ಅಧ್ಯಯನ ಲೇಖನ 5
ನಾವು ನಿಮ್ಮ ಜೊತೆ ಬರುತ್ತೇವೆ
“ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ.”—ಜೆಕ. 8:23.
ಗೀತೆ 146 ನನಗೂ ಮಾಡಿದಂತೆ
ಕಿರುನೋಟa
1. ನಮ್ಮೀ ಕಾಲದಲ್ಲಿ ಏನಾಗುತ್ತೆ ಎಂದು ಯೆಹೋವನು ಹೇಳಿದ್ದಾನೆ?
ಯೆಹೋವನು ನಮ್ಮೀ ಕಾಲದ ಬಗ್ಗೆ ಮುಂಚೆಯೇ ಹೀಗೆ ಹೇಳಿದನು: “ವಿವಿಧಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು—ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.” (ಜೆಕ. 8:23) ಇಲ್ಲಿ ‘ಯೆಹೂದ್ಯನು’ ಪವಿತ್ರಾತ್ಮದಿಂದ ಅಭಿಷಿಕ್ತರಾದವ್ರನ್ನು ಸೂಚಿಸುತ್ತಾನೆ. ಈ ಅಭಿಷಿಕ್ತರನ್ನ ‘ದೇವರ ಇಸ್ರಾಯೇಲ್ಯರು’ ಎಂದು ಸಹ ಕರೆಯಲಾಗಿದೆ. (ಗಲಾ. 6:16) “ಹತ್ತು ಜನರು” ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯಿರುವ ಜನ್ರನ್ನು ಸೂಚಿಸುತ್ತಾರೆ. ಅವ್ರಿಗೆ ಅಭಿಷಿಕ್ತರ ಗುಂಪಿನ ಮೇಲೆ ಯೆಹೋವನ ಆಶೀರ್ವಾದವಿದೆ ಅಂತ ಗೊತ್ತಿದೆ ಮತ್ತು ಅಭಿಷಿಕ್ತರೊಂದಿಗೆ ಯೆಹೋವನನ್ನು ಆರಾಧಿಸುವುದು ಒಂದು ಹೆಮ್ಮೆಯ ವಿಷಯ ಎಂದವ್ರು ಭಾವಿಸುತ್ತಾರೆ.
2. “ಹತ್ತು ಜನರು” “ನಾವು ನಿಮ್ಮೊಂದಿಗೆ ಬರುವೆವು” ಎಂಬ ಮಾತಿನ ಪ್ರಕಾರ ಹೇಗೆ ನಡಕೊಳ್ಳುತ್ತಾರೆ?
2 ಭೂಮಿಯಲ್ಲಿ ಜೀವಿಸುವ ನಿರೀಕ್ಷೆಯಿರುವವ್ರಿಗೆ ಇವತ್ತು ಭೂಮಿಯಲ್ಲಿ ಉಳಿದಿರುವ ಅಭಿಷಿಕ್ತರಲ್ಲಿb ಪ್ರತಿಯೊಬ್ಬರ ಹೆಸರು ಗೊತ್ತಿರಲಿಕ್ಕಿಲ್ಲ. ಆದ್ರೂ ಅವ್ರು “ನಾವು ನಿಮ್ಮೊಂದಿಗೆ ಬರುವೆವು”ಎಂಬ ಮಾತಿನ ಪ್ರಕಾರ ನಡಕೊಳ್ಳೋಕಂತೂ ಆಗುತ್ತೆ. ಹೇಗೆ? “ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು—ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು” ಅಂತ ಬೈಬಲ್ ಹೇಳುತ್ತೆ. ಈ ವಚನದಲ್ಲಿ ಒಬ್ಬ ಯೆಹೂದ್ಯನ ಬಗ್ಗೆ ತಿಳಿಸಲಾಗಿದೆ. ಆದ್ರೆ “ನಿಮ್ಮೊಂದಿಗೆ,” “ನಿಮ್ಮ” ಎಂಬ ಪದಗಳು ಒಬ್ಬನಿಗಿಂತ ಹೆಚ್ಚು ಜನ್ರನ್ನು ಸೂಚಿಸುತ್ತದೆ. ಹಾಗಾದ್ರೆ ‘ಯೆಹೂದ್ಯನೊಬ್ಬನು’ ಎಂಬ ಪದ ಬರೀ ಒಬ್ಬ ವ್ಯಕ್ತಿಗೆ ಸೂಚಿಸಲ್ಲ, ಬದಲಿಗೆ ಅಭಿಷಿಕ್ತರ ಇಡೀ ಗುಂಪಿಗೆ ಸೂಚಿಸುತ್ತದೆ. ಅಭಿಷಿಕ್ತರಲ್ಲದವ್ರು ಅಭಿಷಿಕ್ತರೊಂದಿಗೆ ಸೇರಿ ಯೆಹೋವನನ್ನು ಆರಾಧಿಸುತ್ತಾರೆ. ಆದ್ರೆ ಅವ್ರು ಅಭಿಷಿಕ್ತರನ್ನು ತಮ್ಮ ನಾಯಕರು ಅಂತ ಭಾವಿಸಲ್ಲ. ಏಕೆಂದ್ರೆ ಯೇಸು ಒಬ್ಬನೇ ತಮ್ಮ ನಾಯಕನು ಅಂತ ಅವ್ರು ಅರ್ಥಮಾಡಿಕೊಂಡಿದ್ದಾರೆ.—ಮತ್ತಾ. 23:10.
3. ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?
