ರಾಜ್ಯವನ್ನು ಮತ್ತು ದೇವರ ನೀತಿಯನ್ನು ಹುಡುಕುತ್ತಾ ಇರ್ರಿ
“ಮೊದಲು ರಾಜ್ಯಕ್ಕಾಗಿ ಮತ್ತು ಆತನ ನೀತಿಗಾಗಿ ಹುಡುಕುತ್ತಾ ಇರ್ರಿ. ಇವುಗಳ ಕೂಡ ಅವೆಲ್ಲವು ನಿಮಗೆ ದೊರಕುವವು.”—ಮತ್ತಾಯ 6:33
1, 2. ಒಳ್ಳೆಯ ಕ್ರಿಯೆಗಳನ್ನು ನಡಿಸುವಾಗ ಸಹಾ ಫರಿಸಾಯರು ಮತ್ತು ಶಾಸ್ತ್ರಿಗಳು ಅವುಗಳನ್ನು ಹೇಗೆ ನಿರ್ವಹಿಸುತ್ತಿದ್ದರು, ಮತ್ತು ಯೇಸು ತನ್ನ ಹಿಂಬಾಲಕರಿಗೆ ಯಾವ ಎಚ್ಚರಿಕೆಯನ್ನು ಕೊಟ್ಟನು?
ಫರಿಸಾಯರು ಮತ್ತು ಶಾಸ್ತ್ರಿಗಳು ತಮ್ಮ ಸ್ವಂತ ಮಾರ್ಗದಲ್ಲಿ ನೀತಿಯನ್ನು ಹುಡುಕಿದರು, ಅದು ದೇವರ ಮಾರ್ಗವಾಗಿರಲಿಲ್ಲ. ಅಷ್ಟು ಮಾತ್ರವಲ್ಲ, ಅವರು ಒಳ್ಳೇದಾದ ಕೃತ್ಯಗಳನ್ನು ನಡಿಸಿದಾಗಲೂ ಜನರಿಂದ ನೋಡಲ್ಪಡುವಂತೆ ಅವನ್ನು ಕಪಟದಿಂದ ನಡಿಸುತ್ತಿದ್ದರು. ಅವರು ದೇವರಿಗಲ್ಲ ತಮ್ಮ ಸ್ವಂತ ಪ್ರತಿಷ್ಟೆಗಾಗಿ ಅದನ್ನು ಮಾಡುತ್ತಿದ್ದರು. ಅಂಥ ನಾಟಕದ ವಿರುದ್ಧ ಯೇಸು ತನ್ನ ಶಿಷ್ಯರನ್ನು ಎಚ್ಚರಿಸಿದ್ದನು: “ಜನರು ನೋಡಲಿ ಎಂದು ನಿಮ್ಮ ಧರ್ಮಕಾರ್ಯಗಳನ್ನು ಅವರ ಮುಂದೆ ಮಾಡಬಾರದು, ನೋಡಿರಿ; ಹಾಗೆ ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯ ಹತ್ತರ ನಿಮಗೆ ಫಲ ದೊರೆಯದು.”—ಮತ್ತಾಯ 6:1.
2 ಬಡವರಿಗೆ ಧರ್ಮ ಮಾಡುವವರನ್ನು ಯೆಹೋವನು ಗಣ್ಯ ಮಾಡುತ್ತಾನೆ—ಆದರೆ ಫರಿಸಾಯರಂತೆ ಧರ್ಮ ಮಾಡುವವರನ್ನಲ್ಲ. ಅವರನ್ನು ಅನುಕರಿಸುವ ವಿರುದ್ಧವಾಗಿ ಯೇಸು ಎಚ್ಚರಿಸುತ್ತಾ ಅಂದದ್ದು: “ಆದುದರಿಂದ ನೀನು ಧರ್ಮಕೊಡುವಾಗ ನಿನ್ನ ಮುಂದೆ ಕೊಂಬೂದಿಸಬೇಡ; ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳು ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ಹಾಗೆ ಮಾಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಪೂರ್ಣವಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”—ಮತ್ತಾಯ 6:2.
3. (ಎ) ತಮ್ಮ ಧರ್ಮಕಾರ್ಯಕ್ಕಾಗಿ ಫರಿಸಾಯರು ಮತ್ತು ಶಾಸ್ತ್ರಿಗಳು ತಮಗೆ ಸಲ್ಲತಕ್ಕದ್ದನ್ನು ಯಾವ ರೀತಿಯಲ್ಲಿ ಪೂರ್ಣವಾಗಿ ಹೊಂದಿದರು? (ಬಿ) ಧರ್ಮ ಕೊಡುವ ವಿಷಯದಲ್ಲಿ ಯೇಸುವಿನ ನಿಲುವು ಹೇಗೆ ಬೇರೆಯಾಗಿತ್ತು?
3 ಗ್ರೀಕ್ ಪದವಾದ ‘ಅವರು ಬರತಕ್ಕ ಫಲವನ್ನು ಪೂರ್ಣವಾಗಿ’ (ಅಪಿ‘ಕೋ) ಎಂಬದು ವ್ಯಾಪಾರದ ರಶೀದಿಗಳಲ್ಲಿ ಹೆಚ್ಚಾಗಿ ಬರುವ ಒಂದು ಪದವಾಗಿತ್ತು. ಪರ್ವತ ಪ್ರಸಂಗದಲ್ಲಿ ಅದರ ಉಪಯೋಗವು, “ಅವರು ತಮ್ಮ ಪ್ರತಿಫಲವನ್ನು ಹೊಂದಿದರು” ಅಂದರೆ, “ಅವರು ತಮ್ಮ ಪ್ರತಿಫಲದ ರಶೀದಿಗೆ ಸಹಿಮಾಡಿದರು; ಅವರಿಗೆ ಆವಾಗಲೇ ರಶೀದಿ ಕೊಡಲ್ಪಟ್ಟಿತೊ ಎಂಬಂತೆ ಪ್ರತಿಫಲವನ್ನು ಹೊಂದುವ ಅವರ ಹಕ್ಕು ಪೂರೈಸಲ್ಪಟ್ಟಿತು” ಎಂಬದನ್ನು ಸೂಚಿಸುತ್ತದೆ. (ಎನ್ ಎಕ್ಸ್ಪೊಸಿಟ್ರಿ ಡಿಕ್ಷೆನೆರಿ ಆಫ್ ನ್ಯೂ ಟೆಸ್ಟಮೆಂಟ್ ವರ್ಡ್ಸ್, ಬೈ ಡಬ್ಲ್ಯೂ.ಇ. ವೈನ್) ಬಡವರಿಗಾಗಿ ಕೊಟ್ಟ ಕೊಡುಗೆಗಳನ್ನು ಬೀದಿಗಳಲ್ಲಿ ಬಹಿರಂಗವಾಗಿ ಪ್ರಕಟಿಸಲಾಗುತ್ತಿತ್ತು. ಸಭಾಸ್ಥಾನಗಳಲ್ಲಿ ದಾನಿಗಳ ಹೆಸರುಗಳು ಪ್ರಕಟಿಸಲ್ಪಡುತ್ತಿದ್ದವು. ಹೆಚ್ಚು ಮೊತ್ತದ ದಾನ ಕೊಟ್ಟವರನ್ನು ಆರಾಧನೆಯ ಸಮಯದಲ್ಲಿ ರಬ್ಬೀಗಳ ಪಕ್ಕದಲ್ಲಿ ಕುಳ್ಳಿರಿಸಿ ವಿಶೇಷವಾಗಿ ಸನ್ಮಾನಿಸಲಾಗುತಿತ್ತು. ಜನರಿಂದ ನೋಡಿಸಿಕೊಳ್ಳಲು ಅವರು ಧರ್ಮಕೊಟ್ಟರು; ಜನರಿಂದ ಅವರು ನೋಡಲ್ಪಟ್ಟರು ಮತ್ತು ಸನ್ಮಾನಿಸಲ್ಪಟ್ಟರು. ಆದಕಾರಣ ಅವರ ಧರ್ಮದಿಂದ ಬಂದ ಫಲಕ್ಕಾಗಿ ಅವರಿಗೆ “ಪೂರ್ಣ ವೇತನ ಸಿಕ್ಕಿತು” ಎಂಬ ಪಾವತಿಗೆ ಮುದ್ರೆಯೊತ್ತ ಸಾಧ್ಯವಿತ್ತು. ಯೇಸುವಿನ ನಿಲುವಾದರೋ ಎಷ್ಟು ಬೇರೆಯಾಗಿತ್ತು! ಗುಟ್ಟಿನಲ್ಲಿ ಧರ್ಮ ಮಾಡು, “ಅಂತರಂಗದಲ್ಲಿ ನಡಿಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲವನ್ನು ಕೊಡುವನು.”—ಮತ್ತಾಯ 6:3, 4; ಜ್ಞಾನೋಕ್ತಿ 19:17.
