ಪೇತ್ರ ಬರೆದ ಎರಡನೇ ಪತ
2 ಆದ್ರೂ ಇಸ್ರಾಯೇಲ್ಯರ ಮಧ್ಯ ಸುಳ್ಳು ಪ್ರವಾದಿಗಳು ಬಂದ ಹಾಗೆ ನಿಮ್ಮ ಮಧ್ಯನೂ ಸುಳ್ಳು ಬೋಧಕರು ಬರ್ತಾರೆ.+ ಇವರು ಯಾರಿಗೂ ಗೊತ್ತಾಗದ ಹಾಗೆ ಗುಂಪುಗಳನ್ನ ಹುಟ್ಟುಹಾಕ್ತಾರೆ. ಅದ್ರಿಂದ ನಿಮ್ಮ ನಂಬಿಕೆ ಹಾಳಾಗುತ್ತೆ. ಅವ್ರನ್ನ ಬಿಡಿಸೋಕೆ ಬಂದವನನ್ನೂ ಅವರು ಒಪ್ಕೊಳ್ಳಲ್ಲ.+ ಈ ತರ ಮಾಡಿ ಅವ್ರ ಮೇಲೆ ಅವ್ರೇ ಬೇಗ ನಾಶ ತಂದ್ಕೊಳ್ತಾರೆ. 2 ಅಷ್ಟೇ ಅಲ್ಲ, ತುಂಬ ಜನ ಅವ್ರ ತರಾನೇ ನಾಚಿಕೆ ಇಲ್ಲದ ಕೆಲಸಗಳನ್ನ+ ಮಾಡ್ತಾರೆ. ಅವ್ರಿಂದಾಗಿ ದೇವರ ದಾರಿಯ ಬಗ್ಗೆ ಬೇರೆಯವರೂ ಕೆಟ್ಟಕೆಟ್ಟದಾಗಿ ಮಾತಾಡ್ತಾರೆ.+ 3 ಅಷ್ಟೇ ಅಲ್ಲ, ಅವರು ಅತಿಯಾಸೆಯಿಂದ ನಿಮಗೆ ಸುಳ್ಳು ಹೇಳಿ ನಿಮ್ಮನ್ನ ಬಳಸ್ಕೊಳ್ತಾರೆ. ಇಂಥವ್ರಿಗೆ ತುಂಬ ಮುಂಚೆನೇ ತೀರ್ಮಾನ ಆಗಿರೋ ಶಿಕ್ಷೆ ಬೇಗ ಸಿಗುತ್ತೆ,+ ಅವರು ನಾಶ ಆಗೇ ಆಗ್ತಾರೆ.+
4 ಪಾಪ ಮಾಡಿದ ದೇವದೂತರನ್ನ ದೇವರು ಸುಮ್ನೆ ಬಿಡಲಿಲ್ಲ.+ ಆತನು ಅವ್ರನ್ನ ಟಾರ್ಟರಸ್ಗೆ*+ ತಳ್ಳಿಬಿಟ್ಟನು. ತೀರ್ಪು ಮಾಡೋಕೆ ಅವ್ರನ್ನ ಬೇಡಿಹಾಕಿ ಕತ್ತಲೆಗೆ ಹಾಕಿದನು.+ 5 ಅಷ್ಟೇ ಅಲ್ಲ, ದೇವರು ಆ ಕಾಲದ ಲೋಕವನ್ನ ಸುಮ್ನೆ ಬಿಡಲಿಲ್ಲ.+ ಜಲಪ್ರಳಯ ತಂದು ಭಕ್ತಿಯಿಲ್ಲದ ಜನ್ರನ್ನ ನಾಶಮಾಡಿದನು.+ ಆದ್ರೆ ನೀತಿಯ ಬಗ್ಗೆ ಸಾರಿದ+ ನೋಹನನ್ನ ಮತ್ತು ಅವನ ಜೊತೆ ಏಳು ಜನ್ರನ್ನ+ ಕಾಪಾಡಿದನು. 6 ದೇವರು ಸೊದೋಮ್ ಮತ್ತು ಗೊಮೋರ ಪಟ್ಟಣಗಳಿಗೂ ಶಿಕ್ಷೆ ಕೊಟ್ಟನು. ಆ ಪಟ್ಟಣಗಳನ್ನ ಸುಟ್ಟು ಬೂದಿ ಮಾಡಿದನು.+ ಹೀಗೆ ಭಕ್ತಿಯಿಲ್ಲದ ಜನ್ರಿಗೆ ಆಗೋ ಗತಿ ಇದೇ ಅಂತ ತೋರಿಸ್ಕೊಟ್ಟನು.