ಅಧ್ಯಾಯ ಹದಿನಾಲ್ಕು
ಇಬ್ಬರು ರಾಜರು ತಮ್ಮ ಸ್ವರೂಪವನ್ನು ಬದಲಾಯಿಸುತ್ತಾರೆ
1, 2. (ಎ) ನಾಲ್ಕನೆಯ ಆ್ಯಂಟಾಯೊಕಸನು ರೋಮ್ನ ಬೇಡಿಕೆಗಳಿಗೆ ಮಣಿಯಲು ಯಾವುದು ಕಾರಣವಾಯಿತು? (ಬಿ) ಸಿರಿಯವು ಯಾವಾಗ ರೋಮನ್ ಪ್ರಾಂತವಾಗಿ ಪರಿಣಮಿಸಿತು?
ಸಿರಿಯದ ಸಾಮ್ರಾಟನಾದ IVನೆಯ ಆ್ಯಂಟಾಯೊಕಸನು ಐಗುಪ್ತಕ್ಕೆ ಮುತ್ತಿಗೆ ಹಾಕಿ, ಅದರ ರಾಜನೋಪಾದಿ ಸ್ವತಃ ಕಿರೀಟಧಾರಣೆಮಾಡಿಕೊಳ್ಳುತ್ತಾನೆ. ಐಗುಪ್ತದ ರಾಜನಾದ VIನೆಯ ಟಾಲೆಮಿಯ ಕೋರಿಕೆಯ ಮೇರೆಗೆ, ಗಾಯಸ್ ಪಾಪಿಲಿಯಸ್ ಲೈನಾಸ್ ಎಂಬ ರಾಯಭಾರಿಯನ್ನು ರೋಮ್ ಐಗುಪ್ತಕ್ಕೆ ಕಳುಹಿಸುತ್ತದೆ. ಅವನೊಂದಿಗೆ ತುಂಬ ದೊಡ್ಡ ನೌಕಾ ಬಲವಿದೆ ಮಾತ್ರವಲ್ಲ, IVನೆಯ ಆ್ಯಂಟಾಯೊಕಸನು ಐಗುಪ್ತದ ದೊರೆತನವನ್ನು ತ್ಯಜಿಸಿ, ದೇಶದಿಂದ ಹೊರಗೆಹೋಗಬೇಕು ಎನ್ನುವ ರೋಮನ್ ಶಾಸನಸಭೆಯಿಂದ ಬಂದ ಆಜ್ಞಾಪತ್ರವೂ ಇದೆ. ಆ್ಯಲೆಕ್ಸಾಂಡ್ರಿಯದ ಒಂದು ಪ್ರಾಂತವಾದ ಇಲೂಸಸ್ನಲ್ಲಿ, ಸಿರಿಯದ ರಾಜನೂ ರೋಮನ್ ರಾಯಭಾರಿಯೂ ಮುಖಾಮುಖಿಯಾಗಿ ಸಂಧಿಸುತ್ತಾರೆ. ತನ್ನ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಿಕ್ಕಾಗಿ ಸ್ವಲ್ಪ ಸಮಯಾವಧಿಯನ್ನು ಕೊಡುವಂತೆ IVನೆಯ ಆ್ಯಂಟಾಯೊಕಸನು ಕೇಳಿಕೊಳ್ಳುತ್ತಾನೆ. ಆದರೆ ಲೈನಾಸನು ಆ ರಾಜನ ಸುತ್ತಲೂ ಒಂದು ವೃತ್ತವನ್ನು ಎಳೆದು, ಈ ವೃತ್ತದ ಹೊರಗೆ ಹೆಜ್ಜೆಯಿಡುವ ಮೊದಲು ತನಗೆ ಉತ್ತರ ಕೊಡಬೇಕು ಎಂದು ಹೇಳುತ್ತಾನೆ. ಅವಮಾನಗೊಂಡ IVನೆಯ ಆ್ಯಂಟಾಯೊಕಸನು, ರೋಮನರ ಬೇಡಿಕೆಗಳನ್ನು ಪೂರೈಸುತ್ತಾನೆ ಮತ್ತು ಸಾ.ಶ.ಪೂ. 168ರಲ್ಲಿ ಸಿರಿಯಕ್ಕೆ ಹಿಂದಿರುಗುತ್ತಾನೆ. ಹೀಗೆ ಸಿರಿಯದ ಉತ್ತರ ರಾಜ ಹಾಗೂ ಐಗುಪ್ತದ ದಕ್ಷಿಣ ರಾಜನ ನಡುವಿನ ಸಂಘರ್ಷವು ಕೊನೆಗೊಳ್ಳುತ್ತದೆ.
2 ಮಧ್ಯಪೂರ್ವದ ವ್ಯವಹಾರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ, ರೋಮ್ ಸಿರಿಯದ ಮೇಲೆ ಅಧಿಕಾರ ಚಲಾಯಿಸಲಾರಂಭಿಸುತ್ತದೆ. ಆದುದರಿಂದ, ಸಾ.ಶ.ಪೂ. 163ರಲ್ಲಿ, IVನೆಯ ಆ್ಯಂಟಾಯೊಕಸನು ಮರಣಪಟ್ಟ ಬಳಿಕ ಸೆಲ್ಯೂಕಸ್ ರಾಜವಂಶದ ಇತರ ರಾಜರು ಸಿರಿಯವನ್ನು ಆಳಿದರಾದರೂ, ಅವರಲ್ಲಿ ಯಾರೂ “ಉತ್ತರರಾಜನ” ಸ್ಥಾನವನ್ನು ಪಡೆದುಕೊಳ್ಳಲಿಲ್ಲ. (ದಾನಿಯೇಲ 11:15) ಕೊನೆಯದಾಗಿ, ಸಾ.ಶ.ಪೂ. 64ರಲ್ಲಿ ಸಿರಿಯವು ರೋಮನ್ ಪ್ರಾಂತವಾಗಿ ಪರಿಣಮಿಸುತ್ತದೆ.
3. ಐಗುಪ್ತದ ಮೇಲೆ ರೋಮ್ ಯಾವಾಗ ಮತ್ತು ಹೇಗೆ ಸರ್ವಾಧಿಕಾರವನ್ನು ಪಡೆಯಿತು?
3 ಐಗುಪ್ತದ ಟಾಲೆಮಿಯ ರಾಜವಂಶವು, IVನೆಯ ಆ್ಯಂಟಾಯೊಕಸನ ಮರಣದ ಬಳಿಕ ಸುಮಾರು 130 ವರ್ಷಗಳ ವರೆಗೆ “ದಕ್ಷಿಣರಾಜನ” ಸ್ಥಾನದಲ್ಲೇ ಮುಂದುವರಿಯುತ್ತದೆ. (ದಾನಿಯೇಲ 11:14) ಸಾ.ಶ.ಪೂ. 31ರಲ್ಲಿ, ಆ್ಯಕ್ಟಿಯಮ್ನ ಕದನದ ಸಮಯದಲ್ಲಿ, ರೋಮನ್ ರಾಜನಾದ ಆಕ್ಟೇವಿಯನ್, ಟಾಲೆಮಿಯ ವಂಶದ ಕೊನೆಯ ರಾಣಿಯಾದ VIIನೆಯ ಕ್ಲಿಯೋಪಾತ್ರಳ ಹಾಗೂ ಅವಳ ರೋಮನ್ ಪ್ರಿಯಕರನಾದ ಮಾರ್ಕ್ ಆ್ಯಂಟನಿಯ ಜಂಟಿ ಸೈನ್ಯವನ್ನು ಸೋಲಿಸಿಬಿಡುತ್ತಾನೆ. ಮರುವರ್ಷ ಕ್ಲಿಯೋಪಾತ್ರಳು ಆತ್ಮಹತ್ಯೆಮಾಡಿಕೊಂಡ ಬಳಿಕ, ಐಗುಪ್ತವು ಸಹ ರೋಮನ್ ಪ್ರಾಂತವಾಗಿ ಪರಿಣಮಿಸಿ, ಇನ್ನು ಮುಂದೆ ದಕ್ಷಿಣ ರಾಜನ ಪಾತ್ರವನ್ನು ವಹಿಸುವುದಿಲ್ಲ. ಸಾ.ಶ.ಪೂ. 30ನೆಯ ವರ್ಷದಷ್ಟಕ್ಕೆ, ಸಿರಿಯ ಹಾಗೂ ಐಗುಪ್ತದ ಮೇಲಿನ ಸರ್ವಾಧಿಕಾರವು ರೋಮ್ಗೆ ಸಿಗುತ್ತದೆ. ಈಗ ಬೇರೆ ಆಳ್ವಿಕೆಗಳು, ಉತ್ತರ ರಾಜ ಹಾಗೂ ದಕ್ಷಿಣ ರಾಜನ ಸ್ಥಾನವನ್ನು ಪಡೆದುಕೊಳ್ಳುವಂತೆ ನಾವು ನಿರೀಕ್ಷಿಸಬಹುದೊ?
ಒಬ್ಬ ಹೊಸ ಅರಸನು “ವಸೂಲಿಗಾರನನ್ನು” ಕಳುಹಿಸುತ್ತಾನೆ
4. ಆಳ್ವಿಕೆ ನಡಿಸುವ ಇನ್ನೊಬ್ಬ ರಾಜನು, ಉತ್ತರ ರಾಜನ ಸ್ವರೂಪವನ್ನು ಪಡೆದುಕೊಳ್ಳುವಂತೆ ನಾವು ಏಕೆ ನಿರೀಕ್ಷಿಸಬೇಕು?
4 ಸಾ.ಶ. 33ರ ವಸಂತಕಾಲದಲ್ಲಿ, ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಹೇಳಿದ್ದು: “ಪ್ರವಾದಿಯಾದ ದಾನಿಯೇಲನು ಹೇಳಿದಂಥ ಹಾಳುಮಾಡುವ ಅಸಹ್ಯವಸ್ತುವು ಪವಿತ್ರಸ್ಥಾನದಲ್ಲಿ ನಿಂತಿರುವದನ್ನು ನೀವು ಕಾಣುವಾಗ . . . ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ.” (ಮತ್ತಾಯ 24:15, 16) ದಾನಿಯೇಲ 11:31ರಿಂದ ಉದ್ಧರಿಸುತ್ತಾ, ಯೇಸು ತನ್ನ ಹಿಂಬಾಲಕರಿಗೆ ಭವಿಷ್ಯತ್ತಿನ ‘ಹಾಳುಮಾಡುವ ಅಸಹ್ಯವಸ್ತುವಿನ’ ಕುರಿತು ಎಚ್ಚರಿಸಿದನು. ಉತ್ತರ ರಾಜನನ್ನು ಒಳಗೂಡಿರುವಂತಹ ಈ ಪ್ರವಾದನೆಯು, ಉತ್ತರ ರಾಜನ ಸ್ಥಾನದಲ್ಲಿದ್ದ ಸಿರಿಯದ ಕೊನೆಯ ರಾಜನಾದ IVನೆಯ ಆ್ಯಂಟಾಯೊಕಸನು ಮರಣಪಟ್ಟ 195 ವರ್ಷಗಳ ಬಳಿಕ ಕೊಡಲ್ಪಟ್ಟಿತು. ಖಂಡಿತವಾಗಿಯೂ, ಆಳ್ವಿಕೆ ನಡಿಸುವಂತಹ ಇನ್ನೊಬ್ಬ ರಾಜನು ಉತ್ತರ ರಾಜನ ಸ್ವರೂಪವನ್ನು ಪಡೆದುಕೊಳ್ಳಲಿಕ್ಕಿದ್ದನು. ಅವನು ಯಾರಾಗಿರಲಿದ್ದನು?
5. ಒಂದು ಕಾಲದಲ್ಲಿ IVನೆಯ ಆ್ಯಂಟಾಯೊಕಸನು ಆಕ್ರಮಿಸಿದ್ದ ಸ್ಥಾನವನ್ನು ಪಡೆದುಕೊಳ್ಳುತ್ತಾ, ಯಾರು ಉತ್ತರ ರಾಜನಾಗಿ ಅಧಿಕಾರಕ್ಕೆ ಬಂದನು?
5 ಯೆಹೋವ ದೇವರ ದೂತನು ಮುಂತಿಳಿಸಿದ್ದು: “ಅವನ [IVನೆಯ ಆ್ಯಂಟಾಯೊಕಸನ] ಸ್ಥಾನದಲ್ಲಿ ಮತ್ತೊಬ್ಬನು ಎದ್ದು [“ಅಧಿಕಾರಕ್ಕೆ ಬಂದು,” NW] ರಾಜ್ಯದಲ್ಲಿ ಶಿರೋಮಣಿಯಾದ ದೇಶವನ್ನೆಲ್ಲ ದೋಚಿಕೊಳ್ಳತಕ್ಕವನನ್ನು [“ದೇಶದಲ್ಲಿ ಹಾದುಹೋಗುವ ವಸೂಲಿಗಾರನನ್ನು,” NW] ನೇಮಿಸುವನು; ಆಹಾ, ಕೆಲವು ದಿನಗಳೊಳಗೆ ನಾಶವಾಗುವನು; ಆದರೆ ಕೋಪದ ಪೆಟ್ಟಿನಿಂದಲ್ಲ, ಯುದ್ಧದಿಂದಲೂ ಅಲ್ಲ.” (ದಾನಿಯೇಲ 11:20) ಈ ರೀತಿಯಲ್ಲಿ ‘ಅಧಿಕಾರಕ್ಕೆ ಬಂದ’ವನು, ಮೊತ್ತಮೊದಲ ರೋಮನ್ ಸಾಮ್ರಾಟನಾದ ಆಕ್ಟೇವಿಯನನಾಗಿದ್ದನು. ಅವನು ಕೈಸರ್ ಅಗಸ್ಟಸ್ (ಔಗುಸ್ತ) ಎಂದು ಪ್ರಸಿದ್ಧನಾಗಿದ್ದನು.—248ನೆಯ ಪುಟದಲ್ಲಿರುವ “ಒಬ್ಬನು ಗೌರವಿಸಲ್ಪಟ್ಟನು, ಮತ್ತೊಬ್ಬನು ಕಡೆಗಣಿಸಲ್ಪಟ್ಟನು” ಎಂಬ ಮೇಲ್ಬರಹದ ಕೆಳಗೆ ನೋಡಿ.
6. (ಎ) “ವಸೂಲಿಗಾರನು” ಯಾವಾಗ “ಶಿರೋಮಣಿಯಾದ ದೇಶ”ದ ಮೂಲಕ ಹಾದುಹೋದನು, ಮತ್ತು ಇದರ ವಿಶೇಷತೆ ಏನಾಗಿತ್ತು? (ಬಿ) ಅಗಸ್ಟಸ್ನು “ಕೋಪದ ಪೆಟ್ಟಿನಿಂದ” ಅಥವಾ “ಯುದ್ಧದಿಂದ” ಸಾಯಲಿಲ್ಲ ಎಂದು ಏಕೆ ಹೇಳಸಾಧ್ಯವಿದೆ? (ಸಿ) ಉತ್ತರ ರಾಜನ ಸ್ವರೂಪದಲ್ಲಿ ಯಾವ ಬದಲಾವಣೆಯು ಸಂಭವಿಸಿತು?
6 ಅಗಸ್ಟಸ್ನ “ಶಿರೋಮಣಿಯಾದ ದೇಶ”ದಲ್ಲಿ, “ಅಂದಚಂದದ ದೇಶ”ವು, ಅಂದರೆ ರೋಮನ್ ಪ್ರಾಂತವಾದ ಯೆಹೂದವೂ ಸೇರಿತ್ತು. (ದಾನಿಯೇಲ 11:16) ಸಾ.ಶ.ಪೂ. 2ರಲ್ಲಿ ಅಗಸ್ಟಸನು, ಜನಗಣತಿಗಾಗಿ ಅಥವಾ ಖಾನೇಷುಮಾರಿ ಮಾಡಲಿಕ್ಕಾಗಿ ಆಜ್ಞೆಯನ್ನು ಹೊರಡಿಸುವ ಮೂಲಕ, “ವಸೂಲಿಗಾರನನ್ನು” ಕಳುಹಿಸಿದನು. ತೆರಿಗೆ ಹೊರಿಸಲಿಕ್ಕಾಗಿ ಮತ್ತು ಮಿಲಿಟರಿ ಸೇರ್ಪಡೆಗಾಗಿ, ಜನಸಂಖ್ಯೆಯು ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಅವನು ಹೀಗೆ ಮಾಡಿದ್ದಿರಬಹುದು. ಈ ಆಜ್ಞೆಯ ಕಾರಣದಿಂದಲೇ, ಯೋಸೇಫ ಹಾಗೂ ಮರಿಯರು ಖಾನೇಷುಮಾರಿಗಾಗಿ ಬೇತ್ಲೆಹೇಮ್ಗೆ ಪ್ರಯಾಣಿಸಿದರು. ಇದರ ಫಲಿತಾಂಶವಾಗಿ, ಮುಂತಿಳಿಸಲ್ಪಟ್ಟ ಸ್ಥಳದಲ್ಲಿಯೇ ಯೇಸು ಜನಿಸಿದನು. (ಮೀಕ 5:2; ಮತ್ತಾಯ 2:1-12) ಸಾ.ಶ. 14ರ ಆಗಸ್ಟ್ ತಿಂಗಳಿನಲ್ಲಿ, ಅಂದರೆ “ಕೆಲವು ದಿನಗಳೊಳಗೆ” ಅಥವಾ ಖಾನೇಷುಮಾರಿಯ ಆಜ್ಞೆಯನ್ನು ಹೊರಡಿಸಿದ ಸ್ವಲ್ಪ ಸಮಯದಲ್ಲೇ—ಸುಮಾರು 76ರ ಪ್ರಾಯದಲ್ಲಿ—ಅಗಸ್ಟಸನು ಮರಣಪಟ್ಟನು. ಆದರೆ ಕೊಲೆಪಾತಕರ “ಕೋಪದ ಪೆಟ್ಟಿನಿಂದಲ್ಲ” ಅಥವಾ “ಯುದ್ಧದಿಂದಲೂ ಅಲ್ಲ,” ಬದಲಾಗಿ ಅಸ್ವಸ್ಥತೆಯ ಕಾರಣದಿಂದ ಮೃತಪಟ್ಟನು. ನಿಜವಾಗಿಯೂ ಉತ್ತರ ರಾಜನು ತನ್ನ ಸ್ವರೂಪವನ್ನು ಬದಲಾಯಿಸಿದ್ದನು! ಇಷ್ಟರಲ್ಲೇ ರೋಮನ್ ಸಾಮ್ರಾಜ್ಯವು ಉತ್ತರ ರಾಜನಾಗಿ ಪರಿಣಮಿಸಿತ್ತು. ಅದರ ಬೇರೆ ಬೇರೆ ಚಕ್ರವರ್ತಿಗಳು ಆ ಸಾಮ್ರಾಜ್ಯವನ್ನು ಪ್ರತಿನಿಧಿಸಿದರು.
