ಇಬ್ರಿಯರಿಗೆ ಬರೆದ ಪತ್ರ
13 ಒಡಹುಟ್ಟಿದವ್ರ ತರ ಒಬ್ರು ಇನ್ನೊಬ್ರನ್ನ ಪ್ರೀತಿಸ್ತಾ ಇರಿ.+ 2 ಅತಿಥಿಸತ್ಕಾರ ಮಾಡೋದನ್ನ* ಮರಿಬೇಡಿ.+ ಯಾಕಂದ್ರೆ ಆ ತರ ಮಾಡಿ ಸ್ವಲ್ಪ ಜನ ಅವ್ರಿಗೇ ಗೊತ್ತಿಲ್ದೆ ದೇವದೂತರಿಗೆ ಅತಿಥಿಸತ್ಕಾರ ಮಾಡಿದ್ದಾರೆ.+ 3 ಜೈಲಲ್ಲಿ ಇರುವವ್ರನ್ನ ನೆನಪಿಸ್ಕೊಳ್ಳಿ.+ ಅವರ ಜೊತೆ ನೀವೂ ಜೈಲಲ್ಲಿ ಇದ್ದೀರ ಅನ್ನೋ ತರ ಕಲ್ಪಿಸ್ಕೊಳ್ಳಿ.+ ದೌರ್ಜನ್ಯ ಅನುಭವಿಸ್ತಾ ಇರುವವ್ರನ್ನ ನೆನಪಿಸ್ಕೊಳ್ಳಿ, ಯಾಕಂದ್ರೆ ನೀವೂ ಅವ್ರ ಜೊತೆ ಒಂದೇ ದೇಹದ ಭಾಗ ಆಗಿದ್ದೀರ.* 4 ಮದುವೆ ಬಂಧವನ್ನ ಎಲ್ರೂ ಗೌರವಿಸಬೇಕು. ಗಂಡ ಹೆಂಡತಿ ಒಬ್ರಿಗೊಬ್ರು ದ್ರೋಹ ಮಾಡಬಾರದು.+ ಯಾಕಂದ್ರೆ ಲೈಂಗಿಕ ಅನೈತಿಕತೆ* ಮತ್ತು ವ್ಯಭಿಚಾರ ಮಾಡೋ ವ್ಯಕ್ತಿಗಳಿಗೆ ದೇವರು ತೀರ್ಪು ಮಾಡ್ತಾನೆ.+ 5 ಹಣದಾಸೆ ಇಲ್ಲದೆ ಜೀವನ ಮಾಡಿ.+ ಇರೋದ್ರಲ್ಲೇ ತೃಪ್ತಿಪಡಿ.+ ಯಾಕಂದ್ರೆ “ನಾನು ಯಾವತ್ತೂ ನಿನ್ನನ್ನ ಬಿಟ್ಟುಬಿಡಲ್ಲ. ನಾನು ಯಾವತ್ತೂ ನಿನ್ನ ಕೈಬಿಡಲ್ಲ” ಅಂತ ದೇವರು ಹೇಳಿದ್ದಾನೆ.+ 6 ಹಾಗಾಗಿ “ಯೆಹೋವ* ನನಗೆ ಸಹಾಯ ಮಾಡ್ತಾನೆ. ನಾನು ಹೆದ್ರಲ್ಲ. ಮನುಷ್ಯ ನನಗೇನು ಮಾಡಕ್ಕಾಗುತ್ತೆ?” ಅಂತ ನಾವು ಧೈರ್ಯವಾಗಿ ಹೇಳ್ತೀವಿ.+
7 ಮುಂದೆ ನಿಂತು ನಿಮ್ಮನ್ನ ನಡಿಸುವವ್ರನ್ನ ನೆನಪಿಸ್ಕೊಳ್ಳಿ.+ ಇವರು ಪವಿತ್ರ ಗ್ರಂಥವನ್ನ ನಿಮಗೆ ಹೇಳ್ಕೊಟ್ರು. ಅವ್ರ ಒಳ್ಳೇ ನಡತೆಯಿಂದ ಎಷ್ಟೆಲ್ಲ ಪ್ರಯೋಜನ ಆಗಿದೆ ಅಂತ ತುಂಬಾ ಯೋಚ್ನೆ ಮಾಡಿ ಅವ್ರ ತರ ನಂಬಿಕೆ ತೋರಿಸಿ.+
8 ಯೇಸು ಕ್ರಿಸ್ತ ನಿನ್ನೆ, ಇವತ್ತು, ಯಾವಾಗ್ಲೂ ಒಂದೇ ತರ ಇರ್ತಾನೆ.
