ಯೆಹೋವನ ಸಂತೋಷಭರಿತ ಸೇವಕರು
“ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.”—ಮತ್ತಾಯ 5:3, Nw.
ಸಂತೋಷವು ಯೆಹೋವನ ಜನರ ಅತ್ಯಮೂಲ್ಯ ಆಸ್ತಿಯಾಗಿದೆ. ಕೀರ್ತನೆಗಾರನಾದ ದಾವೀದನು ಉದ್ಗರಿಸಿದ್ದು: “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು” ಅಥವಾ ಸಂತೋಷಿತರು. (ಕೀರ್ತನೆ 144:15) ಸಂತೋಷವು ಹಿತಕ್ಷೇಮದಿಂದಿರುವ ಭಾವನೆಯಾಗಿದೆ. ನಮ್ಮ ಅಂತರಾಳವನ್ನು ತಲಪುವಂಥ ಆಳವಾದ ಸಂತೋಷವು, ನಾವು ಯೆಹೋವನಿಂದ ಆಶೀರ್ವದಿಸಲ್ಪಟ್ಟಿದ್ದೇವೆ ಎಂಬ ಅರಿವಿನಿಂದ ಉಂಟಾಗುತ್ತದೆ. (ಜ್ಞಾನೋಕ್ತಿ 10:22) ಇಂಥ ಸಂತೋಷವು ನಮ್ಮ ಸ್ವರ್ಗೀಯ ತಂದೆಯೊಂದಿಗಿನ ಆಪ್ತ ಸಂಬಂಧವನ್ನು ಮತ್ತು ನಾವು ಆತನ ಚಿತ್ತವನ್ನು ಮಾಡುತ್ತಿದ್ದೇವೆ ಎಂಬ ಜ್ಞಾನವನ್ನು ಪ್ರತಿಬಿಂಬಿಸುತ್ತದೆ. (ಕೀರ್ತನೆ 112:1; ಕೀರ್ತನೆ 119:1, 2) ಆಸಕ್ತಿಕರವಾಗಿಯೇ, ಯಾವ ಕಾರಣಗಳಿಗಾಗಿ ನಾವು ಸಂತೋಷಭರಿತರಾಗಿ ಇರಸಾಧ್ಯವಿದೆಯೋ ಅಂಥ ಒಂಬತ್ತು ಕಾರಣಗಳನ್ನು ಯೇಸು ಪಟ್ಟಿಮಾಡಿದನು. ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ಸಂತೋಷದಿಂದಿರಲಿಕ್ಕಾಗಿರುವ ಈ ಕಾರಣಗಳನ್ನು ಪರಿಶೀಲಿಸುವುದು, “ಭಾಗ್ಯವಂತನಾದ” ಅಥವಾ ಸಂತೋಷಭರಿತನಾದ ಯೆಹೋವ ದೇವರ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡುವಲ್ಲಿ ನಾವೆಷ್ಟು ಸಂತೋಷಿತರಾಗಿರಬಲ್ಲೆವು ಎಂಬುದನ್ನು ಗ್ರಹಿಸಲು ನಮಗೆ ಸಹಾಯಮಾಡುತ್ತದೆ.—1 ತಿಮೊಥೆಯ 1:11.
ನಮ್ಮ ಆಧ್ಯಾತ್ಮಿಕ ಅಗತ್ಯದ ಅರಿವು
2 ಸಾ.ಶ. 31ರಲ್ಲಿ, ಇತಿಹಾಸದಲ್ಲೇ ಅತಿ ಪ್ರಸಿದ್ಧವಾದ ಭಾಷಣಗಳಲ್ಲಿ ಒಂದನ್ನು ಯೇಸು ನೀಡಿದನು. ಇದು ಪರ್ವತಪ್ರಸಂಗ ಎಂದು ಕರೆಯಲ್ಪಟ್ಟಿತು, ಏಕೆಂದರೆ ಗಲಿಲಾಯ ಸಮುದ್ರವನ್ನು ದೃಷ್ಟಿಸಬಹುದಾದಂಥ ಒಂದು ಪರ್ವತ ಪಾರ್ಶ್ವದಿಂದ ಯೇಸು ಈ ಪ್ರಸಂಗವನ್ನು ಕೊಟ್ಟನು. ಮತ್ತಾಯನ ಸುವಾರ್ತೆಯು ಹೀಗೆ ತಿಳಿಸುತ್ತದೆ: “[ಯೇಸು] ಆ ಜನರ ಗುಂಪುಗಳನ್ನು ಕಂಡು ಬೆಟ್ಟವನ್ನೇರಿ ಕೂತುಕೊಂಡ ತರುವಾಯ ಆತನ ಶಿಷ್ಯರು ಆತನ ಬಳಿಗೆ ಬಂದರು. ಆತನು ಅವರಿಗೆ ಉಪದೇಶ ಮಾಡಿ ಹೇಳಿದ್ದೇನಂದರೆ—ಆತ್ಮದಲ್ಲಿ ಬಡವರಾಗಿರುವವರು ಧನ್ಯರು [“ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು,” NW]; ಪರಲೋಕರಾಜ್ಯವು ಅವರದು.” (ಓರೆ ಅಕ್ಷರಗಳು ನಮ್ಮವು.) ಅಕ್ಷರಾರ್ಥವಾಗಿ ಭಾಷಾಂತರಿಸಲ್ಪಡುವಲ್ಲಿ, ಯೇಸುವಿನ ಆರಂಭದ ಮಾತುಗಳು ಹೀಗೆ ಓದಲ್ಪಡುವವು: “ಆತ್ಮದ ವಿಷಯದಲ್ಲಿ ಬಡವರಾಗಿರುವವರು ಸಂತೋಷಿತರು,” ಅಥವಾ “ಆತ್ಮಕ್ಕಾಗಿ ಭಿಕ್ಷೆಯೆತ್ತುವವರು ಸಂತೋಷಿತರು.” (ಮತ್ತಾಯ 5:1-3; ಕಿಂಗ್ಡಮ್ ಇಂಟರ್ಲಿನಿಯರ್; ಪಾದಟಿಪ್ಪಣಿ) ಟುಡೇಸ್ ಇಂಗ್ಲಿಷ್ ವರ್ಷನ್ ಭಾಷಾಂತರವು ಹೀಗೆ ಓದಲ್ಪಡುತ್ತದೆ: “ತಾವು ಆಧ್ಯಾತ್ಮಿಕವಾಗಿ ಬಡವರಾಗಿದ್ದೇವೆ ಎಂಬ ಅರಿವುಳ್ಳವರು ಸಂತೋಷಿತರು.”
3 ತನ್ನ ಪರ್ವತಪ್ರಸಂಗದಲ್ಲಿ ಯೇಸು, ತನಗೆ ಆಧ್ಯಾತ್ಮಿಕ ವಿಷಯಗಳ ಅಗತ್ಯವಿದೆ ಎಂಬ ಅರಿವು ಒಬ್ಬ ವ್ಯಕ್ತಿಗಿರುವಲ್ಲಿ ಅವನು ಎಷ್ಟೋ ಹೆಚ್ಚು ಸಂತೋಷಿತನಾಗಿರುವನು ಎಂದು ಹೇಳಿದನು. ತಮ್ಮ ಪಾಪಭರಿತ ಸ್ಥಿತಿಯನ್ನು ಪೂರ್ಣವಾಗಿ ಅರಿತಿರುವ ದೀನ ಕ್ರೈಸ್ತರು, ಕ್ರಿಸ್ತನ ಈಡು ಯಜ್ಞದ ಆಧಾರದ ಮೇಲೆ ಯೆಹೋವನ ಕ್ಷಮಾಪಣೆಗಾಗಿ ಆತನ ಬಳಿ ಬೇಡಿಕೊಳ್ಳುತ್ತಾರೆ. (1 ಯೋಹಾನ 1:9) ಹೀಗೆ ಅವರು ಮನಶ್ಶಾಂತಿಯನ್ನು ಹಾಗೂ ನಿಜ ಸಂತೋಷವನ್ನು ಕಂಡುಕೊಳ್ಳುತ್ತಾರೆ. “ಯಾವನ ದ್ರೋಹವು ಪರಿಹಾರವಾಗಿದೆಯೋ ಯಾವನ ಪಾಪವು ಕ್ಷಮಿಸಲ್ಪಟ್ಟಿದೆಯೋ ಅವನೇ ಧನ್ಯನು” ಅಥವಾ ಸಂತೋಷಭರಿತನು.—ಕೀರ್ತನೆ 32:1; ಕೀರ್ತನೆ 119:165.
