ಎಫೆಸದವರಿಗೆ ಬರೆದ ಪತ್ರ
6 ಮಕ್ಕಳೇ, ನೀವು ನಿಮ್ಮ ಅಪ್ಪಅಮ್ಮನ ಮಾತು ಕೇಳಿ.+ ಇದು ದೇವರಿಗೆ ತುಂಬ ಇಷ್ಟ. ಯಾಕಂದ್ರೆ ದೇವರ ದೃಷ್ಟಿಯಲ್ಲಿ ಇದೇ ಸರಿ. 2 “ನಿಮ್ಮ ಅಪ್ಪಅಮ್ಮಗೆ ಗೌರವ ಕೊಡಿ.”+ ಈ ಮೊದಲ್ನೇ ಆಜ್ಞೆಯನ್ನ ಪಾಲಿಸಿದ್ರೆ ಈ ಆಶೀರ್ವಾದ ಸಿಗುತ್ತೆ: 3 “ಆಗ ನಿಮಗೆ ಒಳ್ಳೇದಾಗುತ್ತೆ* ಮತ್ತು ಭೂಮಿ ಮೇಲೆ ತುಂಬ ವರ್ಷ ಬದುಕ್ತೀರ.” 4 ಅಪ್ಪಂದಿರೇ, ನಿಮ್ಮ ಮಕ್ಕಳಿಗೆ ಕಿರಿಕಿರಿ ಮಾಡಬೇಡಿ.+ ಯೆಹೋವ* ಹೇಳೋ ತರಾನೇ ಅವ್ರಿಗೆ ಕಲಿಸ್ತಾ,+ ತರಬೇತಿ ಕೊಡ್ತಾ*+ ಬೆಳೆಸಿ.
5 ಆಳುಗಳೇ, ಕ್ರಿಸ್ತನ ಮಾತನ್ನ ಕೇಳೋ ಹಾಗೆ ಭಯ, ಗೌರವದಿಂದ ಮನಸಾರೆ ನಿಮ್ಮ ಯಜಮಾನರ ಮಾತು ಕೇಳಿ.+ 6 ಮನುಷ್ಯರನ್ನ ಮೆಚ್ಚಿಸೋಕೆ, ಅವರು ನೋಡುವಾಗ ಮಾತ್ರ ಕೆಲಸ ಮಾಡಬೇಡಿ.+ ಬದಲಿಗೆ ಕ್ರಿಸ್ತನ ದಾಸರ ತರ ಪೂರ್ಣ ಮನಸ್ಸಿಂದ ದೇವರಿಗೆ ಏನು ಇಷ್ಟನೋ ಅದನ್ನ ಮಾಡಿ.+ 7 ನೀವು ಕೆಲಸವನ್ನ ಮನುಷ್ಯರಿಗಾಗಿ ಅಲ್ಲ, ಯೆಹೋವನಿಗಾಗಿ* ಮಾಡ್ತಿದ್ದೀರ+ ಅಂತ ನೆನಸಿ ಒಳ್ಳೇ ಮನಸ್ಸಿಂದ ಮಾಡಿ. 8 ಯಾಕಂದ್ರೆ ಒಬ್ಬ ವ್ಯಕ್ತಿ ದಾಸನಾಗಿದ್ರೂ ಸ್ವತಂತ್ರನಾಗಿದ್ರೂ ಏನಾದ್ರೂ ಒಳ್ಳೇ ಕೆಲಸ ಮಾಡಿದ್ರೆ ಯೆಹೋವ* ಅವನಿಗೆ ಪ್ರತಿಫಲ ಕೊಡ್ತಾನೆ+ ಅಂತ ನಿಮಗೆ ಗೊತ್ತಲ್ವಾ. 9 ಅಷ್ಟೇ ಅಲ್ಲ ಯಜಮಾನರೇ, ನೀವೂ ನಿಮ್ಮ ಆಳುಗಳ ಜೊತೆ ಒಳ್ಳೇ ರೀತಿ ನಡ್ಕೊಳ್ಳಿ, ಅವ್ರನ್ನ ಹೆದರಿಸಬೇಡಿ. ಯಾಕಂದ್ರೆ ನಿಮ್ಮಿಬ್ರ ಧಣಿ ಸ್ವರ್ಗದಲ್ಲಿ ಇದ್ದಾನೆ,+ ಆತನು ಭೇದಭಾವ ಮಾಡಲ್ಲ ಅಂತ ನಿಮಗೆ ಗೊತ್ತಲ್ವಾ.
