ಯುವ ಜನರು ಪ್ರಶ್ನಿಸುವದು. . .
ಹರಟೆ ಅದರಿಂದೇನು ಹಾನಿ?
“ಅವರು [ಯುವಜನರು] . . . ಅಲ್ಲಲ್ಲಿ ಸುಳಿದಾಡುತ್ತಾ ಒಬ್ಬರೊಡನೊಬ್ಬರು ಹರಟೆಹೊಡೆಯುತ್ತಾ ಸಮಯ ಕಳೆಯುತ್ತಾರೆ.”—ಸಾಕ್ರೆಟಿಸ್, ಸುಮಾರು 400 ಸಾ.ಶ.ಪೂ.
‘ಅತ್ಯಂತ ಹೊಸ ಸುದ್ದಿ ಗೊತ್ತೋ?’ ‘[ಏನು ಹೇಳಲಿಕ್ಕಿದ್ದೇನೆಂದು] ಊಹಿಸುತ್ತೀರಾ?’ ‘ಇದನ್ನು ಕೇಳುವ ತನಕ ನಿಲ್ಲಿ!’ ‘ಗುಟ್ಟನ್ನು ಇಟ್ಟುಕೊಳ್ಳಬಲ್ಲಿರಾ?’ ಇತರರ ಖಾಸಗಿಯಾದ, ಆಸೆ ತೋರಿಸುವ ಮತ್ತು ಮನೋಹರವಾದ ಸುದ್ದಿಯನ್ನು, ಸಾಮಾನ್ಯವಾಗಿ ಹರಟೆಯೆಂದು ಕರೆಯಲ್ಪಡುವ ಅಭ್ಯಾಸವನ್ನು ಇತರರಿಗೆ ದಾಟಿಸುವ ಮೊದಲು ಪೀಠಿಕೆಯಾಗಿ ಬರುವ ವಾಕ್ಯಗಳು ಇವೇ.
ಸಾಕ್ರೆಟೀಸನ ದಿನಗಳಂತೆಯೇ ಇಂದು ಸಹ ಈ ಅಭ್ಯಾಸ ಯುವಜನರಿಗೆ ವಿಶೇಷವಾಗಿ ಇಷ್ಟವಾಗಿದೆ. ಮತ್ತು ಸಂಶೋಧಕರು ಹರಟೆಯನ್ನು ಅದು ಕುಲ, ವಯಸ್ಸು ಮತ್ತು ಸಂಸ್ಕೃತಿಯನ್ನು ಲಕ್ಷ್ಯಿಸದಿರುವ ವಿಶ್ವಘಟನೆ ಎಂದು ಕರೆಯುತ್ತಾರೆ. ಜರ್ನಲ್ ಆಫ್ ಕಮ್ಯುನಿಕೇಷನ್ ಪತ್ರಿಕೆಗನುಸಾರವಾಗಿ ಚಿಕ್ಕ ಮಕ್ಕಳು ಸಹ, “ಅವರಿಗೆ ಮಾತಾಡಲು ಸಾಧ್ಯವಾಗುವ ಸಮಯದಿಂದ ಮತ್ತು ಇತರರನ್ನು ಗುರುತಿಸಲಾರಂಭಿಸುವಂದಿನಿಂದ ಹಿಡಿದು” ಹರಟೆ ಹೊಡೆಯುತ್ತಾರೆ.
ಆದರೆ, ಈ ಹರಟೆ ಹೆಣ್ಣುಗಳಿಗಿರುವ ಅಭ್ಯಾಸ, ಅಲ್ಲವೇ? ಅಲ್ಲ! ಲೆವಿನ್ ಮತ್ತು ಆರ್ಲೂಕ್ ಎಂಬ ಸಂಶೋಧಕರು ಕಾಲೇಜಿನ ಹುಡುಗರ ಮತ್ತು ಹುಡುಗಿಯರ ಗುಂಪಿನಲ್ಲಿ ನಡೆದ ಸಂಭಾಷಣೆಗಳನ್ನು ವಿಶ್ಲೇಷಿಸಿದರು. ಪರಿಣಾಮ? ಹುಡುಗರು, ಹುಡುಗಿಯರಷ್ಟೇ ಹರಟೆಯ ಪ್ರವೃತ್ತಿಯವರಾಗಿದ್ದರು.
