ಈ ಕಠಿನಕಾಲಗಳಲ್ಲಿ ‘ಶುದ್ಧ ಹೃದಯವನ್ನು’ ಕಾಪಾಡಿಕೊಳ್ಳಿರಿ
“ಇಂದು ಕ್ಯಾಥಲಿಕ್ ಚರ್ಚಿನ ಪುರೋಹಿತ ವರ್ಗದಲ್ಲಿ ಬ್ರಹ್ಮಚರ್ಯವು ದೊಡ್ಡ ಸಮಸ್ಯೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು.” ಇಟಲಿಯಲ್ಲಿರುವ ಚರ್ಚನ್ನು ಒಳಗೊಂಡ ಇತ್ತೀಚಿನ ಸೆಕ್ಸ್ ಹಗರಣಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕ್ಯಾಥಲಿಕ್ ಪತ್ರಕರ್ತನಾದ ವೀಟ್ಟೊರ್ಯೋ ಮೆಸ್ಸೋರೀ ಆ ಹೇಳಿಕೆಯನ್ನಿತ್ತನು. “ಕ್ರೈಸ್ತಪಾದ್ರಿಗಳ ಬ್ರಹ್ಮಚರ್ಯದ ನಿಯಮವನ್ನು ರದ್ದುಗೊಳಿಸಿದರೂ ಈ ಸಮಸ್ಯೆ ಬಗೆಹರಿಯಲಾರದು. ಏಕೆಂದರೆ ಇದರಲ್ಲಿ 80 ಪ್ರತಿಶತ ಪ್ರಕರಣಗಳು ಸಲಿಂಗಕಾಮಿಗಳನ್ನು ಅಂದರೆ ಪುರುಷರನ್ನು ಮತ್ತು ಹುಡುಗರನ್ನು ಲೈಂಗಿಕವಾಗಿ ಕೆಡಿಸುವ ಪಾದ್ರಿವರ್ಗದವರ ವಿಕೃತಕಾಮವನ್ನು ಒಳಗೊಂಡಿವೆ.”—ಲಾ ಸ್ಟಾಂಪಾ.
ಅಡೆತಡೆಯಿಲ್ಲದೆ ಹರಡುತ್ತಿರುವ ದುಷ್ಟತನವು ಸದ್ಯದ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳ” ಸೂಚನೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. (2 ತಿಮೊ. 3:1-5) ಪತ್ರಿಕಾ ವರದಿಗಳು ತೋರಿಸುವ ಪ್ರಕಾರ, ಇದರಿಂದಾಗುವ ನೈತಿಕ ಅವನತಿಯು ಸಾಮಾನ್ಯ ಜನರ ಮೇಲೆ ಮಾತ್ರವಲ್ಲದೆ ತಮ್ಮನ್ನು ಧರ್ಮನಿಷ್ಠರೆಂದು ಹೇಳಿಕೊಳ್ಳುವ ವ್ಯಕ್ತಿಗಳ ಮೇಲೂ ನಕಾರಾತ್ಮಕ ಪ್ರಭಾವ ಬೀರುತ್ತದೆ. ಅವರ ಭ್ರಷ್ಟಗೊಂಡ ಅಶುದ್ಧ ಹೃದಯವು ನೀಚಕೃತ್ಯಗಳನ್ನು ನಡೆಸುವಂತೆ ಪ್ರಚೋದಿಸುತ್ತದೆ. (ಎಫೆ. 2:2) ಸಕಾರಣದಿಂದಲೇ ಯೇಸು ಈ ಎಚ್ಚರಿಕೆಯನ್ನು ಕೊಟ್ಟಿದ್ದಾನೆ: “ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಹಾದರ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೇವದೂಷಣೆಗಳು ಹೊರಬರುತ್ತವೆ.” (ಮತ್ತಾ. 15:19) ಆದರೆ ತನ್ನ ಸೇವಕರು ‘ಹೃದಯದ ಶುದ್ಧತೆಯನ್ನು’ ಪ್ರೀತಿಸಬೇಕೆಂಬುದು ಯೆಹೋವ ದೇವರ ಅಪೇಕ್ಷೆ. (ಜ್ಞಾನೋ. 22:11) ಹಾಗಾದರೆ ಒಬ್ಬ ಕ್ರೈಸ್ತನು ಈ ಕಠಿನಕಾಲಗಳಲ್ಲಿ ಶುದ್ಧ ಹೃದಯವನ್ನು ಹೇಗೆ ಕಾಪಾಡಿಕೊಳ್ಳಬಲ್ಲನು?