3 ಇಂದು ದೇವಜನ್ರ ಗುಂಪಿನಲ್ಲಿ ಅಭಿಷಿಕ್ತರು ಕೂಡ ಇರೋದ್ರಿಂದ ಕೆಲವ್ರಿಗೆ ಈ ಪ್ರಶ್ನೆಗಳು ಬರಬಹುದು. (1) ಅಭಿಷಿಕ್ತರಿಗೆ ತಮ್ಮ ಬಗ್ಗೆ ಯಾವ ಮನೋಭಾವ ಇರಬೇಕು? (2) ಸ್ಮರಣೆ ಸಮಯದಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ತೆಗೆದುಕೊಳ್ಳುವವ್ರ ಜೊತೆ ನಾವು ಹೇಗೆ ನಡ್ಕೋಬೇಕು? (3) ರೊಟ್ಟಿ-ದ್ರಾಕ್ಷಾಮದ್ಯ ತಗೊಳ್ಳುವವರ ಸಂಖ್ಯೆ ಹೆಚ್ಚಾಗೋದಾದ್ರೆ ನಾವು ಚಿಂತೆ ಮಾಡಬೇಕಾ? ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ತಿಳಿಯಲಿದ್ದೇವೆ.
ಅಭಿಷಿಕ್ತರಿಗೆ ತಮ್ಮ ಬಗ್ಗೆ ಯಾವ ಮನೋಭಾವ ಇರಬೇಕು?
4. ಒಂದನೇ ಕೊರಿಂಥ 11:27-29 ರಲ್ಲಿರುವ ಯಾವ ಎಚ್ಚರಿಕೆಯನ್ನು ಅಭಿಷಿಕ್ತರು ಗಂಭೀರವಾಗಿ ತಗೊಳ್ಳಬೇಕು ಮತ್ತು ಯಾಕೆ?
4 ಅಭಿಷಿಕ್ತರು 1 ಕೊರಿಂಥ 11:27-29 ರಲ್ಲಿರುವ ಎಚ್ಚರಿಕೆಯನ್ನು ಗಂಭೀರವಾಗಿ ತಗೊಳ್ಳಬೇಕು. (ಓದಿ.) ಅಭಿಷಿಕ್ತನೊಬ್ಬನು ಸ್ಮರಣೆಯ ಸಮಯದಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು “ಅಯೋಗ್ಯವಾಗಿ” ಹೇಗೆ ತಗೊಂಡುಬಿಡಬಹುದು? ಅವನು ಯೆಹೋವನ ನಿಯಮಗಳಿಗೆ ವಿಧೇಯನಾಗದೆ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ತಗೊಳ್ಳೋದಾದ್ರೆ “ಅಯೋಗ್ಯವಾಗಿ” ತಗೊಂಡ ಹಾಗಾಗುತ್ತೆ. (ಇಬ್ರಿ. 6:4-6; 10:26-29) “ಕ್ರಿಸ್ತ ಯೇಸುವಿನ ಮೂಲಕ ದೇವರು ಕೊಡುವ ಮೇಲಣ ಕರೆಯ ಬಹುಮಾನ” ಪಡೆಯಬೇಕೆಂದ್ರೆ ತಾವು ಕೊನೆಯವರೆಗೆ ನಂಬಿಗಸ್ತರಾಗಿರಬೇಕೆಂದು ಅಭಿಷಿಕ್ತರು ಅರ್ಥಮಾಡಿಕೊಳ್ಳಬೇಕು.—ಫಿಲಿ. 3:13-16.
5. ಅಭಿಷಿಕ್ತರಿಗೆ ತಮ್ಮ ಬಗ್ಗೆ ಯಾವ ಮನೋಭಾವ ಇರಬೇಕು?
5 ಪವಿತ್ರಾತ್ಮವು ಯೆಹೋವನ ಸೇವಕರಿಗೆ ಅಹಂಕಾರಿಗಳಾಗಿರದೆ ದೀನರಾಗಿರಲು ಸಹಾಯಮಾಡುತ್ತದೆ. (ಎಫೆ. 4:1-3; ಕೊಲೊ. 3:10, 12) ಆದ್ರಿಂದ ಅಭಿಷಿಕ್ತರು ಬೇರೆಲ್ಲರಿಗಿಂತ ತಾವೇ ಶ್ರೇಷ್ಠರು ಎಂದು ನೆನಸೋದಿಲ್ಲ. ಯೆಹೋವನು ಬೇರೆ ಸೇವಕರಿಗಿಂತ ತಮಗೆ ಹೆಚ್ಚು ಪವಿತ್ರಾತ್ಮ ಕೊಡುವುದಿಲ್ಲವೆಂದು ಅವ್ರಿಗೆ ಗೊತ್ತಿದೆ. ಬೈಬಲ್ ಸತ್ಯಗಳು ಬೇರೆಯವ್ರಿಗಿಂತ ತಮಗೆ ಹೆಚ್ಚು ಚೆನ್ನಾಗಿ ಅರ್ಥ ಆಗುತ್ತದೆ ಎಂಬ ಭಾವನೆನೂ ಅವ್ರಿಗಿಲ್ಲ. ಅವ್ರು ಬೇರೆ ಯಾರಿಗೂ, ‘ನೀವು ಅಭಿಷಿಕ್ತರು, ಸ್ಮರಣೆ ಸಮಯದಲ್ಲಿ ರೊಟ್ಟಿ-ದ್ರಾಕ್ಷಾಮದ್ಯವನ್ನು ತಗೊಳ್ಳಬೇಕು’ ಅಂತ ಯಾವತ್ತೂ ಹೇಳಲ್ಲ. ಏಕೆಂದ್ರೆ ಸ್ವರ್ಗಕ್ಕೆ ಹೋಗಲು ಆಮಂತ್ರಿಸೋದು ಯೆಹೋವನು ಮಾತ್ರ ಎಂದವ್ರು ದೀನತೆಯಿಂದ ಒಪ್ಪಿಕೊಳ್ಳುತ್ತಾರೆ.