‘ಕಡೆಗಣಿಸಲ್ಪಡುವವನು ಎದ್ದುಬರುವನು’
7, 8. (ಎ) ಉತ್ತರದ ರಾಜನೋಪಾದಿ ಅಗಸ್ಟಸ್ನ ಸ್ಥಾನಕ್ಕೆ ಯಾರು ಬಂದರು? (ಬಿ) ಕೈಸರ್ ಅಗಸ್ಟಸ್ನ ಉತ್ತರಾಧಿಕಾರಿಗೆ, ರಾಜನ ಇಚ್ಛೆಗೆ ವಿರುದ್ಧವಾಗಿ ಏಕೆ “ರಾಜ್ಯಪದವಿ”ಯು ಕೊಡಲ್ಪಟ್ಟಿತು?
7 ಪ್ರವಾದನೆಯನ್ನು ಮುಂದುವರಿಸುತ್ತಾ ದೇವದೂತನು ಹೇಳಿದ್ದು: “ಅವನ [ಅಗಸ್ಟಸ್ನ] ಸ್ಥಾನದಲ್ಲಿ ಒಬ್ಬ ನೀಚನು [“ಕಡೆಗಣಿಸಲ್ಪಡುವವನು,” NW] ಏಳುವನು, ಮತ್ತು ಖಂಡಿತವಾಗಿಯೂ ಅವರು ಅವನಿಗೆ ರಾಜಪದವಿಯನ್ನು ವಹಿಸಿಕೊಡಲು ಇಷ್ಟಪಡುವುದಿಲ್ಲ; ಮತ್ತು ಅವನು ನೆಮ್ಮದಿಯ ಕಾಲದಲ್ಲಿ ನಯವಾದ ನುಡಿಗಳಿಂದ ರಾಜ್ಯವನ್ನು ಪಡೆದುಕೊಳ್ಳುವನು. ಅಷ್ಟುಮಾತ್ರವಲ್ಲ ಅವನನ್ನು ಎದುರಿಸುವ ದೊಡ್ಡ ದೊಡ್ಡ ಸೈನ್ಯಗಳು ಹಾಗೂ ಒಡಂಬಡಿಕೆಯ ಅಧಿಪತಿಯು ಸಹ ಅವನ ಸೈನ್ಯ ಪ್ರವಾಹಕ್ಕೆ ಸಿಕ್ಕಿ ಭಗ್ನವಾಗುವರು.”—ದಾನಿಯೇಲ 11:21, 22, NW.
8 “ಕಡೆಗಣಿಸಲ್ಪಡುವವನು” ಕೈಸರನಾದ ತಿಬೇರಿಯನಾಗಿದ್ದನು. ಇವನು ಅಗಸ್ಟಸ್ನ ಮೂರನೆಯ ಹೆಂಡತಿಯಾಗಿದ್ದ ಲಿವಿಯಳ ಮಗನಾಗಿದ್ದನು. (248ನೆಯ ಪುಟದಲ್ಲಿರುವ “ಒಬ್ಬನು ಗೌರವಿಸಲ್ಪಟ್ಟನು, ಮತ್ತೊಬ್ಬನು ಕಡೆಗಣಿಸಲ್ಪಟ್ಟನು” ಎಂಬ ಮೇಲ್ಬರಹದ ಕೆಳಗಿರುವ ವಿಷಯವನ್ನು ನೋಡಿ.) ತನ್ನ ಈ ಮಲಮಗನ ದುರ್ಗುಣಗಳ ಕಾರಣದಿಂದ ಅಗಸ್ಟಸನು ಅವನನ್ನು ದ್ವೇಷಿಸುತ್ತಿದ್ದನು, ಮತ್ತು ತನ್ನ ನಂತರ ಅವನು ಕೈಸರನಾಗುವುದನ್ನು ಇಷ್ಟಪಡಲಿಲ್ಲ. ಆದರೂ ರಾಜನ ಇಚ್ಛೆಗೆ ವಿರುದ್ಧವಾಗಿ ಅವನಿಗೆ “ರಾಜಪದವಿ”ಯು ಕೊಡಲ್ಪಟ್ಟಿತು; ಅದೂ ಕೂಡ ಬೇರೆ ಎಲ್ಲ ಉತ್ತರಾಧಿಕಾರಿಗಳು ಮರಣಪಟ್ಟ ಬಳಿಕವೇ ಇವನಿಗೆ ಆ ಪದವಿಯು ಸಿಕ್ಕಿತು. ಸಾ.ಶ. 4ರಲ್ಲಿ ಅಗಸ್ಟಸನು ತಿಬೇರಿಯನನ್ನು ದತ್ತುತೆಗೆದುಕೊಂಡು, ಅವನನ್ನು ಸಿಂಹಾಸನಕ್ಕೆ ಬಾಧ್ಯಸ್ಥನನ್ನಾಗಿ ಮಾಡಿದನು. ಅಗಸ್ಟಸ್ನ ಮರಣಾನಂತರ, ನೀಚನಾಗಿದ್ದ 56 ವರ್ಷ ಪ್ರಾಯದ ತಿಬೇರಿಯನು ‘ಎದ್ದನು.’ ಮತ್ತು ರೋಮನ್ ಚಕ್ರವರ್ತಿಯೋಪಾದಿ ಹಾಗೂ ಉತ್ತರ ರಾಜನೋಪಾದಿ ತನ್ನ ಅಧಿಕಾರ ಸ್ಥಾನವನ್ನು ತೆಗೆದುಕೊಂಡನು.
9. ತಿಬೇರಿಯನು ಹೇಗೆ “ನಯವಾದ ನುಡಿಗಳಿಂದ ರಾಜ್ಯವನ್ನು ಪಡೆದುಕೊಂಡನು”?
9 “ತಿಬೇರಿಯನು ಶಾಸನಸಭೆಯೊಂದಿಗೆ ರಾಜಕೀಯ ನಡೆಸಿ, [ಅಗಸ್ಟಸ್ ಮರಣಪಟ್ಟ ಬಳಿಕ] ಸುಮಾರು ಒಂದು ತಿಂಗಳು ಕಳೆಯುವ ತನಕ ಅದು ಅವನನ್ನು ಚಕ್ರವರ್ತಿಯನ್ನಾಗಿ ಮಾಡಲು ಬಿಡಲಿಲ್ಲ” ಎಂದು ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ. ಅಗಸ್ಟಸ್ನನ್ನು ಬಿಟ್ಟು ಬೇರೆ ಯಾರಿಗೂ ರೋಮನ್ ಸಾಮ್ರಾಜ್ಯವನ್ನು ಆಳುವ ಭಾರಿ ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯವಿಲ್ಲ ಎಂದು ಅವನು ಶಾಸನಸಭೆಗೆ ಹೇಳಿದನು ಮತ್ತು ಏಕಮಾತ್ರ ವ್ಯಕ್ತಿಗೆ ಅಧಿಕಾರವನ್ನು ಕೊಡುವ ಬದಲು, ಒಂದು ಗುಂಪಿಗೆ ಅಧಿಕಾರವನ್ನು ಕೊಡುವ ಮೂಲಕ ಪ್ರಜಾಧಿಪತ್ಯವನ್ನು ಪುನಸ್ಸ್ಥಾಪಿಸುವಂತೆ ಕೇಳಿಕೊಂಡನು. ಇತಿಹಾಸಕಾರರಾದ ವಿಲ್ ಡ್ಯುರ್ಯಾಂಟ್ ಹೀಗೆ ಬರೆಯುತ್ತಾರೆ: “ಅವನು ಹೇಳಿದ ವಿಚಾರವನ್ನು ಅಂಗೀಕರಿಸುವ ಧೈರ್ಯಮಾಡದೆ, ಕಟ್ಟಕಡೆಗೆ ಅವನು ಅಧಿಕಾರವನ್ನು ಸ್ವೀಕರಿಸುವ ತನಕ ಶಾಸನಸಭೆಯು ಅವನಿಗೆ ತಲೆಬಾಗುತ್ತಾ ಇತ್ತು.” ಡ್ಯುರ್ಯಾಂಟ್ ಕೂಡಿಸಿದ್ದು: “ಎರಡೂ ಪಕ್ಷಗಳು ಚೆನ್ನಾಗಿ ನಾಟಕವಾಡಿದವು. ತಾನೇ ಆಳಿಕೆ ನಡಿಸುವಂತೆ ತಿಬೇರಿಯನು ಬಯಸಿದನು, ಇಲ್ಲದಿದ್ದಲ್ಲಿ ಅವನು ಅದರಿಂದ ತಪ್ಪಿಸಿಕೊಳ್ಳುವ ವಿಧವನ್ನು ಹೇಗಾದರೂ ಕಂಡುಹಿಡಿಯುತ್ತಿದ್ದನು. ಶಾಸನಸಭೆಯು ಅವನಿಗೆ ಭಯಪಡುತ್ತಿತ್ತು ಹಾಗೂ ಅವನನ್ನು ದ್ವೇಷಿಸುತ್ತಿತ್ತು, ಆದರೆ ಈ ಮುಂಚಿನಂತೆ ಸೈದ್ಧಾಂತಿಕ ಸರ್ವ ಸ್ವತಂತ್ರ ಸಭೆಗಳ ಮೇಲಾಧಾರಿತವಾದ ಪ್ರಜಾಧಿಪತ್ಯವನ್ನು ಪುನಸ್ಸ್ಥಾಪಿಸಲು ಅದು ಹಿಂಜರಿಯಿತು.” ಹೀಗೆ ತಿಬೇರಿಯನು ‘ನಯವಾದ ನುಡಿಗಳಿಂದ ರಾಜ್ಯವನ್ನು ಪಡೆದುಕೊಂಡನು.’
10. ‘ದೊಡ್ಡ ದೊಡ್ಡ ಸೈನ್ಯಗಳು’ ಹೇಗೆ ‘ಭಗ್ನ’ಗೊಂಡವು?
10 “ದೊಡ್ಡ ದೊಡ್ಡ ಸೈನ್ಯಗಳ,” ಅಂದರೆ ಸುತ್ತುಮುತ್ತಲಿರುವ ರಾಜ್ಯಗಳ ಮಿಲಿಟರಿ ಸೈನ್ಯಗಳ ವಿಷಯದಲ್ಲಿ ದೇವದೂತನು ಹೇಳಿದ್ದು: ‘ಅವು ಅವನ ಸೈನ್ಯ ಪ್ರವಾಹಕ್ಕೆ ಸಿಕ್ಕಿ ಭಗ್ನವಾಗುವವು.’ ತಿಬೇರಿಯನು ಉತ್ತರದ ರಾಜನಾಗಿ ಪರಿಣಮಿಸಿದಾಗ, ಅವನ ಸೋದರಳಿಯನಾದ ಜರ್ಮ್ಯಾನಿಕಸ್ ಕೈಸರನು, ರೈನ್ ನದಿಯ ಬಳಿಯಲ್ಲಿದ್ದ ರೋಮನ್ ಸೈನ್ಯಗಳ ಸೇನಾಧಿಪತಿಯಾಗಿದ್ದನು. ಸಾ.ಶ. 15ರಲ್ಲಿ ಜರ್ಮ್ಯಾನಿಕಸನು ಜರ್ಮನ್ ವೀರನಾಯಕನಾದ ಆರ್ಮಿನಿಯಸ್ನ ವಿರುದ್ಧ ತನ್ನ ಸೈನ್ಯಗಳನ್ನು ಮುನ್ನಡಿಸಿದನಾದರೂ, ಅವನಿಗೆ ಸಂಪೂರ್ಣ ವಿಜಯ ದೊರಕಲಿಲ್ಲ. ಆದರೂ, ಬಹಳ ಕಷ್ಟದಿಂದ ಕೆಲವೇ ವಿಜಯಗಳನ್ನು ಸಾಧಿಸಲಾಯಿತು, ಮತ್ತು ತದನಂತರ ತಿಬೇರಿಯನು ಜರ್ಮನಿಯಲ್ಲಿನ ಕಾರ್ಯಾಚರಣೆಗಳನ್ನು ನಿಲ್ಲಿಸಿಬಿಟ್ಟನು. ಅದಕ್ಕೆ ಬದಲಾಗಿ, ಆಂತರಿಕ ಯುದ್ಧವನ್ನು ಉಂಟುಮಾಡುವ ಮೂಲಕ, ಜರ್ಮನ್ ಕುಲಗಳ ಒಗ್ಗಟ್ಟನ್ನು ಮುರಿಯಲು ಅವನು ಪ್ರಯತ್ನಿಸಿದನು. ತಿಬೇರಿಯನು ರಕ್ಷಣಾತ್ಮಕ ವಿದೇಶೀ ಕಾರ್ಯನೀತಿಯನ್ನು ಇಷ್ಟಪಡುತ್ತಿದ್ದನು, ಆದುದರಿಂದ ಗಡಿಪ್ರದೇಶಗಳನ್ನು ಭದ್ರಪಡಿಸುವ ಕೆಲಸಕ್ಕೆ ಹೆಚ್ಚಿನ ಗಮನಕೊಟ್ಟನು. ಈ ರಕ್ಷಣಾತ್ಮಕ ವಿದೇಶೀ ಕಾರ್ಯನೀತಿಯು ಸಂಪೂರ್ಣವಾಗಿ ಯಶಸ್ವಿಯಾಯಿತು. ಈ ರೀತಿಯಲ್ಲಿ “ದೊಡ್ಡ ದೊಡ್ಡ ಸೈನ್ಯಗಳು” ನಿಯಂತ್ರಿಸಲ್ಪಟ್ಟವು ಮತ್ತು “ಭಗ್ನ”ಗೊಳಿಸಲ್ಪಟ್ಟವು.
11. ‘ಒಡಂಬಡಿಕೆಯ ಅಧಿಪತಿಯು’ ಹೇಗೆ ‘ಭಗ್ನ’ಗೊಳಿಸಲ್ಪಟ್ಟನು?
11 ಭೂಮಿಯ ಎಲ್ಲ ಕುಟುಂಬಗಳನ್ನು ಆಶೀರ್ವದಿಸಲಿಕ್ಕಾಗಿ, ಯೆಹೋವ ದೇವರು ಅಬ್ರಹಾಮನೊಂದಿಗೆ ಮಾಡಿಕೊಂಡಿದ್ದ “ಒಡಂಬಡಿಕೆಯ ಅಧಿಪತಿಯು” ಸಹ “ಭಗ್ನ”ನಾದನು. ಆ ಒಡಂಬಡಿಕೆಯಲ್ಲಿ ವಾಗ್ದಾನಿಸಲ್ಪಟ್ಟ ಅಬ್ರಹಾಮನ ಸಂತಾನವು ಯೇಸು ಕ್ರಿಸ್ತನೇ ಆಗಿದ್ದನು. (ಆದಿಕಾಂಡ 22:18; ಗಲಾತ್ಯ 3:16) ಸಾ.ಶ. 33ರ ನೈಸಾನ್ 14ರಂದು, ಯೆರೂಸಲೇಮಿನ ರೋಮನ್ ದೇಶಾಧಿಪತಿಯ ಅರಮನೆಯಲ್ಲಿ ಯೇಸು ಪೊಂತ್ಯ ಪಿಲಾತನ ಮುಂದೆ ನಿಂತುಕೊಂಡನು. ಯೇಸುವು ಚಕ್ರವರ್ತಿಯ ವಿರುದ್ಧ ರಾಜದ್ರೋಹ ಗೈದಿದ್ದಾನೆಂಬ ದೋಷಾರೋಪವನ್ನು ಯೆಹೂದಿ ಯಾಜಕರು ಅವನ ಮೇಲೆ ಹೊರಿಸಿದ್ದರು. ಆದರೆ ಯೇಸು ಪಿಲಾತನಿಗೆ ಹೇಳಿದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ; . . . ನನ್ನ ರಾಜ್ಯವು ಇಲ್ಲಿಯದಲ್ಲ.” ನಿರ್ದೋಷಿಯಾದ ಯೇಸುವನ್ನು ರೋಮನ್ ದೇಶಾಧಿಪತಿಯು ಬಿಟ್ಟುಬಿಡಬಾರದೆಂಬ ಉದ್ದೇಶದಿಂದ ಯೆಹೂದ್ಯರು ಕೂಗಿಹೇಳಿದ್ದು: “ನೀನು ಇವನನ್ನು ಬಿಡಿಸಿದರೆ ನೀನು ಕೈಸರನಿಗೆ ಮಿತ್ರನಲ್ಲ; ತನ್ನನ್ನು ರಾಜನಾಗಿ ಮಾಡಿಕೊಳ್ಳುವವನು ಕೈಸರನಿಗೆ ವಿರೋಧಿ.” ಯೇಸುವನ್ನು ವಧಿಸುವಂತೆ ತಗಾದೆಮಾಡಿದ ಬಳಿಕ ಅವರು ಹೇಳಿದ್ದು: “ಕೈಸರನೇ ಹೊರತು ನಮಗೆ ಬೇರೆ ರಾಜನಿಲ್ಲ.” ಕೈಸರನಿಗೆ ಮಾಡಲ್ಪಡುವ ಯಾವುದೇ ಅವಮಾನವನ್ನು ಹೆಚ್ಚು ಕಟ್ಟುನಿಟ್ಟಾಗಿ ಪರಿಗಣಿಸುವಂತೆ ತಿಬೇರಿಯನು ಜಾರಿಗೆ ತಂದ “ರಾಜದ್ರೋಹದ” ನಿಯಮಕ್ಕನುಸಾರ, ಪಿಲಾತನು ಯೇಸುವನ್ನು “ಭಗ್ನ”ಗೊಳಿಸಲು ಅಥವಾ ಯಾತನಾ ಕಂಬದ ಮೇಲೆ ಶೂಲಕ್ಕೇರಿಸಲು ಒಪ್ಪಿಸಿಕೊಟ್ಟನು.—ಯೋಹಾನ 18:36; 19:12-16; ಮಾರ್ಕ 15:14-20.
ಒಬ್ಬ ಕ್ರೂರ ರಾಜನು ‘ಕುತಂತ್ರಗಳನ್ನು ಕಲ್ಪಿಸುತ್ತಾನೆ’
12. (ಎ) ತಿಬೇರಿಯನೊಂದಿಗೆ ಯಾರು ಒಪ್ಪಂದ ಮಾಡಿಕೊಂಡರು? (ಬಿ) ತಿಬೇರಿಯನು “ಚಿಕ್ಕ ಜನಾಂಗದ ಸಹಾಯದಿಂದ ಏಳಿಗೆಯಾಗಿ ಬಲ”ಗೊಂಡದ್ದು ಹೇಗೆ?
