ಅಧ್ಯಾಯ 30
“ಮಹಾ ಬಾಬೆಲ್ ಬಿದ್ದಿದ್ದಾಳೆ!”
1. ಎರಡನೆಯ ದೇವದೂತನು ಏನನ್ನು ಪ್ರಕಟಿಸುತ್ತಾನೆ, ಮತ್ತು ಮಹಾ ಬಾಬೆಲ್ ಅಂದರೆ ಯಾರು?
ದೇವರ ನ್ಯಾಯತೀರ್ಪಿನ ಗಳಿಗೆ ಇದಾಗಿದೆ! ಹಾಗಾದರೆ, ದೈವಿಕ ಸಂದೇಶಕ್ಕೆ ಕಿವಿಗೊಡಿರಿ: “ಮತ್ತು ಇನ್ನೊಬ್ಬನು, ಎರಡನೆಯ ದೇವದೂತನು ಹಿಂಬಾಲಿಸಿ ಬಂದು ಹೇಳಿದ್ದು: ‘ಅವಳು ಬಿದ್ದಿದ್ದಾಳೆ! ಮಹಾ ಬಾಬೆಲ್ ಬಿದ್ದಿದ್ದಾಳೆ! ಆಕೆಯು ಸಕಲ ಜನಾಂಗಗಳಿಗೆ ತನ್ನ ಜಾರತ್ವದ ದ್ರಾಕ್ಷಾಮದ್ಯವನ್ನು ಕುಡಿಯುವಂತೆ ಮಾಡಿದಳು!’” (ಪ್ರಕಟನೆ 14:8, NW) ಮೊದಲ ಬಾರಿಗೆ ಆದರೆ ಕೊನೆಯದ್ದಾಗಿ ಅಲ್ಲ, ಪ್ರಕಟನೆಯು ಗಮನವನ್ನು ಮಹಾ ಬಾಬೆಲಿನ ಮೇಲೆ ಕೇಂದ್ರೀಕರಿಸುತ್ತದೆ. ಅನಂತರ, ಅಧ್ಯಾಯ 17 ಅವಳನ್ನು ಅತಿ ಭೋಗದ ಜಾರಸ್ತ್ರೀಯಾಗಿ ವರ್ಣಿಸುವುದು. ಅವಳು ಯಾರು? ನಾವು ನೋಡಲಿರುವಂತೆ, ಅವಳು ಒಂದು ಲೋಕ ಸಾಮ್ರಾಜ್ಯ, ಅವಳು ಧಾರ್ಮಿಕಳು, ಮತ್ತು ಅವಳು ದೇವರ ಸ್ತ್ರೀಯ ಸಂತಾನದ ವಿರುದ್ಧವಾಗಿ ಸೈತಾನನು ಬಳಸುವ ಅವನ ಕೃತ್ರಿಮ ವ್ಯವಸ್ಥೆ. (ಪ್ರಕಟನೆ 12:17) ಮಹಾ ಬಾಬೆಲ್ ಸುಳ್ಳು ಧರ್ಮದ ಇಡೀ ಲೋಕ ಸಾಮ್ರಾಜ್ಯವಾಗಿದೆ. ಅವಳಲ್ಲಿ ಪುರಾತನ ಬಾಬೆಲಿನ ಧಾರ್ಮಿಕ ಬೋಧನೆಗಳನ್ನು ಮತ್ತು ಆಚಾರಗಳನ್ನು ಪೋಷಿಸಿಕೊಂಡು ಬರುವ ಮತ್ತು ಅವಳ ಆತ್ಮವನ್ನು ಪ್ರದರ್ಶಿಸುವ ಎಲ್ಲಾ ಧರ್ಮಗಳು ಒಳಗೂಡಿವೆ.
2. (ಎ) ಬಾಬೆಲಿನ ಧರ್ಮವು ಭೂಮಿಯ ಎಲ್ಲಾ ಭಾಗಗಳಲ್ಲಿ ಹೇಗೆ ಪ್ರಸರಿಸಲ್ಪಟ್ಟಿತು? (ಬಿ) ಮಹಾ ಬಾಬೆಲಿನ ಪ್ರಧಾನ ವಿಭಾಗ ಯಾವುದು, ಮತ್ತು ಒಂದು ಬಲಾಢ್ಯ ಸಂಸ್ಥೆಯೋಪಾದಿ ಅದು ಯಾವಾಗ ಹೊರಬಂತು?
