“ನಿಮ್ಮ ಎಲ್ಲಾ ನಡವಳಿಕೆಯಲ್ಲಿ ನೀವೂ ಪವಿತ್ರರಾಗಿರಿ”
“ನಿಮ್ಮನ್ನು ಕರೆದಾತನು ಪವಿತ್ರನಾಗಿರುವ ಪ್ರಕಾರವೇ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ನೀವೂ ಪವಿತ್ರರಾಗಿರಿ, ಏಕೆಂದರೆ ‘ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಬೇಕು’ ಎಂದು ಬರೆಯಲ್ಪಟ್ಟಿದೆ.”—1 ಪೇತ್ರ 1:15, 16, NW.
1. ಪೇತ್ರನು ಕ್ರೈಸ್ತರಿಗೆ ಪವಿತ್ರರಾಗಿರುವಂತೆ ಏಕೆ ಉತ್ತೇಜಿಸುತ್ತಾನೆ?
ಅಪೊಸ್ತಲ ಪೇತ್ರನು ಈ ಮೇಲಿನ ಸಲಹೆಯನ್ನು ಏಕೆ ಕೊಟ್ಟನು? ಯೆಹೋವನ ಪಾವಿತ್ರ್ಯಕ್ಕನುಸಾರವಾಗಿ ತನ್ನ ಆಲೋಚನೆಗಳು ಹಾಗೂ ಕೃತ್ಯಗಳನ್ನು ಇರಿಸಿಕೊಳ್ಳಲಿಕ್ಕಾಗಿ, ಪ್ರತಿಯೊಬ್ಬ ಕ್ರೈಸ್ತನು ಅವುಗಳನ್ನು ಕಾಪಾಡಿಕೊಳ್ಳುವುದಕ್ಕಾಗಿರುವ ಅಗತ್ಯವನ್ನು ಅವನು ಕಂಡದ್ದರಿಂದಲೇ. ಆದುದರಿಂದ, ಅವನು ಮೇಲಿನ ಮಾತುಗಳಿಗೆ ಪೂರ್ವಗಾಮಿಯಾಗಿ ಹೀಗೆ ಹೇಳಿದನು: “ನೀವು ಮನಸ್ಸಿನ ನಡುವನ್ನು ಕಟ್ಟಿಕೊಂಡು ಸ್ವಸ್ಥಚಿತ್ತರಾಗಿದ್ದು . . . ನಿಮ್ಮ ನಿರೀಕ್ಷೆಯನ್ನು ಸಂಪೂರ್ಣವಾಗಿ ಇಡಿರಿ. ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆಯು”ವುದನ್ನು ತೊರೆಯಿರಿ.—1 ಪೇತ್ರ 1:13, 14.
2. ನಾವು ಸತ್ಯವನ್ನು ಕಲಿಯುವುದಕ್ಕೆ ಮೊದಲು ನಮ್ಮ ಅಪೇಕ್ಷೆಗಳು ಏಕೆ ಅಪವಿತ್ರವಾಗಿದ್ದವು?
2 ನಮ್ಮ ಹಿಂದಣ ಅಪೇಕ್ಷೆಗಳು ಅಪವಿತ್ರವಾಗಿದ್ದವು. ಏಕೆ? ಏಕೆಂದರೆ ನಾವು ಕ್ರೈಸ್ತ ಸತ್ಯವನ್ನು ಸ್ವೀಕರಿಸುವುದಕ್ಕೆ ಮೊದಲು ನಮ್ಮಲ್ಲಿ ಅನೇಕರು ಲೌಕಿಕವಾದೊಂದು ಕ್ರಿಯಾಪಥವನ್ನು ಅನುಸರಿಸಿದೆವು. ಪೇತ್ರನು ಹೀಗೆ ಸರಳವಾಗಿ ಬರೆದಾಗ, ಇದು ಅವನಿಗೆ ತಿಳಿದಿತ್ತು: “ನೀವು ಬಂಡುತನ ದುರಾಶೆ ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ ಅಸಹ್ಯವಾದ ವಿಗ್ರಹಾರಾಧನೆ ಈ ಮೊದಲಾದವುಗಳನ್ನು ನಡಿಸುವದರಲ್ಲಿಯೂ ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವದರಲ್ಲಿಯೂ ಕಳೆದುಹೋದ ಕಾಲವೇ ಸಾಕು.” ನಮ್ಮ ಆಧುನಿಕ ಲೋಕಕ್ಕೆ ಸಂಬಂಧಪಟ್ಟ ಅಪವಿತ್ರ ಕೃತ್ಯಗಳು, ಆಗ ಅಜ್ಞಾತವಾಗಿದ್ದುದರಿಂದ ಪೇತ್ರನು ಅವುಗಳನ್ನು ಹೆಸರಿಸಲಿಲ್ಲ ಎಂಬುದು ನಿಶ್ಚಯ.—1 ಪೇತ್ರ 4:3, 4.
3, 4. (ಎ) ನಾವು ತಪ್ಪು ಬಯಕೆಗಳನ್ನು ಹೇಗೆ ತೊಡೆದುಹಾಕಸಾಧ್ಯವಿದೆ? (ಬಿ) ಕ್ರೈಸ್ತರು ಭಾವಾವೇಶರಹಿತರಾಗಿರಬೇಕೊ? ವಿವರಿಸಿರಿ.
3 ಈ ಅಪೇಕ್ಷೆಗಳು, ಶರೀರಭಾವ, ಜ್ಞಾನೇಂದ್ರಿಯಗಳು, ಹಾಗೂ ಭಾವಾವೇಶಗಳಿಗೆ ಹಿಡಿಸುವಂತಹವುಗಳಾಗಿವೆ ಎಂಬುದನ್ನು ನೀವು ಗಮನಿಸಿದಿರೊ? ಈ ಅಪೇಕ್ಷೆಗಳು ಪ್ರಾಬಲ್ಯ ನಡೆಸುವಂತೆ ನಾವು ಅನುಮತಿಸುವಾಗ, ನಮ್ಮ ಆಲೋಚನೆಗಳು ಹಾಗೂ ಕೃತ್ಯಗಳು ಬಹಳ ಸುಲಭವಾಗಿ ಅಪವಿತ್ರವಾಗುತ್ತವೆ. ಇದು ವಿವೇಚನಾಶಕ್ತಿಯು ನಮ್ಮ ವರ್ತನೆಗಳನ್ನು ನಿಯಂತ್ರಿಸುವ ಅಗತ್ಯವನ್ನು ಚಿತ್ರಿಸುತ್ತದೆ. ಪೌಲನು ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದನು: “ಆದುದರಿಂದ ಸಹೋದರರೇ, ದೇವರ ಕನಿಕರಗಳ ಮೂಲಕ ನಾನು ನಿಮ್ಮನ್ನು ಬೇಡಿಕೊಳ್ಳುವುದೇನಂದರೆ, ನೀವು ನಿಮ್ಮ ಶರೀರಗಳನ್ನು ಯಜ್ಞಬದುಕು, ಪವಿತ್ರ, ದೇವರಿಗೆ ಸ್ವೀಕಾರಯೋಗ್ಯ, ಇವೇ ವಿವೇಚನಾಶಕ್ತಿಯೊಂದಿಗೆ ಪರಿಶುದ್ಧ ಸೇವೆಯಾಗಿ ಅರ್ಪಿಸಿರಿ.”—ರೋಮಾಪುರ 12:1, 2, NW.