12 ತಿಬೇರಿಯನ ಕುರಿತು ಇನ್ನೂ ಪ್ರವಾದಿಸುತ್ತಾ ದೇವದೂತನು ಹೇಳಿದ್ದು: “ಅವನ ಸಂಗಡ ಒಪ್ಪಂದಮಾಡಿಕೊಂಡವನಿಗೆ ಕೂಡಲೆ ಮೋಸ ಮಾಡುವನು; ಕೊಂಚ ಜನದ [“ಚಿಕ್ಕ ಜನಾಂಗದ,” NW] ಸಹಾಯದಿಂದ ಏಳಿಗೆಯಾಗಿ ಬಲಗೊಳ್ಳುವನು.” (ದಾನಿಯೇಲ 11:23) ರೋಮನ್ ಶಾಸನಸಭೆಯ ಸದಸ್ಯರು, ಸಂವಿಧಾನಬದ್ಧವಾಗಿ ತಿಬೇರಿಯನೊಂದಿಗೆ ‘ಒಪ್ಪಂದಮಾಡಿ’ಕೊಂಡಿದ್ದರೂ, ಅವನು ಮಾತ್ರ ಔಪಚಾರಿಕವಾಗಿ ಅವರ ಮೇಲೆ ಅವಲಂಬಿಸಿದ್ದನು. ಆದರೆ ಅವನು ವಂಚಕನಾಗಿದ್ದು, “ಚಿಕ್ಕ ಜನಾಂಗದ ಸಹಾಯದಿಂದ ಏಳಿಗೆಯಾಗಿ ಬಲ”ಗೊಂಡಿದ್ದನು. ರೋಮನ್ ಚಕ್ರವರ್ತಿಯ ಅಂಗರಕ್ಷಕ (ರೋಮನ್ ಪ್ರೀಟೋರಿಯನ್ ಗಾರ್ಡ್) ಸಿಪಾಯಿಗಳೇ ಈ ಚಿಕ್ಕ ಜನಾಂಗವಾಗಿದ್ದರು, ಮತ್ತು ಇವರು ಯೆರೂಸಲೇಮಿನ ಗೋಡೆಗಳ ಸಮೀಪದಲ್ಲೇ ಪಾಳೆಯಮಾಡಿಕೊಂಡಿದ್ದರು. ಇದು ಸಮೀಪವೇ ಇದ್ದುದರಿಂದ ಶಾಸನಸಭೆಗೆ ಭಯ ಉಂಟಾಗಿತ್ತು, ಮತ್ತು ಸಾಮಾನ್ಯ ಜನರಲ್ಲಿ ಯಾರಾದರೂ ತನ್ನ ಅಧಿಕಾರದ ವಿರುದ್ಧ ದಂಗೆಯೇಳುತ್ತಾರೋ ಎಂಬುದನ್ನು ಗಮನಿಸುತ್ತಾ ಇರುವಂತೆ ತಿಬೇರಿಯನಿಗೆ ಸಹಾಯ ಮಾಡಿತು. ಆದುದರಿಂದ, ಸುಮಾರು 10,000 ಅಂಗರಕ್ಷಕ ಸಿಪಾಯಿಗಳ ಸಹಾಯದಿಂದ ತಿಬೇರಿಯನು ಬಲಿಷ್ಠನಾಗಿ ಉಳಿದನು.
13. ಯಾವ ರೀತಿಯಲ್ಲಿ ತಿಬೇರಿಯನು ತನ್ನ ತಂದೆತಾತಂದಿರನ್ನು ಮೀರಿಸಿದ್ದನು?
13 ದೇವದೂತನು ಪ್ರವಾದನಾತ್ಮಕವಾಗಿ ಕೂಡಿಸಿದ್ದು: “ನೆಮ್ಮದಿಯ ಕಾಲದಲ್ಲಿ ಸಂಸ್ಥಾನದ ಫಲವತ್ತಾದ ಪ್ರದೇಶಗಳ ಮೇಲೆ ನುಗ್ಗುವನು; ತಂದೆತಾತಂದಿರು ಮಾಡದ ಕಾರ್ಯಗಳನ್ನು ಮಾಡುವನು; ಸೂರೆಸುಲಿಗೆಕೊಳ್ಳೆಹೊಡೆದವುಗಳನ್ನು ತನ್ನವರಿಗೆ ಚೆಲ್ಲಿಬಿಡುವನು; ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕ್ಲುಪ್ತಕಾಲದ ತನಕ ಕಲ್ಪಿಸುತ್ತಿರುವನು.” (ದಾನಿಯೇಲ 11:24) ತಿಬೇರಿಯನು ತುಂಬ ಸಂದೇಹ ಪ್ರವೃತ್ತಿಯವನಾಗಿದ್ದನು. ಮತ್ತು ಅವನ ಆಳ್ವಿಕೆಯಲ್ಲಿ ಯೋಜಿತ ಕೊಲೆಗಳು ಅತ್ಯಧಿಕವಾಗಿದ್ದವು. ಅರಮನೆಯ ಅಂಗರಕ್ಷಕ ಸಿಪಾಯಿದಳದ ಸೇನಾಧಿಪತಿಯಾಗಿದ್ದ ಸಿಜೇನಸ್ನ ಪ್ರಭಾವದಿಂದಲೇ, ತಿಬೇರಿಯನ ಆಳ್ವಿಕೆಯ ಕೊನೆಯ ಭಾಗವು ತುಂಬ ಭಯೋತ್ಪಾದಕವಾಗಿತ್ತು. ಕೊನೆಯದಾಗಿ, ತಿಬೇರಿಯನು ಸಿಜೇನಸನ ಮೇಲೆ ಸಂಶಯಪಟ್ಟು, ಅವನನ್ನೇ ಕೊಲ್ಲಿಸಿಬಿಟ್ಟನು. ಜನರ ಮೇಲೆ ದಬ್ಬಾಳಿಕೆ ನಡೆಸುವುದರಲ್ಲಿ ತಿಬೇರಿಯನು ತನ್ನ ತಂದೆತಾತಂದಿರನ್ನು ಮೀರಿಸಿದ್ದನು.
14. (ಎ) ತಿಬೇರಿಯನು ಹೇಗೆ “ಸೂರೆಸುಲಿಗೆಕೊಳ್ಳೆ”ಗಳನ್ನು ರೋಮನ್ ಪ್ರಾಂತಗಳಲ್ಲೆಲ್ಲಾ ಸಿಕ್ಕಾಬಟ್ಟೆ ಚೆಲ್ಲಿಬಿಟ್ಟನು? (ಬಿ) ತಿಬೇರಿಯನು ಮರಣಪಟ್ಟ ಸಮಯದಷ್ಟಕ್ಕೆ ಅವನನ್ನು ಯಾವ ದೃಷ್ಟಿಯಲ್ಲಿ ನೋಡಲಾಯಿತು?
14 ಆದರೂ, ತಿಬೇರಿಯನು “ಸೂರೆಸುಲಿಗೆಕೊಳ್ಳೆ”ಗಳನ್ನು ರೋಮನ್ ಪ್ರಾಂತಗಳಲ್ಲೆಲ್ಲಾ ಸಿಕ್ಕಾಬಟ್ಟೆ ಚೆಲ್ಲಿಬಿಟ್ಟನು. ಅವನು ಸಾಯುವ ಸಮಯದಷ್ಟಕ್ಕೆ ಅವನ ಪ್ರಜೆಗಳೆಲ್ಲರೂ ತುಂಬ ಸಮೃದ್ಧಿಯಿಂದಿದ್ದರು. ಅವರು ಹೆಚ್ಚು ತೆರಿಗೆಗಳನ್ನು ಕೊಡಬೇಕಾಗಿರಲಿಲ್ಲ, ಮತ್ತು ಯಾವ ಕ್ಷೇತ್ರದ ಜನರಿಗೆ ಕಷ್ಟತೊಂದರೆಗಳು ಇದ್ದವೋ ಅವರ ಕಡೆಗೆ ಅವನು ಉದಾರಭಾವದವನಾಗಿದ್ದನು. ಸೈನಿಕರು ಅಥವಾ ಅಧಿಕಾರಿಗಳು ಯಾರ ಮೇಲಾದರೂ ದಬ್ಬಾಳಿಕೆ ನಡಿಸುವಲ್ಲಿ ಅಥವಾ ಯಾವುದೇ ವ್ಯವಹಾರವನ್ನು ನಿರ್ವಹಿಸುವಾಗ ಅವ್ಯವಸ್ಥೆಯನ್ನು ತೋರಿಸುವಲ್ಲಿ, ಚಕ್ರವರ್ತಿಯು ಖಂಡಿತವಾಗಿಯೂ ಅವರ ಮೇಲೆ ದಂಡನೆಯನ್ನು ವಿಧಿಸಸಾಧ್ಯವಿತ್ತು. ಅವನಿಗೆ ಅಧಿಕಾರದ ಮೇಲೆ ಬಲವಾದ ಹಿಡಿತವಿದ್ದದರಿಂದ, ಸಾರ್ವಜನಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಯಿತು, ಮತ್ತು ಸಂಪರ್ಕ ವ್ಯವಸ್ಥೆಯನ್ನು ಉತ್ತಮಗೊಳಿಸಿದ್ದರಿಂದ ಅದು ವ್ಯಾಪಾರ ವ್ಯವಹಾರಗಳನ್ನು ಹೆಚ್ಚಿಸಿತು. ರೋಮ್ನ ಒಳಗೂ ಹೊರಗೂ, ಸರ್ವ ಸಂಗತಿಗಳೂ ನಿಷ್ಪಕ್ಷಪಾತದಿಂದ ಹಾಗೂ ಸಮತೂಕ ರೀತಿಯಲ್ಲಿ ನಡೆಯುತ್ತಿವೆ ಎಂಬುದನ್ನು ತಿಬೇರಿಯನು ಖಚಿತಪಡಿಸಿಕೊಂಡನು. ನಿಯಮಗಳು ಉತ್ತಮಗೊಳಿಸಲ್ಪಟ್ಟವು, ಮತ್ತು ಕೈಸರ್ ಅಗಸ್ಟಸ್ನು ಜಾರಿಗೆ ತಂದ ಸುಧಾರಣೆಗಳಿಗೆ ಇನ್ನಿತರ ವಿಷಯಗಳನ್ನು ಕೂಡಿಸುವ ಮೂಲಕ ಸಾಮಾಜಿಕ ಹಾಗೂ ನೈತಿಕ ನಿಯಮಾವಳಿಗಳು ವರ್ಧಿಸಲ್ಪಟ್ಟವು. ಆದರೂ, ತಿಬೇರಿಯನು ‘ಕುತಂತ್ರಗಳನ್ನು ಕಲ್ಪಿಸುತ್ತಲೇ’ ಇದ್ದನು. ಆದುದರಿಂದ ರೋಮನ್ ಇತಿಹಾಸಕಾರನಾದ ಟ್ಯಾಸಿಟಸ್ ಅವನನ್ನು, ಸುಳ್ಳು ಮುಖವಾಡವನ್ನು ಧರಿಸುವುದರಲ್ಲಿ ಚತುರನಾಗಿರುವ ಒಬ್ಬ ಕಪಟಿಯೆಂದು ವರ್ಣಿಸಿದನು. ಸಾ.ಶ. 37ರ ಮಾರ್ಚ್ ತಿಂಗಳಿನಲ್ಲಿ ಅವನು ಮರಣಪಟ್ಟಾಗ, ಪ್ರಜೆಗಳ ದೃಷ್ಟಿಯಲ್ಲಿ ಅವನೊಬ್ಬ ಕ್ರೂರ ರಾಜನಾಗಿದ್ದನು.
15. ಸಾ.ಶ. ಮೊದಲನೆಯ ಶತಮಾನದ ಕೊನೆಯಲ್ಲಿ ಹಾಗೂ ಎರಡನೆಯ ಶತಮಾನದ ಆರಂಭದಲ್ಲಿ ರೋಮ್ಗೆ ಏನು ಸಂಭವಿಸಿತು?
15 ಉತ್ತರ ರಾಜನ ಸ್ಥಾನಕ್ಕೆ ಬಂದ ತಿಬೇರಿಯನ ಉತ್ತರಾಧಿಕಾರಿಗಳಲ್ಲಿ, ಗಾಯಸ್ ಕೈಸರ್ (ಕ್ಯಾಲಿಗುಲ), Iನೆಯ ಕ್ಲಾಡಿಯಸ್, ನೀರೊ, ವೆಸ್ಪೇಸಿಯನ್, ಟೈಟಸ್, ಡೊಮಿಷಿಯನ್, ನೆರ್ವ, ಟ್ರೇಜನ್, ಮತ್ತು ಹೇಡ್ರಿಯನರು ಸೇರಿದ್ದರು. “ಅಗಸ್ಟಸ್ನಿಗೆ ಬದಲಾಗಿ ಸಿಂಹಾಸನವೇರಿದ ರಾಜರು, ಬಹುಮಟ್ಟಿಗೆ ಅವನ ಆಡಳಿತ ರೀತಿನೀತಿಯನ್ನು ಹಾಗೂ ಕಟ್ಟಡ ನಿರ್ಮಾಣ ಯೋಜನೆಯನ್ನು ಮುಂದುವರಿಸಿಕೊಂಡು ಹೋದರಾದರೂ, ಅದರಲ್ಲಿ ಅಷ್ಟೇನೂ ಹೊಸ ಮಾರ್ಪಾಡುಗಳನ್ನು ಮಾಡಲಿಲ್ಲ, ಕೇವಲ ಆಡಂಬರವನ್ನು ತೋರ್ಪಡಿಸಿದರು” ಎಂದು ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ. ಅದೇ ಪ್ರಮಾಣಗ್ರಂಥವು ಹೀಗೂ ಹೇಳುತ್ತದೆ: “1ನೆಯ ಶತಮಾನದ ಕೊನೆಯಲ್ಲಿ ಹಾಗೂ 2ನೆಯ ಶತಮಾನದ ಆರಂಭದಲ್ಲಿ, ರೋಮ್ ಮಹಾವೈಭವದಿಂದ ಮೆರೆಯಿತು ಮತ್ತು ಅದರ ಜನಸಂಖ್ಯೆಯೂ ಅತ್ಯಧಿಕವಾಗಿತ್ತು.” ಸಾಮ್ರಾಜ್ಯದ ಗಡಿಗಳಲ್ಲಿ ರೋಮ್ಗೆ ಕೆಲವಾರು ಸಮಸ್ಯೆಗಳಿದ್ದವಾದರೂ, ಮುಂತಿಳಿಸಲ್ಪಟ್ಟ ದಕ್ಷಿಣ ರಾಜನೊಂದಿಗಿನ ಅದರ ಪ್ರಥಮ ಹೋರಾಟವು, ಸಾ.ಶ. ಮೂರನೆಯ ಶತಮಾನದ ತನಕ ಸಂಭವಿಸಲಿಲ್ಲ.
ದಕ್ಷಿಣ ರಾಜನ ವಿರುದ್ಧ ಎಬ್ಬಿಸಲ್ಪಟ್ಟದ್ದು
16, 17. (ಎ) ದಾನಿಯೇಲ 11:25ರಲ್ಲಿ ಸೂಚಿಸಲ್ಪಟ್ಟಿರುವ ಉತ್ತರ ರಾಜನ ಪಾತ್ರವನ್ನು ಯಾರು ವಹಿಸಿದರು? (ಬಿ) ದಕ್ಷಿಣ ರಾಜನ ಸ್ಥಾನಕ್ಕೆ ಯಾರು ಬಂದರು, ಮತ್ತು ಇದು ಹೇಗೆ ಸಂಭವಿಸಿತು?
16 ಈ ಕೆಳಗಿನಂತೆ ಹೇಳುತ್ತಾ ದೇವದೂತನು ತನ್ನ ಪ್ರವಾದನೆಯನ್ನು ಮುಂದುವರಿಸಿದನು: “ಅವನು [ಉತ್ತರ ರಾಜನು] ದೊಡ್ಡ ದಂಡೆತ್ತಿ ದಕ್ಷಿಣರಾಜನಿಗೆ ವಿರುದ್ಧವಾಗಿ ತನ್ನ ರಾಜ್ಯದ ಬಲವನ್ನೆಲ್ಲ ಕೂಡಿಸಿ ಧೈರ್ಯತಂದುಕೊಳ್ಳಲು ದಕ್ಷಿಣರಾಜನು [“ತನ್ನನ್ನು ಉತ್ತೇಜಿಸಿಕೊಂಡು,” NW] ಅತ್ಯಧಿಕಬಲವುಳ್ಳ ಮಹಾ ಸೈನ್ಯಸಮೇತನಾಗಿ ಯುದ್ಧಕ್ಕೆ ಹೊರಡುವನು; ಆದರೆ [ಉತ್ತರ ರಾಜನು] ನಿಲ್ಲಲಾರನು; ಅವನು ಸೋಲುವ ಹಾಗೆ ಕುಯುಕ್ತಿಗಳನ್ನು ಕಲ್ಪಿಸುವರು. ಅವನ ಮೃಷ್ಟಾನ್ನವನ್ನು ತಿನ್ನುವವರೇ ಅವನನ್ನು ಭಂಗಪಡಿಸುವರು; ಉತ್ತರರಾಜನ [ಮಿಲಿಟರಿ] ಸೈನ್ಯವು ತುಂಬಿತುಳುಕುವದು [“ಕೊಚ್ಚಿಕೊಂಡುಹೋಗುವುದು,” NW]; ಬಹು ಜನರು ಹತರಾಗಿ ಬೀಳುವರು.”—ದಾನಿಯೇಲ 11:25, 26.
17 ಆಕ್ಟೇವಿಯನನು ಐಗುಪ್ತವನ್ನು ರೋಮನ್ ಪ್ರಾಂತವಾಗಿ ಮಾಡಿ ಸುಮಾರು 300 ವರ್ಷಗಳು ಕಳೆದ ಬಳಿಕ, ರೋಮನ್ ಚಕ್ರವರ್ತಿಯಾದ ಆರೀಲಿಯನನು ಉತ್ತರ ರಾಜನ ಸ್ಥಾನವನ್ನು ಪಡೆದುಕೊಂಡನು. ಅಷ್ಟರಲ್ಲಿ, ರೋಮನ್ ನೆಲಸುನಾಡಾದ ಪಾಲ್ಮೈರದ ರಾಣಿ ಸೆಪ್ಟಿಮೀಯ ಸೆನೋಬಿಯಳು, ದಕ್ಷಿಣ ರಾಜನ ಸ್ಥಾನವನ್ನು ಆಕ್ರಮಿಸಿದ್ದಳು.a (252ನೆಯ ಪುಟದಲ್ಲಿರುವ “ಸೆನೋಬಿಯ—ಪಾಲ್ಮೈರದ ಯುದ್ಧವೀರ ರಾಣಿ” ಎಂಬ ಮೇಲ್ಬರಹದ ಕೆಳಗೆ ನೋಡಿ.) ಸಾ.ಶ. 269ರಲ್ಲಿ, ಐಗುಪ್ತವನ್ನು ರೋಮ್ಗೋಸ್ಕರ ಭದ್ರವಾಗಿರಿಸುವ ನೆಪವೊಡ್ಡುತ್ತಾ, ಪಾಲ್ಮೈರದ ಸೈನ್ಯವು ಅದನ್ನು ಸ್ವಾಧೀನಪಡಿಸಿಕೊಂಡಿತು. ಸೆನೋಬಿಯಳು ಪಾಲ್ಮೈರವನ್ನು ಪೂರ್ವದಿಕ್ಕಿನ ಒಂದು ಪ್ರಧಾನ ಪಟ್ಟಣವಾಗಿ ಮಾಡಲು ಬಯಸಿದಳು ಹಾಗೂ ರೋಮ್ನ ಪೂರ್ವ ಪ್ರಾಂತಗಳನ್ನು ಆಳಲು ಇಷ್ಟಪಟ್ಟಳು. ಅವಳ ಮಹತ್ವಾಕಾಂಕ್ಷೆಯನ್ನು ನೋಡಿ ದಿಗಿಲುಗೊಂಡ ಆರೀಲಿಯನನು, ಸೆನೋಬಿಯಳ ವಿರುದ್ಧ ಹೋರಾಡಲಿಕ್ಕಾಗಿ “ರಾಜ್ಯದ ಬಲವನ್ನೆಲ್ಲ ಕೂಡಿಸಿ ಧೈರ್ಯತಂದು”ಕೊಂಡನು.
