‘ವ್ಯರ್ಥಕಾರ್ಯಗಳನ್ನು’ ತೊರೆಯಿರಿ
“ವ್ಯರ್ಥಕಾರ್ಯಾಸಕ್ತನು ಬುದ್ಧಿಹೀನನೇ.”—ಜ್ಞಾನೋ. 12:11.
ಕ್ರೈಸ್ತರಾದ ನಾವೆಲ್ಲರೂ ಒಂದಲ್ಲ ಒಂದು ರೀತಿಯ ಅಮೂಲ್ಯ ಆಸ್ತಿಗಳನ್ನು ಹೊಂದಿದ್ದೇವೆ. ಸ್ವಲ್ಪಮಟ್ಟಿಗಿನ ಆರೋಗ್ಯ ಮತ್ತು ಬಲ, ಸ್ವಭಾವ ಸಿದ್ಧ ಮಾನಸಿಕ ಸಾಮರ್ಥ್ಯ ಇಲ್ಲವೆ ಸಂಪತ್ತು ಅವುಗಳಲ್ಲಿ ಸೇರಿರಬಹುದು. ಯೆಹೋವನನ್ನು ನಾವು ಪ್ರೀತಿಸುವುದರಿಂದ, ಅವೆಲ್ಲವನ್ನು ಆತನ ಸೇವೆಯಲ್ಲಿ ಉಪಯೋಗಿಸಲು ನಾವು ಹರ್ಷಿಸುತ್ತೇವೆ. ಹೀಗೆ ಈ ಪ್ರೇರಿತ ಪ್ರೋತ್ಸಾಹನೆಗೆ ನಾವು ಸ್ಪಂದಿಸುತ್ತೇವೆ: ‘ನಿನ್ನ ಆಸ್ತಿಯಿಂದ ಯೆಹೋವನನ್ನು ಸನ್ಮಾನಿಸು.’—ಜ್ಞಾನೋ. 3:9, NIBV.
2 ಇನ್ನೊಂದು ಕಡೆ, ಬೈಬಲ್ ವ್ಯರ್ಥಕಾರ್ಯಗಳ ಕುರಿತು ಸಹ ಮಾತಾಡುತ್ತದೆ ಮತ್ತು ಅವುಗಳನ್ನು ಬೆನ್ನಟ್ಟುತ್ತಾ ನಮ್ಮ ಸಂಪತ್ತನ್ನು ದುಂದುಮಾಡುವುದರ ಕುರಿತು ಎಚ್ಚರಿಸುತ್ತದೆ. ಈ ಕುರಿತು ಜ್ಞಾನೋಕ್ತಿ 12:11 ತಿಳಿಸುವುದನ್ನು ಗಮನಿಸಿ: “ದುಡಿದು ಹೊಲಗೇಯುವವನು ಹೊಟ್ಟೆತುಂಬಾ ಉಣ್ಣುವನು; ವ್ಯರ್ಥಕಾರ್ಯಾಸಕ್ತನು ಬುದ್ಧಿಹೀನನೇ.” ಇದರ ಅಕ್ಷರಶಃ ಅರ್ಥವನ್ನು ತಿಳಿದುಕೊಳ್ಳುವುದು ಅಷ್ಟೇನು ಕಷ್ಟವಲ್ಲ. ಒಬ್ಬ ಮನುಷ್ಯನು ಕುಟುಂಬಕ್ಕಾಗಿ ತನ್ನ ಸಮಯ ಮತ್ತು ಶಕ್ತಿಯನ್ನು ವ್ಯಯಿಸಿ ಕಷ್ಟಪಟ್ಟು ದುಡಿಯುವುದಾದರೆ, ಅದು ಅವನಿಗೂ ಅವನ ಕುಟುಂಬಕ್ಕೂ ಸ್ವಲ್ಪಮಟ್ಟಿಗೆ ಆಸರೆಯನ್ನು ಒದಗಿಸುತ್ತದೆ. (1 ತಿಮೊ. 5:8) ಆದರೆ, ಅವನು ವ್ಯರ್ಥಕಾರ್ಯಗಳನ್ನು ಬೆನ್ನಟ್ಟುತ್ತಾ ತನ್ನ ಸಂಪತ್ತುಗಳನ್ನು ಪೋಲುಮಾಡುವಲ್ಲಿ ತಾನೊಬ್ಬ “ಬುದ್ಧಿಹೀನ”ನೆಂದು ತೋರಿಸಿಕೊಡುತ್ತಾನೆ. ಅಂದರೆ ಅವನು ಯುಕ್ತಾಯುಕ್ತ ಪರಿಜ್ಞಾನ ಮತ್ತು ಒಳ್ಳೆಯ ಗುರಿಯಿಲ್ಲದ ವ್ಯಕ್ತಿಯಾಗಿದ್ದಾನೆ. ಹೆಚ್ಚಾಗಿ ಅಂಥವನು ನಿರ್ಗತಿಕನಾಗುವನು.
3 ಆ ಜ್ಞಾನೋಕ್ತಿಯ ಮೂಲತತ್ತ್ವವನ್ನು ನಮ್ಮ ಆರಾಧನೆಗೆ ಅನ್ವಯಿಸಿದರೆ ಏನಾಗುತ್ತದೆ? ಯೆಹೋವನನ್ನು ಶ್ರದ್ಧೆ ಮತ್ತು ನಂಬಿಗಸ್ತಿಕೆಯಿಂದ ಸೇವಿಸುವ ಕ್ರೈಸ್ತನೊಬ್ಬನು ನಿಜಭದ್ರತೆಯಿಂದಿರುವುದನ್ನು ಆಗ ನಾವು ಕಾಣುತ್ತೇವೆ. ಅವನು ದೇವರ ಆಶೀರ್ವಾದವನ್ನು ಈಗಲೂ ಪಡೆಯುತ್ತಾನಲ್ಲದೆ ಭವಿಷ್ಯತ್ತಿಗಾಗಿ ಸ್ಥಿರವಾದ ನಿರೀಕ್ಷೆಯನ್ನೂ ಹೊಂದಿರುತ್ತಾನೆ. (ಮತ್ತಾ. 6:33; 1 ತಿಮೊ. 4:10) ಆದರೆ, ವ್ಯರ್ಥಕಾರ್ಯಗಳನ್ನು ಬೆನ್ನಟ್ಟುವ ಕ್ರೈಸ್ತನೊಬ್ಬನು ಯೆಹೋವನೊಂದಿಗಿನ ತನ್ನ ಸಂಬಂಧವನ್ನು ಹಾಗೂ ನಿತ್ಯಜೀವವನ್ನು ಪಡಕೊಳ್ಳುವ ಸಾಧ್ಯತೆಯನ್ನು ಅಪಾಯಕೊಡ್ಡುತ್ತಾನೆ. ಆ ಅಪಾಯವನ್ನು ನಾವು ಹೇಗೆ ತಪ್ಪಿಸಸಾಧ್ಯ? ನಾವು ನಮ್ಮ ಜೀವನದಲ್ಲಿನ “ವ್ಯರ್ಥಕಾರ್ಯ”ಗಳನ್ನು ಅರಿತುಕೊಳ್ಳಬೇಕು ಮತ್ತು ಅವನ್ನು ಬಿಟ್ಟುಬಿಡಲು ದೃಢತೀರ್ಮಾನವನ್ನು ತೆಗೆದುಕೊಳ್ಳಬೇಕು.—ತೀತ 2:11, 12 ಓದಿ.
