‘ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಆ ಜನರು’
‘ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಆ ಜನರು ಭಾಗ್ಯವಂತರು.’ —ಕೀರ್ತ. 144:15.
1. ದೇವರನ್ನು ಆರಾಧಿಸುವವರ ಬಗ್ಗೆ ಕೆಲವರಿಗೆ ಏನನಿಸುತ್ತದೆ?
ಇಂದು ಅನೇಕರ ಅಭಿಪ್ರಾಯವೇನೆಂದರೆ ಜಗತ್ತಿನ ಮುಖ್ಯ ಧರ್ಮಗಳಿಂದ ಮಾನವಕುಲಕ್ಕೇನೂ ಪ್ರಯೋಜನ ಆಗುತ್ತಿಲ್ಲ. ಈ ಧರ್ಮಗಳು ತಮ್ಮ ಬೋಧನೆಗಳು ಹಾಗೂ ನಡತೆಯಿಂದ ದೇವರ ಬಗ್ಗೆ ತಪ್ಪಭಿಪ್ರಾಯ ಮೂಡಿಸಿವೆ ಹಾಗಾಗಿ ಇವುಗಳ ಮೇಲೆ ದೇವರ ಅನುಗ್ರಹವಿಲ್ಲವೆಂದು ಕೆಲವರು ಒಪ್ಪಿಕೊಳ್ಳುತ್ತಾರೆ. ಹೀಗಿದ್ದರೂ ಎಲ್ಲ ಧರ್ಮಗಳಲ್ಲೂ ದೇವಭಕ್ತಿ ತೋರಿಸುವ ಒಳ್ಳೇ ಮನಸ್ಸಿನ ಜನರಿದ್ದಾರೆ, ದೇವರು ಅವರನ್ನು ನೋಡುತ್ತಾನೆ ಮತ್ತು ತನ್ನ ಆರಾಧಕರಾಗಿ ಸ್ವೀಕರಿಸುತ್ತಾನೆಂದು ಕೆಲವರು ನಂಬುತ್ತಾರೆ. ಒಳ್ಳೇ ಮನಸ್ಸಿನ ಆರಾಧಕರು ಸುಳ್ಳು ಧರ್ಮವನ್ನು ಬಿಟ್ಟುಬಂದು ದೇವರನ್ನು ಪ್ರತ್ಯೇಕವಾದ ಜನರಾಗಿ ಆರಾಧಿಸುವ ಅಗತ್ಯವಿಲ್ಲವೆಂದು ಅವರು ನೆನಸುತ್ತಾರೆ. ಆದರೆ ಯೆಹೋವನೂ ಹೀಗೆಯೇ ಯೋಚಿಸುತ್ತಾನೊ? ಆತನ ಸತ್ಯಾರಾಧಕರ ಕುರಿತ ಬೈಬಲ್ ಇತಿಹಾಸದಲ್ಲಿ ಸ್ವಲ್ಪವನ್ನು ಪರಿಶೀಲಿಸಿ ಉತ್ತರಗಳನ್ನು ತಿಳಿಯೋಣ.
ಒಡಂಬಡಿಕೆಯ ಜನರು
2. ಕಾಲಾನಂತರ ಯಾರು ಯೆಹೋವನ ಪ್ರತ್ಯೇಕ ಜನರಾದರು? ಅವರಿಗೂ ಇತರ ಜನಾಂಗಗಳಿಗೂ ಇದ್ದ ವ್ಯತ್ಯಾಸವೇನು? (ಶೀರ್ಷಿಕೆ ಚಿತ್ರ ನೋಡಿ.)
2 ಕ್ರಿ.ಪೂ. 20ನೇ ಶತಮಾನದಷ್ಟು ಹಿಂದೆಯೇ ಭೂಮಿಯಲ್ಲಿ ಯೆಹೋವನಿಗೆ ತನ್ನದೇ ಆದ ಪ್ರತ್ಯೇಕ ಜನರ ಗುಂಪಿತ್ತು. ‘ನಂಬಿಕೆಯಿರುವ ಎಲ್ಲರಿಗೆ ತಂದೆಯಾದ’ ಅಬ್ರಹಾಮನು ನೂರಾರು ಜನರಿದ್ದ ಒಂದು ಮನೆವಾರ್ತೆಯ ಯಜಮಾನನಾಗಿದ್ದನು. (ರೋಮ. 4:11; ಆದಿ. 14:14) ಅವನನ್ನು ಕಾನಾನ್ ದೇಶದ ಅಧಿಪತಿಗಳು “ಮಹಾಪ್ರಭು” ಎಂದೆಣಿಸುತ್ತಿದ್ದರು ಮತ್ತು ತುಂಬ ಗೌರವ ಕೊಡುತ್ತಿದ್ದರು. (ಆದಿ. 21:22; 23:5) ಯೆಹೋವನು ಅಬ್ರಹಾಮ ಮತ್ತವನ ಸಂತತಿಯೊಂದಿಗೆ ಒಂದು ಒಡಂಬಡಿಕೆ ಮಾಡಿದನು. (ಆದಿ. 17:1, 2, 19) ಆತನು ಅಬ್ರಹಾಮನಿಗಂದದ್ದು: “ನೀನೂ ನಿನ್ನ ಹಿಂದೆ ಬರುವ ಸಂತತಿಯವರೂ ಕೈಕೊಳ್ಳಬೇಕಾದ ನನ್ನ ನಿಬಂಧನೆಯು ಯಾವದಂದರೆ—ನಿಮ್ಮಲ್ಲಿ ಪ್ರತಿಯೊಬ್ಬ ಗಂಡಸಿಗೂ ಸುನ್ನತಿಯಾಗಬೇಕೆಂಬದೇ. . . . ಅದೇ ನಿಮಗೂ ನನಗೂ ಉಂಟಾದ ಒಡಂಬಡಿಕೆಗೆ ಗುರುತು.” (ಆದಿ. 17:10, 11) ಈ ಮಾತಿಗನುಸಾರ ಅಬ್ರಹಾಮ ಮತ್ತು ಆತನ ಮನೆವಾರ್ತೆಯ ಎಲ್ಲ ಗಂಡಸರಿಗೆ ಸುನ್ನತಿಮಾಡಿಸಲಾಯಿತು. (ಆದಿ. 17:24-27) ಇದು ಅಬ್ರಹಾಮನ ಸಂತತಿಯವರ ದೇಹದ ಮೇಲೆ ಒಂದು ಗುರುತಾಗಿದ್ದು, ಯೆಹೋವನೊಟ್ಟಿಗೆ ಒಡಂಬಡಿಕೆಯ ಸಂಬಂಧದಲ್ಲಿರುವ ಏಕೈಕ ಜನಸಮೂಹವು ಅವರಾಗಿದ್ದರೆಂದು ಪ್ರತ್ಯೇಕಿಸಿತ್ತು.