18. ಉತ್ತರ ರಾಜನ ಸ್ಥಾನದಲ್ಲಿದ್ದ ಚಕ್ರವರ್ತಿ ಆರೀಲಿಯನ್ ಹಾಗೂ ದಕ್ಷಿಣ ರಾಜನ ಸ್ಥಾನದಲ್ಲಿದ್ದ ಸೆನೋಬಿಯಳ ನಡುವಿನ ಹೋರಾಟದ ಫಲಿತಾಂಶವು ಏನಾಗಿತ್ತು?
18 ದಕ್ಷಿಣ ರಾಜನ ಸ್ಥಾನದಲ್ಲಿದ್ದ ಸೆನೋಬಿಯಳು ಮುಂದಾಳತ್ವವನ್ನು ವಹಿಸಿ, ಯುದ್ಧಕ್ಕಾಗಿ ‘ತನ್ನನ್ನು ಉತ್ತೇಜಿಸಿ’ಕೊಂಡು, ಸಾಬ್ದಾಸ್ ಹಾಗೂ ಸಾಬೈ ಎಂಬ ಇಬ್ಬರು ಸೇನಾಧಿಪತಿಗಳ ನೇತೃತ್ವದ ಕೆಳಗೆ “ಅತ್ಯಧಿಕಬಲವುಳ್ಳ ಮಹಾ ಸೈನ್ಯಸಮೇತ”ವಾಗಿ ಉತ್ತರ ರಾಜನ ವಿರುದ್ಧ ಹೊರಟಳು. ಆದರೆ ಆರೀಲಿಯನನು ಐಗುಪ್ತವನ್ನು ಸ್ವಾಧೀನಪಡಿಸಿಕೊಂಡು, ಏಷ್ಯಾ ಮೈನರ್ ಹಾಗೂ ಸಿರಿಯದ ದಂಡಯಾತ್ರೆಯನ್ನು ಆರಂಭಿಸಿದನು. ಆಗ ಎಮಸ (ಈಗ ಹೋಮ್ಸ್) ಎಂಬ ಸ್ಥಳದಲ್ಲಿ ಸೆನೋಬಿಯಳನ್ನು ಸೋಲಿಸಿ, ಪಾಲ್ಮೈರಕ್ಕೆ ಹಿಮ್ಮೆಟ್ಟಲಾಯಿತು. ಆರೀಲಿಯನನು ಪಾಲ್ಮೈರಕ್ಕೆ ಮುತ್ತಿಗೆ ಹಾಕಿದಾಗ, ಸೆನೋಬಿಯಳು ಅದನ್ನು ಧೈರ್ಯದಿಂದ ಎದುರಿಸಿದಳಾದರೂ ಅವಳು ಯಶಸ್ವಿಯಾಗಲಿಲ್ಲ. ಅವಳೂ ಅವಳ ಮಗನೂ ಪರ್ಷಿಯದ ಕಡೆಗೆ ಪಲಾಯನಗೈದರು, ಆದರೆ ಯೂಫ್ರೇಟೀಸ್ ನದಿಯ ಬಳಿ ಅವಳು ರೋಮನರಿಂದ ಬಂಧಿಸಲ್ಪಟ್ಟಳು. ಸಾ.ಶ. 272ರಲ್ಲಿ ಪಾಲ್ಮೈರದವರು ತಮ್ಮ ಪಟ್ಟಣವನ್ನು ಒಪ್ಪಿಸಿ ಶರಣಾಗತರಾದರು. ಆರೀಲಿಯನ್ ಸೆನೋಬಿಯಳನ್ನು ಕೊಲ್ಲದೆ ಉಳಿಸಿದನು, ಮತ್ತು ಸಾ.ಶ. 274ರಲ್ಲಿ ರೋಮ್ನಲ್ಲಿ ನಡೆದ ತನ್ನ ವಿಜಯದ ಮೆರವಣಿಗೆಯಲ್ಲಿ ಅವಳನ್ನು ಪ್ರಮುಖ ಆಕರ್ಷಣೆಯನ್ನಾಗಿ ಮಾಡಿದನು. ಅಲ್ಲಿ ಅವಳು ಒಬ್ಬ ರೋಮನ್ ಮನೆವಾರ್ತೆಯವಳಾಗಿ ತನ್ನ ಜೀವಿತದ ಉಳಿದ ಸಮಯಾವಧಿಯನ್ನು ಕಳೆದಳು.
19. ತನ್ನ ವಿರುದ್ಧ ‘ಕಲ್ಪಿಸಲಾಗಿದ್ದ ಕುಯುಕ್ತಿಗಳ’ ಕಾರಣದಿಂದ ಆರೀಲಿಯನನು ಹೇಗೆ ಬಿದ್ದುಹೋದನು?
19 ಆರೀಲಿಯನನು ಸಹ ‘ನಿಲ್ಲಲಿಲ್ಲ, ಏಕೆಂದರೆ ಅವನು ಸೋಲುವ ಹಾಗೆ ಅವನ ವಿರುದ್ಧ ಕುಯುಕ್ತಿಗಳನ್ನು ಕಲ್ಪಿಸಲಾಯಿತು.’ ಸಾ.ಶ. 275ರಲ್ಲಿ, ಅವನು ಪಾರಸಿಯರ ವಿರುದ್ಧ ಒಂದು ದಂಡಯಾತ್ರೆಯನ್ನು ಆರಂಭಿಸಿದನು. ಏಷ್ಯಾ ಮೈನರನ್ನು ಪ್ರವೇಶಿಸಲು ಜಲಸಂಧಿಯನ್ನು ದಾಟುವ ಅವಕಾಶಕ್ಕಾಗಿ ಥ್ರೇಸ್ನಲ್ಲಿ ಕಾಯುತ್ತಿದ್ದಾಗ, ‘ಅವನ ಮೃಷ್ಟಾನ್ನವನ್ನು ತಿಂದವರೇ’ ಅವನ ವಿರುದ್ಧ ಒಳಸಂಚುಗಳನ್ನು ನಡೆಸಿ, ಅವನ ಯೋಜನೆಯನ್ನು ‘ಭಂಗಪಡಿಸಿದರು.’ ಈ ಒಳಸಂಚಿನಿಂದ ಕ್ರೋಧಗೊಂಡ ಆರೀಲಿಯನನು ತನ್ನ ಕಾರ್ಯದರ್ಶಿಯಾದ ಇರಾಸ್ನಿಗೆ ಶಿಕ್ಷೆ ವಿಧಿಸಲಿದ್ದನು. ಅಷ್ಟರಲ್ಲಿ ಇರಾಸನು ಮರಣದಂಡನೆಗೆ ಗೊತ್ತುಮಾಡಲ್ಪಟ್ಟ ಕೆಲವೊಂದು ಅಧಿಕಾರಿಗಳ ಹೆಸರುಗಳಿದ್ದ ಸುಳ್ಳು ಪಟ್ಟಿಯನ್ನು ಸಿದ್ಧಪಡಿಸಿದನು. ಈ ಪಟ್ಟಿಯನ್ನು ನೋಡಿದ ಅಧಿಕಾರಿಗಳು ಆ ಕೂಡಲೆ ಆರೀಲಿಯನನ್ನು ಕೊಲ್ಲುವ ಹಂಚಿಕೆಯನ್ನು ರೂಪಿಸಿ, ಅವನನ್ನು ಕೊಲ್ಲುವ ಪ್ರಚೋದನೆಗೆ ಒಳಗಾದರು.
20. ಉತ್ತರ ರಾಜನ “ಮಿಲಿಟರಿ ಸೈನ್ಯ”ವು ಹೇಗೆ “ಕೊಚ್ಚಿಕೊಂಡು”ಹೋಯಿತು?
20 ಚಕ್ರವರ್ತಿ ಆರೀಲಿಯನನು ಮರಣಪಟ್ಟ ಕೂಡಲೆ ಉತ್ತರ ರಾಜನ ರಾಜಪರಂಪರೆಯು ಕೊನೆಗೊಳ್ಳಲಿಲ್ಲ. ಬೇರೆ ರೋಮನ್ ರಾಜರು ಅವನಿಗೆ ಬದಲಾಗಿ ಆ ಸ್ಥಾನವನ್ನು ಪಡೆದುಕೊಂಡರು. ಸ್ವಲ್ಪ ಸಮಯದ ವರೆಗೆ, ಒಬ್ಬ ಪಶ್ಚಿಮದ ಚಕ್ರವರ್ತಿಯೂ ಒಬ್ಬ ಪೂರ್ವದ ಚಕ್ರವರ್ತಿಯೂ ಸೇರಿಕೊಂಡು ರೋಮನ್ ಸಾಮ್ರಾಜ್ಯವನ್ನು ಆಳಿದರು. ಈ ವ್ಯಕ್ತಿಗಳ ನಾಯಕತ್ವದ ಕೆಳಗೆ, ಉತ್ತರ ರಾಜನ ಮಿಲಿಟರಿ ಸೈನ್ಯವು “ಕೊಚ್ಚಿಕೊಂಡು”ಹೋಯಿತು ಅಥವಾ “ಚದುರಿಸಲ್ಪಟ್ಟಿತು.”b ಮತ್ತು ಉತ್ತರದ ಜರ್ಮನ್ ಕುಲಗಳಿಂದ ಸತತವಾದ ದಾಳಿಗೆ ಒಳಗಾದುದರಿಂದ ಅನೇಕರು ‘ಹತರಾಗಿ ಬಿದ್ದರು.’ ಸಾ.ಶ. ನಾಲ್ಕನೆಯ ಶತಮಾನದಲ್ಲಿ, ಗಾತ್ ಜನರು ರೋಮನ್ ಗಡಿ ಪ್ರದೇಶಗಳನ್ನು ಭೇದಿಸಿಕೊಂಡು ಒಳನುಗ್ಗಿದರು. ಒಂದರ ನಂತರ ಇನ್ನೊಂದು ದಾಳಿಗಳು ಮುಂದುವರಿಯುತ್ತಲೇ ಇದ್ದವು. ಸಾ.ಶ. 476ರಲ್ಲಿ, ಜರ್ಮನ್ ನಾಯಕನಾದ ಓಡೋಆಸೆರನು ರೋಮನ್ನು ಆಳುತ್ತಿದ್ದ ಕೊನೆಯ ಚಕ್ರವರ್ತಿಯನ್ನು ಅಧಿಕಾರದಿಂದ ಇಳಿಸಿದನು. ಆರನೆಯ ಶತಮಾನದ ಆರಂಭದಷ್ಟಕ್ಕೆ, ಪಶ್ಚಿಮ ಭಾಗದಲ್ಲಿದ್ದ ರೋಮನ್ ಸಾಮ್ರಾಜ್ಯವು ಸಂಪೂರ್ಣವಾಗಿ ಧ್ವಂಸಗೊಂಡಿತ್ತು, ಮತ್ತು ಇಟಲಿ, ಉತ್ತರ ಆಫ್ರಿಕ, ಗಾಲ್, ಬ್ರಿಟ್ಯಾನಿಯ ಹಾಗೂ ಸ್ಪೆಯ್ನ್ಗಳನ್ನು ಜರ್ಮನ್ ರಾಜರು ಆಳುತ್ತಿದ್ದರು. ರೋಮನ್ ಸಾಮ್ರಾಜ್ಯದ ಪೂರ್ವ ಭಾಗವು, 15ನೆಯ ಶತಮಾನದ ತನಕವೂ ಅಸ್ತಿತ್ವದಲ್ಲಿತ್ತು.
ಒಂದು ದೊಡ್ಡ ಸಾಮ್ರಾಜ್ಯವು ವಿಭಾಗಿಸಲ್ಪಡುತ್ತದೆ
21, 22. ಸಾ.ಶ. ನಾಲ್ಕನೆಯ ಶತಮಾನದಲ್ಲಿ ಕಾನ್ಸ್ಟೆಂಟೀನನು ಯಾವ ಬದಲಾವಣೆಗಳನ್ನು ಜಾರಿಗೆ ತಂದನು?
21 ಯೆಹೋವನ ದೂತನು, ಅನೇಕ ಶತಮಾನಗಳ ವರೆಗೆ ಅಸ್ತಿತ್ವದಲ್ಲಿದ್ದಂತಹ ರೋಮನ್ ಸಾಮ್ರಾಜ್ಯದ ಕುಸಿತದ ಕುರಿತು ಅನಗತ್ಯವಾದ ಯಾವುದೇ ವಿವರಗಳನ್ನು ಕೊಡದೆ, ಉತ್ತರ ರಾಜ ಹಾಗೂ ದಕ್ಷಿಣ ರಾಜನ ಇನ್ನೂ ಹೆಚ್ಚಿನ ಶೋಷಣೆಗಳ ಕುರಿತು ಮುಂತಿಳಿಸತೊಡಗಿದನು. ಏನೇ ಆಗಲಿ, ರೋಮನ್ ಸಾಮ್ರಾಜ್ಯದಲ್ಲಿ ಉಂಟಾದ ಕೆಲವು ವಿಕಸನಗಳ ಕುರಿತಾದ ಪುನರ್ವಿಮರ್ಶೆಯು, ಕಾಲಾನಂತರ ಬರಲಿದ್ದ ಇಬ್ಬರು ಪ್ರತಿಸ್ಪರ್ಧಿ ರಾಜರನ್ನು ಗುರುತಿಸುವಂತೆ ನಮಗೆ ಸಹಾಯ ಮಾಡುವುದು.
22 ನಾಲ್ಕನೆಯ ಶತಮಾನದಲ್ಲಿ, ರೋಮನ್ ಚಕ್ರವರ್ತಿಯಾದ ಕಾನ್ಸ್ಟೆಂಟೀನನು ಧರ್ಮಭ್ರಷ್ಟ ಕ್ರೈಸ್ತಮತಕ್ಕೆ ಸರಕಾರದ ಮನ್ನಣೆಯನ್ನು ನೀಡಿದನು. ಸಾ.ಶ. 325ರಲ್ಲಿ, ಏಷ್ಯಾ ಮೈನರ್ನ ನೈಸೀಯದಲ್ಲಿ ಚರ್ಚಿನ ಒಂದು ಮಹಾ ಸಭೆಯನ್ನು ಒಟ್ಟುಗೂಡಿಸಿ, ವೈಯಕ್ತಿಕವಾಗಿ ಅದರ ಮೇಲ್ವಿಚಾರಣೆಯನ್ನು ನಡೆಸಿದನು. ತದನಂತರ, ಕಾನ್ಸ್ಟೆಂಟೀನನು ತನ್ನ ರಾಜಭವನವನ್ನು ರೋಮ್ನಿಂದ ಬೈಸ್ಯಾಂಟಿಯಮ್ಗೆ ಅಥವಾ ಕಾನ್ಸ್ಟೆಂಟಿನೋಪಲ್ಗೆ ಸ್ಥಳಾಂತರಿಸಿ, ಆ ಪಟ್ಟಣವನ್ನು ತನ್ನ ಹೊಸ ರಾಜಧಾನಿಯನ್ನಾಗಿ ಮಾಡಿಕೊಂಡನು. ಸಾ.ಶ. 395ರ ಜನವರಿ 17ರಂದು ಚಕ್ರವರ್ತಿ Iನೆಯ ಥಿಯೊಡೋಸಿಯಸನ ಮರಣದ ತನಕ, ರೋಮನ್ ಸಾಮ್ರಾಜ್ಯವು ಏಕಮಾತ್ರ ಚಕ್ರವರ್ತಿಯ ಆಳ್ವಿಕೆಯ ಕೆಳಗೆ ಮುಂದುವರಿಯಿತು.
23. (ಎ) ಥಿಯೊಡೋಸಿಯಸ್ನ ಮರಣಾನಂತರ ರೋಮನ್ ಸಾಮ್ರಾಜ್ಯದಲ್ಲಿ ಯಾವ ವಿಭಜನೆಯು ಉಂಟಾಯಿತು? (ಬಿ) ಪೂರ್ವ ಭಾಗದ ಸಾಮ್ರಾಜ್ಯವು ಯಾವಾಗ ಕೊನೆಗೊಂಡಿತು? (ಸಿ) ಯಾರು 1517ರಷ್ಟಕ್ಕೆ ಐಗುಪ್ತವನ್ನು ಆಳುತ್ತಿದ್ದರು?
23 ಥಿಯೊಡೋಸಿಯಸ್ನ ಮರಣಾನಂತರ ರೋಮನ್ ಸಾಮ್ರಾಜ್ಯವು ಅವನ ಪುತ್ರರ ಮಧ್ಯೆ ಹಂಚಿಹೋಯಿತು. ಹನೋರಿಯಸನಿಗೆ ಪಶ್ಚಿಮ ಭಾಗವು ಸಿಕ್ಕಿತು, ಮತ್ತು ಆರ್ಕೇಡಿಯಸ್ನಿಗೆ ಪೂರ್ವ ಭಾಗವು ಸಿಕ್ಕಿತು ಹಾಗೂ ಕಾನ್ಸ್ಟೆಂಟಿನೋಪಲ್ ಅವನ ರಾಜಧಾನಿಯಾಗಿ ಪರಿಣಮಿಸಿತು. ಬ್ರಿಟ್ಯಾನಿಯ, ಗಾಲ್, ಇಟಲಿ, ಸ್ಪೆಯ್ನ್, ಮತ್ತು ಉತ್ತರ ಆಫ್ರಿಕಗಳು, ಪಶ್ಚಿಮ ವಿಭಾಗಕ್ಕೆ ಸೇರಿದ್ದ ಪ್ರಾಂತಗಳಾಗಿದ್ದವು. ಮ್ಯಾಸಿಡೋನಿಯ, ಥ್ರೇಸ್, ಏಷ್ಯಾ ಮೈನರ್, ಸಿರಿಯ, ಹಾಗೂ ಐಗುಪ್ತಗಳು, ಪೂರ್ವ ವಿಭಾಗಕ್ಕೆ ಸೇರಿದ್ದ ಪ್ರಾಂತಗಳಾಗಿದ್ದವು. ಸಾ.ಶ. 642ರಲ್ಲಿ, ಐಗುಪ್ತದ ರಾಜಧಾನಿಯಾಗಿದ್ದ ಆ್ಯಲೆಕ್ಸಾಂಡ್ರಿಯವು ಅರಬ್ ಜನರ (ಸಾರಸೆನ್ರ) ವಶವಾಯಿತು, ಮತ್ತು ಐಗುಪ್ತವು ಕಲೀಫರ ಪ್ರಾಂತವಾಗಿ ಪರಿಣಮಿಸಿತು. 1449ರ ಜನವರಿ ತಿಂಗಳಿನಲ್ಲಿ, XIನೆಯ ಕಾನ್ಸ್ಟೆಂಟೀನನು ಪೂರ್ವ ಭಾಗದ ಕೊನೆಯ ಚಕ್ರವರ್ತಿಯಾದನು. 1453ರ ಮೇ 29ರಂದು, IIನೆಯ ಸುಲ್ತಾನ್ ಮೆಮೆಟ್ನ ನಾಯಕತ್ವದ ಕೆಳಗೆ ಆಟೊಮನ್ ತುರ್ಕರು ಕಾನ್ಸ್ಟೆಂಟಿನೋಪಲನ್ನು ವಶಪಡಿಸಿಕೊಂಡರು. ಹೀಗೆ ಪೂರ್ವ ಭಾಗದ ರೋಮನ್ ಸಾಮ್ರಾಜ್ಯವು ಕೊನೆಗೊಂಡಿತು. 1517ನೆಯ ವರ್ಷದಲ್ಲಿ ಐಗುಪ್ತವು ಟರ್ಕಿಯ ಪ್ರಾಂತವಾಗಿ ಪರಿಣಮಿಸಿತು. ಆದರೂ, ಪುರಾತನ ದಕ್ಷಿಣ ರಾಜನಿಗೆ ಸೇರಿದ್ದ ಈ ದೇಶವು, ಸಕಾಲದಲ್ಲಿ ಪಶ್ಚಿಮ ಭಾಗದಿಂದ ಬಂದ ಇನ್ನೊಂದು ಸಾಮ್ರಾಜ್ಯಕ್ಕೆ ಅಧೀನವಾಗಲಿತ್ತು.