6. ಒಂದನೇ ಕೊರಿಂಥ 4:7, 8 ರ ಪ್ರಕಾರ ಅಭಿಷಿಕ್ತ ಕ್ರೈಸ್ತರು ಹೇಗೆ ನಡಕೊಳ್ಳಬೇಕು?
6 ಅಭಿಷಿಕ್ತರು ತಮಗೆ ಸ್ವರ್ಗಕ್ಕೆ ಹೋಗುವ ಆಮಂತ್ರಣ ಸಿಕ್ಕಿರುವುದು ಗೌರವ ಅಂತ ನೆನಸೋದಾದ್ರೂ, ಬೇರೆಯವ್ರು ತಮ್ಮನ್ನ ವಿಶೇಷವಾಗಿ ನೋಡಬೇಕು ಅಂತ ಬಯಸಲ್ಲ. (ಫಿಲಿ. 2:2, 3) ಯೆಹೋವನು ತಮ್ಮನ್ನು ಅಭಿಷೇಕಿಸಿದಾಗ ಅದನ್ನ ಎಲ್ರಿಗೂ ಗೊತ್ತಾಗೋ ರೀತಿಯಲ್ಲಿ ಮಾಡ್ಲಿಲ್ಲ ಅಂತ ಅವ್ರಿಗೆ ಗೊತ್ತು. ಹಾಗಾಗಿ ತಾವು ಅಭಿಷಿಕ್ತರೆಂದು ಬೇರೆಯವ್ರು ಕೂಡಲೇ ನಂಬದಿದ್ದರೆ ಅವ್ರಿಗೆ ಆಶ್ಚರ್ಯವಾಗೋದಿಲ್ಲ. ದೇವರು ತನಗೆ ವಿಶೇಷ ಜವಾಬ್ದಾರಿ ಕೊಟ್ಟಿದ್ದಾನೆಂದು ಯಾರಾದ್ರೂ ಹೇಳಿಕೊಂಡ್ರೆ ತಕ್ಷಣ ನಂಬಿಬಿಡಬಾರದೆಂದು ಬೈಬಲೇ ಹೇಳುತ್ತದೆ ಅನ್ನೋದನ್ನ ಆ ಅಭಿಷಿಕ್ತರು ಮನಸ್ಸಿನಲ್ಲಿಡುತ್ತಾರೆ. (ಪ್ರಕ. 2:2) ಬೇರೆಯವ್ರು ತಮಗೆ ವಿಶೇಷ ಗಮನ ಕೊಡಬೇಕು ಅಂತ ಅವ್ರು ಬಯಸದಿರೋ ಕಾರಣ ಸಿಕ್ಕಸಿಕ್ಕವರಿಗೆಲ್ಲಾ ‘ನಾನು ಅಭಿಷಿಕ್ತನು’ ಅಂತ ಹೇಳಿಕೊಂಡು ಹೋಗೋದಿಲ್ಲ. ಅಷ್ಟೇ ಅಲ್ಲ, ತಮ್ಮ ನಿರೀಕ್ಷೆಯ ಬಗ್ಗೆ ಕೊಚ್ಚಿಕೊಳ್ಳಲ್ಲ.—1 ಕೊರಿಂಥ 4:7, 8 ಓದಿ.
7. ಅಭಿಷಿಕ್ತರು ಏನು ಮಾಡಬಾರದು ಮತ್ತು ಯಾಕೆ?
7 ಅಭಿಷಿಕ್ತರು ಬರೀ ಅಭಿಷಿಕ್ತರ ಜೊತೆ ಸಮಯ ಕಳೀಬೇಕು ಅಂತ ನೆನಸಲ್ಲ. ಅಥವಾ ತಮ್ಮದೇ ಒಂದು ಸಂಘವಿದೆಯೋ ಅನ್ನೋ ರೀತಿ ಆಡಲ್ಲ. ಅವ್ರು ತಾವು ಅಭಿಷಿಕ್ತರಾದ ಅನುಭವವನ್ನು ಹಂಚಿಕೊಳ್ಳಲಿಕ್ಕೋಸ್ಕರ ಬೇರೆ ಅಭಿಷಿಕ್ತರನ್ನು ಹುಡುಕಿಕೊಂಡು ಹೋಗೋದಿಲ್ಲ. ಇಲ್ಲವೇ ಬೈಬಲಿನ ಅಧ್ಯಯನ ಮಾಡಲು ತಮ್ಮದೇ ಆದ ಗುಂಪನ್ನು ಕಟ್ಟಿಕೊಳ್ಳೋದಿಲ್ಲ. (ಗಲಾ. 1:15-17) ಅವ್ರು ಇದೆಲ್ಲಾ ಮಾಡಿದ್ರೆ ಸಭೆಯಲ್ಲಿ ಐಕ್ಯತೆ ಇರೋದಿಲ್ಲ. ಅಷ್ಟೇ ಅಲ್ಲ ದೇವಜನ್ರು ಶಾಂತಿ ಮತ್ತು ಐಕ್ಯತೆಯಿಂದಿರಲಿಕ್ಕೆ ಸಹಾಯ ಮಾಡುವ ಪವಿತ್ರಾತ್ಮದ ವಿರುದ್ಧ ಕೆಲಸಮಾಡಿದಂತೆ ಆಗುತ್ತೆ.—ರೋಮ. 16:17, 18.
ಅಭಿಷಿಕ್ತರ ಜೊತೆ ಹೇಗೆ ನಡ್ಕೋಬೇಕು?