4 ದೇವರಿಗೆ ಒಂದು ಪವಿತ್ರವಾದ ಯಜ್ಞವನ್ನು ನೀಡಲಿಕ್ಕಾಗಿ, ನಾವು ಭಾವಾವೇಶಗಳನ್ನಲ್ಲ, ಬದಲಾಗಿ ಯೋಚನಾಶಕ್ತಿಯು ಪ್ರಾಬಲ್ಯ ನಡೆಸುವಂತೆ ಬಿಡಬೇಕು. ತಮ್ಮ ಭಾವನೆಗಳು ತಮ್ಮ ನಡವಳಿಕೆಯನ್ನು ನಿಯಂತ್ರಿಸುವಂತೆ ಅನುಮತಿಸಿದ ಕಾರಣದಿಂದಾಗಿ, ಎಷ್ಟೊಂದು ಜನರು ಅನೈತಿಕತೆಯಲ್ಲಿ ಒಳಗೂಡಿದವರಾಗಿ ಪರಿಣಮಿಸಿದ್ದಾರೆ! ನಮ್ಮ ಭಾವಾವೇಶಗಳು ದಮನಮಾಡಲ್ಪಡಬೇಕೆಂಬುದನ್ನು ಅದು ಅರ್ಥೈಸುವುದಿಲ್ಲ; ಇಲ್ಲದಿದ್ದರೆ, ನಾವು ಯೆಹೋವನ ಸೇವೆಯಲ್ಲಿ ಆನಂದವನ್ನು ಹೇಗೆ ವ್ಯಕ್ತಪಡಿಸಸಾಧ್ಯವಿದೆ? ಹಾಗಿದ್ದರೂ, ನಾವು ಶರೀರಭಾವದ ಕರ್ಮಗಳಿಗೆ ಬದಲಾಗಿ, ಪವಿತ್ರಾತ್ಮದ ಫಲವನ್ನು ಉತ್ಪಾದಿಸಲು ಬಯಸುವುದಾದರೆ, ಆಗ ನಾವು ಕ್ರಿಸ್ತನ ಆಲೋಚನೆಗನುಸಾರವಾಗಿ ನಮ್ಮನ್ನು ಪರಿವರ್ತಿಸಿಕೊಳ್ಳಬೇಕು.—ಗಲಾತ್ಯ 5:22, 23; ಫಿಲಿಪ್ಪಿ 2:5.
ಪವಿತ್ರ ಜೀವನ, ಪವಿತ್ರ ಮೌಲ್ಯ
5. ಪಾವಿತ್ರ್ಯಕ್ಕಾಗಿರುವ ಅಗತ್ಯದ ಕುರಿತಾಗಿ ಪೇತ್ರನು ಏಕೆ ಪ್ರಜ್ಞೆಯುಳ್ಳವನಾಗಿದ್ದನು?
5 ಕ್ರೈಸ್ತ ಪಾವಿತ್ರ್ಯಕ್ಕಾಗಿರುವ ಅಗತ್ಯದ ಕುರಿತಾಗಿ ಪೇತ್ರನು ಏಕೆ ಇಷ್ಟು ಪ್ರಜ್ಞೆಯುಳ್ಳವನಾಗಿದ್ದನು? ಏಕೆಂದರೆ ವಿಧೇಯ ಮಾನವಕುಲವನ್ನು ವಿಮೋಚಿಸಲಿಕ್ಕಾಗಿ ತೆರಲ್ಪಟ್ಟಿದ್ದ ಪವಿತ್ರ ಮೌಲ್ಯದ ಕುರಿತಾಗಿ ಅವನು ಬಹಳ ಅರಿವುಳ್ಳವನಾಗಿದ್ದನು. ಅವನು ಬರೆದುದು: “ನಿಮ್ಮ ಹಿರಿಯರು ಕಲಿಸಿಕೊಟ್ಟ ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ಬೆಳ್ಳಿ ಭಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ, ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ಬಲ್ಲಿರಲ್ಲವೇ.” (1 ಪೇತ್ರ 1:18, 19) ಹೌದು, ದೇವರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಪಡೆದುಕೊಳ್ಳುವಂತೆ ಜನರನ್ನು ಅನುಮತಿಸುವ ವಿಮೋಚನೆಯನ್ನು ತೆರಲಿಕ್ಕಾಗಿ, ಪಾವಿತ್ರ್ಯದ ಮೂಲನಾದ ಯೆಹೋವ ದೇವರು, “ಪವಿತ್ರನಾದ” (NW) ತನ್ನ ಏಕಜಾತ ಪುತ್ರನನ್ನು ಭೂಮಿಗೆ ಕಳುಹಿಸಿದ್ದನು.—ಯೋಹಾನ 3:16; 6:69; ವಿಮೋಚನಕಾಂಡ 28:36; ಮತ್ತಾಯ 20:28.
6. (ಎ) ಪವಿತ್ರ ನಡವಳಿಕೆಯನ್ನು ಬೆನ್ನಟ್ಟುವುದು ನಮಗೆ ಏಕೆ ಸುಲಭವಾದ ವಿಷಯವಾಗಿರುವುದಿಲ್ಲ? (ಬಿ) ನಮ್ಮ ನಡವಳಿಕೆಯನ್ನು ಪವಿತ್ರವಾಗಿಟ್ಟುಕೊಳ್ಳಲು ನಮಗೆ ಯಾವುದು ಸಹಾಯ ಮಾಡಬಲ್ಲದು?
6 ಆದರೂ, ಸೈತಾನನ ಭ್ರಷ್ಟ ಲೋಕದ ಮಧ್ಯೆಯಿರುವಾಗ, ಪವಿತ್ರವಾದ ಒಂದು ಜೀವನವನ್ನು ನಡೆಸುವುದು ಸುಲಭವಾಗಿರುವುದಿಲ್ಲ ಎಂಬುದನ್ನು ನಾವು ಗ್ರಹಿಸಬೇಕಾಗಿದೆ. ತನ್ನ ವಿಷಯಗಳ ವ್ಯವಸ್ಥೆಯಲ್ಲಿ ಬದುಕಿ ಉಳಿಯಲು ಪ್ರಯತ್ನಿಸುತ್ತಿರುವ ಸತ್ಕ್ರೈಸ್ತರಿಗಾಗಿ ಅವನು ಪಾಶಗಳನ್ನು ಒಡ್ಡುತ್ತಾನೆ. (ಎಫೆಸ 6:12; 1 ತಿಮೊಥೆಯ 6:9, 10) ಐಹಿಕ ಕೆಲಸ, ಕುಟುಂಬ ವಿರೋಧ, ಶಾಲೆಯಲ್ಲಿನ ಅಪಹಾಸ್ಯದ ಒತ್ತಡಗಳು, ಮತ್ತು ಸಮಾನಸ್ಥರ ಒತ್ತಡವು, ಒಬ್ಬನು ಪಾವಿತ್ರ್ಯವನ್ನು ಇಟ್ಟುಕೊಳ್ಳಲಿಕ್ಕಾಗಿ ಆವಶ್ಯಕವಾಗಿರುವ ಬಲವಾದ ಆತ್ಮಿಕತೆಯನ್ನು ಅಗತ್ಯಪಡಿಸುತ್ತದೆ. ಅದು ನಮ್ಮ ವೈಯಕ್ತಿಕ ಅಭ್ಯಾಸ ಮತ್ತು ಕ್ರೈಸ್ತ ಕೂಟಗಳಲ್ಲಿನ ನಮ್ಮ ಕ್ರಮವಾದ ಹಾಜರಿಯ ಕುರಿತಾದ ಅತ್ಯಾವಶ್ಯಕ ಪಾತ್ರವನ್ನು ಒತ್ತಿಹೇಳುತ್ತದೆ. ಪೌಲನು ತಿಮೊಥೆಯನಿಗೆ ಸಲಹೆನೀಡಿದ್ದು: “ನೀನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ ನನ್ನಿಂದ ಕೇಳಿದ ಸ್ವಸ್ಥಬೋಧನಾವಾಕ್ಯಗಳನ್ನು ಮಾದರಿಮಾಡಿಕೊಂಡು ಅನುಸರಿಸು.” (2 ತಿಮೊಥೆಯ 1:13) ಸ್ವಸ್ಥತೆಯನ್ನು ನೀಡುವ ಆ ಮಾತುಗಳನ್ನು ನಾವು ನಮ್ಮ ರಾಜ್ಯ ಸಭಾಗೃಹದಲ್ಲಿ ಕೇಳಿಸಿಕೊಳ್ಳುತ್ತೇವೆ ಮತ್ತು ಬೈಬಲಿನ ನಮ್ಮ ಖಾಸಗಿ ಅಭ್ಯಾಸದಲ್ಲಿ ಓದುತ್ತೇವೆ. ದಿನೇ ದಿನೇ, ಅನೇಕ ವಿವಿಧ ಸನ್ನಿವೇಶಗಳಲ್ಲಿ, ನಮ್ಮ ನಡವಳಿಕೆಯಲ್ಲಿ ನಾವು ಪವಿತ್ರರಾಗಿರಲು ಅವು ನಮಗೆ ಸಹಾಯ ಮಾಡಬಲ್ಲವು.