24, 25. (ಎ) ಕೆಲವು ಇತಿಹಾಸಕಾರರಿಗನುಸಾರ, ಪವಿತ್ರ ರೋಮನ್ ಸಾಮ್ರಾಜ್ಯದ ಆರಂಭವನ್ನು ಯಾವುದು ಗುರುತಿಸಿತು? (ಬಿ) ಪವಿತ್ರ ರೋಮನ್ ಸಾಮ್ರಾಜ್ಯದ “ಚಕ್ರವರ್ತಿ” ಎಂಬ ಬಿರುದಿಗೆ ಅಂತಿಮವಾಗಿ ಏನು ಸಂಭವಿಸಿತು?
24 ರೋಮನ್ ಸಾಮ್ರಾಜ್ಯದ ಪಶ್ಚಿಮ ಪಾರ್ಶ್ವದಲ್ಲಿ, ರೋಮ್ನ ಕ್ಯಾಥೊಲಿಕ್ ಬಿಷಪರು ಅಧಿಕಾರಕ್ಕೆ ಬಂದರು. ಅವರಲ್ಲಿ ವಿಶೇಷವಾಗಿ Iನೆಯ ಪೋಪ್ ಲಿಯೋ ಒಬ್ಬನಾಗಿದ್ದು, ಸಾ.ಶ. ಐದನೆಯ ಶತಮಾನದಲ್ಲಿ ಪೋಪರ ಅಧಿಕಾರವನ್ನು ಸಮರ್ಥಿಸಿದ್ದಕ್ಕಾಗಿ ಬಹಳ ಹೆಸರುವಾಸಿಯಾಗಿದ್ದನು. ಸ್ವಲ್ಪ ಸಮಯದ ನಂತರ, ಪಶ್ಚಿಮ ಭಾಗದ ಚಕ್ರವರ್ತಿಗೆ ರಾಜ್ಯಾಭಿಷೇಕಮಾಡುವ ಹಕ್ಕನ್ನು ಈ ಪೋಪ್ ತನ್ನದಾಗಿ ಮಾಡಿಕೊಂಡನು. ಇದು ಸಾ.ಶ. 800ರ ಕ್ರಿಸ್ಮಸ್ ದಿನದಂದು ರೋಮ್ನಲ್ಲಿ ಸಂಭವಿಸಿತು; ಅಂದು IIIನೆಯ ಪೋಪ್ ಲಿಯೋ, ಫ್ರ್ಯಾಂಕರ ರಾಜನಾದ ಚಾರ್ಲ್ಸ್ (ಶಾಲ್ಮೇನ್)ನನ್ನು ಹೊಸ ಪಶ್ಚಿಮ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ರಾಜ್ಯಾಭಿಷೇಕ ಮಾಡಿದನು. ಈ ಕಿರೀಟಧಾರಣೆಯು, ರೋಮ್ನಲ್ಲಿ ಚಕ್ರವರ್ತಿ ಸ್ಥಾನವನ್ನು ಮತ್ತೆ ಆರಂಭಿಸಿತು. ಮತ್ತು ಕೆಲವು ಇತಿಹಾಸಕಾರರು ಹೇಳುವಂತೆ, ಈ ಘಟನೆಯು ಪವಿತ್ರ ರೋಮನ್ ಸಾಮ್ರಾಜ್ಯದ ಆರಂಭವನ್ನೂ ಗುರುತಿಸಿತು. ಅಂದಿನಿಂದ ಪೂರ್ವ ಸಾಮ್ರಾಜ್ಯ ಮತ್ತು ಪಶ್ಚಿಮದಲ್ಲಿ ಪವಿತ್ರ ರೋಮನ್ ಸಾಮ್ರಾಜ್ಯವು ಅಸ್ತಿತ್ವಕ್ಕೆ ಬಂದವು; ಈ ಎರಡೂ ಸಾಮ್ರಾಜ್ಯಗಳು ತಾವು ಕ್ರೈಸ್ತಧರ್ಮಕ್ಕೆ ಸೇರಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದವು.
25 ಸಮಯ ಕಳೆದಂತೆ, ಶಾಲ್ಮೇನ್ನ ಉತ್ತರಾಧಿಕಾರಿಗಳು ಕೆಲಸಕ್ಕೆ ಬಾರದಂತಹ ರಾಜರಾಗಿ ಕಂಡುಬಂದರು. ಸ್ವಲ್ಪಕಾಲದ ವರೆಗೆ ಚಕ್ರವರ್ತಿಯ ಸ್ಥಾನವು ಖಾಲಿಯಾಗಿ ಬಿದ್ದಿತ್ತು. ಈ ಮಧ್ಯೆ, ಇಟಲಿಯ ಉತ್ತರಭಾಗ ಹಾಗೂ ಮಧ್ಯಭಾಗವು ಜರ್ಮನ್ ರಾಜನಾದ Iನೆಯ ಆಟೊನ ಅಧೀನದಲ್ಲಿತ್ತು. ತಾನೇ ಇಟಲಿಯ ರಾಜನಾಗಿದ್ದೇನೆ ಎಂದು ಅವನು ಘೋಷಿಸಿಬಿಟ್ಟನು. ಸಾ.ಶ. 962ರ ಫೆಬ್ರವರಿ 2ರಂದು, XIIನೆಯ ಪೋಪ್ ಜಾನ್, Iನೆಯ ಆಟೊನನ್ನು ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ಪಟ್ಟಾಭಿಷೇಕಿಸಿದನು. ಅದರ ರಾಜಧಾನಿಯು ಜರ್ಮನಿಯಲ್ಲಿತ್ತು, ಮತ್ತು ಅದರ ಚಕ್ರವರ್ತಿಗಳು ಜರ್ಮನರಾಗಿದ್ದರು, ಹಾಗೆಯೇ ಅದರ ಅಧಿಕಾಂಶ ಪ್ರಜೆಗಳೂ ಜರ್ಮನರೇ ಆಗಿದ್ದರು. ಐದು ಶತಮಾನಗಳ ಬಳಿಕ, ಆಸ್ಟ್ರಿಯದ ಹ್ಯಾಪ್ಸ್ಬರ್ಗ್ ರಾಜಮನೆತನವು “ಚಕ್ರವರ್ತಿ”ಯ ಬಿರುದನ್ನು ಪಡೆದುಕೊಂಡಿತು ಮತ್ತು ಪವಿತ್ರ ರೋಮನ್ ಸಾಮ್ರಾಜ್ಯದ ಉಳಿದ ವರ್ಷಗಳಲ್ಲೆಲ್ಲ ಅದು ತನ್ನ ಈ ಸ್ಥಾನವನ್ನು ಕಾಪಾಡಿಕೊಂಡಿತು.
ಇಬ್ಬರು ಅರಸರು ಪುನಃ ಸ್ಪಷ್ಟವಾಗಿ ತೋರಿಬರುತ್ತಾರೆ
26. (ಎ) ಪವಿತ್ರ ರೋಮನ್ ಸಾಮ್ರಾಜ್ಯದ ಅಂತ್ಯದ ಕುರಿತು ಏನು ಹೇಳಸಾಧ್ಯವಿದೆ? (ಬಿ) ಉತ್ತರ ರಾಜನೋಪಾದಿ ಯಾರು ಅಧಿಕಾರಕ್ಕೆ ಬಂದರು?
26 ಇಸವಿ 1805ರ ಸಮಯಾವಧಿಯಲ್ಲಿ, Iನೆಯ ನೆಪೋಲಿಯನನು ಜರ್ಮನಿಯಲ್ಲಿ ಅನೇಕ ವಿಜಯಗಳನ್ನು ಪಡೆದುಕೊಂಡ ಬಳಿಕ, ಪವಿತ್ರ ರೋಮನ್ ಸಾಮ್ರಾಜ್ಯದ ಅಸ್ತಿತ್ವವನ್ನು ಅಂಗೀಕರಿಸಲು ನಿರಾಕರಿಸಿದಾಗ, ಅದಕ್ಕೆ ಒಂದು ಮಾರಕ ಹೊಡೆತವನ್ನು ಕೊಟ್ಟನು. ತನ್ನ ಸಿಂಹಾಸನವನ್ನು ಸಂರಕ್ಷಿಸಿಕೊಳ್ಳಲು ಅಸಮರ್ಥನಾದ IIನೆಯ ಫ್ರಾನ್ಸಿಸ್ ಎಂಬ ಚಕ್ರವರ್ತಿಯು, 1806ರ ಆಗಸ್ಟ್ 6ರಂದು ರೋಮ್ನ ಸಾಮ್ರಾಟ ಪದವಿಗೆ ರಾಜೀನಾಮೆ ಕೊಟ್ಟು, ಆಸ್ಟ್ರಿಯದ ಚಕ್ರವರ್ತಿಯೋಪಾದಿ ತನ್ನ ರಾಷ್ಟ್ರೀಯ ಸರಕಾರಕ್ಕೆ ಹಿಂದಿರುಗಿದನು. IIIನೆಯ ಲಿಯೋ ಎಂಬ ರೋಮನ್ ಕ್ಯಾಥೊಲಿಕ್ ಪೋಪನಿಂದ ಮತ್ತು ಫ್ರ್ಯಾಂಕರ ರಾಜ ಶಾಲ್ಮೇನ್ನಿಂದ ಸ್ಥಾಪಿಸಲ್ಪಟ್ಟ ಪವಿತ್ರ ರೋಮನ್ ಸಾಮ್ರಾಜ್ಯವು, 1,006 ವರ್ಷಗಳ ಬಳಿಕ ಸಂಪೂರ್ಣವಾಗಿ ಕೊನೆಗೊಂಡಿತು. 1870ರಲ್ಲಿ ಇಟಲಿಯು, ವ್ಯಾಟಿಕನಿನ ರೋಮನ್ ಪೋಪರಿಂದ ಸ್ವತಂತ್ರವಾದ ಒಂದು ರಾಜ್ಯವಾಗಿ ಪರಿಣಮಿಸಿತು. ಮುಂದಿನ ವರ್ಷ, Iನೆಯ ವಿಲ್ಹೆಲ್ಮ್ನನ್ನು ಕೈಸರನನ್ನಾಗಿ ಮಾಡುವ ಮೂಲಕ ಜರ್ಮನಿಯ ಸಾಮ್ರಾಜ್ಯವು ಆರಂಭಗೊಂಡಿತು. ಹೀಗೆ, ಆಧುನಿಕ ದಿನದ ಉತ್ತರ ರಾಜನಾಗಿರುವ ಜರ್ಮನಿಯು, ಲೋಕ ರಂಗವನ್ನು ಪ್ರವೇಶಿಸಿತು.
27. (ಎ) ಐಗುಪ್ತವು ಹೇಗೆ ಬ್ರಿಟಿಷ್ ರಕ್ಷಿತ ಸಂಸ್ಥಾನವಾಗಿ ಪರಿಣಮಿಸಿತು? (ಬಿ) ದಕ್ಷಿಣ ರಾಜನ ಸ್ಥಾನಕ್ಕೆ ಯಾರು ಬಂದರು?
27 ಆದರೆ ಆಧುನಿಕ ದಿನದ ದಕ್ಷಿಣ ರಾಜನ ಸ್ವರೂಪವು ಯಾವುದಾಗಿತ್ತು? 17ನೆಯ ಶತಮಾನದಲ್ಲಿ ಗ್ರೇಟ್ ಬ್ರಿಟನ್, ಸಾಮ್ರಾಜ್ಯದ ಅಧಿಕಾರವನ್ನು ಪಡೆದುಕೊಂಡಿತು ಎಂದು ಇತಿಹಾಸವು ತೋರಿಸುತ್ತದೆ. ಬ್ರಿಟಿಷರ ವ್ಯಾಪಾರ ಮಾರ್ಗಗಳನ್ನು ನಾಶಮಾಡಲು ಬಯಸುತ್ತಾ, Iನೆಯ ನೆಪೋಲಿಯನನು 1798ರಲ್ಲಿ ಐಗುಪ್ತವನ್ನು ವಶಪಡಿಸಿಕೊಂಡನು. ಇದರ ಪರಿಣಾಮವಾಗಿ ಯುದ್ಧವು ತಲೆದೋರಿತು, ಮತ್ತು ಬ್ರಿಟಿಷ್-ಆಟೊಮನ್ ಒಕ್ಕೂಟವು, ಹೋರಾಟದ ಆರಂಭದಲ್ಲಿ ದಕ್ಷಿಣ ರಾಜನೆಂದು ಗುರುತಿಸಲ್ಪಟ್ಟಿದ್ದ ಐಗುಪ್ತದಿಂದ ಹಿಂದಿರುಗುವಂತೆ ಆ ಫ್ರೆಂಚರನ್ನು ಒತ್ತಾಯಿಸಿತು. ಮುಂದಿನ ಶತಮಾನದಲ್ಲಿ, ಐಗುಪ್ತದಲ್ಲಿನ ಬ್ರಿಟಿಷ್ ಪ್ರಭಾವವು ಇನ್ನೂ ಹೆಚ್ಚಾಯಿತು. 1882ರ ನಂತರ, ನಿಜವಾಗಿಯೂ ಐಗುಪ್ತವು ಬ್ರಿಟನಿನ ಒಂದು ಸಾಮಂತ ರಾಷ್ಟ್ರವಾಗಿ ಪರಿಣಮಿಸಿತ್ತು. 1914ರಲ್ಲಿ Iನೆಯ ಲೋಕ ಯುದ್ಧವು ಆರಂಭಗೊಂಡಾಗ, ಐಗುಪ್ತವು ಟರ್ಕಿಗೆ ಸೇರಿದ್ದಾಗಿದ್ದು, ಒಬ್ಬ ಖಡೀವ್ ಅಥವಾ ವೈಸ್ರಾಯ್ ಅದನ್ನು ಆಳುತ್ತಿದ್ದನು. ಆದರೂ, ಆ ಯುದ್ಧದಲ್ಲಿ ಟರ್ಕಿಯು ಜರ್ಮನಿಯ ಪಕ್ಷ ವಹಿಸಿದಾಗ, ಬ್ರಿಟಿಷರು ಖಡೀವ್ನನ್ನು ಅಧಿಕಾರದಿಂದ ತೆಗೆದುಹಾಕಿ, ಐಗುಪ್ತವನ್ನು ಒಂದು ಬ್ರಿಟಿಷ್ ರಕ್ಷಿತ ಸಂಸ್ಥಾನವೆಂದು ಘೋಷಿಸಿದರು. ಕಾಲಕ್ರಮೇಣ ಬ್ರಿಟನ್ ಹಾಗೂ ಅಮೆರಿಕಗಳು ನಿಕಟವಾದ ಸಂಬಂಧಗಳನ್ನು ರೂಪಿಸಿಕೊಂಡು, ಆ್ಯಂಗ್ಲೊ-ಅಮೆರಿಕನ್ ಲೋಕ ಶಕ್ತಿಯಾಗಿ ಪರಿಣಮಿಸಿದವು. ಇವೆರಡೂ ಒಟ್ಟಾಗಿಯೇ ದಕ್ಷಿಣ ರಾಜನ ಸ್ಥಾನವನ್ನು ಆಕ್ರಮಿಸಿದವು.
[ಅಧ್ಯಯನ ಪ್ರಶ್ನೆಗಳು]
a “ಉತ್ತರ ರಾಜ” ಹಾಗೂ “ದಕ್ಷಿಣ ರಾಜ” ಎಂಬ ಬಿರುದುಗಳು ಕೇವಲ ಪದವಿಗಳಾಗಿರುವುದರಿಂದ, ಅವು ಆಳ್ವಿಕೆ ನಡಿಸುತ್ತಿರುವ ಯಾವುದೇ ರಾಜ್ಯಕ್ಕೆ, ರಾಜನಿಗೆ, ರಾಣಿಗೆ, ಅಥವಾ ಜನಾಂಗಗಳ ಗುಂಪಿಗೆ ಸೂಚಿಸಸಾಧ್ಯವಿದೆ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್—ವಿದ್ ರೆಫರೆನ್ಸಸ್ ಬೈಬಲಿನಲ್ಲಿ, ದಾನಿಯೇಲ 11:26ನೆಯ ವಚನಕ್ಕಿರುವ ಪಾದಟಿಪ್ಪಣಿಯನ್ನು ನೋಡಿರಿ.
ನೀವೇನನ್ನು ಗ್ರಹಿಸಿದಿರಿ?
• ಯಾವ ರೋಮನ್ ಚಕ್ರವರ್ತಿಯು ಮೊದಲನೆಯ ಉತ್ತರ ರಾಜನಾಗಿ ಅಧಿಕಾರಕ್ಕೆ ಬಂದನು, ಮತ್ತು ಅವನು ಒಬ್ಬ “ವಸೂಲಿಗಾರ”ನನ್ನು ಯಾವಾಗ ಕಳುಹಿಸಿದನು?
• ಅಗಸ್ಟಸ್ನ ಮರಣಾನಂತರ ಉತ್ತರ ರಾಜನ ಸ್ಥಾನಕ್ಕೆ ಯಾರು ಬಂದರು, ಮತ್ತು ‘ಒಡಂಬಡಿಕೆಯ ಅಧಿಪತಿ’ಯು ಹೇಗೆ ಭಗ್ನಗೊಳಿಸಲ್ಪಟ್ಟನು?
• ಉತ್ತರ ರಾಜನ ಸ್ಥಾನದಲ್ಲಿದ್ದ ಆರೀಲಿಯನ್ ಹಾಗೂ ದಕ್ಷಿಣ ರಾಜನ ಸ್ಥಾನದಲ್ಲಿದ್ದ ಸೆನೋಬಿಯಳ ನಡುವಿನ ಹೋರಾಟದ ಫಲಿತಾಂಶವು ಏನಾಗಿತ್ತು?