3. ಅಬ್ರಹಾಮನ ಸಂತಾನ ಹೆಚ್ಚುತ್ತಾ ಬಂದದ್ದು ಹೇಗೆ?
3 ಅಬ್ರಹಾಮನ ಮೊಮ್ಮಗನಾದ ಯಾಕೋಬನಿಗೆ ಅಥವಾ ಇಸ್ರಾಯೇಲನಿಗೆ 12 ಮಕ್ಕಳು. (ಆದಿ. 35:10, 22ಬಿ-26) ಕಾಲಾನಂತರ ಇವರು ಇಸ್ರಾಯೇಲ್ಯರ 12 ಕುಲಗಳ ಅಧಿಪತಿಗಳಾದರು. (ಅ. ಕಾ. 7:8) ಮುಂದೆ ಬರಗಾಲ ಬಂದಾಗ ಯಾಕೋಬ ಹಾಗೂ ಅವನ ಮನೆಯವರು ಐಗುಪ್ತಕ್ಕೆ ಬಂದು ನೆಲಸಿದರು. ಅಲ್ಲಿ ಯಾಕೋಬನ ಮಗನಾದ ಯೋಸೇಫನು ಫರೋಹನ ಅರಮನೆಯಲ್ಲಿ ಆಹಾರ ಸರಬರಾಜಿನ ಮೇಲ್ವಿಚಾರಕನಾಗಿದ್ದ. ಅಷ್ಟೇ ಅಲ್ಲ ಆತನು ಫರೋಹನ ಬಲಗೈಯಂತಿದ್ದ. (ಆದಿ. 41:39-41; 42:6) ಅಲ್ಲಿ ಯಾಕೋಬನ ಸಂತಾನದವರ “ಸಂಖ್ಯೆ ಬೆಳೆದು ಹೆಚ್ಚಾಗುತ್ತಾ ಬಂತು.”—ಆದಿ. 48:4; ಅಪೊಸ್ತಲರ ಕಾರ್ಯಗಳು 7:17 ಓದಿ.
ಬಿಡುಗಡೆ ಪಡೆದ ಜನರು
4. ಆರಂಭದಲ್ಲಿ ಐಗುಪ್ತ್ಯರ ಹಾಗೂ ಯಾಕೋಬನ ಸಂತಾನದವರ ಮಧ್ಯೆ ಸಂಬಂಧ ಹೇಗಿತ್ತು?
4 ಯಾಕೋಬನ ಸಂತಾನದವರು ಐಗುಪ್ತ ದೇಶದಲ್ಲಿ 200ಕ್ಕೂ ಹೆಚ್ಚು ವರ್ಷ ನೈಲ್ ನದಿಯ ದಡದಲ್ಲಿದ್ದ ಗೋಷೆನ್ ಎಂಬಲ್ಲಿ ವಾಸಿಸುತ್ತಿದ್ದರು. (ಆದಿ. 45:9, 10) ಆ ಅವಧಿಯಲ್ಲಿ ಸುಮಾರು 100 ವರ್ಷ ಅವರ ಹಾಗೂ ಐಗುಪ್ತ್ಯರ ಮಧ್ಯೆ ಶಾಂತಿ ಇತ್ತು. ಇಸ್ರಾಯೇಲ್ಯರು ಅಲ್ಲಿ ಚಿಕ್ಕ ಚಿಕ್ಕ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಪಶುಗಳನ್ನು, ಕುರಿ ಹಿಂಡುಗಳನ್ನು ಸಾಕುತ್ತಿದ್ದರು. ಫರೋಹನಿಗೆ ಯೋಸೇಫನ ಬಗ್ಗೆ ಚೆನ್ನಾಗಿ ಗೊತ್ತಿತ್ತು ಮತ್ತು ಅವನನ್ನು ತುಂಬ ಮೆಚ್ಚುತ್ತಿದ್ದನು. ಆದ್ದರಿಂದಲೇ ಅವನು ಇಸ್ರಾಯೇಲ್ಯರನ್ನು ಐಗುಪ್ತಕ್ಕೆ ಸಂತೋಷದಿಂದ ಸ್ವಾಗತಿಸಿದ್ದನು. (ಆದಿ. 47:1-6) ಆದರೆ ಐಗುಪ್ತ್ಯರು ಕುರುಬರನ್ನು ಕಂಡರೆ ಅಸಹ್ಯಪಡುತ್ತಿದ್ದರು. (ಆದಿ. 46:31-34) ಹಾಗಿದ್ದರೂ ಇಸ್ರಾಯೇಲ್ಯರು ತಮ್ಮ ಮಧ್ಯೆ ಜೀವಿಸುವುದನ್ನು ಐಗುಪ್ತ್ಯರು ಸಹಿಸಿಕೊಳ್ಳಬೇಕಿತ್ತು.