2 ಸುಮಾರು 4,000 ವರ್ಷಗಳ ಹಿಂದೆ ಯೆಹೋವನು ಭಾವೀ ಬಾಬೆಲ್ ಗೋಪುರವನ್ನು ಕಟ್ಟುವವರ ಭಾಷೆಯನ್ನು ಗಲಿಬಿಲಿಗೊಳಿಸಿದ್ದು ಬಾಬೆಲಿನಲ್ಲೇ. ಇಂದಿನ ಅಧಿಕಾಂಶ ಧರ್ಮಗಳಿಗೆ ಆಧಾರವಾಗಿರುವ ಧರ್ಮಭ್ರಷ್ಟ ನಂಬಿಕೆಗಳನ್ನು ಮತ್ತು ಆಚಾರಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾ ಭಿನ್ನ ಭಾಷಾಗುಂಪುಗಳು ಲೋಕದಲ್ಲಿಲ್ಲಾ ಚದರಿಹೋದವು. (ಆದಿಕಾಂಡ 11:1-9) ಮಹಾ ಬಾಬೆಲ್ ಸೈತಾನನ ಸಂಸ್ಥೆಯ ಧಾರ್ಮಿಕ ಭಾಗವಾಗಿದೆ. (ಹೋಲಿಸಿರಿ ಯೋಹಾನ 8:43-47.) ಕ್ರಿಸ್ತನ ಅನಂತರ ನಾಲ್ಕನೆಯ ಶತಕದಲ್ಲಿ, ಬೈಬಲಿನಿಂದಲ್ಲ, ಬದಲಾಗಿ ಬಹುತೇಕ ಬಾಬೆಲಿನ ಧರ್ಮದಿಂದ ಪಡೆದಂತಹ ಮತಸೂತ್ರಗಳು ಮತ್ತು ಸಂಪ್ರದಾಯಗಳೊಂದಿಗೆ ಮೇಲೇರಿದ ಒಂದು ಬಲಾಢ್ಯವಾದ, ನಿಯಮರಹಿತ ಸಂಸ್ಥೆಯು, ಧರ್ಮಭ್ರಷ್ಟ ಕ್ರೈಸ್ತಪ್ರಪಂಚ, ಇಂದು ಅವಳ ಅತಿ ಪ್ರಧಾನ ಭಾಗವಾಗಿದೆ.—2 ಥೆಸಲೊನೀಕ 2:3-12.
3. ಮಹಾ ಬಾಬೆಲ್ ಬಿದ್ದಿದ್ದಾಳೆ ಎಂದು ಹೇಗೆ ಹೇಳಸಾಧ್ಯವಿದೆ?
3 ನೀವು ಪ್ರಶ್ನಿಸಬಹುದು, ‘ಭೂಮಿಯ ಮೇಲೆ ಧರ್ಮವು ಇನ್ನೂ ಮಹಾ ಪ್ರಭಾವವನ್ನು ಚಲಾಯಿಸುತ್ತಿರುವುದರಿಂದ, ಮಹಾ ಬಾಬೆಲ್ ಬಿದ್ದಿದ್ದಾಳೆ ಎಂದು ದೇವದೂತನು ಪ್ರಕಟಿಸಿದ್ದು ಯಾಕೆ?’ ಒಳ್ಳೇದು, ಸಾ. ಶ. ಪೂ. 