ದೇವರನ್ನು ಮೆಚ್ಚಿಸುವ ಪ್ರಾರ್ಥನೆಗಳು
4. ಫರಿಸಾಯರ ಪ್ರಾರ್ಥನೆಗಳು ಯೇಸು ಆ ಮನುಷ್ಯರನ್ನು ಕಪಟಿಗಳೆಂದು ಕರೆಯಲು ಏಕೆ ಕಾರಣವಾಯಿತು?
4 ಯೆಹೋವನು ತನಗೆ ಮಾಡಲ್ಪಟ್ಟ ಪ್ರಾರ್ಥನೆಗಳನ್ನು ಗಣ್ಯಮಾಡುತ್ತಾನೆ—ಆದರೆ ಫರಿಸಾಯರು ಮಾಡುವಂಥ ಪ್ರಾರ್ಥನೆಗಳನ್ನಲ್ಲ. ಯೇಸು ತನ್ನ ಹಿಂಬಾಲಕರಿಗೆ ಅಂದದ್ದು: “ಮತ್ತು ನೀವು ಪ್ರಾರ್ಥನೆ ಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ. ಜನರು ನೋಡಬೇಕೆಂದು ಅವರು ಸಭಾ ಮಂದಿರಗಳಲ್ಲಿಯೂ ಬೀದಿಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆ ಮಾಡುವದಕ್ಕೆ ಇಷ್ಟಪಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಪೂರ್ಣವಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” (ಮತ್ತಾಯ 6:5) ಫರಿಸಾಯರಿಗೆ ದಿನಾಲೂ ಪಠಿಸುವುದಕ್ಕೆ ಅನೇಕ ಪ್ರಾರ್ಥನೆಗಳಿದ್ದವು, ಅವರು ಎಲ್ಲಿಯೇ ಇರಲಿ, ವಿಶಿಷ್ಟ ಸಮಯಗಳಲ್ಲಿ ಪ್ರಾರ್ಥಿಸಬೇಕಿತ್ತು. ನಿಯಮಾನುಸಾರ ಅವರು ಅದನ್ನು ಖಾಸಗಿಯಾಗಿ ನಡಿಸಬೇಕಿತ್ತು. ಆದರೆ ಪ್ರಾರ್ಥನೆ ಮಾಡುವ ವೇಳೆಯಾದಾಗ ಅವರು ಉದ್ದೇಶಪೂರ್ವಕವಾಗಿ “ಬೀದಿಚೌಕಗಳಲ್ಲಿ” ಇರುವಂತೆ ಪ್ರಯತ್ನಿಸಿ, ನಾಲ್ಕೂ ಕಡೆಗಳಲ್ಲಿ ಹಾದುಹೋಗುವ ಜನರು ನೋಡುವಂತೆ ಪ್ರಾರ್ಥಿಸುತ್ತಿದ್ದರು.
5. (ಎ) ಫರಿಸಾಯರ ಪ್ರಾರ್ಥನೆಗಳು ದೇವರಿಂದ ಕೇಳಲ್ಪಡದಿರಲು ಬೇರೆ ಯಾವ ಪದ್ಧತಿಗಳು ಕಾರಣವಾದವು? (ಬಿ) ತನ್ನ ಮಾದರಿ ಪ್ರಾರ್ಥನೆಯಲ್ಲಿ ಯೇಸು ಯಾವ ವಿಷಯಗಳನ್ನು ಪ್ರಥಮವಾಗಿಟ್ಟನು, ಮತ್ತು ಜನರು ಇಂದು ಅದಕ್ಕೆ ಸಹಮತದಿಂದಿದ್ದಾರೋ?
5 ಸುಳ್ಳು ಪವಿತ್ರತೆಯ ಸೋಗನ್ನು ಪ್ರದರ್ಶಿಸುತ್ತಾ ಅವರು, “ಉದ್ದವಾದ ಪ್ರಾರ್ಥನೆಗಳ ನಟನೆಯನ್ನು” ಮಾಡುತ್ತಿದ್ದರು. (ಲೂಕ 20:47) ಒಂದು ಬಾಯಿಮಾತಿನ ಸಂಪ್ರದಾಯವು ಹೇಳಿದ್ದು: “ಪೂರ್ವದ ಭಕ್ತ ಜನರು ತಮ್ಮ ತೆಫಿಲ್ಲಾ [ಪ್ರಾರ್ಥನೆ] ಹೇಳುವ ಮುಂಚೆ ಒಂದು ತಾಸಿನ ವರೆಗೆ ಕಾಯತ್ತಿದ್ದರು.” (ಮಿಶ್ನಾ) ಅಷ್ಟರೊಳಗೆ ಎಲ್ಲರೂ ಅವರ ಭಕ್ತಿಯನ್ನು ಖಂಡಿತವಾಗಿ ನೋಡುವರು ಮತ್ತು ಅದಕ್ಕೆ ಅಚ್ಚರಿ ಪಡುವರು! ಆದರೆ ಅಂಥ ಪ್ರಾರ್ಥನೆಗಳು ಅವರ ಸ್ವಂತ ತಲೆಗಳಿಗಿಂತ ಹೆಚ್ಚು ಎತ್ತರಕ್ಕೆ ಏರಿರಲಿಲ್ಲ. ಏಕಾಂತದಲ್ಲಿ, ವ್ಯರ್ಥವಾದ ಪುನರುಚ್ಚಾರಣೆಗಳಿಲ್ಲದೆ ಪ್ರಾರ್ಥಿಸುವಂತೆ ಯೇಸು ಹೇಳಿದ್ದನು, ಮತ್ತು ಅವರಿಗೆ ಒಂದು ಸರಳವಾದ ನಮೂನೆಯನ್ನು ಕೊಟ್ಟನು. (ಮತ್ತಾಯ 6:6-8; ಯೋಹಾನ 14:6, 14; 1 ಪೇತ್ರ 3:12) ಯೇಸುವಿನ ಮಾದರಿ ಪ್ರಾರ್ಥನೆಯು ಪ್ರಥಮತೆಗಳನ್ನು ಪ್ರಥಮವಾಗಿಟ್ಟಿತು: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:9-13) ಅದನ್ನು ಪರಿಶುದ್ಧಪಡಿಸುವದಂತೂ ಇರಲಿ, ದೇವರ ನಾಮವನ್ನು ಸಹಾ ಇಂದು ತಿಳಿದಿರುವ ಜನರು ಕೊಂಚವೇ. ಆ ಮೂಲಕ ಅವರು ಅವನನ್ನು ಒಬ್ಬ ಅನಾಮಧೇಯ ದೇವರನ್ನಾಗಿ ಮಾಡುತ್ತಾರೆ. ದೇವರ ರಾಜ್ಯವು ಬರುವದೋ? ಅದು ಈವಾಗಲೇ ಇಲ್ಲಿದೆ, ತಮ್ಮೊಳಗೇ ಇದೆ ಎಂದು ಅನೇಕರ ಅನಿಸಿಕೆ. ಆತನ ಚಿತ್ತವು ನೆರವೇರುವಂತೆ ಒಂದು ವೇಳೆ ಅವರು ಪ್ರಾರ್ಥಿಸ್ಯಾರು, ಆದರೆ ಹೆಚ್ಚಿನವರು ಮಾಡುವದು ತಮ್ಮ ಚಿತ್ತವನ್ನೇ.—ಜ್ಞಾನೋಕ್ತಿ 14:12.
