ಅಧ್ಯಯನ ಲೇಖನ 42
ಮಾತು ಕೇಳಿ ಆಶೀರ್ವಾದ ಪಡ್ಕೊಳ್ಳಿ
“ಸ್ವರ್ಗದಿಂದ ಬರೋ ವಿವೇಕ . . . ಮಾತು ಕೇಳೋ ಮನಸ್ಸನ್ನ ಕೊಡುತ್ತೆ.”—ಯಾಕೋ. 3:17.
ಗೀತೆ 53 ಐಕ್ಯದಿಂದ ಕೆಲಸ ಮಾಡುವುದು
ಈ ಲೇಖನದಲ್ಲಿ ಏನಿದೆ?a
1. ದೇವರ ಮಾತನ್ನ ಕೇಳೋಕೆ ಕೆಲವೊಮ್ಮೆ ನಮಗೆ ಯಾಕೆ ಕಷ್ಟ ಆಗುತ್ತೆ?
“ನಿನ್ನ ಮಾತನ್ನ ಪಾಲಿಸಬೇಕು ಅನ್ನೋ ಆಸೆಯನ್ನ ನನ್ನಲ್ಲಿ ಎಬ್ಬಿಸು” ಅಂತ ರಾಜ ದಾವೀದ ಪ್ರಾರ್ಥನೆ ಮಾಡಿದ. (ಕೀರ್ತ. 51:12) ಅವನು ಯಾಕೆ ಹಾಗೆ ಹೇಳಿದ? ಯಾಕಂದ್ರೆ ಯೆಹೋವನ ಮೇಲೆ ಪ್ರೀತಿ ಇದ್ರೂ ಕೆಲವೊಮ್ಮೆ ಆತನ ಮಾತು ಕೇಳೋಕೆ ಅವನಿಗೆ ಕಷ್ಟ ಆಗ್ತಿತ್ತು. ನಮಗೂ ಕೆಲವೊಮ್ಮೆ ಕಷ್ಟ ಆಗುತ್ತೆ. ಅದಕ್ಕೆ ಮೂರು ಕಾರಣ ಇದೆ. ಒಂದು, ನಾವು ಅಪರಿಪೂರ್ಣರು. ಹಾಗಾಗಿ ನಮಗೆ ಯಾರಾದ್ರೂ ಏನಾದ್ರೂ ಹೇಳಿದ್ರೆ ‘ಅವ್ರ ಮಾತನ್ನ ನಾನ್ಯಾಕೆ ಕೇಳಬೇಕು’ ಅನ್ನೋ ಸ್ವಭಾವ ಇದೆ. ಎರಡು, ನಾವು ಸೈತಾನನ ತರ ಆಗಬೇಕು ಅನ್ನೋದು ಅವನ ಆಸೆ. ಅದಕ್ಕೆ ನಾವು ಯೆಹೋವ ದೇವರ ವಿರುದ್ಧ ಹೋಗೋ ತರ ಅವನು ಮಾಡ್ತಾನೆ. (2 ಕೊರಿಂ. 11:3) ಮೂರು, ಅವನ “ಮನೋಭಾವ ಗಾಳಿ ತರ ಎಲ್ಲ ಕಡೆ ಇದೆ. ಅದು ಮಾತು ಕೇಳದ ಜನ್ರನ್ನ ಹಾಳು ಮಾಡ್ತಾ ಇದೆ.” ಅಂಥ ಜನ್ರು ನಮ್ಮ ಸುತ್ತಮುತ್ತ ಇದ್ದಾರೆ. (ಎಫೆ. 2:2) ನಮ್ಮಲ್ಲಿ ಅಪರಿಪೂರ್ಣತೆ ಇರೋದ್ರಿಂದ, ಸೈತಾನನಿಂದ ಮತ್ತು ನಮ್ಮ ಸುತ್ತಮುತ್ತ ಇರೋ ಜನ್ರು ಹೀಗಿರೋದ್ರಿಂದ ಯೆಹೋವನ ಮಾತು ಕೇಳೋಕೆ ನಮಗೆ ಕೆಲವೊಮ್ಮೆ ತುಂಬ ಕಷ್ಟ ಆಗುತ್ತೆ. ಹಾಗಾಗಿ ಯೆಹೋವ ಮತ್ತು ಆತನು ನೇಮಿಸಿರೋ ವ್ಯಕ್ತಿಗಳ ಮಾತನ್ನ ಕೇಳೋಕೆ ತುಂಬ ಪ್ರಯತ್ನ ಹಾಕಬೇಕು.
2. ‘ಮಾತು ಕೇಳೋ ಮನಸ್ಸು’ ಅಂದ್ರೇನು? (ಯಾಕೋಬ 3:17)
2 ಯಾಕೋಬ 3:17 ಓದಿ. ವಿವೇಕ ಇರೋ ವ್ಯಕ್ತಿಗಳಿಗೆ ‘ಮಾತು ಕೇಳೋ ಮನಸ್ಸು’ ಇರುತ್ತೆ ಅಂತ ಯೆಹೋವ ಯಾಕೋಬನಿಂದ ಬರೆಸಿದನು. ಇದರರ್ಥ ಏನು? ಯೆಹೋವ ದೇವರು ಮನುಷ್ಯರಿಗೆ ತಕ್ಕ ಮಟ್ಟಿಗಿನ ಅಧಿಕಾರ ಕೊಟ್ಟಿರೋದ್ರಿಂದ ನಾವು ಅವ್ರ ಮಾತು ಕೇಳಬೇಕು. ಆದ್ರೆ ಯೆಹೋವ ಕೊಟ್ಟಿರೋ ನಿಯಮಗಳನ್ನ ಮುರಿಯೋಕೆ ಅವರು ಹೇಳಿದ್ರೆ, ಆಗ ನಾವು ಅವ್ರ ಮಾತನ್ನ ಕೇಳಲ್ಲ.—ಅ. ಕಾ. 4:18-20.
3. ಯೆಹೋವ ದೇವರು ಯಾರಿಗೆ ಅಧಿಕಾರ ಕೊಟ್ಟಿದ್ದಾನೋ ಅವ್ರ ಮಾತನ್ನ ಕೇಳಬೇಕು ಅಂತ ಆತನು ಯಾಕೆ ಇಷ್ಟಪಡ್ತಾನೆ?
3 ನಾವು ಯೆಹೋವನ ಮಾತನ್ನ ತಕ್ಷಣ ಕೇಳ್ತೀವಿ. ಯಾಕಂದ್ರೆ ಆತನು ಕೊಡೋ ನಿಯಮ, ನಿರ್ದೇಶನಗಳಲ್ಲಿ ಯಾವ ಕುಂದುಕೊರತೆನೂ ಇರಲ್ಲ. (ಕೀರ್ತ. 19:7) ಆದ್ರೆ ಮನುಷ್ಯರು ಅಪರಿಪೂರ್ಣರು ಆಗಿರೋದ್ರಿಂದ ಅವರು ಹೇಳೋ ವಿಷ್ಯಗಳು ಕೆಲವೊಮ್ಮೆ ತಪ್ಪಾಗಿರುತ್ತೆ. ಅದಕ್ಕೆ ಅವ್ರ ಮಾತು ಕೇಳೋಕೆ ಕಷ್ಟ ಆಗುತ್ತೆ. ಆದ್ರೂ ನಾವು ಅಪ್ಪಅಮ್ಮನ ಮಾತನ್ನ, ಅಧಿಕಾರಿಗಳ ಮಾತನ್ನ, ಹಿರಿಯರ ಮಾತನ್ನ ಕೇಳಬೇಕು. (ಜ್ಞಾನೋ. 6:20; 1 ಥೆಸ. 5:12; 1 ಪೇತ್ರ 2:13, 14) ಯಾಕಂದ್ರೆ ಇವ್ರಿಗೆ ಅಧಿಕಾರ ಕೊಟ್ಟಿರೋದೇ ಯೆಹೋವ ದೇವರು. ನಾವು ಹೀಗೆ ಮಾಡಿದಾಗ ಯೆಹೋವನ ಮಾತನ್ನ ಕೇಳಿದ ಹಾಗಿರುತ್ತೆ. ಆದ್ರೆ ಇವ್ರ ಮಾತನ್ನ ಒಪ್ಕೊಂಡು ಪಾಲಿಸೋಕೆ ಕೆಲವೊಮ್ಮೆ ಕಷ್ಟ ಆಗುತ್ತೆ. ಆಗ ನಾವೇನು ಮಾಡಬೇಕು? ಇದನ್ನ ಈ ಲೇಖನದಲ್ಲಿ ನೋಡೋಣ.
