೆ ಗೊತ್ತಿಲ್ದೆ ಇದ್ದಾಗ ದೇವರೇ ಅಲ್ಲದವ್ರಿಗೆ ದಾಸರಾಗಿದ್ರಿ. 9 ಆದ್ರೆ ಈಗ ನಿಮಗೆ ದೇವರ ಬಗ್ಗೆ ಚೆನ್ನಾಗಿ ಗೊತ್ತು. ಹೇಳಬೇಕಂದ್ರೆ, ದೇವರಿಗೇ ನಿಮ್ಮ ಬಗ್ಗೆ ಚೆನ್ನಾಗಿ ಗೊತ್ತು. ಹಾಗಿದ್ದಾಗ ಲೋಕದ ಪ್ರಯೋಜನಕ್ಕೆ ಬಾರದ, ವ್ಯರ್ಥ ವಿಷ್ಯಗಳಿಗೆ ಮತ್ತೆ ಯಾಕೆ ವಾಪಸ್ ಹೋಗ್ತಾ ಇದ್ದೀರಾ?+ ಅವುಗಳಿಗೆ ಮತ್ತೆ ದಾಸರಾಗೋಕೆ ಯಾಕೆ ಇಷ್ಟಪಡ್ತಿದ್ದೀರಾ?+ 10 ನೀವು ದಿನ, ತಿಂಗಳು, ಕಾಲ ಮತ್ತು ವರ್ಷಗಳನ್ನ ವಿಶೇಷ ಅಂತ ನೆನಸಿ ತುಂಬ ಶ್ರದ್ಧೆಯಿಂದ ಆಚರಿಸ್ತಾ ಇದ್ದೀರ.+ 11 ನಿಮಗೆ ಸಹಾಯ ಮಾಡೋಕೆ ನಾನು ಪಟ್ಟ ಕಷ್ಟ ಎಲ್ಲ ನೀರು ಪಾಲಾಯ್ತೇನೋ ಅಂತ ಭಯ ಆಗ್ತಿದೆ.
12 ಸಹೋದರರೇ, ಒಂದುಕಾಲದಲ್ಲಿ ನಾನು ನಿಮ್ಮ ತರಾನೇ ಇದ್ದೆ. ನಾನು ಬದಲಾದ ಹಾಗೆ ನೀವೂ ಬದಲಾಗಬೇಕು ಅಂತ ಬೇಡ್ಕೊಳ್ತೀನಿ.+ ನೀವು ನನಗೆ ಏನೂ ಕೆಟ್ಟದು ಮಾಡಲಿಲ್ಲ. 13 ನನಗೆ ಹುಷಾರಿಲ್ದೆ ಇದ್ದಿದ್ರಿಂದ ಮೊದಲ್ನೇ ಸಲ ನಿಮಗೆ ಸಿಹಿಸುದ್ದಿ ಸಾರೋ ಅವಕಾಶ ನನಗೆ ಸಿಕ್ತು ಅಂತ ನಿಮಗೆ ಗೊತ್ತು. 14 ನನ್ನ ಕಾಯಿಲೆಯಿಂದ ನಿಮಗೆ ಕಷ್ಟ* ಆದ್ರೂ ನೀವು ನನ್ನನ್ನ ಕೀಳಾಗಿ, ಅಸಹ್ಯವಾಗಿ ನೋಡಲಿಲ್ಲ.* ಬದಲಿಗೆ ನೀವು ನನ್ನನ್ನ ದೇವದೂತನ ತರ, ಕ್ರಿಸ್ತ ಯೇಸು ತರ ಸ್ವಾಗತಿಸಿದ್ರಿ. 15 ಆಗ ನಿಮಗಿದ್ದ ಖುಷಿ ಈಗ ಎಲ್ಲಿ ಹೋಯ್ತು? ನನಗೆ ಸಹಾಯ ಆಗುತ್ತೆ ಅನ್ನೋದಾದ್ರೆ ನೀವು ನಿಮ್ಮ ಕಣ್ಣನ್ನೂ ಕಿತ್ತು ನನಗೆ ಕೊಡೋಕೆ ಸಿದ್ಧರಿದ್ರಿ.