6. ಯೇಸು ಯೆಹೂದಿ ಉಪವಾಸಗಳನ್ನು ನಿರರ್ಥಕವೆಂದು ಖಂಡಿಸಿದ್ದೇಕೆ?
6 ಉಪವಾಸವು ಯೆಹೋವನಿಗೆ ಸ್ವೀಕರಣೀಯ—ಆದರೆ ಫರಿಸಾಯರು ಅದನ್ನು ನಡಿಸಿದಂತೆ ಅಲ್ಲ. ಫರಿಸಾಯ ಮತ್ತು ಶಾಸ್ತ್ರಿಗಳ ಧರ್ಮಕಾರ್ಯದಂತೆ ಮತ್ತು ಪ್ರಾರ್ಥನೆಗಳಂತೆ, ಅವರ ಉಪವಾಸಗಳೂ ವ್ಯರ್ಥವೆಂದು ಯೇಸು ತಳ್ಳಿಹಾಕಿದನು: “ನೀವು ಉಪವಾಸ ಮಾಡುವಾಗ ಕಪಟಿಗಳಂತೆ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿರಿ. ಅವರು ತಾವು ಉಪವಾಸಿಗಳೆಂದು ಜನರಿಗೆ ತೋರಿಸುವದಕ್ಕಾಗಿ ತಮ್ಮ ಮುಖವನ್ನು ವಿಕಾರ ಮಾಡಿಕೊಳ್ಳುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಪೂರ್ಣವಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” (ಮತ್ತಾಯ 6:16) ಉಪವಾಸಗಳ ಸಂದರ್ಭದಲ್ಲಿ ಫರಿಸಾಯರು ತೊಳೆಯಲೂ ಬಾರದಿತ್ತು ಮತ್ತು ಅಭಿಷೇಕವನ್ನೂ ಮಾಡಬಾರದಿತ್ತು, ಬದಲಿಗೆ ತಲೆಗಳಿಗೆ ಬೂದಿಯನ್ನು ಹಚ್ಚಿಕೊಳ್ಳಬೇಕೆಂದು ಅವರ ವಾಚಿಕ ಸಂಪ್ರದಾಯಗಳು ಸೂಚಿಸಿದ್ದವು. ಉಪವಾಸ ಮಾಡದಾಗ ಯೆಹೂದ್ಯರು ಕ್ರಮವಾಗಿ ತಮ್ಮನ್ನು ತೊಳೆದುಕೊಳ್ಳುತ್ತಿದ್ದರು ಮತ್ತು ಎಣ್ಣೆಯಿಂದ ತಮ್ಮ ಮೈಯನ್ನು ಉಜ್ಜುತ್ತಿದ್ದರು.
7. (ಎ) ಉಪವಾಸ ಮಾಡುವಾಗ ಯೇಸುವಿನ ಶಿಷ್ಯರು ತಮ್ಮನ್ನು ಹೇಗೆ ನಡಿಸಿಕೊಳ್ಳಬೇಕಿತ್ತು? (ಬಿ) ಉಪವಾಸದ ಸಂಬಂಧದಲ್ಲಿ, ಯೆಶಾಯನ ದಿನಗಳಲ್ಲಿ ಯೆಹೋವನು ಏನನ್ನು ಬಯಸಿದ್ದನು?
7 ಉಪವಾಸದ ಕುರಿತಾಗಿ ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ತಲೆಗೆ ಎಣ್ಣೆ ಹಚ್ಚಿಕೊಂಡು ಮಖವನ್ನು ತೊಳಕೋ. ಹೀಗೆ ಮಾಡಿದರೆ ನೀನು ಉಪವಾಸಿಯೆಂದು ಜನರಿಗೆ ಕಾಣದೆ ಹೋದಾಗ್ಯೂ ಅಂತರಂಗದಲ್ಲಿರುವ ನಿನ್ನ ತಂದೆಗೆ ಕಾಣುವದು.” (ಮತ್ತಾಯ 6:17, 18) ಯೆಶಾಯನ ದಿನಗಳಲ್ಲಿ ಸನ್ಮಾರ್ಗತೊರೆದ ಯೆಹೂದ್ಯರು—ಉಪವಾಸದಲ್ಲಿ, ತಮ್ಮ ಆತ್ಮಗಳನ್ನು ಬಾಧಿಸಿಕೊಳ್ಳುವದರಲ್ಲಿ, ತಮ್ಮ ತಲೆಗಳನ್ನು ಬಗ್ಗಿಸಿಡುವುದರಲ್ಲಿ ಮತ್ತು ಗೋಣಿತಟ್ಟು ಮತ್ತು ಬೂದಿಯಲ್ಲಿ ಕೂತುಕೊಳ್ಳುವದರಲ್ಲಿ ಉಲ್ಲಾಸಪಡುತ್ತಿದ್ದರು. ಆದರೆ ಯೆಹೋವನು ಅವರಿಂದ ಬಯಸಿದ್ದು—ದಬ್ಬಾಳಿಕೆಗೆ ಒಳಗಾದವರನ್ನು ಬಿಡಿಸುವಂತೆ, ಹಸಿದವರಿಗೆ ಉಣಿಸುವಂತೆ, ಆಶ್ರಯಹೀನರಿಗೆ ಆಶ್ರಯ ಕೊಡುವಂತೆ ಮತ್ತು ಬಟ್ಟಿಯಿಲ್ಲದವರಿಗೆ ಉಡಿಸುವಂತೆಯೇ.—ಯೆಶಾಯ 58:3-7.
ಸ್ವರ್ಗೀಯ ನಿಕ್ಷೇಪವನ್ನು ಕೂಡಿಸಿಡಿರಿ
8. ದೇವರ ಮೆಚ್ಚಿಕೆಯನ್ನು ಹೇಗೆ ಗಳಿಸುವದೆಂಬ ವಿಷಯದಲ್ಲಿ ಫರಿಸಾಯರು ಮತ್ತು ಶಾಸ್ತ್ರಿಗಳು ತಪ್ಪಿಹೋಗಲು ಯಾವುದು ಕಾರಣವಾಗಿತ್ತು, ಮತ್ತು ಪೌಲನಿಂದ ಅನಂತರ ವ್ಯಕ್ತಪಡಿಸಲ್ಪಟ್ಟ ಯಾವ ಸೂತ್ರವನ್ನು ಅವರು ದುರ್ಲಕ್ಷ ಮಾಡಿದರು?
8 ಫರಿಸಾಯರು ಮತ್ತು ಶಾಸ್ತ್ರಿಗಳು ತಮ್ಮ ಸ್ವನೀತಿಯ ಬೆನ್ನಟ್ಟುವಿಕೆಯಲ್ಲಿ, ದೇವರ ಮೆಚ್ಚಿಕೆಯನ್ನು ಗಳಿಸುವುದು ಹೇಗೆಂಬದನ್ನು ಕಾಣದೆ ಹೋದರು ಮತ್ತು ಜನರ ಶ್ಲಾಘನೆಯನ್ನು ಪಡೆಯುವದರಲ್ಲೀ ಮನಸ್ಸನ್ನಿಟ್ಟರು. ಅವರು ಮನುಷ್ಯರ ಸಂಪ್ರದಾಯಗಳಲ್ಲಿ ಎಷ್ಟು ತಲ್ಲೀನರಾದರೆಂದರೆ, ದೇವರ ಲಿಖಿತ ವಾಕ್ಯವನ್ನು ಬದಿಗೊತ್ತಿದರು. ಸ್ವರ್ಗೀಯ ನಿಕ್ಷೇಪಕ್ಕೆ ಬದಲಾಗಿ ಐಹಿಕ ಸ್ಥಾನಮಾನಗಳ ಮೇಲೆ ತಮ್ಮ ಹೃದಯವನ್ನಿಟ್ಟರು. ಫರಿಸಾಯ-ಪರಿವರ್ತಿತ-ಕ್ರೈಸ್ತನೊಬ್ಬನು ವರ್ಷಾನಂತರ ಬರೆದ ಒಂದು ಸರಳವಾದ ಸತ್ಯವನ್ನು ಅವರು ದುರ್ಲಕ್ಷಿಸಿದರು: “ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಯೆಹೋವನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ. ಯೆಹೋವನಿಂದ ಬಾಧ್ಯತೆಯನ್ನು ಪ್ರತಿಫಲವಾಗಿ ಹೊಂದುವೆವೆಂದು ತಿಳಿದಿದ್ದೀರಲ್ಲಾ.”—ಕೊಲೊಸ್ಸೆ 3:23, 24.