5, 6. (ಎ) ಐಗುಪ್ತದಲ್ಲಿ ದೇವಜನರ ಪರಿಸ್ಥಿತಿ ಬದಲಾದದ್ದು ಹೇಗೆ? (ಬಿ) ಮೋಶೆ ಪಾರಾದದ್ದು ಹೇಗೆ? (ಸಿ) ಯೆಹೋವನು ತನ್ನ ಜನರಿಗಾಗಿ ಏನು ಮಾಡಿದನು?
5 ಆದರೆ ದೇವಜನರ ಪರಿಸ್ಥಿತಿ ಬದಲಾಗಲಿತ್ತು. “ಯೋಸೇಫನನ್ನು ಅರಿಯದ ಬೇರೊಬ್ಬ ಅರಸನು ಐಗುಪ್ತದೇಶದ ಆಳಿಕೆಗೆ ಬಂದನು. ಅವನು ತನ್ನ ಜನರಿಗೆ—ಇಸ್ರಾಯೇಲ್ಯರು ನಮ್ಮ ಅಧೀನದಲ್ಲಿರದಷ್ಟು ಬಹಳವಾಗಿಯೂ ಬಲವಾಗಿಯೂ ಇದ್ದಾರೆ ನೋಡಿರಿ . . . ಎಂದು ಹೇಳಿದನು. ಐಗುಪ್ತ್ಯರು ಇಸ್ರಾಯೇಲ್ಯರ ಕೈಯಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡು ಮಣ್ಣಿನ ಕೆಲಸದಲ್ಲಿಯೂ ಇಟ್ಟಿಗೆಮಾಡುವ ಕೆಲಸದಲ್ಲಿಯೂ ವ್ಯವಸಾಯದ ಎಲ್ಲಾ ವಿಧವಾದ ಕೆಲಸಗಳಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಗಳನ್ನು ಬೇಸರಪಡಿಸಿದರು. ಅವರು ಅವರಿಂದ ಮಾಡಿಸಿದ ಎಲ್ಲಾ ಸೇವೆಯೂ ಬಹುಕಠೋರವಾಗಿತ್ತು.”—ವಿಮೋ. 1:8-10, 13, 14.
6 ನಂತರ ಇಸ್ರಾಯೇಲ್ಯರ ಎಲ್ಲಾ ಗಂಡು ಕೂಸುಗಳನ್ನು ಕೊಲ್ಲಬೇಕೆಂದು ಫರೋಹನು ಆಜ್ಞೆ ಕೊಟ್ಟನು. (ವಿಮೋ. 1:15, 16) ಮೋಶೆ ಹುಟ್ಟಿದ್ದು ಈ ಸಮಯದಲ್ಲೇ. ಮೋಶೆಗೆ 3 ತಿಂಗಳಿರುವಾಗ ಅವನ ತಾಯಿ ಅವನನ್ನು ನೈಲ್ ನದಿಯಲ್ಲಿ ಜಂಬುಹುಲ್ಲಿನ ಮಧ್ಯೆ ಬಚ್ಚಿಟ್ಟಳು. ಬಚ್ಚಿಟ್ಟ ಮಗು ಫರೋಹನ ಮಗಳ ಕಣ್ಣಿಗೆ ಬಿತ್ತು. ನಂತರ ಅದನ್ನವಳು ದತ್ತು ತೆಗೆದುಕೊಂಡಳು. ಆದರೆ ಮೊದಲ ಕೆಲವು ವರ್ಷ ಮೋಶೆಯನ್ನು ಬೆಳೆಸಿದ್ದು ಅವನ ನಂಬಿಗಸ್ತ ತಾಯಿ ಯೋಕೆಬೆದಳು. ಹೀಗೆ ಅವನು ಯೆಹೋವನ ನಿಷ್ಠಾವಂತ ಆರಾಧಕನಾದ. (ವಿಮೋ. 2:1-10; ಇಬ್ರಿ. 11:23-25) ಆಗ ಯೆಹೋವನು ಇಸ್ರಾಯೇಲ್ಯರು ಅನುಭವಿಸುತ್ತಿದ್ದ ಕಷ್ಟಗಳನ್ನು ನೋಡಿ ಅವರಲ್ಲಿ “ಲಕ್ಷ್ಯವಿಟ್ಟನು.” ಅವರನ್ನು ಐಗುಪ್ತ್ಯರಿಂದ ಬಿಡುಗಡೆ ಮಾಡಲು ನಿರ್ಣಯಿಸಿದನು. ಇದನ್ನು ಮೋಶೆಯ ನಾಯಕತ್ವದ ಕೆಳಗೆ ಮಾಡಿದನು. (ವಿಮೋ. 2:24, 25; 3:9, 10) ಹೀಗೆ ಅವರು ಯೆಹೋವನು “ಬಿಡುಗಡೆ” ಮಾಡಿದ ಜನರಾದರು.—ವಿಮೋ. 15:13; ಧರ್ಮೋಪದೇಶಕಾಂಡ 15:15 ಓದಿ.
ದೊಡ್ಡ ಜನಾಂಗವಾದ ದೇವಜನರು
7, 8. ಯೆಹೋವನ ಜನರು ಪರಿಶುದ್ಧ ಜನಾಂಗವಾದದ್ದು ಹೇಗೆ?