+ 16 ಆದ್ರೆ ನಾನೀಗ ನಿಮಗೆ ಇದ್ದದ್ದನ್ನ ಇದ್ದ ಹಾಗೆ ಹೇಳೋದ್ರಿಂದ ನಿಮಗೆ ಶತ್ರು ಆಗಿಬಿಟ್ನಾ? 17 ಸ್ವಲ್ಪ ಜನ ನಿಮ್ಮನ್ನ ಅವ್ರ ಕಡೆ ಎಳ್ಕೊಳ್ಳೋಕೆ ತುಂಬ ಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಒಳ್ಳೇ ಉದ್ದೇಶದಿಂದ ಅಲ್ಲ, ನಿಮ್ಮನ್ನ ನನ್ನಿಂದ ದೂರ ಮಾಡಿ ಅವ್ರ ಹಿಂದೆ ನೀವು ಅಲೆಯೋ ತರ ಮಾಡೋದೇ ಅವ್ರಿಗೆ ಬೇಕಾಗಿದೆ. 18 ಯಾರಾದ್ರೂ ಒಳ್ಳೇ ಉದ್ದೇಶದಿಂದ ನಿಮ್ಮ ಮನಸ್ಸು ಗೆಲ್ಲೋಕೆ ಪ್ರಯತ್ನಿಸಿದ್ರೆ ಅದು ಒಳ್ಳೇದೇ. ನಾನು ಇದ್ದಾಗ ಮಾತ್ರ ಅಲ್ಲ ಯಾವಾಗ್ಲೂ ಹಾಗೆ ಮಾಡಿದ್ರೆ ಒಳ್ಳೇದೇ. 19 ನನ್ನ ಪುಟ್ಟ ಮಕ್ಕಳೇ,+ ನಿಮ್ಮಿಂದ ನನಗೆ ಮತ್ತೆ ಹೆರಿಗೆ ನೋವಿನಷ್ಟು ನೋವಾಗ್ತಿದೆ. ಕ್ರಿಸ್ತನ ವ್ಯಕ್ತಿತ್ವ ನಿಮ್ಮಲ್ಲಿ ಪೂರ್ತಿ ಬೆಳೆಯೋ ತನಕ* ಆ ನೋವು ಕಮ್ಮಿ ಆಗಲ್ಲ. 20 ಈಗ್ಲೇ ನಿಮ್ಮ ಹತ್ರ ಬಂದು ನಿಮ್ಮ ಜೊತೆ ಮೃದುವಾಗಿ ಮಾತಾಡಬೇಕು ಅನ್ನೋದೇ ನನ್ನಾಸೆ. ಯಾಕಂದ್ರೆ ನೀವು ಯಾಕೆ ಹೀಗೆ ಮಾಡ್ತಿದ್ದೀರ ಅಂತಾನೇ ನಂಗೆ ಗೊತ್ತಾಗ್ತಿಲ್ಲ.
21 ನಿಯಮ ಪುಸ್ತಕ ಪಾಲಿಸೋಕೆ ಇಷ್ಟಪಡುವವ್ರೇ, ನಿಯಮ ಪುಸ್ತಕದಲ್ಲಿ ಏನು ಹೇಳಿದೆ ಅಂತ ನಿಮಗೆ ಗೊತ್ತಿಲ್ವಾ? ನನಗೆ ಹೇಳಿ. 22 ಉದಾಹರಣೆಗೆ, ಅದ್ರಲ್ಲಿ ಏನು ಹೇಳಿದೆ ಅಂದ್ರೆ, ಅಬ್ರಹಾಮನಿಗೆ ಇಬ್ರು ಗಂಡುಮಕ್ಕಳಿದ್ರು. ಒಬ್ಬ ಸೇವಕಿಗೆ ಹುಟ್ಟಿದವನು,+ ಇನ್ನೊಬ್ಬ ಸ್ವತಂತ್ರ ಸ್ತ್ರೀಗೆ ಹುಟ್ಟಿದವನು.+ 23 ಸೇವಕಿಗೆ ಹುಟ್ಟಿದವನು ಎಲ್ರೂ ಹುಟ್ಟೋ ತರ ಹುಟ್ಟಿದ.