ಮಕ್ಕಳೇ, ಅಪ್ಪಅಮ್ಮನ ಮಾತು ಕೇಳಿ
4. ಎಷ್ಟೋ ಮಕ್ಕಳು ಯಾಕೆ ಅಪ್ಪಅಮ್ಮನ ಮಾತು ಕೇಳಲ್ಲ?
4 ಈಗಿನ ಕಾಲದಲ್ಲಿ ಮಕ್ಕಳು ‘ಅಪ್ಪಅಮ್ಮನ ಮಾತು ಕೇಳಲ್ಲ.’ (2 ತಿಮೊ. 3:1, 2) ಯಾಕಂದ್ರೆ ಅವರು ‘ಹೇಳೋದೇ ಒಂದು, ಮಾಡೋದೇ ಒಂದು’ ಅಂತ ಕೆಲವು ಮಕ್ಕಳಿಗೆ ಅನಿಸುತ್ತೆ. ಇನ್ನು ಕೆಲವ್ರಿಗೆ ತಮ್ಮ ಅಪ್ಪಅಮ್ಮ ‘ಹಳೇ ಕಾಲದವರು, ಅವರು ಹೇಳೋದನ್ನೆಲ್ಲ ನಮಗೆ ಮಾಡಕ್ಕಾಗಲ್ಲ’ ಅಂತ ಅನಿಸುತ್ತೆ. ಇನ್ನು ಕೆಲವ್ರಿಗೆ ತಮ್ಮ ಅಪ್ಪಅಮ್ಮ ತುಂಬಾನೇ ಕಟ್ಟುನಿಟ್ಟು ಅಂತ ಅನಿಸುತ್ತೆ. ನಿಮಗೂ ಈ ತರಾನೇ ಅನಿಸುತ್ತಾ ಮಕ್ಕಳೇ? ಬೈಬಲಲ್ಲಿ ಒಂದು ಆಜ್ಞೆ ಇದೆ: “ಮಕ್ಕಳೇ, ನೀವು ನಿಮ್ಮ ಅಪ್ಪಅಮ್ಮನ ಮಾತು ಕೇಳಿ. ಇದು ದೇವರಿಗೆ ತುಂಬ ಇಷ್ಟ. ಯಾಕಂದ್ರೆ ದೇವರ ದೃಷ್ಟಿಯಲ್ಲಿ ಇದೇ ಸರಿ.” (ಎಫೆ. 6:1) ಆದ್ರೆ ಈ ಆಜ್ಞೆಯನ್ನ ಪಾಲಿಸೋಕೆ ಕೆಲವು ಮಕ್ಕಳಿಗೆ ತುಂಬ ಕಷ್ಟ ಆಗುತ್ತೆ. ನಿಮಗೂ ಹೀಗೇ ಅನಿಸೋದಾದ್ರೆ ಏನು ಮಾಡೋದು?
5. ಅಪ್ಪಅಮ್ಮನ ಮಾತು ಕೇಳೋ ವಿಷ್ಯದಲ್ಲಿ ಯೇಸುನೇ ಒಳ್ಳೇ ಮಾದರಿ ಅಂತ ನಾವು ಹೇಗೆ ಹೇಳಬಹುದು? (ಲೂಕ 2:46-52)
5 ಮಾತು ಕೇಳೋದ್ರಲ್ಲಿ ಯೇಸು ತುಂಬ ಒಳ್ಳೇ ಮಾದರಿ ಇಟ್ಟಿದ್ದಾನೆ. (1 ಪೇತ್ರ 2:21-24) ಯೇಸು ತರ ಆತನ ಅಪ್ಪಅಮ್ಮ ಪರಿಪೂರ್ಣರಾಗಿರಲಿಲ್ಲ. ಕೆಲವೊಂದು ಸಲ ಅವ್ರಿಂದ ತಪ್ಪಾಗ್ತಿತ್ತು. ಕೆಲವೊಮ್ಮೆ ಯೇಸುನ ಅವರು ತಪ್ಪಾಗಿ ಅರ್ಥ ಮಾಡ್ಕೊಂಡ್ರು. ಆದ್ರೂ ಯೇಸು ಅವ್ರಿಗೆ ಗೌರವ ಕೊಡ್ತಿದ್ದನು. (ವಿಮೋ. 20:12) ಉದಾಹರಣೆಗೆ, ಯೇಸುಗೆ 12 ವರ್ಷ ಇದ್ದಾಗ ಏನಾಯ್ತು ಅಂತ ನೋಡಿ. (ಲೂಕ 2:46-52 ಓದಿ.) ಯೋಸೇಫ ಮತ್ತು ಮರಿಯ ಹಬ್ಬಕ್ಕೆ ಯೆರೂಸಲೇಮಿಗೆ ಹೋಗುವಾಗ ಅವನನ್ನೂ ಕರ್ಕೊಂಡು ಹೋಗಿದ್ರು. ಆದ್ರೆ ವಾಪಸ್ ಬರುವಾಗ ಯೇಸು ಅವ್ರ ಜೊತೆ ಇರಲಿಲ್ಲ. ಇದನ್ನ ಯೋಸೇಫ ಮತ್ತು ಮರಿಯ ಗಮನಿಸಬೇಕಿತ್ತು, ಅದು ಅವ್ರ ಜವಾಬ್ದಾರಿ ಆಗಿತ್ತು. ಕೊನೆಗೂ ಅವ್ರಿಗೆ ಯೇಸು ಸಿಕ್ಕಿದಾಗ ‘ನೀನ್ಯಾಕೆ ಹೀಗೆ ಮಾಡಿದೆ? ನಮಗೆ ತುಂಬ ಗಾಬರಿ ಆಯ್ತು’ ಅಂತ ಮರಿಯ ಹೇಳಿದಳು. ಆಗ ಯೇಸು ‘ನೀವ್ಯಾಕೆ ನನ್ನನ್ನ ಬಿಟ್ಟುಹೋದ್ರಿ?’ ಅಂತ ಹೇಳಿ ಅವ್ರ ತಪ್ಪನ್ನ ಎತ್ತಿ ಆಡದೆ ಗೌರವದಿಂದ ಉತ್ರ ಕೊಟ್ಟನು. “ಆತನು ಏನು ಹೇಳ್ತಾ ಇದ್ದಾನೆ ಅಂತ ಅವ್ರಿಗೆ ಅರ್ಥ ಆಗಲಿಲ್ಲ”. ಆದ್ರೂ ಯೇಸು ‘ಏನು ಇವ್ರಿಗೆ ಇಷ್ಟು ಗೊತ್ತಾಗಲ್ವಾ?’ ಅಂತ ಅಂದ್ಕೊಳ್ಳದೆ, “ಯಾವಾಗ್ಲೂ ಅಪ್ಪಅಮ್ಮನ ಮಾತು ಕೇಳ್ತಿದ್ದನು.”