• ರೋಮನ್ ಸಾಮ್ರಾಜ್ಯಕ್ಕೆ ಏನು ಸಂಭವಿಸಿತು, ಮತ್ತು 19ನೆಯ ಶತಮಾನದ ಅಂತ್ಯದಷ್ಟಕ್ಕೆ ಇಬ್ಬರು ರಾಜರ ಸ್ಥಾನಗಳಲ್ಲಿ ಯಾವ ಲೋಕ ಶಕ್ತಿಗಳು ಇದ್ದವು?
[Box/Picture on page 248-251]
ಒಬ್ಬನು ಗೌರವಿಸಲ್ಪಟ್ಟನು, ಮತ್ತೊಬ್ಬನು ಕಡೆಗಣಿಸಲ್ಪಟ್ಟನು
ಒಬ್ಬನು, ಕಲಹದಿಂದ ಕೂಡಿದ್ದ ಪ್ರಜಾಧಿಪತ್ಯವನ್ನು ಒಂದು ಲೋಕ ಸಾಮ್ರಾಜ್ಯವನ್ನಾಗಿ ಮಾರ್ಪಡಿಸಿದನು. ಇನ್ನೊಬ್ಬನು 23 ವರ್ಷಗಳಲ್ಲಿ ಆ ಸಾಮ್ರಾಜ್ಯದ ಐಶ್ವರ್ಯವನ್ನು ಇಪ್ಪತ್ತು ಪಟ್ಟು ಹೆಚ್ಚಿಸಿದನು. ಒಬ್ಬನು ಮೃತಪಟ್ಟಾಗ ಗೌರವಿಸಲ್ಪಟ್ಟನು, ಆದರೆ ಇನ್ನೊಬ್ಬನು ಕಡೆಗಣಿಸಲ್ಪಟ್ಟನು. ಈ ಇಬ್ಬರು ಚಕ್ರವರ್ತಿಗಳ ಆಳ್ವಿಕೆಯು, ಯೇಸುವಿನ ಜೀವನ ಮತ್ತು ಶುಶ್ರೂಷೆಯ ಕಾಲಾವಧಿಯಲ್ಲಿ ನಡೆಯಿತು. ಅವರು ಯಾರಾಗಿದ್ದರು? ಮತ್ತು ಒಬ್ಬನನ್ನು ಗೌರವಿಸಿ, ಇನ್ನೊಬ್ಬನನ್ನು ಏಕೆ ಕಡೆಗಣಿಸಲಾಯಿತು?
ಅವನು ‘ಇಟ್ಟಿಗೆಯಿಂದ ಕಟ್ಟಲ್ಪಟ್ಟಿದ್ದ ರೋಮ್ ನಗರವನ್ನು ಅಮೃತಶಿಲೆಯ ನಗರವಾಗಿ ಮಾರ್ಪಡಿಸಿದನು’
ಸಾ.ಶ.ಪೂ. 44ರಲ್ಲಿ ಜೂಲಿಯಸ್ ಸೀಸರನು ಹತಿಸಲ್ಪಟ್ಟಾಗ, ಅವನ ಸಹೋದರಿಯ ಮೊಮ್ಮಗನಾದ ಗಾಯಸ್ ಆಕ್ಟೇವಿಯನ್ ಕೇವಲ 18 ವರ್ಷ ಪ್ರಾಯದವನಾಗಿದ್ದನು. ಜೂಲಿಯಸ್ ಸೀಸರನ ದತ್ತುಪುತ್ರನೂ ಅವನ ನಂತರ ಸಿಂಹಾಸನದ ಪ್ರಮುಖ ಬಾಧ್ಯಸ್ಥನೂ ಆಗಿದ್ದ ಯುವ ಆಕ್ಟೇವಿಯನನು, ಉತ್ತರಾಧಿಕಾರವನ್ನು ವಹಿಸಲು ಆ ಕೂಡಲೆ ರೋಮ್ಗೆ ಹೋದನು. ಅಲ್ಲಿ ಅವನು ಜಯಿಸಲು ಅಸಾಧ್ಯವಾದಂತಹ ಒಬ್ಬ ವಿರೋಧಿಯನ್ನು ಎದುರಿಸಬೇಕಾಯಿತು. ಜೂಲಿಯಸ್ ಸೀಸರನ ಮುಖ್ಯ ಅಧಿಕಾರಿಯಾದ ಮಾರ್ಕ್ ಆ್ಯಂಟನಿಯೇ ಅವನಾಗಿದ್ದು, ತಾನೇ ಸಿಂಹಾಸನಕ್ಕೆ ಪ್ರಧಾನ ಬಾಧ್ಯಸ್ಥನಾಗಲಿದ್ದೇನೆ ಎಂದು ಅವನು ನೆನಸಿದ್ದನು. ಇದರ ಪರಿಣಾಮವಾಗಿ ಉಂಟಾದ ರಾಜಕೀಯ ಒಳಸಂಚು ಹಾಗೂ ಅಧಿಕಾರಕ್ಕಾಗಿರುವ ಹೋರಾಟವು 13 ವರ್ಷಗಳ ವರೆಗೆ ನಡೆಯಿತು.
ಐಗುಪ್ತದ ರಾಣಿ ಕ್ಲಿಯೋಪಾತ್ರ ಹಾಗೂ ಅವಳ ಪ್ರಿಯಕರನಾದ ಮಾರ್ಕ್ ಆ್ಯಂಟನಿಯ ಸೈನ್ಯಗಳನ್ನು ಸೋಲಿಸಿದ (ಸಾ.ಶ.ಪೂ. 31ರಲ್ಲಿ) ಬಳಿಕವೇ ಆಕ್ಟೇವಿಯನನು ರೋಮನ್ ಸಾಮ್ರಾಜ್ಯದ ಅಂಗೀಕೃತ ರಾಜನಾದನು. ಮುಂದಿನ ವರ್ಷ ಆ್ಯಂಟನಿ ಹಾಗೂ ಕ್ಲಿಯೋಪಾತ್ರರು ಆತ್ಮಹತ್ಯೆಮಾಡಿಕೊಂಡಾಗ, ಆಕ್ಟೇವಿಯನನು ಐಗುಪ್ತವನ್ನು ಸಹ ಸ್ವಾಧೀನಪಡಿಸಿಕೊಂಡನು. ಹೀಗೆ, ಗ್ರೀಕ್ ಸಾಮ್ರಾಜ್ಯದ ಕೊನೆಯ ಗುರುತು ಸಹ ಅಳಿಸಿಹಾಕಲ್ಪಟ್ಟಿತು, ಮತ್ತು ರೋಮ್ ಒಂದು ಲೋಕ ಶಕ್ತಿಯಾಗಿ ಪರಿಣಮಿಸಿತು.
ಜೂಲಿಯಸ್ ಸೀಸರನು ದಬ್ಬಾಳಿಕೆಯಿಂದ ಆಳ್ವಿಕೆ ನಡಿಸಿದ್ದಕ್ಕಾಗಿ ಅವನ ಹತ್ಯೆಯಾಯಿತು ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡ ಆಕ್ಟೇವಿಯನನು, ಅದೇ ತಪ್ಪನ್ನು ಪುನಃ ಮಾಡದಿರುವಂತೆ ಜಾಗ್ರತೆ ವಹಿಸಿದನು. ರೋಮ್ನ ಅಧಿಕಾಂಶ ಪ್ರಜೆಗಳು ಪ್ರಜಾಪ್ರಭುತ್ವವನ್ನು ಇಷ್ಟಪಡುತ್ತಿದ್ದುದರಿಂದ, ಯಾವುದೇ ರೀತಿಯಲ್ಲಿ ಅವರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲು ಬಯಸದಿದ್ದ ಆಕ್ಟೇವಿಯನನು, ತನ್ನ ರಾಜಪ್ರಭುತ್ವವನ್ನು ಪ್ರಜಾಧಿಪತ್ಯದ ಸೋಗಿನಲ್ಲಿ ಮರೆಮಾಡಿದನು. “ರಾಜ” ಹಾಗೂ “ನಿರಂಕುಶ ಪ್ರಭು” ಎಂಬ ಬಿರುದುಗಳನ್ನು ಅವನು ನಿರಾಕರಿಸಿಬಿಟ್ಟನು. ಅಷ್ಟುಮಾತ್ರವಲ್ಲ, ಎಲ್ಲ ಪ್ರಾಂತಗಳ ಮೇಲ್ವಿಚಾರಣೆಯನ್ನು ತಾನು ರೋಮನ್ ಶಾಸನಸಭೆಗೆ ಒಪ್ಪಿಸಿಬಿಡಲು ಇಷ್ಟಪಡುತ್ತೇನೆ ಎಂದು ಅವನು ಪ್ರಕಟಿಸಿದನು ಮತ್ತು ತನಗಿರುವ ಅಧಿಕಾರಕ್ಕೆ ರಾಜೀನಾಮೆಯನ್ನೂ ಕೊಟ್ಟುಬಿಡುತ್ತೇನೆ ಎಂದು ಹೇಳಿದನು. ಈ ಉಪಾಯವು ಫಲಿಸಿತು. ಈ ವಿಚಾರವನ್ನು ಗ್ರಹಿಸಿದ ಶಾಸನಸಭೆಯು, ಆಕ್ಟೇವಿಯನನು ತನ್ನ ಸ್ಥಾನಮಾನಗಳನ್ನೇ ಮುಂದುವರಿಸಿಕೊಂಡು ಹೋಗುವಂತೆ ಹಾಗೂ ಕೆಲವೊಂದು ಪ್ರಾಂತಗಳ ಮೇಲ್ವಿಚಾರಣೆ ಮಾಡುವಂತೆ ಅವನನ್ನು ಪ್ರಚೋದಿಸಿತು.
ಇದಲ್ಲದೆ, ಸಾ.ಶ.ಪೂ. 27ರ ಜನವರಿ 16ರಂದು, ಶಾಸನಸಭೆಯು ಆಕ್ಟೇವಿಯನ್ಗೆ “ಅಗಸ್ಟಸ್” ಎಂಬ ಬಿರುದನ್ನು ನೀಡಿತು. ಇದರ ಅರ್ಥ “ಮಹಿಮಾಯುತನು, ಪವಿತ್ರನು” ಎಂದಾಗಿತ್ತು. ಆಕ್ಟೇವಿಯನನು ಈ ಬಿರುದನ್ನು ಸ್ವೀಕರಿಸಿದನು, ಹಾಗೂ ತನ್ನ ಜ್ಞಾಪಕಾರ್ಥವಾಗಿ ಒಂದು ತಿಂಗಳಿಗೆ ತನ್ನ ಹೆಸರನ್ನು ಸಹ ಕೊಟ್ಟನು. ಅಷ್ಟುಮಾತ್ರವಲ್ಲ ಫೆಬ್ರವರಿ ತಿಂಗಳಿನಿಂದ ಒಂದು ದಿನವನ್ನು ಕಡಿಮೆಗೊಳಿಸಿ, ಆ ದಿನವನ್ನು ಆಗಸ್ಟ್ ತಿಂಗಳಿಗೆ ಕೂಡಿಸಿದನು. ಜೂಲಿಯಸ್ ಸೀಸರನ ನಾಮಾರ್ಥವಾಗಿರುವ ಜುಲೈ ತಿಂಗಳಲ್ಲಿರುವಷ್ಟೇ ದಿನಗಳು ಆಗಸ್ಟ್ ತಿಂಗಳಿನಲ್ಲಿಯೂ ಇರಬೇಕೆಂಬ ಉದ್ದೇಶದಿಂದಲೇ ಅವನು ಹೀಗೆ ಮಾಡಿದನು. ಹೀಗೆ ಆಕ್ಟೇವಿಯನನು ರೋಮ್ನ ಪ್ರಪ್ರಥಮ ಚಕ್ರವರ್ತಿಯಾದನು ಮತ್ತು ಅಂದಿನಿಂದ ಕೈಸರ್ ಅಗಸ್ಟಸ್ ಅಥವಾ “ಮಹಾನುಭಾವ” ಎಂದು ಪ್ರಸಿದ್ಧನಾದನು. ಕಾಲಾನಂತರ ಅವನು “ಪಾಂಟಿಫೆಕ್ಸ್ ಮ್ಯಾಕ್ಸಿಮಸ್” (ಮಹಾಯಾಜಕ) ಎಂಬ ಬಿರುದನ್ನು ಸಹ ಪಡೆದುಕೊಂಡನು, ಮತ್ತು ಯೇಸು ಜನಿಸಿದ ವರ್ಷವಾದ ಸಾ.ಶ.ಪೂ. 2ರಲ್ಲಿ, ಶಾಸನಸಭೆಯು ಅವನಿಗೆ ಪಾಟರ್ ಪಾಟ್ರಿಐ, ಅಂದರೆ “ರಾಷ್ಟ್ರಪಿತ” ಎಂಬ ಬಿರುದನ್ನೂ ಕೊಟ್ಟಿತು.
ಅದೇ ವರ್ಷದಲ್ಲಿ, “ರಾಜ್ಯವೆಲ್ಲಾ ಖಾನೆಷುಮಾರಿ ಬರಸಿಕೊಳ್ಳಬೇಕೆಂಬ ಆಜ್ಞೆಯು ಚಕ್ರವರ್ತಿಯಾದ ಔಗುಸ್ತನಿಂದ ಹೊರಟಿತು. . . . ಆಗ ಎಲ್ಲರೂ ಖಾನೆಷುಮಾರಿ ಬರಸಿಕೊಳ್ಳುವದಕ್ಕಾಗಿ ತಮ್ಮ ತಮ್ಮ ಊರುಗಳಿಗೆ ಹೊರಟರು.” (ಲೂಕ 2:1-3) ಈ ರಾಜಾಜ್ಞೆಯ ಫಲಿತಾಂಶವಾಗಿ, ಬೈಬಲ್ ಪ್ರವಾದನೆಯನ್ನು ನೆರವೇರಿಸುತ್ತಾ ಯೇಸು ಬೇತ್ಲೆಹೇಮ್ನಲ್ಲಿ ಜನಿಸಿದನು.—ದಾನಿಯೇಲ 11:20; ಮೀಕ 5:2.
ಅಗಸ್ಟಸ್ನ ಅಧೀನದಲ್ಲಿದ್ದ ಸರಕಾರದಲ್ಲಿ, ಸ್ವಲ್ಪಮಟ್ಟಿಗಿನ ಪ್ರಾಮಾಣಿಕತೆ ಹಾಗೂ ಸ್ಥಿರವಾದ ಹಣಕಾಸಿನ ವ್ಯವಸ್ಥೆಯಿತ್ತು. ಅಗಸ್ಟಸನು ಕಾರ್ಯಸಾಧಕವಾದ ಅಂಚೆ ವ್ಯವಸ್ಥೆಯನ್ನು ಸಹ ಆರಂಭಿಸಿದನು ಮತ್ತು ರಸ್ತೆಗಳನ್ನೂ ಸೇತುವೆಗಳನ್ನೂ ಕಟ್ಟಿಸಿದನು. ಅವನು ಸೈನ್ಯವನ್ನು ಸರಿಯಾದ ರೀತಿಯಲ್ಲಿ ವ್ಯವಸ್ಥಾಪಿಸಿದನು, ಒಂದು ಕಾಯಂ ನೌಕಾಬಲವನ್ನು ರಚಿಸಿದನು, ಮತ್ತು ಪ್ರೀಟೋರಿಯನ್ ಗಾರ್ಡ್ ಎಂದು ಪ್ರಸಿದ್ಧವಾದ ಒಂದು ಅಂಗರಕ್ಷಕ ದಳವನ್ನು ಸ್ಥಾಪಿಸಿದನು. (ಫಿಲಿಪ್ಪಿ 1:13) ಇವನ ಆಶ್ರಯದಲ್ಲಿ, ವರ್ಜಿಲ್ ಹಾಗೂ ಹಾರೆಸ್ ಎಂಬ ಬರಹಗಾರರು ಏಳಿಗೆ ಹೊಂದಿದರು. ಮತ್ತು ಈಗ ಯಾವುದು ಪ್ರಾಚೀನ ಶೈಲಿ ಎಂದು ಕರೆಯಲ್ಪಡುತ್ತದೋ ಆ ಶೈಲಿಯಲ್ಲಿ ಶಿಲ್ಪಿಗಳು ಸುಂದರವಾದ ಶಿಲ್ಪಗಳನ್ನು ಕೆತ್ತಿದರು. ಜೂಲಿಯಸ್ ಸೀಸರನು ಪೂರ್ತಿಯಾಗಿ ಕಟ್ಟಿಸದೆ ಬಿಟ್ಟಿದ್ದ ಕಟ್ಟಡಗಳನ್ನು ಅಗಸ್ಟಸನು ಪೂರ್ಣಗೊಳಿಸಿದನು ಮತ್ತು ಅನೇಕ ದೇವಾಲಯಗಳನ್ನು ನವೀಕರಿಸಿದನು. ಅವನು ಜಾರಿಗೆ ತಂದ ಪ್ಯಾಕ್ಸ್ ರೊಮಾನ (“ರೋಮನ್ ಶಾಂತಿ”)ವು, 200 ವರ್ಷಗಳಿಗಿಂತಲೂ ಹೆಚ್ಚು ಸಮಯದ ವರೆಗೆ ಬಾಳಿತು. ಸಾ.ಶ. 14ರ ಆಗಸ್ಟ್ 19ರಂದು, ತನ್ನ 76ರ ಪ್ರಾಯದಲ್ಲಿ ಅಗಸ್ಟಸನು ಮರಣಪಟ್ಟನು ಮತ್ತು ಆ ಬಳಿಕ ಅವನನ್ನು ದೈವೀಕರಿಸಲಾಯಿತು.
“ಇಟ್ಟಿಗೆಯಿಂದ ಕಟ್ಟಲ್ಪಟ್ಟಿದ್ದ ರೋಮ್ ನಗರವನ್ನು ಅಮೃತಶಿಲೆಯ ನಗರವಾಗಿ ಮಾರ್ಪಡಿಸಿದೆ” ಎಂದು ಅಗಸ್ಟಸನು ಜಂಬಕೊಚ್ಚಿಕೊಂಡನು. ಈ ಮುಂಚೆ ರೋಮ್ನಲ್ಲಿ ಹೇಗೆ ಕಲಹವು ಇತ್ತೋ ಅದೇ ರೀತಿ ಮುಂದೆ ಸಂಭವಿಸಬಾರದೆಂಬ ಉದ್ದೇಶದಿಂದ, ತನ್ನ ಬಳಿಕ ಆಳ್ವಿಕೆಗೆ ಬರಲಿರುವ ಚಕ್ರವರ್ತಿಯನ್ನು ಅವನು ಸಿದ್ಧಪಡಿಸಲು ಬಯಸಿದನು. ಆದರೆ ತನ್ನ ಉತ್ತರಾಧಿಕಾರಿಯ ವಿಷಯದಲ್ಲಿ ಅವನಿಗೆ ಯಾವುದೇ ಆಯ್ಕೆ ಇರಲಿಲ್ಲ. ಅಗಸ್ಟಸ್ನ ಸೋದರಳಿಯ, ಇಬ್ಬರು ಮೊಮ್ಮಕ್ಕಳು, ಅಳಿಯ, ಹಾಗೂ ಒಬ್ಬ ಮಲಮಗ—ಇವರೆಲ್ಲರೂ ಮೃತಪಟ್ಟಿದ್ದರು, ಮತ್ತು ರಾಜ್ಯಾಧಿಕಾರವನ್ನು ನಡೆಸಲು ಅವನ ಮಲಮಗನಾದ ತಿಬೇರಿಯನು ಮಾತ್ರವೇ ಉಳಿದಿದ್ದನು.