539 ರಲ್ಲಿ ಪುರಾತನ ಬಾಬೆಲ್ ಬಿದ್ದಾಗ, ಏನು ಫಲಿತಾಂಶವುಂಟಾಯಿತು? ಇಸ್ರಾಯೇಲ್ ತನ್ನ ಸ್ವದೇಶಕ್ಕೆ ಹಿಂದೆರಳಲು ಮತ್ತು ಅಲ್ಲಿ ಸತ್ಯಾರಾಧನೆಯನ್ನು ಪುನಃ ಸ್ಥಾಪಿಸಲು ಬಿಡುಗಡೆಹೊಂದಿತು! ಆದುದರಿಂದ ಇಂದಿನ ತನಕವೂ ಮುಂದರಿಯುತ್ತಿರುವ ಮತ್ತು ವಿಸ್ತರಿಸುತ್ತಿರುವ, ಪ್ರಜ್ವಲಿಸುವ ಆತ್ಮಿಕ ಅಭ್ಯುದಯಕ್ಕೆ ನಡಿಸಿದ, 1919ರ ಆತ್ಮಿಕ ಇಸ್ರಾಯೇಲಿನ ಪುನಃ ಸ್ಥಾಪನೆಯು, ಆ ವರ್ಷದಲ್ಲಿ ಮಹಾ ಬಾಬೆಲ್ ಬಿದಿದ್ದೆ ಎನ್ನುವುದರ ಪುರಾವೆಯಾಗಿ ನಿಲ್ಲುತ್ತದೆ. ಅವಳಿಗೆ ದೇವರ ಜನರ ಮೇಲೆ ನಿರ್ಬಂಧಿಸುವ ಯಾವ ಶಕ್ತಿಯೂ ಇನ್ನು ಮೇಲೆ ಇಲ್ಲ. ಅದೂ ಅಲ್ಲದೆ, ಅವಳದ್ದೇ ಪಂಕ್ತಿಗಳೊಳಗೆ ಆಳವಾದ ತೊಂದರೆಗಳಿಗೆ ಅವಳು ಈಡಾಗಿದ್ದಾಳೆ. ಅವಳ ಭ್ರಷ್ಟತನ, ಅಪ್ರಾಮಾಣಿಕತನ, ಮತ್ತು ಅನೈತಿಕತೆಯು 1919 ರಿಂದ ಬಹಳ ವ್ಯಾಪಕವಾಗಿ ಬಹಿರಂಗಗೊಳಿಸಲ್ಪಟ್ಟಿದೆ. ಯೂರೋಪಿನ ಹೆಚ್ಚಿನ ಕಡೆಗಳಲ್ಲಿ, ಕೊಂಚವೇ ಜನರು ಚರ್ಚುಗಳಿಗೆ ಹೋಗುತ್ತಾರೆ, ಮತ್ತು ಕೆಲವು ಸಮಾಜವಾದಿ ದೇಶಗಳಲ್ಲಿ, ಧರ್ಮವನ್ನು “ಜನರ ಆಫೀಮು” ಎಂದು ಪರಿಗಣಿಸಲ್ಪಡಲಾಗುತ್ತದೆ. ದೇವರ ಸತ್ಯವಾಕ್ಯವನ್ನು ಪ್ರೀತಿಸುವವರೆಲ್ಲರ ಕಣ್ಣಿನಲ್ಲಿ ಅಗೌರವಕ್ಕೀಡಾಗಿ, ಅವಳ ಮೇಲೆ ಯೆಹೋವನ ನೀತಿಯುಕ್ತ ತೀರ್ಪುಗಳ ಜಾರಿಗೊಳಿಸುವಿಕೆಗಾಗಿ, ಮಹಾ ಬಾಬೆಲ್ ಈಗ ತನ್ನ ಮರಣದ ಸರದಿಯಲ್ಲಿ ಕಾದಿರುತ್ತದೊ ಎಂಬಂತೆ ಇದೆ.
ಬಾಬೆಲಿನ ಅವಮಾನಕಾರಿ ಪತನ
4-6. “ಮಹಾ ಬಾಬೆಲ್ . . . ಸಕಲ ಜನಾಂಗಗಳಿಗೆ ತನ್ನ ಜಾರತ್ವದ ದ್ರಾಕ್ಷಾಮದ್ಯವನ್ನು ಕುಡಿಯುವಂತೆ” ಮಾಡಿದ್ದು ಹೇಗೆ?