7 ಯೆಹೋವನು ಇಸ್ರಾಯೇಲ್ಯರನ್ನು ಇನ್ನೂ ಒಂದು ಜನಾಂಗವಾಗಿ ಸಂಘಟಿಸಿರಲಿಲ್ಲ. ಹಾಗಿದ್ದರೂ ಅವರನ್ನು ತನ್ನ ಜನರೆಂದು ಗುರುತಿಸಿದ್ದನು. ಆದ್ದರಿಂದಲೇ ಮೋಶೆ ಆರೋನರು ಫರೋಹನ ಬಳಿ ಹೋಗಿ ಹೀಗನ್ನುವಂತೆ ನಿರ್ದೇಶನ ಕೊಟ್ಟನು: “ಇಸ್ರಾಯೇಲ್ಯರ ದೇವರಾದ ಯೆಹೋವನು—ನನ್ನ ಜನರು ನನಗಾಗಿ ಅರಣ್ಯದೊಳಗೆ ಜಾತ್ರೆ ನಡಿಸುವಂತೆ ಅವರಿಗೆ ಅಪ್ಪಣೆಕೊಡಬೇಕೆಂದು ಹೇಳಿದ್ದಾನೆ.”—ವಿಮೋ. 5:1.
8 ಇಸ್ರಾಯೇಲ್ಯರನ್ನು ಐಗುಪ್ತ್ಯರ ದಬ್ಬಾಳಿಕೆಯಿಂದ ಬಿಡಿಸಲು ಯೆಹೋವನು ಹತ್ತು ಬಾಧೆಗಳನ್ನು ತಂದನು. ಮಾತ್ರವಲ್ಲ ಕೆಂಪು ಸಮುದ್ರದಲ್ಲಿ ಫರೋಹನನ್ನು ಮತ್ತವನ ಸೈನ್ಯವನ್ನೂ ನಾಶಮಾಡಿದನು. (ವಿಮೋ. 15:1-4) ಇದಾಗಿ ಮೂರು ತಿಂಗಳೊಳಗೆ ಯೆಹೋವನು ಸೀನಾಯಿ ಬೆಟ್ಟದಲ್ಲಿ ಇಸ್ರಾಯೇಲ್ಯರ ಜೊತೆ ಒಂದು ಒಡಂಬಡಿಕೆ ಮಾಡಿ ಹೀಗಂದನು: “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ; . . . ಪರಿಶುದ್ಧಜನವೂ ಆಗಿರುವಿರಿ.”—ವಿಮೋ. 19:5, 6.
9, 10. (ಎ) ಧರ್ಮೋಪದೇಶಕಾಂಡ 4:5-8ಕ್ಕನುಸಾರ ದೇವರು ಕೊಟ್ಟ ನಿಯಮಗಳು ಇಸ್ರಾಯೇಲ್ಯರನ್ನು ಬೇರೆ ಜನಾಂಗಗಳಿಂದ ಪ್ರತ್ಯೇಕಿಸಿದ್ದು ಹೇಗೆ? (ಬಿ) ತಾವು ‘ಯೆಹೋವನಿಗೋಸ್ಕರ ಮೀಸಲಾದ ಜನರು’ ಎಂದು ಇಸ್ರಾಯೇಲ್ಯರು ಹೇಗೆ ತೋರಿಸಿಕೊಡಬೇಕಿತ್ತು?
9 ಶತಮಾನಗಳ ವರೆಗೆ ಯೆಹೋವನ ಸೇವಕರನ್ನು ಕುಟುಂಬದ ತಲೆಗಳು ಮಾರ್ಗದರ್ಶಿಸುತ್ತಿದ್ದರು. ಅವರು ತಮ್ಮ ಕುಟುಂಬಗಳಿಗೆ ಅಧಿಪತಿಗಳು, ನ್ಯಾಯಸ್ಥಾಪಕರು ಹಾಗೂ ಯಾಜಕರಾಗಿ ಸೇವೆ ಸಲ್ಲಿಸುತ್ತಿದ್ದರು. ಐಗುಪ್ತ್ಯರ ದಾಸರಾಗುವವರೆಗೆ ಇಸ್ರಾಯೇಲ್ಯರಲ್ಲಿ ಈ ರೀತಿಯ ನಾಯಕತ್ವವಿತ್ತು. (ಆದಿ. 8:20; 18:19; ಯೋಬ 1:4, 5) ಆದರೆ ಇಸ್ರಾಯೇಲ್ಯರನ್ನು ಐಗುಪ್ತ್ಯರ ದಾಸತ್ವದಿಂದ ಬಿಡಿಸಿದ ನಂತರ ಯೆಹೋವನು ಮೋಶೆಯ ಮೂಲಕ ಅವರಿಗೆ ನಿಯಮಗಳನ್ನು ಅಥವಾ ಧರ್ಮಶಾಸ್ತ್ರವನ್ನು ಕೊಟ್ಟನು. ಇದು ಇಸ್ರಾಯೇಲ್ಯರನ್ನು ಬೇರೆ ಜನಾಂಗಗಳಿಂದ ಪ್ರತ್ಯೇಕಿಸಿತು. (ಧರ್ಮೋಪದೇಶಕಾಂಡ 4:5-8 ಓದಿ; ಕೀರ್ತ. 147:19, 20) ಧರ್ಮಶಾಸ್ತ್ರವು ಇಸ್ರಾಯೇಲ್ಯರಿಗಾಗಿ ಒಂದು ಪ್ರತ್ಯೇಕ ಯಾಜಕವರ್ಗದ ಏರ್ಪಾಡು ಮಾಡಿತು. ಅಲ್ಲದೆ ತಿಳುವಳಿಕೆ ಹಾಗೂ ವಿವೇಕಕ್ಕೆ ಮಾನ್ಯತೆ ಪಡೆದಿದ್ದ ‘ಹಿರಿಯರು’ ನ್ಯಾಯಸ್ಥಾಪಕರಾಗಿರುವಂತೆ ಏರ್ಪಡಿಸಲಾಯಿತು. (ಧರ್ಮೋ. 25:7, 8) ಆರಾಧನೆ ಹಾಗೂ ದಿನನಿತ್ಯದ ಜೀವನದ ಬಗ್ಗೆಯೂ ಧರ್ಮಶಾಸ್ತ್ರದಲ್ಲಿ ಈ ಹೊಸ ಜನಾಂಗಕ್ಕೆ ಸ್ಪಷ್ಟ ನಿರ್ದೇಶನಗಳನ್ನು ಕೊಡಲಾಯಿತು.