+ 7 ಅಲ್ಲಿ ನಾಚಿಕೆ ಇಲ್ಲದ ಕೆಟ್ಟ ಕೆಲಸಗಳನ್ನ ಮಾಡ್ತಿದ್ದ ಜನ್ರನ್ನ ನೋಡಿ ತುಂಬ ನೊಂದುಕೊಂಡಿದ್ದ ನೀತಿವಂತ ಲೋಟನನ್ನ ದೇವರು ಕಾಪಾಡಿದನು.+ 8 ಯಾಕಂದ್ರೆ ಆ ನೀತಿವಂತ ಕೆಟ್ಟ ಜನ್ರ ಮಧ್ಯ ವಾಸಿಸ್ತಾ ಇದ್ದಾಗ ಅವರು ಮಾಡ್ತಿದ್ದ ಕೆಟ್ಟಕೆಲಸಗಳನ್ನ ನೋಡಿ, ಅವರು ಹೇಳ್ತಾ ಇದ್ದಿದ್ದನ್ನ ಕೇಳಿಸ್ಕೊಂಡು ದಿನಾ ಕೊರಗ್ತಾ ಇದ್ದ. 9 ದೇವಭಕ್ತಿ ಇರೋ ಜನ್ರನ್ನ ಕಷ್ಟದಿಂದ ಹೇಗೆ ಕಾಪಾಡಬೇಕು ಅಂತ ಯೆಹೋವನಿಗೆ* ಗೊತ್ತು.+ ಆದ್ರೆ ಅನೀತಿವಂತರನ್ನ ತೀರ್ಪಿನ ದಿನದ+ ತನಕ ಕಾದು ನಾಶಮಾಡಕ್ಕೂ ಆತನಿಗೆ ಗೊತ್ತು. 10 ಬೇರೆಯವ್ರ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡು ಅವ್ರನ್ನ ಅಶುದ್ಧ ಮಾಡುವವ್ರಿಗೆ+ ಮತ್ತು ಅಧಿಕಾರದಲ್ಲಿ ಇರುವವ್ರನ್ನ ಕೀಳಾಗಿ ನೋಡುವವ್ರಿಗೆ+ ದೇವರು ಶಿಕ್ಷೆ ಕೊಡ್ತಾನೆ.
ಅವರು ಮೊಂಡರು, ಮನಸ್ಸಿಗೆ ಬಂದ ಹಾಗೆ ನಡಿತಾರೆ. ಭಯ ಇಲ್ದೆ ಹಿರಿಯರ ಬಗ್ಗೆ ತಪ್ಪುತಪ್ಪಾಗಿ ಮಾತಾಡ್ತಾರೆ. 11 ಆದ್ರೆ ದೇವದೂತರ ಬಗ್ಗೆ ಯೋಚಿಸಿ, ಅವ್ರಿಗೆ ತುಂಬ ಬಲ, ಶಕ್ತಿ ಇದ್ರೂ ಯೆಹೋವನ* ಮೇಲೆ ಇರೋ ಗೌರವದಿಂದ ಸುಳ್ಳು ಬೋಧಕರ ಮೇಲೆ ಆರೋಪ ಹಾಕಲ್ಲ, ಅವ್ರ ಬಗ್ಗೆ ತಪ್ಪುತಪ್ಪಾಗಿ ಮಾತಾಡಲ್ಲ.+ 12 ಆದ್ರೆ ಈ ಜನ್ರು ತಮಗೆ ಗೊತ್ತಿಲ್ದೇ ಇರೋ ವಿಷ್ಯಗಳ ಬಗ್ಗೆ ತಪ್ಪುತಪ್ಪಾಗಿ ಮಾತಾಡ್ತಾರೆ.+ ಇವರು ಬುದ್ಧಿ ಇಲ್ಲದ ಪ್ರಾಣಿಗಳ ತರ ಇದ್ದಾರೆ. ಈ ಪ್ರಾಣಿಗಳು ಹುಟ್ಟುಗುಣ ಬಿಡಲ್ಲ. ಬೇರೆಯವ್ರ ಕೈಯಲ್ಲಿ ಸಿಗೋಕೆ, ಬೇರೆಯವ್ರ ಕೈಯಲ್ಲಿ ಸಾಯೋಕೆ ಅಂತಾನೇ ಅವು ಹುಟ್ಟಿರುತ್ತೆ. ಈ ಜನ್ರು ನಡ್ಯೋ ಕೆಟ್ಟ ದಾರಿನೇ ಅವ್ರನ್ನ ನಾಶಕ್ಕೆ ಕರ್ಕೊಂಡು ಹೋಗುತ್ತೆ. 13 ಅವರು ಮಾಡೋ ಕೆಟ್ಟ ಕೆಲಸಗಳಿಗೆ ತಕ್ಕ ಶಿಕ್ಷೆ ಸಿಗುತ್ತೆ.