9. ಯಾವ ಅಪಾಯಗಳು ಐಹಿಕ ನಿಕ್ಷೇಪವನ್ನು ಬೆದರಿಸ ಸಾಧ್ಯವಿದೆ, ಆದರೆ ನಿಜ ನಿಕ್ಷೇಪನ್ನು ಯಾವುದು ಸುರಕ್ಷಿತವಾಗಿಡುವದು?
9 ಯೆಹೋವನು ನಿಮ್ಮ ಭಕ್ತಿಯಲ್ಲಿ ಆಸಕ್ತನಾಗಿದ್ದಾನೆ, ನಿಮ್ಮ ಬ್ಯಾಂಕ್ ಮೊಬಲಗಿನಲ್ಲಲ್ಲ. ನಿಮ್ಮ ನಿಕ್ಷೇಪವಿರುವಲ್ಲಿ ನಿಮ್ಮ ಹೃದಯವೂ ಇದೆ ಎಂದಾತನು ಬಲ್ಲನು. ನಿಮ್ಮ ನಿಕ್ಷೇಪವನ್ನು ಕಿಲುಬು ಮತ್ತು ನುಸಿಗಳು ಕೆಡಿಸಬಲ್ಲವೋ? ಮಣ್ಣು ಗೋಡೆಯನ್ನು ಕನ್ನಾ ಕೊರೆದು ಕಳ್ಳರು ಅದನ್ನು ಕದಿಯಬಲ್ಲರೋ? ಅಥವಾ ಆರ್ಥಿಕ ಅಸ್ಥಿರತೆಯ ಈ ಆಧುನಿಕ ಕಾಲದಲ್ಲಿ, ಬೆಲೆಯುಬ್ಬರವು ಅದರ ಖರೀದಿಸುವ ಶಕ್ತಿಯನ್ನು ಕುಗ್ಗಿಸಬಲ್ಲದೋ ಅಥವಾ ಬಂಡವಾಳ-ಪೇಟೆಯ ಕುಸಿತವು ಅದನ್ನು ತೊಡೆದು ಹಾಕಬಲ್ಲದೋ? ಪಾತಕದ ಗತಿಯುಬ್ಬರವು ನಿಮ್ಮ ನಿಕ್ಷೇಪದ ಕಳವಿಗೆ ಕಾರಣವಾಗಬಹುದೋ? ಪರಲೋಕದಲ್ಲಿ ಅದು ಕೂಡಿಸಲ್ಪಟ್ಟಲ್ಲಿ ಹಾಗಾಗದು. ನಿಮ್ಮ ಕಣ್ಣು—ನಿಮ್ಮ ಇಡೀ ದೇಹಕ್ಕೆ ಬೆಳಕಾಗಿರುವ ಆ ದೀಪವು ಸರಳವಾಗಿದ್ದರೆ, ದೇವರ ರಾಜ್ಯದಲ್ಲೂ ಆತನ ನೀತಿಯಲ್ಲೂ ಕೇಂದ್ರೀಕರಿಸಿದ್ದರೆ, ಹಾಗಾಗದು. ಐಶ್ವರ್ಯಗಳಿಗೆ ಮಾಯವಾಗಿ ಹೋಗುವ ಅಭ್ಯಾಸವಿದೆ. “ದುಡ್ಡಿನಾಸೆಯಿಂದ ದುಡಿಯಬೇಡ. ಸ್ವಬುದ್ಧಿಯನ್ನೇ ಆಶ್ರಯಿಸಬೇಡ. ನಿನ್ನ ದೃಷ್ಟಿಯು ಧನದ ಮೇಲೆ ಎರಗುತ್ತದೋ? ಧನವು ಅಷ್ಟರೊಳಗೆ ಮಾಯವಾಗುವದು; ಆಕಾಶದ ಕಡೆಗೆ ಹಾರುವ ಹಕ್ಕಿಯಂತೆ ಅದು ರೆಕ್ಕೆಯನ್ನು ಕಟ್ಟಿಕೊಂಡಿದೆ.” (ಜ್ಞಾನೋಕ್ತಿ 23:4, 5) ಆದ್ದರಿಂದ, ಐಶ್ವರ್ಯದ ವಿಷಯದಲ್ಲಿ ಜಾಗರಣೆಯೇಕೆ? “ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು.” (ಪ್ರಸಂಗಿ 5:12) ಯೇಸುವಿನ ಎಚ್ಚರಿಕೆಯನ್ನು ನೆನಪಿಸಿರಿ: “ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.”—ಮತ್ತಾಯ 6:19-24.
ಚಿಂತೆಯನ್ನು ಹೋಗಲಾಡಿಸುವ ನಂಬಿಕೆ
10. ಪ್ರಾಪಂಚಿಕ ಸೊತ್ತುಗಳಿಗಿಂತ ದೇವರಲ್ಲಿ ನಿಮ್ಮ ನಂಬಿಕೆಯನ್ನಿಡುವುದು ಅಷ್ಟು ಮಹತ್ವದ್ದು ಏಕೆ, ಮತ್ತು ಯೇಸು ಯಾವ ಸೂಚನೆಯನ್ನು ಕೊಟ್ಟನು?
10 ಯೆಹೋವನು ಬಯಸುವದು ನೀವು ನಿಮ್ಮ ನಂಬಿಕೆಯನ್ನು ಆತನ ಮೇಲೆ ಇಡುವಂತೆ, ಪ್ರಾಪಂಚಿಕ ಸೊತ್ತುಗಳ ಮೇಲೆ ಅಲ್ಲ. “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ. ದೇವರ ಬಳಿಗೆ ಬರುವವನು ದೇವರು ಇದ್ದಾನೆ ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” (ಇಬ್ರಿಯ 11:6) “ಒಬ್ಬನಿಗೆ ಎಷ್ಟು ಆಸ್ತಿ ಇದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ” ಎಂದು ಯೇಸು ಹೇಳಿದ್ದಾನೆ. ಬ್ಯಾಂಕಿನಲ್ಲಿ ಕೊಟ್ಯಾಂತರವಿದ್ದರೂ ಅದು ರೋಗಿಷ್ಟ ಪುಪ್ಪುಸಗಳನ್ನು ಕಾರ್ಯನಡಿಸುತ್ತಾ ಮುಂದರಿಯುವಂತೆ ಮಾಡಲಾರದು ಅಥವಾ ದಣಿದು ಬಳಲಿದ ಹೃದಯವು ಪಂಪು ಮಾಡುತ್ತಾ ಇರುವಂತೆ ಮಾಡಲಾರದು. “ಈ ಕಾರಣದಿಂದ,” ಯೇಸು ತನ್ನ ಪರ್ವತ ಪ್ರಸಂಗವನ್ನು ಮುಂದರಿಸುತ್ತಾ ಅಂದದ್ದು, “ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂದು ನಿಮಗೆ ಹೇಳುತ್ತೇನೆ.”—ಮತ್ತಾಯ 6:25.
11. ತನ್ನ ದೃಷ್ಟಾಂತಗಳಲ್ಲಿ ಹೆಚ್ಚಿನವನ್ನು ಯೇಸು ಕಂಡುಕೊಂಡದ್ದು ಎಲ್ಲಿ, ಮತ್ತು ಇದು ಪರ್ವತ ಪ್ರಸಂಗದಲ್ಲಿ ಹೇಗೆ ಪ್ರದರ್ಶಿಸಲ್ಪಟ್ಟಿತು?