8. ಅಭಿಷಿಕ್ತರ ಜೊತೆ ನಾವು ಹೇಗೆ ನಡಕೊಳ್ಳುತ್ತೇವೆ ಅನ್ನೋದ್ರ ಬಗ್ಗೆ ಯಾಕೆ ಜಾಗ್ರತೆ ವಹಿಸಬೇಕು? (ಪಾದಟಿಪ್ಪಣಿ ಸಹ ನೋಡಿ.)
8 ನಾವು ಅಭಿಷಿಕ್ತ ಸಹೋದರ-ಸಹೋದರಿಯರ ಜೊತೆ ಹೇಗೆ ನಡ್ಕೋಬೇಕು? ಒಬ್ಬ ವ್ಯಕ್ತಿ ಮೇಲೆ ಅತಿಯಾದ ಅಭಿಮಾನವಿರೋದು ತಪ್ಪು. ಅವನು ಕ್ರಿಸ್ತನ ಅಭಿಷಿಕ್ತ ಸಹೋದರನಾಗಿದ್ರೂ ಅಷ್ಟೇ. (ಮತ್ತಾ. 23:8-12) ಬೈಬಲ್ ನಮಗೆ, ‘ಹಿರಿಯರ ನಂಬಿಕೆಯನ್ನು ಅನುಕರಿಸಬೇಕು’ ಅಂತ ಹೇಳುತ್ತೆ. ಆದ್ರೆ ಯಾವುದೇ ಒಬ್ಬ ಮನುಷ್ಯನನ್ನು ನಮ್ಮ ನಾಯಕನನ್ನಾಗಿ ಮಾಡಿಕೊಳ್ಳಬಹುದು ಅಂತ ಹೇಳಲ್ಲ. (ಇಬ್ರಿ. 13:7) ಕೆಲವ್ರು ‘ಇಮ್ಮಡಿಯಾದ ಗೌರವಕ್ಕೆ ಯೋಗ್ಯರಾದವರು’ ಎಂದು ಬೈಬಲ್ ಹೇಳುತ್ತೆ. ಅವ್ರು ಅಭಿಷಿಕ್ತರಾಗಿರೋ ಕಾರಣದಿಂದಲ್ಲ ಬದಲಿಗೆ, ‘ಒಳ್ಳೇ ರೀತಿಯಲ್ಲಿ ಅಧ್ಯಕ್ಷತೆ ವಹಿಸುತ್ತಿರೋದ್ರಿಂದ’ ಮತ್ತು ‘ಮಾತಾಡುವುದರಲ್ಲಿಯೂ ಬೋಧಿಸುವುದರಲ್ಲಿಯೂ ಶ್ರಮಪಟ್ಟು ಕೆಲಸ ಮಾಡುತ್ತಿರೋದ್ರಿಂದ’ ಇಂಥ ಗೌರವ ಕೊಡಿ ಅಂಥ ಹೇಳಲಾಗಿದೆ. (1 ತಿಮೊ. 5:17) ನಾವು ಅಭಿಷಿಕ್ತರನ್ನು ಮಾತುಮಾತಿಗೂ ಹೊಗಳುತ್ತಾ ಇದ್ರೆ, ಅಥವಾ ಬೇರೆಲ್ಲರಿಗಿಂತ ಅವ್ರಿಗೆ ತುಂಬ ಪ್ರಾಮುಖ್ಯತೆ ಕೊಟ್ರೆ ಅವ್ರಿಗೆ ಮುಜುಗರವಾಗಬಹುದು.c ಅಥವಾ ಕೆಲವೊಮ್ಮೆ ಅವ್ರಲ್ಲಿ ಅಹಂಕಾರನೂ ಬಂದುಬಿಡಬಹುದು. (ರೋಮ. 12:3) ಕ್ರಿಸ್ತನ ಅಭಿಷಿಕ್ತ ಸಹೋದರರಲ್ಲಿ ಯಾರಾದರೊಬ್ರು ಈ ತಪ್ಪಾದ ಮನೋಭಾವ ಬೆಳೆಸಿಕೊಳ್ಳೋಕೆ ನಾವು ಕಾರಣರಾಗಬಾರದು ಅಲ್ವಾ?—ಲೂಕ 17:2.
9. ಅಭಿಷಿಕ್ತರಿಗೆ ನಾವು ಹೇಗೆ ಗೌರವ ತೋರಿಸಬಹುದು?
