ತಿಮೊತಿಗೆ ಬರೆದ ಮೊದಲನೇ ಪತ್ರ
6 ಎಲ್ಲ ಆಳುಗಳು ತಮ್ಮ ಯಜಮಾನರಿಗೆ ತುಂಬ ಗೌರವ ಕೊಡ್ಲಿ.+ ಆಗ ದೇವರ ಹೆಸ್ರನ್ನ, ಆತನ ಬೋಧನೆಯನ್ನ ಯಾರೂ ಅವಮಾನ ಮಾಡಲ್ಲ.+ 2 ನಿಮ್ಮ ಯಜಮಾನರು ಕ್ರೈಸ್ತರಾಗಿದ್ರೆ ‘ಇವರು ನಮ್ಮ ಸಹೋದರರಲ್ವಾ, ಪರ್ವಾಗಿಲ್ಲ’ ಅಂದ್ಕೊಂಡು ಅವ್ರ ಜೊತೆ ಅಗೌರವದಿಂದ ನಡ್ಕೊಬಾರದು. ಬದಲಿಗೆ ಇನ್ನೂ ಜಾಸ್ತಿ ಕಷ್ಟಪಟ್ಟು ಕೆಲಸ ಮಾಡಬೇಕು. ಯಾಕಂದ್ರೆ ಅಂಥ ಶ್ರಮದಿಂದ ಕ್ರೈಸ್ತರು, ನಮ್ಮ ಪ್ರೀತಿಯ ಸಹೋದರರು ಪ್ರಯೋಜನ ಪಡಿತಾರೆ.
ಈ ವಿಷ್ಯಗಳನ್ನ ಕಲಿಸ್ತಾ ಇರು, ಅದ್ರ ಪ್ರಕಾರ ನಡಿಯೋಕೆ ಬುದ್ಧಿ ಹೇಳ್ತಾ ಇರು. 3 ಯಾವನಾದ್ರೂ ಸುಳ್ಳು ವಿಷ್ಯಗಳನ್ನ ಕಲಿಸಿದ್ರೆ, ನಮ್ಮ ಪ್ರಭು ಯೇಸು ಕ್ರಿಸ್ತನ ಒಳ್ಳೇ* ಬೋಧನೆಯನ್ನ ಅವನು ಒಪ್ಪದಿದ್ರೆ,+ ಅವನು ಕಲಿಸೋದು ದೇವರಿಗೆ ನಂಬಿಗಸ್ತರಾಗಿ ಇರೋಕೆ ಸಹಾಯ ಮಾಡದಿದ್ರೆ+ 4 ಅವನು ಅಹಂಕಾರದಿಂದ ಉಬ್ಬಿಕೊಂಡವನು, ಬುದ್ಧಿ ಇಲ್ಲದವನು ಆಗಿದ್ದಾನೆ.+ ವಾದ-ವಿವಾದಗಳಲ್ಲಿ, ಪದಗಳ ಬಗ್ಗೆ ಜಗಳ ಮಾಡೋದ್ರಲ್ಲಿ ಮುಳುಗಿರ್ತಾನೆ.*+ ಇಂಥ ವಿಷ್ಯಗಳಿಂದ ಹೊಟ್ಟೆಕಿಚ್ಚು, ಜಗಳ, ಸುಳ್ಳು ಆರೋಪ,* ಕೆಟ್ಟ ಸಂಶಯ ಹುಟ್ಟುತ್ತೆ ಅಷ್ಟೇ. 5 ಕೊಳಕು ಮನಸ್ಸಿನವರು, ಸತ್ಯವನ್ನ ಅರ್ಥನೇ ಮಾಡ್ಕೊಳ್ಳದವರು ಚಿಕ್ಕಪುಟ್ಟ ವಿಷ್ಯಕ್ಕೆಲ್ಲ ಜಗಳ ಮಾಡ್ತಾ ಇರ್ತಾರೆ.+ ಅವರು ದೇವರ ಭಕ್ತಿಯನ್ನ ಲಾಭ ಮಾಡೋಕೆ ಒಂದು ದಾರಿ ಅಂತ ಯೋಚಿಸ್ತಾರೆ.