ಯೆಹೋವನ ವಾಕ್ಯವು ಸಜೀವವಾದದ್ದು
ಕೀರ್ತನೆಗಳ ತೃತೀಯ ಮತ್ತು ಚತುರ್ಥ ಭಾಗಗಳ ಮುಖ್ಯಾಂಶಗಳು
ದೇವರಿಗೆ ಮಾಡಿದ ಪ್ರಾರ್ಥನೆಯೊಂದರಲ್ಲಿ ಕೀರ್ತನೆಗಾರನು ಕೇಳುವುದು: “ಸಮಾಧಿಯಲ್ಲಿ ನಿನ್ನ ಕೃಪೆಯನ್ನೂ ನಾಶಲೋಕದಲ್ಲಿ ನಿನ್ನ ಸತ್ಯತೆಯನ್ನೂ ಸಾರುವದುಂಟೋ?” (ಕೀರ್ತನೆ 88:11) ಉತ್ತರವು ನಿಶ್ಚಯವಾಗಿಯೂ ಇಲ್ಲವೆಂದಾಗಿದೆ. ಏಕೆಂದರೆ ಜೀವವಿಲ್ಲದೆ ನಾವು ಯೆಹೋವನನ್ನು ಸ್ತುತಿಸಲಾರೆವು. ಯೆಹೋವನನ್ನು ಸ್ತುತಿಸುವುದು ನಮಗೆ ಜೀವಿಸಲು ಒಂದು ಒಳ್ಳೆಯ ಕಾರಣವಾಗಿದೆ, ಅದೇ ಸಮಯದಲ್ಲಿ ನಾವು ಜೀವದಿಂದಿರುವುದು ಆತನನ್ನು ಸ್ತುತಿಸಲು ಒಂದು ಒಳ್ಳೆಯ ಕಾರಣವಾಗಿದೆ.
ಕೀರ್ತನೆಗಳ ತೃತೀಯ ಮತ್ತು ಚತುರ್ಥ ಭಾಗಗಳು 73ರಿಂದ 106ರ ವರೆಗಿನ ಕೀರ್ತನೆಗಳನ್ನು ಒಳಗೂಡಿವೆ. ಈ ಭಾಗಗಳು ಸೃಷ್ಟಿಕರ್ತನನ್ನು ಸ್ತುತಿಸಲು ಮತ್ತು ಆತನ ನಾಮವನ್ನು ಕೊಂಡಾಡಲು ನಮಗೆ ಹಲವಾರು ಕಾರಣಗಳನ್ನು ಕೊಡುತ್ತವೆ. ಈ ಕೀರ್ತನೆಗಳ ಬಗ್ಗೆ ಧ್ಯಾನಿಸುವುದು, ‘ದೇವರ ವಾಕ್ಯದ’ ಕಡೆಗೆ ನಮಗಿರುವ ಕೃತಜ್ಞತಾಭಾವವನ್ನು ಹೆಚ್ಚಿಸಿ ಆತನನ್ನು ಸ್ತುತಿಸಲು ಬಳಸುವ ಅಭಿವ್ಯಕ್ತಿಗಳನ್ನು ವರ್ಧಿಸಿ ಇನ್ನಷ್ಟು ಉತ್ತಮಗೊಳಿಸುವಂತೆ ನಮ್ಮನ್ನು ಪ್ರೋತ್ಸಾಹಿಸಬೇಕು. (ಇಬ್ರಿಯ 4:12) ನಾವು ಮೊದಲಾಗಿ, ಕೀರ್ತನೆಗಳ ತೃತೀಯ ಭಾಗಕ್ಕೆ ನಮ್ಮ ತೀವ್ರಾಸಕ್ತಿಯ ಗಮನಕೊಡೋಣ.
“ನನಗಾದರೋ ದೇವರ ಸಮೀಪಕ್ಕೆ ಬರುವುದೇ ಒಳ್ಳೆಯದಾಗಿದೆ”
ತೃತೀಯ ಭಾಗದ ಮೊದಲ 11 ಕೀರ್ತನೆಗಳು ಆಸಾಫನಿಂದ ಅಥವಾ ಅವನ ಮನೆತನದ ಸದಸ್ಯರಿಂದ ರಚಿಸಲ್ಪಟ್ಟಿವೆ. ಆರಂಭದ ಗೀತೆಯು ಆಸಾಫನು ತಪ್ಪಾಲೋಚನೆಗಳಿಂದ ದಾರಿತಪ್ಪಿ ಹೋಗದಂತೆ ಯಾವುದು ಬಚಾವುಮಾಡಿತೆಂದು ವಿವರಿಸುತ್ತದೆ. ಅವನು ಸರಿಯಾದ ತೀರ್ಮಾನಕ್ಕೆ ಬಂದಿದ್ದಾನೆ. ಅವನು ಹಾಡುವುದು: “ನನಗಾದರೋ ದೇವರ ಸಮೀಪಕ್ಕೆ ಬರುವುದೇ ಒಳ್ಳೆಯದಾಗಿದೆ.” (ಕೀರ್ತನೆ 73:28, NIBV) ಇದರ ನಂತರ ಬರುವ 74ನೇ ಕೀರ್ತನೆಯು ಯೆರೂಸಲೇಮಿನ ನಾಶನದ ಬಗ್ಗೆ ಒಂದು ರೋದನವಾಗಿದೆ. 75, 76 ಮತ್ತು 77ನೇ ಕೀರ್ತನೆಗಳು ಯೆಹೋವನನ್ನು ಒಬ್ಬ ನೀತಿವಂತ ನ್ಯಾಯಾಧೀಶ, ದೀನರ ರಕ್ಷಕ ಮತ್ತು ಪ್ರಾರ್ಥನೆಗಳನ್ನು ಕೇಳುವಾತನೆಂದು ವರ್ಣಿಸುತ್ತವೆ. 78ನೇ ಕೀರ್ತನೆಯು ಮೋಶೆಯಿಂದ ಹಿಡಿದು ದಾವೀದನ ಕಾಲದ ವರೆಗಿನ ಇಸ್ರಾಯೇಲಿನ ಇತಿಹಾಸವನ್ನು ಪುನರ್ವಿಮರ್ಶಿಸುತ್ತದೆ. 79ನೆಯ ಕೀರ್ತನೆಯು ದೇವಾಲಯದ ನಾಶನದ ಕುರಿತು ರೋದಿಸುತ್ತದೆ. ತದನಂತರದ ಕೀರ್ತನೆಯು ದೇವಜನರ ಪುನಃಸ್ಥಾಪನೆಗಾಗಿರುವ ಒಂದು ಪ್ರಾರ್ಥನೆಯಾಗಿದೆ. 81ನೇ ಕೀರ್ತನೆಯು ಯೆಹೋವನಿಗೆ ವಿಧೇಯತೆ ತೋರಿಸುವಂತೆ ಉತ್ತೇಜಿಸುತ್ತದೆ. 82ನೇ ಮತ್ತು 83ನೇ ಕೀರ್ತನೆಗಳು ಭ್ರಷ್ಟ ನ್ಯಾಯಾಧಿಪತಿಗಳ ಮತ್ತು ದೇವರ ವೈರಿಗಳ ಮೇಲೆ ದೈವಿಕ ನ್ಯಾಯತೀರ್ಪು ಬಂದೆರಗಬೇಕೆಂದು ಕೇಳಿಕೊಳ್ಳುವ ಪ್ರಾರ್ಥನೆಗಳಾಗಿವೆ.