9 ನಾವು ಅಭಿಷಿಕ್ತರಿಗೆ ಹೇಗೆ ಗೌರವ ತೋರಿಸಬಹುದು? ನಾವು ಅವ್ರಿಗೆ ‘ನೀವು ಅಭಿಷಿಕ್ತರಾದ್ರಿ ಅಂತ ಹೇಗೆ ಗೊತ್ತಾಯ್ತು?’ ಎಂದು ಕೇಳೋಕೆ ಹೋಗಬಾರದು. ಯಾಕೆಂದ್ರೆ ಅದನ್ನು ಕೇಳೋ ಹಕ್ಕು ನಮಗಿಲ್ಲ. ಅದು ಅವ್ರ ಸ್ವಂತ ವಿಷಯ. (1 ಥೆಸ. 4:11; 2 ಥೆಸ. 3:11) ಅಭಿಷಿಕ್ತರ ಗಂಡ, ಹೆಂಡತಿ, ಹೆತ್ತವರು ಅಥವಾ ಕುಟುಂಬದ ಬೇರೆ ಸದಸ್ಯರು ಸಹ ಅಭಿಷಿಕ್ತರಾಗಿರ್ತಾರೆ ಅಂತ ನೆನಸಬಾರದು. ಒಬ್ಬ ವ್ಯಕ್ತಿಗೆ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಹೆತ್ತವರಿಂದ ವಂಶಪಾರಂಪರ್ಯವಾಗಿ ಬರಲ್ಲ. ಯೆಹೋವನೇ ನೇರವಾಗಿ ಕೊಡುತ್ತಾನೆ. (1 ಥೆಸ. 2:12) ಈ ವಿಷಯದ ಬಗ್ಗೆ ಬೇರೆಯವ್ರ ಮನಸ್ಸಿಗೆ ನೋವಾಗುವಂಥ ಪ್ರಶ್ನೆಗಳನ್ನು ಕೇಳಬಾರದು. ಉದಾಹರಣೆಗೆ ಅಭಿಷಿಕ್ತ ಸಹೋದರನ ಹೆಂಡತಿಗೆ, ‘ಹೊಸಲೋಕದಲ್ಲಿ ನಿಮ್ಮ ಗಂಡ ನಿಮ್ಮ ಜೊತೆ ಇರಲ್ವಲ್ಲಾ? ಸದಾಕಾಲ ಅವರಿಲ್ಲದೇ ಜೀವಿಸೋದ್ರ ಬಗ್ಗೆ ನಿಮಗೆ ಹೇಗನ್ಸುತ್ತೆ?’ ಅಂತೆಲ್ಲಾ ಕೇಳಬಾರದು. ಹೇಗಿದ್ರೂ ಯೆಹೋವನು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತಾನೆ ಅಂತ ನಮಗೆ ಗೊತ್ತಿದೆ.—ಕೀರ್ತ. 145:16.
10. ನಾವು ಯಾರ ಬಗ್ಗೆನೂ ಅಭಿಮಾನ ಬೆಳೆಸಿಕೊಳ್ದೇ ಇದ್ರೆ ಒಳ್ಳೇದು ಯಾಕೆ?
10 ನಾವು ಅಭಿಷಿಕ್ತರಿಗೆ ಬೇರೆಯವ್ರಿಗಿಂತ ಹೆಚ್ಚು ಪ್ರಾಮುಖ್ಯತೆ ಕೊಡದೇ ಇದ್ರೆ ನಮಗೇ ಒಳ್ಳೇದು. ಹೇಗೆ? ಅಭಿಷಿಕ್ತರಲ್ಲಿ ಕೆಲವ್ರು ಕೊನೇವರೆಗೆ ನಂಬಿಗಸ್ತರಾಗಿ ಇರದೇ ಹೋಗಬಹುದು ಅಂತ ಬೈಬಲ್ ಹೇಳುತ್ತೆ. (ಮತ್ತಾ. 25:10-12; 2 ಪೇತ್ರ 2:20, 21) ನಾವು ವ್ಯಕ್ತಿತ್ವಗಳನ್ನು ಹೊಗಳ್ದೇ ಇದ್ರೆ ಅಥವಾ ಯಾರ ಬಗ್ಗೆನೂ ಅಭಿಮಾನ ಬೆಳೆಸಿಕೊಳ್ದೇ ಇದ್ರೆ ಒಳ್ಳೇದು. ಆಗ ನಾವು ಅಭಿಷಿಕ್ತರಲ್ಲಿ ಅಥವಾ ಸಂಘಟನೆಯಲ್ಲಿ ಹೆಸರುವಾಸಿ ಆಗಿರೋರಲ್ಲಿ ಅಥವಾ ತುಂಬ ಸಮಯದಿಂದ ಯೆಹೋವನ ಸೇವೆ ಮಾಡಿರೋರಲ್ಲಿ ಯಾರನ್ನೂ ಅನುಕರಿಸೋಕೆ ಹೋಗಲ್ಲ. (ಯೂದ 16) ಹೀಗೆ ಮಾಡೋದ್ರಿಂದ ಒಂದುವೇಳೆ ಅವ್ರು ನಂಬಿಕೆ ಕಳಕೊಂಡ್ರೂ, ಸಭೆಯನ್ನ ಬಿಟ್ಟುಹೋದ್ರೂ ನಾವು ನಂಬಿಕೆ ಕಳಕೊಳ್ಳಲ್ಲ ಅಥವಾ ಯೆಹೋವನ ಆರಾಧನೆ ಮಾಡೋದನ್ನ ನಿಲ್ಸಲ್ಲ.
ರೊಟ್ಟಿ, ದ್ರಾಕ್ಷಾಮದ್ಯ ತಗೊಳ್ಳುವವರ ಸಂಖ್ಯೆ ಬಗ್ಗೆ ನಾವ್ಯಾಕೆ ಚಿಂತೆ ಮಾಡಬಾರದು?
11. ಸ್ಮರಣೆಯ ಸಮಯದಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ಳುವವರ ಸಂಖ್ಯೆಯಲ್ಲಿ ಯಾವ ಬದಲಾವಣೆಯಾಗಿದೆ?
11 ಅನೇಕ ವರ್ಷಗಳವರೆಗೆ ಸ್ಮರಣೆಯ ಸಮಯದಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನ ತಗೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಾ ಹೋಗಿದೆ. ಹಾಗಾಗಿ ನಾವು ಚಿಂತೆ ಮಾಡ್ಬೇಕಾ? ಇಲ್ಲ. ಇದ್ರ ಬಗ್ಗೆ ನಾವು ಮನಸ್ಸಿನಲ್ಲಿಡಬೇಕಾದ ಕೆಲವು ಪ್ರಾಮುಖ್ಯ ವಿಷಯಗಳನ್ನು ಈಗ ನೋಡೋಣ.