ತಿಂದು ಕುಡಿದು ಮಜಾ ಮಾಡೋದೇ ಅವ್ರಿಗೆ ಇಷ್ಟ.+ ಎಷ್ಟಂದ್ರೆ ಹಾಡ-ಹಗಲಲ್ಲೂ ಅದನ್ನೇ ಮಾಡ್ತಾರೆ. ನಿಮ್ಮ ಜೊತೆ ಊಟ ಮಾಡುವಾಗ ಸುಳ್ಳು ವಿಷ್ಯಗಳನ್ನ ಕಲಿಸೋದ್ರಲ್ಲೇ ಮುಳುಗಿರುತ್ತಾರೆ.+ ಬಟ್ಟೆಗೆ ಆಗಿರೋ ಕೊಳೆ ತರ, ಮುಖದ ಮೇಲಿರೋ ಕಲೆ ತರ ಅವರಿದ್ದಾರೆ. 14 ಅವರು ಲೈಂಗಿಕ ಅನೈತಿಕತೆ ನಡಿಸೋಕೆ ತುಂಬ ಆಸೆಪಡ್ತಾರೆ. ಅವ್ರ ಕಣ್ಣಲ್ಲಿ ಬರೀ ಕಾಮ ತುಂಬ್ಕೊಂಡಿರುತ್ತೆ.+ ಅವ್ರಿಗೆ ಪಾಪ ಮಾಡ್ದೆ ಇರೋಕೇ ಆಗಲ್ಲ. ಕಮ್ಮಿ ನಂಬಿಕೆ ಇರುವವ್ರನ್ನ ಬುಟ್ಟಿಗೆ ಹಾಕೊಳ್ತಾರೆ. ಅವ್ರ ಹೃದಯದಲ್ಲಿ ಅತಿಯಾಸೆ ತುಂಬಿರುತ್ತೆ. ಅವರು ಶಾಪ ಸಿಕ್ಕಿರೋ ಮಕ್ಕಳು. 15 ದೇವರ ಸರಿಯಾದ ಬೋಧನೆಗಳನ್ನ ಬಿಟ್ಟು ದಾರಿ ತಪ್ಪಿಹೋಗಿದ್ದಾರೆ. ಬೆಯೋರನ ಮಗ ಬಿಳಾಮನ ದಾರಿ ಹಿಡಿದಿದ್ದಾರೆ. ಬಿಳಾಮನಿಗೆ+ ಕೆಟ್ಟದ್ರಿಂದ ಸಿಗೋ ಲಾಭದ ಮೇಲೆ ಆಸೆ ಇತ್ತು.+ 16 ಹಾಗಾಗಿ ಅವನು ತಪ್ಪು ಮಾಡಿದಾಗ ಅದನ್ನ ಬೊಟ್ಟುಮಾಡಿ ತೋರಿಸಿದ್ರು.+ ಒಂದು ಮೂಕ ಪ್ರಾಣಿ ಮನುಷ್ಯರ ತರ ಮಾತಾಡಿ ಆ ಪ್ರವಾದಿ ತಪ್ಪುದಾರಿಗೆ ಹೋಗೋದನ್ನ ತಡೀತು.+