10 ಯೆಹೋವನು ತಾನು ಕೊಟ್ಟ ನಿಯಮಗಳನ್ನು ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕೆ ಸ್ವಲ್ಪ ಮುಂಚೆ ಪುನಃ ಅವರಿಗೆ ನೆನಪುಹುಟ್ಟಿಸಿದನು. ಮೋಶೆ ಅವರಿಗೆ ಹೇಳಿದ್ದು: “ಯೆಹೋವನೋ ನಿಮ್ಮ ವಿಷಯದಲ್ಲಿ—ಇವರು ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸುವ ಪಕ್ಷಕ್ಕೆ ನನ್ನ ವಾಗ್ದಾನಾನುಸಾರ ನನಗೆ ಸ್ವಕೀಯಜನರಾಗಿರುವರೆಂದೂ ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತಲೂ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನುಂಟುಮಾಡುವೆನೆಂದೂ ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಯೆಹೋವನಿಗೋಸ್ಕರ ಮೀಸಲಾದ ಜನರಾಗುವರೆಂದೂ ಒಡಂಬಟ್ಟಿದ್ದಾನೆ.”—ಧರ್ಮೋ. 26:18, 19.
ಪರದೇಶಿಯರನ್ನು ಸೇರಿಸಿಕೊಳ್ಳಲಾಯಿತು
11-13. (ಎ) ಯೆಹೋವನ ಸ್ವಕೀಯ ಜನರೊಂದಿಗೆ ಯಾರು ಸಹ ಸೇರಿಕೊಂಡರು? (ಬಿ) ಇಸ್ರಾಯೇಲ್ಯರಲ್ಲದವರು ಯೆಹೋವನನ್ನು ಆರಾಧಿಸಲು ಬಯಸುವಲ್ಲಿ ಏನು ಮಾಡಬೇಕಿತ್ತು?
11 ಯೆಹೋವನಿಗೆ ಈಗ ಭೂಮಿಯಲ್ಲಿ ತನ್ನ ಸ್ವಂತ ಜನಾಂಗ ಇದ್ದರೂ ಅವರ ಮಧ್ಯೆ ಅನ್ಯಜನರ ಉಪಸ್ಥಿತಿಯನ್ನು ಆತನು ತಡೆಯಲಿಲ್ಲ. ಐಗುಪ್ತದಿಂದ ಬಿಡುಗಡೆಯಾದ ‘ಬಹುಮಂದಿಯಲ್ಲಿ’ ಇಸ್ರಾಯೇಲ್ಯರಲ್ಲದ ಇತರರು, ಐಗುಪ್ತ್ಯರು ಕೂಡ ಅವರೊಂದಿಗೆ ಬರಲು ಯೆಹೋವನು ಅನುಮತಿಸಿದನು. (ವಿಮೋ. 12:38) ಐಗುಪ್ತ್ಯರ ಮೇಲೆ ಏಳನೆಯ ಬಾಧೆ ಬಂದಾಗ “ಫರೋಹನ ಸೇವಕರಲ್ಲಿ” ಕೆಲವರು ಯೆಹೋವನ ಮಾತಿಗೆ ಹೆದರಿ ಐಗುಪ್ತವನ್ನು ಬಿಟ್ಟು ಬಂದ ಬಹುಮಂದಿಯಲ್ಲಿ ಸೇರಿಕೊಂಡರು ಎನ್ನುವುದರಲ್ಲಿ ಸಂಶಯವಿಲ್ಲ.—ವಿಮೋ. 9:20.
12 ಯೊರ್ದನ್ ನದಿಯನ್ನು ದಾಟಿ ಕಾನಾನ್ ದೇಶವನ್ನು ವಶಪಡಿಸಿಕೊಳ್ಳುವ ಮೊದಲು ಮೋಶೆ ಇಸ್ರಾಯೇಲ್ಯರಿಗೆ ತಮ್ಮ ಮಧ್ಯೆ ಇದ್ದ ‘ಪರದೇಶದವರನ್ನು ಪ್ರೀತಿಸುವಂತೆ’ ಹೇಳಿದನು. (ಧರ್ಮೋ. 10:17-19) ಮೋಶೆ ಕೊಟ್ಟ ದಶಾಜ್ಞೆಯಂಥ ಮೂಲಭೂತ ನಿಯಮಗಳನ್ನು ಪಾಲಿಸಲು ಸಿದ್ಧರಿರುವ ಪರದೇಶಿಯರನ್ನು ಇಸ್ರಾಯೇಲ್ಯರು ತಮ್ಮ ಜೊತೆ ಸೇರಿಸಿಕೊಳ್ಳಬೇಕಿತ್ತು. (ಯಾಜ. 24:22) ಅವರಲ್ಲಿ ಕೆಲವರು ಯೆಹೋವನ ಆರಾಧಕರಾದರು. ಮೋವಾಬ್ಯಳಾದ ರೂತಳು ಇಸ್ರಾಯೇಲ್ಯಳಾದ ನವೊಮಿಗೆ ಹೇಳಿದ ಮಾತುಗಳನ್ನು ಒಂದರ್ಥದಲ್ಲಿ ಇವರೂ ಹೇಳಿದಂತಿತ್ತು: “ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.” (ರೂತ. 1:16) ಈ ಪರದೇಶಿಯರು ಮತಾಂತರ ಹೊಂದಿದರು. ಇವರಲ್ಲಿ ಗಂಡಸರು ಸುನ್ನತಿ ಮಾಡಿಸಿಕೊಂಡರು. (ವಿಮೋ. 12:48, 49) ಯೆಹೋವನು ಅವರನ್ನು ತನ್ನ ಸ್ವಂತ ಜನಾಂಗದಲ್ಲಿ ಸೇರಿಸಿಕೊಂಡನು.—ಅರ. 15:14, 15.