+ ಆದ್ರೆ ಸ್ವತಂತ್ರ ಸ್ತ್ರೀಗೆ ಹುಟ್ಟಿದವನು ದೇವರು ಕೊಟ್ಟ ಮಾತಿಂದ ಹುಟ್ಟಿದ.+ 24 ಈ ವಿಷ್ಯಗಳಿಗೆ ಸಾಂಕೇತಿಕ ಅರ್ಥ ಇದೆ. ಈ ಸ್ತ್ರೀಯರು ಎರಡು ಒಪ್ಪಂದಗಳನ್ನ ಸೂಚಿಸ್ತಾರೆ. ಇದ್ರಲ್ಲಿ ಒಂದು ಒಪ್ಪಂದ ಸಿನಾಯಿ ಬೆಟ್ಟದಲ್ಲಿ+ ಆಯ್ತು. ಈ ಒಪ್ಪಂದದ ಕೆಳಗೆ ಇರುವವ್ರೆಲ್ಲ ದಾಸರಾಗಿದ್ದಾರೆ. ಈ ಒಪ್ಪಂದನೇ ಹಾಗರಳು. 25 ಹಾಗರ್ ಅರೇಬಿಯದ ಸಿನಾಯಿ ಬೆಟ್ಟನ ಸೂಚಿಸ್ತಾಳೆ.+ ಅವಳು ಇವತ್ತಿರೋ ಯೆರೂಸಲೇಮಿನ ತರ ಇದ್ದಾಳೆ. ಯಾಕಂದ್ರೆ ಯೆರೂಸಲೇಮ್ ತನ್ನ ಮಕ್ಕಳ ಜೊತೆ ದಾಸಿಯಾಗಿ ಇದ್ದಾಳೆ. 26 ಆದ್ರೆ ಮೇಲಿರೋ ಯೆರೂಸಲೇಮ್ ಸ್ವತಂತ್ರಳು. ಅವಳೇ ನಮ್ಮ ತಾಯಿ.
27 ಯಾಕಂದ್ರೆ “ಬಂಜೆಯೇ, ಮಕ್ಕಳನ್ನ ಹೆರದವಳೇ, ಖುಷಿಪಡು! ಹೆರಿಗೆ ನೋವು ಇಲ್ಲದವಳೇ, ಹರ್ಷದಿಂದ ಕೂಗಾಡು. ಯಾಕಂದ್ರೆ ಗಂಡ ಇರುವವಳಿಗಿಂತ ಗಂಡ ಕೈಬಿಟ್ಟವಳಿಗೆ ಮಕ್ಕಳು ಜಾಸ್ತಿ” ಅಂತ ಪವಿತ್ರ ಗ್ರಂಥದಲ್ಲಿ ಇದೆ.+ 28 ಸಹೋದರರೇ, ಇಸಾಕನ ತರ ನೀವೂ ದೇವರು ಕೊಟ್ಟ ಮಾತಿಂದ ಹುಟ್ಟಿದ ಮಕ್ಕಳಾಗಿದ್ದೀರ.+ 29 ಆದ್ರೆ ಆ ಕಾಲದಲ್ಲಿ ಮಾಮೂಲಿಯಾಗಿ ಹುಟ್ಟಿದವನು ಪವಿತ್ರಶಕ್ತಿಯಿಂದ ಹುಟ್ಟಿದವನನ್ನ ಹಿಂಸಿಸೋಕೆ ಶುರು ಮಾಡಿದ.+ ಈಗ್ಲೂ ಅದೇ ತರ ನಡೀತಿದೆ.+ 30 ಆದ್ರೆ ಪವಿತ್ರ ಗ್ರಂಥ ಏನು ಹೇಳುತ್ತೆ? “ಸೇವಕಿಯನ್ನ, ಅವಳ ಮಗನನ್ನ ಓಡಿಸು. ಸೇವಕಿಯ ಮಗ ಸ್ವತಂತ್ರ ಸ್ತ್ರೀಯ ಮಗನ ಜೊತೆ ವಾರಸುದಾರ ಆಗಬಾರದು.”+ 31 ಹಾಗಾಗಿ ಸಹೋದರರೇ, ನಾವು ಸೇವಕಿಯ ಮಕ್ಕಳಲ್ಲ, ಸ್ವತಂತ್ರ ಸ್ತ್ರೀಯ ಮಕ್ಕಳು.