6-7. ಅಪ್ಪಅಮ್ಮನ ಮಾತು ಕೇಳೋಕೆ ಕಷ್ಟ ಆದಾಗ ಏನು ಮಾಡಬೇಕು?
6 ಮಕ್ಕಳೇ, ಅಪ್ಪಅಮ್ಮ ತಪ್ಪು ಮಾಡಿದಾಗ, ಅವರು ನಿಮ್ಮನ್ನ ತಪ್ಪರ್ಥ ಮಾಡ್ಕೊಂಡಾಗ ಅವ್ರ ಮಾತನ್ನ ಕೇಳೋಕೆ ನಿಮಗೆ ಕಷ್ಟ ಆಗುತ್ತಾ? ಕಷ್ಟ ಆದ್ರೆ ನೀವೇನು ಮಾಡಬೇಕು ಗೊತ್ತಾ? ಮೊದ್ಲು, ಅಪ್ಪಅಮ್ಮನ ಮಾತು ಕೇಳಿದ್ರೆ ಯೆಹೋವ ದೇವರಿಗೆ ಹೇಗನಿಸುತ್ತೆ ಅಂತ ಯೋಚ್ನೆ ಮಾಡಬೇಕು. ಅಪ್ಪಅಮ್ಮನ ಮಾತು ಕೇಳಿದ್ರೆ “ಒಡೆಯನಿಗೆ ಖುಷಿ ಆಗುತ್ತೆ” ಅಂತ ಬೈಬಲ್ ಹೇಳುತ್ತೆ. (ಕೊಲೊ. 3:20) ಅಪ್ಪಅಮ್ಮಂಗೆ ಕೆಲವೊಮ್ಮೆ ನಿಮ್ಮನ್ನ ಅರ್ಥ ಮಾಡ್ಕೊಳ್ಳೋಕೆ ಆಗಲ್ಲ, ಅವರು ಹೇಳೋದನ್ನ ಪಾಲಿಸೋಕೆ ನಿಮಗೆ ಕೆಲವೊಮ್ಮೆ ಕಷ್ಟ ಆಗುತ್ತೆ ಅಂತ ಯೆಹೋವನಿಗೆ ಗೊತ್ತು. ಹಾಗಾಗಿ ಎಷ್ಟೇ ಕಷ್ಟ ಆದ್ರೂ ನೀವು ಅಪ್ಪಅಮ್ಮನ ಮಾತು ಕೇಳೋದನ್ನ ನೋಡಿದಾಗ ದೇವರಿಗೆ ತುಂಬ ಖುಷಿ ಆಗುತ್ತೆ.
7 ಎರಡು, ನೀವು ಅಪ್ಪಅಮ್ಮನ ಮಾತು ಕೇಳಿದಾಗ ಅವ್ರಿಗೆ ಹೇಗನಿಸುತ್ತೆ ಅಂತ ಯೋಚ್ನೆ ಮಾಡಿ. ನೀವು ಅವ್ರ ಮಾತು ಕೇಳಿದಾಗೆಲ್ಲ ಅವ್ರಿಗೆ ಖುಷಿ ಆಗುತ್ತೆ, ನಿಮ್ಮ ಮೇಲಿರೋ ನಂಬಿಕೆನೂ ಜಾಸ್ತಿ ಆಗುತ್ತೆ. (ಜ್ಞಾನೋ. 23:22-25) ಅಪ್ಪಅಮ್ಮ ಮತ್ತು ನೀವು ಫ್ರೆಂಡ್ಸ್ ತರ ಇರ್ತೀರ. “ನಾವು ಅಪ್ಪಅಮ್ಮನ ಮಾತು ಕೇಳೋದನ್ನ ಜಾಸ್ತಿ ಮಾಡಿದಾಗ ನಮ್ಮ ಮಧ್ಯ ಇದ್ದ ಪ್ರೀತಿ ವಾತ್ಸಲ್ಯನೂ ಜಾಸ್ತಿ ಆಗ್ತಾ ಹೋಯ್ತು” ಅಂತ ಬೆಲ್ಜಿಯಂ ದೇಶದಲ್ಲಿರೋ ಅಲಿಗ್ಸಾಂಡ್ರ ಅನ್ನೋ ಸಹೋದರ ಹೇಳ್ತಾರೆ.b ಮೂರು, ಮಾತು ಕೇಳೋ ಗುಣವನ್ನ ಈಗಿಂದಾನೇ ಬೆಳೆಸ್ಕೊಂಡ್ರೆ ಮುಂದೆ ಒಳ್ಳೇದಾಗುತ್ತೆ ಅನ್ನೋದನ್ನ ಮನಸ್ಸಲ್ಲಿ ಇಡಬೇಕು. “ನಾನು ಅಪ್ಪಅಮ್ಮನ ಮಾತು ಕೇಳಿದ್ರಿಂದ ಯೆಹೋವನ ಮಾತು ಕೇಳೋಕೆ ಮತ್ತು ಆತನು ಯಾರಿಗೆಲ್ಲ ಅಧಿಕಾರ ಕೊಟ್ಟಿದ್ದಾನೋ ಅವ್ರ ಮಾತು ಕೇಳೋಕೆ ಸುಲಭ ಆಗಿದೆ” ಅಂತ ಬ್ರೆಜಿಲ್ ದೇಶದಲ್ಲಿರೋ ಪೌಲೋ ಹೇಳ್ತಾರೆ. ಅಪ್ಪಅಮ್ಮನ ಮಾತನ್ನ ಕೇಳಿದಾಗ “ನಿಮಗೆ ಒಳ್ಳೇದಾಗುತ್ತೆ ಮತ್ತು ಭೂಮಿ ಮೇಲೆ ತುಂಬ ವರ್ಷ ಬದುಕ್ತೀರ” ಅಂತ ಬೈಬಲ್ ಹೇಳುತ್ತೆ.—ಎಫೆ. 6:2, 3.
8. ತುಂಬ ಮಕ್ಕಳು ಅಪ್ಪಅಮ್ಮನ ಮಾತನ್ನ ಯಾಕೆ ಕೇಳ್ತಾರೆ?