4 ನಮ್ಮ ಆಧ್ಯಾತ್ಮಿಕ ಅಗತ್ಯದ ಅರಿವುಳ್ಳವರಾಗಿರುವುದು, ಪ್ರತಿದಿನ ಬೈಬಲನ್ನು ಓದುವಂತೆ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ’ “ಹೊತ್ತುಹೊತ್ತಿಗೆ” ಒದಗಿಸಲ್ಪಡುವ ಆಧ್ಯಾತ್ಮಿಕ ಆಹಾರದಿಂದ ಪೂರ್ಣ ರೀತಿಯಲ್ಲಿ ಪ್ರಯೋಜನವನ್ನು ಪಡೆದುಕೊಳ್ಳುವಂತೆ, ಮತ್ತು ಕ್ರಮವಾಗಿ ಕ್ರೈಸ್ತ ಕೂಟಗಳಿಗೆ ಹಾಜರಾಗುವಂತೆ ನಮ್ಮನ್ನು ಪ್ರಚೋದಿಸುವುದು. (ಮತ್ತಾಯ 24:45; ಕೀರ್ತನೆ 1:1, 2; 119:111; ಇಬ್ರಿಯ 10:25) ನೆರೆಯವರಿಗಾಗಿರುವ ಪ್ರೀತಿಯು, ನಾವು ಇತರರ ಆಧ್ಯಾತ್ಮಿಕ ಅಗತ್ಯವನ್ನು ಅರಿತುಕೊಳ್ಳುವಂತೆ ಮಾಡುತ್ತದೆ ಮತ್ತು ರಾಜ್ಯದ ಸುವಾರ್ತೆಯನ್ನು ಸಾರುವ ಹಾಗೂ ಕಲಿಸುವ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳುವಂತೆ ನಮ್ಮನ್ನು ಹುರಿದುಂಬಿಸುತ್ತದೆ. (ಮಾರ್ಕ 13:10; ರೋಮಾಪುರ 1:14-16) ಇತರರೊಂದಿಗೆ ಬೈಬಲ್ ಸತ್ಯಗಳನ್ನು ಹಂಚಿಕೊಳ್ಳುವುದು ನಮಗೆ ಸಂತೋಷವನ್ನು ತರುತ್ತದೆ. (ಅ. ಕೃತ್ಯಗಳು 20:20, 35) ರಾಜ್ಯ ಮತ್ತು ಆ ರಾಜ್ಯವು ತರಲಿರುವ ಆಶೀರ್ವಾದಗಳ ಕುರಿತು ನಾವು ಧ್ಯಾನಿಸುವಾಗ ನಮ್ಮ ಸಂತೋಷವು ಇನ್ನಷ್ಟು ಹೆಚ್ಚಾಗುತ್ತದೆ. ಅಭಿಷಿಕ್ತ ಕ್ರೈಸ್ತರ ‘ಚಿಕ್ಕ ಹಿಂಡಿನ’ ನಿರೀಕ್ಷೆಯು, ಕ್ರಿಸ್ತನ ರಾಜ್ಯ ಸರಕಾರದ ಭಾಗದೋಪಾದಿ ಸ್ವರ್ಗದಲ್ಲಿ ಅಮರ ಜೀವಿತವನ್ನು ಪಡೆದುಕೊಳ್ಳುವುದೇ ಆಗಿದೆ. (ಲೂಕ 12:32; 1 ಕೊರಿಂಥ 15:50, 54) “ಬೇರೆ ಕುರಿಗಳ” ನಿರೀಕ್ಷೆಯು, ಆ ರಾಜ್ಯ ಸರಕಾರದ ಕೆಳಗೆ ಪರದೈಸ್ ಭೂಮಿಯಲ್ಲಿ ನಿತ್ಯಜೀವವನ್ನು ಪಡೆದುಕೊಳ್ಳುವುದೇ ಆಗಿದೆ.—ಯೋಹಾನ 10:16; ಕೀರ್ತನೆ 37:11; ಮತ್ತಾಯ 25:34, 46.
ದುಃಖಿತರು ಸಂತೋಷದಿಂದ ಇರಸಾಧ್ಯವಿರುವ ವಿಧ
5 ಯೇಸು ತಿಳಿಸಿದಂಥ ಸಂತೋಷಕ್ಕಾಗಿರುವ ಮುಂದಿನ ಕಾರಣದಲ್ಲಿರುವ ಪದಗಳು ಪರಸ್ಪರ ಅಸಂಗತವಾಗಿರುವಂತೆ ತೋರುತ್ತವೆ. ಅವನು ಹೇಳಿದ್ದು: “ದುಃಖಪಡುವವರು ಸಂತೋಷಿತರು, ಏಕೆಂದರೆ ಅವರು ಸಂತೈಸಲ್ಪಡುವರು.” (ಮತ್ತಾಯ 5:4, NW) ಒಬ್ಬ ವ್ಯಕ್ತಿಯು ದುಃಖಿತನಾಗಿದ್ದು ಅದೇ ಸಮಯದಲ್ಲಿ ಹೇಗೆ ಸಂತೋಷಿತನಾಗಿಯೂ ಇರಸಾಧ್ಯವಿದೆ? ಯೇಸುವಿನ ಹೇಳಿಕೆಯ ಅರ್ಥವನ್ನು ಗ್ರಹಿಸಲಿಕ್ಕಾಗಿ, ಅವನು ಯಾವ ರೀತಿಯ ದುಃಖದ ಕುರಿತಾಗಿ ಮಾತಾಡುತ್ತಿದ್ದನು ಎಂಬುದನ್ನು ನಾವು ಪರಿಗಣಿಸುವ ಅಗತ್ಯವಿದೆ. ಶಿಷ್ಯನಾದ ಯಾಕೋಬನು, ನಮ್ಮ ಸ್ವಂತ ಪಾಪಭರಿತ ಸ್ಥಿತಿಯು ದುಃಖಕ್ಕೆ ಕಾರಣವಾಗಿರಬೇಕು ಎಂದು ವಿವರಿಸುತ್ತಾನೆ. ಅವನು ಬರೆದುದು: “ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ. ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಗುವದನ್ನು ಬಿಟ್ಟು ಗೋಳಾಡಿರಿ; ಸಂತೋಷವನ್ನು ಬಿಟ್ಟು ಮನಗುಂದಿದವರಾಗಿರಿ. ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆ ತರುವನು.” (ಯಾಕೋಬ 4:8-10) ತಮ್ಮ ಪಾಪಭರಿತ ಸ್ಥಿತಿಯ ಬಗ್ಗೆ ನಿಜವಾಗಿಯೂ ದುಃಖಭರಿತರಾಗಿರುವವರು, ಕ್ರಿಸ್ತನ ಈಡು ಯಜ್ಞದಲ್ಲಿ ನಂಬಿಕೆಯಿಡುವಲ್ಲಿ ಮತ್ತು ದೇವರ ಚಿತ್ತವನ್ನು ಮಾಡುವ ಮೂಲಕ ನಿಜವಾದ ಪಶ್ಚಾತ್ತಾಪವನ್ನು ತೋರಿಸುವಲ್ಲಿ ತಮ್ಮ ಪಾಪಗಳು ಕ್ಷಮಿಸಲ್ಪಡಸಾಧ್ಯವಿದೆ ಎಂಬುದನ್ನು ಕಲಿಯುವಾಗ ಸಾಂತ್ವನವನ್ನು ಹೊಂದುವರು. (ಯೋಹಾನ 3:16; 2 ಕೊರಿಂಥ 7:9, 10) ಹೀಗೆ ಅವರು ಯೆಹೋವನೊಂದಿಗೆ ಅಮೂಲ್ಯ ಸಂಬಂಧವನ್ನು ಪಡೆಯಬಲ್ಲರು ಮತ್ತು ಆತನ ಸೇವೆಮಾಡಲಿಕ್ಕಾಗಿ ಹಾಗೂ ಆತನನ್ನು ಸ್ತುತಿಸಲಿಕ್ಕಾಗಿ ನಿತ್ಯಕ್ಕೂ ಜೀವಿಸುವ ನಿರೀಕ್ಷೆಯನ್ನು ಹೊಂದಬಲ್ಲರು. ಇದು ಅವರಿಗೆ ಆಳವಾದ ಆಂತರಿಕ ಸಂತೋಷವನ್ನು ತರುತ್ತದೆ.—ರೋಮಾಪುರ 4:7, 8.
