ದಾನಿಯೇಲ
12 ತನ್ನ ಜನ್ರ ಪರವಾಗಿ ನಿಂತಿರೋ ಮಹಾ ಸೇನಾಪತಿಯಾದ+ ಮೀಕಾಯೇಲ*+ ಆ ಸಮಯದಲ್ಲಿ ಕ್ರಮ ತಗೊಳ್ತಾನೆ.* ಆಗ ಎಂಥ ಕಷ್ಟಕಾಲ ಬರುತ್ತೆ ಅಂದ್ರೆ ಭೂಮಿ ಮೇಲೆ ಮೊದಲ ದೇಶ ಹುಟ್ಕೊಂಡ ದಿನದಿಂದ ಅವತ್ತಿನ ತನಕ ಅಂಥ ಕಷ್ಟಕಾಲ ಬಂದಿಲ್ಲ. ಆ ಸಮಯದಲ್ಲಿ ನಿನ್ನ ಜನ್ರಲ್ಲಿ ಯಾರ ಹೆಸ್ರು ಗ್ರಂಥದಲ್ಲಿ ಬರೆದಿರುತ್ತೊ+ ಅವ್ರೆಲ್ಲ ತಪ್ಪಿಸ್ಕೊಳ್ತಾರೆ.+ 2 ಮಣ್ಣಲ್ಲಿ ಮಣ್ಣಾಗಿ ದೀರ್ಘನಿದ್ದೆ ಮಾಡ್ತಿರೋ ತುಂಬ ಜನ ಎದ್ದೇಳ್ತಾರೆ. ಕೆಲವರು ಶಾಶ್ವತವಾಗಿ ಜೀವಿಸೋಕೆ ಏಳ್ತಾರೆ. ಉಳಿದವರು ಅವಮಾನ ಪಡ್ಕೊಳ್ಳೋಕೆ, ಶಾಶ್ವತವಾದ ತಿರಸ್ಕಾರ ಪಡ್ಕೊಳ್ಳೋಕೆ ಎದ್ದೇಳ್ತಾರೆ.
3 ಆದ್ರೆ ತಿಳುವಳಿಕೆ* ಇರೋರು ವಿಶಾಲ ಆಕಾಶದ ಹಾಗೆ ಹೊಳಿತಾರೆ, ನೀತಿಯ ದಾರಿ ಹಿಡಿಯೋಕೆ ತುಂಬ ಜನ್ರಿಗೆ ಸಹಾಯ ಮಾಡುವವರು ನಕ್ಷತ್ರಗಳ ಹಾಗೆ ಸದಾಕಾಲ ಹೊಳಿತಾರೆ.
4 ದಾನಿಯೇಲನೇ, ಈ ಗ್ರಂಥಕ್ಕೆ ಮುದ್ರೆ ಹಾಕು. ಅಂತ್ಯದ ತನಕ ಈ ಮಾತುಗಳನ್ನ ಗುಟ್ಟಾಗಿಡು.+ ತುಂಬ ಜನ್ರು ಆಕಡೆ ಈಕಡೆ ತಿರುಗಾಡ್ತಾರೆ.* ನಿಜವಾದ ಜ್ಞಾನ ತುಂಬಿ ತುಳುಕುತ್ತೆ.”+
5 ಆಮೇಲೆ ದಾನಿಯೇಲನಾದ ನಾನು ಅಲ್ಲಿ ಇನ್ನಿಬ್ರು ನಿಂತಿರೋದನ್ನ ನೋಡ್ದೆ. ನದಿಯ ಈಕಡೆ ದಡದಲ್ಲಿ ಒಬ್ಬ ನಿಂತಿದ್ರೆ, ಇನ್ನೊಬ್ಬ ಆಕಡೆ ದಡದಲ್ಲಿ ನಿಂತಿದ್ದ.+ 6 ಅವ್ರಲ್ಲಿ ಒಬ್ಬ, ನಾರಿಂದ ಮಾಡಿದ್ದ ಬಟ್ಟೆ+ ಹಾಕೊಂಡು ನದಿ ನೀರಿನ ಮೇಲೆ ನಿಂತಿದ್ದವನಿಗೆ “ಈ ಅದ್ಭುತವಾದ ವಿಷ್ಯಗಳು ನಡಿಯೋಕೆ ಇನ್ನೂ ಎಷ್ಟು ಸಮಯ ಬೇಕು?” ಅಂತ ಕೇಳಿದ. 7 ಅದಕ್ಕೆ ನಾರಿನ ಬಟ್ಟೆ ಹಾಕೊಂಡು ನದಿ ನೀರಿನ ಮೇಲೆ ನಿಂತಿದ್ದವನು ತನ್ನ ಬಲಗೈಯನ್ನ, ಎಡಗೈಯನ್ನ ಆಕಾಶದ ಕಡೆಗೆ ಎತ್ತಿ ಸದಾಕಾಲ ಜೀವಿಸೋ ದೇವರ ಮೇಲೆ ಆಣೆ ಇಟ್ಟು ಹೀಗೆ ಹೇಳೋದನ್ನ ಕೇಳಿಸ್ಕೊಂಡೆ:+ “ಅದಕ್ಕೆ ನಿಶ್ಚಿತ ಕಾಲ, ನಿಶ್ಚಿತ ಕಾಲಗಳು ಮತ್ತು ಅರ್ಧ ಕಾಲ* ಹಿಡಿಯುತ್ತೆ. ಪವಿತ್ರ ಜನ್ರ ಬಲ ಮುರಿದ ಕೂಡಲೇ+ ಈ ಎಲ್ಲ ವಿಷ್ಯಗಳು ಪೂರ್ತಿ ಆಗುತ್ತೆ.”