‘ಹೃದಯದಲ್ಲಿ ಶುದ್ಧರಾಗಿರುವುದರ’ ಅರ್ಥ
ಬೈಬಲಿನಲ್ಲಿ “ಹೃದಯ” ಎಂಬ ಪದವನ್ನು ಅನೇಕ ಬಾರಿ ಸಾಂಕೇತಿಕಾರ್ಥದಲ್ಲಿ ಉಪಯೋಗಿಸಲಾಗಿದೆ. ಒಂದು ಪರಾಮರ್ಶನ ಕೃತಿಗನುಸಾರ, ಹೃದಯವನ್ನು ಸೂಚಿಸಲು ಬೈಬಲ್ ಬಳಸುವ ಪದವು ‘ಮನುಷ್ಯನ ಅಂತರಾಳಕ್ಕೆ’ ಸೂಚಿಸುತ್ತದೆ ಮತ್ತು “ದೇವರು ಅತ್ಯಧಿಕವಾಗಿ ನೋಡಲು ಅಪೇಕ್ಷಿಸುವುದು ಇದನ್ನೇ. ಒಬ್ಬನ ಧಾರ್ಮಿಕ ಜೀವನ ಬೇರೂರಿರುವುದು ಇಲ್ಲೇ. ಅದು ಅವನ ನೈತಿಕ ನಡತೆಯನ್ನು ನಿರ್ಧರಿಸುತ್ತದೆ.” ನಾವು ಅಂತರಂಗದಲ್ಲಿ ನಿಜಕ್ಕೂ ಏನಾಗಿದ್ದೇವೋ ಅದನ್ನು ನಮ್ಮ ಹೃದಯ ಪ್ರತಿನಿಧಿಸುತ್ತದೆ. ಮೇಲೆ ಉದ್ಧರಿಸಲ್ಪಟ್ಟಿರುವ ಕೃತಿ ಎತ್ತಿತೋರಿಸುವಂತೆ, ಯೆಹೋವನು ಪರೀಕ್ಷಿಸುವುದು ಹೃದಯವನ್ನೇ ಮತ್ತು ತನ್ನ ಸೇವಕರಲ್ಲಿ ಅಮೂಲ್ಯವೆಂದೆಣಿಸುವುದು ಸಹ ಇದನ್ನೇ.—1 ಪೇತ್ರ 3:4.
ಬೈಬಲಿನಲ್ಲಿ “ನಿರ್ಮಲ” ಮತ್ತು “ಶುದ್ಧ” ಎಂಬ ಪದಗಳು ಶಾರೀರಿಕಾರ್ಥದಲ್ಲಿ ಶುದ್ಧವಾಗಿರುವುದಕ್ಕೆ ಸೂಚಿಸಬಲ್ಲವು. ಆದರೆ ಈ ಶಬ್ದಗಳು ನೈತಿಕ ಹಾಗೂ ಧಾರ್ಮಿಕಾರ್ಥದಲ್ಲಿ ಕಲುಷಿತವಲ್ಲದಕ್ಕೆ, ಅಂದರೆ ಕಲಬೆರಕೆ, ಕೊಳೆ ಅಥವಾ ಭ್ರಷ್ಟತೆ ಇಲ್ಲದ ವಿಷಯಗಳಿಗೆ ಸಹ ಅನ್ವಯಿಸಲ್ಪಡುತ್ತವೆ. ಪರ್ವತ ಪ್ರಸಂಗದಲ್ಲಿ ಯೇಸು, “ಹೃದಯದಲ್ಲಿ ಶುದ್ಧರಾಗಿರುವವರು ಸಂತೋಷಿತರು” ಎಂದು ಘೋಷಿಸಿದನು. ವಾಸ್ತವದಲ್ಲಿ ಅಂತರಂಗದಲ್ಲಿ ಶುದ್ಧರಾಗಿರುವ ವ್ಯಕ್ತಿಗಳಿಗೆ ಅವನು ಸೂಚಿಸುತ್ತಿದ್ದನು. (ಮತ್ತಾ. 5:8) ಅವರ ಭಾವನೆಗಳು, ಬಯಕೆಗಳು, ಹೇತುಗಳು ನಿರ್ಮಲವಾಗಿವೆ. ಪ್ರೀತಿ ಮತ್ತು ಕೃತಜ್ಞತಾಭಾವದಿಂದ ಪ್ರಚೋದಿಸಲ್ಪಟ್ಟವರಾಗಿ ಅವರು ಪೂರ್ಣ ಹೃದಯದಿಂದ, ಪ್ರಾಮಾಣಿಕವಾಗಿ, ಕಪಟವಿಲ್ಲದೆ ಯೆಹೋವನನ್ನು ಪ್ರೀತಿಸುತ್ತಾರೆ. (ಲೂಕ 10:27) ನೀವು ಸಹ ಈ ಅರ್ಥದಲ್ಲಿ ನಿರ್ಮಲರಾಗಿರಲು ಬಯಸುತ್ತೀರಿ, ಅಲ್ಲವೆ?
