ಅಧ್ಯಾಯ 13
“ನಾನು ತಂದೆಯನ್ನು ಪ್ರೀತಿಸುತ್ತೇನೆ”
1, 2. ಯೇಸುವಿನೊಂದಿಗೆ ಅವನ ಅಪೊಸ್ತಲರು ಕಳೆದ ಕೊನೆಯ ಸಂಜೆಯ ಬಗ್ಗೆ ಅಪೊಸ್ತಲ ಯೋಹಾನನು ಏನನ್ನು ತಿಳಿಯಪಡಿಸುತ್ತಾನೆ?
ವೃದ್ಧ ವ್ಯಕ್ತಿಯೊಬ್ಬನು ತನ್ನ ಲೇಖನಿಯನ್ನು ಶಾಯಿಯಲ್ಲಿ ಅದ್ದುತ್ತಿದ್ದಾನೆ. ಅವನ ಮನದಲ್ಲಿ ಹಳೆಯ ನೆನಪುಗಳು ತೇಲಿಬರುತ್ತಿವೆ. ಅವನ ಹೆಸರು ಯೋಹಾನ ಎಂದಾಗಿದೆ. ಯೇಸು ಕ್ರಿಸ್ತನ ಅಪೊಸ್ತಲರಲ್ಲಿ ಈಗ ಜೀವಂತವಾಗಿರುವುದು ಇವನೊಬ್ಬನೇ. ಸುಮಾರು 100 ವರ್ಷ ಪ್ರಾಯದವನಾಗಿರುವ ಯೋಹಾನನು 60ಕ್ಕೂ ಹೆಚ್ಚು ವರ್ಷಗಳ ಹಿಂದಿನ ಒಂದು ಅವಿಸ್ಮರಣೀಯ ಸಂಜೆಯನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಅದು ಅವನೂ ಇತರ ಅಪೊಸ್ತಲರೂ ಯೇಸುವಿನ ಮರಣಕ್ಕೆ ಮುಂಚೆ ಅವನೊಂದಿಗೆ ಕಳೆದ ಕೊನೆಯ ಸಂಜೆಯಾಗಿತ್ತು. ದೇವರ ಪವಿತ್ರಾತ್ಮವು ಮಾರ್ಗದರ್ಶಿಸುತ್ತಿದ್ದುದರಿಂದ ಯೋಹಾನನು ಆ ಘಟನೆಗಳನ್ನು ನೆನಪಿಸಿಕೊಳ್ಳಲು ಮತ್ತು ವಿವರವಾಗಿ ಬರೆಯಲು ಶಕ್ತನಾಗುತ್ತಾನೆ.
2 ಆ ಸಂಜೆ ಯೇಸು, ತಾನು ಬೇಗನೆ ಮರಣಕ್ಕೊಳಗಾಗಲಿದ್ದೇನೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದನು. ಯೇಸು ತನ್ನನ್ನು ವೇದನಾಮಯ ಮರಣಕ್ಕೆ ಏಕೆ ಒಪ್ಪಿಸಿಕೊಡುತ್ತಿದ್ದಾನೆ ಎಂಬುದಕ್ಕೆ ಕಾರಣವನ್ನು ಯೋಹಾನನು ಮಾತ್ರ ಕೊಡುತ್ತಾನೆ. ಅವನು ಯೇಸುವಿನ ಈ ಮಾತುಗಳನ್ನು ಉಲ್ಲೇಖಿಸುತ್ತಾನೆ. “ನಾನು ತಂದೆಯನ್ನು ಪ್ರೀತಿಸುತ್ತೇನೆ ಎಂಬುದನ್ನು ಲೋಕವು ತಿಳಿಯುವಂತೆ, ತಂದೆಯು ನನಗೆ ಮಾಡಲು ಆಜ್ಞಾಪಿಸಿದ್ದನ್ನೇ ನಾನು ಮಾಡುತ್ತೇನೆ. ಏಳಿರಿ, ಇಲ್ಲಿಂದ ಹೋಗೋಣ.”—ಯೋಹಾನ 14:31.
3. ತನ್ನ ತಂದೆಯನ್ನು ಪ್ರೀತಿಸುತ್ತೇನೆಂಬುದನ್ನು ಯೇಸು ಹೇಗೆ ತೋರಿಸಿದನು?
3 “ನಾನು ತಂದೆಯನ್ನು ಪ್ರೀತಿಸುತ್ತೇನೆ.” ಯೇಸುವಿಗೆ ಬೇರಾವುದೂ ಇದರಷ್ಟು ಪ್ರಾಮುಖ್ಯವಾಗಿರಲಿಲ್ಲ. ಹಾಗಂತ, ಅವನೇನು ಈ ಪದಗಳನ್ನು ಆಗಾಗ ಪುನರುಚ್ಛರಿಸಲಿಲ್ಲ. ತಂದೆಯ ಕಡೆಗಿನ ಪ್ರೀತಿಯನ್ನು ಅಷ್ಟು ನೇರವಾಗಿ ಯೇಸು ವ್ಯಕ್ತಪಡಿಸಿರುವುದನ್ನು ನಾವು ಬೈಬಲ್ ದಾಖಲೆಯಲ್ಲಿ ಯೋಹಾನ 14:31ರಲ್ಲಿ ಮಾತ್ರವೇ ಕಂಡುಕೊಳ್ಳಬಹುದು. ಆದರೆ ಯೇಸು ತನ್ನ ಜೀವನರೀತಿಯ ಮೂಲಕ ಆ ಮಾತುಗಳು ಸತ್ಯವೆಂದು ರುಜುಪಡಿಸಿದನು. ಯೆಹೋವನ ಕಡೆಗೆ ಅವನಿಗಿದ್ದ ಪ್ರೀತಿ ಪ್ರತಿನಿತ್ಯವೂ ಕಾಣಸಿಗುತ್ತಿತ್ತು. ಯೇಸು ತೋರಿಸಿದ ಧೈರ್ಯ, ವಿಧೇಯತೆ, ತಾಳ್ಮೆ ಇವೆಲ್ಲವೂ ದೇವರ ಮೇಲೆ ಅವನಿಗಿದ್ದ ಪ್ರೀತಿಯ ಸಂಕೇತವಾಗಿತ್ತು. ಅವನ ಇಡೀ ಶುಶ್ರೂಷೆಯೇ ಈ ಪ್ರೀತಿಯಿಂದ ಪ್ರಚೋದಿಸಲ್ಪಟ್ಟಿತ್ತು.
4, 5. ಯಾವ ವಿಧದ ಪ್ರೀತಿಯನ್ನು ಬೈಬಲ್ ಉತ್ತೇಜಿಸುತ್ತದೆ? ಯೆಹೋವನ ಮೇಲೆ ಯೇಸುವಿಟ್ಟಿದ್ದ ಪ್ರೀತಿಯ ಕುರಿತು ಏನು ಹೇಳಬಹುದು?