12. ಸ್ಮರಣೆಯ ಸಮಯದಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ಳುವವ್ರ ಸಂಖ್ಯೆಯ ಬಗ್ಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬಾರದು?
12 “ತನ್ನವರು ಯಾರಾರು ಎಂಬುದನ್ನು ಯೆಹೋವನು ತಿಳಿದಿದ್ದಾನೆ.” (2 ತಿಮೊ. 2:19) ಸ್ಮರಣೆಯ ಸಮಯದಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ಳುವವರ ಸಂಖ್ಯೆಯನ್ನು ಎಣಿಸುವ ಸಹೋದರರಿಗೆ ಅವ್ರಲ್ಲಿ ನಿಜವಾಗಿಯೂ ಯಾರು ಅಭಿಷಿಕ್ತರಾಗಿದ್ದಾರೆ ಎಂದು ಗೊತ್ತಿಲ್ಲ. ಆದ್ರೆ ಯೆಹೋವನಿಗೆ ಗೊತ್ತು. ಹಾಗಾಗಿ ಈ ಸಂಖ್ಯೆಯಲ್ಲಿ ಅಭಿಷಿಕ್ತರಾಗಿಲ್ಲದಿದ್ದರೂ ತಾವು ಅಭಿಷಿಕ್ತರಾಗಿದ್ದೇವೆಂದು ನೆನಸುವವ್ರು ಸಹ ಸೇರಿದ್ದಾರೆ. ಉದಾಹರಣೆಗೆ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ಳುತ್ತಿದ್ದ ಕೆಲವ್ರು ನಂತ್ರ ಅದನ್ನ ನಿಲ್ಸಿಬಿಟ್ಟಿದ್ದಾರೆ. ಇನ್ನು ಕೆಲವ್ರಿಗೆ ತಮಗಿರೋ ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಯಿಂದಾಗಿ ತಾವು ಕ್ರಿಸ್ತನ ಜೊತೆ ಸ್ವರ್ಗದಲ್ಲಿ ಆಳುತ್ತೇವೆ ಎಂದು ಅನಿಸಿದೆ. ಹಾಗಾಗಿ ಈಗ ಭೂಮಿಯ ಮೇಲೆ ಎಷ್ಟು ಮಂದಿ ಅಭಿಷಿಕ್ತರಿದ್ದಾರೆ ಎಂದು ನಮಗೆ ಗೊತ್ತಿಲ್ಲ.
13. ಮಹಾಸಂಕಟ ಆರಂಭವಾಗುವ ಸಮಯದಲ್ಲಿ ಭೂಮಿಯಲ್ಲಿ ಎಷ್ಟು ಮಂದಿ ಅಭಿಷಿಕ್ತರು ಉಳಿದಿರ್ತಾರೆ ಅಂತ ಬೈಬಲ್ ಹೇಳುತ್ತಾ?
13 ಯೇಸು ಅಭಿಷಿಕ್ತರನ್ನು ಸ್ವರ್ಗಕ್ಕೆ ಕರ್ಕೊಂಡು ಹೋಗಲು ಬರುವಾಗ ಭೂಮಿಯ ಅನೇಕ ಕಡೆಗಳಲ್ಲಿ ಅಭಿಷಿಕ್ತರು ಇರ್ತಾರೆ. (ಮತ್ತಾ. 24:31) ಕಡೇ ದಿವಸಗಳಲ್ಲಿ ಭೂಮಿಯ ಮೇಲೆ ಸ್ವಲ್ಪ ಮಂದಿ ಅಭಿಷಿಕ್ತ ಕ್ರೈಸ್ತರು ಉಳಿದಿರ್ತಾರೆ ಅಂತ ಬೈಬಲ್ ಹೇಳುತ್ತೆ. (ಪ್ರಕ. 12:17) ಆದ್ರೆ ಮಹಾಸಂಕಟ ಆರಂಭವಾಗುವ ಸಮಯದಲ್ಲಿ ಎಷ್ಟು ಮಂದಿ ಉಳಿದಿರ್ತಾರೆ ಅಂತ ಹೇಳುವುದಿಲ್ಲ.
14. ಅಭಿಷಿಕ್ತರನ್ನ ಆರಿಸೋದ್ರ ಬಗ್ಗೆ ರೋಮನ್ನರಿಗೆ 9:11, 16 ರಲ್ಲಿ ತಿಳಿಸಲಾಗಿರುವ ಯಾವ ವಿಷಯವನ್ನ ನಾವು ಅರ್ಥಮಾಡಿಕೊಳ್ಳಬೇಕು?