4 ಹಾಗಾದರೆ, ವ್ಯರ್ಥಕಾರ್ಯಗಳೆಂದರೇನು? ಸಾಮಾನ್ಯಾರ್ಥದಲ್ಲಿ, ಯೆಹೋವನನ್ನು ಪೂರ್ಣಪ್ರಾಣದಿಂದ ಆರಾಧಿಸದಂತೆ ನಮ್ಮನ್ನು ಅಪಕರ್ಷಿಸುವ ಎಲ್ಲ ವಿಷಯಗಳು ವ್ಯರ್ಥಕಾರ್ಯಗಳಾಗಿವೆ. ಉದಾಹರಣೆಗೆ, ಅವು ವಿವಿಧ ಬಗೆಯ ವಿನೋದ ವಿಹಾರಗಳಾಗಿರಬಹುದು. ಹಿತಮಿತವಾದ ವಿನೋದ ವಿಹಾರ ಒಳ್ಳೆಯದೇನೋ ನಿಜ. ಆದರೆ, ನಮ್ಮ ಆರಾಧನೆಗೆ ಸಂಬಂಧಿಸಿದ ವಿಷಯಗಳನ್ನು ಕಡೆಗಣಿಸುತ್ತಾ ನಾವು “ವಿನೋದ”ಗಳಲ್ಲೇ ಹೆಚ್ಚು ಸಮಯ ಕಳೆಯುವಲ್ಲಿ ಅವು ವ್ಯರ್ಥಕಾರ್ಯಗಳಾಗುತ್ತವೆ ಮತ್ತು ದೇವರೊಂದಿಗಿನ ನಮ್ಮ ಸಂಬಂಧಕ್ಕೆ ಅಪಾಯವನ್ನು ತರುತ್ತವೆ. (ಪ್ರಸಂ. 2:24; 4:6) ಈ ದುರಂತ ತಪ್ಪಿಸಲು ಕ್ರೈಸ್ತನೊಬ್ಬನು ತನ್ನ ಅಮೂಲ್ಯ ಸಮಯವನ್ನು ಹೇಗೆ ವ್ಯಯಿಸುತ್ತಿರುವನೆಂದು ಜಾಗರೂಕತೆಯಿಂದ ಗಮನಿಸುತ್ತಾ ಸಮತೋಲನವನ್ನು ಕಾಪಾಡಿಕೊಳ್ಳಬೇಕು. (ಕೊಲೊಸ್ಸೆ 4:5 ಓದಿ.) ವಿನೋದ ವಿಹಾರಗಳಿಗಿಂತಲೂ ಬಹಳ ಅಪಾಯಕಾರಿಯಾಗಿರುವ ವ್ಯರ್ಥಕಾರ್ಯಗಳೂ ಇವೆ. ಅವುಗಳಲ್ಲಿ ಸುಳ್ಳು ದೇವರುಗಳು ಸೇರಿವೆ.
ಸುಳ್ಳು ದೇವರುಗಳನ್ನು ತೊರೆಯಿರಿ
5 ಮೂಲ ಹೀಬ್ರುವಿನಲ್ಲಿ “ವ್ಯರ್ಥ” ಎಂಬ ಪದ ಕಂಡುಬರುವ ಹೆಚ್ಚಿನ ಕಡೆಗಳಲ್ಲಿ ಅದು ಸುಳ್ಳು ದೇವರುಗಳಿಗೆ ಅನ್ವಯಿಸಲಾಗಿರುವುದು ಕುತೂಹಲಕಾರಿಯಾಗಿದೆ. ಉದಾಹರಣೆಗೆ, ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದ್ದು: “ನೀವು ವಿಗ್ರಹಗಳನ್ನು [“ವ್ಯರ್ಥ ದೇವರುಗಳನ್ನು,” NW] ಮಾಡಿಸಿಕೊಳ್ಳಬಾರದು; ಕೆತ್ತಿದ ಪ್ರತಿಮೆಯನ್ನಾಗಲಿ ಕಲ್ಲು ಕಂಬವನ್ನಾಗಲಿ ನಿಲ್ಲಿಸಿಕೊಳ್ಳಬಾರದು; ಅಡ್ಡಬೀಳುವದಕ್ಕಾಗಿ ವಿಚಿತ್ರವಾಗಿ ಕೆತ್ತಿದ ಕಲ್ಲುಗಳನ್ನು ನಿಮ್ಮ ದೇಶದಲ್ಲಿ ಇಡಬಾರದು; ನಾನೇ ಯೆಹೋವನೆಂಬ ನಿಮ್ಮ ದೇವರು.” (ಯಾಜ. 26:1) ರಾಜ ದಾವೀದನು ಬರೆದದ್ದು: “ಯೆಹೋವನು ದೊಡ್ಡವನೂ ಬಹಳವಾಗಿ ಸ್ತುತ್ಯನೂ ಆಗಿದ್ದಾನೆ; ಎಲ್ಲಾ ದೇವತೆಗಳಲ್ಲಿ ಆತನೇ ಭಯಂಕರನು. ಜನಾಂಗಗಳ ದೇವತೆಗಳೆಲ್ಲಾ ಬೊಂಬೆಗಳೇ [“ವ್ಯರ್ಥ ದೇವತೆಗಳೇ,” NW]; ಯೆಹೋವನಾದರೋ ಗಗನಮಂಡಲವನ್ನು ನಿರ್ಮಿಸಿದವನು.”—1 ಪೂರ್ವ. 16:25, 26.