8 ಅಪ್ಪಅಮ್ಮನ ಮಾತು ಕೇಳಿದ್ರಿಂದ ಎಷ್ಟೋ ಮಕ್ಕಳಿಗೆ ಒಳ್ಳೇದಾಗಿದೆ. ಕೆಲವು ಉದಾಹರಣೆಗಳನ್ನ ನೋಡೋಣ. ಬ್ರೆಜಿಲ್ ದೇಶದಲ್ಲಿರೋ ಲೂಯಿಜ಼ಾಗೆ ‘ನನ್ನ ಅಪ್ಪಅಮ್ಮ ಯಾಕಿನ್ನೂ ನಂಗೆ ಮೊಬೈಲ್ ಕೊಡಿಸಿಲ್ಲ’ ಅಂತ ಬೇಜಾರ್ ಆಗ್ತಿತ್ತು. ಯಾಕಂದ್ರೆ ಅವಳ ವಯಸ್ಸಿನ ಎಲ್ಲಾ ಮಕ್ಕಳ ಹತ್ರ ಮೊಬೈಲ್ ಇತ್ತು. ‘ನಂಗೇನೂ ತೊಂದ್ರೆ ಆಗಬಾರದು ಅನ್ನೋ ಉದ್ದೇಶದಿಂದನೇ ಅಪ್ಪಅಮ್ಮ ಕೊಡಿಸಿಲ್ಲ’ ಅಂತ ಆಮೇಲೆ ಅವಳು ಅರ್ಥ ಮಾಡ್ಕೊಂಡಳು. ಇದ್ರ ಬಗ್ಗೆ ಅವಳು ಏನು ಹೇಳ್ತಾಳಂದ್ರೆ, “ಅಪ್ಪಅಮ್ಮ ಮಾಡೋ ರೂಲ್ಸ್ ತುಂಬ ಕಟ್ಟುನಿಟ್ಟು ಅಂತ ಅಂದ್ಕೊಬಾರದು. ಅದು ಸೀಟ್ ಬೆಲ್ಟ್ ತರ ಜೀವ ಉಳಿಸುತ್ತೆ ಅಂತ ನಾನೀಗ ಅರ್ಥ ಮಾಡ್ಕೊಂಡಿದ್ದೀನಿ.” ಅಮೆರಿಕದಲ್ಲಿರೋ ಎಲಿಜ಼ಬೆತ್ ಏನು ಹೇಳ್ತಾಳೆ ಅಂತ ನೋಡಿ: “ಅಪ್ಪಅಮ್ಮನ ಮಾತು ಕೇಳೋಕೆ ನನಗೆ ಇವಾಗ್ಲೂ ಕೆಲವೊಂದು ಸಲ ಕಷ್ಟ ಆಗುತ್ತೆ. ಅವಾಗೆಲ್ಲ ನಾನು ಅವ್ರ ಮಾತು ಕೇಳಿದ್ರಿಂದ ಏನೆಲ್ಲ ಪ್ರಯೋಜನ ಆಯ್ತು ಅಂತ ಯೋಚಿಸ್ತೀನಿ.” ಅರ್ಮೇನಿಯಾದಲ್ಲಿರೋ ಮೊನಿಕಾ “ನಾನು ಯಾವಾಗೆಲ್ಲ ಅಪ್ಪಅಮ್ಮನ ಮಾತನ್ನ ಕೇಳಿದ್ದೀನೋ ಆಗೆಲ್ಲ ನಂಗೆ ಒಳ್ಳೇದೇ ಆಗಿದೆ” ಅಂತ ಹೇಳ್ತಾಳೆ.
“ಅಧಿಕಾರಿಗಳ” ಮಾತು ಕೇಳಿ
9. ಅಧಿಕಾರಿಗಳ ಮಾತು ಕೇಳೋದ್ರ ಬಗ್ಗೆ ತುಂಬ ಜನ್ರಿಗೆ ಏನು ಅನಿಸುತ್ತೆ?
9 “ಅಧಿಕಾರಿಗಳ ಮಾತು ಕೇಳಬೇಕು.” ಅವ್ರಿಟ್ಟಿರೋ ನಿಯಮಗಳಲ್ಲಿ ಕೆಲವೊಂದನ್ನಾದ್ರೂ ಪಾಲಿಸಬೇಕು ಅಂತ ತುಂಬ ಜನ ಒಪ್ಕೊಳ್ತಾರೆ. (ರೋಮ. 13:1) ಆದ್ರೆ ಅವ್ರಿಗೆ ಯಾವುದಾದ್ರು ನಿಯಮ ಇಷ್ಟ ಆಗದಿದ್ರೆ ಅಥವಾ ಅನ್ಯಾಯ ಅಂತ ಅನಿಸಿದ್ರೆ ಅದನ್ನ ಪಾಲಿಸೋಕೆ ಹಿಂದೆ ಮುಂದೆ ನೋಡ್ತಾರೆ. ಉದಾಹರಣೆಗೆ ತೆರಿಗೆ ಕಟ್ಟೋ ವಿಷ್ಯ ತಗೊಳ್ಳಿ. ಇದ್ರ ಬಗ್ಗೆ ಯೂರೋಪಿನ ಒಂದು ದೇಶದಲ್ಲಿ ಸರ್ವೇ ಮಾಡಿದ್ರು. ಅದ್ರಲ್ಲಿ ಕಾಲುಭಾಗದಷ್ಟು ಜನ, “ಸರ್ಕಾರ ಅನ್ಯಾಯವಾಗಿ ನಿಮ್ಮ ಹತ್ರ ಜಾಸ್ತಿ ಕೇಳ್ತಿದೆ ಅಂತ ಅನ್ಸಿದ್ರೆ, ತೆರಿಗೆ ಕಟ್ಟೋದು ಬೇಡ” ಅಂತ ಹೇಳಿದ್ರು. ಹಾಗಾಗಿ ಆ ದೇಶದ ಜನ್ರು 65% ತೆರಿಗೆಯನ್ನ ಮಾತ್ರ ಸರ್ಕಾರಕ್ಕೆ ಕಟ್ತಿದ್ದಾರೆ.
10. ಕೆಲವೊಂದು ನಿಯಮಗಳನ್ನ ಪಾಲಿಸೋಕೆ ಇಷ್ಟ ಇಲ್ಲ ಅಂದ್ರೂ ನಾವು ಯಾಕೆ ಪಾಲಿಸ್ತೀವಿ?
10 ಭೂಮಿ ಮೇಲಿರೋ ಎಲ್ಲ ಸರ್ಕಾರಗಳು ಸೈತಾನನ ಕೈ ಗೊಂಬೆ ಆಗಿದೆ. ಈ ಸರ್ಕಾರಗಳಿಂದ ಮನುಷ್ಯರಿಗೆ ತುಂಬ ನಷ್ಟ ಆಗಿದೆ. ಹಾಗಾಗಿ ಯೆಹೋವ ದೇವರು ಇದನ್ನೆಲ್ಲ ನಾಶ ಮಾಡ್ತಾನೆ ಅಂತ ಬೈಬಲ್ ಹೇಳುತ್ತೆ. (ಕೀರ್ತ. 110:5, 6; ಪ್ರಸಂ. 8:9; ಲೂಕ 4:5, 6) ಬೈಬಲಿನಲ್ಲಿ ಇನ್ನೊಂದು ಮಾತು ಕೂಡ ಇದೆ. ಅದೇನಂದ್ರೆ “ಅಧಿಕಾರಿಗಳನ್ನ ವಿರೋಧಿಸುವವನು ದೇವರು ಮಾಡಿರೋ ಏರ್ಪಾಡನ್ನ ವಿರೋಧಿಸ್ತಾನೆ.” ಅಧಿಕಾರಿಗಳು ಇಲ್ಲ ಅಂದ್ರೆ ಜನ್ರು ಮನಸ್ಸಿಗೆ ಬಂದ ಹಾಗೆ ನಡ್ಕೊಂಡು ಇಲ್ಲದೇ ಇರೋ ತೊಂದ್ರೆಗಳನ್ನೆಲ್ಲಾ ಮೈಮೇಲೆ ಎಳ್ಕೊತಾರೆ ಅಂತ ಯೆಹೋವನಿಗೆ ಗೊತ್ತು. ಅದಕ್ಕೆ ಯೆಹೋವ ಸದ್ಯಕ್ಕೆ ಸ್ವಲ್ಪ ಸಮಯದ ವರೆಗೆ ಸರ್ಕಾರಗಳನ್ನ ಇರೋಕೆ ಬಿಟ್ಟಿದ್ದಾನೆ. ಹಾಗಾಗಿ “ಯಾರಿಗೆ ಏನೇನು ಕೊಡಬೇಕೋ ಅದನ್ನ ಕೊಡಿ.” ಅಂದ್ರೆ ತೆರಿಗೆ ಕಟ್ಟಿ, ಅವ್ರನ್ನ ಗೌರವಿಸಿ, ಅವರು ಹೇಳೋ ಮಾತು ಕೇಳಿ. (ರೋಮ. 13:1-7) ಕೆಲವೊಂದು ನಿಯಮಗಳು ಸರಿ ಇಲ್ಲ, ಇದ್ರಿಂದ ನಮಗೆ ಅನ್ಯಾಯ ಆಗ್ತಿದೆ ಅಂತ ಅನಿಸಬಹುದು. ಆದ್ರೂ ನಾವು ಅಧಿಕಾರಿಗಳು ಕೊಟ್ಟಿರೋ ನಿಯಮಗಳನ್ನ ಪಾಲಿಸಬೇಕು. ಯಾಕಂದ್ರೆ ಅವರನ್ನ ಆ ಜಾಗದಲ್ಲಿ ಇಟ್ಟಿರೋದೇ ಯೆಹೋವ ದೇವರು. ಆದ್ರೆ ಅವರು ಯೆಹೋವ ದೇವರ ಮಾತನ್ನ ಮೀರೋಕೆ ಹೇಳಿದಾಗ ನಾವು ಅದನ್ನ ಪಾಲಿಸಲ್ಲ.—ಅ. ಕಾ. 5:29.