6 ಯೇಸುವಿನ ಹೇಳಿಕೆಯು, ಭೂಮಿಯಲ್ಲಿರುವ ಅಸಹ್ಯಕರ ಪರಿಸ್ಥಿತಿಗಳ ಕಾರಣ ಯಾರು ದುಃಖಿಸುತ್ತಾರೋ ಅವರನ್ನೂ ಒಳಗೂಡಿದೆ. ಯೆಶಾಯ 61:1-3ರಲ್ಲಿರುವ ಪ್ರವಾದನೆಯನ್ನು ಯೇಸು ಸ್ವತಃ ಅನ್ವಯಿಸಿಕೊಂಡನು. ಅದು ಹೀಗೆ ತಿಳಿಸುತ್ತದೆ: “ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; . . . ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ ದುಃಖಿತರೆಲ್ಲರನ್ನು ಸಂತೈಸುವದಕ್ಕೂ . . . ಕಳುಹಿಸಿದ್ದಾನೆ.” ಇನ್ನೂ ಭೂಮಿಯಲ್ಲಿರುವ ಅಭಿಷಿಕ್ತ ಕ್ರೈಸ್ತರಿಗೆ ಸಹ ಈ ನೇಮಕವು ಅನ್ವಯವಾಗುತ್ತದೆ; ಅವರು ತಮ್ಮ ಸಂಗಡಿಗರಾಗಿರುವ “ಬೇರೆ ಕುರಿಗಳ” ಸಹಾಯದಿಂದ ಈ ನೇಮಕವನ್ನು ಪೂರೈಸುತ್ತಾರೆ. “ಅದರೊಳಗೆ [ಕ್ರೈಸ್ತಪ್ರಪಂಚವನ್ನು ಚಿತ್ರಿಸುವ ಧರ್ಮಭ್ರಷ್ಟ ಯೆರೂಸಲೇಮ್ನಲ್ಲಿ] ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ ಜನರ” ಹಣೆಗಳ ಮೇಲೆ ಸಾಂಕೇತಿಕವಾಗಿ ಗುರುತುಮಾಡುವ ಕೆಲಸದಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಾರೆ. (ಯೆಹೆಜ್ಕೇಲ 9:4) ಇಂಥ ದುಃಖಿತರು ‘ರಾಜ್ಯದ ಸುವಾರ್ತೆಯಿಂದ’ ಸಂತೈಸಲ್ಪಡುತ್ತಾರೆ. (ಮತ್ತಾಯ 24:14) ಸ್ವಲ್ಪದರಲ್ಲೇ ಸೈತಾನನ ದುಷ್ಟ ವಿಷಯಗಳ ವ್ಯವಸ್ಥೆಯು ಯೆಹೋವನ ನೀತಿಯ ನೂತನ ಲೋಕದಿಂದ ಸ್ಥಾನಪಲ್ಲಟಗೊಳ್ಳುತ್ತದೆ ಎಂಬುದನ್ನು ಕಲಿಯಲು ಅವರು ತುಂಬ ಸಂತೋಷಿಸುತ್ತಾರೆ.
ಸೌಮ್ಯ ಸ್ವಭಾವವುಳ್ಳವರು ಸಂತೋಷಿತರು
7 ಯೇಸು ತನ್ನ ಪರ್ವತಪ್ರಸಂಗವನ್ನು ಹೀಗೆ ಹೇಳುವ ಮೂಲಕ ಮುಂದುವರಿಸಿದನು: “ಸೌಮ್ಯ ಸ್ವಭಾವವುಳ್ಳವರು ಸಂತೋಷಿತರು, ಏಕೆಂದರೆ ಅವರು ಭೂಮಿಗೆ ಬಾಧ್ಯರಾಗುವರು.” (ಮತ್ತಾಯ 5:5, NW) ಒಬ್ಬ ವ್ಯಕ್ತಿಯು ಸೌಮ್ಯ ಸ್ವಭಾವದವನಾಗಿರುವಲ್ಲಿ, ಅದು ಅವನ ವ್ಯಕ್ತಿತ್ವದ ದೌರ್ಬಲ್ಯವನ್ನು ಅರ್ಥೈಸುತ್ತದೆ ಎಂದು ಕೆಲವೊಮ್ಮೆ ನೆನಸಲಾಗುತ್ತದೆ. ಆದರೆ ಇದು ಸರಿಯಾದ ಅಭಿಪ್ರಾಯವಲ್ಲ. “ಸೌಮ್ಯ ಸ್ವಭಾವ” ಎಂದು ಭಾಷಾಂತರಿಸಲ್ಪಟ್ಟಿರುವ ಪದದ ಅರ್ಥವನ್ನು ವಿವರಿಸುತ್ತಾ ಒಬ್ಬ ಬೈಬಲ್ ವಿದ್ವಾಂಸನು ಬರೆದುದು: “[ಸೌಮ್ಯ ಸ್ವಭಾವ]ದವನಾಗಿರುವಂಥ ಒಬ್ಬ ವ್ಯಕ್ತಿಯ ಅತ್ಯುತ್ತಮ ಗುಣಲಕ್ಷಣವು ಯಾವುದೆಂದರೆ, ಅಂಥವನು ತುಂಬ ಸ್ವನಿಯಂತ್ರಣವುಳ್ಳವನಾಗಿರುತ್ತಾನೆ. ಅದು ದುರ್ಬಲವಾದ ಸೌಮ್ಯತೆಯಾಗಿರುವುದಿಲ್ಲ, ಭಾವನಾತ್ಮಕ ಅಕ್ಕರೆಯಾಗಿರುವುದಿಲ್ಲ, ಯಾವುದರಲ್ಲೂ ಒಳಗೂಡದೆ ಸುಮ್ಮನಿರುವಂಥ ಮನಃಸ್ಥಿತಿಯಲ್ಲ. ಅದು ನಿಯಂತ್ರಣದಲ್ಲಿರುವ ಒಂದು ಬಲವಾಗಿದೆ.” ಸ್ವತಃ ತನ್ನ ಕುರಿತು ಯೇಸು ಹೀಗೆ ಹೇಳಿದನು: ‘ನಾನು ಸಾತ್ವಿಕನೂ [ಸೌಮ್ಯ ಸ್ವಭಾವದವನೂ] ದೀನ ಮನಸ್ಸುಳ್ಳವನೂ ಆಗಿದ್ದೇನೆ.’ (ಮತ್ತಾಯ 11:29) ಆದರೂ, ನೀತಿಯ ಮೂಲತತ್ತ್ವಗಳನ್ನು ಸಮರ್ಥಿಸುವುದರಲ್ಲಿ ಯೇಸು ಧೈರ್ಯಶಾಲಿಯಾಗಿದ್ದನು.—ಮತ್ತಾಯ 21:12, 13; 23:13-33.