6 ದಾವೀದನು ಸೂಚಿಸಿದಂತೆ ನಮ್ಮ ಸುತ್ತಮುತ್ತಲು ನಾವು ಯೆಹೋವನ ಮಹೋನ್ನತ್ತಿನ ರುಜುವಾತನ್ನು ಕಾಣುತ್ತೇವೆ. (ಕೀರ್ತ. 139:14; 148:1-10) ಇಸ್ರಾಯೇಲ್ಯರಿಗೆ ಯೆಹೋವನೊಂದಿಗೆ ಒಡಂಬಡಿಕೆಯ ಸಂಬಂಧವಿದ್ದುದು ಎಂತಹ ಒಂದು ಸುಯೋಗವಾಗಿತ್ತು! ಅವರು ಆತನನ್ನು ಬಿಟ್ಟು ಕೆತ್ತಿದ ಪ್ರತಿಮೆಗಳಿಗೂ ಕಲ್ಲಿನ ಕಂಬಗಳಿಗೂ ಅಡ್ಡಬಿದ್ದದ್ದು ಎಂತಹ ಮೂರ್ಖತನ! ಇಕ್ಕಟ್ಟಿನ ಸಮಯದಲ್ಲಿ, ಅವರ ಸುಳ್ಳು ದೇವತೆಗಳು ನಿಜವಾಗಿಯೂ ವ್ಯರ್ಥವಾಗಿದ್ದವು. ಅವುಗಳಿಗೆ ತಮ್ಮನ್ನು ಮಾತ್ರವಲ್ಲ ತಮ್ಮ ಆರಾಧಕರನ್ನೂ ಕಾಪಾಡಲು ಶಕ್ತಿಯಿರಲಿಲ್ಲ.—ನ್ಯಾಯ. 10:14, 15; ಯೆಶಾ. 46:5-7.
7 ಅನೇಕ ದೇಶಗಳಲ್ಲಿ, ಈಗಲೂ ಜನರು ಮಾನವ ನಿರ್ಮಿತ ಪ್ರತಿಮೆಗಳಿಗೆ ಅಡ್ಡಬೀಳುತ್ತಿದ್ದಾರೆ. ಅಂಥ ದೇವತೆಗಳು ಹಿಂದಿನಂತೆ ಈಗ ಸಹ ನಿಷ್ಪ್ರಯೋಜಕವಾಗಿವೆ. (1 ಯೋಹಾ. 5:21) ಬೈಬಲ್, ವಿಗ್ರಹಗಳನ್ನಲ್ಲದೆ ಬೇರೆ ಕೆಲವು ವಿಷಯಗಳನ್ನು ಸಹ ದೇವರುಗಳೆಂದು ವರ್ಣಿಸುತ್ತದೆ. ಉದಾಹರಣೆಗೆ, ಯೇಸುವಿನ ಈ ಮಾತುಗಳನ್ನು ಪರಿಗಣಿಸಿ: “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.”—ಮತ್ತಾ. 6:24.
8 “ಧನ” ದೇವರಾಗಲು ಹೇಗೆ ಸಾಧ್ಯ? ಉದಾಹರಣೆಗಾಗಿ, ಪುರಾತನ ಇಸ್ರಾಯೇಲಿನ ಹೊಲದಲ್ಲಿ ಒಂದು ಕಲ್ಲು ಇದೆಯೆಂದು ಕಲ್ಪಿಸಿಕೊಳ್ಳಿ. ಅಂಥ ಕಲ್ಲನ್ನು ಮನೆ ಅಥವಾ ಗೋಡೆ ಕಟ್ಟಲು ಉಪಯೋಗಿಸಸಾಧ್ಯವಿದೆ. ಆದರೆ, ಅದನ್ನೇ ಪವಿತ್ರ “ಕಂಬ”ವನ್ನಾಗಿ ಅಥವಾ “ವಿಚಿತ್ರವಾಗಿ ಕೆತ್ತಿದ ಕಲ್ಲು”ಗಳನ್ನಾಗಿ ಎತ್ತಿನಿಲ್ಲಿಸುವಲ್ಲಿ ಅದು ಯೆಹೋವನ ಜನರಿಗೆ ಎಡವುಗಲ್ಲಾಗುತ್ತದೆ. (ಯಾಜ. 26:1) ಅದೇ ರೀತಿಯಲ್ಲಿ ಹಣಕ್ಕೆ ಅದರದ್ದೇ ಆದ ಸ್ಥಾನವಿದೆ. ಕೇವಲ ಜೀವನಸಾಗಿಸಲಷ್ಟೇ ಅದು ನಮಗೆ ಆವಶ್ಯ. ಅಲ್ಲದೆ ಯೆಹೋವನ ಸೇವೆಯಲ್ಲಿಯೂ ಅದನ್ನು ಸದುಪಯೋಗಿಸಸಾಧ್ಯವಿದೆ. (ಪ್ರಸಂ. 7:12; ಲೂಕ 16:9) ಆದರೆ, ನಮ್ಮ ಕ್ರೈಸ್ತ ಸೇವೆಗಿಂತಲೂ ಹಣದ ಬೆನ್ನಟ್ಟುವಿಕೆಯನ್ನು ನಾವು ಪ್ರಥಮವಾಗಿಡುವಲ್ಲಿ ಅದು ನಮಗೆ ದೇವರಾಗುತ್ತದೆ. (1 ತಿಮೊಥೆಯ 6:9, 10 ಓದಿ.) ಹಣ ಗಳಿಸುವುದೇ ಜನರ ಪರಮ ಗುರಿಯಾಗಿರುವ ಈ ಲೋಕದಲ್ಲಿ ನಮಗೆ ಅದರ ಕುರಿತು ಸಮತೂಕದ ನೋಟವಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.—1 ತಿಮೊ. 6:17-19.
9 ಉಪಯುಕ್ತವಾದ ಒಂದು ವಿಷಯವು ವ್ಯರ್ಥಕಾರ್ಯವಾಗಬಲ್ಲ ಇನ್ನೊಂದು ಉದಾಹರಣೆ ಐಹಿಕ ಶಿಕ್ಷಣವಾಗಿದೆ. ನಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕೆಂಬುದು ನಮ್ಮೆಲ್ಲರ ಬಯಕೆಯಾಗಿದೆ. ಇದು ಅವರ ಜೀವನೋಪಾಯಕ್ಕೆ ಸಹಾಯಮಾಡುತ್ತದೆ. ಅದಕ್ಕಿಂತಲೂ ಹೆಚ್ಚಾಗಿ, ಒಬ್ಬ ವಿದ್ಯಾವಂತ ಕ್ರೈಸ್ತನು ಬೈಬಲನ್ನು ಉತ್ತಮವಾಗಿ ಓದಿ ಅರ್ಥಮಾಡಿಕೊಳ್ಳಶಕ್ತನಾಗಿದ್ದಾನೆ. ಅವನು ದಿನನಿತ್ಯದ ಸಮಸ್ಯೆಗಳನ್ನು ಬೈಬಲ್ ಮೂಲತತ್ತ್ವಗಳ ಬೆಳಕಿನಡಿಯಲ್ಲಿ ಪರಿಶೀಲಿಸಿ ದೇವರ ಆಲೋಚನೆಗೆ ಹೊಂದಿಕೆಯಲ್ಲಿರುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಮಾತ್ರವಲ್ಲ, ಬೈಬಲ್ ಸತ್ಯಗಳನ್ನು ಸ್ಪಷ್ಟವಾಗಿ ಮನತಟ್ಟುವ ರೀತಿಯಲ್ಲಿ ಬೋಧಿಸುತ್ತಾನೆ. ಒಳ್ಳೆಯ ಶಿಕ್ಷಣ ಪಡೆಯಲು ಸಮಯ ತಗಲುವುದಾದರೂ ಅದು ಸದುಪಯೋಗಿಸಿದ ಸಮಯವಾಗಿದೆ.