4 ಪ್ರೀತಿ ತೋರಿಸುವ ವ್ಯಕ್ತಿಗಳು ದುರ್ಬಲರು ಎಂಬುದಾಗಿ ಕೆಲವರು ನೆನಸಬಹುದು. ಪ್ರೇಮಗೀತೆಗಳು, ಕಾವ್ಯಗಳು, ಅಷ್ಟೇ ಅಲ್ಲ, ಪ್ರಣಯಾತ್ಮಕ ಪ್ರೀತಿಯೊಂದಿಗೆ ಸಂಬಂಧಿಸಿರುವ ಚೆಲ್ಲಾಟದ ಬಗ್ಗೆಯೂ ಅವರು ಕೆಲವೊಮ್ಮೆ ಯೋಚಿಸಬಹುದು. ಬೈಬಲ್ ಸಹ ಪ್ರಣಯಾತ್ಮಕ ಪ್ರೀತಿಯ ಬಗ್ಗೆ ಮಾತಾಡುತ್ತದೆ. ಆದರೆ ಈಗ ಸಾಮಾನ್ಯವಾಗಿರುವ ಲೋಕದ ನೋಟಕ್ಕಿಂತ ವ್ಯತಿರಿಕ್ತವಾಗಿ ಅಂದರೆ ಹೆಚ್ಚು ಗೌರವಭರಿತವಾದ ರೀತಿಯಲ್ಲಿ ಅದು ಮಾತಾಡುತ್ತದೆ. (ಜ್ಞಾನೋಕ್ತಿ 5:15-21) ಆದರೂ ಅದು ಹೆಚ್ಚಾಗಿ ಮಾತಾಡುವುದು ಇನ್ನೊಂದು ವಿಧದ ಪ್ರೀತಿಯ ಕುರಿತು. ಆ ಪ್ರೀತಿಯು ಕೇವಲ ಭಾವೋದ್ರೇಕವಲ್ಲ ಅಥವಾ ಕ್ಷಣದಲ್ಲಿ ಮೂಡಿ ಮರೆಯಾಗುವ ಭಾವನೆಯೂ ಅಲ್ಲ, ಭಾವಶೂನ್ಯತೆಯೂ ಅಲ್ಲ. ಅದರಲ್ಲಿ ಹೃದಮನಗಳೆರಡೂ ಒಳಗೊಂಡಿವೆ. ಅಂಥ ಪ್ರೀತಿಯು ಹೃದಯದೊಳಗಿಂದ ಹೊರಹೊಮ್ಮುತ್ತದೆ, ಮಹೋನ್ನತ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿರುತ್ತದೆ ಹಾಗೂ ಭಕ್ತಿವರ್ಧಕ ಕ್ರಿಯೆಗಳಲ್ಲಿ ವ್ಯಕ್ತಪಡಿಸಲ್ಪಡುತ್ತದೆ. ಇದು ಖಂಡಿತ ಕ್ಷಣಮಾತ್ರವಿರುವ ಮೇಲುಮೇಲಿನ ಪ್ರೀತಿಯಲ್ಲ. ಏಕೆಂದರೆ, “ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ” ಎನ್ನುತ್ತದೆ ದೇವರ ವಾಕ್ಯ.—1 ಕೊರಿಂಥ 13:8.
5 ಯೆಹೋವನನ್ನು ಯಾರೂ ಯೇಸುವಿನಷ್ಟು ಪ್ರೀತಿಸಿಲ್ಲ. ದೇವರ ಆಜ್ಞೆಗಳಲ್ಲೇ ದೊಡ್ಡ ಆಜ್ಞೆಯ ಬಗ್ಗೆ ಯೇಸು ಹೇಳಿದ್ದು: “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಬಲದಿಂದಲೂ ಪ್ರೀತಿಸಬೇಕು.” ಯೇಸು ಸ್ವತಃ ತಾನು ನುಡಿದ ಈ ಮಾತುಗಳಿಗನುಸಾರ ಜೀವಿಸಿದನು. ಆ ವಿಷಯದಲ್ಲೂ ಅವನನ್ನು ಯಾರೂ ಮೀರಸಾಧ್ಯವಿಲ್ಲ. (ಮಾರ್ಕ 12:30) ಅಂಥ ಪ್ರೀತಿಯನ್ನು ಯೇಸು ಹೇಗೆ ಬೆಳೆಸಿಕೊಂಡನು? ಅವನು ಭೂಮಿಯಲ್ಲಿದ್ದಾಗ ದೇವರ ಕಡೆಗೆ ಗಾಢವಾದ ಪ್ರೀತಿಯನ್ನು ಹೇಗೆ ಇಟ್ಟುಕೊಂಡನು? ನಾವು ಹೇಗೆ ಅವನನ್ನು ಅನುಕರಿಸಬಲ್ಲೆವು?
ಯುಗಯುಗಗಳಿಂದ ನೆಲೆನಿಂತಿರುವ ಗಾಢವಾದ ಪ್ರೀತಿಯ ಬಂಧ
6, 7. ಜ್ಞಾನೋಕ್ತಿ 8:22-31 ದೇವರ ಮಗನ ಬಗ್ಗೆ ವಿವರಿಸುತ್ತದೆ ಎಂಬುದು ನಮಗೆ ಹೇಗೆ ಗೊತ್ತು?
6 ನೀವು ಮತ್ತು ನಿಮ್ಮ ಸ್ನೇಹಿತ ಎಂದಾದರೂ ಒಟ್ಟಿಗೆ ಕೆಲಸಮಾಡಿದ್ದೀರೋ? ಮತ್ತು ಅದರ ಫಲಿತಾಂಶವಾಗಿ ನೀವಿಬ್ಬರೂ ಹೆಚ್ಚು ಆಪ್ತರಾದದ್ದು ನಿಮ್ಮ ಅರಿವಿಗೆ ಬಂದಿದೆಯೋ? ಈ ಹಿತಕರ ಅನುಭವವು, ಯೆಹೋವನ ಮತ್ತು ಆತನ ಏಕೈಕಜಾತ ಪುತ್ರನ ನಡುವೆ ಬೆಸೆಯಲ್ಪಟ್ಟ ಪ್ರೀತಿಯ ಬಂಧದ ಬಗ್ಗೆ ನಿಮಗೆ ಸ್ವಲ್ಪ ಒಳನೋಟವನ್ನು ಕೊಡಬಹುದು. ನಾವು ಈಗಾಗಲೇ ಜ್ಞಾನೋಕ್ತಿ 8:30ನ್ನು ಅನೇಕ ಬಾರಿ ಉಲ್ಲೇಖಿಸಿದ್ದೇವೆ. ಆದರೂ ಈಗ ಅದನ್ನು ಅದರ ಪೂರ್ವಾಪರದ ಬೆಳಕಿನಲ್ಲಿ ಸೂಕ್ಷ್ಮವಾಗಿ ನೋಡೋಣ. 22ರಿಂದ 31ರ ವರೆಗಿನ ವಚನಗಳಲ್ಲಿ ವಿವೇಕವನ್ನು ವ್ಯಕ್ತಿಯಂತೆ ಚಿತ್ರಿಸಲಾಗಿರುವ ದೇವಪ್ರೇರಿತ ವಿವರಣೆಯನ್ನು ನಾವು ನೋಡುತ್ತೇವೆ. ಈ ಮಾತುಗಳು ದೇವರ ಮಗನಿಗೆ ಅನ್ವಯಿಸುತ್ತವೆ. ಅದು ನಮಗೆ ಹೇಗೆ ಗೊತ್ತು?
7 ವಚನ 22ರಲ್ಲಿ ವಿವೇಕವು ಹೇಳುವುದು: “ಯೆಹೋವನು ತನ್ನ ಸೃಷ್ಟಿಕ್ರಮದಲ್ಲಿ ಮೊದಲು ನನ್ನನ್ನು ನಿರ್ಮಿಸಿದನು; ಆತನ ಪುರಾತನಕಾರ್ಯಗಳಲ್ಲಿ ನಾನೇ ಪ್ರಥಮ.” ಇಲ್ಲಿ ಕೇವಲ ವಿವೇಕಕ್ಕಿಂತ ಹೆಚ್ಚಿನದ್ದು ಒಳಗೂಡಿರಬೇಕು. ಏಕೆಂದರೆ ವಿವೇಕವು ಎಂದೂ ‘ನಿರ್ಮಿಸಲ್ಪಟ್ಟಿಲ್ಲ.’ ಅದಕ್ಕೆ ಒಂದು ಆರಂಭ ಕೂಡ ಇಲ್ಲ. ಏಕೆಂದರೆ ಯೆಹೋವನು ಯಾವಾಗಲೂ ಅಸ್ತಿತ್ವದಲ್ಲಿದ್ದನು ಮತ್ತು ಆತನು ಯಾವಾಗಲೂ ವಿವೇಕಿಯಾಗಿದ್ದಾನೆ. (ಕೀರ್ತನೆ 90:2) ದೇವರ ಮಗನಾದರೋ, “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾಗಿದ್ದಾನೆ. ಅವನು ನಿರ್ಮಿಸಲ್ಪಟ್ಟನು ಅಂದರೆ ಸೃಷ್ಟಿಸಲ್ಪಟ್ಟನು. ಯೆಹೋವನ ಪುರಾತನಕಾರ್ಯಗಳಲ್ಲಿ ಪ್ರಥಮನು ಅವನೇ. (ಕೊಲೊಸ್ಸೆ 1:15) ಜ್ಞಾನೋಕ್ತಿಯಲ್ಲಿ ವಿವರಿಸಲಾಗಿರುವಂತೆ ಈ ಮಗನು ಭೂಮಿ ಹಾಗೂ ಆಕಾಶಮಂಡಲ ಸ್ಥಾಪಿಸಲ್ಪಡುವ ಮುಂಚೆಯೇ ಅಸ್ತಿತ್ವದಲ್ಲಿದ್ದನು. ಮತ್ತು ವಾಕ್ಯ ಇಲ್ಲವೇ ದೇವರ ವಕ್ತಾರನಾಗಿದ್ದ ಅವನು ಯೆಹೋವನ ವಿವೇಕದ ಪರಿಪೂರ್ಣ ಚಿತ್ರಣವಾಗಿದ್ದನು.—ಯೋಹಾನ 1:1.