4 ಮಹಾ ಬಾಬೆಲಿನ ಅವಮಾನಕಾರಿ ಪತನದ ಸುತ್ತಲೂ ಇದ್ದ ಪರಿಸ್ಥಿತಿಗಳನ್ನು ನಾವು ಸ್ವಲ್ಪ ಹೆಚ್ಚು ವಿವರವಾಗಿ ಪರೀಕ್ಷಿಸೋಣ. ಇಲ್ಲಿ ದೇವದೂತನು ನಮಗೆ ಹೇಳುವುದು, ಮಹಾ ಬಾಬೆಲು, “ಸಕಲ ಜನಾಂಗಗಳು ಆಕೆಯ ಜಾರತ್ವದ ಕೋಪದ ದ್ರಾಕ್ಷಾಮದ್ಯವನ್ನು ಕುಡಿಯುವಂತೆ ಮಾಡಿದಳು.” ಇದರ ಅರ್ಥವೇನು? ಇದು ಒಂದು ವಿಜಯಕ್ಕೆ ಸಂಬಂಧಿಸಿದೆ. ಉದಾಹರಣೆಗೆ, ಯೆಹೋವನು ಯೆರೆಮೀಯನಿಗೆ ಹೇಳಿದ್ದು: “ರೋಷರೂಪಮದ್ಯದ ಈ ಪಾತ್ರೆಯನ್ನು ನೀನು ನನ್ನ ಕೈಯಿಂದ ತೆಗೆದುಕೊಂಡು ಯಾವ ಜನಾಂಗಗಳ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಕಲ ಜನಾಂಗಗಳು ಇದರಲ್ಲಿ ಕುಡಿಯುವಂತೆ ಮಾಡು. ನಾನು ಅವರಲ್ಲಿಗೆ ಖಡ್ಗವನ್ನು ಕಳುಹಿಸುವೆನು; [ಆ ನನ್ನ ರೋಷವನ್ನು] ಅವರು ಕುಡಿದು ಓಲಾಡುವರು, ಹುಚ್ಚುಚ್ಚಾಗುವರು.” (ಯೆರೆಮೀಯ 25:15, 16) ಸಾ. ಶ. ಪೂ ಆರನೆಯ ಮತ್ತು ಏಳನೆಯ ಶತಮಾನಗಳಲ್ಲಿ, ಯೆಹೋವನು ಧರ್ಮಭ್ರಷ್ಟ ಯೆಹೂದವನ್ನು ಕೂಡಿಸಿ, ಅನೇಕ ಜನಾಂಗಗಳು ಕುಡಿಯುವಂತೆ, ಸಂಕಟದ ಸಾಂಕೇತಿಕ ಪಾತ್ರೆಯನ್ನು ಸುರಿಯಲು ಪ್ರಾಚೀನ ಬಾಬೆಲನ್ನು ಬಳಸಿದನು. ಆ ಮೂಲಕ ಅವನ ಸ್ವಂತ ಜನರು ಕೂಡ ದೇಶಭ್ರಷ್ಟರಾದರು. ಅನಂತರ, ಅವಳ ಸರದಿಯಲ್ಲಿ, ಬಾಬೆಲು ಪತನಗೊಂಡಿತು ಯಾಕಂದರೆ ಅವಳ ರಾಜನು “ಪರಲೋಕದೊಡೆಯ” ನಾದ ಯೆಹೋವನ ವಿರುದ್ಧವಾಗಿ ತನ್ನನ್ನು ಹೆಚ್ಚಿಸಿಕೊಂಡನು.—ದಾನಿಯೇಲ 5:23.