“ಕಡೆಗಣಿಸಲ್ಪಡಲಿಕ್ಕಿದ್ದವನು”
ಅಗಸ್ಟಸನು ಮರಣಪಟ್ಟು ಒಂದು ತಿಂಗಳು ಕಳೆಯುವುದಕ್ಕೆ ಮೊದಲೇ, ರೋಮನ್ ಶಾಸನಸಭೆಯು 56 ವರ್ಷ ಪ್ರಾಯದ ತಿಬೇರಿಯನನ್ನು ಚಕ್ರವರ್ತಿಯನ್ನಾಗಿ ಮಾಡಿತು. ಸಾ.ಶ. 37ರ ಮಾರ್ಚ್ ತಿಂಗಳ ತನಕ ತಿಬೇರಿಯನು ಬದುಕಿದ್ದು ರಾಜ್ಯವಾಳಿದನು. ಆದುದರಿಂದ, ಯೇಸುವಿನ ಸಾರ್ವಜನಿಕ ಶುಶ್ರೂಷೆಯ ಸಮಯಾವಧಿಯಲ್ಲಿ ಅವನು ರೋಮ್ನ ಚಕ್ರವರ್ತಿಯಾಗಿದ್ದನು.
ಚಕ್ರವರ್ತಿಯಾಗಿದ್ದ ತಿಬೇರಿಯನಿಗೆ ಸದ್ಗುಣಗಳೂ ಇದ್ದವು ದುರ್ಗುಣಗಳೂ ಇದ್ದವು. ಅವನ ಸದ್ಗುಣಗಳಲ್ಲಿ ಒಂದು ಯಾವುದೆಂದರೆ, ಸುಖಭೋಗಗಳಿಗಾಗಿ ಹಣ ಖರ್ಚುಮಾಡುವುದನ್ನು ಅವನು ಕಟ್ಟುನಿಟ್ಟಾಗಿ ವಿರೋಧಿಸುತ್ತಿದ್ದನು. ಇದರ ಫಲಿತಾಂಶವಾಗಿ, ಅವನ ಸಾಮ್ರಾಜ್ಯವು ಸಮೃದ್ಧವಾಗಿತ್ತು ಮತ್ತು ನೈಸರ್ಗಿಕ ವಿಪತ್ತುಗಳು ಹಾಗೂ ಆಪತ್ತುಗಳಿಂದ ಚೇತರಿಸಿಕೊಳ್ಳಲಿಕ್ಕಾಗಿ ಹಣದ ಅಗತ್ಯವಿದ್ದಾಗ ಅವನ ಬಳಿ ಯಾವಾಗಲೂ ಧನಸಂಗ್ರಹವಿರುತ್ತಿತ್ತು. ತಿಬೇರಿಯನ ಬಗ್ಗೆ ಹೇಳಲ್ಪಡುವ ಒಳ್ಳೇ ವಿಚಾರವೇನೆಂದರೆ, ಅವನು ತನ್ನನ್ನು ಒಬ್ಬ ಸಾಮಾನ್ಯ ಮನುಷ್ಯನನ್ನಾಗಿ ಪರಿಗಣಿಸಿಕೊಂಡನು, ಅನೇಕ ಗೌರವಾರ್ಥಕ ಬಿರುದುಗಳನ್ನು ನಿರಾಕರಿಸಿದನು. ಮತ್ತು ಸಾಮಾನ್ಯವಾಗಿ ಚಕ್ರವರ್ತಿಯ ಆರಾಧನೆಯು ಅಗಸ್ಟಸ್ನಿಗೆ ಮಾತ್ರ ಸಲ್ಲುವಂತೆ ಮಾಡಿದನು. ಅಗಸ್ಟಸ್ ಹಾಗೂ ಜೂಲಿಯಸ್ ಸೀಸರರು ಮಾಡಿದಂತೆ, ತನ್ನ ಜ್ಞಾಪಕಾರ್ಥವಾಗಿ ಅವನು ಒಂದು ಕ್ಯಾಲೆಂಡರ್ ತಿಂಗಳಿಗೆ ತನ್ನ ಹೆಸರನ್ನು ಕೊಡಲಿಲ್ಲ, ಇಲ್ಲವೆ ಆ ರೀತಿಯಲ್ಲಿ ಜನರು ತನ್ನನ್ನು ಗೌರವಿಸುವಂತೆ ಅನುಮತಿಸಲೂ ಇಲ್ಲ.
ಆದರೂ, ತಿಬೇರಿಯನಿಗೆ ಸದ್ಗುಣಗಳಿಗಿಂತಲೂ ಹೆಚ್ಚಾಗಿ ದುರ್ಗುಣಗಳೇ ಇದ್ದವು. ಇತರರೊಂದಿಗೆ ವ್ಯವಹರಿಸುವಾಗ ಅವನು ತುಂಬ ಸಂದೇಹಪಡುವವನಾಗಿದ್ದು, ಕಪಟಭಾವದಿಂದ ನಡೆದುಕೊಳ್ಳುತ್ತಿದ್ದನು. ಮತ್ತು ಅವನ ಆಳ್ವಿಕೆಯಲ್ಲಿ ಯೋಜಿತ ಕೊಲೆಗಳು ಅತ್ಯಧಿಕವಾಗಿದ್ದವು; ಅವನ ಹಿಂದಿನ ಸ್ನೇಹಿತರಲ್ಲಿ ಅನೇಕರು ಈ ಯೋಜಿತ ಕೊಲೆಗೆ ಆಹುತಿಯಾಗಿದ್ದರೆಂದು ಪರಿಗಣಿಸಲಾಗುತ್ತದೆ. ಲೇಸ್-ಮ್ಯಾಜೆಸ್ಟಿ (ರಾಜದ್ರೋಹ) ಎಂಬ ನಿಯಮವನ್ನೂ ಅವನು ಜಾರಿಗೆ ತಂದನು. ಇದರಲ್ಲಿ ರಾಜದ್ರೋಹದ ಕೃತ್ಯಗಳಿಗೆ ಮಾತ್ರವಲ್ಲ, ಸ್ವತಃ ರಾಜನ ವಿರುದ್ಧ ಅಪಮಾನಕರವಾಗಿ ಮಾತಾಡುವವರನ್ನು ಸಹ ಶಿಕ್ಷೆಗೆ ಗುರಿಪಡಿಸುವುದೂ ಸೇರಿತ್ತು. ಈ ನಿಯಮದ ಆಧಾರದ ಮೇಲೆಯೇ ಯೇಸುವನ್ನು ಕೊಲ್ಲುವಂತೆ ಯೆಹೂದ್ಯರು ರೋಮನ್ ದೇಶಾಧಿಪತಿಯಾದ ಪೊಂತ್ಯ ಪಿಲಾತನನ್ನು ಒತ್ತಾಯಿಸಿದರು ಎಂಬುದು ಸುವ್ಯಕ್ತ.—ಯೋಹಾನ 19:12-16.
ರೋಮ್ನ ನೆರೆಹೊರೆಯಲ್ಲಿದ್ದ ಅರಮನೆಯ ಅಂಗರಕ್ಷಕ ದಳದ ಕಡೆಗೆ ಹೆಚ್ಚು ಗಮನಕೊಟ್ಟ ತಿಬೇರಿಯನು, ಪಟ್ಟಣದ ಗೋಡೆಯ ಉತ್ತರ ದಿಕ್ಕಿನ ಬಳಿಯಲ್ಲಿ ಸಿಪಾಯಿಗಳಿಗೆ ಭದ್ರವಾದ ಪಾಳೆಯಗಳನ್ನು ಕಟ್ಟಿಸಿಕೊಟ್ಟನು. ಈ ಅಂಗರಕ್ಷಕ ದಳದ ಅಸ್ತಿತ್ವವು, ತಿಬೇರಿಯನ ಅಧಿಕಾರಕ್ಕೆ ಬೆದರಿಕೆಯನ್ನು ಒಡ್ಡುವಂತಿದ್ದ ರೋಮನ್ ಶಾಸನಸಭೆಗೆ ಭಯವನ್ನು ಉಂಟುಮಾಡಿತು, ಮತ್ತು ಜನರ ಅಧೀನತೆಯನ್ನೂ ಇದು ನಿಗ್ರಹಿಸಿತು. ಗುಪ್ತವಾಗಿ ದೂರುಕೊಡುವ ಪದ್ಧತಿಯನ್ನು ತಿಬೇರಿಯನು ಉತ್ತೇಜಿಸಿದನು, ಹಾಗೂ ಅವನ ಆಳ್ವಿಕೆಯ ಕೊನೆಯ ಭಾಗವು ಭೀತಿಯಿಂದ ತುಂಬಿತ್ತು.
ತಿಬೇರಿಯನ ಮರಣದ ಸಮಯದಲ್ಲಿ, ಅವನನ್ನು ಒಬ್ಬ ಪ್ರಜಾಪೀಡಕನೆಂದು ಪರಿಗಣಿಸಲಾಗಿತ್ತು. ಅವನು ಸತ್ತಾಗ, ರೋಮ್ ಜನತೆಯು ಸಂತೋಷಪಟ್ಟಿತು ಮತ್ತು ಶಾಸನಸಭೆಯು ಅವನನ್ನು ದೇವರ ಸ್ಥಾನದಲ್ಲಿಟ್ಟು ಆರಾಧಿಸಲು ನಿರಾಕರಿಸಿತು. ಈ ಕಾರಣಗಳಿಂದ ಹಾಗೂ ಇನ್ನಿತರ ಕಾರಣಗಳಿಂದಲೇ, “ಉತ್ತರರಾಜನ” ಸ್ಥಾನದಲ್ಲಿ “ಒಬ್ಬ ನೀಚನು [“ಕಡೆಗಣಿಸಲ್ಪಡುವವನು,” NW]” ಅಧಿಕಾರಕ್ಕೆ ಬರುವನು ಎಂದು ಹೇಳುವ ಪ್ರವಾದನೆಯು ತಿಬೇರಿಯನ ಸಂಬಂಧದಲ್ಲಿ ನೆರವೇರಿದ್ದನ್ನು ನಾವು ನೋಡುತ್ತೇವೆ.—ದಾನಿಯೇಲ 11:15, 21.
ನೀವೇನನ್ನು ಗ್ರಹಿಸಿದಿರಿ?
• ಆಕ್ಟೇವಿಯನನು ರೋಮ್ನ ಪ್ರಪ್ರಥಮ ಚಕ್ರವರ್ತಿಯಾಗಿ ಹೇಗೆ ಅಧಿಕಾರಕ್ಕೆ ಬಂದನು?
• ಅಗಸ್ಟಸ್ನ ಸರಕಾರದ ಸಾಧನೆಗಳ ಕುರಿತು ಏನು ಹೇಳಸಾಧ್ಯವಿದೆ?
• ತಿಬೇರಿಯನ ಸದ್ಗುಣಗಳು ಹಾಗೂ ದುರ್ಗುಣಗಳು ಯಾವುವು?
• ‘ಕಡೆಗಣಿಸಲ್ಪಡುವವನ’ ಕುರಿತಾದ ಪ್ರವಾದನೆಯು ತಿಬೇರಿಯನ ವಿದ್ಯಮಾನದಲ್ಲಿ ಹೇಗೆ ನೆರವೇರಿತು?
[ಚಿತ್ರ]
ತಿಬೇರಿಯ
[Box/Pictures on page 252-255]
ಸೆನೋಬಿಯ—ಪಾಲ್ಮೈರದ ಯುದ್ಧವೀರ ರಾಣಿ
“ಅವಳು ಕಪ್ಪು ವರ್ಣದವಳಾಗಿದ್ದಳು . . . ಅವಳ ದಂತಪಂಕ್ತಿಗಳು ಬಿಳಿಯ ಮುತ್ತುಗಳಂತಿದ್ದವು, ಮತ್ತು ಅವಳ ದೊಡ್ಡ ಕಣ್ಣುಗಳು ಕಪ್ಪಾಗಿದ್ದು, ಅಸಾಮಾನ್ಯವಾದ ಕಳೆಯಿಂದ ಕಾಂತಿಭರಿತವಾಗಿದ್ದವು ಹಾಗೂ ಆಕರ್ಷಕವಾದ ಪ್ರಸನ್ನತೆಯಿಂದ ಕಂಗೊಳಿಸುತ್ತಿದ್ದವು. ಅವಳ ಧ್ವನಿಯು ತುಂಬ ಬಲವತ್ತಾಗಿದ್ದು, ಇಂಪಾಗಿತ್ತು. ಅವಳ ಪುರುಷಯೋಗ್ಯ ಗ್ರಹಣ ಶಕ್ತಿಯು, ವ್ಯಾಸಂಗದ ಕಾರಣ ಬಲಗೊಂಡಿತ್ತು ಹಾಗೂ ಅಂದಗೊಂಡಿತ್ತು. ಅವಳಿಗೆ ಲ್ಯಾಟಿನ್ ಭಾಷೆಯ ಪರಿಚಯವಿತ್ತು, ಅದೇ ಸಮಯದಲ್ಲಿ ಗ್ರೀಕ್, ಸಿರಿಯನ್, ಹಾಗೂ ಐಗುಪ್ತ ಭಾಷೆಗಳಲ್ಲಿ ಸಹ ಅವಳು ಪ್ರವೀಣಳಾಗಿದ್ದಳು.” ಎಡ್ವರ್ಡ್ ಗಿಬನ್ ಎಂಬ ಇತಿಹಾಸಕಾರನು, ಸಿರಿಯದ ಪಟ್ಟಣವಾಗಿದ್ದ ಪಾಲ್ಮೈರದ ಯುದ್ಧವೀರ ರಾಣಿ ಸೆನೋಬಿಯಳನ್ನು ಈ ಮಾತುಗಳಿಂದ ಹೊಗಳಿದನು.
ಪಾಲ್ಮೈರದ ಕುಲೀನ ವ್ಯಕ್ತಿಯಾಗಿದ್ದ ಆಡಿನೇಥಸನು ಸೆನೋಬಿಯಳ ಗಂಡನಾಗಿದ್ದನು. ರೋಮನ್ ಸಾಮ್ರಾಜ್ಯದ ಪರವಾಗಿ ಅವನು ಪರ್ಷಿಯದ ವಿರುದ್ಧ ಯಶಸ್ವಿಕರ ದಂಡಯಾತ್ರೆಯನ್ನು ನಡೆಸಿದ್ದರಿಂದ, ಸಾ.ಶ. 258ರಲ್ಲಿ ಅವನನ್ನು ರೋಮ್ನ ಪರರಾಜ್ಯ ಪ್ರತಿನಿಧಿಯ ಹುದ್ದೆಗೆ ಬಡ್ತಿಮಾಡಲಾಗಿತ್ತು. ಎರಡು ವರ್ಷಗಳ ಬಳಿಕ, ರೋಮನ್ ಚಕ್ರವರ್ತಿಯಾಗಿದ್ದ ಗಲೀಏನಸನು ಆಡಿನೇಥಸನಿಗೆ ಕಾರೆಕ್ಟೋರ್ ಟೋಟ್ಯುಸ್ ಆರಿಯಂಟಿಸ್ (ಇಡೀ ಪೂರ್ವ ಭಾಗದ ಗವರ್ನರ್) ಎಂಬ ಬಿರುದನ್ನು ನೀಡಿದನು. ಪರ್ಷಿಯದ ರಾಜನಾದ Iನೆಯ ಶಾಪೂರನ ವಿರುದ್ಧ ಸಾಧಿಸಿದ ಜಯದ ಅಂಗೀಕಾರದೋಪಾದಿ ಈ ಬಿರುದು ಅವನಿಗೆ ಸಿಕ್ಕಿತ್ತು. ಕಾಲಕ್ರಮೇಣ ಆಡಿನೇಥಸನು ಸ್ವತಃ “ರಾಜಾಧಿರಾಜ” ಎಂಬ ಬಿರುದನ್ನು ತನಗೆ ಕೊಟ್ಟುಕೊಂಡನು. ಆಡಿನೇಥಸನ ಈ ಎಲ್ಲ ಯಶಸ್ಸುಗಳಿಗೆ, ಬಹಳಮಟ್ಟಿಗೆ ಸೆನೋಬಿಯಳ ಧೈರ್ಯ ಹಾಗೂ ದೂರದೃಷ್ಟಿಯೇ ಕಾರಣವಾಗಿದ್ದಿರಬಹುದೆಂದು ಹೇಳಲಾಗುತ್ತದೆ.
ಸೆನೋಬಿಯಳು ಒಂದು ಸಾಮ್ರಾಜ್ಯವನ್ನು ಕಟ್ಟಲು ಹಾರೈಸುತ್ತಾಳೆ
ಸಾ.ಶ. 267ರಲ್ಲಿ, ಆಡಿನೇಥಸನು ತನ್ನ ಅಧಿಕಾರದ ತುತ್ತತುದಿಯಲ್ಲಿರುವಾಗ, ಅವನೂ ಅವನ ವಾರಸುದಾರನೂ ಕೊಲ್ಲಲ್ಪಟ್ಟರು. ಸೆನೋಬಿಯಳ ಮಗನು ಇನ್ನೂ ಚಿಕ್ಕವನಾಗಿದ್ದರಿಂದ, ಅವಳೇ ತನ್ನ ಗಂಡನ ಸ್ಥಾನವನ್ನು ವಹಿಸಿಕೊಂಡಳು. ಸೌಂದರ್ಯವತಿಯೂ, ಮಹತ್ವಾಕಾಂಕ್ಷಿಯೂ, ಆಡಳಿತವನ್ನು ನಿರ್ವಹಿಸುವುದರಲ್ಲಿ ಸಮರ್ಥಳೂ, ತನ್ನ ಮೃತಪಟ್ಟ ಪತಿಯೊಂದಿಗೆ ದಂಡಯಾತ್ರೆ ಮಾಡುವ ರೂಢಿಯಿದ್ದವಳೂ, ಅನೇಕ ಭಾಷೆಗಳನ್ನು ನಿರರ್ಗಳವಾಗಿ ಮಾತಾಡುವವಳೂ ಆಗಿದ್ದ ಸೆನೋಬಿಯಳು, ತನ್ನ ಪ್ರಜೆಗಳ ಗೌರವ ಹಾಗೂ ಬೆಂಬಲವನ್ನು ಸಂಪಾದಿಸಲು ಶಕ್ತಳಾದಳು. ಸೆನೋಬಿಯಳು ವಿದ್ಯಾಪ್ರೇಮಿಯಾಗಿದ್ದಳು ಮತ್ತು ಯಾವಾಗಲೂ ಬುದ್ಧಿವಂತರು ಅವಳ ಜೊತೆಗಿರುತ್ತಿದ್ದರು. ತತ್ವಜ್ಞಾನಿಯೂ ಆಲಂಕಾರಿಕ ಭಾಷಣಕಾರನೂ ಆಗಿದ್ದ ಕ್ಯಾಸಿಯಸ್ ಲಾಂಜೈನಸ್ ಅವಳ ಸಲಹೆಗಾರರಲ್ಲಿ ಒಬ್ಬನಾಗಿದ್ದು, ಅವನು “ನಡೆದಾಡುವ ಗ್ರಂಥಾಲಯ ಅಥವಾ ಮ್ಯೂಸಿಯಮ್ ಆಗಿದ್ದನು” ಎಂದು ಹೇಳಲಾಗುತ್ತದೆ. ಪಾಲ್ಮೈರ ಮತ್ತು ಅದರ ಸಾಮ್ರಾಜ್ಯ—ರೋಮ್ನ ವಿರುದ್ಧ ಸೆನೋಬಿಯಳ ಕ್ರಾಂತಿ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ, ಅದರ ಲೇಖಕರಾದ ರಿಚರ್ಡ್ ಸ್ಟೋನ್ಮನ್ ದಾಖಲಿಸಿದ್ದು: “ಆಡಿನೇಥಸನ ಮರಣಾನಂತರ ಸುಮಾರು ಐದು ವರ್ಷಗಳಲ್ಲೇ . . . ಸೆನೋಬಿಯಳು ತಾನು ಪೂರ್ವದ ರಾಣಿಯೆಂಬ ಭಾವನೆಯನ್ನು ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದಳು.”