8. ಭೂಮಿಗೆ ಬರುವ ಮೊದಲು ಮಗನು ಏನು ಮಾಡುತ್ತಿದ್ದನು? ಸೃಷ್ಟಿಯನ್ನು ನೋಡಿ ವಿಸ್ಮಯಪಡುವಾಗ ಯಾವ ವಿಷಯ ನಮ್ಮ ಮನಸ್ಸಿಗೆ ಬರುತ್ತದೆ?
8 ಭೂಮಿಗೆ ಬರುವುದಕ್ಕೂ ಮುಂಚೆ, ಅಷ್ಟೊಂದು ಸಮಯ ಮಗನು ಏನು ಮಾಡುತ್ತಿದ್ದನು? ದೇವರ ಬಳಿ “ಶಿಲ್ಪಿಯಾಗಿ” ಕೆಲಸ ಮಾಡುತ್ತಿದ್ದನು ಎಂಬದಾಗಿ 30ನೇ ವಚನ ತಿಳಿಸುತ್ತದೆ. ಹಾಗೆಂದರೆ ಏನು? ಕೊಲೊಸ್ಸೆ 1:16 ವಿವರಿಸುವುದು: “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಇರುವ . . . ಎಲ್ಲವುಗಳು, . . . ಅವನ ಮೂಲಕವೇ ಸೃಷ್ಟಿಸಲ್ಪಟ್ಟವು; ಅವನ ಮೂಲಕವೂ ಅವನಿಗಾಗಿಯೂ ಸೃಷ್ಟಿಸಲ್ಪಟ್ಟವು.” ಹಾಗಾದರೆ, ಸ್ವರ್ಗೀಯ ಕ್ಷೇತ್ರದಲ್ಲಿರುವ ಆತ್ಮಜೀವಿಗಳಿಂದ ಹಿಡಿದು ಅಗಾಧವಾದ ಭೌತಿಕ ವಿಶ್ವದ ತನಕ, ಅದ್ಭುತಕರವಾದ ವಿವಿಧ ಜಾತಿಯ ಸಸ್ಯ ಮತ್ತು ಪ್ರಾಣಿಗಳಿಂದ ಹಿಡಿದು ಭೂಸೃಷ್ಟಿಯಲ್ಲೇ ಶ್ರೇಷ್ಠನಾಗಿರುವ ಮಾನವನ ತನಕ, ಪ್ರತಿಯೊಂದನ್ನು ಸೃಷ್ಟಿಸಲು ಸೃಷ್ಟಿಕರ್ತನಾದ ಯೆಹೋವನು ಕುಶಲ ಶಿಲ್ಪಿಯಾದ ತನ್ನ ಮಗನನ್ನು ಬಳಸಿದನು. ಪರಸ್ಪರ ಹೊಂದಿಕೊಂಡು ಸಹಮತದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಮತ್ತು ಮಗನನ್ನು ಒಂದು ರೀತಿಯಲ್ಲಿ ನಾವು ಕಟ್ಟಡವಿನ್ಯಾಸಕನಿಗೂ ಅವನ ಕುಶಲ ವಿನ್ಯಾಸಗಳಿಗೆ ತಕ್ಕಂತೆ ಮನೆಕಟ್ಟಿಕೊಡುವ ಗೃಹನಿರ್ಮಾಪಕನಿಗೂ ಹೋಲಿಸಬಹುದು. ಸೃಷ್ಟಿಯ ಯಾವುದೇ ವೈಶಿಷ್ಟ್ಯವನ್ನು ನೋಡಿ ನಾವು ವಿಸ್ಮಿತರಾಗುವಾಗ, ವಾಸ್ತವದಲ್ಲಿ ನಾವು ಮಹಾ ವಿನ್ಯಾಸಕನಿಗೆ ಸ್ತುತಿ ಸಲ್ಲಿಸುತ್ತಿದ್ದೇವೆ. (ಕೀರ್ತನೆ 19:1) ಅದೇ ಸಮಯದಲ್ಲಿ, ಸೃಷ್ಟಿಕರ್ತ ಮತ್ತು ಆತನ ‘ಶಿಲ್ಪಿಯ’ ನಡುವೆ ದೀರ್ಘಕಾಲದಿಂದಿದ್ದ ಸಂತೋಷಭರಿತ ಸಹಯೋಗವು ಸಹ ನಮ್ಮ ಮನಸ್ಸಿಗೆ ಬರುತ್ತದೆ.
9, 10. (ಎ) ಯೆಹೋವನ ಮತ್ತು ಯೇಸುವಿನ ನಡುವೆಯಿದ್ದ ಆಪ್ತಬಂಧವನ್ನು ಯಾವುದು ಬಲಗೊಳಿಸಿತು? (ಬಿ) ನಿಮ್ಮ ಸ್ವರ್ಗೀಯ ತಂದೆಯೊಂದಿಗೆ ನಿಮಗಿರುವ ಆಪ್ತಬಂಧವನ್ನು ಯಾವುದು ಬಲಗೊಳಿಸಬಲ್ಲದು?
9 ಅಪರಿಪೂರ್ಣರಾದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಕೆಲಸಮಾಡುವಾಗ, ಪರಸ್ಪರ ಹೊಂದಿಕೊಂಡು ಹೋಗಲು ಕೆಲವೊಮ್ಮೆ ಅವರಿಗೆ ಕಷ್ಟವಾಗುತ್ತದೆ. ಆದರೆ ಯೆಹೋವನ ಮತ್ತು ಅವನ ಮಗನ ವಿಷಯದಲ್ಲಿ ಹಾಗಿಲ್ಲ! ಮಗನು ತಂದೆಯೊಂದಿಗೆ ಅನಂತಕಾಲದಿಂದ ಕೆಲಸಮಾಡುತ್ತಿದ್ದನು ಮತ್ತು “ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ” ಇದ್ದನು. (ಜ್ಞಾನೋಕ್ತಿ 8:30) ಹೌದು ತಂದೆಯೊಂದಿಗಿರಲು ಅವನು ಹರ್ಷಿಸಿದನು ಮತ್ತು ಅವರು ಪರಸ್ಪರ ಅನ್ಯೋನ್ಯವಾಗಿದ್ದರು. ಮಗನು ದೇವರ ಗುಣಗಳನ್ನು ಅನುಕರಿಸಲು ಕಲಿಯುತ್ತಾ ಕಲಿಯುತ್ತಾ ಸಹಜವಾಗಿಯೇ ತಂದೆಯ ಹಾಗಾದನು. ಹೀಗೆ ತಂದೆ ಮತ್ತು ಮಗನ ನಡುವಿನ ಆಪ್ತಬಾಂಧವ್ಯ ಇನ್ನಷ್ಟು ಗಾಢವಾದದ್ದರಲ್ಲಿ ಆಶ್ಚರ್ಯವಿಲ್ಲ! ಆದ್ದರಿಂದಲೇ ಅದನ್ನು ವಿಶ್ವದಲ್ಲೇ ಅತಿ ಹಳೆಯದಾದ ಹಾಗೂ ಗಾಢವಾದ ಪ್ರೀತಿಯ ಬಂಧವೆಂದು ಕರೆಯಲಾಗುತ್ತದೆ.