13 ಇಸ್ರಾಯೇಲ್ಯರಲ್ಲದ ಆರಾಧಕರಿಗಿದ್ದ ಏರ್ಪಾಡಿನ ಕುರಿತು ಸೊಲೊಮೋನನು ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ಪ್ರಾರ್ಥಿಸಿದ್ದು: “ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಸೇರದಂಥ ಒಬ್ಬೊಬ್ಬ ಪರದೇಶಿಯೂ ನಿನ್ನ ನಾಮಮಹತ್ತು ಭುಜಬಲ ಶಿಕ್ಷಾಹಸ್ತ ಇವುಗಳ ವರ್ತಮಾನ ಕೇಳಿ ದೂರದೇಶದಿಂದ ಬಂದು ಈ ಆಲಯದ ಮುಂದೆ ನಿಂತು ನಿನ್ನನ್ನು ಪ್ರಾರ್ಥಿಸುವದಾದರೆ ನಿನ್ನ ನಿವಾಸವಾಗಿರುವ ಪರಲೋಕದಿಂದ ಅವರ ಪ್ರಾರ್ಥನೆಯನ್ನು ಕೇಳಿ ಅವರು ಬೇಡಿಕೊಂಡದ್ದನ್ನು ಅನುಗ್ರಹಿಸು. ಆಗ ಲೋಕದ ಎಲ್ಲಾ ಜನರೂ ನಿನ್ನ ನಾಮಮಹತ್ತನ್ನು ತಿಳಿದು ನಿನ್ನ ಜನರಾದ ಇಸ್ರಾಯೇಲ್ಯರಂತೆ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ ನಾನು ಈ ಆಲಯವನ್ನು ನಿನ್ನ ಹೆಸರಿನದಾಗಿ ಕಟ್ಟಿಸಿದ್ದೇನೆಂದು ತಿಳಿದುಕೊಳ್ಳುವರು.” (2 ಪೂರ್ವ. 6:32, 33) ಇಸ್ರಾಯೇಲ್ಯರಲ್ಲದವರು ಯೆಹೋವನನ್ನು ಆರಾಧಿಸಲು ಬಯಸುವಲ್ಲಿ ಯೆಹೋವನು ಯಾರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದನೋ ಆ ಜನರೊಂದಿಗೇ ಅವರು ಆರಾಧಿಸಬೇಕಿತ್ತು. ಯೇಸುವಿನ ದಿನಗಳಲ್ಲೂ ಇದು ನಿಜವಾಗಿತ್ತು.—ಯೋಹಾ. 12:20; ಅ. ಕಾ. 8:27.
ಸಾಕ್ಷಿಗಳಿಂದ ಕೂಡಿದ ಜನಾಂಗ
14-16. (ಎ) ಇಸ್ರಾಯೇಲ್ಯರು ಹೇಗೆ ಯೆಹೋವನಿಗೆ ಸಾಕ್ಷಿಗಳಾಗಿರುವ ಜನಾಂಗವಾದರು? (ಬಿ) ಯೆಹೋವನ ಆಧುನಿಕ ದಿನದ ಜನರಿಗೆ ಯಾವ ನೈತಿಕ ಹೊಣೆ ಇದೆ?
14 ಇಸ್ರಾಯೇಲ್ಯರು ತಮ್ಮ ದೇವರಾದ ಯೆಹೋವನನ್ನು ಆರಾಧಿಸಿದರು. ಆದರೆ ಬೇರೆ ಜನಾಂಗದವರು ತಮ್ಮ ಸ್ವಂತ ದೇವರುಗಳನ್ನು ಆರಾಧಿಸುತ್ತಿದ್ದರು. ಪ್ರವಾದಿ ಯೆಶಾಯನ ಸಮಯದಲ್ಲಿ ಯೆಹೋವನು ಈ ಲೋಕದ ಪರಿಸ್ಥಿತಿಯನ್ನು ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯ ದೃಶ್ಯಕ್ಕೆ ಹೋಲಿಸುತ್ತಾನೆ. ತಮ್ಮ ದೇವತ್ವವನ್ನು ರುಜುಪಡಿಸಲು ಸಾಕ್ಷಿಗಳನ್ನು ಮುಂದೆ ತರುವಂತೆ ಸವಾಲೆಸೆಯುತ್ತಾ ಯೆಹೋವನು ಜನಾಂಗಗಳ ದೇವರುಗಳಿಗೆ ಅಂದದ್ದು: “ಎಲ್ಲಾ ಜನಾಂಗಗಳು ಒಟ್ಟಿಗೆ ಬರಲಿ, ಸಕಲದೇಶೀಯರು ನೆರೆಯಲಿ, ಇವರ ದೇವರುಗಳಲ್ಲಿ ಯಾರು ಈ ಸಂಗತಿಯನ್ನು ಮುಂತಿಳಿಸಬಲ್ಲರು? ನಡೆದ ಸಂಗತಿಯನ್ನು ಯಾರು ವಿವರಿಸಾರು? ತಾವು ಸತ್ಯವಂತರೆಂದು ಸ್ಥಾಪಿಸಿಕೊಳ್ಳುವದಕ್ಕೆ ಸಾಕ್ಷಿಗಳನ್ನು ಕರತರಲಿ; ಆ ಸಾಕ್ಷಿಗಳು ಇವರ ಮಾತನ್ನು ಕೇಳಿ ನಿಜವೆಂದು ಹೇಳಲಿ.”—ಯೆಶಾ. 43:9.