ಆದರೆ ಹರಟೆ ಮಾತು ನಮಗೆ ಅಷ್ಟು ಹಿಡಿಸುವುದೇಕೆ? ಅದರ ಕುರಿತು ಜಾಗರೂಕತೆಯಿಂದಿರಲು ಸಕಾರಣವಿದೆಯೇ?
ಹರಟೆ—ಒಳ್ಳೆಯದ್ದು, ಕೆಟ್ಟದ್ದು, ಅಸಹ್ಯಕರವಾದುದು
ಅಪ್ರಯೋಜಕವಾದ ಮಾತೇ ಹರಟೆ. ಆದರೆ ತಪ್ಪದೆ ಇದು, ವಿಷಯಗಳನ್ನಲ್ಲ, ಜನರ ನ್ಯೂನತೆ, ವೈಫಲ್ಯ, ವಿಜಯ ಮತ್ತು ದೌರ್ಭಾಗ್ಯಗಳನ್ನು ಕೇಂದ್ರವಾಗಿರಿಸುತ್ತದೆ. ಇಂಥ ಮಾತು ಹಾನಿಕರವಾಗಿ ಅಥವಾ ದುರುದ್ದೇಶವುಳ್ಳರಾಗಿರಬೇಕೆಂದಿಲ್ಲ. ಇತರ ಜನರಲ್ಲಿ ಆಸಕ್ತಿ ತೋರಿಸುವದು ಮಾನವ ಪ್ರಕೃತಿ. ನಾವು ‘ನಮ್ಮ ಸ್ವಂತ ವಿಷಯಗಳ ಮೇಲೆ ಅಲ್ಲ, ಇತರರ ಸ್ವಂತ ಅಭಿರುಚಿಗಳಲ್ಲಿಯೂ ಕಣ್ಣಿಡಬೇಕೆಂದು’ ಬೈಬಲು ಸಹ ಬುದ್ಧಿ ಹೇಳುತ್ತದೆ.—ಫಿಲಿಪ್ಪಿಯವರಿಗೆ 2:4.
ಜಾಗ್ರತೆಯಿಂದ ನಿಯಂತ್ರಿಸುವಲ್ಲಿ, ಹರಟೆಯ ಉಪಯುಕ್ತ ಸಮಾಚಾರಗಳ ವಿನಿಮಯವಾಗಿರಬಲ್ಲದು. ಉದಾಹರಣೆಗೆ. ಶ್ರೀಮತಿ ಜೋನ್ಸ್ ಕಾಯಿಲೆಬಿದ್ದಿದ್ದಾರೆ, ನಿಮ್ಮ ಮಿತ್ರ ಜಾನ್ ಶಾಲಾನಂತರದ ಕೆಲಸ ಕಳೆದುಕೊಂಡು ಖಿನ್ನನಾಗಿದ್ದಾನೆ ಅಥವಾ ನಿಮ್ಮ ನೆರೆಯವಳಾದ ಸ್ಸಾಲಿ ಮನೆಬಿಟ್ಟು ಹೋಗುತ್ತಿದ್ದಾಳೆಂದು ನಿಮಗೆ ಗೊತ್ತಾಗುವುದು ಹೇಗೆ? ಕ್ರಮಬದ್ಧವಾಗಿ ಬರುವ ಪ್ರಕಟನೆಯ ಮೂಲಕವೇ? ಅಲ್ಲ, ಅನೇಕ ಸಲ ಇದನ್ನು ಅನೌಪಚಾರಿಕ ಮಾತುಕತೆ, ಹರಟೆಯ ಮೂಲಕ ನಾವು ತಿಳಿಯುತ್ತೇವೆ.