‘ಹೃದಯದಲ್ಲಿ ಶುದ್ಧರಾಗಿರುವುದು’ ಸುಲಭವಲ್ಲ
ಯೆಹೋವನ ಸೇವಕನು ‘ಶುದ್ಧಹಸ್ತವುಳ್ಳವನಾಗಿರುವುದು’ ಮಾತ್ರವಲ್ಲ ‘ನಿರ್ಮಲಹೃದಯವುಳ್ಳವನೂ’ ಆಗಿರಬೇಕು. (ಕೀರ್ತ. 24:3, 4) ಆದರೆ ಇಂದು ‘ನಿರ್ಮಲಹೃದಯವುಳ್ಳವರಾಗಿ’ ಉಳಿಯುವುದು ದೇವರ ಸೇವಕರಿಗೆ ತುಂಬ ಕಷ್ಟಕರ. ಸೈತಾನ ಮತ್ತು ಅವನ ಆಧಿಪತ್ಯದ ಕೆಳಗಿರುವ ಲೋಕ ಹಾಗೂ ನಮ್ಮ ಸ್ವಂತ ಅಪರಿಪೂರ್ಣ ಶರೀರ ಯೆಹೋವನಿಂದ ನಮ್ಮನ್ನು ದೂರಮಾಡಲು ಬಲವಾದ ಒತ್ತಡ ಹಾಕುತ್ತದೆ. ಈ ಒತ್ತಡಗಳನ್ನು ಪ್ರತಿರೋಧಿಸಲು ನಾವು ‘ಹೃದಯದ ಶುದ್ಧತೆಯನ್ನು’ ಪ್ರೀತಿಸುವುದು ಮತ್ತು ಅದನ್ನು ಶುದ್ಧವಾಗಿಯೇ ಉಳಿಸಿಕೊಳ್ಳಲು ದೃಢಮನಸ್ಸುಳ್ಳವರಾಗಿರುವುದು ಅತಿ ಪ್ರಾಮುಖ್ಯ. ಇದು ನಮ್ಮನ್ನು ಸಂರಕ್ಷಿಸಿ ದೇವರ ಸ್ನೇಹಿತರಾಗಿಯೇ ಉಳಿಯಲು ಸಹಾಯಮಾಡುವುದು. ನಾವು ಹೃದಯವನ್ನು ಹೇಗೆ ಶುದ್ಧವಾಗಿ ಇಟ್ಟುಕೊಳ್ಳಬಲ್ಲೆವು?
ಇಬ್ರಿಯ 3:12ರಲ್ಲಿ ನಾವು ಈ ಎಚ್ಚರಿಕೆಯನ್ನು ಕಂಡುಕೊಳ್ಳುತ್ತೇವೆ: “ಸಹೋದರರೇ, ಜೀವವುಳ್ಳ ದೇವರಿಂದ ದೂರಹೋಗುವಂತೆ ಮಾಡುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಬೆಳೆಯದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿರಿ.” ನಾವು “ಅಪನಂಬಿಕೆಯುಳ್ಳ” ಹೃದಯವನ್ನು ಬೆಳೆಸಿಕೊಳ್ಳುವುದಾದರೆ ‘ಹೃದಯದಲ್ಲಿ ಶುದ್ಧರಾಗಿ’ ಉಳಿಯಲು ಸಾಧ್ಯವಿಲ್ಲ. ದೇವರಲ್ಲಿನ ನಂಬಿಕೆಯನ್ನು ಶಿಥಿಲಗೊಳಿಸಲು ಪಿಶಾಚನಾದ ಸೈತಾನನು ಯಾವ ವಿಚಾರಗಳನ್ನು ಹಬ್ಬಿಸಿದ್ದಾನೆ? ಅವನು ಹಬ್ಬಿಸಿರುವ ವಿಚಾರಗಳಲ್ಲಿ ವಿಕಾಸವಾದ, ಸಾಪೇಕ್ಷ ನೈತಿಕ ಹಾಗೂ ಧಾರ್ಮಿಕ ಸಿದ್ಧಾಂತa ಮತ್ತು ಪವಿತ್ರ ಶಾಸ್ತ್ರಗ್ರಂಥ ದೈವಪ್ರೇರಿತವಲ್ಲ ಎಂದು ಹೇಳುವುದು ಸಹ ಒಳಗೂಡಿದೆ. ಮರಣಕರವಾದ ಇಂಥ ವಿಚಾರಧಾಟಿಗಳು ನಮ್ಮನ್ನು ಪ್ರಭಾವಿಸುವಂತೆ ನಾವು ಬಿಡಬಾರದು. (ಕೊಲೊ. 