14 ಅಭಿಷಿಕ್ತರನ್ನು ಯಾವಾಗ ಆಯ್ಕೆ ಮಾಡ್ಬೇಕೆಂದು ಯೆಹೋವನೇ ನಿರ್ಣಯಿಸುತ್ತಾನೆ. (ರೋಮ. 8:28-30) ಯೇಸುವಿನ ಪುನರುತ್ಥಾನವಾದ ನಂತ್ರ, ಯೆಹೋವನು ಅಭಿಷಿಕ್ತರನ್ನು ಆರಿಸಲು ಶುರು ಮಾಡಿದನು. ಒಂದನೇ ಶತಮಾನದಲ್ಲಿದ್ದ ಕ್ರೈಸ್ತರೆಲ್ರೂ ಅಭಿಷಿಕ್ತರಾಗಿದ್ದಿರಬೇಕು. ಅದರ ನಂತ್ರದ ಶತಮಾನಗಳಲ್ಲಿ ಇದ್ದ ಕ್ರೈಸ್ತರಲ್ಲಿ ಹೆಚ್ಚಿನವ್ರು ಹೆಸ್ರಿಗೆ ಮಾತ್ರ ಕ್ರೈಸ್ತರಾಗಿದ್ರು, ಯೇಸುವನ್ನು ಹಿಂಬಾಲಿಸುತ್ತಿರ್ಲಿಲ್ಲ. ಆದ್ರೂ ಆ ವರ್ಷಗಳಲ್ಲಿ ಕೆಲವು ನಿಜ ಕ್ರೈಸ್ತರಿದ್ರು ಮತ್ತು ಅವ್ರನ್ನು ಯೆಹೋವನು ಅಭಿಷಿಕ್ತರನ್ನಾಗಿ ಆರಿಸಿಕೊಂಡನು. ಅವ್ರು ಯೇಸು ಹೇಳಿದ ದೃಷ್ಟಾಂತದಲ್ಲಿದ್ದ ಕಳೆಗಳ ಮಧ್ಯೆ ಬೆಳೆದ ಗೋದಿಯಂತೆ ಇದ್ರು. (ಮತ್ತಾ. 13:24-30) ಈ ಕಡೇ ದಿವಸಗಳಲ್ಲಿ ಸಹ ಯೆಹೋವನು 1,44,000 ಮಂದಿಯ ಭಾಗವಾಗಲು ಕೆಲವ್ರನ್ನು ಆಯ್ಕೆ ಮಾಡುತ್ತಾ ಬಂದಿದ್ದಾನೆ.d ಕಡೇ ದಿವಸಗಳ ಈ ಕೊನೇ ಭಾಗದಲ್ಲೂ ದೇವರು ಕೆಲವ್ರನ್ನು ಆರಿಸಲು ನಿರ್ಣಯಿಸೋದಾದ್ರೆ, ಅದನ್ನು ಪ್ರಶ್ನಿಸುವ ಹಕ್ಕು ನಮಗಿಲ್ಲ. (ರೋಮನ್ನರಿಗೆ 9:11, 16 ಓದಿ.)e ಯೇಸು ಹೇಳಿದ ದೃಷ್ಟಾಂತದಲ್ಲಿದ್ದ ಕೆಲವು ಕೆಲಸಗಾರರಂತೆ ನಾವು ಇರಬಾರ್ದು. ದಿನದ ಕೊನೆಗೆ ಬಂದು ಕೆಲಸಮಾಡಿದವ್ರಿಗೆ ಯಜಮಾನನು ಕೂಲಿ ಕೊಟ್ಟಿದ್ರ ಬಗ್ಗೆ ಅವ್ರು ಗೊಣಗಿದ್ರು.—ಮತ್ತಾ. 20:8-15.
15. ಅಭಿಷಿಕ್ತರೆಲ್ರೂ ಮತ್ತಾಯ 24:45-47 ರಲ್ಲಿ ತಿಳಿಸಲಾಗಿರುವ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ ಭಾಗವಾಗುತ್ತಾರಾ? ವಿವರಿಸಿ.
15 ಸ್ವರ್ಗದಲ್ಲಿ ಜೀವಿಸುವ ನಿರೀಕ್ಷೆಯಿರುವ ಎಲ್ರೂ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಭಾಗವಲ್ಲ. (ಮತ್ತಾಯ 24:45-47 ಓದಿ.) ಯೆಹೋವನು ಮತ್ತು ಯೇಸು ಒಂದನೇ ಶತಮಾನದಲ್ಲಿ ಮಾಡಿದಂತೆ ಇಂದು ಸಹ ಅನೇಕರಿಗೆ ಉಣಿಸಲಿಕ್ಕೆ ಅಂದ್ರೆ ಬೋಧಿಸಲಿಕ್ಕೆ ಕೆಲವೇ ಮಂದಿಯನ್ನ ಉಪಯೋಗಿಸುತ್ತಿದ್ದಾರೆ. ಕ್ರೈಸ್ತ ಗ್ರೀಕ್ ಶಾಸ್ತ್ರ ಗ್ರಂಥವನ್ನು ಬರೆಯಲು ಒಂದನೇ ಶತಮಾನದಲ್ಲಿದ್ದ ಅಭಿಷಿಕ್ತ ಕ್ರೈಸ್ತರಲ್ಲಿ ಬೆರಳೆಣಿಕೆಯಷ್ಟೇ ಮಂದಿಯನ್ನ ಉಪಯೋಗಿಸಲಾಯಿತು. ಹಾಗೆಯೇ ಇಂದು ಸಹ ದೇವಜನ್ರಿಗೆ ತಕ್ಕ ಸಮಯಕ್ಕೆ ಆಹಾರವನ್ನ ಕೊಡುವ ಜವಾಬ್ದಾರಿಯನ್ನ ಅಭಿಷಿಕ್ತ ಕ್ರೈಸ್ತರಲ್ಲಿ ಕೆಲವ್ರಿಗೆ ಮಾತ್ರ ಕೊಡಲಾಗಿದೆ.
16. ಈ ಲೇಖನದಿಂದ ನೀವೇನು ಕಲಿತ್ರಿ?