11 ಯೇಸು ಶಾಬ್ದಿಕ ದೃಷ್ಟಾಂತಗಳಿಗೆ ಅತ್ಯಂತ ಕುಶಲನಾಗಿದ್ದನು. ಅವನು ನೋಡಿದಲ್ಲೆಲ್ಲಾ ಅವುಗಳ ಕುರಿತು ಆಲೋಚಿಸುತ್ತಿದ್ದನು. ಒಬ್ಬಾಕೆ ಸ್ತ್ರೀಯು ಬೆಳಗಿದ ದೀಪವನ್ನು ದೀಪಸ್ತಂಭದ ಮೇಲಿಡುವದನ್ನು ಆತನು ಕಂಡನು ಮತ್ತು ಅದನ್ನು ಒಂದು ದೃಷ್ಟಾಂತವಾಗಿ ಮಾರ್ಪಡಿಸಿದನು. ಕುರುಬನೊಬ್ಬನು ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವದನ್ನು ಕಂಡನು; ಅದೊಂದು ದೃಷ್ಟಾಂತವಾಗಿ ಪರಿಣಮಿಸಿತು. ಮಕ್ಕಳು ಪೇಟೆಚೌಕದಲ್ಲಿ ಆಟವಾಡುವದನ್ನು ಕಂಡನು; ಅದೂ ಒಂದು ದೃಷ್ಟಾಂತವಾಗಿ ಪರಿಣಮಿಸಿತು. ಪರ್ವತ ಪ್ರಸಂಗದಲ್ಲಿ ಕೂಡ ಹಾಗೆಯೇ. ಶಾರೀರಿಕ ಅವಶ್ಯಕತೆಗಳ ಚಿಂತೆಯ ಕುರಿತು ಮಾತಾಡಿದಾಗ, ಅಲ್ಲಲ್ಲೇ ಹಾರಾಡುತ್ತಿದ್ದ ಹಕ್ಕಿಗಳಲ್ಲಿ ಮತ್ತು ಬೆಟ್ಟದ ಪಕ್ಕದಲ್ಲಿ ಹುಲುಸಾಗಿ ಬೆಳೆದ ಲಿಲಿ ಹೂವುಗಳಲ್ಲಿ ದೃಷ್ಟಾಂತಗಳನ್ನು ಕಂಡನು. ಪಕ್ಷಿಗಳು ಬಿತ್ತುತ್ತವೋ, ಕೊಯ್ಯುತ್ತವೋ? ಇಲ್ಲ. ಲಿಲಿ ಹೂವುಗಳು ದುಡಿಯುತ್ತವೋ, ನೂಲುತ್ತವೋ? ಇಲ್ಲ. ದೇವರು ಅವನ್ನು ನಿರ್ಮಿಸಿದನು; ಅವನೇ ಅವನ್ನು ಪರಾಮರಿಕೆ ಮಾಡುತ್ತಾನೆ. ನೀವಾದರೋ ಪಕ್ಷಿಗಳಿಗಿಂತ ಮತ್ತು ಲಿಲಿ ಹೂವುಗಳಿಗಿಂತ ಮೇಲಿನವರು. (ಮತ್ತಾಯ 6:26, 28-30) ಆತನು ನಿಮಗಾಗಿ ತನ್ನ ಮಗನನ್ನು ಕೊಟ್ಟನು, ಅವುಗಳಿಗಾಗಿ ಅಲ್ಲ.—ಯೋಹಾನ 3:16.
12. (ಎ) ಪಕ್ಷಿಗಳು ಮತ್ತು ಹೂವುಗಳ ಕುರಿತಾದ ದೃಷ್ಟಾಂತಗಳ ಅರ್ಥವು ಯೇಸುವಿನ ಶಿಷ್ಯರಿಗೆ ಕೆಲಸ ಮಾಡಲಿಕ್ಕಿಲ್ಲವೆಂದೋ? (ಬಿ) ಕೆಲಸ ಮತ್ತು ನಂಬಿಕೆಯ ಕುರಿತು ಯಾವ ವಿಷಯವನ್ನು ಯೇಸು ತಿಳಿಸುತ್ತಿದ್ದನು?
12 ತಮ್ಮ ಊಟ ಮತ್ತು ಬಟ್ಟಿಗಾಗಿ ಕೆಲಸ ಮಾಡುವ ಅವಶ್ಯವಿಲ್ಲವೆಂದು ಇಲ್ಲಿ ಯೇಸು ತನ್ನ ಶಿಷ್ಯರಿಗೆ ಹೇಳಿರಲಿಲ್ಲ. (ಪ್ರಸಂಗಿ 2:24; ಎಫೆಸ 4:28; 2 ಥೆಸಲೋನಿಕ 3:10-12, ನೋಡಿ.) ವಸಂತಕಾಲದ ಆ ಬೆಳಗ್ಗೆ, ಪಕ್ಷಿಗಳು ಕಾಳನ್ನು ಕೂಡಹಾಕುವದರಲ್ಲಿ, ಪ್ರಣಯಾಚರಣೆಯಲ್ಲಿ, ಗೂಡು ಕಟ್ಟುವದರಲ್ಲಿ, ಕಾವಿಗೆ ಕುಳಿತುಕೊಳ್ಳುವದರಲ್ಲಿ ಮತ್ತು ತಮ್ಮ ಮರಿಗಳನ್ನು ಉಣಿಸುವುದರಲ್ಲಿ ಕಾರ್ಯಮಗ್ನವಾಗಿದ್ದವು. ಹೂವುಗಳು ಸಹಾ ನೀರು ಮತ್ತು ಖನಿಜಗಳ ತಮ್ಮ ಆನ್ವೇಷಣೆಯಲ್ಲಿ ಬೇರುಗಳನ್ನು ಮಣ್ಣಿನೊಳಗೆ ಆಳವಾಗಿ ದೂಡುವದರಲ್ಲಿ ಮತ್ತು ತಮ್ಮ ಎಲೆಗಳನ್ನು ಸೂರ್ಯಬೆಳಕಿಗಾಗಿ ತಲಪಿಸಲು ಮೇಲೆತ್ತುವುದರಲ್ಲಿ ಕಾರ್ಯಮಗ್ನವಾಗಿದ್ದವು. ಸಾಯುವ ಮೊದಲು ಅವು ಬೆಳೆದು, ಹೂವುಬಿಟ್ಟು, ತಮ್ಮ ಬೀಜಗಳನ್ನು ಬೀಳಿಸಬೇಕು. ಅವುಗಳು ಕೆಲಸಮಾಡುತ್ತಿದ್ದವು, ಚಿಂತಿಸುತ್ತಾ ಕೂತಿರಲಿಲ್ಲ. ಪಕ್ಷಿಗಳಿಗೆ ಮತ್ತು ಹೂವುಗಳಿಗೆ ದೇವರು ತಾನೇ ಒದಗಿಸುತ್ತಾನೆ. ‘ಎಲೈ ಅಲ್ಪ ವಿಶ್ವಾಸಿಗಳೇ, ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸಲಾರನೆ?’—ಮತ್ತಾಯ 6:30
13. (ಎ) ಒಬ್ಬನ ಆಯುಸ್ಸನ್ನು ಹೆಚ್ಚಿಸುವ ಕುರಿತು ಯೇಸು ಮಾತಾಡಿದಾಗ, ಒಂದು ಮೊಳದ ಅಳತೆಯನ್ನು ಉಪಯೋಗಿಸಿದ್ದು ತಕ್ಕದ್ದಾಗಿತ್ತೇಕೆ? (ಬಿ) ನೀವು ನಿಮ್ಮ ಜೀವನವನ್ನು ಅನಂತ ಮಿಲ್ಯಾಂತರ ಮೈಲುಗಳಷ್ಟೊ ಎಂಬಂತೆ ಉದಮ್ದಾಡಬಹುದು ಹೇಗೆ?