ಕುಟುಂಬದಲ್ಲಿ ಪವಿತ್ರ ನಡವಳಿಕೆ
7. ಪಾವಿತ್ರ್ಯವು ನಮ್ಮ ಕುಟುಂಬ ಜೀವನವನ್ನು ಹೇಗೆ ಪ್ರಭಾವಿಸಬೇಕು?
7 ಪೇತ್ರನು ಯಾಜಕಕಾಂಡ 11:44ನ್ನು ಉಲ್ಲೇಖಿಸಿದಾಗ, ಅವನು ಹ್ಯಾಜಿಯಾಸ್ ಎಂಬ ಗ್ರೀಕ್ ಶಬ್ದವನ್ನು ಉಪಯೋಗಿಸಿದನು; ಅದರ ಅರ್ಥ, “ಪಾಪದಿಂದ ಪ್ರತ್ಯೇಕಿತವಾದುದರಿಂದ ದೇವರಿಗೆ ಮೀಸಲು, ಪರಿಶುದ್ಧ” ಎಂಬುದಾಗಿದೆ. (ಆ್ಯನ್ ಎಕ್ಸ್ಪೊಸಿಟರಿ ಡಿಕ್ಷನರಿ ಆಫ್ ನ್ಯೂ ಟೆಸ್ಟಮೆಂಟ್ ವರ್ಡ್ಸ್, ಡಬ್ಯ್ಲೂ, ಇ. ವೈನ್ ಅವರಿಂದ) ನಮ್ಮ ಕ್ರೈಸ್ತ ಕುಟುಂಬ ಜೀವನದಲ್ಲಿ ಇದು ನಮ್ಮನ್ನು ಹೇಗೆ ಪ್ರಭಾವಿಸಬೇಕು? ನಿಶ್ಚಯವಾಗಿಯೂ ಇದು ನಮ್ಮ ಕುಟುಂಬ ಜೀವನವು ಪ್ರೀತಿಯ ಮೇಲೆ ಆಧಾರಿತವಾಗಿರಬೇಕೆಂಬುದನ್ನು ಅರ್ಥೈಸಬೇಕು, ಏಕೆಂದರೆ “ದೇವರು ಪ್ರೀತಿಸ್ವರೂಪಿ”ಯಾಗಿದ್ದಾನೆ. (1 ಯೋಹಾನ 4:8) ಸ್ವತ್ಯಾಗದ ಪ್ರೀತಿಯು, ಪತಿ/ಪತ್ನಿಯರ ಮಧ್ಯೆ ಮತ್ತು ಹೆತ್ತವರು ಹಾಗೂ ಮಕ್ಕಳ ಮಧ್ಯೆ ಇರುವ ಸಂಬಂಧಗಳಿಗೆ ಚಲನಸೌಲಭ್ಯವನ್ನುಂಟುಮಾಡುವ ತೈಲದಂತಿದೆ.—1 ಕೊರಿಂಥ 13:4-8; ಎಫೆಸ 5:28, 29, 33; 6:4; ಕೊಲೊಸ್ಸೆ 3:18, 21.
8, 9. (ಎ) ಕೆಲವೊಮ್ಮೆ ಯಾವ ಸನ್ನಿವೇಶವು ಕ್ರೈಸ್ತ ಮನೆಯೊಂದರಲ್ಲಿ ವಿಕಸಿಸುತ್ತದೆ? (ಬಿ) ಈ ವಿಷಯದ ಕುರಿತಾಗಿ ಯಾವ ಸ್ವಸ್ಥ ಸಲಹೆಯನ್ನು ಬೈಬಲು ಕೊಡುತ್ತದೆ?
8 ಅಂತಹ ಪ್ರೀತಿಯನ್ನು ವ್ಯಕ್ತಪಡಿಸುವುದು, ಒಂದು ಕ್ರೈಸ್ತ ಕುಟುಂಬದಲ್ಲಿ ರೂಢಿಗತವಾಗಿರುವುದೆಂದು ನಾವು ಆಲೋಚಿಸಬಹುದು. ಆದರೂ, ಕೆಲವು ಕ್ರೈಸ್ತ ಮನೆಗಳಲ್ಲಿ ಪ್ರೀತಿಯು ಇರಬೇಕಾದಷ್ಟರ ಮಟ್ಟಕ್ಕೆ ಯಾವಾಗಲೂ ಅದು ಅಸ್ತಿತ್ವದಲ್ಲಿರುವುದಿಲ್ಲವೆಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ನಾವು ರಾಜ್ಯ ಸಭಾಗೃಹದಲ್ಲಿ ಪ್ರೀತಿಯನ್ನು ಪ್ರದರ್ಶಿಸುತ್ತಿರುವವರಾಗಿ ಕಂಡುಬರಬಹುದಾದರೂ, ಮನೆಯ ಸನ್ನಿವೇಶಗಳಲ್ಲಿ ನಮ್ಮ ಪಾವಿತ್ರ್ಯವು ಎಷ್ಟು ಸುಲಭವಾಗಿ ಕುಂದಿಹೋಗಬಹುದು. ಆಗ ಹೆಂಡತಿಯು ಇನ್ನೂ ನಮ್ಮ ಕ್ರೈಸ್ತ ಸಹೋದರಿಯೇ ಆಗಿದ್ದಾಳೆ ಅಥವಾ ಗಂಡನು ಇನ್ನೂ, ರಾಜ್ಯ ಸಭಾಗೃಹದಲ್ಲಿ ಗೌರವಾನಿತ್ವನಾಗಿ ಕಂಡುಬರುವ ಅದೇ ಸಹೋದರ (ಮತ್ತು ಬಹುಶಃ ಒಬ್ಬ ಶುಶ್ರೂಷಾ ಸೇವಕ ಅಥವಾ ಒಬ್ಬ ಹಿರಿಯ)ನಾಗಿದ್ದಾನೆ ಎಂಬುದನ್ನು ನಾವು ತತ್ಕ್ಷಣವೇ ಮರೆತುಬಿಡಬಹುದು. ನಾವು ಸಿಟ್ಟುಗೊಳ್ಳುತ್ತೇವೆ, ಮತ್ತು ಭಾವೋದ್ರೇಕದ ವಾಗ್ವಾದಗಳು ವಿಕಸಿಸಬಲ್ಲವು. ಒಂದು ಇಬ್ಬಗೆಯ ಮಟ್ಟವು ಸಹ ನಮ್ಮ ಜೀವನಗಳೊಳಗೆ ನುಸುಳಸಾಧ್ಯವಿದೆ. ಅದು ಇನ್ನುಮುಂದೆ ಒಂದು ಕ್ರೈಸ್ತಸ್ವರೂಪದ ಗಂಡಹೆಂಡತಿಯ ಸಂಬಂಧವಾಗಿರುವುದಿಲ್ಲ, ಬದಲಾಗಿ ಕೇವಲ ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯ ವ್ಯಾಜ್ಯವಾಗಿರುತ್ತದೆ. ಮನೆಯಲ್ಲಿ ಒಂದು ಪವಿತ್ರವಾದ ವಾತಾವರಣವಿರಬೇಕೆಂಬುದನ್ನು ಅವರು ಮರೆತುಬಿಡುತ್ತಾರೆ. ಬಹುಶಃ ಅವರು ಲೌಕಿಕ ಜನರಂತೆ ಮಾತಾಡಲಾರಂಭಿಸುತ್ತಾರೆ. ಆಗ ಅಸಹ್ಯವಾದ, ಕಟುವಾದ ಹೇಳಿಕೆಯೊಂದು ಎಷ್ಟು ಸುಲಭವಾಗಿ ಬಾಯಿಯಿಂದ ಹೊರಡಬಲ್ಲದು!—ಜ್ಞಾನೋಕ್ತಿ 12:18; ಹೋಲಿಸಿರಿ ಅ. ಕೃತ್ಯಗಳು 15:37-39.