10 ಆದರೆ, ಕಾಲೇಜು ಅಥವಾ ವಿಶ್ವವಿದ್ಯಾನಿಲಯಗಳಿಂದ ಉನ್ನತ ಶಿಕ್ಷಣ ಪಡಕೊಳ್ಳುವುದರ ಕುರಿತೇನು? ಜೀವನ ಯಶಸ್ವಿಯಾಗಬೇಕಾದರೆ, ಉನ್ನತ ಶಿಕ್ಷಣ ಪಡೆಯಲೇಬೇಕು ಎಂಬುದು ಹೆಚ್ಚಿನವರ ಅಭಿಪ್ರಾಯ. ಹಾಗಿದ್ದರೂ, ಅಂಥ ಶಿಕ್ಷಣವನ್ನು ಬೆನ್ನಟ್ಟಿದ ಅನೇಕರು ಕೊನೆಗೆ ಲೋಕದ ಹಾನಿಕಾರಕ ವಿವೇಕವನ್ನು ತಲೆಯಲ್ಲಿ ತುಂಬಿಸಿಕೊಂಡು ಹೊರಬರುತ್ತಾರೆ. ಅಂಥ ಶಿಕ್ಷಣವು, ಯೆಹೋವನ ಸೇವೆಯಲ್ಲಿ ಉಪಯೋಗಿಸಸಾಧ್ಯವಿರುವ ಅಮೂಲ್ಯವಾದ ಯುವಪ್ರಾಯವನ್ನು ಕಸಿದುಕೊಳ್ಳುತ್ತದೆ. (ಪ್ರಸಂ. 12:1) ಅಂಥ ಶಿಕ್ಷಣವನ್ನು ಪಡಕೊಂಡ ಅನೇಕ ಜನರಿರುವ ದೇಶಗಳಲ್ಲಿ ದೇವರ ಮೇಲಿನ ನಂಬಿಕೆ ಕಡಿಮೆಯಾಗಿದೆಯೆಂದರೆ ಪ್ರಾಯಶಃ ಅದು ಆಶ್ಚರ್ಯವಾಗದು. ಕ್ರೈಸ್ತನೊಬ್ಬನು ಭದ್ರತೆಗಾಗಿ ಲೋಕದ ಮುಂದುವರಿದ ಶಿಕ್ಷಣ ವ್ಯವಸ್ಥೆಯ ಮೇಲೆ ಭರವಸೆಯಿಡುವ ಬದಲು ಯೆಹೋವನಲ್ಲಿ ಭರವಸೆಯನ್ನಿಡುತ್ತಾನೆ.—ಜ್ಞಾನೋ. 3:5.
ಶರೀರದಾಶೆ ದೇವರಾಗಿ ಪರಿಣಮಿಸದಂತೆ ನೋಡಿಕೊಳ್ಳಿ
11 ಅಪೊಸ್ತಲ ಪೌಲನು ಫಿಲಿಪ್ಪಿಯದವರಿಗೆ ಬರೆದ ಪತ್ರದಲ್ಲಿ ದೇವರಾಗಿ ಪರಿಣಮಿಸಸಾಧ್ಯವಿದ್ದ ಬೇರೊಂದು ವಿಷಯದ ಕುರಿತು ತಿಳಿಸುತ್ತಾನೆ. ಅವನು ತನ್ನ ಜೊತೆ ಆರಾಧಕರಾಗಿದ್ದ ಕೆಲವರ ಕುರಿತು ಮಾತನ್ನಾಡುತ್ತಾ ಹೇಳಿದ್ದು: “ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ; ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ. ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, . . . ಅವರು ಪ್ರಪಂಚದ ಕಾರ್ಯಗಳ ಮೇಲೆ ಮನಸ್ಸಿಡುವವರು.” (ಫಿಲಿ. 3:18, 19) ಒಬ್ಬನ ಹೊಟ್ಟೆ ದೇವರಾಗುವುದು ಹೇಗೆ?
12 ಪೌಲನ ಆ ಪರಿಚಯಸ್ಥರಿಗೆ ಅವನೊಡನೆ ಸೇರಿ ಯೆಹೋವನಿಗೆ ಸೇವೆ ಸಲ್ಲಿಸುವುದಕ್ಕಿಂತ ತಮ್ಮ ಶರೀರದಾಶೆಗಳನ್ನು ತಣಿಸುವುದೇ ಮುಖ್ಯವಾಗಿತ್ತು ಎಂದು ಕಾಣುತ್ತದೆ. ಕೆಲವರು ಕುಡುಕರು ಮತ್ತು ಹೊಟ್ಟೆಬಾಕರಾಗುವಷ್ಟರ ಮಟ್ಟಿಗೆ ಅನ್ನಪಾನಗಳಲ್ಲಿ ವ್ಯಾಮೋಹ ಬೆಳೆಸಿಕೊಂಡಿದ್ದಿರಬಹುದು. (ಜ್ಞಾನೋ. 23:20, 21; ಧರ್ಮೋಪದೇಶಕಾಂಡ 21:18-21 ಹೋಲಿಸಿ.) ಇತರರು ಒಂದನೇ ಶತಮಾನದ ಲೋಕದಲ್ಲಿ ಲಭ್ಯವಿದ್ದ ಆಕರ್ಷಕ ಅವಕಾಶಗಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವ ಆಯ್ಕೆ ಮಾಡಿದ್ದಿರಬಹುದು. ಹೀಗೆ ಯೆಹೋವನಿಗೆ ಸೇವೆಸಲ್ಲಿಸುವುದರಿಂದ ಅವರು ದೂರಸರಿದರು. ಸುಖಸವಲತ್ತಿನ ಜೀವನಕ್ಕಾಗಿರುವ ಆಶೆಯು ಯೆಹೋವನಿಗೆ ಪೂರ್ಣಪ್ರಾಣದಿಂದ ಸೇವೆಸಲ್ಲಿಸುವುದನ್ನು ಮಂದಗೊಳಿಸುವಂತೆ ನಾವೆಂದಿಗೂ ಅನುಮತಿಸದಿರೋಣ.—ಕೊಲೊ. 3:23, 24.