ಕೋರಹೀಯರ ಕೀರ್ತನೆಯೊಂದು ಹೀಗನ್ನುತ್ತದೆ: “ಯೆಹೋವನ ಆಲಯದ ಅಂಗಳಗಳಲ್ಲಿ ಸೇರಬೇಕೆಂದು ನನ್ನ ಆತ್ಮವು ಹಂಬಲಿಸುತ್ತಾ ಕುಂದಿಹೋಗಿತ್ತು.” (ಕೀರ್ತನೆ 84:2) ಗಡೀಪಾರು ಮಾಡಲ್ಪಟ್ಟವರಲ್ಲಿ ಹಿಂದಿರುಗಿದವರನ್ನು ದೇವರು ಹರಸಬೇಕೆಂಬ ಬಿನ್ನಹ 85ನೇ ಕೀರ್ತನೆಯಲ್ಲಿದೆ. ಭೌತಿಕ ಆಶೀರ್ವಾದಗಳಿಗಿಂತ ಆಧ್ಯಾತ್ಮಿಕ ಆಶೀರ್ವಾದಗಳು ಎಷ್ಟೋ ಹೆಚ್ಚು ಅಮೂಲ್ಯವೆಂದು ಈ ಕೀರ್ತನೆ ಒತ್ತಿಹೇಳುತ್ತದೆ. 86ನೆಯ ಕೀರ್ತನೆಯಲ್ಲಿ ದಾವೀದನು, ದೇವರು ತನ್ನ ಮೇಲೆ ಕಾವಲಿರಿಸುವಂತೆ ಮತ್ತು ತನಗೆ ಉಪದೇಶಕೊಡುವಂತೆ ಕೇಳಿಕೊಳ್ಳುತ್ತಿದ್ದಾನೆ. 87ನೆಯ ಕೀರ್ತನೆಯು ಚೀಯೋನಿನ ಮತ್ತು ಅಲ್ಲಿ ಹುಟ್ಟಿದವರ ಕುರಿತಾದ ಸ್ತುತಿಗೀತೆಯಾಗಿದೆ ಮತ್ತು 88ನೆಯ ಕೀರ್ತನೆಯು ಯೆಹೋವನಿಗೆ ಮಾಡಲ್ಪಟ್ಟ ಒಂದು ಪ್ರಾರ್ಥನೆ ಆಗಿದೆ. ದಾವೀದನೊಂದಿಗಿನ ಒಡಂಬಡಿಕೆಯಲ್ಲಿ ತೋರಿಬರುವಂಥ ಯೆಹೋವನ ಪ್ರೀತಿಪೂರ್ವಕ ದಯೆಯನ್ನು 89ನೆಯ ಕೀರ್ತನೆಯಲ್ಲಿ ಎತ್ತಿಹೇಳಲಾಗಿದೆ. ಈ ಕೀರ್ತನೆಯನ್ನು ಪ್ರಾಯಶಃ ಸೊಲೊಮೋನನ ದಿನದಲ್ಲಿದ್ದ ನಾಲ್ಕು ಮಂದಿ ಜ್ಞಾನಿಗಳಲ್ಲಿ ಒಬ್ಬನಾಗಿದ್ದ ಏತಾನನು ರಚಿಸಿದ್ದನು.—1 ಅರಸುಗಳು 4:31.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
73:9—ದುಷ್ಟರು “ಮೇಲುಲೋಕದವರೋ ಎಂಬಂತೆ ದೊಡ್ಡ ಬಾಯಿಮಾಡುತ್ತಾರೆ. ಭೂಲೋಕದಲ್ಲೆಲ್ಲಾ ಅವರ ಮಾತೇ ಮುಂದು.” ಹೇಗೆ? ದುಷ್ಟರು, ಮೇಲಣಲೋಕದಲ್ಲಿ ಅಂದರೆ ಪರಲೋಕದಲ್ಲಿ ಅಥವಾ ಭೂಮಿಯಲ್ಲಿ ಯಾರನ್ನೂ ಮಾನ್ಯಮಾಡದೆ ಇರುವುದರಿಂದ ತಮ್ಮ ಮಾತುಗಳಿಂದ ದೇವರನ್ನೂ ದೂಷಿಸಲು ಹಿಂಜರಿಯುವುದಿಲ್ಲ. ಅವರು ಮನುಷ್ಯರ ಬಗ್ಗೆಯೂ ಚಾಡಿ ಹೇಳುತ್ತಾರೆ.
74:14—ಯೆಹೋವನು, ‘ಲಿವ್ಯಾತಾನನ ಶಿರಃಖಂಡನಮಾಡಿದ್ದು’ ಯಾವಾಗ? ‘ಐಗುಪ್ತದ ಅರಸನಾದ ಫರೋಹನನ್ನು, ನದೀ ಶಾಖೆಗಳ ನಡುವೆ ಒರಗಿಕೊಂಡಿರುವ ಪೇರ್ಮೊಸಳೆ’ ಎಂದು ಕರೆಯಲಾಗಿದೆ. (ಯೆಹೆಜ್ಕೇಲ 29:3) ಈ ಪೇರ್ಮೊಸಳೆ ಫರೋಹನ ಬಲಿಷ್ಠರನ್ನು ಸಹ ಪ್ರತಿನಿಧಿಸಬಹುದು. (ಕೀರ್ತನೆ 74:14, NW ಪಾದಟಿಪ್ಪಣಿ) ಅವರ ಶಿರಃಖಂಡನೆಯು, ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದ ಸೆರೆಯಿಂದ ಬಿಡಿಸಿದಾಗ ಫರೋಹನಿಗೂ ಅವನ ಸೈನ್ಯದವರಿಗೂ ಆದ ಸಂಪೂರ್ಣ ಸೋಲಿಗೆ ಪ್ರಾಯಶಃ ಸೂಚಿಸಬಹುದು.