9 ಹಾಗಿದ್ದರೂ, ಪೌಲನು ಸಲಹೆನೀಡುವುದು: “ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ [ಗ್ರೀಕ್, ಲೋಗಾಸ್ ಸಪ್ರಾಸ್ “ಹೊಲೆಮಾಡುವ ಮಾತು,” ಆದುದರಿಂದ ಅಪವಿತ್ರ] ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.” ಮತ್ತು ಅದು ಮಕ್ಕಳನ್ನೂ ಒಳಗೊಂಡು, ಮನೆಯಲ್ಲಿರುವ ಎಲ್ಲಾ ಕೇಳುಗರಿಗೆ ಸೂಚಿತವಾಗಿದೆ.—ಎಫೆಸ 4:29; ಯಾಕೋಬ 3:8-10.
10. ಪಾವಿತ್ರ್ಯದ ಮೇಲಿನ ಸಲಹೆಯು, ಮಕ್ಕಳಿಗೆ ಹೇಗೆ ಅನ್ವಯಿಸುತ್ತದೆ?
10 ಪಾವಿತ್ರ್ಯದ ಮೇಲಿನ ಈ ಮಾರ್ಗದರ್ಶನೆಯು ಸಹ, ಒಂದು ಕ್ರೈಸ್ತ ಕುಟುಂಬದಲ್ಲಿರುವ ಮಕ್ಕಳಿಗೂ ಸಮಾನವಾಗಿ ಅನ್ವಯವಾಗುತ್ತದೆ. ಅವರು ಶಾಲೆಯಿಂದ ಮನೆಗೆ ಬಂದು, ತಮ್ಮ ಲೌಕಿಕ ಸಮಾನಸ್ಥರ ದಂಗೆಕೋರ ಹಾಗೂ ಅಗೌರವಪೂರ್ಣವಾದ ಮಾತನ್ನು ಅನುಕರಿಸಲಾರಂಭಿಸುವುದು ಅವರಿಗೆ ಎಷ್ಟು ಸುಲಭವಾದದ್ದಾಗಿದೆ! ಮಕ್ಕಳೇ, ಯೆಹೋವನ ಪ್ರವಾದಿಗೆ ಅವಮಾನಮಾಡಿದ ಅಸಂಸ್ಕೃತ ಹುಡುಗರಿಂದ, ಮತ್ತು ಇಂದು ಭಂಡಬಾಯಿಯ, ದೇವದೂಷಣೆಮಾಡುವ ಆಧುನಿಕ ಯುವ ಜನರಿಂದ ತೋರಿಸಲ್ಪಡುವ ಮನೋಭಾವಗಳಿಗೆ ಆಕರ್ಷಿತರಾಗಬೇಡಿರಿ. (2 ಅರಸುಗಳು 2:23, 24) ಸಭ್ಯವಾದ ಮಾತುಗಳನ್ನು ಉಪಯೋಗಿಸಲು ತೀರ ಸೋಮಾರಿಗಳಾದ ಅಥವಾ ಪರ್ಯಾಲೋಚನೆಯಿಲ್ಲದ ಜನರ ನಯನಾಜೂಕಿಲ್ಲದ ಅಶ್ಲೀಲ ಬೀದಿ ಭಾಷೆಯಿಂದ ನಿಮ್ಮ ಮಾತು ಹೊಲೆಗೊಂಡಿರಬಾರದು. ಕ್ರೈಸ್ತರೋಪಾದಿ, ನಮ್ಮ ಮಾತು ಪವಿತ್ರವೂ, ಹಿತಕರವೂ, ಭಕ್ತಿವೃದ್ಧಿಮಾಡುವಂತಹದ್ದೂ, ದಯಾಪರವೂ, “ರಸವತ್ತಾಗಿಯೂ” ಇರತಕ್ಕದ್ದು. ಇದು ನಮ್ಮನ್ನು ಇತರ ಜನರಿಗಿಂತ ಭಿನ್ನರಾಗಿ ಪ್ರತ್ಯೇಕಿಸಬೇಕು.—ಕೊಲೊಸ್ಸೆ 3:8-10; 4:6.
ಪಾವಿತ್ರ್ಯ ಮತ್ತು ನಮ್ಮ ಅವಿಶ್ವಾಸಿ ಕುಟುಂಬ ಸದಸ್ಯರು
11. ಪವಿತ್ರರಾಗಿರುವುದು, ಸ್ವನೀತಿವಂತರಾಗಿರುವುದನ್ನು ಅರ್ಥೈಸುವುದಿಲ್ಲವೇಕೆ?
11 ನಾವು ಶುದ್ಧಾಂತಃಕರಣದಿಂದ ಪಾವಿತ್ರ್ಯವನ್ನು ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿರಲಾಗಿ, ವಿಶೇಷವಾಗಿ ಅವಿಶ್ವಾಸಿ ಕುಟುಂಬ ಸದಸ್ಯರೊಂದಿಗೆ ವ್ಯವಹರಿಸುತ್ತಿರುವಾಗ, ನಾವು ಉತ್ಕೃಷ್ಟರೂ ಸ್ವನೀತಿವಂತರೂ ಆದವರಾಗಿ ಕಂಡುಬರಬಾರದು. ನಾವು ಒಂದು ಸಕಾರಾತ್ಮಕವಾದ ವಿಧದಲ್ಲಿ ಭಿನ್ನರಾಗಿದ್ದೇವೆ, ಯೇಸುವಿನ ದೃಷ್ಟಾಂತದಲ್ಲಿನ ಒಳ್ಳೆಯ ಸಮಾರ್ಯದವನು ತೋರಿಸಿದಂತೆಯೇ, ಪ್ರೀತಿ ಹಾಗೂ ಸಹಾನುಭೂತಿಯನ್ನು ಹೇಗೆ ತೋರಿಸಬೇಕೆಂಬುದು ನಮಗೆ ತಿಳಿದಿದೆ ಎಂಬುದನ್ನು ಅವರು ಅವಲೋಕಿಸಲು, ಕಡಿಮೆಪಕ್ಷ ನಮ್ಮ ದಯಾಪರ ಕ್ರೈಸ್ತ ನಡವಳಿಕೆಯು ಅವರಿಗೆ ಸಹಾಯ ಮಾಡಬೇಕು.—ಲೂಕ 10:30-37.
12. ಕ್ರೈಸ್ತ ಪತಿ/ಪತ್ನಿಯರು, ತಮ್ಮ ಸಂಗಾತಿಗಳಿಗೆ ಸತ್ಯವು ಹೆಚ್ಚು ಹಿಡಿಸುವಂತೆ ಹೇಗೆ ಮಾಡಸಾಧ್ಯವಿದೆ?
12 ಪೇತ್ರನು ಕ್ರೈಸ್ತ ಹೆಂಡತಿಯರಿಗೆ ಈ ಕೆಳಗಿನಂತೆ ಬರೆದಾಗ, ನಮ್ಮ ಅವಿಶ್ವಾಸಿ ಕುಟುಂಬ ಸದಸ್ಯರ ಕಡೆಗಿನ ಒಂದು ಯೋಗ್ಯವಾದ ಮನೋಭಾವದ ಪ್ರಮುಖತೆಯನ್ನು ಅವನು ಒತ್ತಿಹೇಳಿದನು: “ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.” ಒಬ್ಬ ಕ್ರೈಸ್ತ ಹೆಂಡತಿಯ (ಅಥವಾ ಅದೇ ರೀತಿಯಲ್ಲಿ ಗಂಡನ) ನಡವಳಿಕೆಯು ನಿಷ್ಕಳಂಕವೂ, ವಿಚಾರಪೂರ್ಣವೂ, ಗೌರವಭರಿತವೂ ಆದದ್ದಾಗಿರುವುದಾದರೆ, ಅವಳು ಒಬ್ಬ ಅವಿಶ್ವಾಸಿ ಸಂಗಾತಿಗೆ ಸತ್ಯವನ್ನು ಹೆಚ್ಚು ಹಿಡಿಸುವಂತೆ ಮಾಡಬಲ್ಲಳು. ಅವಿಶ್ವಾಸಿ ಪತಿ/ಪತ್ನಿಯು ತಾತ್ಸಾರದಿಂದ ಉಪಚರಿಸಲ್ಪಡದಂತೆ ಅಥವಾ ಅಲಕ್ಷಿಸಲ್ಪಡದಂತೆ, ದೇವಪ್ರಭುತ್ವ ಕಾರ್ಯತಖ್ತೆಯಲ್ಲಿ ಹೊಂದಾಣಿಕೆಯಿರಬೇಕೆಂಬುದನ್ನು ಇದು ಅರ್ಥೈಸುತ್ತದೆ.a—1 ಪೇತ್ರ 3:1, 2.