11-12. (ಎ) ಲೂಕ 2:1-6ರಲ್ಲಿ ಇರೋ ತರ ಯೋಸೇಫ ಮತ್ತು ಮರಿಯಗೆ ಕಷ್ಟ ಆದ್ರೂ ಹೇಗೆ ಅಧಿಕಾರಿಗಳ ಮಾತನ್ನ ಕೇಳಿದ್ರು? (ಬಿ) ಇದ್ರಿಂದ ಏನು ಒಳ್ಳೇದಾಯ್ತು? (ಚಿತ್ರಗಳನ್ನೂ ನೋಡಿ.)
11 ಯೋಸೇಫ ಮತ್ತು ಮರಿಯ ಏನು ಮಾಡಿದ್ರು ನೋಡಿ. ಇವರು ತುಂಬ ಕಷ್ಟದ ಪರಿಸ್ಥಿತಿಯಲ್ಲೂ ಅಧಿಕಾರಿಗಳ ಮಾತು ಕೇಳಿದ್ರು. (ಲೂಕ 2:1-6 ಓದಿ) ಮರಿಯ ತುಂಬು ಗರ್ಭಿಣಿ ಆಗಿದ್ದಳು. ಆಗ ರೋಮಿನ ಅಧಿಕಾರಿಯಾಗಿದ್ದ ಅಗಸ್ಟಸ್ ಜನಗಣತಿ ಮಾಡಿಸಬೇಕು ಅಂತ ಆಜ್ಞೆ ಕೊಟ್ಟ. ಇದಕ್ಕೋಸ್ಕರ ಯೋಸೇಫ ಮತ್ತು ಮರಿಯ ಬೆತ್ಲೆಹೇಮ್ ತನಕ ಪ್ರಯಾಣ ಮಾಡಬೇಕಿತ್ತು. ಅದು 150 ಕಿಲೋಮೀಟರ್ ದೂರ. ಬೆಟ್ಟ ಗುಡ್ಡಗಳ ಪ್ರದೇಶವನ್ನ ಹತ್ತಿ ಇಳಿದು ಅವರು ಹೋಗಬೇಕಿತ್ತು. ಈ ತರ ಪ್ರಯಾಣ ಮಾಡೋದು ಮರಿಯಗೆ ಸುಲಭ ಆಗಿರ್ಲಿಲ್ಲ. ಯಾಕಂದ್ರೆ ಅವಳಿಗೆ ಅಥವಾ ಮಗುಗೆ ಏನಾದ್ರೂ ಅಪಾಯ ಆಗೋ ಸಾಧ್ಯತೆ ಇತ್ತು. ದಾರಿ ಮಧ್ಯದಲ್ಲೇ ಹೆರಿಗೆ ನೋವು ಶುರು ಆಗೋ ಸಾಧ್ಯತೆನೂ ಇತ್ತು. ಅವಳ ಹೊಟ್ಟೆಯಲ್ಲಿ ಮೆಸ್ಸೀಯ ಇದ್ದಾನೆ ಅಂತ ಹೇಳಿ ಅವರು ಸರ್ಕಾರದ ನಿಯಮವನ್ನ ಪಾಲಿಸದೇ ಹೋದ್ರಾ?
12 ಇಲ್ಲ, ಕಷ್ಟ ಆದ್ರೂ ಅವರು ಬೆತ್ಲೆಹೇಮಿಗೆ ಹೋದ್ರು. ಅದಕ್ಕೆ ಯೆಹೋವ ಅವ್ರನ್ನ ಆಶೀರ್ವದಿಸಿದನು. ಮರಿಯ ಬೆತ್ಲೆಹೇಮಿಗೆ ಹುಷಾರಾಗಿ ತಲುಪಿದ್ದಷ್ಟೇ ಅಲ್ಲ, ಮಗು ಹುಟ್ಟಿದಾಗ ಅದು ಆರೋಗ್ಯವಾಗೂ ಇತ್ತು. ಅವರು ಹೀಗೆ ಮಾಡಿದ್ರಿಂದ ಬೈಬಲ್ ಭವಿಷ್ಯವಾಣಿನೂ ನೆರವೇರಿತು.—ಮೀಕ 5:2.
13. ನಾವು ಅಧಿಕಾರಿಗಳ ಮಾತು ಕೇಳೋದ್ರಿಂದ ನಮ್ಮ ಸಹೋದರರಿಗೆ ಹೇಗೆ ಪ್ರಯೋಜನ ಆಗುತ್ತೆ?
13 ಅಧಿಕಾರಿಗಳ ಮಾತು ಕೇಳೋದ್ರಿಂದ ನಮಗಷ್ಟೇ ಅಲ್ಲ ಬೇರೆಯವ್ರಿಗೂ ಪ್ರಯೋಜನ ಆಗುತ್ತೆ. ನಿಯಮ ಮುರಿದ್ರೆ ಸರ್ಕಾರ ದಂಡ ಹಾಕುತ್ತೆ, ಶಿಕ್ಷೆ ಕೊಡುತ್ತೆ. ಆದ್ರೆ ನಾವು ನಿಯಮವನ್ನ ಪಾಲಿಸೋದ್ರಿಂದ ಅನಾವಶ್ಯಕವಾಗಿ ಸಮಸ್ಯೆಯಲ್ಲಿ ಸಿಕ್ಕಿ ಹಾಕೊಳ್ಳಲ್ಲ. (ರೋಮ. 13:4) ಅಷ್ಟೇ ಅಲ್ಲ, ನಾವು ಅಧಿಕಾರಿಗಳ ಮಾತು ಕೇಳಿದ್ರೆ ಅವ್ರಿಗೆ ಯೆಹೋವನ ಸಾಕ್ಷಿಗಳ ಬಗ್ಗೆ ಒಳ್ಳೆ ಅಭಿಪ್ರಾಯ ಇರುತ್ತೆ. ಉದಾಹರಣೆಗೆ ನೈಜೀರಿಯದಲ್ಲಿ ಕೆಲವು ವರ್ಷಗಳ ಹಿಂದೆ ಏನಾಯ್ತು ಅಂತ ನೋಡಿ. ಯಾರೆಲ್ಲ ತೆರಿಗೆ ಕಟ್ಟಲ್ಲ ಅಂತ ಧಿಕ್ಕಾರ ಹಾಕ್ತಿದ್ರೋ ಅಂಥವ್ರನ್ನ ಹಿಡ್ಕೊಂಡು ಹೋಗೋಕೆ ಸೈನಿಕರು ರಾಜ್ಯ ಸಭಾಗೃಹದ ಒಳಗೆ ಬಂದ್ರು. ಆಗ ಅವ್ರ ಆಫೀಸರ್ “ಯೆಹೋವನ ಸಾಕ್ಷಿಗಳು ತೆರಿಗೆ ಕಟ್ತಾರೆ ಇವ್ರನ್ನ ಬಿಟ್ಟುಬಿಡಿ” ಅಂತ ಹೇಳಿದ್ರು. ನಾವು ಅಧಿಕಾರಿಗಳ ಮಾತು ಕೇಳೋದ್ರಿಂದ ನಮಗೆ ಒಳ್ಳೇ ಹೆಸ್ರು ಇರುತ್ತೆ. ನಮ್ಮ ಸಹೋದರ ಸಹೋದರಿಯರಿಗೆ ಏನಾದ್ರೂ ಅಪಾಯ ಆದಾಗ ಈ ಹೆಸ್ರು ಅವ್ರನ್ನ ಕಾಪಾಡುತ್ತೆ.—ಮತ್ತಾ. 5:16.