ಬೈಬಲಿನಲ್ಲಿ “ಹರಟೆಮಾತಾಡುವವರು” ಎಂಬದಕ್ಕಿರುವ ಮೂಲ ಗ್ರೀಕ್ ಪದವು “ಮಾತುಗಳಿಂದ ತುಂಬಿ ಹರಿ” ಎಂಬ ಕ್ರಿಯಾಪದದಿಂದ ಬಂದಿದೆ.(1 ತಿಮೊಥಿ 5:13; ಎ ಗ್ರೀಕ್-ಇಂಗ್ಲಿಷ್ ಲೆಕಿಕ್ಷನ್ ಲಿಡೆಲ್ ಮತ್ತು ಸ್ಕಾಟ್ ಅವರಿಂದ) ಜ್ಞಾನೋಕ್ತಿ 10:19ರ ಮಾತುಗಳು ನಮ್ಮ ಜ್ಞಾಪಕಕ್ಕೆ ಬರುತ್ತವೆ: “ಮಾತಾಳಿಗೆ ಪಾಪ ತಪ್ಪದು; ಮೌನಿಯು ಮತಿವಂತ.” ಸಂಭಾಷಣೆಯಲ್ಲಿರುವ ಸುವರ್ಣ ನಿಯಮವೇನಂದರೆ, ಮಾತಿಗೆ ಮುನ್ನ ಆಲೋಚಿಸು, ಎಂಬುದೇ!
ಹಾನಿರಹಿತ ಮತ್ತು ಹಾನಿಕರ ಹರಟೆಯ ಮಧ್ಯೆ ಇರುವ ಭಿನ್ನತೆ ಮೋಸಹೊಂದುವಷ್ಟು ತೆಳ್ಳನೆಯದು. ‘ಜಾನ್ ಮಾರುಕಟ್ಟೆಯಲ್ಲಿ ಕೆಲಸಮಾಡುವುದನ್ನು ನಿಲ್ಲಿಸಿದ್ದಾನೆ’ ಎಂಬುದು ‘ಜಾನ್ ಯಾವ ಉದ್ಯೋಗವನ್ನು ಹಿಡಿದುಕೊಳ್ಳುವಂತೆ ಕಾಣುವದಿಲ್ಲ’ ಎಂಬುದರಿಂದ ತುಸುದೂರದಲ್ಲಿ ಮಾತ್ರ ಇರಬಲ್ಲದು. ಇದು ಮಿಥ್ಯಾಪವಾದದೊಂದಿಗೆ ಆಟವಾಡಿದಂತೆಯೇ ಸರಿ! ಅನೇಕ ವೇಳೆ, ಒಬ್ಬನ ವಿಷಯದಲ್ಲಿ ಒಳ್ಳೆಯದನ್ನಾಡುವ ಪ್ರಯತ್ನಗಳೂ ತಪ್ಪಿಹೋಗುವುದುಂಟು. ‘ಜೂಡಿ ಕ್ಲಾಸಿನಲ್ಲಿ ಅತ್ಯಂತ ಜಾಣೆ ವಿದ್ಯಾರ್ಥಿ’ ಎಂಬ ಹೇಳಿಕೆಯನ್ನು ‘ಆದರೆ ಅವಳ ಉಡುಪನ್ನು ಗಮನಿಸಿದ್ದಿಯಾ?’ ಎಂಬ ಹೇಳಿಕೆ ಹಿಂಬಾಲಿಸಿ ಬರಬಹುದು. ಮತ್ತು ಅನೇಕಾನೇಕ ವೇಳೆ ಹರಟೆಯು ತೀರಾ ಅಸಹ್ಯಕರವಾಗಿ ಪರಿಣಮಿಸಿ ಇನ್ನೊಬ್ಬನ ಮೇಲೆ ಮಿಥ್ಯಾಪವಾದ ಮತ್ತು ಗಾಳಿಸುದ್ದಿಯನ್ನು ಹಬ್ಬಿಸುವ ವಾಹನವಾಗಬಲ್ಲದು.