8 ಇನ್ನು ನನ್ನ ವಿಷ್ಯಕ್ಕೆ ಬರೋದಾದ್ರೆ ನಾನು ಈ ಮಾತುಗಳನ್ನ ಕೇಳಿಸ್ಕೊಂಡೆ, ಆದ್ರೆ ನನಗೆ ಏನೂ ಅರ್ಥ ಆಗಲಿಲ್ಲ.+ ಹಾಗಾಗಿ ನಾನು ಅವನಿಗೆ “ನನ್ನ ಒಡೆಯನೇ, ಕೊನೆಗೆ ಏನಾಗುತ್ತೆ?” ಅಂತ ಕೇಳಿದೆ.
9 ಅದಕ್ಕೆ ಅವನು “ದಾನಿಯೇಲ, ನೀನು ಹೋಗು. ಯಾಕಂದ್ರೆ ಈ ಮಾತುಗಳಿಗೆ ಮುದ್ರೆ ಹಾಕಬೇಕು. ಅಂತ್ಯದ ತನಕ ಈ ಮಾತುಗಳು ರಹಸ್ಯವಾಗಿ ಇರಬೇಕು.+ 10 ತುಂಬ ಜನ ಶುದ್ಧ ಜೀವನ ನಡಿಸ್ತಾರೆ, ಸ್ವಚ್ಛ ಮಾಡ್ಕೊಳ್ತಾರೆ. ಅವರನ್ನ ಶುದ್ಧ ಮಾಡಲಾಗುತ್ತೆ.+ ಕೆಟ್ಟವರು ಕೆಟ್ಟ ಕೆಲಸ ಮಾಡ್ತಾರೆ. ಕೆಟ್ಟವರು ಯಾರೂ ಈ ಮಾತುಗಳನ್ನ ಅರ್ಥ ಮಾಡ್ಕೊಳ್ಳಲ್ಲ. ಆದ್ರೆ ತಿಳುವಳಿಕೆ ಇರುವವರು ಅರ್ಥ ಮಾಡ್ಕೊಳ್ತಾರೆ.+
11 ಪ್ರತಿದಿನ ಬಲಿಗಳನ್ನ+ ನಿಲ್ಲಿಸಿ, ನಾಶ ತರೋ ಅಸಹ್ಯ ವಸ್ತುವನ್ನ ಸ್ಥಾಪಿಸೋ+ ಸಮಯದಿಂದ 1,290 ದಿನಗಳು ಕಳಿಬೇಕು.
12 ಯಾರು 1,335 ದಿನಗಳ ಕೊನೆ ತನಕ ತಾಳ್ಮೆಯಿಂದ ಕಾಯ್ತಾರೋ ಅವರು ಖುಷಿಯಾಗಿ ಇರ್ತಾರೆ!
13 ಆದ್ರೆ ನಿನ್ನ ವಿಷ್ಯಕ್ಕೆ ಬರೋದಾದ್ರೆ, ಕೊನೆ ತನಕ ನೀನು ಸ್ಥಿರವಾಗಿ ನಿಂತ್ಕೊ. ನೀನು ವಿಶ್ರಾಂತಿ ತಗೊಳ್ತೀಯ. ಆದ್ರೆ ನೀನು ಕಾಯಬೇಕಾಗಿರೋ ದಿನಗಳು ಕಳೆದ ಮೇಲೆ ನಿನ್ನ ಪಾಲಿಗಾಗಿ* ನೀನು ಎದ್ದು ನಿಲ್ತೀಯ.”+