13 ಮಿಥ್ಯಾರಾಧನೆಯ ಇನ್ನೊಂದು ಮುಖವನ್ನು ಸಹ ಪೌಲನು ತಿಳಿಸಿದನು. ಅವನು ಬರೆದದ್ದು: “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ.” (ಕೊಲೊ. 3:5) ಲೋಭವೆಂಬುದು ನಮ್ಮಲ್ಲಿರದ ಒಂದು ವಿಷಯಕ್ಕಾಗಿ ಹಾತೊರೆಯುವ ಬಲವಾದ ಇಚ್ಛೆಯಾಗಿದೆ. ಅದು ಪ್ರಾಪಂಚಿಕ ವಿಷಯಕ್ಕಾಗಿ ಇರಬಹುದು. ಅಕ್ರಮ ಲೈಂಗಿಕ ಇಚ್ಛೆಯನ್ನೂ ಒಳಗೂಡಿರಬಹುದು. (ವಿಮೋ. 20:17) ಅಂಥ ಆಶೆಗಳು ವಿಗ್ರಹಾರಾಧನೆ ಅಂದರೆ ಸುಳ್ಳು ದೇವರ ಆರಾಧನೆಗೆ ಸಮವಾಗಿವೆ ಎಂಬುದು ಗಂಭೀರ ವಿಷಯವಲ್ಲವೇ? ಎಷ್ಟೇ ನಷ್ಟವಾದರೂ ಅಂಥ ದುರಾಶೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಬಹು ಪ್ರಾಮುಖ್ಯವಾಗಿದೆ ಎಂಬುದನ್ನು ತೋರಿಸಲು ಯೇಸು ಕಣ್ಣಿಗೆ ಕಟ್ಟುವಂಥ ಚಿತ್ರಣವೊಂದನ್ನು ಉಪಯೋಗಿಸಿದನು.—ಮಾರ್ಕ 9:47 ಓದಿ; 1 ಯೋಹಾ. 2:16.
ವ್ಯರ್ಥಮಾತುಗಳ ಕುರಿತು ಎಚ್ಚರಿಕೆ
14 ವ್ಯರ್ಥಕಾರ್ಯಗಳಲ್ಲಿ ಮಾತು ಸಹ ಸೇರಿದೆ. ಉದಾಹರಣೆಗೆ ಯೆಹೋವನು ಯೆರೆಮೀಯನಿಗೆ ಹೇಳಿದ್ದು: “ಆ ಪ್ರವಾದಿಗಳು ನನ್ನ ಹೆಸರಿನಿಂದ ಸುಳ್ಳುಬೋಧನೆ ಮಾಡುತ್ತಾರೆ. ನಾನು ಆ ಪ್ರವಾದಿಗಳನ್ನು ಕಳುಹಿಸಲಿಲ್ಲ. ಅವರಿಗೆ ನಾನು ಯಾವ ಅಪ್ಪಣೆಯನ್ನೂ ಕೊಟ್ಟಿಲ್ಲ. ಅವರೊಂದಿಗೆ ನಾನು ಮಾತನ್ನೂ ಆಡಿಲ್ಲ. ಆ ಪ್ರವಾದಿಗಳು ಸುಳ್ಳು ದರ್ಶನಗಳನ್ನೂ ನಿಷ್ಪ್ರಯೋಜಕ ಮಾಟಮಂತ್ರಗಳನ್ನೂ ಸ್ವಕಲ್ಪಿತ ವಿಚಾರಗಳನ್ನೂ ಬೋಧಿಸುತ್ತಿದ್ದಾರೆ.” (ಯೆರೆ. 14:14a) ಆ ಪ್ರವಾದಿಗಳು ಯೆಹೋವನ ಹೆಸರಿನಲ್ಲಿ ಮಾತಾಡುತ್ತಿದ್ದಾರೆಂದು ಹೇಳಿಕೊಂಡರು. ಆದರೆ ಅವರು ಸ್ವಕಲ್ಪಿತ ವಿಚಾರಗಳನ್ನು ಅಂದರೆ ತಮ್ಮ ಸ್ವಂತ ವಿವೇಕವನ್ನು ಬೋಧಿಸುತ್ತಿದ್ದರು. ಆದುದರಿಂದಲೇ ಅವರ ಮಾತುಗಳು “ನಿಷ್ಪ್ರಯೋಜಕ”ವಾಗಿದ್ದವು. ಅವು ಅಯೋಗ್ಯವಾಗಿದ್ದವು ಮತ್ತು ಸತ್ಯಾರಾಧನೆಗೆ ಅಪಾಯವನ್ನು ಒಡ್ಡುವಂಥವುಗಳಾಗಿದ್ದವು. ಅಂಥ ನಿಷ್ಪ್ರಯೋಜಕ ಮಾತುಗಳನ್ನು ಕೇಳಿದವರು ಸಾ.ಶ.ಪೂ 607ರಲ್ಲಿ ಬಾಬೆಲಿನ ಸೈನಿಕರಿಂದ ಅಕಾಲಿಕ ಮರಣಕ್ಕೆ ತುತ್ತಾದರು.
15 ಇದಕ್ಕೆ ವ್ಯತಿರಿಕ್ತವಾಗಿ, ಮೋಶೆ ಇಸ್ರಾಯೇಲ್ಯರಿಗೆ ಹೇಳಿದ್ದು: “ನಾನು ಈಗ ನಿಮಗೆ ಹೇಳಿದ ಎಚ್ಚರಿಕೆಯ ಮಾತುಗಳನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಿರಿ, . . . ಇದು ನಿರರ್ಥಕವೆಂದು ಭಾವಿಸಬಾರದು; ಇದರಿಂದ ನೀವು ಬಾಳುವಿರಿ; ನೀವು ಯೊರ್ದನ್ ಹೊಳೆಯನ್ನು ದಾಟಿ ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ಇದನ್ನು ಅನುಸರಿಸುವದರಿಂದಲೇ ಬಹುಕಾಲ ಇರುವಿರಿ ಎಂದು ಹೇಳಿದನು.” (ಧರ್ಮೋ. 32:46, 47) ಹೌದು, ಮೋಶೆಯ ಮಾತುಗಳು ಯೆಹೋವನಿಂದ ಪ್ರೇರಣೆಗೊಂಡವುಗಳಾಗಿದ್ದವು. ಆದುದರಿಂದಲೇ ಅವು ಪ್ರಯೋಜನವುಳ್ಳವುಗಳಾಗಿದ್ದವು ಮತ್ತು ಜನಾಂಗದ ಒಳಿತಿಗೆ ಬಹು ಪ್ರಾಮುಖ್ಯವಾಗಿದ್ದವು. ಅದಕ್ಕೆ ಕಿವಿಗೊಟ್ಟವರು ಸಮೃದ್ಧಿಯಾಗಿ ಬಹುಕಾಲ ಬಾಳಿದರು. ನಾವು ಸದಾ ನಿಷ್ಪ್ರಯೋಜಕ ಮಾತುಗಳನ್ನು ತೊರೆದು ಪ್ರಯೋಜನಕರವಾದ ಸತ್ಯದ ಮಾತುಗಳಿಗೆ ಕಿವಿಗೊಡೋಣ.