ನಿಧಾರ್ಥಕ ಹರಟೆ — ನಡೆಯಲು ಕಾರಣ
ಹಾಗಾದರೆ ಹರಟೆ ಎಷ್ಟೋ ಸಲ ನಿಷೇಧಾರ್ಥಕವಾಗುವುದೇಕೆ? ಒಂದು ಕಾರಣವೇನಂದರೆ, ‘ಹೃದಯ ವಂಚಕ’ವಾಗಿರುವುದರಿಂದ ಇಂಥ ನಿರಾಕರಣಾರ್ಥಕ ಮಾತು ಅನೇಕ ವೇಳೆ ಸ್ವಾರ್ಥದ ಮನೋಭಾವವನ್ನು ತೃಪ್ತಿಗೊಳಿಸುತ್ತದೆ.—ಯೆರೆಮೀಯ 17:9.
“ಇತರರಿಗೆ ಗೊತ್ತಿಲ್ಲದ ಯಾವುದೋ ವಿಷಯ ನಿಮಗೆ ಗೊತ್ತಿರುವಾಗ ಅದು ನಿಮ್ಮನ್ನು ಪ್ರಾಮುಖ್ಯರನ್ನಾಗಿ ಮಾಡುತ್ತದೆ” ಎನ್ನುತ್ತಾಳೆ ಕಾನಿ. ಮತ್ತು ಅನೇಕಾನೇಕ ವೇಳೆ ಆ ‘ಯಾವುದೋ ವಿಷಯ’ ಇನ್ನೊಬ್ಬನನ್ನು ಕಡೆಗಣಿಸುವ ವಿಷಯವಾಗಿರುವುದು. ಇತರರು, ಇನ್ನೊಬ್ಬರ ಗುಣದೋಷಗಳನ್ನು ಎತ್ತಿತೋರಿಸುವುದರಿಂದ ತಮ್ಮ ಸ್ವಂತ ದೋಷಗಳು ಮೊಬ್ಬಾಗಿ ತೋರಿಬರುವದೆಂದು ಎಣಿಸುತ್ತಾರೆ. ಇನ್ನಿತರರಿಗೆ ಹರಟೆ ಮಾತು ತಮ್ಮ ಸ್ವಂತ ಜನಪ್ರಿಯತೆಯನ್ನು ಬೆಳೆಸುವ ಉಪಕರಣವಾಗಿದೆ. ತಾವು ಇತರರಿಗೆ ತಿಳಿಸುವುದರಲ್ಲಿ ಮೊದಲಿಗರಾಗಬೇಕೆಂಬ ಉದ್ದೇಶದಿಂದ ಅವರು ಸಕಲ ಸುದ್ದಿಗಳ ತಿಳುವಳಿಕೆ ಪಡೆಯಲು ಪ್ರಯತ್ನಿಸುತ್ತಾರೆ. ಹೀಗೆ ಕ್ಷಣಿಕವಾಗಿ ಬೆಳಗುವ ಉದ್ದೇಶದಿಂದ ತಮ್ಮ ನೆಚ್ಚಿನ ಮಿತ್ರರ ಗುಟ್ಟನ್ನೂ ರಟ್ಟುಮಾಡುತ್ತಾರೆ. ಇತರರ ವಿಷಯ ನಿಮ್ಮ ಕೂಡ ಮಾತಾಡುವವನು ನಿಮ್ಮ ಕುರಿತು ಇತರರೊಡನೆಯೂ ಮಾತಾಡುವನೆಂಬುದು ನೆನಪಿರಲಿ.