ಸೆನೋಬಿಯಳ ಕ್ಷೇತ್ರದ ಒಂದು ಭಾಗದಲ್ಲಿ ಪರ್ಷಿಯವು ಇತ್ತು; ಅವಳೂ ಅವಳ ಪತಿಯೂ ಸೇರಿಕೊಂಡು ಅದನ್ನು ದುರ್ಬಲಗೊಳಿಸಿದ್ದರು. ಮತ್ತು ಇನ್ನೊಂದು ಭಾಗದಲ್ಲಿ ಕುಸಿಯುತ್ತಿದ್ದ ರೋಮ್ ಇತ್ತು. ಆ ಸಮಯದಲ್ಲಿ ರೋಮನ್ ಸಾಮ್ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಪರಿಸ್ಥಿತಿಗಳ ಕುರಿತು ಇತಿಹಾಸಕಾರನಾದ ಜೆ. ಎಮ್. ರಾಬರ್ಟ್ಸ್ ಹೇಳುವುದು: “ಮೂರನೆಯ ಶತಮಾನದಲ್ಲಿ . . . ರೋಮ್ನ ಪೂರ್ವ ಹಾಗೂ ಪಶ್ಚಿಮ ಗಡಿನಾಡುಗಳಿಗೆ ಕಷ್ಟಕಾಲವು ಒದಗಿಬಂದಿತ್ತು. ಅದೇ ಸಮಯಕ್ಕೆ ರೋಮ್ನಲ್ಲಿ ಆಂತರಿಕ ಯುದ್ಧ ಹಾಗೂ ಉತ್ತರಾಧಿಕಾರಗಳ ಕುರಿತಾದ ವ್ಯಾಜ್ಯಗಳು ಆರಂಭಗೊಂಡಿದ್ದವು. ಇಪ್ಪತ್ತೆರಡು ಸಾಮ್ರಾಟರು (ಸುಳ್ಳು ಹಕ್ಕುದಾರರನ್ನು ಬಿಟ್ಟು) ಅಧಿಕಾರಕ್ಕೆ ಬಂದುಹೋದರು.” ಇನ್ನೊಂದು ಕಡೆಯಲ್ಲಿ, ಸಿರಿಯದ ರಾಣಿಯು ತನ್ನ ಸಾಮ್ರಾಜ್ಯದಲ್ಲಿ ಸಂಪೂರ್ಣ ಅಧಿಕಾರವನ್ನು ಸ್ಥಾಪಿಸಿದ್ದಳು. “ಎರಡು ಸಾಮ್ರಾಜ್ಯಗಳು [ಪರ್ಷಿಯ ಮತ್ತು ರೋಮ್] ಹೆಚ್ಚು ಬಲಗೊಳ್ಳದಂತೆ ನೋಡಿಕೊಳ್ಳುತ್ತಾ, ಈ ಎರಡೂ ಸಾಮ್ರಾಜ್ಯಗಳನ್ನು ಆಳಸಾಧ್ಯವಿರುವಂತಹ ಒಂದು ಮೂರನೆಯ ಸಾಮ್ರಾಜ್ಯವನ್ನು ಕಟ್ಟುವ ಕಡುಬಯಕೆ ಅವಳಲ್ಲಿತ್ತು” ಎಂದು ಸ್ಟೋನ್ಮನ್ ದಾಖಲಿಸುತ್ತಾರೆ.
ಸಾ.ಶ. 269ರಲ್ಲಿ, ತನ್ನ ರಾಜಯೋಗ್ಯ ಅಧಿಕಾರಗಳನ್ನು ವಿಸ್ತರಿಸುವ ಅವಕಾಶ ಸೆನೋಬಿಯಳಿಗೆ ದೊರಕಿತು. ಆಗ ರೋಮ್ನ ಆಳ್ವಿಕೆಯನ್ನು ಪ್ರತಿಭಟಿಸುತ್ತಿದ್ದ ಒಬ್ಬ ಸೋಗುಗಾರನು ಐಗುಪ್ತಕ್ಕೆ ಬಂದನು. ತತ್ಕ್ಷಣವೇ ಸೆನೋಬಿಯಳ ಸೈನ್ಯವು ಐಗುಪ್ತಕ್ಕೆ ಹೋಗಿ, ದಂಗೆಯನ್ನು ಅಡಗಿಸಿ, ಆ ದೇಶವನ್ನು ಸ್ವಾಧೀನಪಡಿಸಿಕೊಂಡಿತು. ತಾನೇ ಐಗುಪ್ತದ ರಾಣಿಯೆಂದು ಘೋಷಿಸಿಕೊಂಡು, ತನ್ನ ಹೆಸರಿನಲ್ಲಿ ನಾಣ್ಯಗಳನ್ನು ಟಂಕಿಸಿದಳು. ಈಗ ಅವಳ ರಾಜ್ಯವು ನೈಲ್ ನದಿಯಿಂದ ಯೂಫ್ರೇಟೀಸ್ ನದಿಯ ವರೆಗೂ ವ್ಯಾಪಿಸಿತ್ತು. ಅವಳ ಜೀವಿತದ ಈ ಹಂತದಲ್ಲಿ, “ದಕ್ಷಿಣ ರಾಜ”ನ ಸ್ಥಾನವನ್ನು ಸೆನೋಬಿಯಳು ಆಕ್ರಮಿಸಿದ್ದಳು.—ದಾನಿಯೇಲ 11:25, 26.
ಸೆನೋಬಿಯಳ ರಾಜಧಾನಿ
ಸೆನೋಬಿಯಳು ತನ್ನ ರಾಜಧಾನಿಯಾದ ಪಾಲ್ಮೈರವನ್ನು ಎಷ್ಟು ಚೆನ್ನಾಗಿ ಭದ್ರಪಡಿಸಿ, ಅಂದಗೊಳಿಸಿದಳೆಂದರೆ, ಅದು ರೋಮನ್ ಜಗತ್ತಿನಲ್ಲಿದ್ದ ಅತಿ ದೊಡ್ಡ ನಗರಗಳಿಗೆ ಸರಿಸಮವಾಗಿತ್ತು. ಅದರ ಜನಸಂಖ್ಯೆಯು 1,50,000ದಷ್ಟಿತ್ತೆಂದು ಅಂದಾಜುಮಾಡಲಾಗುತ್ತದೆ. ಪಾಲ್ಮೈರದಲ್ಲಿ, ನಯನಮನೋಹರವಾದ ಸಾರ್ವಜನಿಕ ಕಟ್ಟಡಗಳು, ದೇವಾಲಯಗಳು, ಉದ್ಯಾನವನಗಳು, ಕಂಭಗಳು, ಮತ್ತು ಸ್ಮಾರಕ ಸ್ತಂಭಗಳು ತುಂಬಿದ್ದವು. ಮತ್ತು ಆ ಪಟ್ಟಣದ ಸುತ್ತಲೂ 21 ಕಿಲೊಮೀಟರುಗಳಷ್ಟು ಸುತ್ತಳತೆಯಿರುವ ಒಂದು ಗೋಡೆಯು ಇತ್ತು. ಮುಖ್ಯ ಪ್ರವೇಶಮಾರ್ಗದ ಉದ್ದಕ್ಕೂ, ಕಾರಿಂತ್ ಶೈಲಿಯ ಸ್ತಂಭಗಳಿಂದ ರಚಿತವಾಗಿದ್ದ 50 ಅಡಿಗಿಂತಲೂ ಎತ್ತರವಾದ ಸುಮಾರು 1,500 ಕಂಭಸಾಲುಗಳು ಇದ್ದವು. ಪಟ್ಟಣದಾದ್ಯಂತ ವೀರನಾಯಕರು ಹಾಗೂ ಶ್ರೀಮಂತ ದಾನಿಗಳ ಪ್ರತಿಮೆಗಳು ಮತ್ತು ಎದೆವಿಗ್ರಹಗಳು ಇದ್ದವು. ಸಾ.ಶ. 271ರಲ್ಲಿ ಸೆನೋಬಿಯಳು, ತನ್ನ ಹಾಗೂ ತನ್ನ ಮೃತ ಪತಿಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದಳು.
ಪಾಲ್ಮೈರದಲ್ಲಿದ್ದ ಅತ್ಯುತ್ತಮ ವಾಸ್ತುಶಿಲ್ಪಗಳಲ್ಲಿ ಒಂದು, ಸೂರ್ಯದೇವನ ದೇವಾಲಯವಾಗಿತ್ತು. ಇದು ನಗರದ ಧಾರ್ಮಿಕ ನೋಟವನ್ನು ಎದ್ದುಕಾಣುವಂತೆ ಮಾಡಿತು ಎಂಬುದರಲ್ಲಿ ಸಂಶಯವೇ ಇಲ್ಲ. ಸೆನೋಬಿಯಳು ಸಹ ಸೂರ್ಯದೇವನೊಂದಿಗೆ ಸಂಬಂಧಿಸಿದ ದೇವತೆಯನ್ನು ಆರಾಧಿಸಿದ್ದಿರಬಹುದು. ಆದರೂ, ಮೂರನೆಯ ಶತಮಾನದ ಸಿರಿಯದಲ್ಲಿ ಅನೇಕ ಧರ್ಮಗಳು ಅಸ್ತಿತ್ವದಲ್ಲಿದ್ದವು. ಸೆನೋಬಿಯಳ ರಾಜ್ಯದಲ್ಲಿ, ಕ್ರೈಸ್ತರೆಂದು ಹೇಳಿಕೊಳ್ಳುವವರು, ಯೆಹೂದ್ಯರು, ಮತ್ತು ಸೂರ್ಯ ಹಾಗೂ ಚಂದ್ರ ದೇವರ ಆರಾಧಕರು ಇದ್ದರು. ತನ್ನ ಸಾಮ್ರಾಜ್ಯದಲ್ಲಿನ ವಿವಿಧ ಆರಾಧನಾ ವಿಧಗಳ ಕಡೆಗೆ ಅವಳಿಗೆ ಯಾವ ಮನೋಭಾವವಿತ್ತು? ಲೇಖಕರಾದ ಸ್ಟೋನ್ಮನ್ ದಾಖಲಿಸಿದ್ದು: “ಒಬ್ಬ ಬುದ್ಧಿವಂತ ಶಾಸಕಿಯು, ತನ್ನ ಜನರಿಗೆ ಸೂಕ್ತವಾಗಿ ಕಂಡುಬರುವ ಯಾವುದೇ ಪದ್ಧತಿಗಳನ್ನು ಅಲಕ್ಷಿಸುವುದಿಲ್ಲ. . . . ದೇವದೇವತೆಗಳು . . . ಯಾವಾಗಲೂ ಪಾಲ್ಮೈರದ ಪಕ್ಷವನ್ನೇ ವಹಿಸುತ್ತಿದ್ದರು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು.” ಸೆನೋಬಿಯಳು ಧರ್ಮದ ವಿಷಯದಲ್ಲಿ ಸಹನಶೀಲಳಾಗಿದ್ದಳು ಎಂಬುದು ಸುವ್ಯಕ್ತ.
ತನ್ನ ಆಕರ್ಷಕ ವ್ಯಕ್ತಿತ್ವದಿಂದ ಸೆನೋಬಿಯಳು ಅನೇಕರ ಮೆಚ್ಚುಗೆ ಪಡೆದಳು. ದಾನಿಯೇಲನ ಪ್ರವಾದನೆಯಲ್ಲಿ ಮುಂತಿಳಿಸಲ್ಪಟ್ಟ ಒಂದು ರಾಜಕೀಯ ಪ್ರಭುತ್ವವನ್ನು ಪ್ರತಿನಿಧಿಸುವುದರಲ್ಲಿ ಅವಳು ನಿರ್ವಹಿಸಿದ ಪಾತ್ರವು ಅತಿ ಹೆಚ್ಚು ಗಮನಾರ್ಹವಾಗಿತ್ತು. ಆದರೂ, ಅವಳ ಆಳ್ವಿಕೆಯು ಕೇವಲ ಐದು ವರ್ಷಗಳ ವರೆಗೆ ಮಾತ್ರ ಉಳಿದಿತ್ತು. ಸಾ.ಶ. 272ರಲ್ಲಿ, ರೋಮನ್ ಚಕ್ರವರ್ತಿಯಾದ ಆರೀಲಿಯನನು ಸೆನೋಬಿಯಳನ್ನು ಸೋಲಿಸಿದನು ಮತ್ತು ಪಾಲ್ಮೈರವನ್ನು ಇನ್ನೆಂದಿಗೂ ಸರಿಪಡಿಸಲು ಸಾಧ್ಯವಿಲ್ಲದಂತಹ ಸ್ಥಿತಿಗೆ ತಂದುಬಿಟ್ಟನು. ಸೆನೋಬಿಯಳಿಗೆ ಮಾತ್ರ ಕೃಪಾಭಿಕ್ಷೆ ನೀಡಲಾಯಿತು. ಅವಳು ರೋಮನ್ ಶಾಸನಸಭೆಯ ಸದಸ್ಯನೊಬ್ಬನನ್ನು ಮದುವೆಯಾಗಿ, ತನ್ನ ಜೀವಿತದ ಉಳಿದ ಕಾಲಾವಧಿಯನ್ನು ನಿವೃತ್ತಳಾಗಿ ಕಳೆದಳೆಂದು ಹೇಳಲಾಗುತ್ತದೆ.
ನೀವೇನನ್ನು ಗ್ರಹಿಸಿದಿರಿ?
• ಸೆನೋಬಿಯಳ ವ್ಯಕ್ತಿತ್ವವು ಹೇಗೆ ವರ್ಣಿಸಲ್ಪಟ್ಟಿದೆ?
• ಸೆನೋಬಿಯಳ ಸಾಹಸ ಕಾರ್ಯಗಳಲ್ಲಿ ಕೆಲವು ಯಾವುವು?
• ಧರ್ಮದ ವಿಷಯದಲ್ಲಿ ಸೆನೋಬಿಯಳಿಗೆ ಯಾವ ಮನೋಭಾವವಿತ್ತು?
[ಚಿತ್ರ]
ತನ್ನ ಸೈನಿಕರನ್ನು ಸಂಬೋಧಿಸಿ ಮಾತಾಡುತ್ತಿರುವ ರಾಣಿ ಸೆನೋಬಿಯ
[Chart/Pictures on page 246]
ದಾನಿಯೇಲ 11:20-26ರಲ್ಲಿ ತಿಳಿಸಲ್ಪಟ್ಟಿರುವ ಅರಸರು
ಉತ್ತರ ದಕ್ಷಿಣ
ರಾಜ ರಾಜ
ದಾನಿಯೇಲ 11:20 ಅಗಸ್ಟಸ್
ದಾನಿಯೇಲ 11:21-24 ತಿಬೇರಿಯ
ದಾನಿಯೇಲ 11:25, 26 ಆರೀಲಿಯನ್ ರಾಣಿ ಸೆನೋಬಿಯ
ರೋಮನ್ ಸಾಮ್ರಾಜ್ಯದ ಜರ್ಮನ್ ಬ್ರಿಟನ್,
ಮುಂತಿಳಿಸಲ್ಪಟ್ಟ ಸಾಮ್ರಾಜ್ಯ ಹಾಗೂ ತದನಂತರ
ಕುಸಿತದ ಪರಿಣಾಮವಾಗಿ ಬಂದ ಆ್ಯಂಗ್ಲೊ-ಅಮೆರಿಕನ್
ಬಂದ ಸ್ವರೂಪಗಳು ಲೋಕ ಶಕ್ತಿ
[ಚಿತ್ರ]
ತಿಬೇರಿಯ
[ಚಿತ್ರ]
ಆರೀಲಿಯನ್
[ಚಿತ್ರ]
ಶಾಲ್ಮೇನ್ನ ಚಿಕ್ಕ ಪ್ರತಿಮೆ
[ಚಿತ್ರ]
ಅಗಸ್ಟಸ್
[ಚಿತ್ರ]
17ನೆಯ ಶತಮಾನದ ಬ್ರಿಟಿಷ್ ಯುದ್ಧ ನೌಕೆ
[ಪುಟ 341 ರಲ್ಲಿ ಇಡೀ ಪುಟದ ಚಿತ್ರ]
[Picture on page 233]
ಅಗಸ್ಟಸ್
[Picture on page 234]
ತಿಬೇರಿಯ
[Picture on page 235]
ಅಗಸ್ಟಸನ ಆಜ್ಞೆಯ ಕಾರಣದಿಂದಲೇ, ಯೋಸೇಫ ಹಾಗೂ ಮರಿಯರು ಬೇತ್ಲೆಹೇಮ್ಗೆ ಪ್ರಯಾಣಿಸಿದರು
[Picture on page 237]
ಮುಂತಿಳಿಸಲ್ಪಟ್ಟಂತೆಯೇ ಯೇಸು ಮರಣದಲ್ಲಿ “ಭಗ್ನ”ಗೊಳಿಸಲ್ಪಟ್ಟನು
[ಪುಟ 356 ರಲ್ಲಿರುವ ಚಿತ್ರಗಳು]
1. ಶಾಲ್ಮೇನ್ 2. ಒಂದನೆಯ ನೆಪೋಲಿಯನ್ 3. ಒಂದನೆಯ ವಿಲ್ಹೆಲ್ಮ್ 4. ಜರ್ಮನ್ ಸೈನಿಕರು, Iನೆಯ ಲೋಕ ಯುದ್ಧ