13. ಅವಿಶ್ವಾಸಿ ಗಂಡಂದಿರು ಸತ್ಯವನ್ನು ಗಣ್ಯಮಾಡುವಂತೆ, ಕೆಲವೊಮ್ಮೆ ಹಿರಿಯರು ಹಾಗೂ ಶುಶ್ರೂಷಾ ಸೇವಕರು ಹೇಗೆ ಸಹಾಯ ಮಾಡಸಾಧ್ಯವಿದೆ?
13 ಒಂದು ಮೈತ್ರಿಭಾವದಿಂದ ಅವಿಶ್ವಾಸಿ ಗಂಡನನ್ನು ಪರಿಚಯಿಸಿಕೊಳ್ಳಲು ಪ್ರಯತ್ನಿಸುವ ಮೂಲಕ, ಹಿರಿಯರು ಹಾಗೂ ಶುಶ್ರೂಷಾ ಸೇವಕರು ಕೆಲವೊಮ್ಮೆ ಸಹಾಯ ಮಾಡಸಾಧ್ಯವಿದೆ. ಈ ರೀತಿಯಲ್ಲಿ ಸಾಕ್ಷಿಗಳು, ಬೈಬಲಿನ ವಿಷಯಗಳಿಗೆ ಹೊರತಾದ ವಿಷಯಗಳನ್ನು ಒಳಗೊಂಡು, ಅಭಿರುಚಿಗಳ ವ್ಯಾಪ್ತಿಯನ್ನು ಹೊಂದಿರುವ ಸಹಜ, ಸಂಭಾವಿತ ಜನರಾಗಿದ್ದಾರೆ ಎಂಬುದನ್ನು ಅವನು ಅವಲೋಕಿಸಬಹುದು. ಒಂದು ವಿದ್ಯಮಾನದಲ್ಲಿ, ಒಬ್ಬ ಹಿರಿಯನು ಗಂಡನೊಬ್ಬನ ಮೀನುಹಿಡಿಯುವ ಹವ್ಯಾಸದಲ್ಲಿ ಆಸಕ್ತಿಯನ್ನು ತೆಗೆದುಕೊಂಡನು. ಆರಂಭದ ಅಡಚಣೆಯನ್ನು ಎದುರಿಸಿ, ಒಂದು ಗೆಳೆತನವನ್ನು ಆರಂಭಿಸಲು ಇದು ಸಾಕಾಗಿತ್ತು. ಅಂತಿಮವಾಗಿ ಗಂಡನು ಒಬ್ಬ ದೀಕ್ಷಾಸ್ನಾನಿತ ಸಹೋದರನಾಗಿ ಪರಿಣಮಿಸಿದನು. ಇನ್ನೊಂದು ವಿದ್ಯಮಾನದಲ್ಲಿ, ಅವಿಶ್ವಾಸಿ ಗಂಡನೊಬ್ಬನು ಫಿಂಚ್ ಹಕ್ಕಿಗಳಿಂದ ಆಕರ್ಷಿತನಾಗಿದ್ದನು. ಹಿರಿಯರು ತಮ್ಮ ಪ್ರಯತ್ನವನ್ನು ಬಿಟ್ಟುಬಿಡಲಿಲ್ಲ. ತಾನು ಮುಂದಿನ ಬಾರಿ ಆ ಮನುಷ್ಯನನ್ನು ಸಂಧಿಸುವಾಗ, ಆ ಗಂಡನ ಅಚ್ಚುಮೆಚ್ಚಿನ ವಿಷಯದ ಮೇಲೆ ಸಂಭಾಷಣೆಯೊಂದನ್ನು ಆರಂಭಿಸಸಾಧ್ಯವಾಗುವಂತೆ, ಅವರಲ್ಲಿ ಒಬ್ಬನು ಫಿಂಚ್ ಹಕ್ಕಿಗಳ ಕುರಿತಾದ ವಿಷಯವನ್ನು ಅಭ್ಯಾಸಿಸಿದನು! ಆದುದರಿಂದಲೇ, ಪವಿತ್ರರಾಗಿರುವುದು, ಒರಟಾಗಿರುವುದು ಅಥವಾ ಸಂಕುಚಿತ ಮನಸ್ಸುಳ್ಳವರಾಗಿರುವುದನ್ನು ಅರ್ಥೈಸುವುದಿಲ್ಲ.—1 ಕೊರಿಂಥ 9:20-23.
ನಾವು ಸಭೆಯಲ್ಲಿ ಹೇಗೆ ಪವಿತ್ರರಾಗಿರಸಾಧ್ಯವಿದೆ?
14. (ಎ) ಸಭೆಯನ್ನು ಗುಪ್ತವಾಗಿ ಶಿಥಿಲಗೊಳಿಸುವುದಕ್ಕಾಗಿರುವ ಸೈತಾನನ ವಿಧಾನಗಳಲ್ಲಿ ಒಂದು ಯಾವುದು? (ಬಿ) ನಾವು ಹೇಗೆ ಸೈತಾನನ ಪಾಶವನ್ನು ಪ್ರತಿರೋಧಿಸಸಾಧ್ಯವಿದೆ?
14 ಪಿಶಾಚನಾದ ಸೈತಾನನು ಮಿಥ್ಯಾಪವಾದಿಯಾಗಿದ್ದಾನೆ, ಏಕೆಂದರೆ ಪಿಶಾಚನಿಗಾಗಿರುವ ಗ್ರೀಕ್ ಹೆಸರು ಡಯಾಬೊಲಾಸ್ ಆಗಿದ್ದು, “ಆಪಾದಕ” ಅಥವಾ “ಮಿಥ್ಯಾಪವಾದಿ” ಎಂಬುದು ಅದರ ಅರ್ಥವಾಗಿದೆ. ಅವನ ವಿಶೇಷತೆಗಳಲ್ಲಿ ಮಿಥ್ಯಾಪವಾದವು ಒಂದಾಗಿದೆ, ಮತ್ತು ಅವನು ಇದನ್ನು ಸಭೆಯಲ್ಲಿ ಉಪಯೋಗಿಸಲು ಪ್ರಯತ್ನಿಸುತ್ತಾನೆ. ಅವನ ಅಚ್ಚುಮೆಚ್ಚಿನ ವಿಧಾನವು ಹರಟೆಯಾಗಿದೆ. ಈ ಅಪವಿತ್ರ ನಡವಳಿಕೆಯಲ್ಲಿ ಅವನ ಮೋಸಕ್ಕೆ ಒಳಗಾಗುವಂತೆ ನಾವು ನಮ್ಮನ್ನು ಅನುಮತಿಸಿಕೊಳ್ಳುತ್ತೇವೊ? ಅದು ಹೇಗೆ ಸಂಭವಿಸಸಾಧ್ಯವಿದೆ? ಹರಟೆಯನ್ನು ಆರಂಭಿಸುವ ಮೂಲಕ, ಅದನ್ನು ಪುನರಾವರ್ತಿಸುವ ಮೂಲಕ, ಅಥವಾ ಅದಕ್ಕೆ ಕಿವಿಗೊಡುವ ಮೂಲಕವೇ. ವಿವೇಕಯುತವಾದ ಜ್ಞಾನೋಕ್ತಿಯು ಹೇಳುವುದು: “ತುಂಟನು ಜಗಳ ಬಿತ್ತುತ್ತಾನೆ; ಚಾಡಿಕೋರನು [“ಮಿಥ್ಯಾಪವಾದಿಯು,” NW] ಮಿತ್ರರನ್ನು ಅಗಲಿಸುತ್ತಾನೆ.” (ಜ್ಞಾನೋಕ್ತಿ 16:28) ಹರಟೆ ಮತ್ತು ಮಿಥ್ಯಾಪವಾದಕ್ಕೆ ಪರಿಹಾರವೇನು? ನಮ್ಮ ಮಾತು ಯಾವಾಗಲೂ ಭಕ್ತಿವೃದ್ಧಿಯನ್ನು ಉಂಟುಮಾಡುವಂತಹದ್ದೂ ಪ್ರೀತಿಯ ಮೇಲಾಧಾರಿತವಾದದ್ದೂ ಆಗಿರುವಂತೆ ನಾವು ಖಚಿತಪಡಿಸಿಕೊಳ್ಳಬೇಕು. ನಮ್ಮ ಸಹೋದರರ ಕಲ್ಪಿತ ದುರ್ಗುಣಗಳಿಗೆ ಬದಲಾಗಿ, ನಾವು ಸದ್ಗುಣಗಳಿಗಾಗಿ ಹುಡುಕುತ್ತಿರುವುದಾದರೆ, ನಮ್ಮ ಸಂಭಾಷಣೆಯು ಯಾವಾಗಲೂ ಹಿತಕರವೂ ಆತ್ಮಿಕವೂ ಆದದ್ದಾಗಿರುವುದು. ಟೀಕೆಮಾಡುವುದು ಸುಲಭ ಎಂಬುದನ್ನು ನೆನಪಿನಲ್ಲಿಡಿರಿ. ಮತ್ತು ನಿಮ್ಮೊಂದಿಗೆ ಬೇರೆಯವರ ಕುರಿತಾಗಿ ಹರಟೆಯಾಡುವ ವ್ಯಕ್ತಿಯು, ನಿಮ್ಮ ಕುರಿತಾಗಿ ಬೇರೆಯವರೊಂದಿಗೂ ಹರಟೆಯಾಡಬಹುದು!—1 ತಿಮೊಥೆಯ 5:13; ತೀತ 2:3.