9 ಬೇರೆ ಬೇರೆ ತರದ ವಿಚಿತ್ರ ಬೋಧನೆಗಳನ್ನ ನಂಬಿ ದಾರಿ ತಪ್ಪಬೇಡಿ. ನಿಮ್ಮ ಹೃದಯವನ್ನ ಊಟದಿಂದ ಅಲ್ಲ, ದೇವರ ಅಪಾರ ಕೃಪೆಯಿಂದ ಬಲಪಡಿಸೋದು ಒಳ್ಳೇದು. ಆಹಾರಕ್ಕೆ ಮಿತಿಮೀರಿ ಪ್ರಾಮುಖ್ಯತೆ ಕೊಡುವವ್ರಿಗೆ ಅದ್ರಿಂದ ಏನೂ ಪ್ರಯೋಜನ ಸಿಗಲ್ಲ.+
10 ನಮಗೆ ಒಂದು ಯಜ್ಞವೇದಿ ಇದೆ. ಡೇರೆಯಲ್ಲಿ ಪವಿತ್ರ ಸೇವೆ ಮಾಡುವವ್ರಿಗೆ ಆ ಯಜ್ಞವೇದಿ ಮೇಲೆ ಇರೋದನ್ನ ತಿನ್ನೋ ಅಧಿಕಾರ ಇಲ್ಲ.+ 11 ಯಾಕಂದ್ರೆ ಪಾಪಪರಿಹಾರಕ ಬಲಿಯಾಗಿ ಕೊಡೋ ಪ್ರಾಣಿಗಳ ರಕ್ತವನ್ನ ಮಹಾ ಪುರೋಹಿತ ಪವಿತ್ರ ಸ್ಥಳದೊಳಗೆ ತಗೊಂಡು ಹೋಗ್ತಾನೆ. ಆ ಪ್ರಾಣಿಗಳ ದೇಹಗಳನ್ನ ಪಾಳೆಯದ ಹೊರಗೆ ಸುಡಲಾಗುತ್ತೆ.+ 12 ಅದೇ ತರ ಯೇಸುನೂ ತನ್ನ ರಕ್ತದಿಂದ ಜನ್ರನ್ನ ಪವಿತ್ರ ಮಾಡೋಕೆ+ ಪಟ್ಟಣದ ಹೊರಗೆ ಕಷ್ಟ ಅನುಭವಿಸಿ ಸತ್ತನು.+ 13 ಹಾಗಾಗಿ ನಾವು ಪಾಳೆಯದ ಹೊರಗೆ ಆತನ ಹತ್ರ ಹೋಗೋಣ. ಆತನು ಸಹಿಸ್ಕೊಂಡ ಅವಮಾನವನ್ನ ನಾವೂ ಸಹಿಸ್ಕೊಳ್ಳೋಣ.+ 14 ಯಾವಾಗ್ಲೂ ಇರೋ ಪಟ್ಟಣ ಇಲ್ಲಿ ನಮಗಿಲ್ಲ. ಆದ್ರೆ ಮುಂದೆ ಬರೋ ಪಟ್ಟಣಕ್ಕಾಗಿ ಕಾತುರದಿಂದ ಕಾಯ್ತಾ ಇದ್ದೀವಿ.+ 15 ಯೇಸು ಮೂಲಕ ನಾವು ದೇವರಿಗೆ ಯಾವಾಗ್ಲೂ ಸ್ತುತಿ ಅನ್ನೋ ಬಲಿಯನ್ನ ಕೊಡೋಣ.+ ಆತನ ಹೆಸ್ರನ್ನ ಎಲ್ರಿಗೂ ಹೇಳೋಕೆ+ ನಮ್ಮ ತುಟಿಗಳನ್ನ ಬಳಸೋಣ.+ 16 ಅಷ್ಟೇ ಅಲ್ಲ ಒಳ್ಳೇದನ್ನ ಮಾಡೋಕೆ ಮತ್ತು ನಿಮ್ಮ ಹತ್ರ ಇರೋದನ್ನ ಬೇರೆಯವ್ರ ಜೊತೆ ಹಂಚ್ಕೊಳ್ಳೋಕೆ ಮರಿಬೇಡಿ.+ ಯಾಕಂದ್ರೆ ಇಂಥ ಬಲಿಗಳಿಂದ ದೇವರಿಗೆ ತುಂಬ ಖುಷಿ ಆಗುತ್ತೆ.+
17 ಮುಂದೆ ನಿಂತು ನಿಮ್ಮನ್ನ ನಡಿಸುವವ್ರ ಮಾತನ್ನ ಕೇಳಿ+ ಮತ್ತು ಅಧೀನತೆ+ ತೋರಿಸಿ. ಯಾಕಂದ್ರೆ ಅವರು ಯಾವಾಗ್ಲೂ ನಿಮ್ಮನ್ನ ನೋಡ್ಕೊಳ್ತಿದ್ದಾರೆ. ಅವರು ದೇವರಿಗೆ ಲೆಕ್ಕ ಕೊಡಬೇಕಾಗಿದೆ.+ ನೀವು ಹಾಗೆ ಮಾಡಿದ್ರೆ ಅವರು ದುಃಖದಿಂದ ಅಲ್ಲ, ಖುಷಿಯಿಂದ ನಿಮ್ಮನ್ನ ನೋಡ್ಕೊಳ್ತಾರೆ. ಅವರು ದುಃಖದಿಂದ ನೋಡ್ಕೊಂಡ್ರೆ ನಿಮಗೇ ನಷ್ಟ.