ಹರಟೆಮಾತು ಕೋಪ, ಬೇನೆ ಮತ್ತು ಹೊಟ್ಟೆಕಿಚ್ಚನ್ನು ತೋರಿಸುವ ಅನುಕೂಲ ಸಾಧನವಾಗಿರಬಲ್ಲದು. ತಮಗೆ ಮನಸ್ತಾಪವಿರುವ ಇತರರನ್ನು ನೋಯಿಸಲು ಕೆಲವರು ಸುಳ್ಳನ್ನು ಹೇಳುವಷ್ಟೂ ಮುಂದುವರಿಯುತ್ತಾರೆ. (ಜ್ಞಾನೋಕ್ತಿ 26:28 ಹೋಲಿಸಿ.) ಹೀಗೆ, ಒಬ್ಬ ಹುಡುಗಿ ತನ್ನ ಸಹಪಾಠಿಯೊಬ್ಬಳು ಗರ್ಭವತಿ ಎಂಬ ಗಾಳಿಸುದ್ದಿಯನ್ನು ಹಬ್ಬಿಸಿದಳು. ಏಕೆಂದರೆ ತನಗೆ ಇಷ್ಟವಿರುವ ಹುಡುಗನೊಂದಿಗೆ ಈ ಸಹಪಾಠಿ ಪ್ರಣಯವಿಹಾರಕ್ಕಾಗಿ ಹೋಗುತ್ತಿದ್ದಳು.
ಅನೇಕ ವೇಳೆ ನಿಷೇಧಾರ್ಥಕ ಹರಟೆ ದುರುದ್ದೇಶದಿಂದಲ್ಲ, ವಿಚಾರಹೀನತೆಯ ಫಲವಾಗಿ ಏಳುತ್ತದೆ. ಒಬ್ಬ ಹದಿಹರೆಯದವನು ಹೇಳುವುದು: “ಕೆಲವು ಸಲ ನಾನು ಹೇಳುವುದು 100 ಸೇಕಡಾ ಸರಿಯಲ್ಲವೆಂದು ನನಗೆ ಗೊತ್ತಿದ್ದರೂ ಇದು ಹೆಚ್ಚು ಕಡಿಮೆ ಒಂದು ಚಟದಂತಿದೆ. ನಾನು ನಿಲ್ಲಿಸುವ ಮೊದಲೇ ಮಾತಾಡಿಬಿಡುತ್ತೇನೆ—ಅನೇಕ ವೇಳೆ. ಇದೆಲ್ಲಾ ಬಳಿಕ ನನ್ನ ಮನಸ್ಸಿಗೆ ಬರುತ್ತದೆ.”
ನಿಷೇಧಾರ್ಥಕ ಹರಟೆ — ಇಬ್ಬಾಯಿ ಕತ್ತಿ
ಪ್ರಚೋದನೆ ಏನೇ ಇರಲಿ, ನಿಷೇಧಾರ್ಥಕ ಹರಟೆ ಇಬ್ಬಾಯಿ ಖಡ್ಗವೇ ಸರಿ. ಒಂದು ಕಡೆ ಇದು ಇನ್ನೊಬ್ಬನ ಹೆಸರಿಗೂ ಗಣ್ಯತೆಗೂ ಸರಿಮಾಡಲಾಗದ ಹಾನಿಯನ್ನು ತರುತ್ತದೆ. ಟೀನ್ ಪತ್ರಿಕೆಯು ಗಮನಿಸಿದ್ದು: “ಇತರರ ಕುರಿತು ಹರಟೆ ಮಾತಾಡುತ್ತಾ, ಅವರನ್ನು ಟೀಕಿಸಿ, ಗುಟ್ಟು ರಟ್ಟುಮಾಡಿ, ಅತ್ಯುಕ್ತಿ ಮಾತಾಡಿ, ಹಸಿಸುಳ್ಳುಗಳನ್ನು ಹೇಳುವಾಗ ನೀವು ಪ್ರಾಯಶ: ಸಂಬಂಧಗಳನ್ನು ಅಪಾಯಕ್ಕೊಳಪಡಿಸುತ್ತೀರಿ ಅಥವಾ ನಾಶಗೊಳಿಸುತ್ತೀರಿ. ಮತ್ತು ಹೊಸ ಗೆಳೆತನಗಳು ರೂಪುಗೊಳ್ಳುವುದನ್ನೂ ಇದು ತಡೆಯುವ ಶಕ್ಯತೆಯಿದೆ.” ಅಥವಾ ಬೈಬಲು ಹೇಳುವಂತೆ, “ದೋಷಗಳನ್ನು ಮುಚ್ಚಿಡುವವನು ಪ್ರೇಮವನ್ನು ಸೆಳೆಯುವನು; ಎತ್ತಿ ಆಡುತ್ತಿರುವವನು ಪ್ರೇಮವನ್ನು ಕಳೆದುಕೊಳ್ಳುವನು.”—ಜ್ಞಾನೋಕ್ತಿ 17:9; ಜ್ಞಾನೋಕ್ತಿ 16:28 ಹೋಲಿಸಿ.