75:4, 5, 10—“ಕೊಂಬು” ಎಂಬ ಪದದಿಂದ ಏನು ಸೂಚಿಸಲ್ಪಟ್ಟಿದೆ? ಪ್ರಾಣಿಗೆ ಕೊಂಬುಗಳು ಬಲಾಢ್ಯ ಆಯುದ್ಧಗಳಾಗಿವೆ. ಹಾಗಾಗಿ “ಕೊಂಬು” ಸಾಂಕೇತಿಕವಾಗಿ ಶಕ್ತಿ ಅಥವಾ ಬಲವನ್ನು ಸೂಚಿಸುತ್ತದೆ. ಯೆಹೋವನು ತನ್ನ ಜನರ ಕೊಂಬುಗಳನ್ನು ಮೇಲೆತ್ತುವ ಮೂಲಕ ಅವರನ್ನು ಘನಪಡಿಸುತ್ತಾನೆ ಆದರೆ ‘ದುಷ್ಟರ ಕೊಂಬುಗಳನ್ನೆಲ್ಲಾ ಮುರಿದುಬಿಡುವನು.’ ನಮ್ಮ ‘ಕೊಂಬುಗಳನ್ನು ಮೇಲೆತ್ತಬಾರದು’ ಅಂದರೆ, ಹೆಮ್ಮೆ ಇಲ್ಲವೆ ಗರ್ವಿಷ್ಟ ಮನೋಭಾವವನ್ನು ನಾವೆಂದಿಗೂ ತಾಳಬಾರದೆಂದು ಎಚ್ಚರಿಸಲಾಗಿದೆ. ಮೇಲೆತ್ತುವುದು ಯೆಹೋವನ ಕೆಲಸವಾಗಿರುವುದರಿಂದ, ಸಭೆಯಲ್ಲಿನ ಜವಾಬ್ದಾರಿಯ ನೇಮಕಗಳನ್ನು ಮಾಡುವವನು ಆತನೇ ಎಂಬ ದೃಷ್ಟಿಕೋನ ನಮಗಿರಬೇಕು.—ಕೀರ್ತನೆ 75:7.
76:10—‘ಮನುಷ್ಯರ ಕೋಪವು’ ಯೆಹೋವನನ್ನು ಹೇಗೆ ಘನಪಡಿಸಸಾಧ್ಯವಿದೆ? ನಾವು ಯೆಹೋವನ ಸೇವಕರಾಗಿದ್ದೇವೆಂಬ ಕಾರಣಕ್ಕಾಗಿ ಜನರು ತಮ್ಮ ಕೋಪವನ್ನು ನಮ್ಮ ಮೇಲೆ ತೋರಿಸುವುದನ್ನು ದೇವರು ಅನುಮತಿಸುವಾಗ, ಒಳ್ಳೆಯ ಫಲಿತಾಂಶವು ಸಿಗುವುದು. ನಾವು ಅನುಭವಿಸಬೇಕಾದ ಯಾವುದೇ ಕಷ್ಟವು ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ತರಬೇತುಗೊಳಿಸಸಾಧ್ಯವಿದೆ. ಇಂಥ ತರಬೇತನ್ನು ಕೊಡುವುದಕ್ಕಾಗಿಯೇ ಯೆಹೋವನು ಕಷ್ಟಗಳನ್ನು ಅನುಮತಿಸುತ್ತಾನೆ. (1 ಪೇತ್ರ 5:10) ಆತನು ‘ಮನುಷ್ಯರ ಕೋಪಶೇಷವನ್ನು ನಡುಕಟ್ಟಿನಂತೆ ಬಿಗಿದುಕೊಳ್ಳುತ್ತಾನೆ.’ ಆದರೆ ನಾವು ಸಾಯುವಷ್ಟರ ಮಟ್ಟಿಗೆ ಕಷ್ಟಾನುಭವಿಸುವುದಾದರೆ ಆಗೇನು? ಇದು ಸಹ ಯೆಹೋವನನ್ನು ಘನಪಡಿಸಸಾಧ್ಯವಿದೆ ಹೇಗೆಂದರೆ, ನಾವು ನಂಬಿಗಸ್ತಿಕೆಯಿಂದ ತಾಳುವುದನ್ನು ಯಾರು ನೋಡುತ್ತಾರೊ ಅವರು ಸಹ ದೇವರನ್ನು ಸ್ತುತಿಸಲಾರಂಭಿಸಬಹುದು.
78:24, 25—ಇಸ್ರಾಯೇಲ್ಯರಿಗೆ ಒದಗಿಸಲಾದ ಮನ್ನವನ್ನು “ಸ್ವರ್ಗಧಾನ್ಯ” ಮತ್ತು “ದೇವದೂತರ ಆಹಾರ” ಎಂದು ಏಕೆ ಕರೆಯಲಾಗಿದೆ? ಮನ್ನವು ದೇವದೂತರು ಸೇವಿಸುತ್ತಿದ್ದ ಆಹಾರವಾಗಿತ್ತು ಎಂದು ಈ ಎರಡೂ ಅಭಿವ್ಯಕ್ತಿಗಳ ಅರ್ಥವಲ್ಲ. ಅದು “ಸ್ವರ್ಗಧಾನ್ಯ”ವಾಗಿತ್ತು ಏಕೆಂದರೆ ಅದು ಯೆಹೋವನ ಅಪ್ಪಣೆಯಂತೆ ಸ್ವರ್ಗದಿಂದ ಬರುತ್ತಿತ್ತು. (ಕೀರ್ತನೆ 105:40) ದೇವದೂತರು ಸ್ವರ್ಗದಲ್ಲಿ ವಾಸಿಸುವುದರಿಂದ “ದೇವದೂತರ ಆಹಾರ” ಎಂಬ ವಾಕ್ಸರಣಿಯ ಅರ್ಥವು, ಅದನ್ನು ಸ್ವರ್ಗದಲ್ಲಿರುವ ದೇವರು ಒದಗಿಸಿದ್ದನು ಎಂದಾಗಿರಬಹುದು. (ಕೀರ್ತನೆ 11:4) ಇಸ್ರಾಯೇಲ್ಯರಿಗೆ ಮನ್ನವನ್ನು ಒದಗಿಸಲು ಯೆಹೋವನು ದೇವದೂತರನ್ನು ಉಪಯೋಗಿಸಿದ್ದಿರಲೂಬಹುದು.