2:8) ದೈನಂದಿನ ಬೈಬಲ್ ವಾಚನ ಮತ್ತು ಆಳವಾದ ಮನನ ಇಂಥ ದಾಳಿಗಳ ವಿರುದ್ಧ ಪ್ರಧಾನ ರಕ್ಷಣಾ ಸಾಧನಗಳಾಗಿವೆ. ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನವು ಯೆಹೋವನ ಮೇಲಣ ನಮ್ಮ ಪ್ರೀತಿ ಮತ್ತು ಆತನು ವ್ಯವಹರಿಸುವ ರೀತಿಯ ಮೇಲಣ ನಮ್ಮ ಗಣ್ಯತೆಯನ್ನು ಹೆಚ್ಚಿಸುವುದು. ಸುಳ್ಳು ತರ್ಕಗಳನ್ನು ತಳ್ಳಿಹಾಕಿ ಯೆಹೋವನಲ್ಲಿನ ನಮ್ಮ ನಂಬಿಕೆಯನ್ನು ಬಲವಾಗಿ ಇಟ್ಟುಕೊಳ್ಳಲು ಇಂಥ ಪ್ರೀತಿ ಮತ್ತು ಗಣ್ಯತೆ ಅನಿವಾರ್ಯ. ಹೀಗೆ ನಾವು ಹೃದಯದ ಶುದ್ಧತೆಯನ್ನು ಕಾಪಾಡಿಕೊಳ್ಳಬಲ್ಲೆವು.—1 ತಿಮೊ. 1:3-5.
ಶಾರೀರಿಕ ಬಯಕೆಗಳು ಎದುರಾಗುವಾಗ
‘ಹೃದಯದ ಶುದ್ಧತೆಯನ್ನು’ ಕಾಪಾಡಿಕೊಳ್ಳಲು ಪ್ರಯತ್ನಿಸುವಾಗ ನಾವು ಮತ್ತೊಂದು ರೀತಿಯ ದಾಳಿಯನ್ನು ಎದುರಿಸಬಹುದು. ಅದರಲ್ಲಿ ಶಾರೀರಿಕ ಹಾಗೂ ಪ್ರಾಪಂಚಿಕ ಆಶೆಗಳು ಒಳಗೂಡಿವೆ. (1 ಯೋಹಾ. 2:15, 16) ಹಣದ ಪ್ರೇಮ ಅಥವಾ ಹೆಚ್ಚು ಸಿರಿಸಂಪತ್ತನ್ನು ಕೂಡಿಸಿಕೊಳ್ಳಬೇಕೆಂಬ ಆಶೆಯು ಹೃದಯವನ್ನು ಭ್ರಷ್ಟಗೊಳಿಸಿ ದೇವರ ಚಿತ್ತಕ್ಕೆ ವಿರುದ್ಧವಾದದ್ದನ್ನು ಮಾಡುವಂತೆ ಒಬ್ಬ ಕ್ರೈಸ್ತನನ್ನು ಪ್ರೇರಿಸಬಹುದು. ಕೆಲವರು ಕೆಲಸದ ಸ್ಥಳದಲ್ಲಿ ಅಪ್ರಾಮಾಣಿಕರಾಗಿದ್ದಾರೆ, ಬೇರೆಯವರನ್ನು ವಂಚಿಸಿದ್ದಾರೆ ಅಥವಾ ಹಣವನ್ನು ಇಲ್ಲವೆ ವಸ್ತುಗಳನ್ನು ಕದ್ದಿದ್ದಾರೆ ಕೂಡ.—1 ತಿಮೊ. 6:9, 10.