ಇನ್ನೊಂದು ಕಡೆ, ಹರಟೆ ಮಾತು ಹಿಂದೆ ಸಿಡಿದು ಹರಟೆಮಲ್ಲನಿಗೆ ಹಾನಿಮಾಡಬಲ್ಲದು. ಆಲಿಸುವ ಕಿವಿಗಳನ್ನು ಸಂಪಾದಿಸುವ ಬದಲಿಗೆ ಅದು ಸಂಶಯವನ್ನು ಹುಟ್ಟಿಸಬಲ್ಲದು. “ಹರಟೆಹೊಡೆಯುವ ಯಾವನನ್ನೂ ಗುಟ್ಟಿನಿಂದ ನಂಬಸಾಧ್ಯವಿಲ್ಲ” ಎನ್ನುತ್ತದೆ ಜ್ಞಾನೋಕ್ತಿ 11:13(TEV) ಮತ್ತು ಚಾಡಿಗೆ ಬಲಿಬಿದ್ದವನು ತಾನು ಹೇಳಿದ ಗುಟ್ಟು ರಟ್ಟಾಗಿದೆ ಅಥವಾ ದೋಷಗಳು ಪ್ರಸಾರಮಾಡಲ್ಪಟ್ಟಿವೆ ಎಂದು ತಿಳಿಯುವಾಗ ನಿಶ್ಚಯವಾಗಿ ಅಸಂತೋಷಪಡುವನು. “ಬಡಗಣ ಗಾಳಿ ಮಳೆ ಬರಮಾಡುವುದು. ಚಾಡಿಯ ನಾಲಿಗೆ ಕೋಪದ ಮುಖ ಮಾಡುವುದು.”—ಜ್ಞಾನೋಕ್ತಿ 25:23,TEV.
ಇತರರನ್ನು ಜರೆದು ಮಾತಾಡುವವನು ದೇವರೊಂದಿಗೆ ತನಗಿರುವ ಸಂಬಂಧವನ್ನು ಕಡಿದುಕೊಳ್ಳುವ ಅಪಾಯದಲ್ಲಿಯೂ ಇರುವನು. ಅನೇಕ ವೇಳೆ ಸಡಿಲು ಮಾತು ಮಿಥ್ಯಾಪವಾದವಾಗಿ ಪರಿಣಮಿಸುತ್ತದೆ. ಮತ್ತು ಯೆಹೋವನು, “ಚಾಡಿಯನ್ನು ಹೇಳದವನೂ ಮತ್ತೊಬ್ಬರಿಗೆ ಅನ್ಯಾಯಮಾಡದವನೂ” ಆದವರೊಂದಿಗೆ ಮಾತ್ರ ಒಡನಾಟ ಮಾಡುತ್ತಾನೆ. (ಕೀರ್ತನೆ 15:1, 3) ಆದರೂ ಆಧಾರವಿಲ್ಲದ ಗಾಳಿಸುದ್ದಿಯನ್ನು ನಾವು ಹರಡಿಸುವಲ್ಲಿ, ಯೆಹೋವನು ಯಾವುದನ್ನು ದ್ವೇಷಿಸುತ್ತಾನೋ ಆ ಸುಳ್ಳನ್ನು ಹಬ್ಬಿಸುವವರಾಗಬಹುದು.—ಜ್ಞಾನೋಕ್ತಿ 6:16, 17.