8 ಆದುದರಿಂದ, ಸೌಮ್ಯ ಸ್ವಭಾವಕ್ಕೂ ಸ್ವನಿಯಂತ್ರಣಕ್ಕೂ ನಿಕಟ ಸಂಬಂಧವಿದೆ. ವಾಸ್ತವದಲ್ಲಿ, ಅಪೊಸ್ತಲ ಪೌಲನು “ದೇವರಾತ್ಮನಿಂದ ಉಂಟಾಗುವ ಫಲ”ಗಳನ್ನು ತಿಳಿಸಿದಾಗ, ಸಾಧುತ್ವ ಅಂದರೆ ಸೌಮ್ಯಭಾವ ಹಾಗೂ ಶಮೆದಮೆ ಅಂದರೆ ಸ್ವನಿಯಂತ್ರಣವನ್ನು ಒಟ್ಟಿಗೆ ಪಟ್ಟಿಮಾಡಿದನು. (ಗಲಾತ್ಯ 5:22, 23) ಸೌಮ್ಯ ಸ್ವಭಾವವನ್ನು ಪವಿತ್ರಾತ್ಮದ ಸಹಾಯದಿಂದ ಬೆಳೆಸಿಕೊಳ್ಳಬೇಕಾಗಿದೆ. ಇದು ಒಂದು ಕ್ರೈಸ್ತ ಗುಣವಾಗಿದ್ದು, ಅವಿಶ್ವಾಸಿಗಳೊಂದಿಗೆ ಮತ್ತು ಸಭೆಯಲ್ಲಿರುವವರೊಂದಿಗೆ ಸಮಾಧಾನದಿಂದಿರಲು ಸಹಾಯಮಾಡುತ್ತದೆ. ಪೌಲನು ಬರೆದುದು: “ಕನಿಕರ ದಯೆ ದೀನಭಾವ ಸಾತ್ವಿಕತ್ವ [ಸೌಮ್ಯ ಸ್ವಭಾವ] ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. . . . ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ.”—ಕೊಲೊಸ್ಸೆ 3:12, 13.
9 ಆದರೂ, ಸೌಮ್ಯ ಸ್ವಭಾವವು ಬೇರೆ ಮಾನವರೊಂದಿಗಿನ ನಮ್ಮ ಸಂಬಂಧಕ್ಕೆ ಮಾತ್ರ ಸೀಮಿತವಾಗಿರಬಾರದು. ಯೆಹೋವನ ಪರಮಾಧಿಕಾರಕ್ಕೆ ಮನಃಪೂರ್ವಕವಾಗಿ ಅಧೀನರಾಗಿರುವ ಮೂಲಕ ನಾವು ಸೌಮ್ಯ ಸ್ವಭಾವದವರಾಗಿದ್ದೇವೆ ಎಂಬುದನ್ನು ತೋರ್ಪಡಿಸುತ್ತೇವೆ. ಈ ವಿಷಯದಲ್ಲಿ ಯೇಸು ಕ್ರಿಸ್ತನೇ ಅತ್ಯುತ್ತಮ ಮಾದರಿಯಾಗಿದ್ದಾನೆ; ಅವನು ಭೂಮಿಯಲ್ಲಿದ್ದಾಗ ಸೌಮ್ಯ ಸ್ವಭಾವವನ್ನು ವ್ಯಕ್ತಪಡಿಸಿದನು ಮತ್ತು ತನ್ನ ತಂದೆಯ ಚಿತ್ತಕ್ಕೆ ಪೂರ್ಣ ಅಧೀನತೆಯನ್ನು ತೋರಿಸಿದನು. (ಯೋಹಾನ 5:19, 30) ಪ್ರಪ್ರಥಮವಾಗಿ ಯೇಸು ಭೂಮಿಗೆ ಬಾಧ್ಯನಾಗುತ್ತಾನೆ, ಏಕೆಂದರೆ ಅವನೇ ಅದರ ನೇಮಿತ ಅರಸನಾಗಿದ್ದಾನೆ. (ಕೀರ್ತನೆ 2:6-8; ದಾನಿಯೇಲ 7:13, 14) ಅವನು ಈ ಬಾಧ್ಯತೆಯನ್ನು, “ಭೂಮಿಯ ಮೇಲೆ ಆಳ”ಲಿಕ್ಕಾಗಿ “ಮನುಷ್ಯರೊಳಗಿಂದ” ಆರಿಸಿಕೊಳ್ಳಲ್ಪಟ್ಟಿರುವ 1,44,000 ಮಂದಿ “ಬಾಧ್ಯ”ರೊಂದಿಗೆ ಹಂಚಿಕೊಳ್ಳುತ್ತಾನೆ. (ರೋಮಾಪುರ 8:17; ಪ್ರಕಟನೆ 5:9, 10; 14:1, 3, 4; ದಾನಿಯೇಲ 7:27) “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು” ಎಂಬ ಕೀರ್ತನೆಯ ಪ್ರವಾದನಾತ್ಮಕ ಮಾತುಗಳು ಯಾರ ಮೇಲೆ ಸಂತೋಷಭರಿತ ನೆರವೇರಿಕೆಯನ್ನು ಪಡೆಯುತ್ತವೋ ಅಂಥ ಲಕ್ಷಾಂತರ ಕುರಿಸದೃಶ ಸ್ತ್ರೀಪುರುಷರ ಮೇಲೆ ಕ್ರಿಸ್ತನೂ ಅವನ ಜೊತೆ ಅರಸರೂ ಆಳ್ವಿಕೆ ನಡೆಸುವರು.—ಕೀರ್ತನೆ 37:11; ಮತ್ತಾಯ 25:33, 34, 46.