ಇನ್ನೊಂದು ಕಡೆ, ಯೆಹೋವನನ್ನು ಅಪ್ರಸನ್ನಗೊಳಿಸುವ ವಿಷಯದಲ್ಲಿ ಹಿತಕರ ಭಯವನ್ನು ಬೆಳೆಸಿಕೊಳ್ಳುವ ಮೂಲಕ, ನ್ಯಾಯವನ್ನು ಪ್ರೀತಿಸುವ ಮೂಲಕ ಮತ್ತು ಒಳ್ಳೇ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಲು ದೃಢಮನಸ್ಸುಳ್ಳವರಾಗಿರುವ ಮೂಲಕ ನಾವು ‘ಹೃದಯದ ಶುದ್ಧತೆಯನ್ನು’ ಪ್ರೀತಿಸುತ್ತೇವೆ ಎಂದು ತೋರಿಸುತ್ತೇವೆ. ಈ ಪ್ರೀತಿಯು ‘ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳುವುದನ್ನು’ ಮುಂದುವರಿಸುವಂತೆ ಪ್ರಚೋದಿಸುತ್ತದೆ. (ಇಬ್ರಿ. 13:18) ನಾವು ಸತ್ಯವಂತರಾಗಿ ನಡೆದುಕೊಳ್ಳುವಾಗ, ನಮ್ಮ ಪ್ರಾಮಾಣಿಕತೆಯು ಒಳ್ಳೇ ಸಾಕ್ಷಿ ಕೊಡಬಲ್ಲದು. ಏಮೀಲ್ಯೋ ಎಂಬ ಇಟಲಿಯ ಸಾಕ್ಷಿಯು ಸಾರ್ವಜನಿಕ ಸಾರಿಗೆ ಕಂಪೆನಿಯೊಂದರಲ್ಲಿ ಚಾಲಕನಾಗಿ ಕೆಲಸಮಾಡುತ್ತಾನೆ. ಅವನಿಗೆ ಒಂದು ದಿನ 470 ಯೂರೋ (32,900 ರೂಪಾಯಿ)ಗಳಿದ್ದ ಒಂದು ಪರ್ಸ್ ಸಿಕ್ಕಿತು. ಅವನು ಆ ಪರ್ಸನ್ನು ತನ್ನ ಸೂಪರ್ವೈಸರ್ಗೆ ಕೊಟ್ಟಾಗ ಅವನ ಸಹೋದ್ಯೋಗಿಗಳಿಗೆ ಅತ್ಯಾಶ್ಚರ್ಯವಾಯಿತು. ಅನಂತರ ಸೂಪರ್ವೈಸರ್ ಪರ್ಸನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಅದನ್ನು ಕೊಟ್ಟನು. ಏಮೀಲ್ಯೋವಿನ ಕೆಲವು ಜೊತೆಕಾರ್ಮಿಕರು ಅವನ ಸುನಡತೆಯಿಂದ ಎಷ್ಟು ಪ್ರಭಾವಿತರಾದರೆಂದರೆ ಅವರು ಬೈಬಲಿನಲ್ಲಿ ಆಸಕ್ತಿ ತೋರಿಸಿದರು ಮತ್ತು ಬೈಬಲಧ್ಯಯನ ಮಾಡಲಾರಂಭಿಸಿದರು. ಇದರ ಫಲಿತಾಂಶವಾಗಿ ಎರಡು ಕುಟುಂಬಗಳಿಗೆ ಸೇರಿದ ಏಳು ವ್ಯಕ್ತಿಗಳು ಸತ್ಯವನ್ನು ಸ್ವೀಕರಿಸಿದ್ದಾರೆ. ಹೌದು, ಶುದ್ಧ ಹೃದಯದಿಂದ ಪ್ರಾಮಾಣಿಕರಾಗಿ ವರ್ತಿಸುವುದು ಇತರರು ದೇವರನ್ನು ಘನಪಡಿಸುವಂತೆ ನಿಜಕ್ಕೂ ಪ್ರೇರಿಸಬಲ್ಲದು.—ತೀತ 2:10.
ಒಬ್ಬ ಕ್ರೈಸ್ತನ ಹೃದಯದ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರಬಲ್ಲ ಬೇರೊಂದು ವಿಷಯ ಯಾವುದೆಂದರೆ ಸೆಕ್ಸ್ನ ಕುರಿತಾದ ತಿರುಚಲ್ಪಟ್ಟ, ಅನೈತಿಕ ದೃಷ್ಟಿಕೋನ. ವಿವಾಹಪೂರ್ವ, ವಿವಾಹಬಾಹಿರ ಮತ್ತು ಸಲಿಂಗಕಾಮ ಸಂಬಂಧಗಳಲ್ಲಿ ತಪ್ಪೇನಿಲ್ಲ ಎಂದು ಅನೇಕರು ನೆನಸುವುದರಿಂದ ಇದು ಒಬ್ಬ ಕ್ರೈಸ್ತನ ಹೃದಯವನ್ನು ಭ್ರಷ್ಟಗೊಳಿಸಸಾಧ್ಯವಿದೆ. ಲೈಂಗಿಕ ಅನೈತಿಕತೆಗೆ ಬಲಿಬೀಳುವ ವ್ಯಕ್ತಿ ತನ್ನ ಪಾಪವನ್ನು ಮರೆಮಾಡುತ್ತಾ ಕಪಟದಿಂದ ಇಬ್ಬಗೆಯ ಜೀವನವನ್ನು ನಡೆಸಬಹುದು. ಇಂಥ ವ್ಯಕ್ತಿಗೆ ‘ಶುದ್ಧ ಹೃದಯವಿರಲು’ ಸಾಧ್ಯವೇ ಇಲ್ಲ.