ಹರಟೆಯ ಬೋನಿನಿಂದ ತಪ್ಪುವದು
ಇತರರ ಕುರಿತು ಏನೂ ಮಾತಾಡದಿರುವುದು ಅಸಾಧ್ಯ. ಆದರೆ, “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ” ಎಂಬ ಸುವರ್ಣ ನಿಯಮವನ್ನು ನೀವು ಪ್ರಯೋಗಿಸುವಲ್ಲಿ ಅನೇಕ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಬಹುದು.— ಮತ್ತಾಯ 7:12.
ಇದರ ಅರ್ಥ ಹಾನಿಕರವಾದ ಹರಟೆಗೆ ಕಿವಿಗೊಡಲು ನಿರಾಕರಿಸುವುದು ಎಂದಾಗುತ್ತದೆ! “ತುಟಿ ಬಿಗಿಹಿಡಿಯದವನ ಗೊಡವೆಗೆ ಹೋಗಬೇಡ” ಎಂದು ಬೈಬಲು ಸಲಹೆ ನೀಡುತ್ತದೆ. (ಜ್ಞಾನೋಕ್ತಿ 28:19) ನೀವು ದುರುದ್ದೇಶದ ಅಥವಾ ಹಾನಿಮಾಡುವ ಮಾತಿಗೆ ಕಿವಿಗೊಡುವುದಾದರೆ ಅದನ್ನು ಒಪ್ಪುವವರಾಗುತ್ತೀರಿ. ರೋಸಲಿನ್ ಎಂಬ ಯುವತಿ ಹೇಳಿದ್ದು: ‘ಹರಟೆಗೆ ಕಿವಿಗೊಡುವವರು ಹರಟೆಮಲ್ಲರನ್ನು ಪ್ರೋತ್ಸಾಹಿಸುತ್ತಾರೆ.’ ಇದಲ್ಲದೆ, ಈ ‘ಸ್ವಾರಸ್ಯದ ಚುಟಿಕೆ’ ನಿಮ್ಮಲ್ಲೇ ಇಟ್ಟುಕೊಳ್ಳದಿರುವಷ್ಟು ಹಿಡಿಸುವ ಸಂಭವವಿರಬಹುದು ಮತ್ತು ನೀವು ಈ ಮಿಥ್ಯಾಪವಾದದ ನೋಯಿಸುವ ಸರಪಣಿಯ ಭಾಗವಾಗುವ ಸಂಭವವಿದೆ.
ಆದುದರಿಂದ ನಿರಾಕರಣಾರ್ಥಕ ಮಾತನ್ನು ಮುಚ್ಚಿಡಲು ಪ್ರಯತ್ನಿಸಿ. ಅಂದರೆ ಹಾನಿಕರವಾದ ಚಾಡಿಮಾತಿನ ಕುರಿತು ಪ್ರಸಂಗ ಕೊಡಬೇಕೆಂದು ಇದರ ಅರ್ಥವಲ್ಲ. ಆದರೆ ನೀವು ವಿಷಯವನ್ನು ಬದಲಾಯಿಸಲು, ಸಂಭಾಷಣೆಯನ್ನು ಬೇರೆ ದಿಕ್ಕಿಗೆ ತಿರುಗಿಸಲು ಅಥವಾ ಚರ್ಚಿಸಲ್ಪಡುವವನ ಕುರಿತು ಏನಾದರೂ ಒಳ್ಳೆಯದನ್ನು ಹೇಳಲು ಪ್ರಯತ್ನಿಸಬಹುದು. ಇಂಥ ನೋಯಿಸುವ ಮಾತು ಮುಂದುವರಿಯುವಲ್ಲಿ ನಿಮ್ಮನ್ನು ಆ ಸಂಭಾಷಣೆಯಿಂದ ಹಿಮ್ಮೆಟ್ಟಿಸಿಕೊಳ್ಳಿರಿ.