15. ಸಭೆಯಲ್ಲಿರುವ ಎಲ್ಲರನ್ನೂ ಪವಿತ್ರರಾಗಿರಿಸಲು, ಯಾವ ಕ್ರಿಸ್ತಸದೃಶ ಗುಣಗಳು ಸಹಾಯ ಮಾಡುವವು?
15 ಸಭೆಯನ್ನು ಪವಿತ್ರವಾಗಿಡುವ ಸಲುವಾಗಿ, ನಮಗೆಲ್ಲರಿಗೂ ಕ್ರಿಸ್ತನ ಮನಸ್ಸನ್ನು ಹೊಂದಿರುವ ಅಗತ್ಯವಿದೆ, ಮತ್ತು ಅವನ ಪ್ರಧಾನ ಗುಣವು ಪ್ರೀತಿಯಾಗಿದೆ ಎಂಬುದು ನಮಗೆ ತಿಳಿದಿದೆ. ಹೀಗೆ, ಕ್ರಿಸ್ತಸದೃಶ ಸಹಾನುಭೂತಿಯುಳ್ಳವರಾಗಿರುವಂತೆ ಪೌಲನು ಕೊಲೊಸ್ಸೆಯವರಿಗೆ ಸಲಹೆನೀಡಿದನು: “ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. . . . ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. . . . ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.” ತದನಂತರ ಅವನು ಕೂಡಿಸಿದ್ದು: “ಕ್ರಿಸ್ತನಿಂದಾದ ಸಮಾಧಾನವು ನಿಮ್ಮ ಹೃದಯಗಳಲ್ಲಿ ಯಜಮಾನನಂತಿದ್ದು ತೀರ್ಪುಹೇಳಲಿ.” ನಿಶ್ಚಯವಾಗಿಯೂ ಈ ಕ್ಷಮಿಸುವ ಮನೋಭಾವದಿಂದ, ನಾವು ಸಭೆಯ ಐಕ್ಯ ಹಾಗೂ ಪಾವಿತ್ರ್ಯವನ್ನು ಕಾಪಾಡಿಕೊಳ್ಳಸಾಧ್ಯವಿದೆ.—ಕೊಲೊಸ್ಸೆ 3:12-15.
ನಮ್ಮ ಪಾವಿತ್ರ್ಯವು ನಮ್ಮ ನೆರೆಹೊರೆಯಲ್ಲಿ ತೋರಿಬರುತ್ತದೆಯೆ?
16. ನಮ್ಮ ಪವಿತ್ರ ಆರಾಧನೆಯು ಸಂತೋಷಭರಿತ ಆರಾಧನೆಯಾಗಿರಬೇಕು ಏಕೆ?
16 ನಮ್ಮ ನೆರೆಯವರ ಕುರಿತಾಗಿ ಏನು? ಅವರು ನಮ್ಮನ್ನು ಹೇಗೆ ವೀಕ್ಷಿಸುತ್ತಾರೆ? ನಾವು ಸತ್ಯದ ಆನಂದವನ್ನು ಪ್ರಸರಿಸುತ್ತೇವೊ, ಅಥವಾ ನಾವು ಅದನ್ನು ಒಂದು ಹೊರೆಯಾಗಿ ಕಾಣುವಂತೆ ಮಾಡುತ್ತೇವೊ? ಯೆಹೋವನು ಪವಿತ್ರನಾಗಿರುವಂತೆಯೇ ನಾವೂ ಪವಿತ್ರರಾಗಿರುವುದಾದರೆ, ಅದು ನಮ್ಮ ಮಾತಿನಲ್ಲಿ ಮತ್ತು ನಮ್ಮ ನಡವಳಿಕೆಯಲ್ಲಿ ವ್ಯಕ್ತವಾಗಬೇಕು. ನಮ್ಮ ಪವಿತ್ರ ಆರಾಧನೆಯು ಸಂತೋಷಭರಿತ ಆರಾಧನೆಯಾಗಿದೆ ಎಂಬುದು ಸ್ಪಷ್ಟವಾಗಿರತಕ್ಕದ್ದು. ಅದೇಕೆ? ಏಕೆಂದರೆ ತನ್ನ ಆರಾಧಕರು ಆನಂದಭರಿತರಾಗಿರುವಂತೆ ಬಯಸುವ ಯೆಹೋವ ದೇವರು, ಒಬ್ಬ ಸಂತೋಷಭರಿತ ದೇವರಾಗಿದ್ದಾನೆ. ಆದುದರಿಂದ, ಪುರಾತನ ಕಾಲಗಳಲ್ಲಿದ್ದ ಯೆಹೋವನ ಜನರ ಕುರಿತಾಗಿ ಕೀರ್ತನೆಗಾರನು ಹೀಗೆ ಹೇಳಸಾಧ್ಯವಿತ್ತು: “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು [“ಸಂತೋಷಿತರು,” NW].” ಆ ಸಂತೋಷವನ್ನು ನಾವು ಪ್ರತಿಬಿಂಬಿಸುತ್ತೇವೊ? ರಾಜ್ಯ ಸಭಾಗೃಹದಲ್ಲಿ ಮತ್ತು ಸಮ್ಮೇಳನಗಳಲ್ಲಿ, ಯೆಹೋವನ ಜನರ ಮಧ್ಯೆ ಇರುವುದರಲ್ಲಿ ನಮ್ಮ ಮಕ್ಕಳು ಸಹ ಸಂತುಷ್ಟಿಯನ್ನು ಪ್ರದರ್ಶಿಸುತ್ತಾರೊ?—ಕೀರ್ತನೆ 89:15, 16; 144:15ಬಿ.
17. ಸಮತೂಕದ ಪಾವಿತ್ರ್ಯವನ್ನು ತೋರಿಸಲಿಕ್ಕಾಗಿ ನಾವು ಒಂದು ಪ್ರಾಯೋಗಿಕ ವಿಧದಲ್ಲಿ ಏನು ಮಾಡಬಲ್ಲೆವು?