ಗಾಬ್ರೀಎಲೀ ಎಂಬವನಿಗೆ 15 ವಯಸ್ಸಿನಲ್ಲಿ ದೀಕ್ಷಾಸ್ನಾನವಾಯಿತು. ಆ ಕೂಡಲೆ ಅವನು ಪಯನೀಯರ್ ಸೇವೆ ಆರಂಭಿಸಿದನು. ಆದರೆ ಅನಂತರ ಅವನು ನೈಟ್ಕ್ಲಬ್ಗಳಲ್ಲಿ ಕೆಟ್ಟ ವ್ಯಕ್ತಿಗಳೊಂದಿಗೆ ಸಹವಾಸ ಮಾಡತೊಡಗಿದನು. (ಕೀರ್ತ. 26:4) ಹೀಗೆ ಅವನು ಅನೈತಿಕವಾದ ಕಪಟಭರಿತ ಜೀವನಶೈಲಿಯನ್ನು ಆರಂಭಿಸಿದನು. ಇದರಿಂದ ಅವನನ್ನು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಬೇಕಾಯಿತು. ಯೆಹೋವನಿಂದ ಸಿಕ್ಕಿದ ಈ ಶಿಸ್ತು ಅವನನ್ನು ಗಾಢವಾಗಿ ಆಲೋಚಿಸುವಂತೆ ಮಾಡಿತು. ಗಾಬ್ರೀಎಲೀ ಜ್ಞಾಪಿಸಿಕೊಳ್ಳುವುದು: “ನಾನು ಮುಂಚೆ ಹಗುರವಾಗಿ ತೆಗೆದುಕೊಳ್ಳುತ್ತಿದ್ದ ಎಲ್ಲ ವಿಷಯಗಳನ್ನು ಈಗ ಗಂಭೀರವಾಗಿ ತೆಗೆದುಕೊಳ್ಳಲಾರಂಭಿಸಿದೆ. ದಿನಾಲೂ ಬೈಬಲ್ ಓದುವ ಮೂಲಕ ಯೆಹೋವನು ವಾಸ್ತವದಲ್ಲಿ ಏನು ಹೇಳಬಯಸುತ್ತಾನೆ ಎಂಬುದನ್ನು ತಿಳಿಯಲು ಪ್ರಯತ್ನಿಸಿದೆ. ದೇವಪ್ರಭುತ್ವಾತ್ಮಕ ಪ್ರಕಾಶನಗಳನ್ನು ಜಾಗರೂಕತೆಯಿಂದ ಅಧ್ಯಯನ ಮಾಡಿದೆ. ವೈಯಕ್ತಿಕ ಅಧ್ಯಯನದಿಂದ ಎಷ್ಟು ಪ್ರಯೋಜನ, ಸಂತೃಪ್ತಿ ಸಿಗುತ್ತದೆ ಎಂಬುದನ್ನು ಮತ್ತು ಬೈಬಲ್ ಅಧ್ಯಯನ, ಹೃತ್ಪೂರ್ವಕ ಪ್ರಾರ್ಥನೆಗಳ ಮೂಲಕ ಎಷ್ಟು ಬಲವನ್ನು ಪಡೆದುಕೊಳ್ಳಬಹುದು ಎಂಬುದನ್ನು ಕಂಡುಕೊಂಡೆ.” ಇದು ತನ್ನ ಅನೈತಿಕ ನಡತೆಯನ್ನು ತೊರೆದು ಯೆಹೋವನೊಂದಿಗಿನ ತನ್ನ ಸುಸಂಬಂಧವನ್ನು ಪುನಸ್ಸ್ಥಾಪಿಸಲು ಗಾಬ್ರೀಎಲೀಗೆ ಸಹಾಯಮಾಡಿತು.