16 ಇಂದು ನಿಷ್ಪ್ರಯೋಜಕ ವಿಷಯಗಳು ಹೇಳಲ್ಪಡುವುದನ್ನು ನಾವು ಕೇಳಿಸಿಕೊಳ್ಳುತ್ತೇವೋ? ಹೌದು. ಉದಾಹರಣೆಗೆ, ವಿಕಾಸವಾದ ಮತ್ತು ಇತರ ಕ್ಷೇತ್ರಗಳಲ್ಲಿನ ವೈಜ್ಞಾನಿಕ ಆವಿಷ್ಕಾರಗಳು ಇನ್ನು ಮುಂದೆ ದೇವರನ್ನು ನಂಬುವ ಆವಶ್ಯಕತೆಯಿಲ್ಲವೆಂದು ತೋರಿಸುತ್ತವೆಯೆಂದೂ ಎಲ್ಲವನ್ನು ಪ್ರಾಕೃತಿಕ ವಿಷಯಗಳಿಂದ ವಿವರಿಸಸಾಧ್ಯವಿದೆಯೆಂದೂ ಕೆಲವು ವಿಜ್ಞಾನಿಗಳು ಹೇಳುತ್ತಾರೆ. ಅಂಥ ಅಹಂ ನುಡಿಗಳು ನಮ್ಮನ್ನು ಚಿಂತೆಗೀಡುಮಾಡಬೇಕೋ? ಖಂಡಿತವಾಗಿಯೂ ಇಲ್ಲ. ದೇವರ ಜ್ಞಾನ ಅಥವಾ ವಿವೇಕವು ಮಾನವ ವಿವೇಕಕ್ಕಿಂತ ವ್ಯತಿರಿಕ್ತವಾಗಿದೆ. (1 ಕೊರಿಂ. 2:6, 7) ಯಾವಾಗ ಮಾನವ ಬೋಧನೆಗಳು ದೇವರು ಹೊರಪಡಿಸಿರುವುದಕ್ಕೆ ವ್ಯತಿರಿಕ್ತವಾದದ್ದನ್ನು ಕಲಿಸುತ್ತವೋ ಆಗ ಮಾನವ ಬೋಧನೆಗಳು ಸದಾ ತಪ್ಪಾಗಿರುತ್ತವೆ ಎಂದು ನಮಗೆ ತಿಳಿದಿದೆ. (ರೋಮಾಪುರ 3:4 ಓದಿ.) ವಿಜ್ಞಾನವು ಕೆಲವು ಕ್ಷೇತ್ರಗಳಲ್ಲಿ ಪ್ರಗತಿಯಾಗಿರುವುದಾದರೂ ಮಾನವ ವಿವೇಕದ ಕುರಿತು ತಿಳಿಸಿದ ಬೈಬಲಿನ ಮಾತುಗಳು ಬದಲಾಗದೆ ಹಾಗೇ ಉಳಿಯುತ್ತವೆ: “ಇಹಲೋಕಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ.” ದೇವರ ಅಗಾಧ ವಿವೇಕಕ್ಕೆ ಹೋಲಿಸುವಾಗ ಮಾನವ ತರ್ಕ ಕ್ಷುಲ್ಲಕವೇ ಸರಿ.—1 ಕೊರಿಂ. 3:18-20.
17 ನಿಷ್ಪ್ರಯೋಜಕವಾದ ಮಾತುಗಳ ಮತ್ತೊಂದು ಉದಾಹರಣೆಯು ಕ್ರೈಸ್ತಪ್ರಪಂಚದ ಧಾರ್ಮಿಕ ಮುಖಂಡರಲ್ಲಿ ಕಂಡುಬರುತ್ತದೆ. ಇವರು ದೇವರ ಹೆಸರಿನಲ್ಲಿ ಬೋಧಿಸುತ್ತಿದ್ದಾರೆಂದು ಕೊಚ್ಚಿಕೊಳ್ಳುತ್ತಾರೆ. ಆದರೆ ಅವರ ಹೆಚ್ಚಿನ ಮಾತುಗಳು ಬೈಬಲ್ ಆಧಾರಿತವಾಗಿರುವುದಿಲ್ಲ. ಅಲ್ಲದೆ ಅವರು ಹೇಳುವ ವಿಷಯಗಳು ಮೂಲತಃ ನಿಷ್ಪ್ರಯೋಜಕವಾಗಿರುತ್ತವೆ. ಧರ್ಮಭ್ರಷ್ಟರು ಕೂಡ ನೇಮಿತ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗಿಂತ’ ಹೆಚ್ಚು ವಿವೇಕ ತಮಗಿದೆಯೆಂದು ಹೇಳುತ್ತಾ ನಿಷ್ಪ್ರಯೋಜಕ ಮಾತುಗಳನ್ನಾಡುತ್ತಾರೆ. (ಮತ್ತಾ. 24:45-47) ಆದರೆ, ಆ ಧರ್ಮಭ್ರಷ್ಟರು ಹೇಳುವ ವಿಚಾರಗಳು ಸ್ವಕಲ್ಪಿತವಾಗಿವೆ. ಮಾತ್ರವಲ್ಲ, ಅವರ ಮಾತುಗಳು ನಿಷ್ಪ್ರಯೋಜಕವಾಗಿದ್ದು ಅವುಗಳಿಗೆ ಕಿವಿಗೊಡುವವರನ್ನು ಎಡವಿಬೀಳಿಸುತ್ತವೆ. (ಲೂಕ 17:1, 2) ಅವರಿಂದ ವಂಚಿಸಲ್ಪಡದಿರಲು ನಾವೇನು ಮಾಡಬಲ್ಲೆವು?