10 ಆದರೆ ಅದು ನಮಗೆ ಯಾವ ಅರ್ಥದಲ್ಲಿದೆ? ಯೆಹೋವನೊಂದಿಗೆ ಅಂಥ ಆಪ್ತಬಂಧವನ್ನು ಬೆಳೆಸಿಕೊಳ್ಳಲು ನಮಗೆ ಸಾಧ್ಯವಿಲ್ಲವೆಂದು ನೀವೆಣಿಸಬಹುದು. ಮಗನಿಗಿದ್ದ ಆ ಉನ್ನತ ಸ್ಥಾನ ನಮಗ್ಯಾರಿಗೂ ಇಲ್ಲ ಎಂಬ ವಿಚಾರ ಒಪ್ಪತಕ್ಕದ್ದೇ. ಹಾಗಿದ್ದರೂ ನಮಗೆ ಅಪ್ರತಿಮ ಅವಕಾಶವಿದೆ. ಯೇಸು ತಂದೆಯೊಂದಿಗೆ ಕೆಲಸಮಾಡುವ ಮೂಲಕ ಆತನಿಗೆ ಹತ್ತಿರವಾದನು ಎಂಬುದನ್ನು ನೆನಪಿಸಿಕೊಳ್ಳಿ. ತನ್ನ “ಜೊತೆಕೆಲಸಗಾರರಾಗಿ” ಸೇವೆಸಲ್ಲಿಸುವ ಅವಕಾಶವನ್ನು ಯೆಹೋವನು ನಮಗೆ ಪ್ರೀತಿಯಿಂದ ಕೊಟ್ಟಿದ್ದಾನೆ. (1 ಕೊರಿಂಥ 3:9) ಶುಶ್ರೂಷೆಯಲ್ಲಿ ನಾವು ಯೇಸುವಿನ ಮಾದರಿಯನ್ನು ಅನುಸರಿಸುತ್ತಿರುವಾಗ ನಾವು ದೇವರ ಜೊತೆಕೆಲಸಗಾರರು ಎಂಬದನ್ನು ಯಾವಾಗಲೂ ಮನಸ್ಸಿನಲ್ಲಿಡಬೇಕು. ಯೆಹೋವನೊಂದಿಗೆ ನಮ್ಮನ್ನು ಆಪ್ತಗೊಳಿಸುವ ಪ್ರೀತಿಯ ಬಂಧವು ಆಗ ಇನ್ನಷ್ಟು ಬಲಗೊಳ್ಳುತ್ತದೆ. ಇದಕ್ಕಿಂತ ದೊಡ್ಡ ಸುಯೋಗ ಬೇರೊಂದಿದೆಯೇ?
ಯೆಹೋವನ ಮೇಲಿಟ್ಟಿದ್ದ ಗಾಢ ಪ್ರೀತಿಯನ್ನು ಯೇಸು ಹೇಗೆ ಕಾಪಾಡಿಕೊಂಡನು?
11-13. (ಎ) ಪ್ರೀತಿಯನ್ನು ಸಜೀವವಾದ ವಿಷಯವಾಗಿ ಪರಿಗಣಿಸುವುದು ಸಹಾಯಕರವೇಕೆ? ಯೆಹೋವನ ಮೇಲೆ ಗಾಢವಾದ ಪ್ರೀತಿಯನ್ನು ಬಾಲಕನಾದ ಯೇಸು ಹೇಗೆ ಕಾಪಾಡಿಕೊಂಡನು? (ಬಿ) ಭೂಮಿಗೆ ಬರುವ ಮುಂಚೆ ಮತ್ತು ತದನಂತರ ಮಾನವನೋಪಾದಿ, ದೇವರ ಮಗನು ಹೇಗೆ ಯೆಹೋವನಿಂದ ಕಲಿಯುವುದರಲ್ಲಿ ಆಸಕ್ತಿ ತೋರಿಸಿದನು?
11 ನಮ್ಮ ಹೃದಯದಲ್ಲಿರುವ ಪ್ರೀತಿಯನ್ನು ಸಜೀವವಾದ ಒಂದು ವಿಷಯವಾಗಿ ಪರಿಗಣಿಸುವುದು ಅನೇಕ ವಿಧಗಳಲ್ಲಿ ಸಹಾಯಕರ. ಹೂಕುಂಡದಲ್ಲಿರುವ ಸುಂದರ ಗಿಡದಂತೆ, ಪ್ರೀತಿ ಬೆಳೆದು ಹಸನಾಗಬೇಕಾದರೆ ಅದಕ್ಕೆ ಪೋಷಣೆ ಹಾಗೂ ಆರೈಕೆ ಅಗತ್ಯ. ಪೋಷಿಸದಿದ್ದಲ್ಲಿ ಅದು ಸೊರಗಿ ಹೋಗಿ ಕ್ರಮೇಣ ಸಾಯುವುದು. ಯೆಹೋವನ ಮೇಲೆ ತನಗಿರುವ ಪ್ರೀತಿಯನ್ನು ಯೇಸು ಅಲ್ಪವೆಂದೆಣಿಸಲಿಲ್ಲ. ಭೂಮಿಯಲ್ಲಿದ್ದಾಗ ಆ ಪ್ರೀತಿಯನ್ನು ಗಾಢಗೊಳಿಸಿದನು ಮತ್ತು ಹಸನಾಗಿಸಿದನು. ಅದು ಹೇಗೆಂಬುದನ್ನು ನೋಡೋಣ.
12 ಬಾಲಕನಾದ ಯೇಸು ಯೆರೂಸಲೇಮಿನ ದೇವಾಲಯದಲ್ಲಿ ಮಾತಾಡಿದ ಘಟನೆಯನ್ನು ಪುನಃ ನೆನಪಿಸಿಕೊಳ್ಳಿ. ಚಿಂತಾಕ್ರಾಂತರಾಗಿದ್ದ ತನ್ನ ಹೆತ್ತವರಿಗೆ ಅವನು ಹೇಳಿದ ಈ ಮಾತುಗಳನ್ನು ಜ್ಞಾಪಕಕ್ಕೆ ತನ್ನಿ: “ನೀವು ನನ್ನನ್ನು ಹುಡುಕುತ್ತಾ ಹೋದದ್ದೇಕೆ? ನಾನು ನನ್ನ ತಂದೆಯ ಮನೆಯಲ್ಲಿರಬೇಕು ಎಂಬುದು ನಿಮಗೆ ತಿಳಿದಿರಲಿಲ್ಲವೊ?” (ಲೂಕ 2:49) ಚಿಕ್ಕ ಹುಡುಗನಾಗಿದ್ದ ಯೇಸುವಿಗೆ ಆಗ ತನ್ನ ಮಾನವಪೂರ್ವ ಅಸ್ತಿತ್ವದ ಬಗ್ಗೆ ಬಹುಶಃ ಏನೂ ನೆನಪಿದ್ದಿರಲಿಕ್ಕಿಲ್ಲ. ಆದರೂ ಅವನಿಗೆ ತನ್ನ ತಂದೆಯಾದ ಯೆಹೋವನ ಕಡೆಗೆ ಗಾಢ ಪ್ರೀತಿಯಿತ್ತು. ಮತ್ತು ಅಂಥ ಪ್ರೀತಿಯನ್ನು ಆರಾಧನೆಯ ಮೂಲಕ ವ್ಯಕ್ತಪಡಿಸಬಹುದೆಂದು ಅವನು ತಿಳಿದಿದ್ದನು. ಹಾಗಾಗಿ, ಯೇಸು ಭೂಮಿಯಲ್ಲಿ ಬೇರಾವುದೇ ಸ್ಥಳವನ್ನು, ತನ್ನ ತಂದೆಯ ಪವಿತ್ರಾಲಯದಷ್ಟು ಇಷ್ಟಪಟ್ಟಿರಲಿಲ್ಲ. ಅವನು ಸದಾ ಅಲ್ಲಿರಲು ಹಾತೊರೆಯುತ್ತಿದ್ದನು ಮತ್ತು ಅದನ್ನು ಬಿಟ್ಟಿರಲು ಬಯಸುತ್ತಿರಲಿಲ್ಲ. ಅಲ್ಲದೆ ಅಲ್ಲಿ ಅವನು ಕೇವಲ ಮೂಕಪ್ರೇಕ್ಷಕನಾಗಿರುತ್ತಿರಲಿಲ್ಲ. ಯೆಹೋವನ ಕುರಿತು ಕಲಿಯಲು ಮತ್ತು ತನಗೇನು ತಿಳಿದಿದೆಯೋ ಅದನ್ನು ಹೇಳಲು ಅವನ ಮನ ತುಡಿಯುತ್ತಿತ್ತು. ಅಂಥ ಅನಿಸಿಕೆಗಳು ಅವನಲ್ಲಿ, 12 ವರ್ಷ ಪ್ರಾಯದವನಾಗಿದ್ದಾಗಷ್ಟೇ ಆರಂಭವಾಗಿದ್ದಲ್ಲ ಅಥವಾ ಅಲ್ಲಿಗೇ ಅವು ಕೊನೆಗೊಳ್ಳಲಿಲ್ಲ.