15 ಜನಾಂಗಗಳ ದೇವರುಗಳು ತಮ್ಮ ದೇವತ್ವವನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಅವು ಬರೀ ವಿಗ್ರಹಗಳಾಗಿದ್ದವು. ಅವುಗಳಿಗೆ ಮಾತಾಡಲು ಬರುತ್ತಿರಲಿಲ್ಲ ಮತ್ತು ಅವುಗಳನ್ನು ಹೊತ್ತುಕೊಂಡು ಹೋಗಬೇಕಿತ್ತು. (ಯೆಶಾ. 46:5-7) ಆದರೆ ಯೆಹೋವನು ತನ್ನ ಜನರಾದ ಇಸ್ರಾಯೇಲ್ಯರಿಗೆ ಅಂದದ್ದು: “ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು; ನೀವು ನನ್ನನ್ನು ತಿಳಿದು ನಂಬಿ ನನ್ನನ್ನೇ ಪರಮಾತ್ಮನು ಎಂದು ಗ್ರಹಿಸುವ ಹಾಗೆ ಇದನ್ನು ನಡಿಸಿದೆನು; ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ, ನನ್ನ ಅನಂತರದಲ್ಲಿಯೂ ಇರುವದಿಲ್ಲ. ನಾನೇ, ನಾನೇ ಯೆಹೋವನು; ನಾನು ಹೊರತು ಯಾವ ರಕ್ಷಕನೂ ಇಲ್ಲ. . . . ನೀವೇ ನನ್ನ ಸಾಕ್ಷಿಗಳು, ನಾನೊಬ್ಬನೇ ದೇವರು.”—ಯೆಶಾ. 43:10-12.
16 ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲುವ ಸಾಕ್ಷಿಗಳಂತೆ ಯೆಹೋವನ ಜನರಿಗೆ ಸಾಕ್ಷ್ಯ ಕೊಡುವ ಸುಯೋಗವಿತ್ತು. ಯಾವುದರ ಬಗ್ಗೆ? ಆತನೇ ಏಕೈಕ ಸತ್ಯ ದೇವರೆಂಬುದರ ಬಗ್ಗೆ. ಆತನು ತನ್ನ ಜನರನ್ನು ‘ನನ್ನ ಸ್ತೋತ್ರವನ್ನು ಪ್ರಚಾರಪಡಿಸಲಿ ಎಂದು ನಾನು ಸೃಷ್ಟಿಸಿಕೊಂಡ ಆಪ್ತಜನರು’ ಎಂದು ಕರೆದನು. (ಯೆಶಾ. 43:20) ಅವರು ಯೆಹೋವನ ಹೆಸರನ್ನು ಹೊಂದಿದ್ದ ಜನರಾಗಿದ್ದರು. ಐಗುಪ್ತದಿಂದ ಬಿಡುಗಡೆ ಪಡೆದಿದ್ದ ಅವರಿಗೆ ಯೆಹೋವನ ಪರಮಾಧಿಕಾರವನ್ನು ಇತರ ಜನಾಂಗಗಳ ಮುಂದೆ ಬೆಂಬಲಿಸುವ ನೈತಿಕ ಹೊಣೆಯಿತ್ತು. ಮುಂದೆ ಪ್ರವಾದಿ ಮೀಕನು ತಿಳಿಸಿದಂಥ ಈ ಮನೋಭಾವ ಅವರಿಗಿರಬೇಕಿತ್ತು: “ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ; ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.” ಈ ಮನೋಭಾವ ದೇವರ ಆಧುನಿಕ ಕಾಲದ ಜನರಿಗಿರಬೇಕೆಂದು ಮೀಕನು ಮುಂತಿಳಿಸಿದ್ದನು.—ಮೀಕ 4:5.
ದಂಗೆಕೋರ ಜನಾಂಗ
17. ಯೆಹೋವನ ದೃಷ್ಟಿಯಲ್ಲಿ ಇಸ್ರಾಯೇಲ್ ಜನಾಂಗ ಪ್ರಯೋಜನಕ್ಕೆ ಬಾರದ “ಕಾಡುದ್ರಾಕ್ಷೇಬಳ್ಳಿ” ಆದದ್ದು ಹೇಗೆ?