14. ಒಬ್ಬ ಸಹೋದರಿ ತಮ್ಮ ಯೋಚನೆಯನ್ನ ಹೇಗೆ ಬದಲಾಯಿಸಿಕೊಂಡ್ರು?
14 ಅಧಿಕಾರಿಗಳು ಹೇಳೋ ಮಾತನ್ನ ಕೇಳೋಕೆ ಕೆಲವೊಮ್ಮೆ ನಮಗೆ ಕಷ್ಟ ಆಗಬಹುದು. “ಅಧಿಕಾರಿಗಳಿಂದ ನಮ್ಮ ಕುಟುಂಬದಲ್ಲಿ ಕೆಲವ್ರಿಗೆ ತುಂಬ ಅನ್ಯಾಯ ಆಗಿತ್ತು. ಹಾಗಾಗಿ ಅಧಿಕಾರಿಗಳ ಮಾತು ಕೇಳೋಕೆ ನಮಗೆ ಕಷ್ಟ ಆಗ್ತಿತ್ತು” ಅಂತ ಅಮೆರಿಕದಲ್ಲಿರೋ ಜೋಹಾನ್ನಾ ಅನ್ನೋ ಸಹೋದರಿ ಹೇಳ್ತಾರೆ. ಹೀಗೆ ಮಾಡೋದು ತಪ್ಪು ಅಂತ ಸಹೋದರಿಗೆ ಅರ್ಥ ಆಗಿದ್ರಿಂದ ಕೆಲವು ಬದಲಾವಣೆಗಳನ್ನ ಮಾಡ್ಕೊಂಡ್ರು. ಮೊದಲ್ನೇದಾಗಿ, ಅಧಿಕಾರಿಗಳು ಮಾಡೋ ತಪ್ಪುಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಓದೋದನ್ನ ನಿಲ್ಲಿಸಿದ್ರು. (ಜ್ಞಾನೋ. 20:3) ಎರಡನೇದಾಗಿ, ಬೇರೆ ಸರ್ಕಾರ ಬಂದ್ರೆ ಚೆನ್ನಾಗಿರುತ್ತೆ ಅಂತ ಯೋಚಿಸೋ ಬದ್ಲು ಯೆಹೋವನ ಮೇಲಿರೋ ನಂಬಿಕೆಯನ್ನ ಜಾಸ್ತಿ ಮಾಡ್ಕೊಳ್ಳೋಕೆ ಪ್ರಾರ್ಥನೆ ಮಾಡಿದ್ರು. (ಕೀರ್ತ. 9:9, 10) ಮೂರನೇದಾಗಿ, ರಾಜಕೀಯ ವಿಷ್ಯಗಳಲ್ಲಿ ಪಕ್ಷ ವಹಿಸದೆ ಇರೋಕೆ ಸಹಾಯ ಮಾಡೋ ಲೇಖನಗಳನ್ನ ಓದಿದ್ರು. (ಯೋಹಾ. 17:16) ಹೀಗೆ ಮಾಡಿದ್ರಿಂದ ಅಧಿಕಾರಿಗಳನ್ನ ಗೌರವಿಸೋಕೆ, ಅವ್ರ ಮಾತು ಕೇಳೋಕೆ ನಮ್ಮ ಸಹೋದರಿಗೆ ಸಹಾಯ ಆಗಿದೆ. “ನಾನೀಗ ನೆಮ್ಮದಿಯಿಂದ ಇದ್ದೀನಿ” ಅಂತ ಅವರು ಹೇಳ್ತಾರೆ.
ಯೆಹೋವನ ಸಂಘಟನೆಯ ಮಾತು ಕೇಳಿ
15. ಸಂಘಟನೆ ಮಾತು ಕೇಳೋಕೆ ಕೆಲವೊಮ್ಮೆ ನಮಗೆ ಯಾಕೆ ಕಷ್ಟ ಅನಿಸುತ್ತೆ?
15 ಸಭೆಯಲ್ಲಿ “ಮುಂದೆ ನಿಂತು ನಿಮ್ಮನ್ನ ನಡಿಸುವವ್ರ ಮಾತನ್ನ ಕೇಳಿ” ಅಂತ ಯೆಹೋವ ಹೇಳಿದ್ದಾನೆ. (ಇಬ್ರಿ. 13:17) ನಮ್ಮ ನಾಯಕ ಯೇಸು ಪರಿಪೂರ್ಣನು. ಆದ್ರೆ ನಮ್ಮನ್ನ ನಡಿಸೋಕೆ ಆತನು ನೇಮಿಸಿರೋ ಸಹೋದರರು ಅಪರಿಪೂರ್ಣರು. ಅವ್ರ ಮಾತನ್ನ ಕೇಳೋಕೆ ಕೆಲವೊಮ್ಮೆ ನಮಗೆ ಕಷ್ಟ ಆಗುತ್ತೆ. ಅದ್ರಲ್ಲೂ ನಮಗೆ ಇಷ್ಟ ಇಲ್ಲದೆ ಇರೋದನ್ನ ಮಾಡೋಕೆ ಹೇಳಿದ್ರೆ ಅದಿನ್ನೂ ಕಷ್ಟನೇ. ನಮ್ಮ ತರಾನೇ ಪೇತ್ರನಿಗೂ ಒಂದು ಸಲ ಅನಿಸ್ತು. ಮೋಶೆ ನಿಯಮ ಪುಸ್ತಕದಲ್ಲಿ ದೇವರು ತಿನ್ನಬಾರದು ಅಂತ ಹೇಳಿದ್ದ ಪ್ರಾಣಿಗಳನ್ನ ತಿನ್ನೋಕೆ ದೇವದೂತ ಹೇಳಿದ. ಆದ್ರೆ ಪೇತ್ರ ನಾನದನ್ನ ತಿನ್ನಲ್ಲ ಅಂತ ಒಂದು ಸಲ ಅಲ್ಲ ಮೂರು ಸಲ ಹೇಳಿದ. (ಅ. ಕಾ. 10:9-16) ಯಾಕಂದ್ರೆ ಅವನಿಷ್ಟು ವರ್ಷ ಅಶುದ್ಧವಾಗಿದ್ದ ಯಾವ ಪ್ರಾಣಿನೂ ತಿಂತಿರಲಿಲ್ಲ. ಅದಕ್ಕೆ ಈ ಬದಲಾವಣೆಗೆ ಹೊಂದ್ಕೊಳ್ಳೋಕೆ ಅವನಿಗೆ ಕಷ್ಟ ಆಯ್ತು. ಪರಿಪೂರ್ಣ ದೇವದೂತನ ಮಾತು ಕೇಳೋಕೆ ಪೇತ್ರನಿಗೆ ಕಷ್ಟ ಆಯ್ತು ಅಂದ್ಮೇಲೆ ಅಪರಿಪೂರ್ಣ ಸಹೋದರರ ಮಾತು ಕೇಳೋಕೆ ನಮಗಿನ್ನೂ ಕಷ್ಟ ಅಂತ ಅನಿಸುತ್ತೆ.