13 ಸ್ವರ್ಗದಲ್ಲಿದ್ದಾಗ ಯೇಸು ಅತ್ಯಾಸಕ್ತಿಯಿಂದ ತನ್ನ ತಂದೆಯಿಂದ ಕಲಿತನು. ಮೆಸ್ಸೀಯನಾಗಿ ಅವನಿಗಿದ್ದ ಪಾತ್ರದ ಕುರಿತು ಯೆಹೋವನು ಮಗನಿಗೆ ವಿಶೇಷ ಶಿಕ್ಷಣವನ್ನು ನೀಡಿದನು ಎಂಬದನ್ನು ಯೆಶಾಯ 50:4-6ರಲ್ಲಿ ದಾಖಲಾಗಿರುವ ಪ್ರವಾದನೆಯು ತೋರಿಸಿಕೊಡುತ್ತದೆ. ಯೆಹೋವನ ಅಭಿಷಿಕ್ತನಿಗೆ ಕಷ್ಟಕೋಟಲೆಗಳು ಎದುರಾಗುವವು ಎಂಬುದನ್ನು ಆ ಶಿಕ್ಷಣದಲ್ಲಿ ಕಲಿಯಬೇಕಾಗಿ ಬಂತಾದರೂ ಮಗನ ಕಲಿಯುವ ಉತ್ಸಾಹವನ್ನು ಅದು ಕುಂದಿಸಲಿಲ್ಲ. ತದನಂತರ ಭೂಮಿಗೆ ಬಂದಾಗ ಮತ್ತು ವಯಸ್ಕನೋಪಾದಿ ಬೆಳೆಯುತ್ತಿದ್ದಾಗ, ಅಷ್ಟೇ ಉತ್ಸಾಹದಿಂದ ತನ್ನ ತಂದೆಯ ಆಲಯಕ್ಕೆ ಹೋಗುತ್ತಿದ್ದನು. ಅಲ್ಲಿನ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಿದ್ದುದು ಮಾತ್ರವಲ್ಲ, ಅಲ್ಲಿ ಬೋಧಿಸುತ್ತಿದ್ದನು ಸಹ. ಯೇಸು ದೇವಾಲಯದಲ್ಲಿ ಹಾಗೂ ಸಭಾಮಂದಿರದಲ್ಲಿ ತಪ್ಪದೇ ಹಾಜರಿರುತ್ತಿದ್ದನೆಂದು ಬೈಬಲ್ ವರದಿಸುತ್ತದೆ. (ಲೂಕ 4:16; 19:47) ಯೆಹೋವನ ಕಡೆಗೆ ನಮಗಿರುವ ಪ್ರೀತಿಯನ್ನು ಸಜೀವವಾಗಿಯೂ ಹಸನಾಗಿಯೂ ಇಡಲು ನಾವು ಬಯಸುವುದಾದರೆ, ನಾವು ಎಲ್ಲಿ ಯೆಹೋವನನ್ನು ಆರಾಧಿಸುತ್ತೇವೋ ಮತ್ತು ಆತನ ಕಡೆಗಿನ ಜ್ಞಾನವನ್ನು ಹಾಗೂ ಗಣ್ಯತೆಯನ್ನು ಹೆಚ್ಚಿಸಿಕೊಳ್ಳುತ್ತೇವೋ ಆ ಕ್ರೈಸ್ತ ಕೂಟಗಳಿಗೆ ಶ್ರದ್ಧಾಪೂರ್ವಕವಾಗಿ ಹಾಜರಾಗಬೇಕು.
14, 15. (ಎ) ಯೇಸು ಏಕಾಂತವಾಗಿರಲು ಬಯಸಿದ್ದೇಕೆ? (ಬಿ) ಯೇಸು ತನ್ನ ತಂದೆಗೆ ಮಾಡಿದ ಪ್ರಾರ್ಥನೆಗಳು ಆತ್ಮೀಯತೆ ಮತ್ತು ಗೌರವವನ್ನು ತೋರ್ಪಡಿಸಿದ್ದು ಹೇಗೆ?
14 ಕ್ರಮವಾಗಿ ಪ್ರಾರ್ಥಿಸುವ ಮೂಲಕವೂ ಯೇಸು ಯೆಹೋವನ ಮೇಲಿನ ತನ್ನ ಗಾಢ ಪ್ರೀತಿಯನ್ನು ಕಾಪಾಡಿಕೊಂಡನು. ಯೇಸು ಸ್ನೇಹಮಯಿ, ಸಹವಾಸಪ್ರಿಯ ವ್ಯಕ್ತಿಯಾಗಿದ್ದರೂ ಕೆಲವೊಮ್ಮೆ ಏಕಾಂತತೆಯನ್ನು ಇಷ್ಟಪಡುತ್ತಿದ್ದನು ಎಂಬುದು ಗಮನಾರ್ಹ. ಉದಾಹರಣೆಗೆ “ಅವನು ಅರಣ್ಯಕ್ಕೆ ಪ್ರತ್ಯೇಕವಾಗಿ ಹೋಗಿ ಪ್ರಾರ್ಥಿಸುವುದನ್ನು ಮುಂದುವರಿಸಿದನು” ಎಂದು ಲೂಕ 5:16 ಹೇಳುತ್ತದೆ. ಅದೇರೀತಿ ಮತ್ತಾಯ 14:23 ತಿಳಿಸುವುದು: “ಅವನು ಜನರ ಗುಂಪನ್ನು ಬೀಳ್ಕೊಟ್ಟ ಬಳಿಕ ಪ್ರಾರ್ಥಿಸಲಿಕ್ಕಾಗಿ ಏಕಾಂತವಾಗಿ ಬೆಟ್ಟಕ್ಕೆ ಹೋದನು. ಬಹಳ ಹೊತ್ತಾಗಿದ್ದರೂ ಅವನು ಒಬ್ಬನೇ ಅಲ್ಲಿದ್ದನು.” ಈ ಸನ್ನಿವೇಶಗಳಲ್ಲಿ ಮತ್ತು ಇನ್ನಿತರ ಸಂದರ್ಭಗಳಲ್ಲಿ ಯೇಸು ಏಕಾಂತ ಬಯಸಿದ್ದು, ಅವನು ಏಕಾಂತವಾಸಿ ಅಥವಾ ಇತರರ ಸಂಗವನ್ನು ಇಷ್ಟಪಡುತ್ತಿರಲಿಲ್ಲ ಎಂಬ ಕಾರಣದಿಂದಲ್ಲ. ಬದಲಾಗಿ ಪ್ರಾರ್ಥನೆಯಲ್ಲಿ ಯೆಹೋವನೊಂದಿಗೆ ಮುಕ್ತವಾಗಿ ಮಾತಾಡಲಿಕ್ಕಾಗಿ ಆತನೊಂದಿಗೆ ಏಕಾಂತವಾಗಿರಲು ಬಯಸಿದನು.