ನೀತಿಗಾಗಿ ಹಸಿದಿರುವವರು ಸಂತೋಷಿತರು
10 ಗಲಿಲಾಯದಲ್ಲಿ ಪರ್ವತಪ್ರಸಂಗವನ್ನು ನೀಡುತ್ತಿರುವಾಗ ಯೇಸು ತಿಳಿಸಿದ ಸಂತೋಷಕ್ಕಾಗಿರುವ ಕಾರಣಗಳಲ್ಲಿ ಇನ್ನೊಂದು ಹೀಗಿತ್ತು: “ನೀತಿಗಾಗಿ ಹಸಿವೆಯುಳ್ಳವರು ಹಾಗೂ ಬಾಯಾರಿಕೆಯುಳ್ಳವರು ಸಂತೋಷಿತರು, ಏಕೆಂದರೆ ಅವರಿಗೆ ತೃಪ್ತಿಯಾಗುವಷ್ಟು ಕೊಡಲ್ಪಡುವುದು.” (ಮತ್ತಾಯ 5:6, NW) ಕ್ರೈಸ್ತರಿಗಾದರೋ, ನೀತಿಯ ಮಟ್ಟಗಳನ್ನು ಸ್ಥಾಪಿಸುವವನು ಯೆಹೋವನೇ ಆಗಿದ್ದಾನೆ. ಆದುದರಿಂದ, ನೀತಿಗಾಗಿ ಹಸಿದು ಬಾಯಾರುತ್ತಿರುವವರು ಕಾರ್ಯತಃ ದೈವಿಕ ಮಾರ್ಗದರ್ಶನಕ್ಕಾಗಿ ಹಸಿವೆಯನ್ನು ಹಾಗೂ ಬಾಯಾರಿಕೆಯನ್ನು ತೋರಿಸುತ್ತಿದ್ದಾರೆ. ಇಂಥವರಿಗೆ ತಮ್ಮ ಪಾಪ ಹಾಗೂ ಅಪರಿಪೂರ್ಣತೆಯ ಸಂಪೂರ್ಣ ಅರಿವು ಇದೆ ಮತ್ತು ಇವರು ಯೆಹೋವನ ಮುಂದೆ ಅಂಗೀಕೃತ ನಿಲುವನ್ನು ಪಡೆಯಲು ಹಂಬಲಿಸುತ್ತಾರೆ. ತಾವು ಪಶ್ಚಾತ್ತಾಪಪಟ್ಟು, ಕ್ರಿಸ್ತನ ಈಡು ಯಜ್ಞದ ಆಧಾರದ ಮೇಲೆ ಕ್ಷಮಾಪಣೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವಲ್ಲಿ, ದೇವರ ಮುಂದೆ ನೀತಿಯ ನಿಲುವನ್ನು ಪಡೆಯುವ ಸ್ಥಿತಿಯಲ್ಲಿರುವೆವು ಎಂಬುದನ್ನು ದೇವರ ವಾಕ್ಯದಿಂದ ಕಲಿಯುವಾಗ ಅವರು ಎಷ್ಟು ಸಂತೋಷಪಡುತ್ತಾರೆ!—ಅ. ಕೃತ್ಯಗಳು 2:38; 10:43; 13:38, 39; ರೋಮಾಪುರ 5:19.
11 ಇಂಥವರು ಸಂತೋಷದಿಂದಿರುವರು, ಏಕೆಂದರೆ ಅವರು “ಸಂತೃಪ್ತರಾಗುವರು” ಎಂದು ಯೇಸು ಹೇಳಿದನು. (ಮತ್ತಾಯ 5:6, ಕಿಂಗ್ಡಮ್ ಇಂಟರ್ಲಿನಿಯರ್) ಕ್ರಿಸ್ತನೊಂದಿಗೆ ಪರಲೋಕದಲ್ಲಿ ರಾಜರೋಪಾದಿ ‘ಆಳಲಿಕ್ಕಾಗಿ’ ಕರೆಯಲ್ಪಟ್ಟಿರುವವರು ‘ಜೀವಕ್ಕಾಗಿ ನೀತಿವಂತರೆಂದು’ ನಿರ್ಣಯಿಸಲ್ಪಟ್ಟಿದ್ದಾರೆ. (ರೋಮಾಪುರ 5:1, 9, 16-18) ಯೆಹೋವನು ಅವರನ್ನು ಆಧ್ಯಾತ್ಮಿಕ ಪುತ್ರರನ್ನಾಗಿ ದತ್ತುತೆಗೆದುಕೊಳ್ಳುತ್ತಾನೆ. ಅವರು ಕ್ರಿಸ್ತನ ಸ್ವರ್ಗೀಯ ರಾಜ್ಯ ಸರಕಾರದಲ್ಲಿ ರಾಜರು ಮತ್ತು ಯಾಜಕರಾಗಲಿಕ್ಕಾಗಿ ಕರೆಕೊಡಲ್ಪಟ್ಟಿರುವ ಅವನ ಜೊತೆ ಬಾಧ್ಯಸ್ಥರಾಗುತ್ತಾರೆ.—ಯೋಹಾನ 3:3; 1 ಪೇತ್ರ 2:9.
12 ಅಭಿಷಿಕ್ತ ಕ್ರೈಸ್ತರ ಸಂಗಡಿಗರು ಇನ್ನೂ ಜೀವಕ್ಕಾಗಿ ನೀತಿವಂತರೆಂದು ನಿರ್ಣಯಿಸಲ್ಪಟ್ಟಿಲ್ಲ. ಆದರೂ, ಕ್ರಿಸ್ತನಿಂದ ಸುರಿಸಲ್ಪಟ್ಟ ರಕ್ತದಲ್ಲಿ ಅವರು ತೋರಿಸುವ ನಂಬಿಕೆಯು ಯೆಹೋವನಿಂದ ಸ್ವಲ್ಪಮಟ್ಟಿಗೆ ನೀತಿಯೆಂದು ಎಣಿಸಲ್ಪಡುತ್ತದೆ. (ಯಾಕೋಬ 2:22-25; ಪ್ರಕಟನೆ 7:9, 10) ಯೆಹೋವನ ಸ್ನೇಹಿತರೋಪಾದಿ ಅವರು ನೀತಿವಂತರೆಂದು ಪರಿಗಣಿಸಲ್ಪಟ್ಟು, “ಮಹಾ ಹಿಂಸೆಯ” ಅಥವಾ ಮಹಾಸಂಕಟದ ಸಮಯದಲ್ಲಿ ವಿಮೋಚಿಸಲ್ಪಡುವವರ ಸಾಲಿನಲ್ಲಿದ್ದಾರೆ. (ಪ್ರಕಟನೆ 7:14) ಅವರು “ನೂತನಾಕಾಶಮಂಡಲ”ದ ಕೆಳಗೆ “ನೀತಿಯು ವಾಸ”ವಾಗಲಿರುವ ನೂತನಭೂಮಂಡಲದ ಭಾಗವಾಗುವಾಗ, ನೀತಿಗಾಗಿರುವ ಅವರ ಬಾಯಾರಿಕೆಯು ಇನ್ನೂ ತೃಪ್ತಿಪಡಿಸಲ್ಪಡುವುದು.—2 ಪೇತ್ರ 3:13; ಕೀರ್ತನೆ 37:29.