+ 6 ದೇವರ ಭಕ್ತಿ ಇದ್ರೆ ತುಂಬ ಲಾಭ ಇದೆ ಅನ್ನೋದು ನಿಜ. ಆದ್ರೆ ಆ ಭಕ್ತಿಯಿಂದ ಇರೋದ್ರಲ್ಲೇ ತೃಪ್ತಿ ಪಡ್ಯೋ ಗುಣ ಇದ್ರೆ ಮಾತ್ರ ಆ ಲಾಭ ಸಿಗುತ್ತೆ.+ 7 ಯಾಕಂದ್ರೆ ನಾವು ಹುಟ್ಟಿದಾಗ ಲೋಕಕ್ಕೆ ಏನೂ ತಗೊಂಡು ಬರಲಿಲ್ಲ, ಸತ್ತಾಗ್ಲೂ ಏನೂ ತಗೊಂಡು ಹೋಗಲ್ಲ.+ 8 ಹಾಗಾಗಿ ನಮಗೆ ಊಟ ಬಟ್ಟೆ* ಇದ್ರೆ ಸಾಕು. ಅದ್ರಲ್ಲೇ ತೃಪ್ತಿ ಪಡಬೇಕು.+
9 ಹೇಗಾದ್ರೂ ಶ್ರೀಮಂತರಾಗಬೇಕು ಅಂದ್ಕೊಳ್ಳೋರು ಕೆಟ್ಟ ಯೋಚನೆಗಳಿಗೆ, ಉರ್ಲಿಗೆ,+ ತುಂಬ ಹುಚ್ಚು ಆಸೆಗಳಿಗೆ ಬಲಿ ಆಗ್ತಾರೆ. ಇಂಥ ಆಸೆಗಳು ಅಪಾಯಕಾರಿ. ಅಷ್ಟೇ ಅಲ್ಲ, ಆ ಆಸೆಗಳು ನಾಶದ ಮತ್ತು ಸಾವಿನ ಗುಂಡಿಗೆ ತಳ್ಳುತ್ತೆ.+ 10 ಹಣದಾಸೆ ಎಲ್ಲ ತರದ ಕೆಟ್ಟತನಕ್ಕೆ ಮೂಲ. ಆ ಆಸೆಯಿಂದಾನೇ ಕೆಲವರು ನಂಬಿಕೆ ಕಳ್ಕೊಂಡಿದ್ದಾರೆ, ತುಂಬ ದುಃಖ ನೋವಲ್ಲಿ ಬಳಲಿಬೆಂಡಾಗಿದ್ದಾರೆ.*+
11 ಆದ್ರೆ ದೇವರ ಸೇವಕನೇ, ನೀನು ಇದ್ರಿಂದ ದೂರ ಓಡು. ನೀತಿ, ದೇವರ ಭಕ್ತಿ, ನಂಬಿಕೆ, ಪ್ರೀತಿ, ತಾಳ್ಮೆ, ಸೌಮ್ಯತೆ ಇವನ್ನ ಬೆಳೆಸ್ಕೊಳ್ಳೋಕೆ ಪ್ರಯತ್ನ ಮಾಡು.+ 12 ನಿನ್ನ ನಂಬಿಕೆ ಸರಿ ಅಂತ ತೋರಿಸೋಕೆ ಒಳ್ಳೇ ಹೋರಾಟ ಮಾಡು. ಶಾಶ್ವತ ಜೀವವನ್ನ ಬಿಗಿಯಾಗಿ ಹಿಡ್ಕೊ. ಆ ಜೀವ ಪಡಿಯೋಕೇ ದೇವರು ನಿನ್ನನ್ನ ಕರೆದನು ತಾನೇ? ತುಂಬ ಜನ್ರ ಮುಂದೆ ನೀನು ಈ ಜೀವದ ಬಗ್ಗೆ ಒಳ್ಳೇ ಸಾಕ್ಷಿ ಕೊಟ್ಟೆ.