17 ಇವರು ನೀರಿಲ್ಲದ ಬಾವಿ, ಬಿರುಸಾದ ಬಿರುಗಾಳಿಗೆ ಹೊಡ್ಕೊಂಡು ಹೋಗೋ ಮಂಜು. ಇವ್ರಿಗೋಸ್ಕರ ಕಡುಕತ್ತಲೆ ಕಾಯ್ತಾ ಇದೆ.+ 18 ಬೇರೆಯವ್ರನ್ನ ಮೋಡಿ ಮಾಡೋ ಮಾತುಗಳನ್ನ ಇವರು ಹೇಳ್ತಾರೆ. ಆದ್ರೆ ಅದ್ರಿಂದ ಏನೂ ಲಾಭ ಇಲ್ಲ. ತಪ್ಪುದಾರಿಯಿಂದ ಈಗಷ್ಟೇ ಸರಿದಾರಿಗೆ ಬಂದಿರೋ ಜನ್ರನ್ನ ತಮ್ಮಲ್ಲಿರೋ ತಪ್ಪಾದ ಆಸೆಗಳಿಂದ,+ ನಾಚಿಕೆಯಿಲ್ಲದ ನಡತೆಯಿಂದ ಮರುಳುಮಾಡಿ ಬಿಡ್ತಾರೆ.+ 19 ಈ ಸುಳ್ಳು ಬೋಧಕರು ಬಿಡುಗಡೆ ಕೊಡ್ತೀವಿ ಅಂತ ಮಾತು ಕೊಡ್ತಾರೆ. ಆದ್ರೆ ಅವ್ರೇ ಪಾಪಕ್ಕೆ ಗುಲಾಮರಾಗಿ+ ಇದ್ದಾರೆ. ಯಾಕಂದ್ರೆ ಒಬ್ಬ ವ್ಯಕ್ತಿ ಇನ್ನೊಬ್ಬನ ಮೇಲೆ ದಬ್ಬಾಳಿಕೆ ಮಾಡಿದ್ರೆ ಅವನು ಆ ವ್ಯಕ್ತಿಗೆ ದಾಸನಾಗ್ತಾನೆ.+ 20 ರಕ್ಷಕನಾಗಿರೋ ನಮ್ಮ ಪ್ರಭು ಯೇಸು ಕ್ರಿಸ್ತನ ಬಗ್ಗೆ ಚೆನ್ನಾಗಿ ತಿಳ್ಕೊಂಡು ಲೋಕದ ಅಶುದ್ಧ ಆಚಾರಗಳಿಂದ+ ಹೊರಗೆ ಬಂದಿರೋರು ಮತ್ತೆ ಅದೇ ವಿಷ್ಯಗಳನ್ನ ಮಾಡಿ ಗುಲಾಮರಾದ್ರೆ ಅವ್ರಿಗೆ ಆಗೋ ಗತಿ ಮೊದಲಿಗಿಂತ ತುಂಬ ಕೆಟ್ಟದಾಗಿ ಇರುತ್ತೆ.+ 21 ನೀತಿಯ ದಾರಿಯನ್ನ ಚೆನ್ನಾಗಿ ತಿಳ್ಕೊಂಡು ಆಮೇಲೆ ದೂರ ಹೋಗೋದಕ್ಕಿಂತ ಪವಿತ್ರ ಆಜ್ಞೆಗಳ ಬಗ್ಗೆ ಅವ್ರಿಗೆ ಗೊತ್ತಿಲ್ಲದೇ ಇದ್ದಿದ್ರೆ ಎಷ್ಟೋ ಚೆನ್ನಾಗಿ ಇರ್ತಿತ್ತು.+ 22 “ನಾಯಿ ಅದು ಕಕ್ಕಿದ್ದನ್ನ ನೆಕ್ಕೋಕೆ ಹೋಯ್ತು, ಸ್ನಾನ ಮಾಡಿದ ಹಂದಿ ಕೆಸ್ರಲ್ಲಿ ಉರುಳಾಡೋಕೆ ಹೋಯ್ತು”+ ಅನ್ನೋ ಗಾದೆ ನಿಜ ಅಂತ ಅವರು ತೋರಿಸ್ಕೊಟ್ರು.