17 ನಮ್ಮ ಸಹಕಾರದ ಮನೋಭಾವ ಮತ್ತು ಸ್ನೇಹಭಾವದ ದಯಾಪರತೆಯ ಮೂಲಕವಾಗಿ ಸಹ, ನಾವು ನಮ್ಮ ಸಮತೂಕದ ಪಾವಿತ್ರ್ಯವನ್ನು ತೋರಿಸಬಲ್ಲೆವು. ಕೆಲವೊಮ್ಮೆ ಬಹುಶಃ ನೆರೆಹೊರೆಯನ್ನು ಶುಚಿಗೊಳಿಸಲು ಅಥವಾ ಕೆಲವು ದೇಶಗಳಲ್ಲಿರುವಂತೆ, ರಸ್ತೆಗಳನ್ನು ಹಾಗೂ ಹೆದ್ದಾರಿಗಳನ್ನು ಉತ್ತಮಗೊಳಿಸಲು ನೆರೆಯವರು ಸಹಕರಿಸುವುದು ಅಗತ್ಯವಾದದ್ದಾಗಿದೆ. ಈ ವಿಷಯಕ್ಕೆ ಸಂಬಂಧಿಸಿ, ನಮ್ಮ ತೋಟಗಳು, ಅಂಗಣಗಳು, ಅಥವಾ ಇನ್ನಿತರ ಸೊತ್ತನ್ನು ನಾವು ಹೇಗೆ ನೋಡಿಕೊಳ್ಳುತ್ತೇವೆ ಎಂಬುದರಲ್ಲಿಯೂ ನಮ್ಮ ಪಾವಿತ್ರ್ಯವು ವ್ಯಕ್ತವಾಗಸಾಧ್ಯವಿದೆ. ಸುತ್ತಲೂ ಕಸವು ಬಿದ್ದಿರುವಂತೆ ನಾವು ಬಿಟ್ಟಿರುವುದಾದರೆ ಅಥವಾ ಮುರಿದುಹೋದ ವಾಹನಗಳನ್ನು ಎಲ್ಲರೂ ನೋಡುವಂತೆ ಇಟ್ಟಿರುವುದರೊಂದಿಗೆ, ಅಂಗಣವನ್ನು ಕೊಳಕಾಗಿಡುವುದಾದರೆ, ನಮ್ಮ ನೆರೆಯವರನ್ನು ಗೌರವದಿಂದ ಉಪಚರಿಸುತ್ತಿದ್ದೇವೆಂದು ನಾವು ಹೇಳಸಾಧ್ಯವಿದೆಯೊ?—ಪ್ರಕಟನೆ 11:18.
ಕೆಲಸದ ಸ್ಥಳದಲ್ಲಿ ಮತ್ತು ಶಾಲೆಯಲ್ಲಿ ಪಾವಿತ್ರ್ಯ
18. (ಎ) ಇಂದು ಕ್ರೈಸ್ತರಿಗೆ ಯಾವುದು ಒಂದು ಸಂಕಟಕರವಾದ ಸ್ಥಿತಿಯಾಗಿದೆ? (ಬಿ) ನಾವು ಲೋಕದಿಂದ ಹೇಗೆ ಭಿನ್ನರಾಗಿರಸಾಧ್ಯವಿದೆ?
18 ಅಪವಿತ್ರವಾಗಿದ್ದ ಕೊರಿಂಥ ನಗರದಲ್ಲಿದ್ದ ಕ್ರೈಸ್ತರಿಗೆ, ಅಪೊಸ್ತಲ ಪೌಲನು ಬರೆದುದು: “ಜಾರರ ಸಹವಾಸ ಮಾಡಬಾರದೆಂದು ನನ್ನ ಪತ್ರಿಕೆಯಲ್ಲಿ ಬರೆದಿದ್ದೆನಷ್ಟೆ. ಈ ಲೋಕದಲ್ಲಿರುವ ಜಾರರು, ಲೋಭಿಗಳು, ಸುಲುಕೊಳ್ಳುವವರು, ವಿಗ್ರಹಾರಾಧಕರು ಇವರ ಸಹವಾಸವನ್ನು ಬಿಟ್ಟುಬಿಡಬೇಕೆಂದು ನನ್ನ ತಾತ್ಪರ್ಯವಲ್ಲ; ಹಾಗೆ ಬಿಡಬೇಕಾದರೆ ನೀವು ಈ ಲೋಕವನ್ನೇ ಬಿಟ್ಟುಹೋಗಬೇಕಾಗುವದು.” (1 ಕೊರಿಂಥ 5:9, 10) ಅನೈತಿಕತೆಯ ಅಥವಾ ನೀತಿಪ್ರಜ್ಞೆಯಿಲ್ಲದ ಜನರೊಂದಿಗೆ ದಿನಾಲೂ ಸಂಪರ್ಕಮಾಡುವ ಕ್ರೈಸ್ತರಿಗೆ ಇದು ಸಂಕಟಕರವಾದ ಸ್ಥಿತಿಯಾಗಿದೆ. ವಿಶೇಷವಾಗಿ ಲೈಂಗಿಕ ಕಿರುಕುಳ, ಭ್ರಷ್ಟಾಚಾರ, ಮತ್ತು ಅಪ್ರಾಮಾಣಿಕತೆಗಳು ಉತ್ತೇಜಿಸಲ್ಪಟ್ಟು, ಮನ್ನಿಸಲ್ಪಡುವ ಸಂಸ್ಕೃತಿಗಳಲ್ಲಿ, ಇದು ಸಮಗ್ರತೆಯ ಒಂದು ಮಹಾ ಪರೀಕ್ಷೆಯಾಗಿದೆ. ಈ ಸನ್ನಿವೇಶದಲ್ಲಿ, ನಮ್ಮ ಸುತ್ತಲೂ ಇರುವ ಜನರಿಗೆ “ಸಹಜ” ಸ್ವಭಾವದವರಾಗಿ ಕಂಡುಬರಲಿಕ್ಕಾಗಿ, ನಮ್ಮ ಮಟ್ಟಗಳನ್ನು ಕೀಳ್ಮಟ್ಟಕ್ಕೆ ಇಳಿಸಲು ನಾವು ಅನುವುಮಾಡಿಕೊಡಸಾಧ್ಯವಿಲ್ಲ. ಬದಲಾಗಿ, ದಯಾಪರವಾದರೂ ಭಿನ್ನವಾದ ನಮ್ಮ ಕ್ರೈಸ್ತ ನಡವಳಿಕೆಯು, ತಮ್ಮ ಆತ್ಮಿಕ ಅಗತ್ಯವನ್ನು ಗ್ರಹಿಸಿಕೊಂಡು, ಹೆಚ್ಚು ಉತ್ತಮವಾದ ಒಂದು ವಿಷಯಕ್ಕಾಗಿ ಹುಡುಕುತ್ತಿರುವ ವಿವೇಚನಾಶಕ್ತಿಯ ಜನರಿಗೆ, ಪ್ರಧಾನವಾಗಿ ಕಾಣುವಂತೆ ಮಾಡಲು ನಮ್ಮನ್ನು ಪ್ರಚೋದಿಸತಕ್ಕದ್ದು.—ಮತ್ತಾಯ 5:3; 1 ಪೇತ್ರ 3:16, 17.
19. (ಎ) ಮಕ್ಕಳಾದ ನಿಮಗೆ ಶಾಲೆಯಲ್ಲಿ ಯಾವ ಪರೀಕ್ಷೆಗಳಿವೆ? (ಬಿ) ತಮ್ಮ ಮಕ್ಕಳು ಹಾಗೂ ಅವರ ಪವಿತ್ರ ನಡವಳಿಕೆಯನ್ನು ಬೆಂಬಲಿಸಲಿಕ್ಕಾಗಿ, ಹೆತ್ತವರು ಏನು ಮಾಡಬಲ್ಲರು?