82:1, 6—‘ದೇವರುಗಳು’ ಮತ್ತು “ಪರಾತ್ಪರನ ಮಕ್ಕಳು” ಯಾರಾಗಿದ್ದಾರೆ? ಈ ಎರಡೂ ಅಭಿವ್ಯಕ್ತಿಗಳು ಇಸ್ರಾಯೇಲಿನಲ್ಲಿದ್ದ ಮಾನವ ನ್ಯಾಯಾಧೀಶರನ್ನು ಸೂಚಿಸುತ್ತವೆ. ಈ ಬಿರುದುಗಳು ಅವರಿಗೆ ಸೂಕ್ತವಾಗಿವೆ ಏಕೆಂದರೆ, ಅವರು ದೇವರ ವಕ್ತಾರರಂತೆಯೂ ಆತನ ಪ್ರತಿನಿಧಿಗಳಂತೆಯೂ ಸೇವೆಸಲ್ಲಿಸುತ್ತಿದ್ದರು.—ಯೋಹಾನ 10:33-36.
83:2—ಒಬ್ಬನು ‘ತಲೆಯೆತ್ತುವುದು’ ಯಾವುದನ್ನು ಸೂಚಿಸುತ್ತದೆ? ಈ ಭಾವಾಭಿನಯವು ಹೆಚ್ಚಾಗಿ ವಿರೋಧಿಸಲು, ಹೋರಾಡಲು ಅಥವಾ ದಬ್ಬಾಳಿಕೆ ನಡೆಸಲು ಬಲ ಪ್ರಯೋಗಿಸುವುದಕ್ಕೆ ಅಥವಾ ಕ್ರಿಯೆಗೈಯುವುದಕ್ಕೆ ಸಿದ್ಧರಾಗಿರುವುದನ್ನು ಸೂಚಿಸುತ್ತದೆ.
ನಮಗಾಗಿರುವ ಪಾಠಗಳು:
73:2-5, 18-20, 25, 28. ನಾವು ದುಷ್ಟರ ಸಮೃದ್ಧಿಯನ್ನು ನೋಡಿ ಉರಿಗೊಂಡು ಅವರ ಭಕ್ತಿಹೀನ ಮಾರ್ಗಗಳನ್ನು ನಮ್ಮದಾಗಿ ಮಾಡಬಾರದು. ದುಷ್ಟರು ಜಾರುವ ನೆಲದಲ್ಲಿದ್ದಾರೆ. ಅವರು ಖಂಡಿತವಾಗಿ ‘ಬಿದ್ದು ನಾಶವಾಗಲಿದ್ದಾರೆ.’ ಅಷ್ಟುಮಾತ್ರವಲ್ಲದೆ ಅಪರಿಪೂರ್ಣ ಮಾನವ ಆಳ್ವಿಕೆಯ ಕೆಳಗೆ ದುಷ್ಟತನವನ್ನು ತೆಗೆಯಲು ಸಾಧ್ಯವಿಲ್ಲದಿರುವುದರಿಂದ, ಅದನ್ನು ನಿರ್ಮೂಲಗೊಳಿಸಲು ನಾವು ಪ್ರಯತ್ನಮಾಡುವುದಾದರೂ ಅದು ವ್ಯರ್ಥವಾಗಿರುವುದು. ಆಸಾಫನಂತೆಯೇ ನಾವು ದೇವರ ‘ಸಾನಿಧ್ಯದ’ ಬಳಿ ಅಥವಾ ಆತನ ಸಮೀಪಕ್ಕೆ ಬರುವ ಮೂಲಕ ಮತ್ತು ಆತನೊಂದಿಗೆ ಒಂದು ನಿಕಟ ಸಂಬಂಧವನ್ನು ಇಟ್ಟುಕೊಳ್ಳುವ ಮೂಲಕ ದುಷ್ಟತನವನ್ನು ನಿಭಾಯಿಸಿದರೆ ನಾವು ವಿವೇಕಿಗಳು.
73:3, 6, 8, 27. ಕೊಚ್ಚಿಕೊಳ್ಳುವುದು, ಗರ್ವತೋರಿಸುವುದು, ಅಪಹಾಸ್ಯಮಾಡುವುದು ಮತ್ತು ಮೋಸಮಾಡುವುದರಿಂದ ದೂರವಿರಲು ನಾವು ಎಚ್ಚರವಹಿಸಬೇಕು. ಇಂಥ ಗುಣಗಳನ್ನು ಹೊಂದುವುದು ಕೆಲವೊಮ್ಮೆ ಪ್ರಯೋಜನದಾಯಕವಾಗಿ ತೋರುವುದಾದರೂ ನಾವು ಅವುಗಳಿಂದ ದೂರವಿರಬೇಕು.
73:15-17. ನಮ್ಮ ವಿಚಾರಗಳು ಗಲಿಬಿಲಿಯದ್ದಾಗಿರುವಲ್ಲಿ, ಅವುಗಳನ್ನು ಎಲ್ಲರ ಮುಂದೆ ಹೇಳಿಬಿಡುವುದರಿಂದ ನಮ್ಮನ್ನು ತಡೆದುಕೊಳ್ಳಬೇಕು. “ಈ ಪ್ರಕಾರ ಬಾಯಿಬಿಡುವುದು” ಇತರರನ್ನು ಖಂಡಿತವಾಗಿಯೂ ನಿರುತ್ಸಾಹಗೊಳಿಸುವುದು. ನಮ್ಮ ಚಿಂತೆಗಳ ಕುರಿತು ಶಾಂತವಾಗಿ ಧ್ಯಾನಿಸಿ ಅವುಗಳನ್ನು ಜೊತೆ ವಿಶ್ವಾಸಿಗಳೊಂದಿಗೆ ಸಹವಾಸ ಮಾಡುವ ಮೂಲಕ ಬಗೆಹರಿಸಬೇಕು.—ಜ್ಞಾನೋಕ್ತಿ 18:1.