15 ಅವನು ಪ್ರಾರ್ಥಿಸುವಾಗ, “ಅಪ್ಪಾ, ತಂದೆಯೇ,” ಎಂಬ ಅಭಿವ್ಯಕ್ತಿಯನ್ನು ಹಲವು ಬಾರಿ ಉಪಯೋಗಿಸುತ್ತಿದ್ದನು. (ಮಾರ್ಕ 14:36) ಅಪ್ಪಾ, ಎಂಬ ಪದವು ತುಂಬ ಆತ್ಮೀಯತೆಯನ್ನು ಸೂಚಿಸುವ ಪದವಾಗಿದ್ದು, ಮಗುವೊಂದು ಕಲಿಯುವ ಮೊದಲ ಪದಗಳಲ್ಲಿ ಒಂದಾಗಿದೆ. ಆದರೂ ಇದು ಬಹಳ ಗೌರವಸೂಚಕ ಪದವಾಗಿದೆ. ಈ ಪದವು, ಪ್ರಿಯ ತಂದೆಯೊಂದಿಗೆ ಮಾತಾಡುತ್ತಿದ್ದಾಗ ಮಗನಿಗಿದ್ದ ಆತ್ಮೀಯತೆಯನ್ನು ಬಿಂಬಿಸಿತು. ಮಾತ್ರವಲ್ಲ, ತಂದೆಯೋಪಾದಿ ಯೆಹೋವನಿಗಿದ್ದ ಅಧಿಕಾರದ ಕಡೆಗೆ ಮಗನಿಗಿದ್ದ ಆಳವಾದ ಗೌರವವನ್ನೂ ತೋರ್ಪಡಿಸಿತು. ದಾಖಲಿಸಲ್ಪಟ್ಟ ಯೇಸುವಿನ ಪ್ರಾರ್ಥನೆಗಳೆಲ್ಲದರಲ್ಲಿ ಆತ್ಮೀಯತೆ ಮತ್ತು ಗೌರವ ಎರಡೂ ಬೆರೆತಿರುವುದನ್ನು ನಾವು ನೋಡುತ್ತೇವೆ. ಉದಾಹರಣೆಗೆ ಯೋಹಾನ 17ನೇ ಅಧ್ಯಾಯದಲ್ಲಿ, ತನ್ನ ಅಂತಿಮ ರಾತ್ರಿಯಂದು ಯೇಸು ಮಾಡಿದ ದೀರ್ಘವಾದ ಹಾಗೂ ಹೃತ್ಪೂರ್ವಕ ಪ್ರಾರ್ಥನೆಯನ್ನು ಅಪೊಸ್ತಲ ಯೋಹಾನನು ದಾಖಲಿಸಿದ್ದಾನೆ. ಆ ಪ್ರಾರ್ಥನೆಯನ್ನು ಕಲಿಯುವುದು ಖಂಡಿತ ನಮಗೆ ಪ್ರೇರೇಪಣೆಯಾಗಿರುವುದು. ಹಾಗಾಗಿ ನಾವದನ್ನು ಅನುಕರಿಸುವುದು ಅಗತ್ಯ. ಆದರೆ, ಯೇಸುವಿನ ಮಾತುಗಳನ್ನು ಪುನರುಚ್ಛರಿಸುವ ಮೂಲಕವಲ್ಲ, ಬದಲಾಗಿ ನಮಗೆ ಸಾಧ್ಯವಿರುವಷ್ಟು ಬಾರಿ ನಮ್ಮ ಸ್ವರ್ಗೀಯ ತಂದೆಯೊಂದಿಗೆ ಹೃದಯದಾಳದಿಂದ ಮಾತಾಡಲು ಮಾರ್ಗಗಳನ್ನು ಹುಡುಕುವ ಮೂಲಕವೇ. ಹಾಗೆ ಮಾಡುವಲ್ಲಿ ಆತನ ಮೇಲೆ ನಮಗಿರುವ ಪ್ರೀತಿಯು ಸಜೀವವಾಗಿಯೂ ಗಾಢವಾಗಿಯೂ ಉಳಿಯುವುದು.
16, 17. (ಎ) ತಂದೆಯ ಮೇಲಿನ ಪ್ರೀತಿಯನ್ನು ಯೇಸು ಮಾತುಗಳಲ್ಲಿ ವ್ಯಕ್ತಪಡಿಸಿದ್ದು ಹೇಗೆ? (ಬಿ) ತನ್ನ ತಂದೆಯ ಉದಾರ ಮನಸ್ಸನ್ನು ಯೇಸು ಹೇಗೆ ವರ್ಣಿಸಿದನು?
16 ನಾವು ಈ ಮುಂಚೆ ಗಮನಿಸಿದಂತೆ ಯೇಸು, “ನಾನು ತಂದೆಯನ್ನು ಪ್ರೀತಿಸುತ್ತೇನೆ” ಎಂಬ ಪದಗಳನ್ನೇ ಪುನಃ ಪುನಃ ಹೇಳಲಿಲ್ಲ. ಆದರೂ, ತಂದೆಯ ಮೇಲಿನ ಪ್ರೀತಿಯನ್ನು ಅನೇಕ ಬಾರಿ ಮಾತುಗಳಲ್ಲಿ ವ್ಯಕ್ತಪಡಿಸಿದನು. ಹೇಗೆ? “ತಂದೆಯೇ, ಸ್ವರ್ಗ ಭೂಲೋಕಗಳ ಒಡೆಯನೇ, . . . ನಾನು ನಿನ್ನನ್ನು ಬಹಿರಂಗವಾಗಿ ಕೊಂಡಾಡುತ್ತೇನೆ” ಎಂದು ಸ್ವತಃ ಯೇಸುವೇ ಹೇಳಿದನು. (ಮತ್ತಾಯ 11:25) ತಂದೆಯ ಕುರಿತು ತಿಳಿದುಕೊಳ್ಳಲು ಜನರಿಗೆ ಸಹಾಯ ಮಾಡುವ ಮೂಲಕ ಯೇಸು ತನ್ನ ತಂದೆಯನ್ನು ಸ್ತುತಿಸಲು ಇಷ್ಟಪಟ್ಟನು ಎಂಬುದನ್ನು ನಾವು ಈ ಪುಸ್ತಕದ 2ನೇ ಭಾಗವನ್ನು ಅಧ್ಯಯನ ಮಾಡುವಾಗ ನೋಡಿದೆವು. ಉದಾಹರಣೆಗೆ, ತನ್ನ ಮೊಂಡ ಮಗನನ್ನು ಕ್ಷಮಿಸಲು ಸಿದ್ಧನಿರುವ ತಂದೆಯ ಕುರಿತು ಯೇಸು ಹೇಳಿದನು ಮತ್ತು ಆ ತಂದೆಯನ್ನು ಯೆಹೋವನಿಗೆ ಹೋಲಿಸಿದನು. ಆ ತಂದೆ ತನ್ನ ಮಗನು ಪಶ್ಚಾತ್ತಾಪಪಟ್ಟು ಹಿಂದಿರುಗುವುದನ್ನು ಕಾತರದಿಂದ ಎದುರುನೋಡುತ್ತಾನೆ. ಅಂತೆಯೇ, ಮಗನು ದೂರದಲ್ಲಿ ಬರುತ್ತಿರುವುದನ್ನು ನೋಡಿ, ಓಡಿ ಹೋಗಿ ಅವನನ್ನು ಬಿಗಿದಪ್ಪಿಕೊಳ್ಳುತ್ತಾನೆ. (ಲೂಕ 15:20) ಯೆಹೋವನ ಪ್ರೀತಿ ಮತ್ತು ಕ್ಷಮೆಯ ಕುರಿತು ಯೇಸು ಕೊಟ್ಟ ಈ ವಿವರಣೆಯನ್ನು ಓದಿ ಯಾರ ಮನ ತಾನೇ ಕರಗದಿರಲು ಸಾಧ್ಯ ಹೇಳಿ?