19 ತದ್ರೀತಿಯಲ್ಲಿ, ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಎದುರಾಗುತ್ತಿರುವ ಅನೇಕ ಪರೀಕ್ಷೆಗಳಿವೆ. ಹೆತ್ತವರಾದ ನೀವು ನಿಮ್ಮ ಮಕ್ಕಳು ಹಾಜರಾಗುವ ಶಾಲೆಗೆ ಭೇಟಿನೀಡುತ್ತೀರೊ? ಅಲ್ಲಿ ಎಂತಹ ರೀತಿಯ ವಾತಾವರಣವು ಅಸ್ತಿತ್ವದಲ್ಲಿದೆ ಎಂಬುದು ನಿಮಗೆ ತಿಳಿದಿದೆಯೊ? ಶಿಕ್ಷಕರೊಂದಿಗೆ ನಿಮಗೆ ಒಂದು ಹೊಂದಿಕೆಯ ಸಂಬಂಧವಿದೆಯೊ? ಈ ಪ್ರಶ್ನೆಗಳು ಏಕೆ ಪ್ರಮುಖವಾಗಿವೆ? ಏಕೆಂದರೆ ಲೋಕದ ಅನೇಕ ನಗರ ಕ್ಷೇತ್ರಗಳಲ್ಲಿ, ಶಾಲೆಗಳು ಹಿಂಸಾಕೃತ್ಯ, ಅಮಲೌಷಧಗಳು, ಹಾಗೂ ಲೈಂಗಿಕತೆಯ ಕಾಡುಗಳಾಗಿ ಪರಿಣಮಿಸಿವೆ. ನಿಮ್ಮ ಮಕ್ಕಳು ತಮ್ಮ ಹೆತ್ತವರಿಂದ ಸಂಪೂರ್ಣ ಅನುಕಂಪದ ಬೆಂಬಲವನ್ನು ಪಡೆದುಕೊಳ್ಳದಿರುವುದಾದರೆ, ಅವರು ತಮ್ಮ ಸಮಗ್ರತೆಯನ್ನು ಹಾಗೂ ತಮ್ಮ ನಡವಳಿಕೆಯನ್ನು ಹೇಗೆ ಪವಿತ್ರವಾಗಿರಿಸಿಕೊಳ್ಳಬಲ್ಲರು? ಸೂಕ್ತವಾಗಿಯೇ ಪೌಲನು ಹೆತ್ತವರಿಗೆ ಸಲಹೆನೀಡಿದ್ದು: “ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.” (ಕೊಲೊಸ್ಸೆ 3:21) ಮಕ್ಕಳನ್ನು ಕೆಣಕುವ ಒಂದು ವಿಧವು, ಅವರ ದೈನಂದಿನ ಸಮಸ್ಯೆಗಳನ್ನೂ ಪರೀಕ್ಷೆಗಳನ್ನೂ ತಿಳಿದುಕೊಳ್ಳಲು ತಪ್ಪಿಹೋಗುವುದೇ ಆಗಿದೆ. ಶಾಲೆಯಲ್ಲಿನ ಶೋಧನೆಗಳಿಗಾಗಿ ತಯಾರಿಸುವಿಕೆಯು, ಒಂದು ಕ್ರೈಸ್ತ ಮನೆಯ ಆತ್ಮಿಕ ವಾತಾವರಣದಲ್ಲಿ ಆರಂಭವಾಗುತ್ತದೆ.—ಧರ್ಮೋಪದೇಶಕಾಂಡ 6:6-9; ಜ್ಞಾನೋಕ್ತಿ 22:6.
20. ನಮಗೆಲ್ಲರಿಗೂ ಪಾವಿತ್ರ್ಯವು ಏಕೆ ಅತ್ಯಗತ್ಯವಾಗಿದೆ?
20 ಮುಕ್ತಾಯದಲ್ಲಿ, ಪಾವಿತ್ರ್ಯವು ನಮಗೆಲ್ಲರಿಗೂ ಏಕೆ ಅತ್ಯಗತ್ಯವಾಗಿದೆ? ಏಕೆಂದರೆ ಇದು ಸೈತಾನನ ಲೋಕ ಹಾಗೂ ಆಲೋಚನೆಯ ದುರಾಕ್ರಮಣಗಳ ವಿರುದ್ಧವಾಗಿ ಒಂದು ಸಂರಕ್ಷಣೆಯೋಪಾದಿ ಕಾರ್ಯನಡಿಸುತ್ತದೆ. ಇದು ಈಗ ಒಂದು ಆಶೀರ್ವಾದವಾಗಿದೆ ಮತ್ತು ಭವಿಷ್ಯತ್ತಿನಲ್ಲೂ ಒಂದು ಆಶೀರ್ವಾದವಾಗಿರುವುದು. ನೀತಿಯ ಹೊಸ ಲೋಕದಲ್ಲಿ ನೈಜ ಜೀವಿತವಾಗಲಿರುವ ಜೀವಿತವನ್ನು ನಮಗೆ ಖಾತರಿಪಡಿಸಲು ಅದು ಸಹಾಯ ಮಾಡುತ್ತದೆ. ಇದು ನಾವು ನಿಷ್ಕರುಣೆಯ ಉನ್ಮತ್ತಾಭಿಮಾನಿಗಳಲ್ಲ, ಬದಲಾಗಿ ಸಮತೂಕದ, ಸ್ನೇಹಶೀಲ, ಸಂವಾದಶೀಲ ಕ್ರೈಸ್ತರಾಗಿರಲು ನಮಗೆ ಸಹಾಯ ಮಾಡುತ್ತದೆ. ಸರಳವಾಗಿ ಹೇಳುವಲ್ಲಿ, ಇದು ನಮ್ಮನ್ನು ಕ್ರಿಸ್ತಸದೃಶರನ್ನಾಗಿ ಮಾಡುತ್ತದೆ.—1 ತಿಮೊಥೆಯ 6:19.
[ಪಾದಟಿಪ್ಪಣಿ]
a ಅವಿಶ್ವಾಸಿ ಸಂಗಾತಿಗಳೊಂದಿಗಿನ ಚತುರ ಸಂಬಂಧಗಳ ಕುರಿತಾದ ಇನ್ನೂ ಹೆಚ್ಚಿನ ಮಾಹಿತಿಗಾಗಿ, ಆಗಸ್ಟ್ 15, 1990ರ ದ ವಾಚ್ಟವರ್ ಪತ್ರಿಕೆಯ, 20-2ನೆಯ ಪುಟಗಳಲ್ಲಿರುವ “ನಿಮ್ಮ ಸಂಗಾತಿಯನ್ನು ನಿರ್ಲಕ್ಷಿಸಬೇಡಿ!” ಎಂಬ ಲೇಖನವನ್ನೂ, ನವೆಂಬರ್ 1, 1988, 24-5ನೆಯ ಪುಟಗಳಲ್ಲಿರುವ, 20-2 ಪ್ಯಾರಗ್ರಾಫ್ಗಳನ್ನು ನೋಡಿರಿ.
ನಿಮಗೆ ನೆನಪಿದೆಯೊ?
◻ ಪಾವಿತ್ರ್ಯದ ಕುರಿತಾಗಿ ಕ್ರೈಸ್ತರಿಗೆ ಸಲಹೆನೀಡುವ ಅಗತ್ಯವನ್ನು ಪೇತ್ರನು ಏಕೆ ನೋಡಿದನು?
◻ ಒಂದು ಪವಿತ್ರ ಜೀವನವನ್ನು ನಡೆಸುವುದು ಏಕೆ ಸುಲಭವಾಗಿರುವುದಿಲ್ಲ?
◻ ಕುಟುಂಬದಲ್ಲಿ ಪಾವಿತ್ರ್ಯವನ್ನು ಉತ್ತಮಗೊಳಿಸಲಿಕ್ಕಾಗಿ, ನಾವೆಲ್ಲರೂ ಏನು ಮಾಡಸಾಧ್ಯವಿದೆ?
◻ ಸಭೆಯು ಪವಿತ್ರವಾಗಿ ಉಳಿಯಲಿಕ್ಕಾಗಿ, ಯಾವ ಅಪವಿತ್ರ ನಡವಳಿಕೆಯನ್ನು ನಾವು ತೊರೆಯಬೇಕು?
◻ ಕೆಲಸದ ಸ್ಥಳದಲ್ಲಿ ಮತ್ತು ಶಾಲೆಯಲ್ಲಿ ನಾವು ಹೇಗೆ ಪವಿತ್ರರಾಗಿ ಉಳಿಯಸಾಧ್ಯವಿದೆ?
[Pictures on page 16, 17]
ಯೆಹೋವನ ಸಾಕ್ಷಿಗಳೋಪಾದಿ, ದೇವರ ಸೇವೆಮಾಡುವುದರಲ್ಲಿ ಮತ್ತು ಇತರ ಚಟುವಟಿಕೆಗಳಲ್ಲಿ ನಾವು ಆನಂದಭರಿತರಾಗಿರತಕ್ಕದ್ದು