ಗಾಬ್ರೀಎಲೀ ಈಗ ಪುನಃ ಪಯನೀಯರನಾಗಿ ತನ್ನ ಹೆಂಡತಿಯೊಂದಿಗೆ ಸೇವೆಮಾಡುತ್ತಿದ್ದಾನೆ. ಬೈಬಲಿನ ಮತ್ತು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಪ್ರಕಾಶನಗಳ ಅಧ್ಯಯನವು ಶುದ್ಧ ಹೃದಯವನ್ನು ಹೊಂದಿರಲು ಮತ್ತು ಅನೈತಿಕತೆಯನ್ನು ತ್ಯಜಿಸಲು ಒಬ್ಬನಿಗೆ ಹೇಗೆ ಸಹಾಯಮಾಡಬಲ್ಲದು ಎಂಬುದು ಅವನಿಗೆ ಸಂಭವಿಸಿದ ವಿಷಯಗಳಿಂದ ದೃಢವಾಗುತ್ತದೆ.—ಮತ್ತಾ. 24:45; ಕೀರ್ತ. 143:10.
ಪರೀಕ್ಷೆಯ ಕೆಳಗೂ ‘ಶುದ್ಧ ಹೃದಯ’
ವಿರೋಧಿಗಳಿಂದ ಬರುವ ಒತ್ತಡ, ಆರ್ಥಿಕ ಬಿಕ್ಕಟ್ಟು ಮತ್ತು ಗಂಭೀರ ಕಾಯಿಲೆ ದೇವರ ಕೆಲವು ಸೇವಕರನ್ನು ನಿರುತ್ತೇಜನಗೊಳಿಸಿದೆ. ಇದರಿಂದ ಅವರ ಹೃದಯಗಳು ಸಹ ಕೆಲವೊಮ್ಮೆ ನಕಾರಾತ್ಮಕವಾಗಿ ಪ್ರಭಾವಿಸಲ್ಪಟ್ಟಿವೆ. ರಾಜ ದಾವೀದನಿಗೆ ಸಹ ಇದರ ಅನುಭವವಾಯಿತು. ಅವನಂದದ್ದು: “ನನ್ನ ಆತ್ಮವು ಕುಂದಿಹೋಗಿದೆ; ನನ್ನ ಮನಸ್ಸು ಬೆರಗಾಗಿದೆ.” (ಕೀರ್ತ. 143:4) ಇಂಥ ಕಷ್ಟದ ಗಳಿಗೆಯನ್ನು ಪಾರಾಗಲು ಅವನಿಗೆ ಯಾವುದು ಸಹಾಯಮಾಡಿತು? ದೇವರು ತನ್ನ ಸೇವಕರೊಂದಿಗೆ ಹೇಗೆ ವ್ಯವಹರಿಸಿದ್ದನು ಮತ್ತು ಸ್ವತಃ ತಾನೇ ಹೇಗೆ ಸಂರಕ್ಷಿಸಲ್ಪಟ್ಟನು ಎಂಬುದನ್ನು ದಾವೀದನು ಮನಸ್ಸಿಗೆ ತಂದುಕೊಂಡನು. ತನ್ನ ಮಹಾ ನಾಮದ ಸಲುವಾಗಿ ಯೆಹೋವನು ಏನು ಮಾಡಿದ್ದನು ಎಂಬುದರ ಕುರಿತು ಅವನು ಮನನಮಾಡಿದನು. ದಾವೀದನು ದೇವರ ಕೈಕೆಲಸಗಳನ್ನು ಸ್ಮರಿಸುತ್ತಾ ಇದ್ದನು. (ಕೀರ್ತ. 143:5) ತದ್ರೀತಿಯಲ್ಲಿ ನಮ್ಮ ಸೃಷ್ಟಿಕರ್ತನ ಕುರಿತು ಮತ್ತು ಆತನು ನಮಗಾಗಿ ಮಾಡಿರುವ, ಈಗಲೂ ಮಾಡುತ್ತಿರುವ ಎಲ್ಲ ವಿಷಯಗಳ ಕುರಿತು ಮನನಮಾಡುವುದು ನಾವು ಪರೀಕ್ಷೆಯನ್ನು ಎದುರಿಸುತ್ತಿರುವಾಗಲೂ ನಮಗೆ ಸಹಾಯಕರ.