16. ಸಂಘಟನೆ ಕೊಟ್ಟ ನಿರ್ದೇಶನ ಸರಿ ಇಲ್ಲ ಅಂತ ಅನಿಸಿದ್ರೂ ಪೌಲ ಏನು ಮಾಡಿದ? (ಅಪೊಸ್ತಲರ ಕಾರ್ಯ 21:23, 24, 26)
16 ಸಂಘಟನೆ ಕೊಟ್ಟ ನಿರ್ದೇಶನ ತನಗೆ ಸರಿ ಅನಿಸದೇ ಇದ್ರೂ ಅಪೊಸ್ತಲ ಪೌಲ ‘ಮಾತು ಕೇಳಿದ’. ಒಂದು ಸಲ ಏನಾಯ್ತಂದ್ರೆ, “ಮೋಶೆ ನಿಯಮ ಪುಸ್ತಕವನ್ನ ಪಾಲಿಸಬೇಡಿ” ಅಂತೆಲ್ಲ ಪೌಲ ಕಲಿಸ್ತಿದ್ದಾನೆ ಅನ್ನೋ ಗಾಳಿ ಸುದ್ದಿ ಯೆಹೂದಿ ಕ್ರೈಸ್ತರ ಕಿವಿಗೆ ಬಿತ್ತು. (ಅ. ಕಾ. 21:21) ಆಗ ಯೆರೂಸಲೇಮಿನ ಹಿರಿಯರು ಪೌಲನಿಗೆ, ‘ನಾಲ್ಕು ಜನ್ರನ್ನ ಕರ್ಕೊಂಡು ದೇವಾಲಯಕ್ಕೆ ಹೋಗು, ಆಮೇಲೆ ನಿನ್ನನ್ನ ಶುದ್ಧ ಮಾಡ್ಕೊ’ ಅಂತ ಹೇಳಿದ್ರು. ಅವನು ನಿಯಮ ಪುಸ್ತಕವನ್ನ ಪಾಲಿಸ್ತಾನೆ ಅನ್ನೋದು ಬೇರೆಯವ್ರಿಗೂ ಗೊತ್ತಾಗಲಿ ಅಂತ ಹೀಗೆ ಮಾಡೋಕೆ ಹೇಳಿದ್ರು. ಆದ್ರೆ ಈಗ ಕ್ರೈಸ್ತರು ನಿಯಮ ಪುಸ್ತಕ ಪಾಲಿಸೋ ಅಗತ್ಯ ಇಲ್ಲ ಅಂತ ಪೌಲನಿಗೆ ಗೊತ್ತಿತ್ತು. ಅಷ್ಟೇ ಅಲ್ಲ ಅವನು ಯಾವ ತಪ್ಪೂ ಮಾಡಿರಲಿಲ್ಲ. ಆದ್ರೂ ಪೌಲ ಅವರು ಹೇಳಿದ ಮಾತನ್ನ ಕೇಳೋಕೆ ಹಿಂದೆ ಮುಂದೆ ನೋಡಲಿಲ್ಲ. “ಪೌಲ ಮಾರನೇ ದಿನ ಅವ್ರನ್ನ ಕರ್ಕೊಂಡು ಹೋದ. ಪದ್ಧತಿ ಪ್ರಕಾರ ಅವ್ರ ಜೊತೆ ತನ್ನನ್ನ ಶುದ್ಧ ಮಾಡ್ಕೊಂಡ.” (ಅಪೊಸ್ತಲರ ಕಾರ್ಯ 21:23, 24, 26 ಓದಿ) ಪೌಲ ಈ ತರ ಮಾತು ಕೇಳಿದ್ರಿಂದ ಎಲ್ರೂ ಒಗ್ಗಟ್ಟಾಗಿ ಇರೋಕೆ ಆಯ್ತು.—ರೋಮ. 14:19, 21.
17. ಸ್ಟೆಫನಿಯಿಂದ ನೀವೇನು ಕಲಿತ್ರಿ?
17 ಸಹೋದರಿ ಸ್ಟೆಫನಿಯ ಉದಾಹರಣೆ ನೋಡಿ. ಅವರು ಮತ್ತವರ ಗಂಡ ಬೇರೆ ಭಾಷೆಯ ಗುಂಪಿನಲ್ಲಿ ಸೇವೆ ಮಾಡ್ತಾ ಖುಷಿಖುಷಿಯಾಗಿದ್ರು. ಆಮೇಲೆ ಬ್ರಾಂಚ್ ಇನ್ಮೇಲೆ ಆ ಗುಂಪು ಬೇಡ ಅಂತ ತೀರ್ಮಾನಿಸಿದ್ರು. ಅದಕ್ಕೆ ಆ ದಂಪತಿಯನ್ನ ಅವ್ರ ಮಾತೃ ಭಾಷೆಯ ಸಭೆಗೆ ನೇಮಿಸಿದ್ರು. “ಆಗ ನಂಗೆ ತುಂಬ ಬೇಜಾರಾಯ್ತು. ನಮ್ಮ ಭಾಷೆಯಲ್ಲಿ ಅಷ್ಟೇನೂ ಅಗತ್ಯ ಇಲ್ವಲ್ಲಾ ಅಂತ ನನಗನಿಸ್ತು” ಅಂತ ಸಹೋದರಿ ಹೇಳ್ತಾರೆ. ಆದ್ರೂ ಅವರು ಬ್ರಾಂಚ್ ಹೇಳಿದ್ದನ್ನ ಮಾಡಿದ್ರು. ಇದ್ರಿಂದ ಏನಾಯ್ತು? “ಸಹೋದರರು ಈ ನಿರ್ಧಾರ ಮಾಡಿದ್ರಿಂದ ಸಭೆಯವ್ರಿಗೆ ತುಂಬ ಒಳ್ಳೇದಾಯ್ತು. ಸತ್ಯದಲ್ಲಿ ಒಬ್ರೇ ಇರೋ ಎಷ್ಟೋ ಜನ ಸಭೆಯಲ್ಲಿ ಇದ್ದಾರೆ. ಅವ್ರಿಗೆ ನಾವು ಅಪ್ಪಅಮ್ಮ ಆದ್ವಿ. ಇತ್ತೀಚಿಗೆ ಸಭೆಗೆ ಮತ್ತೆ ಬರೋಕೆ ಶುರು ಮಾಡಿರೋ ಒಬ್ಬ ಸಹೋದರಿಗೆ ಸ್ಟಡಿ ಮಾಡ್ತಿದ್ದೀನಿ. ಅಷ್ಟೇ ಅಲ್ಲ ನನಗೀಗ ಬೈಬಲ್ ಓದೋಕೆ, ಅಧ್ಯಯನ ಮಾಡೋಕೆ ಜಾಸ್ತಿ ಟೈಮೂ ಇದೆ. ಸಹೋದರರ ಮಾತು ಕೇಳಿದ್ದು ಎಷ್ಟು ಒಳ್ಳೇದಾಯ್ತು ಅಂತ ಈಗ ಅನಿಸ್ತಿದೆ” ಅಂತ ಸ್ಟೆಫನಿ ಹೇಳ್ತಾರೆ.
18. ಸಂಘಟನೆಯ ಮಾತು ಕೇಳೋದು ಯಾಕೆ ಒಳ್ಳೇದು?