13 ಎಲ್ಲವನ್ನ ಜೀವಂತವಾಗಿ ಇಡೋ ದೇವರ ಮುಂದೆ ಮತ್ತು ಪೊಂತ್ಯ ಪಿಲಾತನಿಗೆ+ ಒಳ್ಳೇ ಸಾಕ್ಷಿ ಕೊಟ್ಟ ಕ್ರಿಸ್ತ ಯೇಸು ಮುಂದೆ ನಾನು ನಿನಗೆ ಈ ಆಜ್ಞೆಗಳನ್ನ ಕೊಡ್ತೀನಿ. 14 ನಿನ್ನಲ್ಲಿ ತಪ್ಪು ಸಿಗದ ಹಾಗೆ, ಯಾರೂ ನಿನ್ನ ಕಡೆ ಬೆರಳು ತೋರಿಸದ ಹಾಗೆ ಈ ಆಜ್ಞೆಗಳನ್ನ ಪಾಲಿಸು. ನಮ್ಮ ಪ್ರಭು ಯೇಸು ಕ್ರಿಸ್ತ ಮತ್ತೆ ಬರೋ ತನಕ ಅವನ್ನ ಪಾಲಿಸು.+ 15 ಸರಿಯಾದ ಸಮಯಕ್ಕೆ ಆತನು ಮತ್ತೆ ಬರ್ತಾನೆ. ಆತನೇ ಸಂತೋಷವಾಗಿರೋ ಬಲಶಾಲಿ ಪ್ರಭು. ಆತನು ರಾಜರ ರಾಜ, ಒಡೆಯರ ಒಡೆಯ.+ 16 ಅವ್ರಲ್ಲಿ ಆತನೊಬ್ಬನೇ ಅಮರ.+ ಹೊಳೆಯೋ ಬೆಳಕಿರೋ+ ಜಾಗದಲ್ಲಿ ಆತನು ವಾಸ ಮಾಡ್ತಾನೆ. ಅಲ್ಲಿ ಆತನನ್ನ ಯಾವ ಮನುಷ್ಯನೂ ನೋಡಿಲ್ಲ, ನೋಡೋಕೆ ಸಾಧ್ಯನೂ ಇಲ್ಲ.+ ಅಲ್ಲಿಗೆ ಹೋಗೋಕೆ ಯಾರಿಗೂ ಆಗಲ್ಲ. ಆತನಿಗೆ ಗೌರವ, ನಿರಂತರ ಬಲ ಸಿಗ್ಲಿ. ಆಮೆನ್.
17 ಈ ಲೋಕದಲ್ಲಿ* ಶ್ರೀಮಂತರಾಗಿ ಇರುವವ್ರಿಗೆ ಅಹಂಕಾರ ಪಡಬಾರದು ಅಂತ ಬುದ್ಧಿ ಹೇಳು.* ಕಣ್ಮರೆ ಆಗೋ ಐಶ್ವರ್ಯವನ್ನ+ ನಂಬದೆ, ನಮ್ಮ ಖುಷಿಗಾಗಿ ಎಲ್ಲವನ್ನೂ ತುಂಬಿತುಳುಕುವಷ್ಟು ಕೊಡೋ ದೇವರ ಮೇಲೆ ಭರವಸೆ ಇಡೋಕೆ ಹೇಳು.+ 18 ಒಳ್ಳೇದು ಮಾಡಬೇಕಂತ, ಒಳ್ಳೇ ಕೆಲಸಗಳನ್ನ ಮಾಡಬೇಕಂತ, ಧಾರಾಳ ಮನಸ್ಸಿನವರು* ಹಂಚ್ಕೊಳ್ಳೋ ಮನಸ್ಸಿನವರು+ ಆಗಿರಬೇಕಂತ ಹೇಳು. 19 ಹೀಗೆ ಮಾಡಿದ್ರೆ ಸುರಕ್ಷಿತ ನಿಧಿಯಾಗಿರೋ ಒಂದು ಒಳ್ಳೇ ಭವಿಷ್ಯ ಅವ್ರಿಗೆ ಸಿಗುತ್ತೆ.+ ನಿಜವಾದ ಜೀವನವನ್ನ ಬಿಗಿಯಾಗಿ ಹಿಡ್ಕೊಂಡಿರೋಕೆ ಆಗುತ್ತೆ.+
20 ತಿಮೊತಿ, ನಿನಗೆ ಒಪ್ಪಿಸಿರೋದನ್ನ ಕಾಪಾಡ್ಕೊ.+ ಪವಿತ್ರವಾದದ್ದನ್ನ ಕೆಡಿಸೋ ಸುಳ್ಳು ಮಾತುಗಳನ್ನ ಮತ್ತು ತಮಗೆ ತುಂಬ ಜ್ಞಾನ ಇದೆ ಅಂತ ನೆನಸೋ ಜನ್ರ ಯೋಚನೆಗಳನ್ನ ಕೇಳಿಸ್ಕೊಬೇಡ. ಯಾಕಂದ್ರೆ ಅವ್ರ ಆಲೋಚನೆ ಯಾವುದು ನಿಜಾನೋ ಅದಕ್ಕೆ ವಿರುದ್ಧವಾಗಿದೆ.+ 21 ಇಂಥ ಜ್ಞಾನ ತಮಗಿದೆ ಅಂತ ತೋರಿಸ್ಕೊಂಡು ಕೆಲವರು ನಂಬಿಕೆ ಬಿಟ್ಟು ಹೋಗಿದ್ದಾರೆ.
ದೇವರು ನಿಮಗೆ ಅಪಾರ ಕೃಪೆ ತೋರಿಸ್ಲಿ.