73:21-24. ದುಷ್ಟರು ಕ್ಷೇಮದಿಂದಿರುವುದನ್ನು ನೋಡಿ ‘ಮನಸ್ಸಿನಲ್ಲಿ ನೊಂದುಕೊಳ್ಳುವುದನ್ನು,’ ಬುದ್ಧಿಯಿಲ್ಲದ ಪ್ರಾಣಿಗಳು ಪ್ರತಿಕ್ರಿಯಿಸುವ ರೀತಿಗೆ ಹೋಲಿಸಲಾಗಿದೆ. ಈ ಪ್ರತಿಕ್ರಿಯೆಯು ತಟ್ಟನೆ ಹುಟ್ಟುವಂಥದ್ದಾಗಿದ್ದು ಭಾವನೆಗಳ ಮೇಲಾಧರಿತವಾಗಿದೆ. ಹೀಗಿರುವ ಬದಲಿಗೆ, ಯೆಹೋವನು ನಮ್ಮ ‘ಬಲಗೈಯನ್ನು ಹಿಡಿದು’ ನಮ್ಮನ್ನು ಬೆಂಬಲಿಸುವನೆಂಬ ಪೂರ್ಣ ಭರವಸೆಯುಳ್ಳವರಾಗಿ ನಾವು ಆತನ ಸಲಹೆಯಿಂದ ನಡೆಸಲ್ಪಡಬೇಕು. ಇನ್ನೂ ಹೆಚ್ಚಾಗಿ, ಯೆಹೋವನು ನಮ್ಮನ್ನು ‘ಮಹಿಮೆಗೆ’ ಅಂದರೆ ತನ್ನ ನಿಕಟ ಸಂಬಂಧದೊಳಗೆ ‘ಸೇರಿಸಿಕೊಳ್ಳುವನು’.
77:6. ಆಧ್ಯಾತ್ಮಿಕ ಸತ್ಯಗಳ ಕುರಿತು ಹೃತ್ಪೂರ್ವಕ ಆಸಕ್ತಿ ತೋರಿಸಲು ಮತ್ತು ಅದನ್ನು ಜಾಗರೂಕತೆಯಿಂದ ಹುಡುಕಲು ಮಾಡಬೇಕಾದ ಅಧ್ಯಯನ ಹಾಗೂ ಧ್ಯಾನಕ್ಕಾಗಿ ಸಮಯವು ಆವಶ್ಯ. ಆದುದರಿಂದ ಏಕಾಂತದಲ್ಲಿರಲು ನಮ್ಮ ಜೀವಿತದಲ್ಲಿ ಸಮಯಮಾಡಿಕೊಳ್ಳುವುದು ಎಷ್ಟು ಪ್ರಾಮುಖ್ಯ!
79:9. ನಮ್ಮ ಪ್ರಾರ್ಥನೆಗಳು, ಮುಖ್ಯವಾಗಿ ಯೆಹೋವನ ನಾಮದ ಪವಿತ್ರೀಕರಣದ ಬಗ್ಗೆ ಇರುವಾಗ ಆತನು ಅವುಗಳನ್ನು ಆಲಿಸುತ್ತಾನೆ.
81:13, 16. ಯೆಹೋವನ ಮಾತಿಗೆ ಕಿವಿಗೊಡುವುದು ಮತ್ತು ಆತನ ಮಾರ್ಗಗಳಲ್ಲಿ ನಡೆಯುವುದು ಹೇರಳವಾದ ಆಶೀರ್ವಾದಗಳಿಗೆ ನಡೆಸುತ್ತದೆ.—ಜ್ಞಾನೋಕ್ತಿ 10:22.
82:2, 5. ಅನ್ಯಾಯವು ‘ಭೂಮಿಯ ಅಸ್ತಿವಾರಗಳೆಲ್ಲಾ ಕದಲುವಂತೆ’ ಮಾಡುತ್ತದೆ. ಅನ್ಯಾಯದ ಕೃತ್ಯಗಳು ಮಾನವ ಸಮಾಜದ ಸ್ಥಿರತೆಯನ್ನು ಅಲುಗಾಡಿಸುತ್ತವೆ.
84:1-4, 10-12. ಕೀರ್ತನೆಗಾರರಿಗೆ ಯೆಹೋವನ ಆರಾಧನಾ ಸ್ಥಳಕ್ಕಾಗಿ ಇದ್ದ ಕೃತಜ್ಞತಾಭಾವ ಮತ್ತು ಸೇವಾ ಅವಕಾಶಗಳ ಬಗ್ಗೆ ಇದ್ದ ಸಂತೃಪ್ತಿಯ ಮನೋಭಾವವು ನಮಗೆ ಉತ್ತಮ ಉದಾಹರಣೆಯಾಗಿದೆ.
86:5. ಯೆಹೋವನು ‘ಕ್ಷಮಿಸಲು ಸಿದ್ಧನು’ (NIBV) ಆಗಿರುವುದಕ್ಕೆ ನಾವೆಷ್ಟು ಕೃತಜ್ಞರು! ಆತನು ಒಬ್ಬ ಪಶ್ಚಾತ್ತಾಪಿ ತಪ್ಪಿತಸ್ಥನಿಗೆ ಕರುಣೆತೋರಿಸಲು ಆಧಾರವಾಗುವ ಯಾವುದಾದರೂ ಪುರಾವೆಗಾಗಿ ಹುಡುಕುತ್ತಾ ಇರುತ್ತಾನೆ.
87:5, 6. ಭೂಪರದೈಸಿನಲ್ಲಿ ಜೀವವನ್ನು ಪಡೆಯಲಿರುವವರು, ಸ್ವರ್ಗೀಯ ಜೀವನಕ್ಕೆ ಪುನರುತ್ಥಾನಗೊಂಡವರ ಹೆಸರುಗಳನ್ನು ತಿಳಿಯುವರೊ? ಹೀಗಾಗುವ ಸಂಭಾವ್ಯತೆ ಇದೆ ಎಂದು ಈ ವಚನಗಳು ಸೂಚಿಸುತ್ತವೆ.