5 ಮಹಾ ಬಾಬೆಲ್ ಕೂಡ ವಿಜಯಗಳನ್ನು ಪಡೆದಿದೆ, ಆದರೆ ಹೆಚ್ಚಿನ ಭಾಗದಲ್ಲಿ, ಇವು ಹೆಚ್ಚು ಕುಯುಕ್ತಿಯಿಂದ. ಜಾರಸ್ತ್ರೀಯೊಬ್ಬಳ ಕುಯುಕ್ತಿಗಳನ್ನು ಬಳಸಿ, ಅವರೊಂದಿಗೆ ಧಾರ್ಮಿಕ ವ್ಯಭಿಚಾರವನ್ನು ಗೈದು, ಅವಳು “ಸಕಲ ಜನಾಂಗಗಳು ಕುಡಿಯುವಂತೆ” ಮಾಡಿದ್ದಾಳೆ. ಅವಳೊಂದಿಗೆ ಸಂಧಾನ ಮತ್ತು ಮೈತ್ರಿಗಳನ್ನು ಮಾಡುವಂತೆ ರಾಜಕೀಯ ಧುರೀಣರನ್ನು ಅವಳು ಮೋಹದಿಂದ ಸೆಳೆದಿದ್ದಾಳೆ. ಧಾರ್ಮಿಕ ಪ್ರಲೋಭನಗೊಳಿಸುವಿಕೆಗಳಿಂದ, ಅವಳು ರಾಜಕೀಯ, ವಾಣಿಜ್ಯ, ಮತ್ತು ಆರ್ಥಿಕ ದಬ್ಬಾಳಿಕೆಯ ಹೂಟ ಹೂಡಿದ್ದಾಳೆ. ಅವಳು ಧಾರ್ಮಿಕ ಹಿಂಸಾಚಾರವನ್ನು ಮತ್ತು ಧಾರ್ಮಿಕ ಯುದ್ಧಗಳನ್ನು ಮತ್ತು ದಂಡಯಾತ್ರೆಗಳನ್ನು ಮಾತ್ರವಲ್ಲದೆ ರಾಷ್ಟ್ರೀಯ ಯುದ್ಧಗಳನ್ನು ಕೇವಲ ರಾಜಕೀಯ ಮತ್ತು ವಾಣಿಜ್ಯದ ಕಾರಣಗಳಿಗಾಗಿ ಉದ್ರೇಕಿಸಿದ್ದಾಳೆ. ಮತ್ತು ಅವು ದೇವರ ಚಿತ್ತವೆಂದು ಹೇಳುವುದರ ಮೂಲಕ ಅವಳು ಈ ಯುದ್ಧಗಳನ್ನು ಪವಿತ್ರೀಕರಿಸಿದ್ದಾಳೆ.
6 ಈ 20 ನೆಯ ಶತಮಾನದಲ್ಲಿ ಯುದ್ಧಗಳಲ್ಲಿ ಮತ್ತು ರಾಜಕೀಯದಲ್ಲಿ ಧರ್ಮದ ಒಳಗೂಡುವಿಕೆಯು ಸರ್ವಸಾಮಾನ್ಯ ಸಂಗತಿ—ಶಿಂಟೋ ಜಪಾನ್, ಹಿಂದೂ ಭಾರತ, ಬೌದ್ಧ ವಿಯೆಟ್ನಾಮ್, “ಕ್ರೈಸ್ತ” ಉತ್ತರ ಆಯರ್ಲೆಂಡ್ ಮತ್ತು ಲ್ಯಾಟಿನ್ ಅಮೆರಿಕ, ಹಾಗೂ ಇನ್ನಿತರವುಗಳು—ಎರಡು ಲೋಕ ಯುದ್ಧಗಳ ಇಬ್ಬಣಗಳಲ್ಲಿಯೂ ಸೇನಾ-ಪಾದ್ರಿಗಳು ಒಬ್ಬರು ಇನ್ನೊಬ್ಬರನ್ನು ಹತಿಸುವಂತೆ ಯುವ ಜನರನ್ನು ಉತ್ತೇಜಿಸಿದ್ದು ಕಡೆಗಣಿಸಲಾಗದಂತಹದ್ದು. ಮಹಾ ಬಾಬೆಲಿನ ಪ್ರಣಯದಾಟದ ಒಂದು ವಿಶಿಷ್ಟ ಉದಾಹರಣೆಯು ಕಡಿಮೆ ಪಕ್ಷ 6,00,000 ಜನರು ಕೊಲ್ಲಲ್ಪಟ್ಟ 1936-39ರ ಸ್ಪಾನಿಷ್ ಆಂತರಿಕ ಯುದ್ಧದಲ್ಲಿ ಅವಳ ಭಾಗವಹಿಸುವಿಕೆಯಾಗಿದೆ. ಈ ರಕ್ತಪಾತವು ಕ್ಯಾತೊಲಿಕ್ ಪಾದ್ರಿಗಳ ಮತ್ತು ಅವರ ಮೈತ್ರಿಕೂಟಗಳ ಬೆಂಬಲಿಗರಿಂದ—ಭಾಗಶಃ ಸ್ಪಾನಿಷ್ ಕಾನೂನುಬದ್ಧ ಸರಕಾರದಿಂದ ಚರ್ಚಿನ ಸಂಪತ್ತು ಮತ್ತು ಸ್ಥಾನಮಾನಕ್ಕೆ ಬೆದರಿಕೆಯೊಡ್ಡಲ್ಪಟ್ಟಾಗ ಕೆರಳಿಸಲ್ಪಟ್ಟಿತು.