13 ಆದುದರಿಂದ, ನಂಬಿಕೆ ಉಳ್ಳವರಾಗಿರಿ. ಚಿಂತೆ ಮಾಡಬೇಡಿರಿ. ಚಿಂತೆಯು ಏನನ್ನೂ ಬದಲಾಯಿಸಲಾರದು. “ಚಿಂತೆ ಮಾಡಿ ತನ್ನ ಅಯುಷ್ಯಕ್ಕೆ ಒಂದು ಮೊಳ ಕೂಡಿಸುವದು,” ಯೇಸು ಕೇಳಿದ್ದು, “ನಿಮ್ಮಿಂದ ಯಾರಿಂದಾದೀತು? (ಮತ್ತಾಯ 6:27, NW) ಆದರೆ ಯೇಸು ಇಲ್ಲಿ ಒಂದು ಆಯುಷ್ಯದಲ್ಲಿನ ಕಾಲದ ವಿಷಯಕ್ಕೆ, ಭೌತಿಕ ಉದಳ್ದತೆಯಾದ ಒಂದು ಮೊಳವನ್ನು ಸಂಬಂಧಿಸಿದ್ದೇಕೆ? ಯಾಕಂದರೆ ಬೈಬಲು ಮಾನವರ ಆಯುಷ್ಯವನ್ನು ಆಗಿಂದಾಗ್ಯೆ ಒಂದು ಪ್ರಯಾಣಕ್ಕೆ ಹೋಲಿಸುವದರಿಂದಲೇ ಇರಬಹುದು, “ಪಾಪಾತ್ಮರ ಮಾರ್ಗ,” “ನೀತಿವಂತರ ಮಾರ್ಗ,” ಒಂದು ‘ಅಗಲವಾದ ದಾರಿ’ ಮತ್ತು ‘ಬಿಕ್ಕಟ್ಟಾದ ದಾರಿ’ ಮುಂತಾದ ಹೇಳಿಕೆಗಳನ್ನು ಅದು ಉಪಯೋಗಿಸುತ್ತದೆ. (ಕೀರ್ತನೆ 1:1; ಜ್ಞಾನೋಕ್ತಿ 4:18; ಮತ್ತಾಯ 7:13, 14) ದಿನನಿತ್ಯದ ಅವಶ್ಯಕತೆಗಳ ಕುರಿತಾಗಿ ಚಿಂತೆ ಮಾಡುವ ಮೂಲಕ ಒಬ್ಬನು ತನ್ನ ಆಯುಸ್ಸನ್ನು “ಒಂದು ಮೊಳ” ದಷ್ಟಾದರೂ ಸ್ವಲ್ಪಮಟ್ಟಿಗೆ ಹೆಚ್ಚು ಮಾಡಲಾರನು. ಆದರೆ ನಿಮ್ಮ ಜೀವಿತವನ್ನು ಅನಂತ ಮಿಲಿಯ ಮೈಲುಗಳಷ್ಟೊ ಎಂಬಂತೆ ಉದಮ್ದಾಡುವ ಒಂದು ದಾರಿ ಇದೆ. “ಏನು ಊಟ ಮಾಡಬೇಕು” ಅಥವಾ “ಏನು ಕುಡಿಯಬೇಕು” ಯಾ “ಏನು ಹೊದ್ದುಕೊಳ್ಳಬೇಕು” ಎಂದು ಹೇಳುತ್ತಾ ಚಿಂತೆ ಮಾಡುವ ಮೂಲಕವಾಗಿ ಅಲ್ಲ, ಬದಲಾಗಿ ನಂಬಿಕೆಯನ್ನಿಡುವ ಮೂಲಕ ಮತ್ತು ಯೇಸು ಏನನ್ನು ಮಾಡಲು ಹೇಳಿದನೋ ಅದನ್ನು ಮಾಡುವ ಮೂಲಕ: “ಹೀಗಿರುವದರಿಂದ ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರ್ರಿ. ಇವುಗಳ ಕೂಡ ಅವೆಲ್ಲವು ನಿಮಗೆ ದೊರಕುವವು.”—ಮತ್ತಾಯ 6:31-33.
ದೇವರ ರಾಜ್ಯವನ್ನು ಮತ್ತು ಆತನ ನೀತಿಯನ್ನು ಪಡೆಯುವುದು
14. (ಎ) ಪರ್ವತ ಪ್ರಸಂಗದ ಮುಖ್ಯ ವಿಷಯವು ಯಾವುದು? (ಬಿ) ಯಾವ ತಪ್ಪಾದ ವಿಧದಲ್ಲಿ ಫರಿಸಾಯರು ಮತ್ತು ಶಾಸ್ತ್ರಿಗಳು ದೇವರ ರಾಜ್ಯವನ್ನೂ ನೀತಿಯನ್ನೂ ಹುಡುಕಿದರು?
14 ಪರ್ವತ ಪ್ರಸಂಗದ ತನ್ನ ಆರಂಭದ ವಾಕ್ಯದಲ್ಲಿ, ಆತ್ಮಿಕ ಅವಶ್ಯಕತೆಗಳ ಪ್ರಜ್ಞೆಯುಳ್ಳರಿಗೆ ಸೇರಿರುವ ಪರಲೋಕ ರಾಜ್ಯದ ಕುರಿತು ಯೇಸು ಮಾತಾಡಿದನು. ನಾಲ್ಕನೆಯ ವಚನದಲ್ಲಿ, ನೀತಿಗಾಗಿ ಹಸಿದು ಬಾಯಾರಿದವರು ತೃಪ್ತಿಹೊಂದುವರು ಎಂದು ಅವನು ಹೇಳಿದನು. ಇಲ್ಲಿ, ಯೇಸು ದೇವರ ರಾಜ್ಯವನ್ನು ಮತ್ತು ಯೆಹೋವನ ನೀತಿಯನ್ನು ಎರಡನ್ನೂ ಪ್ರಥಮ ಸ್ಥಾನದಲ್ಲಿಟ್ಟನು. ಆ ಪರ್ವತ ಪ್ರಸಂಗದ ಮುಖ್ಯ ವಿಷಯವು ಅದೇ ಆಗಿತ್ತು. ಆವು ಮಾನವ ಕುಲದವರೆಲ್ಲರ ಆವಶ್ಯಕತೆಗಳ ಉತ್ತರವಾಗಿದ್ದವು. ಆದರೆ ದೇವರ ರಾಜ್ಯವನ್ನು ಮತ್ತು ಆತನ ನೀತಿಯನ್ನು ಪಡೆಯುವದು ಯಾವದರ ಮೂಲಕ? ಅವನ್ನು ನಾವು ಹುಡುಕುತ್ತಾ ಇರುವುದು ಹೇಗೆ? ಫರಿಸಾಯರು ಮತ್ತು ಶಾಸ್ತ್ರಿಗಳು ಹುಡುಕಿದ ರೀತಿಯಲ್ಲಲ್ಲ. ಅವರು ಮೋಶೆಯ ಧರ್ಮಶಾಸ್ತ್ರದ ಮೂಲಕ ದೇವರ ರಾಜ್ಯವನ್ನು ಮತ್ತು ನೀತಿಯನ್ನು ಹುಡುಕಿದರು; ಮೋಶೆಯ ನಿಯಮದಲ್ಲಿ ಬಾಯಿಮಾತಿನ ಸಂಪ್ರದಾಯಗಳೂ ಕೂಡಿವೆಯೆಂದು ಅವರ ವಾದವಾಗಿತ್ತು ಯಾಕೆಂದರೆ ಲಿಖಿತ ನಿಯಮ ಮತ್ತು ಬಾಯಿಮಾತಿನ ಸಂಪ್ರದಾಯ ಎರಡನ್ನೂ ದೇವರು ಮೋಶೆಗೆ ಸೀನಾಯಿ ಬೆಟ್ಟದಲ್ಲಿ ಕೊಟ್ಟನು ಎಂದವರು ನಂಬುತ್ತಿದ್ದರು.
15. (ಎ) ಯೆಹೂದ್ಯರಿಗನುಸಾರ ಅವರ ಬಾಯಿಮಾತಿನ ಸಂಪ್ರದಾಯಗಳು ಯಾವಾಗದಿಂದ ಆರಂಭಿಸಿದವು, ಮತ್ತು ಅವುಗಳನ್ನು ಅವರು ಮೋಶೆಯ ಲಿಖಿತ ಧರ್ಮಶಾಸ್ತ್ರಕ್ಕಿಂತ ಮೇಲೇರಿಸಿದ್ದು ಹೇಗೆ? (ಬಿ) ಆ ಸಂಪ್ರದಾಯಗಳು ನಿಜವಾಗಿ ಆರಂಭಿಸಿದ್ದು ಯಾವಾಗ, ಮತ್ತು ಮೋಶೆಯ ಧರ್ಮಶಾಸ್ತ್ರದ ಮೇಲೆ ಯಾವ ಪರಿಣಾಮದೊಂದಿಗೆ?