ಯಾರಾದರೂ ನಮ್ಮ ಮನನೋಯಿಸುವಲ್ಲಿ ಅಥವಾ ನಮಗೆ ಹಾಗನಿಸುವಲ್ಲಿ ನಾವು ಕಹಿಭಾವ ತಾಳಬಹುದು. ಸದಾ ಅದರ ಕುರಿತಾಗಿಯೇ ಯೋಚಿಸುತ್ತಿರುವುದು ನಮ್ಮ ಸಹೋದರರ ಕುರಿತು ಟೀಕಾತ್ಮಕಭಾವ ತಾಳುವಂತೆ ಮಾಡಬಲ್ಲದು. ಇದರಿಂದ ನಾವು ಇತರರ ಸಹವಾಸವನ್ನು ಬಿಟ್ಟು ನಮ್ಮನ್ನು ಬೇರ್ಪಡಿಸಿಕೊಂಡು ಬೇರೆಯವರಲ್ಲಿ ಯಾವುದೇ ಆಸಕ್ತಿಯನ್ನು ತೋರಿಸದವರಾಗಬಹುದು. ಇಂಥ ಪ್ರತಿಕ್ರಿಯೆಯು, ‘ಶುದ್ಧ ಹೃದಯವನ್ನು’ ಹೊಂದಿರಬೇಕೆಂಬ ನಮ್ಮ ಅಪೇಕ್ಷೆಯೊಂದಿಗೆ ಸಹಮತದಲ್ಲಿದೆಯೊ? ಇಂಥ ಹೃದಯವನ್ನು ಹೊಂದಿರಬೇಕೆಂಬ ನಮ್ಮ ಗುರಿಯಲ್ಲಿ ನಮ್ಮ ಕ್ರೈಸ್ತ ಸಹೋದರರೊಂದಿಗಿನ ವ್ಯವಹಾರಗಳು ಮತ್ತು ನಾವು ಅವರಿಗೆ ಪ್ರತಿಕ್ರಿಯಿಸುವ ರೀತಿ ಸಹ ಒಳಗೂಡಿದೆ ಎಂಬುದು ಖಂಡಿತ.
ಹೆಚ್ಚೆಚ್ಚು ಭ್ರಷ್ಟಗೊಳ್ಳುತ್ತಾ ನೈತಿಕವಾಗಿ ಹದಗೆಡುತ್ತಾ ಇರುವ ಈ ಲೋಕದಲ್ಲಿ ಸತ್ಕ್ರೈಸ್ತರಾದ ನಾವು ಇತರರಿಗಿಂತ ಭಿನ್ನರಾಗಿ ಎದ್ದುಕಾಣುತ್ತೇವೆ. ಏಕೆಂದರೆ ನಾವು ‘ಹೃದಯದ ಶುದ್ಧತೆಯನ್ನು’ ಪ್ರೀತಿಸುತ್ತೇವೆ. ದೇವರ ಚಿತ್ತವನ್ನು ಮಾಡುವುದರಿಂದ ಸಿಗುವ ಆಂತರಿಕ ಶಾಂತಿಯನ್ನು ಅನುಭವಿಸುವಾಗ ನಮ್ಮ ಜೀವನವು ಸಕಾರಾತ್ಮಕವಾಗಿ ಪ್ರಭಾವಿಸಲ್ಪಡುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ‘ಶುದ್ಧ ಹೃದಯದವುಳ್ಳವರನ್ನು’ ಪ್ರೀತಿಸುವ ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರೊಂದಿಗಿನ ಆಪ್ತ ಸ್ನೇಹದಲ್ಲಿ ನಾವು ಆನಂದಿಸುತ್ತೇವೆ. (ಕೀರ್ತ. 73:1, NIBV) ಹೌದು, ಸಂತೋಷಿತರಾಗಿರುವವರಲ್ಲಿ ನಾವೂ ಒಬ್ಬರಾಗಿರಬಲ್ಲೆವು. ಏಕೆಂದರೆ ಯೇಸು ವಾಗ್ದಾನಿಸಿದಂತೆ, ‘ಹೃದಯದ ಶುದ್ಧತೆಯನ್ನು’ ಪ್ರೀತಿಸುವವರ ಪರವಾಗಿ ದೇವರು ಕ್ರಿಯೆಗೈಯುವಾಗ “ಅವರು [ಆತನನ್ನು] ನೋಡುವರು.”—ಮತ್ತಾ. 5:8.
[ಪಾದಟಿಪ್ಪಣಿ]
a “ಸಾಪೇಕ್ಷ ಧಾರ್ಮಿಕ ಸಿದ್ಧಾಂತ” ಎಂಬ ವಿಚಾರವು ಸರಿ-ತಪ್ಪುಗಳನ್ನು ನಾವೇ ನಿರ್ಧರಿಸಬಹುದು, ಅದಕ್ಕೆ ಒಂದು ನಿರ್ದಿಷ್ಟ ಮಟ್ಟವಿಲ್ಲ ಎಂಬುದಕ್ಕೆ ಸೂಚಿಸುತ್ತದೆ.