ಕರುಣೆಯನ್ನು ತೋರಿಸುವವರು ಸಂತೋಷಿತರು
13 ತನ್ನ ಪರ್ವತಪ್ರಸಂಗವನ್ನು ಮುಂದುವರಿಸುತ್ತಾ ಯೇಸು ಹೇಳಿದ್ದು: “ಕರುಣೆಯನ್ನು ತೋರಿಸುವವರು ಸಂತೋಷಿತರು, ಏಕೆಂದರೆ ಅವರಿಗೆ ಕರುಣೆಯು ತೋರಿಸಲ್ಪಡುವುದು.” (ಮತ್ತಾಯ 5:7, NW) ಕಾನೂನಿನ ಪರಿಭಾಷೆಯಲ್ಲಿ, ನ್ಯಾಯಬದ್ಧ ನಿಯಮವು ಅಗತ್ಯಪಡಿಸುವ ಪೂರ್ಣ ಶಿಕ್ಷೆಯನ್ನು ಒಬ್ಬ ತಪ್ಪಿತಸ್ಥನಿಗೆ ವಿಧಿಸುವುದರಿಂದ ತಡೆದುಹಿಡಿಯುವ ಒಬ್ಬ ನ್ಯಾಯಾಧೀಶನಿಂದ ತೋರಿಸಲ್ಪಡುವ ಕ್ಷಮಾಶೀಲತೆಯನ್ನು ಸೂಚಿಸುವ ರೀತಿಯಲ್ಲಿ ಕರುಣೆಯನ್ನು ಅರ್ಥಮಾಡಿಕೊಳ್ಳಲಾಗುತ್ತದೆ. ಆದರೂ, ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವಂತೆ, “ಕರುಣೆ” ಎಂದು ಭಾಷಾಂತರಿಸಲ್ಪಟ್ಟಿರುವ ಮೂಲ ಪದಗಳು ಹೆಚ್ಚಾಗಿ ದಯಾಪೂರ್ವಕ ಪರಿಗಣನೆಯ ಅಭಿವ್ಯಕ್ತಿಗೆ ಅಥವಾ ಅನನುಕೂಲಕರ ಸ್ಥಿತಿಯಲ್ಲಿರುವವರಿಗೆ ಉಪಶಮನವನ್ನು ತರುವಂಥ ಕನಿಕರಕ್ಕೆ ಸೂಚಿತವಾಗಿವೆ. ಹೀಗೆ, ಯಾರು ಕರುಣಾಭರಿತರಾಗಿದ್ದಾರೋ ಅವರು ಕ್ರಿಯಾಶೀಲ ರೀತಿಯಲ್ಲಿ ಸಹಾನುಭೂತಿಯನ್ನು ತೋರಿಸುವವರಾಗಿದ್ದಾರೆ. ನೆರೆಯವನಾದ ಸಮಾರ್ಯದವನ ಕುರಿತಾದ ಯೇಸುವಿನ ಸಾಮ್ಯವು, ಅಗತ್ಯದಲ್ಲಿದ್ದ ಒಬ್ಬ ವ್ಯಕ್ತಿಯ ಕಡೆಗೆ “ದಯೆತೋರಿಸಿದ” ವ್ಯಕ್ತಿಯೊಬ್ಬನ ಅತ್ಯುತ್ತಮ ಮಾದರಿಯನ್ನು ಒದಗಿಸುತ್ತದೆ.—ಲೂಕ 10:29-37.
14 ಕರುಣೆಯನ್ನು ತೋರಿಸುವವರಾಗಿರುವುದರಿಂದ ಸಿಗುವ ಸಂತೋಷವನ್ನು ನಾವು ಅನುಭವಿಸಬೇಕಾದರೆ, ಅಗತ್ಯದಲ್ಲಿರುವವರಿಗೋಸ್ಕರ ದಯಾಭರಿತವಾದ ಸಕಾರಾತ್ಮಕ ಕೃತ್ಯಗಳನ್ನು ಮಾಡುವ ಅಗತ್ಯವಿದೆ. (ಗಲಾತ್ಯ 6:10) ತಾನು ನೋಡಿದಂಥ ಜನರ ಕಡೆಗೆ ಯೇಸುವಿಗೆ ಸಹಾನುಭೂತಿಯುಂಟಾಯಿತು. ‘ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಅವನು ಕನಿಕರಪಟ್ಟು ಅವರಿಗೆ ಬಹಳ ಉಪದೇಶಮಾಡುತ್ತಿದ್ದನು.’ (ಮಾರ್ಕ 6:34) ಮಾನವಕುಲದ ಅತಿ ದೊಡ್ಡ ಆವಶ್ಯಕತೆಯು ಆಧ್ಯಾತ್ಮಿಕ ಆವಶ್ಯಕತೆಯೇ ಎಂಬುದನ್ನು ಯೇಸು ಮನಗಂಡನು. ಇತರರಿಗೆ ಯಾವುದು ಅತ್ಯಗತ್ಯವಾಗಿದೆಯೋ ಅದನ್ನು, ಅಂದರೆ ‘ರಾಜ್ಯದ ಸುವಾರ್ತೆಯನ್ನು’ ಅವರೊಂದಿಗೆ ಹಂಚಿಕೊಳ್ಳುವ ಮೂಲಕ ನಾವು ಸಹ ಸಹಾನುಭೂತಿ ಹಾಗೂ ಕರುಣೆಯುಳ್ಳವರಾಗಿದ್ದೇವೆ ಎಂಬುದನ್ನು ತೋರಿಸಿಕೊಡಸಾಧ್ಯವಿದೆ. (ಮತ್ತಾಯ 24:14) ವೃದ್ಧ ಜೊತೆ ಕ್ರೈಸ್ತರಿಗೆ, ವಿಧವೆಯರಿಗೆ, ಮತ್ತು ದಿಕ್ಕಿಲ್ಲದವರಿಗೆ ನಾವು ಪ್ರಾಯೋಗಿಕ ಸಹಾಯವನ್ನು ನೀಡಸಾಧ್ಯವಿದೆ ಮತ್ತು “ಮನಗುಂದಿದವರನ್ನು ಧೈರ್ಯಪಡಿ”ಸಸಾಧ್ಯವಿದೆ. (1 ಥೆಸಲೋನಿಕ 5:14; ಜ್ಞಾನೋಕ್ತಿ 12:25; ಯಾಕೋಬ 1:27) ಇದು ನಮಗೆ ಸಂತೋಷವನ್ನು ಉಂಟುಮಾಡುತ್ತದೆ ಮಾತ್ರವಲ್ಲ, ನಾವು ಸಹ ಯೆಹೋವನ ಕರುಣೆಯನ್ನು ಪಡೆದುಕೊಳ್ಳುವವರಾಗಿರುವಂತೆ ಮಾಡುತ್ತದೆ.—ಅ. ಕೃತ್ಯಗಳು 20:35; ಯಾಕೋಬ 2:13.
ನಿರ್ಮಲ ಹೃದಯವುಳ್ಳವರು ಮತ್ತು ಶಾಂತಿಶೀಲರು
15 ಸಂತೋಷಕ್ಕಾಗಿರುವ ಆರನೆಯ ಮತ್ತು ಏಳನೆಯ ಕಾರಣವನ್ನು ಯೇಸು ಈ ಮಾತುಗಳಲ್ಲಿ ತಿಳಿಸಿದನು: “ನಿರ್ಮಲ ಹೃದಯವುಳ್ಳವರು ಸಂತೋಷಿತರು, ಏಕೆಂದರೆ ಅವರು ದೇವರನ್ನು ನೋಡುವರು. ಶಾಂತಿಶೀಲರು ಸಂತೋಷಿತರು, ಏಕೆಂದರೆ ಅವರು ‘ದೇವರ ಮಕ್ಕಳು’ ಎಂದು ಕರೆಯಲ್ಪಡುವರು.” (ಮತ್ತಾಯ 5:8, 9, NW) ನಿರ್ಮಲ ಹೃದಯವು ನೈತಿಕವಾಗಿ ಶುದ್ಧವಾಗಿರುತ್ತದೆ ಮಾತ್ರವಲ್ಲ ಆಧ್ಯಾತ್ಮಿಕವಾಗಿಯೂ ಕಲೆರಹಿತವಾಗಿರುತ್ತದೆ ಮತ್ತು ಯೆಹೋವನಿಗೆ ಸಲ್ಲಿಸುವ ಭಕ್ತಿಯಲ್ಲಿ ಐಕ್ಯವಾಗಿರುತ್ತದೆ. (1 ಪೂರ್ವಕಾಲವೃತ್ತಾಂತ 28:9; ಕೀರ್ತನೆ 86:11) “ಶಾಂತಿಶೀಲ” ಎಂದು ತರ್ಜುಮೆಮಾಡಲ್ಪಟ್ಟಿರುವ ಮೂಲ ಭಾಷಾ ಪದವು ಅಕ್ಷರಾರ್ಥಕವಾಗಿ “ಶಾಂತಿಕರ್ತರು” ಎಂಬರ್ಥವನ್ನು ಕೊಡುತ್ತದೆ. ಶಾಂತಿಶೀಲರು ತಮ್ಮ ಕ್ರೈಸ್ತ ಸಹೋದರರೊಂದಿಗೆ ಮತ್ತು ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ನೆರೆಯವರೊಂದಿಗೆ ಸಹ ಶಾಂತಿಯಿಂದ ಜೀವಿಸುತ್ತಾರೆ. (ರೋಮಾಪುರ 12:17-21) ಅವರು “ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನ”ಪಡುತ್ತಾರೆ.—1 ಪೇತ್ರ 3:11.