17 ದುಃಖಕರವಾಗಿ ಇಸ್ರಾಯೇಲ್ಯರು ತಮ್ಮ ದೇವರಾದ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಲಿಲ್ಲ. ಅವರು ಮರ ಹಾಗೂ ಕಲ್ಲುಗಳಿಂದ ಮಾಡಲಾದ ದೇವರುಗಳನ್ನು ಆರಾಧಿಸುತ್ತಿದ್ದ ಜನಾಂಗಗಳನ್ನು ಅನುಸರಿಸಲು ಆರಂಭಿಸಿದರು. ಕ್ರಿ.ಪೂ. 8ನೇ ಶತಮಾನದಲ್ಲಿ ಪ್ರವಾದಿ ಹೋಶೇಯನು ಇಸ್ರಾಯೇಲ್ ಜನಾಂಗವು ಪ್ರಯೋಜನಕ್ಕೆ ಬಾರದ ದ್ರಾಕ್ಷಾಬಳ್ಳಿಯಂತಿದೆ ಎಂದು ಹೇಳಿದನು. ಆತನು ಮುಂದುವರಿಸಿದ್ದು: “ಇಸ್ರಾಯೇಲು . . . ಯಜ್ಞವೇದಿಗಳನ್ನು ಹೆಚ್ಚಿಸಿಕೊಂಡಿದೆ; . . . ಇಸ್ರಾಯೇಲ್ಯರ ಮನಸ್ಸು ನುಣುಚಿಕೊಳ್ಳುತ್ತದೆ; ಈಗ ದಂಡನೆಗೆ ಈಡಾಗಿದ್ದಾರೆ.” (ಹೋಶೇ. 10:1, 2) ಯೆರೆಮೀಯನು 150 ವರ್ಷಗಳು ಕಳೆದ ನಂತರ ಯೆಹೋವನು ಅಪನಂಬಿಗಸ್ತ ಇಸ್ರಾಯೇಲ್ಯರಿಗೆ ಹೇಳಿದ ಈ ಮಾತುಗಳನ್ನು ಬರೆದನು: “ನಾನು ನಿನ್ನನ್ನು ಅತ್ಯುತ್ತಮ ಬೀಜದಿಂದ ಬೆಳೆದ ಒಳ್ಳೆಯ ದ್ರಾಕ್ಷಾಲತೆಯನ್ನಾಗಿ ನೆಟ್ಟಿರಲು ನೀನು ನನಗೆ ಕಾಡುದ್ರಾಕ್ಷೇಬಳ್ಳಿಯ ಕೆಟ್ಟ ರೆಂಬೆಗಳಾದದ್ದೇನು? . . . ನೀನು ನಿರ್ಮಿಸಿಕೊಂಡ ದೇವರುಗಳು ಎಲ್ಲಿ? ನಿನಗೆ ಕೇಡು ಸಂಭವಿಸಿದಾಗ ನಿನ್ನನ್ನುದ್ಧರಿಸಲು ಶಕ್ತರಾದರೆ ಏಳಲಿ! . . . ನನ್ನ ಜನರೋ . . . ನನ್ನನ್ನು ಮರೆ ತಿದ್ದಾರೆ.”—ಯೆರೆ. 2:21, 28, 32.
18, 19. (ಎ) ತನ್ನ ಹೆಸರಿಗಾಗಿ ಹೊಸ ಜನಾಂಗವನ್ನು ಸ್ಥಾಪಿಸುವೆನೆಂದು ಯೆಹೋವನು ಮುಂತಿಳಿಸಿದ್ದು ಹೇಗೆ? (ಬಿ) ಮುಂದಿನ ಲೇಖನದಲ್ಲಿ ನಾವೇನನ್ನು ಚರ್ಚಿಸುವೆವು?
18 ಇಸ್ರಾಯೇಲ್ಯರು ಶುದ್ಧಾರಾಧನೆಯನ್ನು ಅನುಸರಿಸಿ, ಯೆಹೋವನಿಗೆ ನಂಬಿಗಸ್ತ ಸಾಕ್ಷಿಗಳಾಗಿದ್ದು ಒಳ್ಳೇ ಫಲಗಳನ್ನು ಕೊಡುವ ಬದಲು ವಿಗ್ರಹಾರಾಧನೆ ಮಾಡುವ ಮೂಲಕ ಕೊಳೆತ ಫಲವನ್ನು ಕೊಟ್ಟರು. ಆದ್ದರಿಂದ ಯೇಸು ತನ್ನ ದಿನಗಳಲ್ಲಿದ್ದ ಕಪಟಿಗಳಾದ ಯೆಹೂದಿ ಮುಖಂಡರಿಗೆ ಹೇಳಿದ್ದು: “ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲ್ಪಡುವುದು.” (ಮತ್ತಾ. 21:43) ಪ್ರವಾದಿ ಯೆರೆಮೀಯನ ಮೂಲಕ ಯೆಹೋವನು ಮುಂತಿಳಿಸಿದ ‘ಹೊಸ ಒಡಂಬಡಿಕೆಯಲ್ಲಿ’ ಇರುವವರು ಮಾತ್ರ ಹೊಸ ಜನಾಂಗವಾದ ಆಧ್ಯಾತ್ಮಿಕ ಇಸ್ರಾಯೇಲಿನ ಭಾಗವಾಗಲಿದ್ದರು. ಆ ಹೊಸ ಒಡಂಬಡಿಕೆಯಲ್ಲಿ ಭಾಗಿಗಳಾಗಲಿದ್ದ ಆಧ್ಯಾತ್ಮಿಕ ಇಸ್ರಾಯೇಲ್ಯರ ಕುರಿತು ಯೆಹೋವನು ಪ್ರವಾದಿಸಿದ್ದು: “ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.”—ಯೆರೆ. 31:31-33.
19 ನಾವೀಗಾಗಲೇ ನೋಡಿರುವಂತೆ ಮಾಂಸಿಕ ಇಸ್ರಾಯೇಲ್ಯರು ಅಪನಂಬಿಗಸ್ತರಾದ ನಂತರ ಮೊದಲನೇ ಶತಮಾನದಲ್ಲಿ ಯೆಹೋವನು ಆಧ್ಯಾತ್ಮಿಕ ಇಸ್ರಾಯೇಲ್ಯರನ್ನು ತನ್ನ ಜನರಾಗಿ ಆರಿಸಿಕೊಂಡನು. ಆದರೆ ಇಂದು ಭೂಮಿಯಲ್ಲಿ ಆತನನ್ನು ಪ್ರತಿನಿಧಿಸುವ ಜನರು ಯಾರು? ಸಹೃದಯದ ಜನರು ಆ ಸತ್ಯಾರಾಧಕರನ್ನು ಗುರುತಿಸುವುದು ಹೇಗೆ? ಇದನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.