ಹೌದು, ವಿಷಯವೇನೋ ಸತ್ಯವಾಗಿರಬಹುದು, ಅದು ನೀರೂರಿಸಿ ಉದ್ರೇಕಿಸಬಹುದು. ಆದರೆ ಅದನ್ನು ಹೇಳುವ ಅಗತ್ಯವಿದೆಯೇ? ಅದು ಬೇಸರ ಪಡಿಸುತ್ತದೋ, ಚಾಡಿ ಹೇಳುತ್ತದೋ, ಅವಮಾನ ಅಥವಾ ನಾಚಿಕೆ ಪಡಿಸುತ್ತದೋ? ಆ ವ್ಯಕ್ತಿಗೆ ಮುಖಾಮುಖಿಯಾಗಿ ನೀವು ಅದನ್ನು ಹೇಳುವಿರೋ? ನಿಮ್ಮ ವಿಷಯದಲ್ಲಿ ಅದನ್ನು ಒಬ್ಬನು ಹೇಳುವುದಾದರೆ ನಿಮಗೆ ಹೇಗೆನಿಸಬಹುದು? ಜ್ಞಾನೋಕ್ತಿ 15:2 ಹೇಳುವುದು: “ಜ್ಞಾನಿಗಳ ನಾಲಿಗೆಯು ತಿಳುವಳಿಕೆಯನ್ನು ಸಾರ್ಥಕಪಡಿಸುವುದು: ಜ್ಞಾನಹೀನರ ಬಾಯಿಯು ಮೂರ್ಖತನವನ್ನು ಕಕ್ಕುವದು.”
ಆದುದರಿಂದ ನಿಮ್ಮ ತುಟಿ ನಿಯಂತ್ರಣದಲ್ಲಿರಲಿ. ಮಹಾಮನಸ್ಸುಗಳು ಧ್ಯೇಯಗಳ ವಿಷಯ, ಸಾಧಾರಣ ಮನಸ್ಸುಗಳು ವಿಷಯಗಳ ಕುರಿತು, ಸಣ್ಣ ಮನಸ್ಸುಗಳು ಜನರ ಕುರಿತು ಮಾತಾಡುತ್ತಾರೆಂದು ಹೇಳಲಾಗಿದೆ! ನಿಮ್ಮ ಸಂಭಾಷಣೆಯನ್ನು ತಿರುಗಿಸಿರಿ. ಶೂನ್ಯವಾದ ನೋಯಿಸುವ ಹರಟೆಯ ಬದಲಿಗೆ ಸಂಭಾಷಣೆಗೆ ಇಂಧನವನ್ನು ಒದಗಿಸಲು ಆತ್ಮಿಕ ವಿಷಯಗಳನ್ನೊಳಗೊಂಡಿರುವ ಅನೇಕ ವಿಷಯಗಳಿವೆ.a (g89 7/8)
[ಅಧ್ಯಯನ ಪ್ರಶ್ನೆಗಳು]
a ಭಾವೀ ಲೇಖನ ಹರಟೆಗೆ ಬಲಿಯಾಗುವ ವ್ಯಕ್ತಿಯ ವಿಷಯ ಚರ್ಚಿಸುವುದು.
[ಪುಟ 18 ರಲ್ಲಿರುವಚಿತ್ರ]
ಹರಟೆಮಲ್ಲನು ಅನೇಕ ವೇಳೆ ಗಮನಕೇಂದ್ರವಾಗುವುದರಲ್ಲಿ ಸಂತೋಷಿಸುತ್ತಾನೆ
[ಪುಟ 19 ರಲ್ಲಿರುವಚಿತ್ರ]
ದುರುದ್ದೇಶದ ಹಾನಿಕರವಾದ ಮಾತಿಗೆ ಕಿವಿಗೊಡುವಲ್ಲಿ ನೀವು ಅದನ್ನು ಒಪ್ಪುವವರಾಗುತ್ತೀರಿ