88:13, 14. ಒಂದು ನಿರ್ದಿಷ್ಟ ಸಮಸ್ಯೆಯ ಕುರಿತಾದ ನಮ್ಮ ಪ್ರಾರ್ಥನೆಗಳಿಗೆ ಉತ್ತರ ಸಿಗಲು ತಡವಾದರೆ ಅದರರ್ಥ, ಯೆಹೋವನ ಕಡೆಗೆ ನಮಗಿರುವ ಭಕ್ತಿ ಎಷ್ಟು ನೈಜವಾದದ್ದಾಗಿದೆ ಎಂದು ನಾವು ತೋರಿಸಿಕೊಡಲು ಆತನು ಬಯಸುತ್ತಾನೆ ಎಂದಾಗಿರಬಹುದು.
“ಆತನ ಉಪಕಾರ ಸ್ಮರಿಸಿರಿ; ಆತನ ನಾಮವನ್ನು ಕೊಂಡಾಡಿರಿ”
ಕೀರ್ತನೆಗಳ ಚತುರ್ಥ ಭಾಗದಲ್ಲಿ ಯೆಹೋವನ ಗುಣಗಾನಮಾಡಲಿಕ್ಕಾಗಿರುವ ವಿವಿಧ ಕಾರಣಗಳನ್ನು ಪರಿಗಣಿಸಿರಿ. 90ನೆಯ ಕೀರ್ತನೆಯಲ್ಲಿ ಮೋಶೆಯು, ‘ನಿತ್ಯವಾದ ಅರಸನ’ ಅಸ್ತಿತ್ವಕ್ಕೂ ಮನುಷ್ಯನ ಕ್ಷಣಿಕ ಜೀವನಕ್ಕೂ ಇರುವ ತಾರತಮ್ಯವನ್ನು ತೋರಿಸುತ್ತಿದ್ದಾನೆ. (1 ತಿಮೊಥೆಯ 1:17, NIBV) ಕೀರ್ತನೆ 91:2ರ ಪ್ರಕಾರ ಮೋಶೆಯು, ಯೆಹೋವನು ತನ್ನ ‘ಶರಣನೂ ದುರ್ಗವೂ’ ಅಂದರೆ ತನ್ನ ಭದ್ರತೆಯ ತಾಣನಾಗಿದ್ದಾನೆಂದು ಸೂಚಿಸುತ್ತಾನೆ. ತದನಂತರದ ಕೆಲವು ಕೀರ್ತನೆಗಳು ದೇವರ ಮನೋಹರ ಗುಣಗಳು, ಉಚ್ಚ ಆಲೋಚನೆಗಳು ಮತ್ತು ಅದ್ಭುತ ಕೃತ್ಯಗಳ ಬಗ್ಗೆ ಮಾತಾಡುತ್ತವೆ. ಮೂರು ಕೀರ್ತನೆಗಳು, “ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ” ಎಂಬ ಅಭಿವ್ಯಕ್ತಿಯಿಂದ ಪ್ರಾರಂಭಗೊಳ್ಳುತ್ತವೆ. (ಕೀರ್ತನೆ 93:1; 97:1; 99:1) ಯೆಹೋವನು ನಮ್ಮನ್ನು ಉಂಟುಮಾಡಿದವನು ಎಂಬುದನ್ನು ಹೇಳುತ್ತಾ, ‘ಆತನ ಉಪಕಾರ ಸ್ಮರಿಸಿ ಆತನ ನಾಮವನ್ನು ಕೊಂಡಾಡಲು’ ಕೀರ್ತನೆಗಾರನು ನಮಗೆ ಕರೆನೀಡುತ್ತಾನೆ.—ಕೀರ್ತನೆ 100:4.
ಯೆಹೋವನಿಗೆ ಭಯಪಡುವ ಒಬ್ಬ ಅಧಿಪತಿಯು ತನ್ನ ರಾಜ್ಯಭಾರವನ್ನು ಹೇಗೆ ನಿರ್ವಹಿಸಬೇಕು? ರಾಜ ದಾವೀದನಿಂದ ರಚಿಸಲ್ಪಟ್ಟ 101ನೇ ಕೀರ್ತನೆಯು ಇದಕ್ಕೆ ಉತ್ತರವನ್ನು ಕೊಡುತ್ತದೆ. ತದನಂತರದ ಕೀರ್ತನೆಯು, ಯೆಹೋವನು ‘ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸುವನೆಂದು’ ಹೇಳುತ್ತದೆ. (ಕೀರ್ತನೆ 102:15) 103ನೇ ಕೀರ್ತನೆಯು ಯೆಹೋವನ ಪ್ರೀತಿಪೂರ್ವಕ ದಯೆ ಮತ್ತು ಕನಿಕರದ ಕಡೆಗೆ ಗಮನಸೆಳೆಯುತ್ತದೆ. ಭೂಮಿಯ ಮೇಲಿನ ದೇವರ ಅನೇಕಾನೇಕ ಕೆಲಸಗಳಿಗೆ ಸೂಚಿಸುತ್ತಾ ದಾವೀದನು ಉದ್ಗರಿಸುವುದು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿದ್ದೀ.” (ಕೀರ್ತನೆ 104:24) ಚತುರ್ಥ ಭಾಗದ ಕೊನೆಯ ಎರಡು ಗೀತೆಗಳು ಯೆಹೋವನು ಮಾಡಿದ ಅದ್ಭುತ ಕಾರ್ಯಗಳನ್ನು ಕೊಂಡಾಡುತ್ತವೆ.—ಕೀರ್ತನೆ 105:2, 5; 106:7, 22.
ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:
91:1, 2—“ಪರಾತ್ಪರನ ಮರೆ” ಅಥವಾ ‘ರಹಸ್ಯ ಸ್ಥಾನ’ (NW) ಅಂದರೇನು ಮತ್ತು ನಾವು ಅಲ್ಲಿ ಹೇಗೆ ‘ಇರಬಲ್ಲೆವು’ (NW)? ಇದು ಆಧ್ಯಾತ್ಮಿಕ ಸುರಕ್ಷೆ ಮತ್ತು ಭದ್ರತೆಯ ಸಾಂಕೇತಿಕ ಸ್ಥಳವಾಗಿದೆ—ಆಧ್ಯಾತ್ಮಿಕ ಹಾನಿಯಿಂದ ಸಂರಕ್ಷಣೆಯ ಒಂದು ಸ್ಥಿತಿ. ಆದರೆ ಇದು ರಹಸ್ಯವಾಗಿದೆ ಏಕೆಂದರೆ ದೇವರಲ್ಲಿ ಭರವಸೆಯಿಡದವರಿಗೆ ಇದೇನು ಎಂದು ತಿಳಿದಿಲ್ಲ. ಪರಾತ್ಪರನನ್ನು ನಮ್ಮ ಶರಣನು ಮತ್ತು ದುರ್ಗವೆಂದು ಅವಲಂಬಿಸುವ ಮೂಲಕ, ವಿಶ್ವದ ಪರಮಾಧಿಕಾರಿ ಪ್ರಭುವಾಗಿ ಆತನನ್ನು ಸ್ತುತಿಸುವ ಮೂಲಕ ಮತ್ತು ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ ನಾವು ಯೆಹೋವನನ್ನು ನಮ್ಮ ವಾಸಸ್ಥಾನವಾಗಿ ಮಾಡುತ್ತೇವೆ. ಯೆಹೋವನು ಸಹಾಯಮಾಡಲು ಸದಾ ಸಿದ್ಧನಿದ್ದಾನೆಂದು ನಮಗೆ ತಿಳಿದಿರುವುದರಿಂದ ನಮಗೆ ಆಧ್ಯಾತ್ಮಿಕ ಭದ್ರತೆಯ ಅನಿಸಿಕೆ ಇದೆ.—ಕೀರ್ತನೆ 90:1.