15 ಇದರ ಕುರಿತು ಅವರ ಸಂಪ್ರದಾಯವು ಹೇಳಿದ್ದು: “ಮೋಶೆಯು ನಿಯಮ ಶಾಸ್ತ್ರವನ್ನು [ಪಾದಟಿಪ್ಪಣಿ, ‘ಬಾಯಿಮಾತಿನ ನಿಯಮ’] ಸೀನಾಯಿ ಬೆಟ್ಟದಲ್ಲಿ ಪಡೆದನು ಮತ್ತು ಅದನ್ನು ಯೆಹೋಶುವನಿಗೆ ಒಪ್ಪಿಸಿಕೊಟ್ಟನು, ಮತ್ತು ಯೆಹೋಶುವನು ಹಿರಿಯರಿಗೆ, ಮತ್ತು ಹಿರಿಯರು ಪ್ರವಾದಿಗಳಿಗೆ, ಮತ್ತು ಪ್ರವಾದಿಗಳು ಮಹಾ ಸಭಾಮಂದಿರದ ಪುರುಷರಿಗೆ ಒಪ್ಪಿಸಿಕೊಟ್ಟರು.” ಕಾಲಾನಂತರ, ಅವರ ಬಾಯಿಮಾತಿನ ನೇಮಗಳು ಲಿಖಿತ ಧರ್ಮಶಾಸ್ತ್ರಕ್ಕಿಂತಲೂ ಹೆಚ್ಚು ಮೇಲಕ್ಕೇರಿಸಲ್ಪಟ್ಟಿತು: [ಒಂದುವೇಳೆ] ಒಬ್ಬನು [ಲಿಖಿತ] ನಿಯಮದ ಮಾತುಗಳನ್ನು ಉಲ್ಲಂಘಿಸಿದರೆ ಅವನು ದಂಡನೀಯನಲ್ಲ,” ಆದರೆ “ಅವನು ಶಾಸ್ತ್ರಿಗಳ ಮಾತುಗಳಿಗೆ [ಬಾಯಿಮಾತಿನ ಸಂಪ್ರದಾಯಗಳಿಗೆ] ಏನನ್ನಾದರೂ ಕೂಡಿಸಿದಲ್ಲಿ ಅವನು ದಂಡನೀಯನು.” (ಮಿಶ್ನಾ) ಆವರ ಬಾಯಿಮಾತಿನ ಸಂಪ್ರದಾಯಗಳು ಸೀನಾಯಿಯಲ್ಲಿ ಆರಂಭವಾಗಲಿಲ್ಲ. ವಾಸ್ತವದಲ್ಲಿ, ಅವು ತೀವ್ರವಾಗಿ ಬೆಳೆಯುತ್ತಾ ಬಂದದ್ದು ಕ್ರಿಸ್ತನಿಗೆ ಮುಂಚಿನ ಎರಡು ಶತಮಾನಗಳಲ್ಲಿ. ಅವರು ಹೀಗೆ ಮೋಶೆಯ ನಿಯಮ ಶಾಸ್ತ್ರಕ್ಕೆ ಕೂಡಿಸಿದರು, ಅದರಿಂದ ತೆಗೆದೂ ಬಿಟ್ಟರು ಮತ್ತು ಹೀಗೆ, ಲಿಖಿತ ಶಾಸ್ತ್ರವನ್ನು ನಿರರ್ಥಕಗೊಳಿಸಿದರು.—ಧರ್ಮೋಪದೇಶಕಾಂಡ 4:2; 12:32, ಹೋಲಿಸಿ.
16. ದೇವರ ನೀತಿಯು ಮಾನವಕುಲಕ್ಕೆ ಲಭಿಸುವದು ಹೇಗೆ?
16 ದೇವರ ನೀತಿಯು ಲಭಿಸುವದು ಧರ್ಮಶಾಸ್ತ್ರದ ಮೂಲಕವಾಗಿ ಅಲ್ಲ, ಅದರ ಹೊರತಾಗಿಯೇ: “ಯಾಕಂದರೆ ಯಾವನಾದರೂ ನೇಮನಿಷ್ಟೆಗಳನ್ನುಸರಿಸಿ ದೇವರ ಸನ್ನಿಧಿಯಲ್ಲಿ ನೀತಿವಂತನೆಂದು ನಿರ್ಣಯಿಸಲ್ಪಡುವದಿಲ್ಲ. ಧರ್ಮಶಾಸ್ತ್ರದಿಂದ ಪಾಪದ ಅರುಹು ಉಂಟಾಗುತದ್ತಷ್ಟೆ. ಈಗಲಾದರೋ ದೇವರಿಂದ ದೊರಕುವ ನೀತಿಯು ಧರ್ಮಶಾಸ್ತ್ರ ನಿಯಮಗಳಿಲ್ಲದೇ ಪ್ರಕಟವಾಗಿದೆ. ಆದು ಮೋಶೆಯ ಧರ್ಮಶಾಸ್ತ್ರದಿಂದಲೂ ಪ್ರವಾದಿಗಳ ನುಡಿಗಳಿಂದಲೂ ಸಾಕ್ಷಿಗೊಂಡಿರುತ್ತದೆ. ದೇವರಿಂದಾಗುವ ನೀತಿಯು ಯಾವದೆಂದರೆ ಯೇಸುಕ್ರಿಸ್ತನನ್ನು ನಂಬುವದರಿಂದಲೇ.” (ರೋಮಾಪುರ 3:20-22) ಹೀಗೆ, ದೇವರ ನೀತಿಯು ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಮೂಲಕವಾಗಿ ಬರುತ್ತದೆ—ಇದು ಬಹಳವಾಗಿ “ಧರ್ಮ ಶಾಸ್ತ್ರದಿಂದಲೂ ಪ್ರವಾದಿಗಳ ನುಡಿಗಳಿಂದಲೂ ಸಾಕ್ಷಿಗೊಂಡಿರುತ್ತದೆ.” ಮೆಸ್ಸೀಯನ ಸಂಬಂಧವಾದ ಪ್ರವಾದನೆಗಳು ಯೇಸುವಿನಲ್ಲಿ ನೆರವೇರಿಕೆಯನ್ನು ಪಡೆದವು. ಆತನು ಧರ್ಮಶಾಸ್ತ್ರವನ್ನು ಸಹಾ ನೆರವೇರಿಸಿದನು; ಅದು ಆತನ ಯಾತನಾ ಕಂಭಕ್ಕೆ ಜಡಿಯಲ್ಪಟ್ಟೋ ಎಂಬಂತೆ ಇಲ್ಲದಾಗಿ ಹೋಯಿತು.—ಲೂಕ 24:25-27, 44-46; ಕೊಲೊಸ್ಸೆ 2:13, 14; ಇಬ್ರಿಯ 10:1.
17. ಅಪೊಸ್ತಲ ಪೌಲನಿಗನುಸಾರ, ಯೆಹೂದ್ಯರು ದೇವರ ನೀತಿಯನ್ನು ತಿಳಿಯಲು ತಪ್ಪಿದ್ದು ಹೇಗೆ?