16 ನಿರ್ಮಲ ಹೃದಯವುಳ್ಳವರಾಗಿರುವ ಶಾಂತಿಶೀಲರು “‘ದೇವರ ಮಕ್ಕಳು’ ಎಂದು ಕರೆಯಲ್ಪಡುವರು” ಮತ್ತು ಅವರು “ದೇವರನ್ನು ನೋಡುವರು” ಎಂಬ ವಾಗ್ದಾನವು ಮಾಡಲ್ಪಟ್ಟಿದೆ. ಅಭಿಷಿಕ್ತ ಕ್ರೈಸ್ತರು ಆತ್ಮಜನಿತರಾಗಿದ್ದಾರೆ ಮತ್ತು ಭೂಮಿಯಲ್ಲಿರುವಾಗಲೇ ಯೆಹೋವನ ‘ಮಕ್ಕಳಾಗಿ’ ಸ್ವೀಕರಿಸಲ್ಪಟ್ಟಿದ್ದಾರೆ. (ರೋಮಾಪುರ 8:14-17) ಪರಲೋಕದಲ್ಲಿ ಕ್ರಿಸ್ತನೊಂದಿಗಿರಲಿಕ್ಕಾಗಿ ಅವರು ಪುನರುತ್ಥಾನಗೊಳಿಸಲ್ಪಡುವಾಗ ಯೆಹೋವನ ಸಮಕ್ಷಮದಲ್ಲಿ ಆತನ ಸೇವೆಮಾಡುತ್ತಾರೆ ಮತ್ತು ನಿಜವಾಗಿಯೂ ಆತನನ್ನು ನೋಡುತ್ತಾರೆ.—1 ಯೋಹಾನ 3:1, 2; ಪ್ರಕಟನೆ 4:9-11.
17 ಶಾಂತಿಶೀಲರಾಗಿರುವ “ಬೇರೆ ಕುರಿ” ವರ್ಗದವರು, ತಮ್ಮ “ನಿತ್ಯನಾದ ತಂದೆ”ಯಾಗಿ ಪರಿಣಮಿಸಲಿರುವ ಒಳ್ಳೇ ಕುರುಬನಾದ ಯೇಸು ಕ್ರಿಸ್ತನ ಕೆಳಗೆ ಯೆಹೋವನ ಸೇವೆಮಾಡುತ್ತಾರೆ. (ಯೋಹಾನ 10:14, 16; ಯೆಶಾಯ 9:6) ಯಾರು ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಬಳಿಕ ಅಂತಿಮ ಪರೀಕ್ಷೆಯಿಂದ ಯಶಸ್ವಿಕರವಾಗಿ ಹೊರಬರುತ್ತಾರೋ ಅಂಥವರು ಯೆಹೋವನ ಭೂಮಕ್ಕಳಾಗಿ ಸ್ವೀಕರಿಸಲ್ಪಡುವರು ಮತ್ತು “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದು”ವರು. (ರೋಮಾಪುರ 8:21; ಪ್ರಕಟನೆ 20:7, 9) ಇವರು ಇದಕ್ಕಾಗಿ ಎದುರುನೋಡುತ್ತಿರುವಾಗ, ಯೆಹೋವನನ್ನು ತಂದೆಯೋಪಾದಿ ಸಂಬೋಧಿಸುವರು; ಏಕೆಂದರೆ ಇವರು ಆತನನ್ನು ತಮ್ಮ ಜೀವದಾತನಾಗಿ ಪರಿಗಣಿಸುತ್ತಾ ಆತನಿಗೆ ತಮ್ಮ ಜೀವಿತಗಳನ್ನು ಸಮರ್ಪಿಸಿಕೊಳ್ಳುತ್ತಾರೆ. (ಯೆಶಾಯ 64:8) ಪುರಾತನ ಕಾಲದ ಯೋಬ ಮತ್ತು ಮೋಶೆಯರಂತೆ ಇವರು ನಂಬಿಕೆಯ ಕಣ್ಣುಗಳಿಂದ “ದೇವರನ್ನು ನೋಡ”ಬಲ್ಲರು. (ಯೋಬ 42:5; ಇಬ್ರಿಯ 11:27) ‘ತಮ್ಮ ಮನೋನೇತ್ರಗಳಿಂದ’ ಮತ್ತು ದೇವರ ಕುರಿತಾದ ನಿಷ್ಕೃಷ್ಟ ಜ್ಞಾನದ ಸಹಾಯದಿಂದ ಅವರು ಯೆಹೋವನ ಮಹಿಮಾತಿಶಯಗಳನ್ನು ಗ್ರಹಿಸುತ್ತಾರೆ ಮತ್ತು ಆತನ ಚಿತ್ತವನ್ನು ಮಾಡುವ ಮೂಲಕ ಆತನನ್ನು ಅನುಕರಿಸಲು ಪ್ರಯತ್ನಿಸುತ್ತಾರೆ.—ಎಫೆಸ 1:18; ರೋಮಾಪುರ 1:19, 20; 3 ಯೋಹಾನ 11.
18 ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು, ದುಃಖಿಸುವವರು, ಸೌಮ್ಯ ಸ್ವಭಾವದವರು, ನೀತಿಗಾಗಿ ಹಸಿದು ಬಾಯಾರುತ್ತಿರುವವರು, ಕರುಣೆಯುಳ್ಳವರು, ನಿರ್ಮಲ ಹೃದಯವುಳ್ಳವರು ಮತ್ತು ಶಾಂತಿಶೀಲರು ಯೆಹೋವನ ಸೇವೆಮಾಡುವುದರಲ್ಲಿ ನಿಜವಾದ ಸಂತೋಷವನ್ನು ಕಂಡುಕೊಳ್ಳುತ್ತಾರೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಆದರೂ, ಇಂಥವರು ಯಾವಾಗಲೂ ವಿರೋಧವನ್ನು ಮತ್ತು ಹಿಂಸೆಯನ್ನು ಎದುರಿಸಿದ್ದಾರೆ. ಇದು ಅವರ ಸಂತೋಷವನ್ನು ಹಾಳುಮಾಡುತ್ತದೋ? ಈ ಪ್ರಶ್ನೆಯು ಮುಂದಿನ ಲೇಖನದಲ್ಲಿ ಪರಿಗಣಿಸಲ್ಪಡುವುದು.
ಪುನರ್ವಿಮರ್ಶೆಗಾಗಿ
• ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಯಾವ ಸಂತೋಷವನ್ನು ಅನುಭವಿಸುತ್ತಾರೆ?
• ದುಃಖಿತರು ಯಾವ ವಿಧಗಳಲ್ಲಿ ಸಂತೈಸಲ್ಪಡುತ್ತಾರೆ?
• ನಾವು ಹೇಗೆ ಸೌಮ್ಯ ಸ್ವಭಾವವನ್ನು ತೋರಿಸಬಹುದು?