17 ತನ್ನ ತಂದೆಯ ಉದಾರತೆಗಾಗಿ ಯೇಸು ಆತನನ್ನು ಅನೇಕಸಾರಿ ಸ್ತುತಿಸಿದನು. ನಮ್ಮ ಸ್ವರ್ಗೀಯ ತಂದೆ ನಮಗೆ ಅಗತ್ಯವಿರುವ ಪವಿತ್ರಾತ್ಮವನ್ನು ಕೊಡುತ್ತಾನೆ ಎಂಬುದರ ಬಗ್ಗೆ ನಾವೆಷ್ಟು ಖಾತ್ರಿಯಿಂದಿರಬಹುದು ಎಂಬುದನ್ನು ತೋರಿಸಲು ಅವನು ಅಪರಿಪೂರ್ಣ ಹೆತ್ತವರ ಉದಾಹರಣೆಯನ್ನು ಉಪಯೋಗಿಸಿದನು. (ಲೂಕ 11:13) ತನ್ನ ತಂದೆ ಉದಾರವಾಗಿ ಕೊಡುವ ನಿರೀಕ್ಷೆಯ ಕುರಿತೂ ಯೇಸು ಮಾತಾಡಿದನು. ಸ್ವರ್ಗದಲ್ಲಿ ತನ್ನ ತಂದೆಯ ಬಳಿ ತನಗೆ ಪುನಃ ಸಿಗಲಿದ್ದ ಸ್ಥಾನದ ಬಗ್ಗೆ ಯೇಸು ಉತ್ಸಾಹದಿಂದ ವಿವರಿಸಿದನು. (ಯೋಹಾನ 14:28; 17:5) ‘ಚಿಕ್ಕ ಹಿಂಡಿಗೆ,’ ಸ್ವರ್ಗದಲ್ಲಿ ಮೆಸ್ಸೀಯ ರಾಜನ ಆಡಳಿತದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯನ್ನು ಯೆಹೋವನು ಕೊಟ್ಟಿದ್ದಾನೆ ಎಂದು ಯೇಸು ತನ್ನ ಅನುಯಾಯಿಗಳಿಗೆ ತಿಳಿಸಿದನು. (ಲೂಕ 12:32; ಯೋಹಾನ 14:2) ಇನ್ನೇನು ಸಾಯಲಿದ್ದ ಅಪರಾಧಿಯೊಬ್ಬನಿಗೆ, ಪರದೈಸ್ ಜೀವನದ ನಿರೀಕ್ಷೆಯನ್ನು ತಿಳಿಸುವ ಮೂಲಕ ಯೇಸು ಸಂತೈಸಿದನು. (ಲೂಕ 23:43) ಈ ವಿಧಗಳಲ್ಲಿ ತನ್ನ ತಂದೆಯ ಮಹಾನ್ ಉದಾರತೆಯ ಬಗ್ಗೆ ಮಾತನಾಡಿದ್ದು, ಯೆಹೋವನಿಗಾಗಿರುವ ತನ್ನ ಗಾಢ ಪ್ರೀತಿಯನ್ನು ಕಾಪಾಡಿಕೊಳ್ಳುವಂತೆ ಯೇಸುವಿಗೆ ನಿಜವಾಗಿಯೂ ಸಹಾಯ ಮಾಡಿತು. ಯೆಹೋವನ ಬಗ್ಗೆ ಮತ್ತು ತನ್ನನ್ನು ಪ್ರೀತಿಸುವವರಿಗೆ ಆತನು ಕೊಡುವ ನಿರೀಕ್ಷೆಯ ಬಗ್ಗೆ ಮಾತನಾಡುವ ಮೂಲಕ ಯೆಹೋವನ ಮೇಲಿನ ತಮ್ಮ ಪ್ರೀತಿಯನ್ನು ಹಾಗೂ ನಂಬಿಕೆಯನ್ನು ಗಾಢಗೊಳಿಸಬಹುದೆಂದು ಕ್ರಿಸ್ತನ ಅನುಯಾಯಿಗಳಲ್ಲಿ ಅನೇಕರು ಕಂಡುಕೊಂಡಿದ್ದಾರೆ.
ಯೆಹೋವನ ಮೇಲೆ ಯೇಸುವಿಟ್ಟಿರುವ ಪ್ರೀತಿಯನ್ನು ನೀವು ಅನುಕರಿಸುವಿರೊ?
18. ನಾವು ಯೇಸುವನ್ನು ಹಿಂಬಾಲಿಸಬೇಕಾದ ಮಾರ್ಗಗಳಲ್ಲಿ ಮುಖ್ಯವಾದದ್ದು ಯಾವುದು? ಏಕೆ?
18 ನಾವು ಯೇಸುವನ್ನು ಹಿಂಬಾಲಿಸಬೇಕಾದ ಎಲ್ಲ ಮಾರ್ಗಗಳಲ್ಲಿ, ಯೆಹೋವನನ್ನು ಪೂರ್ಣ ಹೃದಯ, ಪ್ರಾಣ, ಮನಸ್ಸು ಮತ್ತು ಬಲದಿಂದ ಪ್ರೀತಿಸಬೇಕು ಎಂಬುದೇ ಮುಖ್ಯವಾದುದು. (ಲೂಕ 10:27) ಅಂಥ ಪ್ರೀತಿ ನಮ್ಮ ಭಾವನೆಗಳಲ್ಲಿದ್ದರೆ ಮಾತ್ರ ಸಾಲದು. ಕ್ರಿಯೆಗಳಲ್ಲೂ ತೋರಿಬರಬೇಕು. “ನಾನು ತಂದೆಯನ್ನು ಪ್ರೀತಿಸುತ್ತೇನೆ” ಎಂದು ಕೇವಲ ಹೇಳುವುದರಲ್ಲಷ್ಟೇ ಯೇಸು ತೃಪ್ತನಾಗಲಿಲ್ಲ. ಅಥವಾ ಅಂಥ ಬರೀ ಭಾವನೆಯನ್ನಷ್ಟೇ ಹೊಂದಿರಲಿಲ್ಲ. ಬದಲಾಗಿ ಅವನಂದದ್ದು: “ನಾನು ತಂದೆಯನ್ನು ಪ್ರೀತಿಸುತ್ತೇನೆ ಎಂಬುದನ್ನು ಲೋಕವು ತಿಳಿಯುವಂತೆ, ತಂದೆಯು ನನಗೆ ಮಾಡಲು ಆಜ್ಞಾಪಿಸಿದ್ದನ್ನೇ ನಾನು ಮಾಡುತ್ತೇನೆ.” (ಯೋಹಾನ 14:31) ಯಾವುದೇ ಮಾನವನು ಯೆಹೋವನಿಗೆ ನಿಸ್ವಾರ್ಥ ಪ್ರೀತಿ ತೋರಿಸಲಾರನು ಎಂದು ಸೈತಾನನು ಆರೋಪಿಸಿದನು. (ಯೋಬ 2:4, 5) ಸೈತಾನನ ಅಪನಿಂದೆಗೆ ಸಾಧ್ಯವಿರುವುದರಲ್ಲೇ ಉತ್ತಮ ಉತ್ತರ ನೀಡಲಿಕ್ಕಾಗಿ ಯೇಸು ಧೈರ್ಯದಿಂದ ಕ್ರಿಯೆಗೈದನು ಮತ್ತು ತನ್ನ ತಂದೆಯನ್ನು ತಾನೆಷ್ಟು ಪ್ರೀತಿಸುತ್ತೇನೆಂದು ಲೋಕಕ್ಕೆ ತೋರಿಸಿಕೊಟ್ಟನು. ಜೀವವನ್ನೇ ಅರ್ಪಿಸುವ ಮಟ್ಟಿಗೂ ವಿಧೇಯತೆ ತೋರಿಸಿದನು. ನೀವು ಯೇಸುವನ್ನು ಅನುಸರಿಸುವಿರೋ? ಯೆಹೋವ ದೇವರನ್ನು ನಿಜವಾಗಿಯೂ ಪ್ರೀತಿಸುತ್ತೀರೆಂದು ಲೋಕಕ್ಕೆ ತೋರಿಸುವಿರೋ?
19, 20. (ಎ) ಯಾವ ಪ್ರಮುಖ ಕಾರಣಗಳಿಗಾಗಿ ನಾವು ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಬಯಸುತ್ತೇವೆ? (ಬಿ) ನಮ್ಮ ವೈಯಕ್ತಿಕ ಅಧ್ಯಯನ, ಧ್ಯಾನ ಮತ್ತು ಪ್ರಾರ್ಥನೆಯನ್ನು ನಾವು ಹೇಗೆ ವೀಕ್ಷಿಸಬೇಕು?