10 ಕೊನೆಗೆ ನಾನು ಏನು ಹೇಳ್ತೀನಂದ್ರೆ, ದೇವರಿಂದ ಬಲ ಪಡ್ಕೊಳ್ತಾ ಇರಿ,+ ಯಾಕಂದ್ರೆ ಆತನಿಗೆ ತುಂಬ ಶಕ್ತಿ ಇದೆ. 11 ದೇವರು ಕೊಟ್ಟಿರೋ ರಕ್ಷಾಕವಚವನ್ನ ಪೂರ್ತಿ ಹಾಕೊಳ್ಳಿ.+ ಆಗ ಸೈತಾನನ* ಕುತಂತ್ರಗಳನ್ನ* ಎದುರಿಸಿ ದೃಢವಾಗಿ ನಿಲ್ಲೋಕೆ ನಿಮ್ಮಿಂದ ಆಗುತ್ತೆ. 12 ಯಾಕಂದ್ರೆ ನಾವು ಮನುಷ್ಯರ* ವಿರುದ್ಧ ಅಲ್ಲ ಸರ್ಕಾರಗಳ, ಅಧಿಕಾರಿಗಳ ಮತ್ತು ಕತ್ತಲೆಯ ಈ ಲೋಕವನ್ನ ಆಳ್ತಾ ಇರುವವ್ರ ವಿರುದ್ಧ ಅಂದ್ರೆ ಸ್ವರ್ಗದಲ್ಲಿರೋ ಕೆಟ್ಟ ದೇವದೂತರ+ ವಿರುದ್ಧ ಹೋರಾಡ್ತಾ ಇದ್ದೀವಿ.+ 13 ಅದಕ್ಕೇ ದೇವರು ಕೊಟ್ಟಿರೋ ರಕ್ಷಾಕವಚವನ್ನ ಪೂರ್ತಿ ಹಾಕೊಳ್ಳಿ.+ ಆಗ ಆ ಶತ್ರು ದಾಳಿ ಮಾಡುವಾಗ ಅವನನ್ನ ಎದುರಿಸೋಕೆ ನಿಮಗೆ ಆಗುತ್ತೆ, ಅಷ್ಟೇ ಅಲ್ಲ ಹೋರಾಡೋಕೆ ನೀವು ಎಲ್ಲ ಸಿದ್ಧತೆ ಮಾಡಿದ ಮೇಲೆ ದೃಢವಾಗಿ ನಿಲ್ತೀರ.
14 ಹಾಗಾಗಿ ಸತ್ಯವನ್ನ ಸೊಂಟಪಟ್ಟಿ ತರ ಬಿಗಿದುಕೊಂಡು,+ ನೀತಿಯನ್ನ ಎದೆಕವಚದ ತರ ಹಾಕ್ಕೊಳ್ಳಿ,+ 15 ಶಾಂತಿಯ ಸಿಹಿಸುದ್ದಿಯನ್ನ ಸಾರೋಕೆ ಸಿದ್ಧವಾಗಿರೋಕೆ ಚಪ್ಪಲಿಗಳನ್ನ ನಿಮ್ಮ ಕಾಲಿಗೆ ಹಾಕೊಂಡು ಸ್ಥಿರವಾಗಿ ನಿಲ್ಲಿ.+ 16 ಇದ್ರ ಜೊತೆ ನಂಬಿಕೆಯನ್ನ ದೊಡ್ಡ ಗುರಾಣಿ ತರ ಹಿಡ್ಕೊಳ್ಳಿ.+ ಅದ್ರಿಂದ ನಿಮಗೆ ಸೈತಾನನ* ಬೆಂಕಿ ತರ ಇರೋ ಎಲ್ಲ ಬಾಣಗಳನ್ನ* ಆರಿಸೋಕೆ ಆಗುತ್ತೆ.+ 17 ರಕ್ಷಣೆಯನ್ನ ಶಿರಸ್ತ್ರಾಣದ ತರ ಹಾಕೊಳ್ಳಿ+ ಮತ್ತು ಪವಿತ್ರಶಕ್ತಿಯ ಕತ್ತಿಯನ್ನ ಅಂದ್ರೆ ಪವಿತ್ರ ಗ್ರಂಥವನ್ನ* ಹಿಡ್ಕೊಳ್ಳಿ.