18 ಯೇಸುವಿನ ಜೀವನದಲ್ಲಿ ಎಲ್ಲ ಚೆನ್ನಾಗಿತ್ತು ಅಂತ ಹೇಳೋಕೆ ಆಗಲ್ಲ. ಆತನಿಗೂ ಕಷ್ಟಗಳು ಬಂತು. ಆದ್ರೆ ಅದನ್ನ “ಸಹಿಸ್ಕೊಂಡು ಆಜ್ಞೆ ಪಾಲಿಸೋದನ್ನ ಕಲಿತ್ಕೊಂಡ.” (ಇಬ್ರಿ. 5:8) ಅದೇ ತರ ನಮಗೂ ಕಷ್ಟಗಳು ಬಂದಾಗ, ಮಾತು ಕೇಳೋದನ್ನ ಕಲಿತೀವಿ. ಉದಾಹರಣೆಗೆ ಕೋವಿಡ್ ಶುರು ಆದಾಗ ರಾಜ್ಯ ಸಭಾಗೃಹಕ್ಕೆ, ಮನೆಮನೆ ಸೇವೆಗೆ ಹೋಗಬಾರದು ಅಂತ ಹೇಳಿದಾಗ ಕಷ್ಟ ಆಗಿರಬಹುದು. ಹಾಗಿದ್ರೂ ನೀವು ಸಂಘಟನೆಯ ಮಾತನ್ನ ಕೇಳಿದ್ರಿಂದ ಹುಷಾರಾಗಿ ಇರೋಕೆ ಆಯ್ತು, ಸಭೆಯವ್ರ ಜೊತೆ ಒಗ್ಗಟ್ಟಿಂದ ಇರೋಕೆ ಆಯ್ತು ಮತ್ತು ಯೆಹೋವನನ್ನ ಖುಷಿ ಪಡಿಸೋಕೆ ಆಯ್ತು. ಅಷ್ಟೇ ಅಲ್ಲ ಮುಂದೆ ಮಹಾ ಸಂಕಟ ಬರುವಾಗ ಸಂಘಟನೆ ಯಾವ ನಿರ್ದೇಶನ ಕೊಟ್ರೂ ಅದನ್ನ ಪಾಲಿಸೋಕೆ ರೆಡಿ ಇರ್ತೀವಿ. ಸಂಘಟನೆ ಮಾತು ಕೇಳಿದ್ರೆ ಮಾತ್ರನೇ ನಮ್ಮ ಜೀವ ಉಳಿಯೋದು.—ಯೋಬ 36:11.
19. ಯೆಹೋವನ ಮಾತು ಕೇಳಬೇಕು ಅಂತ ನಿಮಗ್ಯಾಕೆ ಅನಿಸ್ತಿದೆ?
19 ದೇವರ ಮಾತನ್ನ ಕೇಳೋದ್ರಿಂದ ನಮಗೆ ತುಂಬ ಆಶೀರ್ವಾದಗಳು ಸಿಗುತ್ತೆ. ಆದ್ರೆ ನಾವಾತನ ಮಾತು ಕೇಳೋದು ಆಶೀರ್ವಾದಗಳು ಸಿಗುತ್ತೆ ಅಂತಲ್ಲ ಬದ್ಲಿಗೆ ಆತನ ಮೇಲೆ ಪ್ರೀತಿ ಇರೋದ್ರಿಂದ ಮತ್ತು ಆತನ ಮನಸ್ಸನ್ನ ಖುಷಿಪಡಿಸಬೇಕು ಅನ್ನೋ ಆಸೆ ಇರೋದ್ರಿಂದ. (1 ಯೋಹಾ. 5:3) ಯೆಹೋವ ನಮಗೆ ಮಾಡಿರೋ ಉಪಕಾರಕ್ಕೆ ಲೆಕ್ಕಾನೇ ಇಲ್ಲ. ನಾವು ಯಾವತ್ತೂ ಆತನ ಋಣ ತೀರಿಸೋಕಾಗಲ್ಲ. (ಕೀರ್ತ. 116:12) ಆದ್ರೆ ಯೆಹೋವನ ಮಾತನ್ನ ಕೇಳಬಹುದು ಮತ್ತು ಆತನು ಯಾರಿಗೆಲ್ಲ ಅಧಿಕಾರ ಕೊಟ್ಟಿದ್ದಾನೋ ಅವ್ರ ಮಾತನ್ನ ಕೇಳಬಹುದು. ನಾವು ಈ ತರ ಮಾತು ಕೇಳಿದ್ರೆ ವಿವೇಕಿಗಳಾಗ್ತೀವಿ ಮತ್ತು ಯೆಹೋವನ ಮನಸ್ಸನ್ನ ಖುಷಿಪಡಿಸ್ತೀವಿ.—ಜ್ಞಾನೋ. 27:11.
ಗೀತೆ 120 ಆಲಿಸಿ, ಪಾಲಿಸಿ, ಹರಸಲ್ಪಡಿ
a ನಾವು ಅಪರಿಪೂರ್ಣರು. ಹಾಗಾಗಿ ಯಾರಾದ್ರೂ ‘ಇದನ್ನ ಮಾಡಿ’ ‘ಇದನ್ನ ಮಾಡಬೇಡಿ’ ಅಂತ ಹೇಳಿದ್ರೆ ಅವ್ರ ಮಾತನ್ನ ಕೇಳೋಕೆ ನಮಗೆ ಕೆಲವೊಮ್ಮೆ ಕಷ್ಟ ಆಗುತ್ತೆ. ಅವ್ರಿಗೆ ಅದನ್ನ ಹೇಳೋ ಅಧಿಕಾರ ಇದೆ ಅಂತ ಗೊತ್ತಿದ್ರೂ ನಾವು ಅದನ್ನ ಪಾಲಿಸೋಕೆ ಹಿಂದೆ ಮುಂದೆ ನೋಡ್ತೀವಿ. ಆದ್ರೆ ಮಕ್ಕಳು ಅಪ್ಪಅಮ್ಮನ ಮಾತು ಕೇಳೋದ್ರಿಂದ, ನಾವು ‘ಅಧಿಕಾರಿಗಳ ಮಾತು ಕೇಳೋದ್ರಿಂದ’ ಮತ್ತು ಸಭೆಯಲ್ಲಿ ನಮ್ಮನ್ನ ಮುಂದೆ ನಿಂತು ನಡಿಸೋ ಸಹೋದರರ ಮಾತು ಕೇಳೋದ್ರಿಂದ ಏನು ಒಳ್ಳೇದಾಗುತ್ತೆ?
b ಅಪ್ಪಅಮ್ಮ ಹಾಕೋ ರೂಲ್ಸ್ನ ಪಾಲಿಸೋಕೆ ನಿಮಗೆ ಕಷ್ಟ ಆಗ್ತಿದ್ರೆ ಅದ್ರ ಬಗ್ಗೆ ಅವ್ರ ಹತ್ರ ಹೇಗೆ ಮಾತಾಡಬಹುದು? ಅದಕ್ಕೆ jw.orgನಲ್ಲಿ “ಅಪ್ಪಅಮ್ಮ ಇಟ್ಟಿರೋ ರೂಲ್ಸ್ ನಂಗಿಷ್ಟ ಇಲ್ಲ. . . ಏನ್ ಮಾಡ್ಲಿ?” ಅನ್ನೋ ಲೇಖನ ನೋಡಿ.
c ಚಿತ್ರ ವಿವರಣೆ: ಬೆತ್ಲೆಹೇಮಿಗೆ ಹೋಗಿ ಹೆಸ್ರನ್ನ ನೋಂದಾಯಿಸೋಕೆ ಕೈಸರ ಹೇಳಿದ. ಅವನ ಮಾತನ್ನ ಯೋಸೇಫ ಮತ್ತು ಮರಿಯ ಕೇಳಿದ್ರು. ಅದೇ ತರ ನಾವು ಟ್ರಾಫಿಕ್ ನಿಯಮನ ಪಾಲಿಸ್ತೀವಿ, ತೆರಿಗೆ ಕಟ್ತೀವಿ ಮತ್ತು ಆರೋಗ್ಯದ ಬಗ್ಗೆ ‘ಅಧಿಕಾರಿಗಳು’ ಕೊಡೋ ನಿರ್ದೇಶನಗಳನ್ನ ಪಾಲಿಸ್ತೀವಿ.