18 ನಮಗಾಗಿ ಯಾವಾಗ್ಲೂ ಪ್ರಾರ್ಥಿಸಿ. ಯಾಕಂದ್ರೆ ನಮಗೆ ಶುದ್ಧ* ಮನಸ್ಸಾಕ್ಷಿ ಇದೆ ಅಂತ ನಾವು ನಂಬ್ತೀವಿ, ಎಲ್ಲ ವಿಷ್ಯದಲ್ಲೂ ಪ್ರಾಮಾಣಿಕವಾಗಿ ಇರೋಕೆ ಬಯಸ್ತೀವಿ.+ 19 ಮುಖ್ಯವಾಗಿ ನಾನು ಕೇಳೋದು ಏನಂದ್ರೆ ನಾನು ಆದಷ್ಟು ಬೇಗ ನಿಮ್ಮ ಹತ್ರ ಬರೋಕೆ ಆಗಬೇಕಂತ ಪ್ರಾರ್ಥಿಸಿ.
20 ನಮ್ಮ ಪ್ರಭುವಾದ ಯೇಸುಗೆ ದೇವರು ಮತ್ತೆ ಜೀವ ಕೊಟ್ಟನು. ಮಹಾ ಕುರುಬನಾದ+ ಯೇಸು ಶಾಶ್ವತ ಒಪ್ಪಂದದ ರಕ್ತವನ್ನ ದೇವರಿಗೆ ಕೊಟ್ಟನು. ಶಾಂತಿಯ ದೇವರು 21 ಆತನ ಇಷ್ಟವನ್ನ ನೀವು ಮಾಡೋಕೆ ಬೇಕಾಗಿರೋ ಎಲ್ಲವನ್ನೂ ಕೊಟ್ಟು ನಿಮ್ಮನ್ನ ತಯಾರು ಮಾಡ್ಲಿ. ಆತನಿಗೆ ಸಂತೋಷ ಆಗೋದನ್ನ ನಾವು ಮಾಡೋ ಹಾಗೆ ಆತನು ಯೇಸು ಕ್ರಿಸ್ತನ ಮೂಲಕ ನಮಗೆ ಪ್ರೇರಣೆ ಕೊಡ್ಲಿ. ದೇವರಿಗೆ ಯಾವಾಗ್ಲೂ ಗೌರವ ಸಿಗ್ಲಿ. ಆಮೆನ್.
22 ಸಹೋದರರೇ, ನಿಮ್ಮನ್ನ ಪ್ರೋತ್ಸಾಹಿಸೋ ಈ ಮಾತುಗಳಿಗೆ ತಾಳ್ಮೆಯಿಂದ ಗಮನಕೊಡಿ ಅಂತ ಬೇಡ್ಕೊಳ್ತೀನಿ. ಹೇಳಬೇಕಂದ್ರೆ ನಾನು ಚಿಕ್ಕ ಪತ್ರ ಬರೆದಿದ್ದೀನಿ. 23 ನಮ್ಮ ಸಹೋದರ ತಿಮೊತಿಗೆ ಬಿಡುಗಡೆ ಆಗಿದೆ ಅಂತ ನಿಮಗೆ ಹೇಳೋಕೆ ಬಯಸ್ತೀನಿ. ಅವನು ಬೇಗ ಬಂದ್ರೆ ನಾನು ಅವನ ಜೊತೆ ಬಂದು ನಿಮ್ಮನ್ನ ನೋಡ್ತೀನಿ.
24 ಮುಂದೆ ನಿಂತು ನಿಮ್ಮನ್ನ ನಡಿಸ್ತಿರೋ ಎಲ್ರಿಗೆ ಮತ್ತು ಪವಿತ್ರ ಜನ್ರೆಲ್ಲರಿಗೆ ನನ್ನ ವಂದನೆ ಹೇಳಿ. ಇಟಲಿಯಲ್ಲಿರೋ ಸಹೋದರರು+ ನಿಮಗೆ ವಂದನೆ ಹೇಳಿದ್ದಾರೆ.
25 ದೇವರು ನಿಮಗೆಲ್ಲ ಅಪಾರ ಕೃಪೆ ತೋರಿಸ್ಲಿ.