16 ಈ ಲೇಖನದಿಂದ ನಾವೇನು ಕಲಿತ್ವಿ? ಯೆಹೋವನು ತನ್ನೆಲ್ಲಾ ಸೇವಕರಿಗೆ ಬಹುಮಾನ ಕೊಡುತ್ತಾನೆ. ‘ಹತ್ತು ಜನರಿಗೆ’ ಅಂದ್ರೆ ಹೆಚ್ಚಿನವ್ರಿಗೆ ಭೂಮಿಯಲ್ಲಿ ಸದಾಕಾಲ ಜೀವಿಸುವ ಮತ್ತು ‘ಯೆಹೂದ್ಯನಿಗೆ’ ಅಂದ್ರೆ ಯೇಸುವಿನೊಂದಿಗೆ ಆಳುವವ್ರಿಗೆ ಸ್ವರ್ಗದಲ್ಲಿ ಜೀವಿಸುವ ಬಹುಮಾನವನ್ನು ಕೊಡುತ್ತಾನೆ. ಯೆಹೋವನು ಈ ಎರಡೂ ಗುಂಪಿನವ್ರಿಗೆ ಒಂದೇ ರೀತಿಯ ಆಜ್ಞೆಗಳನ್ನು ಕೊಟ್ಟಿದ್ದಾನೆ. ಅವ್ರದನ್ನ ಪಾಲಿಸಬೇಕು, ನಂಬಿಗಸ್ತರಾಗಿರಬೇಕು ಅಂತ ಬಯಸುತ್ತಾನೆ. ನಾವೆಲ್ರೂ ದೀನರಾಗಿರಬೇಕು, ಐಕ್ಯರಾಗಿರಬೇಕು. ಸಹೋದರ-ಸಹೋದರಿಯರ ಜೊತೆ ಶಾಂತಿಯಿಂದಿರಲು ತುಂಬಾ ಪ್ರಯತ್ನ ಮಾಡಬೇಕು. ಅಂತ್ಯ ಹತ್ರ ಬರುವುದ್ರಿಂದ ನಾವೆಲ್ರೂ ಯೆಹೋವನನ್ನ ಆರಾಧನೆ ಮಾಡುತ್ತಾ “ಒಂದೇ ಹಿಂಡಾಗಿ” ಯೇಸುವನ್ನ ಹಿಂಬಾಲಿಸಬೇಕು.—ಯೋಹಾ. 10:16.
a ಈ ವರ್ಷ ಕ್ರಿಸ್ತನ ಮರಣದ ಸ್ಮರಣೆಯು ಏಪ್ರಿಲ್ 7, ಮಂಗಳವಾರ ನಡೆಯಲಿದೆ. ಆ ದಿನ ಯಾರಾದ್ರೂ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನು ತೆಗೆದುಕೊಳ್ಳೋದಾದ್ರೆ ನಾವು ಅವ್ರ ಬಗ್ಗೆ ಯಾವ ರೀತಿ ಯೋಚಿಸಬೇಕು? ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ಳುವವರ ಸಂಖ್ಯೆ ಹೆಚ್ಚಾಗೋದಾದ್ರೆ ನಾವು ಚಿಂತೆ ಮಾಡಬೇಕಾ? ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ತಿಳಿಯಲಿದ್ದೇವೆ. ಈ ಲೇಖನವು ಜನವರಿ 2016 ರ ಕಾವಲಿನಬುರುಜುವಿನಲ್ಲಿ ಬಂದ ಒಂದು ಲೇಖನದ ಮೇಲೆ ಆಧರಿಸಿದೆ.
b ಕೀರ್ತನೆ 87:5, 6 ರ ಪ್ರಕಾರ ಯೇಸುವಿನೊಂದಿಗೆ ಸ್ವರ್ಗದಲ್ಲಿ ಆಳುವವರೆಲ್ಲರ ಹೆಸರುಗಳನ್ನು ದೇವರು ಭವಿಷ್ಯದಲ್ಲಿ ತಿಳಿಸಬಹುದು.—ರೋಮ. 8:19.
c ಜನವರಿ 2016 ರ ಕಾವಲಿನಬುರುಜುವಿನಲ್ಲಿ “ಪ್ರೀತಿ ಅಸಭ್ಯವಾಗಿ ವರ್ತಿಸುವುದಿಲ್ಲ” ಎಂಬ ಚೌಕ ನೋಡಿ.
d ಅಪೊಸ್ತಲರ ಕಾರ್ಯಗಳು 2:33 ಹೇಳುವಂತೆ ಪವಿತ್ರಾತ್ಮವನ್ನು ಸುರಿಸುವುದು ಯೇಸುವಾದ್ರೂ ಅಭಿಷಿಕ್ತರನ್ನ ಆಯ್ಕೆಮಾಡೋದು ಯೆಹೋವನೇ ಆಗಿದ್ದಾನೆ.
e ಹೆಚ್ಚಿನ ಮಾಹಿತಿಗಾಗಿ ಮೇ 1, 2007 ರ ಕಾವಲಿನಬುರುಜುವಿನಲ್ಲಿರುವ (ಇಂಗ್ಲಿಷ್) “ವಾಚಕರಿಂದ ಪ್ರಶ್ನೆಗಳು” ನೋಡಿ.
ಗೀತೆ 29 ಸಮಗ್ರತೆಯ ಮಾರ್ಗದಲ್ಲಿ ನಡೆಯುವುದು
f ಚಿತ್ರ ವಿವರಣೆ: ಒಂದು ಅಧಿವೇಶನದಲ್ಲಿ ನಮ್ಮ ಮುಖ್ಯಕಾರ್ಯಾಲಯದ ಪ್ರತಿನಿಧಿ ಮತ್ತು ಆತನ ಪತ್ನಿಯ ಸುತ್ತ ಜನ್ರು ಗುಂಪುಗೂಡಿ ಫೋಟೋ ತೆಗೀತಿದ್ದಾರೆ ಅಂತ ನೆನಸಿ. ಹೀಗೆ ಮಾಡಿದ್ರೆ ಅವ್ರಿಗೆ ನಿಜವಾಗ್ಲೂ ಗೌರವ ಕೊಟ್ಟ ಹಾಗೆ ಆಗುತ್ತಾ?