19 ನಾವು ಆಧ್ಯಾತ್ಮಿಕವಾಗಿ ಆರೋಗ್ಯವಂತರಾಗಿರಬೇಕಾದರೆ ಯೆಹೋವನನ್ನು ಪ್ರೀತಿಸಲೇಬೇಕು. ಆ ನಮ್ಮ ಪ್ರೀತಿಯನ್ನು ಪೋಷಿಸಿ ಬಲಗೊಳಿಸಲಿಕ್ಕಾಗಿಯೇ ಯೆಹೋವನು ನಮಗೆ ಆರಾಧನಾ ಏರ್ಪಾಡನ್ನು ಒದಗಿಸಿದ್ದಾನೆ. ಕ್ರೈಸ್ತ ಕೂಟಗಳಲ್ಲಿ ಉಪಸ್ಥಿತರಿರುವಾಗ, ನಿಮ್ಮ ದೇವರನ್ನು ಆರಾಧಿಸಲಿಕ್ಕಾಗಿಯೇ ನೀವಲ್ಲಿದ್ದೀರಿ ಎಂಬದನ್ನು ನೆನಪಿನಲ್ಲಿಡಿ. ಹೃತ್ಪೂರ್ವಕ ಪ್ರಾರ್ಥನೆಯಲ್ಲಿ ಒಳಗೂಡುವುದು, ಸ್ತುತಿಗೀತೆಗಳನ್ನು ಹಾಡುವುದು, ಶ್ರದ್ಧೆಯಿಂದ ಕಿವಿಗೊಡುವುದು ಮತ್ತು ಹೇಳಿಕೆಗಳನ್ನು ಕೊಡುವುದು ಆ ಆರಾಧನೆಯ ವಿಭಿನ್ನ ಅಂಶಗಳಾಗಿವೆ. ಅಂಥ ಕೂಟಗಳು, ಜೊತೆ ಕ್ರೈಸ್ತರನ್ನು ಪ್ರೋತ್ಸಾಹಿಸಲು ಸಹ ಅವಕಾಶಗಳನ್ನು ಒದಗಿಸುತ್ತವೆ. (ಇಬ್ರಿಯ 10:24, 25) ಕ್ರೈಸ್ತ ಕೂಟಗಳಲ್ಲಿ ಕ್ರಮವಾಗಿ ಯೆಹೋವನನ್ನು ಆರಾಧಿಸುವುದು, ದೇವರ ಮೇಲಿನ ಪ್ರೀತಿಯನ್ನು ಇನ್ನಷ್ಟು ಬಲಗೊಳಿಸಲು ನಿಮಗೆ ಸಹಾಯ ಮಾಡುವುದು.
20 ಅದೇರೀತಿಯಲ್ಲಿ, ವೈಯಕ್ತಿಕ ಅಧ್ಯಯನ, ಧ್ಯಾನ ಮತ್ತು ಪ್ರಾರ್ಥನೆ ಮಾಡುವ ಮೂಲಕವೂ ದೇವರ ಮೇಲಿನ ನಮ್ಮ ಪ್ರೀತಿ ಬಲಗೊಳ್ಳುವುದು. ಇವುಗಳನ್ನು, ಯೆಹೋವನೊಟ್ಟಿಗೆ ಏಕಾಂತವಾಗಿರಲು ಸಹಾಯಕಗಳೆಂದು ನೆನಸಿ. ದೇವರ ಲಿಖಿತ ವಾಕ್ಯವನ್ನು ಅಧ್ಯಯನ ಮಾಡುವಾಗ ಮತ್ತು ಧ್ಯಾನಿಸುವಾಗ ವಾಸ್ತವದಲ್ಲಿ ಯೆಹೋವನೇ ನಿಮಗೆ ತನ್ನ ಯೋಚನೆಗಳನ್ನು ತಿಳಿಸುತ್ತಿದ್ದಾನೆ. ಪ್ರಾರ್ಥಿಸುವಾಗ ನೀವು ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿಡುತ್ತಿದ್ದೀರಿ. ಪ್ರಾರ್ಥನೆಯೆಂದರೆ, ಆವಶ್ಯಕತೆಗಳನ್ನು ಕೇಳಿಕೊಳ್ಳುವುದಷ್ಟೇ ಅಲ್ಲ ಎಂಬುದನ್ನು ಜ್ಞಾಪಕದಲ್ಲಿಡಿ. ಪ್ರಾರ್ಥನೆಯು, ನೀವು ಸ್ವೀಕರಿಸಿರುವ ಆಶೀರ್ವಾದಗಳಿಗಾಗಿ ಯೆಹೋವನಿಗೆ ಕೃತಜ್ಞತೆಯನ್ನು ಸಲ್ಲಿಸುವ ಮತ್ತು ಆತನ ಅದ್ಭುತಕರ ಕಾರ್ಯಗಳಿಗಾಗಿ ಸ್ತುತಿಸುವ ಅವಕಾಶ ಕೂಡ ಹೌದು. (ಕೀರ್ತನೆ 146:1) ಅಲ್ಲದೆ, ಆನಂದ ಮತ್ತು ಉತ್ಸಾಹದಿಂದ ಯೆಹೋವನನ್ನು ಬಹಿರಂಗವಾಗಿ ಸ್ತುತಿಸುವುದು ಯೆಹೋವನಿಗೆ ಕೃತಜ್ಞತೆ ಸೂಚಿಸುವ ಹಾಗೂ ನೀವಾತನನ್ನು ಪ್ರೀತಿಸುತ್ತೀರಿ ಎಂಬುದನ್ನು ತೋರಿಸುವ ಅತ್ಯುತ್ತಮ ವಿಧವಾಗಿದೆ.
21. ಯೆಹೋವನ ಮೇಲಿನ ಪ್ರೀತಿ ಎಷ್ಟು ಮುಖ್ಯವಾಗಿದೆ? ಮುಂಬರುವ ಅಧ್ಯಾಯಗಳಲ್ಲಿ ಏನನ್ನು ಪರಿಗಣಿಸಲಾಗುವುದು?
21 ದೇವರ ಮೇಲಿನ ಪ್ರೀತಿಯೇ ನಿಮ್ಮ ನಿತ್ಯ ಸಂತೋಷಕ್ಕೆ ಕೀಲಿಕೈ. ಆದಾಮಹವ್ವರ ಯಶಸ್ಸಿಗೆ ಅಗತ್ಯವಿದ್ದುದು ಈ ಪ್ರೀತಿಯೇ. ಆದರೆ ಅದನ್ನು ಬೆಳೆಸಿಕೊಳ್ಳಲು ಅವರು ವಿಫಲರಾದರು. ನಂಬಿಕೆಯ ಯಾವುದೇ ಪರೀಕ್ಷೆಯಲ್ಲಿ ತೇರ್ಗಡೆಹೊಂದಲು, ಯಾವುದೇ ಶೋಧನೆಯನ್ನು ತಳ್ಳಿಹಾಕಲು ಮತ್ತು ಯಾವುದೇ ಕಷ್ಟವನ್ನು ತಾಳಿಕೊಳ್ಳಲು ನಿಮಗೆ ಅಗತ್ಯವಿರುವ ಅತ್ಯಮೂಲ್ಯ ಸಂಗತಿ ಇದೇ. ಯೇಸುವಿನ ಹಿಂಬಾಲಕರಾಗಿರಲು ಇದು ಅತ್ಯಾವಶ್ಯಕ. ದೇವರ ಮೇಲಿನ ಪ್ರೀತಿಗೂ ಜೊತೆ ಮಾನವರ ಮೇಲಿನ ಪ್ರೀತಿಗೂ ಪರಸ್ಪರ ಸಂಬಂಧವಿದೆ. (1 ಯೋಹಾನ 4:20) ಮುಂಬರುವ ಅಧ್ಯಾಯಗಳಲ್ಲಿ, ಯೇಸು ಹೇಗೆ ಜನರಿಗೆ ಪ್ರೀತಿ ತೋರಿಸಿದನು ಎಂಬುದನ್ನು ನಾವು ನೋಡಲಿದ್ದೇವೆ. ಮುಂದಿನ ಅಧ್ಯಾಯದಲ್ಲಿ, ಯಾಕೆ ಅನೇಕರು ಯೇಸುವನ್ನು ಸ್ನೇಹಶೀಲ ವ್ಯಕ್ತಿಯೆಂದು ಪರಿಗಣಿಸಿದರು ಎಂಬ ವಿಷಯವನ್ನು ನೋಡೋಣ.