17 ಆದಕಾರಣ, ನೀತಿಯನ್ನು ಹುಡುಕುವುದರಲ್ಲಿ ಯೆಹೂದ್ಯರ ಅಸಫಲತೆಯ ಕುರಿತು ಅಪೊಸ್ತಲ ಪೌಲನು ಬರೆದನು: “ದೇವರಲ್ಲಿ ಆಸಕ್ತರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿಕೊಡುತ್ತೇನೆ. ಆದರೂ ಅವರ ಆಸಕ್ತಿ ನಿಷ್ಕೃಷ್ಟ ಜ್ಞಾನಾನುಸಾರವಾದದ್ದಲ್ಲ. ಅವರು ದೇವರಿಂದ ದೊರಕುವ ನೀತಿಯನ್ನರಿಯದೆ ಸ್ವನೀತಿಯನ್ನೇ ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದದ್ದರಿಂದ ದೇವರ ನೀತಿಗೆ ಅಧೀನರಾಗಲಿಲ್ಲ. ನಂಬುವವರೆಲರ್ಲಿಗೆ ನೀತಿಯನ್ನು ದೊರಕಿಸಿರುವ ಕ್ರಿಸ್ತನಿಂದಲೇ ಕರ್ಮ ಮಾರ್ಗಕ್ಕೆ ಅಂತ್ಯವಾಯಿತು.” (ರೋಮಾಪುರ 10:2-4) ಪೌಲನು ಕ್ರಿಸ್ತ ಯೇಸುವಿನ ಕುರಿತಾಗಿಯೂ ಬರೆದದ್ದು: “ನಾವು ಆತನಲ್ಲಿ ದೇವರಿಗೆ ಸಮರ್ಪಕರಾದ ನೀತಿಸ್ವರೂಪಿಗಳಾಗುವಂತೆ ದೇವರು ಪಾಪ ಜ್ಞಾನವಿಲ್ಲದ ಆತನನ್ನು ನಮಗೋಸ್ಕರ ಪಾಪಸ್ವರೂಪಿಯಾಗ ಮಾಡಿದನು.”—2 ಕೊರಿಂಥ 5:21.
18. “ಕ್ರಿಸ್ತನು ಕಂಭಕ್ಕೆಹಾಕಲ್ಪಟ್ಟದನ್ನು” ಯೆಹೂದಿ ಸಂಪ್ರದಾಯವಾದಿಗಳು, ಗ್ರೀಕ್ ತತ್ವಜ್ಞಾನಿಗಳು ಮತ್ತು “ಕರಿಸಿಕೊಂಡವರು” ಹೇಗೆ ವೀಕ್ಷಿಸಿದರು?
18 ಮರಣಾಧೀನ ಮೆಸ್ಸೀಯನನ್ನು ಯೆಹೂದ್ಯರು ಒಬ್ಬ ನಿರ್ಬಲ ನಿಷ್ಪಯ್ರೋಜಕನಾಗಿ ವೀಕ್ಷಿಸಿದರು. ಗ್ರೀಕ್ ತತ್ವಜ್ಞಾನಿಗಳು ಅಂಥ ಒಬ್ಬ ಮೆಸ್ಸೀಯನು ತಿಳಿಗೇಡಿತನವೆಂದು ಜರೆದರು. ಆದಾಗ್ಯೂ, ಅದು ಪೌಲನು ಘೋಷಿಸಿದಂತೆಯೇ ಇದೆ: “ಯೆಹೂದ್ಯರು ಸೂಚಕ ಕಾರ್ಯಗಳನ್ನು ಕೇಳುತ್ತಾರೆ, ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ; ನಾವಾದರೋ ಕಂಭಕ್ಕೆ ಹಾಕಲ್ಪಟ್ಟವನಾದ ಕ್ರಿಸ್ತನನ್ನು ಪ್ರಚುರಪಡಿಸುತ್ತೇವೆ. ಇಂಥ ಕ್ರಿಸ್ತನ ಸಂಗತಿಯು ಯೆಹೂದ್ಯರಿಗೆ ವಿಘ್ನವೂ ಅನ್ಯ ಜನರಿಗೆ ಹುಚ್ಚು ಮಾತೂ ಅಗಿದೆ. ಆದರೆ ಕರಿಸಿಕೊಂಡವರು ಯೆಹೂದ್ಯರಾಗಲಿ ಗ್ರೀಕರಾಗಲಿ ಅವರಿಗೆ ಇಂಥವನು ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿರುವ ಕ್ರಿಸ್ತನೇ. ಲೋಕದವರು ಯಾವದನ್ನು ದೇವರಲ್ಲಿ ಬುದ್ಧಿಹೀನತೆಯೆಂದು ಎಣಿಸುತ್ತಾರೋ ಅದು ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಟವಾಗಿದೆ. ಅವರು ದೇವರಲ್ಲಿ ಯಾವದನ್ನು ಬಲಹೀನತೆಯೆಂದು ಎಣಿಸುತ್ತಾರೋ ಅದು ಮನುಷ್ಯರ ಬಲಕ್ಕಿಂತಲೂ ಬಲವುಳ್ಳದ್ದಾಗಿದೆ.” (1 ಕೊರಿಂಥ 1:22-25) ಕ್ರಿಸ್ತ ಯೇಸುವು ದೇವರ ಬಲ ಮತ್ತು ಜ್ಞಾನದ ಪ್ರದರ್ಶನೆಯಾಗಿದ್ದಾನೆ ಮತ್ತು ವಿಧೇಯ ಮಾನವ ಕುಲಕ್ಕೆ ನೀತಿಯನ್ನು ಮತ್ತು ನಿತ್ಯಜೀವವನ್ನು ದೊರಕಿಸುವ ಸಾಧನವಾಗಿದ್ದಾನೆ. “ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ. ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ.”—ಅಪೊಸ್ತಲರಕೃತ್ಯ 4:12.
19. ಹಿಂಬಾಲಿಸುವ ಲೇಖನವು ಏನನ್ನು ತೋರಿಸುವದು?
19 ನಾವು ನಾಶನವನ್ನು ಪಾರಾಗಬೇಕಾದರೆ ಮತ್ತು ನಿತ್ಯಜೀವವನ್ನು ಗಳಿಸಬೇಕಾದರೆ, ದೇವರ ರಾಜ್ಯವನ್ನು ಮತ್ತು ಆತನ ನೀತಿಯನ್ನು ಹುಡುಕುತ್ತಾ ಇರಬೇಕು ಎಂಬದನ್ನು ಹಿಂಬಾಲಿಸುವ ಲೇಖನ ತೋರಿಸುತ್ತದೆ. ಅದು ಯೇಸುವಿನ ಮಾತುಗಳಿಗೆ ಕಿವಿಗೊಡುವ ಮೂಲಕವಾಗಿ ಮಾತ್ರವಲ್ಲ ಅವನ್ನು ಮಾಡುವ ಮೂಲಕವಾಗಿಯೂ ನಡಿಸಲ್ಪಡಬೇಕು. (w90 10/1)
ಪುನರ್ವಿಮರ್ಶೆ ಪ್ರಶ್ನೆಗಳು
◻ ಯೆಹೂದ್ಯ ಧರ್ಮೀಯರು ತಮ್ಮ ಧರ್ಮಕಾರ್ಯಗಳನ್ನು, ಪ್ರಾರ್ಥನೆಗಳನ್ನು ಮತ್ತು ಉಪವಾಸಗಳನ್ನು ಏನಾಗಿ ಮಾರ್ಪಡಿಸಿದ್ದರು?
◻ ನಿಮ್ಮ ನಿಕ್ಷೇಪವನ್ನು ಕೂಡಿಸಿಡಲಿಕ್ಕೆ ಸುರಕ್ಷಿತ ಸ್ಥಳವೆಲ್ಲಿ?
◻ ನಮ್ಮ ಪ್ರಾಪಂಚಿಕ ಆವಶ್ಯಕತೆಗಳ ಕುರಿತು ಚಿಂತಿಸುವದನ್ನು ನಾವೇಕೆ ವರ್ಜಿಸಬೇಕು?
◻ ತಮ್ಮ ಬಾಯಿಮಾತಿನ ಸಂಪ್ರದಾಯಗಳ ಮೂಲದ ಕುರಿತು ಯಾವ ತಪ್ಪಾದ ವಾದವನ್ನು ಯೆಹೂದ್ಯರು ಮಾಡಿದ್ದರು?
◻ ಯಾವದರ ಮೂಲಕವಾಗಿ ದೇವರ ರಾಜ್ಯ ಮತ್ತು ಆತನ ನೀತಿಯು ಲಭಿಸುವುದು?
[ಪುಟ 16 ರಲ್ಲಿರುವ ಚಿತ್ರ]
ಜನರಿಂದ ನೋಡಲ್ಪಡುವಂತೆ ಫರಿಸಾಯರು ಬೀದಿಚೌಕದಲ್ಲಿ ನಿಂತು ಪ್ರಾರ್ಥನೆ ಮಾಡಲು ಬಯಸಿದ್ದರು