ನಿಷ್ಪ್ರಯೋಜಕ ಮಾತುಗಳನ್ನು ತೊರೆಯುವ ವಿಧ
18 ಈ ವಿಷಯದಲ್ಲಿ ವೃದ್ಧ ಅಪೊಸ್ತಲ ಯೋಹಾನನು ನಮಗೆ ಉತ್ತಮವಾದ ಸಲಹೆಯನ್ನು ನೀಡುತ್ತಾನೆ. (1 ಯೋಹಾನ 4:1 ಓದಿ.) ನಾವು ಕ್ಷೇತ್ರಸೇವೆಯಲ್ಲಿ ಭೇಟಿಯಾಗುವ ಜನರಿಗೆ ಯೋಹಾನನ ಸಲಹೆಯನ್ನು ಪಾಲಿಸುವಂತೆ ಅಂದರೆ ನಾವು ಕಲಿಸುವ ವಿಷಯಗಳು ಬೈಬಲಿನಲ್ಲಿ ಇವೆಯೋ ಎಂದು ಪರಿಶೀಲಿಸಿ ನೋಡುವಂತೆ ಯಾವಾಗಲೂ ಪ್ರೋತ್ಸಾಹಿಸುತ್ತೇವೆ. ಇದು ನಮಗೂ ಉತ್ತಮ ಮಟ್ಟವಾಗಿದೆ. ಸತ್ಯವನ್ನು ಟೀಕಿಸುವಂಥ ಹೇಳಿಕೆಗಳು ಇಲ್ಲವೆ ಸಭೆಯನ್ನಾಗಲಿ ಹಿರಿಯರನ್ನಾಗಲಿ ನಮ್ಮ ಯಾವುದೇ ಸಹೋದರರನ್ನಾಗಲಿ ದೋಷಾರೋಪಿಸಿ ಆಡುವಂಥ ಮಾತುಗಳು ನಮ್ಮ ಕಿವಿಗೆ ಬೀಳುವಲ್ಲಿ ನಾವು ಅವನ್ನು ಪರಿಶೀಲಿಸಿ ನೋಡದೆ ಅಂಗೀಕರಿಸುವುದಿಲ್ಲ. ಬದಲಿಗೆ, ನಾವು ಹೀಗೆ ಕೇಳಿಕೊಳ್ಳುತ್ತೇವೆ: “ಈ ಮಾತನ್ನು ಹಬ್ಬಿಸುತ್ತಿರುವವನು ಬೈಬಲ್ ಹೇಳುವುದಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುತ್ತಿದ್ದಾನೋ? ಈ ಕಥೆಗಳು ಅಥವಾ ಅಪವಾದಗಳು ಯೆಹೋವನ ಉದ್ದೇಶವನ್ನು ಬೆಂಬಲಿಸುತ್ತವೋ? ಅವು ಸಭೆಯ ಶಾಂತಿಯನ್ನು ವರ್ಧಿಸುತ್ತವೋ?” ನಾವು ಕೇಳುವ ಯಾವುದೇ ವಿಷಯಗಳು ಸಹೋದರತ್ವವನ್ನು ಬಲಪಡಿಸುವ ಬದಲು ಕೆಡವಿಹಾಕುವುದಾದರೆ ಅವು ನಿಷ್ಪ್ರಯೋಜಕವಾಗಿವೆ.—2 ಕೊರಿಂ. 13:10, 11.
19 ನಿಷ್ಪ್ರಯೋಜಕ ಮಾತುಗಳ ವಿಷಯದಲ್ಲಿ ಹಿರಿಯರು ಸಹ ಒಂದು ಪ್ರಾಮುಖ್ಯ ಪಾಠವನ್ನು ಕಲಿಯುತ್ತಾರೆ. ಅವರು ಸಲಹೆ ನೀಡುವ ಸಮಯದಲ್ಲೆಲ್ಲಾ ತಮ್ಮ ಮೇರೆಯನ್ನು ನೆನಪಿನಲ್ಲಿಡುತ್ತಾರೆ. ಮತ್ತು ತಮ್ಮ ಸ್ವಂತ ಜ್ಞಾನಭಂಡಾರದಿಂದ ಸಲಹೆ ನೀಡುವುದಿಲ್ಲ. ಅವರು ಸದಾ ಬೈಬಲ್ ಹೇಳುವುದನ್ನು ಉಲ್ಲೇಖಿಸತಕ್ಕದ್ದು. ಒಂದು ಅಮೂಲ್ಯ ಮಾನದಂಡವನ್ನು ಅಪೊಸ್ತಲ ಪೌಲನ ಈ ಮಾತುಗಳಲ್ಲಿ ಕಾಣುತ್ತೇವೆ: ‘ಶಾಸ್ತ್ರದಲ್ಲಿ ಬರೆದಿರುವದನ್ನು ಮೀರಿಹೋಗಬಾರದು.’ (1 ಕೊರಿಂ. 4:6) ಹಿರಿಯರು ಬೈಬಲಿನಲ್ಲಿ ಬರೆದಿರುವುದನ್ನು ಮೀರಿಹೋಗುವುದಿಲ್ಲ. ಅಷ್ಟುಮಾತ್ರವಲ್ಲ ಈ ಮೂಲತತ್ತ್ವವನ್ನು ಅನುಸರಿಸುವ ಅವರು ನಂಬಿಗಸ್ತನೂ ವಿವೇಕಿಯೂ ಆದ ಆಳು ಒದಗಿಸುವ ಬೈಬಲ್ ಆಧರಿತ ಸಾಹಿತ್ಯಗಳಲ್ಲಿ ಬರೆದಿರುವುದನ್ನು ಸಹ ಮೀರುವುದಿಲ್ಲ.
20 ವ್ಯರ್ಥಕಾರ್ಯಗಳು—ಅವು ‘ದೇವತೆಗಳೇ,’ ಮಾತುಗಳೇ ಆಗಿರಲಿ ಬೇರೆ ಯಾವುದೇ ಆಗಿರಲಿ ಹಾನಿಕಾರಕವಾಗಿವೆ. ಆ ಕಾರಣದಿಂದಲೇ ಈ ಎಲ್ಲ ವ್ಯರ್ಥಕಾರ್ಯಗಳನ್ನು ಗುರುತಿಸಿ ತಿಳಿದುಕೊಳ್ಳಲು ಸಹಾಯಮಾಡುವಂತೆ ನಾವು ಯೆಹೋವನಲ್ಲಿ ಸದಾ ಪ್ರಾರ್ಥಿಸುತ್ತೇವೆ. ಮತ್ತು ಅವುಗಳನ್ನು ತೊರೆಯುವುದು ಹೇಗೆ ಎಂಬುದಕ್ಕಾಗಿ ಆತನ ಮಾರ್ಗದರ್ಶನವನ್ನು ಹುಡುಕುತ್ತೇವೆ. ನಾವು ಇದನ್ನು ಮಾಡುವಾಗ ಕೀರ್ತನೆಗಾರನೊಂದಿಗೆ ನಮ್ಮ ಧ್ವನಿಯನ್ನು ಜೊತೆಗೂಡಿಸುತ್ತೇವೆ. ಅವನು ಹೇಳಿದ್ದು: “ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು; ನಿನ್ನ ಮಾರ್ಗದಲ್ಲಿ ನಡೆಯುವಂತೆ ನನ್ನನ್ನು ಚೈತನ್ಯಗೊಳಿಸು.” (ಕೀರ್ತ. 119:37) ಮುಂದಿನ ಲೇಖನದಲ್ಲಿ ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವುದೆಷ್ಟು ಪ್ರಯೋಜನವುಳ್ಳದು ಎಂಬುದರ ಕುರಿತು ಹೆಚ್ಚನ್ನು ಕಲಿಯುವೆವು.
[ಪಾದಟಿಪ್ಪಣಿ]
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
ವಿವರಿಸಬಲ್ಲಿರೋ?
• ಸಾಮಾನ್ಯಾರ್ಥದಲ್ಲಿ, ಯಾವ ‘ವ್ಯರ್ಥಕಾರ್ಯಗಳನ್ನು’ ನಾವು ತೊರೆಯಬೇಕು?