92:12—ಯಾವ ವಿಧದಲ್ಲಿ ‘ನೀತಿವಂತರು ಖರ್ಜೂರದ ಮರದಂತೆ ಬೆಳೆಯುತ್ತಾರೆ’? ಖರ್ಜೂರದ ಮರವು ಅದರ ಫಲವತ್ತತೆಗೆ ಪ್ರಸಿದ್ಧವಾಗಿದೆ. ಒಬ್ಬ ನೀತಿವಂತ ಮನುಷ್ಯನು ಖರ್ಜೂರದ ಮರದಂತಿದ್ದಾನೆ, ಹೇಗೆಂದರೆ ಅವನು ಯೆಹೋವನ ದೃಷ್ಟಿಯಲ್ಲಿ ಯಥಾರ್ಥನಾಗಿದ್ದು ಒಳ್ಳೆಯ ಕೃತ್ಯಗಳನ್ನು ಒಳಗೂಡುವ “ಒಳ್ಳೇ ಫಲವನ್ನು” ಕೊಡುತ್ತಾ ಇರುತ್ತಾನೆ.—ಮತ್ತಾಯ 7:17-20.
ನಮಗಾಗಿರುವ ಪಾಠಗಳು:
90:7, 8, 13, 14. ತಪ್ಪು ಕೃತ್ಯವು ಯಾವಾಗಲೂ ಸತ್ಯ ದೇವರೊಂದಿಗೆ ನಮಗಿರುವ ಸಂಬಂಧವನ್ನು ಹಾನಿಗೊಳಿಸುತ್ತದೆ. ಮತ್ತು ಗುಪ್ತ ಪಾಪಗಳನ್ನು ಆತನಿಂದ ಮುಚ್ಚಿಡಲು ಸಾಧ್ಯವಿಲ್ಲ. ಹಾಗಿದ್ದರೂ, ನಾವು ನಿಜವಾಗಿಯೂ ಪಶ್ಚಾತ್ತಾಪಪಟ್ಟು ನಮ್ಮ ತಪ್ಪು ಮಾರ್ಗವನ್ನು ಬಿಟ್ಟುಬಿಡುವುದಾದರೆ ಯೆಹೋವನು ಪುನಃ ನಮಗೆ ಅನುಗ್ರಹವನ್ನು ತೋರಿಸಿ ‘ಕೃಪೆಯಿಂದ ನಮ್ಮನ್ನು ಸಂತೃಪ್ತಿಪಡಿಸುವನು.’
90:10, 12. ಜೀವನವು ಮೊಟಕಾಗಿರುವುದರಿಂದ ನಾವು ನಮ್ಮ ‘ದಿನಗಳನ್ನು ಎಣಿಸಿಕೊಳ್ಳಬೇಕು.’ ಹೇಗೆ? ‘ಜ್ಞಾನದ’ ಇಲ್ಲವೆ ವಿವೇಕದ ‘ಹೃದಯವನ್ನು ಪಡೆದುಕೊಳ್ಳುವ’ ಮೂಲಕ ಅಂದರೆ ವಿವೇಕವನ್ನು ಉಪಯೋಗಿಸಿ ಉಳಿದಿರುವ ದಿನಗಳನ್ನು ವ್ಯರ್ಥಗೊಳಿಸದೆ ಅವುಗಳನ್ನು ಯೆಹೋವನಿಗೆ ಮೆಚ್ಚಿಕೆಯಾಗುವ ರೀತಿಯಲ್ಲಿ ಕಳೆಯುವ ಮೂಲಕವೇ. ಹೀಗೆ ಮಾಡಲು ನಾವು ಆಧ್ಯಾತ್ಮಿಕ ಆದ್ಯತೆಗಳನ್ನಿಡಬೇಕು ಮತ್ತು ನಮ್ಮ ಸಮಯವನ್ನು ಜಾಣ್ಮೆಯಿಂದ ಉಪಯೋಗಿಸಬೇಕು.—ಎಫೆಸ 5:15, 16; ಫಿಲಿಪ್ಪಿ 1:10.
90:17. ನಾವು ‘ಕೈಹಾಕಿದ ಕೆಲಸವನ್ನು ಸಫಲಪಡಿಸಲು’ ಮತ್ತು ಶುಶ್ರೂಷೆಯಲ್ಲಿನ ನಮ್ಮ ಶ್ರಮವನ್ನು ಆಶೀರ್ವದಿಸಲು ಯೆಹೋವನಿಗೆ ಪ್ರಾರ್ಥಿಸುವುದು ಸೂಕ್ತವಾಗಿದೆ.
92:14, 15. ದೇವರ ವಾಕ್ಯದ ಶ್ರದ್ಧಾಪೂರ್ವಕ ವಿದ್ಯಾರ್ಥಿಗಳಾಗಿದ್ದು ಯೆಹೋವನ ಜನರೊಂದಿಗೆ ಕ್ರಮವಾಗಿ ಸಹವಸಿಸುವ ಮೂಲಕ ವೃದ್ಧರು ‘ಪುಷ್ಟಿಯಾಗಿದ್ದು ಶೋಭಿಸುತ್ತಾ’ ಅಂದರೆ, ಆಧ್ಯಾತ್ಮಿಕ ಚೈತನ್ಯವುಳ್ಳವರಾಗಿ ಸಭೆಗೆ ಅಮೂಲ್ಯವಾದ ಸ್ವತ್ತಿನಂತಿದ್ದಾರೆ.