+ 18 ಪವಿತ್ರಶಕ್ತಿಗೆ ತಕ್ಕ ಹಾಗೆ ಪ್ರತಿ ಸಂದರ್ಭದಲ್ಲೂ+ ಎಲ್ಲ ತರದ ಪ್ರಾರ್ಥನೆಗಳನ್ನ+ ಮಾಡ್ತಾ, ಅಂಗಲಾಚಿ ಬೇಡ್ತಾ ಇರಿ. ಅಷ್ಟೇ ಅಲ್ಲ ಇದನ್ನ ಮಾಡೋಕೆ ಎಚ್ಚರವಾಗಿರಿ. ಎಲ್ಲ ಪವಿತ್ರ ಜನ್ರಿಗಾಗಿ ಯಾವಾಗ್ಲೂ ಅಂಗಲಾಚಿ ಬೇಡಿ. 19 ನಾನು ಸಿಹಿಸುದ್ದಿಯ ಪವಿತ್ರ ರಹಸ್ಯವನ್ನ ಸಾರುವಾಗ ಸರಿಯಾದ ಪದಗಳನ್ನ ಬಳಸೋಕೆ, ಧೈರ್ಯವಾಗಿ ಮಾತಾಡೋಕೆ ನನಗೋಸ್ಕರ ಪ್ರಾರ್ಥಿಸಿ.+ 20 ಯಾಕಂದ್ರೆ ಅದನ್ನ ಸಾರೋಕೆ ರಾಯಭಾರಿಯಾಗಿ+ ಕೆಲಸ ಮಾಡ್ತಿರೋ ನನ್ನನ್ನ ಸರಪಳಿಗಳಿಂದ ಕಟ್ಟಿ ಹಾಕಲಾಗಿದೆ. ನಾನು ಏನು ಹೇಳಲೇಬೇಕೊ ಅದನ್ನ ಧೈರ್ಯದಿಂದ ಹೇಳೋಕೆ ನನಗೋಸ್ಕರ ಪ್ರಾರ್ಥನೆ ಮಾಡಿ.
21 ಪ್ರಿಯ ಸಹೋದರನಾದ, ಪ್ರಭುವಿನ ನಂಬಿಗಸ್ತ ಸೇವಕನಾದ ತುಖಿಕ+ ನನ್ನ ಬಗ್ಗೆ ನಿಮ್ಮ ಹತ್ರ ಬಂದು ನಾನು ಹೇಗಿದ್ದೀನಿ, ಏನು ಮಾಡ್ತಿದ್ದೀನಿ ಅಂತ ಹೇಳ್ತಾನೆ.+ 22 ನಮ್ಮ ಬಗ್ಗೆ ನಿಮಗೆ ಹೇಳಬೇಕು ಮತ್ತು ನಿಮ್ಮನ್ನ ಸಮಾಧಾನ ಮಾಡಬೇಕು ಅನ್ನೋ ಉದ್ದೇಶದಿಂದಾನೇ ಅವನನ್ನ ನಿಮ್ಮ ಹತ್ರ ಕಳಿಸ್ತಿದ್ದೀನಿ.
23 ಸಹೋದರರೇ, ತಂದೆಯಾದ ದೇವರಿಂದ, ಪ್ರಭು ಯೇಸು ಕ್ರಿಸ್ತನಿಂದ ನಿಮಗೆ ಶಾಂತಿ, ನಂಬಿಕೆಯಿಂದ ತುಂಬಿದ ಪ್ರೀತಿ ಸಿಗ್ಲಿ. 24 ನಮ್ಮ ಪ್ರಭು ಯೇಸು ಕ್ರಿಸ್ತನ ಮೇಲೆ ಯಾರಿಗೆಲ್ಲ ಅಳಿಸಲಾಗದ ಪ್ರೀತಿ ಇದ್ಯೋ ಅವ್ರಿಗೆಲ್ಲ ದೇವರ ಅಪಾರ ಕೃಪೆ ಸಿಗ್ಲಿ.