• ನಮಗೆ ಹಣವೇ ದೇವರಾಗದಂತೆ ಹೇಗೆ ನೋಡಿಕೊಳ್ಳಬಲ್ಲೆವು?
• ಶರೀರದಾಶೆಗಳು ಯಾವ ರೀತಿಯಲ್ಲಿ ವಿಗ್ರಹಾರಾಧನೆಯಾಗಬಲ್ಲವು?
• ನಿಷ್ಪ್ರಯೋಜಕ ಮಾತುಗಳನ್ನು ನಾವು ಹೇಗೆ ತೊರೆಯಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
1. ನಮ್ಮಲ್ಲಿರುವ ಕೆಲವು ಅಮೂಲ್ಯ ಆಸ್ತಿಗಳು ಯಾವುವು ಮತ್ತು ಅವನ್ನು ಬಳಸುವ ಅತ್ಯುತ್ತಮ ವಿಧ ಯಾವುದು?
2. ವ್ಯರ್ಥಕಾರ್ಯಗಳ ಕುರಿತು ಬೈಬಲ್ ಯಾವ ಎಚ್ಚರಿಕೆಯನ್ನು ನೀಡುತ್ತದೆ ಮತ್ತು ಈ ಎಚ್ಚರಿಕೆಯು ಅಕ್ಷರಶಃವಾಗಿ ಹೇಗೆ ಅನ್ವಯಿಸುತ್ತದೆ?
3. ವ್ಯರ್ಥಕಾರ್ಯಗಳ ಕುರಿತು ಬೈಬಲ್ ನೀಡುವ ಎಚ್ಚರಿಕೆಯು ನಮ್ಮ ಆರಾಧನೆಗೆ ಹೇಗೆ ಅನ್ವಯವಾಗುತ್ತದೆ?
4. ಸಾಮಾನ್ಯಾರ್ಥದಲ್ಲಿ ವ್ಯರ್ಥಕಾರ್ಯಗಳು ಅಂದರೇನು?
5. “ವ್ಯರ್ಥ” ಎಂಬ ಪದವನ್ನು ಬೈಬಲಿನಲ್ಲಿ ಹೆಚ್ಚಾಗಿ ಹೇಗೆ ಅನ್ವಯಿಸಲಾಗಿದೆ?
6. ಸುಳ್ಳು ದೇವತೆಗಳು ವ್ಯರ್ಥವಾಗಿವೆಯೇಕೆ?
7, 8. “ಧನ” ಹೇಗೆ ದೇವರಾಗಲು ಸಾಧ್ಯವಿದೆ?
9, 10. (ಎ) ಒಬ್ಬ ಕ್ರೈಸ್ತನು ಶಿಕ್ಷಣವನ್ನು ಹೇಗೆ ವೀಕ್ಷಿಸುತ್ತಾನೆ? (ಬಿ) ಉನ್ನತ ಶಿಕ್ಷಣದಲ್ಲಿ ಯಾವ ಒಂದು ಅಪಾಯವಿದೆ?
11, 12. “ಹೊಟ್ಟೆಯೇ ಅವರ ದೇವರು” ಎಂದು ಪೌಲನು ಕೆಲವರ ಕುರಿತು ಹೇಳಿದ್ದೇಕೆ?
13. (ಎ) ಲೋಭವೆಂದರೇನು ಮತ್ತು ಪೌಲನು ಅದನ್ನು ಹೇಗೆ ವಿವರಿಸಿದನು? (ಬಿ) ನಾವು ಹೇಗೆ ಲೋಭವನ್ನು ತೊರೆಯಬಲ್ಲೆವು?
14, 15. (ಎ) ಯೆರೆಮೀಯನ ದಿನಗಳಲ್ಲಿ ಯಾವ “ನಿಷ್ಪ್ರಯೋಜಕ” ವಿಷಯ ಅನೇಕರನ್ನು ಎಡವಿಬೀಳಿಸಿತು? (ಬಿ) ಮೋಶೆಯ ಮಾತುಗಳು ಪ್ರಯೋಜನಕರವಾಗಿದ್ದವು ಏಕೆ?
16. ವಿಜ್ಞಾನಿಗಳ ಹೇಳಿಕೆಗಳು ದೇವರ ವಾಕ್ಯಕ್ಕೆ ವ್ಯತಿರಿಕ್ತವಾಗುವಾಗ ಅವನ್ನು ನಾವು ಹೇಗೆ ವೀಕ್ಷಿಸುತ್ತೇವೆ?
17. ಕ್ರೈಸ್ತಪ್ರಪಂಚದ ಮುಖಂಡರ ಹಾಗೂ ಧರ್ಮಭ್ರಷ್ಟರ ಮಾತುಗಳನ್ನು ನಾವು ಹೇಗೆ ವೀಕ್ಷಿಸಬೇಕು?
18. ನಾವು 1 ಯೋಹಾನ 4:1ರಲ್ಲಿರುವ ಸಲಹೆಗಳನ್ನು ಯಾವ ವಿಧಗಳಲ್ಲಿ ಅನ್ವಯಿಸಿಕೊಳ್ಳಬಲ್ಲೆವು?
19. ತಮ್ಮ ಮಾತುಗಳು ನಿಷ್ಪ್ರಯೋಜಕವಾದುವುಗಳಲ್ಲ ಎಂಬುದನ್ನು ಹಿರಿಯರು ಹೇಗೆ ಖಚಿತಪಡಿಸಿಕೊಳ್ಳುತ್ತಾರೆ?
20. ವ್ಯರ್ಥಕಾರ್ಯಗಳನ್ನು ತೊರೆಯಲು ನಮಗೆ ಯಾವೆಲ್ಲ ವಿಧಗಳಲ್ಲಿ ಸಹಾಯ ದೊರಕುತ್ತದೆ?
[ಪುಟ 3ರಲ್ಲಿರುವ ಚಿತ್ರ]
ಇಸ್ರಾಯೇಲ್ಯರು ವ್ಯರ್ಥಕಾರ್ಯಗಳನ್ನು ಬೆನ್ನಟ್ಟದೆ, ‘ದುಡಿದು ಹೊಲಗೇಯುವಂತೆ’ ಪ್ರೋತ್ಸಾಹಿಸಲ್ಪಟ್ಟರು
[ಪುಟ 5ರಲ್ಲಿರುವ ಚಿತ್ರ]
ಪ್ರಾಪಂಚಿಕ ವಸ್ತುಗಳಿಗಾಗಿರುವ ಆಶೆಯು ಯೆಹೋವನಿಗೆ ನೀವು ಸಲ್ಲಿಸುವ ಸೇವೆಯನ್ನು ಮಂದಗೊಳಿಸುವಂತೆ ಬಿಡಬೇಡಿರಿ
[ಪುಟ 6ರಲ್ಲಿರುವ ಚಿತ್ರ]
ಹಿರಿಯರ ಮಾತುಗಳು ಪ್ರಯೋಜನ ತರುತ್ತವೆ