94:19. ನಮ್ಮ ‘ಚಿಂತೆಗಳಿಗೆ’ ಕಾರಣವು ಏನೇ ಆಗಿರಲಿ, ಬೈಬಲಿನಲ್ಲಿ ಕಂಡುಬರುವ “ಸಂತೈಸುವಿಕೆ”ಗಳ ಬಗ್ಗೆ ಓದಿ ಧ್ಯಾನಿಸುವುದು ನಮಗೆ ಸಾಂತ್ವನ ನೀಡುವುದು.
95:7, 8. ಶಾಸ್ತ್ರಾಧಾರಿತ ಸಲಹೆಗೆ ಕಿವಿಗೊಡುವುದು, ಅದಕ್ಕೆ ಗಮನಕೊಡುವುದು ಮತ್ತು ಸಿದ್ಧಮನಸ್ಸಿನಿಂದ ಅದಕ್ಕೆ ವಿಧೇಯರಾಗುವುದು ನಾವು ಕಠಿನ ಹೃದಯದವರಾಗದಂತೆ ಸಹಾಯಮಾಡುತ್ತದೆ.—ಇಬ್ರಿಯ 3:7, 8.
106:36, 37. ಈ ವಚನಗಳು ವಿಗ್ರಹಾರಾಧನೆಯನ್ನು ದೆವ್ವಗಳಿಗೆ ಅರ್ಪಿಸುವ ಬಲಿಗಳೊಂದಿಗೆ ಜೋಡಿಸುತ್ತವೆ. ವಿಗ್ರಹಗಳನ್ನು ಬಳಸುವ ವ್ಯಕ್ತಿಯು ದೆವ್ವಗಳ ಪ್ರಭಾವದಡಿ ಬರಬಹುದೆಂದು ಇದು ತೋರಿಸುತ್ತದೆ. ಹಾಗಾಗಿ ಬೈಬಲ್ ನಮ್ಮನ್ನು ಪ್ರೇರೇಪಿಸುವುದು: “ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.”—1 ಯೋಹಾನ 5:21.
“ಯಾಹುವಿಗೆ ಸ್ತೋತ್ರ!”
ಕೀರ್ತನೆಯ ಚತುರ್ಥ ಭಾಗದ ಕೊನೆಯ ಮೂರು ಗೀತೆಗಳು “ಯಾಹುವಿಗೆ ಸ್ತೋತ್ರ!” ಎಂಬ ಮಾತುಗಳೊಂದಿಗೆ ಸಮಾಪ್ತಿಗೊಳ್ಳುತ್ತವೆ. ಕೊನೆಯ ಕೀರ್ತನೆಯ ಆರಂಭದಲ್ಲಿಯೂ ಈ ಮಾತುಗಳಿವೆ. (ಕೀರ್ತನೆ 104:35; 105:45; 106:1, 48) ವಾಸ್ತವದಲ್ಲಿ, “ಯಾಹುವಿಗೆ ಸ್ತೋತ್ರ!” ಎಂಬ ಅಭಿವ್ಯಕ್ತಿಯು ಕೀರ್ತನೆಯ ಚತುರ್ಥ ಭಾಗದಲ್ಲಿ ಪದೇ ಪದೇ ಕಂಡುಬರುತ್ತದೆ.
ಯೆಹೋವನಿಗೆ ಸ್ತೋತ್ರಸಲ್ಲಿಸಲು ಖಂಡಿತವಾಗಿಯೂ ನಮಗೆ ಅನೇಕ ಕಾರಣಗಳಿವೆ. 73ರಿಂದ 106ರ ವರೆಗಿನ ಕೀರ್ತನೆಗಳು ನಮಗೆ ಧ್ಯಾನಿಸಲು ಅನೇಕ ವಿಚಾರಗಳನ್ನು ಒದಗಿಸುತ್ತವೆ ಮತ್ತು ನಮ್ಮ ಸ್ವರ್ಗೀಯ ಪಿತನ ಕುರಿತು ನಮ್ಮ ಹೃದಯಗಳಲ್ಲಿ ಕೃತಜ್ಞತೆಯನ್ನು ತುಂಬಿಸುತ್ತವೆ. ಆತನು ನಮಗೋಸ್ಕರ ಈಗಾಗಲೇ ಮಾಡಿರುವ ಮತ್ತು ಭವಿಷ್ಯತ್ತಿನಲ್ಲಿ ಮಾಡಲಿರುವ ಎಲ್ಲಾ ವಿಷಯಗಳ ಬಗ್ಗೆ ನಾವು ಯೋಚಿಸುವಾಗ ನಮ್ಮ ಪೂರ್ಣ ಬಲದಿಂದ ‘ಯೆಹೋವನಿಗೆ ಸ್ತೋತ್ರ’ಸಲ್ಲಿಸಲು ನಾವು ಪ್ರಚೋದಿಸಲ್ಪಡುತ್ತೇವೆ ಅಲ್ಲವೇ? (w06 7/15)
[ಪುಟ 4ರಲ್ಲಿರುವ ಚಿತ್ರ]
ಆಸಾಫನಂತೆ ನಾವು ಸಹ ‘ದೇವರ ಸಮೀಪ’ ಬರುವುದರಿಂದ ದುಷ್ಟತನವನ್ನು ನಿಭಾಯಿಸಬಲ್ಲೆವು
[ಪುಟ 5ರಲ್ಲಿರುವ ಚಿತ್ರ]
ಫರೋಹನು ಕೆಂಪು ಸಮುದ್ರದಲ್ಲಿ ಸೋಲನ್ನು ಅನುಭವಿಸುತ್ತಾನೆ
[ಪುಟ 5ರಲ್ಲಿರುವ ಚಿತ್ರ]
ಮನ್ನವನ್ನು ‘ದೇವದೂತರ ಆಹಾರ’ ಎಂದು ಕರೆಯಲಾಗಿರುವ ಕಾರಣ ನಿಮಗೆ ಗೊತ್ತೇ?
[ಪುಟ 6ರಲ್ಲಿರುವ ಚಿತ್ರ]
ನಮ್ಮ ‘ಚಿಂತೆಗಳನ್ನು’ ತೊಲಗಿಸಲು ಯಾವುದು ಸಹಾಯ ಮಾಡುತ್ತದೆ?