• ನಾವು ಕರುಣೆಯುಳ್ಳವರೂ, ನಿರ್ಮಲ ಹೃದಯವುಳ್ಳವರೂ, ಶಾಂತಿಶೀಲರೂ ಆಗಿರಬೇಕು ಏಕೆ?
[ಅಧ್ಯಯನ ಪ್ರಶ್ನೆಗಳು]
1. ನಿಜ ಸಂತೋಷವೆಂದರೇನು, ಮತ್ತು ಇದು ಏನನ್ನು ಪ್ರತಿಬಿಂಬಿಸುತ್ತದೆ?
2. ಯಾವ ಸಂದರ್ಭದಲ್ಲಿ ಯೇಸು ಸಂತೋಷದ ಕುರಿತು ಮಾತಾಡಿದನು, ಮತ್ತು ಯಾವುದು ಅವನ ಆರಂಭದ ಹೇಳಿಕೆಯಾಗಿತ್ತು?
3. ದೀನ ಮನೋವೃತ್ತಿಯು ನಮ್ಮ ಸಂತೋಷಕ್ಕೆ ಹೇಗೆ ಸಹಾಯಕರವಾಗಿರಬಲ್ಲದು?
4. (ಎ) ನಮ್ಮ ಹಾಗೂ ಇತರರ ಆಧ್ಯಾತ್ಮಿಕ ಅಗತ್ಯದ ಅರಿವನ್ನು ನಾವು ಯಾವ ವಿಧಗಳಲ್ಲಿ ತೋರಿಸಸಾಧ್ಯವಿದೆ? (ಬಿ) ನಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆ ನಮಗಿರುವಾಗ ಯಾವುದು ನಮ್ಮ ಸಂತೋಷಕ್ಕೆ ಹೆಚ್ಚನ್ನು ಕೂಡಿಸುತ್ತದೆ?
5. (ಎ) “ದುಃಖಪಡುವವರು” ಎಂಬ ಅಭಿವ್ಯಕ್ತಿಯು ಏನನ್ನು ಅರ್ಥೈಸುತ್ತದೆ? (ಬಿ) ದುಃಖಿಸುತ್ತಿರುವವರು ಹೇಗೆ ಸಂತೈಸಲ್ಪಡುತ್ತಾರೆ?
6. ಕೆಲವರು ಯಾವ ಅರ್ಥದಲ್ಲಿ ದುಃಖಿಸುತ್ತಾರೆ, ಮತ್ತು ಅವರು ಹೇಗೆ ಸಂತೈಸಲ್ಪಡುತ್ತಾರೆ?
7. “ಸೌಮ್ಯ ಸ್ವಭಾವ” ಎಂಬ ಪದವು ಏನನ್ನು ಅರ್ಥೈಸುವುದಿಲ್ಲ?
8. ಸೌಮ್ಯ ಸ್ವಭಾವವು ಯಾವುದರೊಂದಿಗೆ ನಿಕಟವಾಗಿ ಸಂಬಂಧಿಸಿದೆ, ಮತ್ತು ಇತರರೊಂದಿಗಿನ ನಮ್ಮ ಸಂಬಂಧಗಳಲ್ಲಿ ಈ ಗುಣವು ನಮಗೆ ಏಕೆ ಅಗತ್ಯವಾಗಿದೆ?
9. (ಎ) ಸೌಮ್ಯ ಸ್ವಭಾವದವರಾಗಿರುವುದು ಬೇರೆ ಮಾನವರೊಂದಿಗಿನ ನಮ್ಮ ಸಂಬಂಧಕ್ಕೆ ಮಾತ್ರ ಸೀಮಿತವಾಗಿರಬಾರದೇಕೆ? (ಬಿ) ಸೌಮ್ಯ ಸ್ವಭಾವದವರು ಹೇಗೆ “ಭೂಮಿಗೆ ಬಾಧ್ಯ”ರಾಗುತ್ತಾರೆ?
10. ‘ನೀತಿಗಾಗಿ ಹಸಿದು ಬಾಯಾರುತ್ತಿರುವವರು’ ತೃಪ್ತಿಯಾಗುವಷ್ಟನ್ನು ಪಡೆಯುವ ಒಂದು ವಿಧವು ಯಾವುದು?
11, 12. (ಎ) ಅಭಿಷಿಕ್ತ ಕ್ರೈಸ್ತರು ಹೇಗೆ ನೀತಿಯ ನಿಲುವನ್ನು ಪಡೆಯುತ್ತಾರೆ? (ಬಿ) ಅಭಿಷಿಕ್ತ ಕ್ರೈಸ್ತರ ಸಂಗಡಿಗರ ನೀತಿಗಾಗಿರುವ ಬಾಯಾರಿಕೆಯು ಹೇಗೆ ತೃಪ್ತಿಪಡಿಸಲ್ಪಡುತ್ತದೆ?
13, 14. ನಾವು ಕರುಣೆಯುಳ್ಳವರಾಗಿದ್ದೇವೆ ಎಂಬುದನ್ನು ಯಾವ ಪ್ರಾಯೋಗಿಕ ವಿಧಗಳಲ್ಲಿ ನಾವು ತೋರಿಸಿಕೊಡಬೇಕು, ಮತ್ತು ಇದು ನಮಗೆ ಯಾವ ಪ್ರಯೋಜನವನ್ನು ನೀಡುತ್ತದೆ?
15. ನಾವು ಹೇಗೆ ನಿರ್ಮಲ ಹೃದಯವುಳ್ಳವರೂ ಶಾಂತಿಶೀಲರೂ ಆಗಿರಸಾಧ್ಯವಿದೆ?
16, 17. (ಎ) ಅಭಿಷಿಕ್ತರು “ದೇವರ ಮಕ್ಕಳು” ಎಂದು ಏಕೆ ಕರೆಯಲ್ಪಡುತ್ತಾರೆ, ಮತ್ತು ಅವರು ಹೇಗೆ “ದೇವರನ್ನು ನೋಡು”ತ್ತಾರೆ? (ಬಿ) “ಬೇರೆ ಕುರಿ” ವರ್ಗದವರು ಹೇಗೆ “ದೇವರನ್ನು ನೋಡು”ತ್ತಾರೆ? (ಸಿ) ಸಂಪೂರ್ಣ ಅರ್ಥದಲ್ಲಿ, ಹೇಗೆ ಮತ್ತು ಯಾವಾಗ “ಬೇರೆ ಕುರಿ” ವರ್ಗದವರು ‘ದೇವರ ಮಕ್ಕಳಾಗುತ್ತಾರೆ?’
18. ಯೇಸುವಿನಿಂದ ತಿಳಿಸಲ್ಪಟ್ಟ ಸಂತೋಷಕ್ಕಾಗಿರುವ ಮೊದಲ ಏಳು ಕಾರಣಗಳಿಗೆ ಹೊಂದಿಕೆಯಲ್ಲಿ, ಇಂದು ಯಾರು ನಿಜವಾದ ಸಂತೋಷವನ್ನು ಕಂಡುಕೊಳ್ಳುತ್ತಾರೆ?
[ಪುಟ 10ರಲ್ಲಿರುವ ಚಿತ್ರ]
“ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು”
[ಪುಟ 10ರಲ್ಲಿರುವ ಚಿತ್ರಗಳು]
“ನೀತಿಗಾಗಿ ಹಸಿವೆಯುಳ್ಳವರು ಹಾಗೂ ಬಾಯಾರಿಕೆಯುಳ್ಳವರು ಸಂತೋಷಿತರು”
[ಪುಟ 10ರಲ್ಲಿರುವ ಚಿತ್ರ]
“ಕರುಣೆಯನ್ನು ತೋರಿಸುವವರು ಸಂತೋಷಿತರು”