7. ಮಹಾ ಬಾಬೆಲಿನ ಮುಖ್ಯಗುರಿ ಯಾರಾಗಿದ್ದರು, ಮತ್ತು ಈ ಗುರಿಯ ವಿರುದ್ಧ ಅವಳು ಯಾವ ಕ್ರಮವಿಧಾನಗಳನ್ನು ಬಳಸಿದ್ದಾಳೆ?
7 ಸೈತಾನನ ಸಂತಾನದ ಧಾರ್ಮಿಕ ಭಾಗವಾಗಿ ಮಹಾ ಬಾಬೆಲ್ ಇರುವುದರಿಂದ, ಅವಳು ಯಾವಾಗಲೂ ಯೆಹೋವನ “ಸ್ತ್ರೀ”, “ಮೇಲಣ ಯೆರೂಸಲೇಮ್” ಅನ್ನು ತನ್ನ ಆಕ್ರಮಣದ ಮುಖ್ಯಗುರಿಯಾಗಿ ಮಾಡಿದ್ದಾಳೆ. ಮೊದಲನೆಯ ಶತಮಾನದಲ್ಲಿ, ಅಭಿಷಿಕ್ತ ಕ್ರೈಸ್ತರ ಸಭೆಯು ಸ್ಪಷ್ಟವಾಗಿ ಸ್ತ್ರೀಯ ಸಂತಾನದೊಂದಿಗೆ ಗುರುತಿಸಲ್ಪಟ್ಟಿತು. (ಆದಿಕಾಂಡ 3:15; ಗಲಾತ್ಯ 3:29; 4:26) ಪರಿಶುದ್ಧವಾದ ಆ ಸಭೆಯು ಧಾರ್ಮಿಕ ಜಾರತ್ವವನ್ನು ಮಾಡುವಂತೆ ಮೋಸಗೊಳಿಸುವ ಮೂಲಕ ವಿಜಯಗಳಿಸಲು ಮಹಾ ಬಾಬೆಲ್ ಕಠಿಣವಾಗಿ ಪ್ರಯತ್ನಿಸಿದಳು. ಅನೇಕರು ಇದಕ್ಕೆ ತುತ್ತಾಗುವರು ಮತ್ತು ಫಲಿತಾಂಶವಾಗಿ ಮಹಾ ಧರ್ಮಭ್ರಷ್ಟತೆಯೊಂದು ಬರುವುದು ಎಂದು ಅಪೊಸ್ತಲ ಪೌಲ ಮತ್ತು ಪೇತ್ರರು ಎಚ್ಚರಿಸಿದರು. (ಅ. ಕೃತ್ಯಗಳು 20:29, 30; 2 ಪೇತ್ರ 2:1-3) ಯೋಹಾನನ ಜೀವಿತದ ಕೊನೆಯ ಭಾಗದಲ್ಲಿ ಏಳು ಸಭೆಗಳಿಗೆ ಯೇಸುವಿನ ಸಂದೇಶಗಳು, ಭ್ರಷ್ಟಗೊಳಿಸುವ ಅವಳ ಪ್ರಯತ್ನದಲ್ಲಿ ಮಹಾ ಬಾಬೆಲ್ ಸ್ವಲ್ಪ ಪ್ರಗತಿಯನ್ನು ಮಾಡುತ್ತಿತ್ತು ಎಂದು ಸೂಚಿಸಿತು. (ಪ್ರಕಟನೆ 2:6, 14, 15, 20-23) ಆದರೆ ಎಷ್ಟರ ತನಕ ಹೋಗಲು ಅವಳನ್ನು ಅನುಮತಿಸಲಾಗುತ್ತದೆ ಎಂದು ಯೇಸುವು ಆಗಲೇ ತೋರಿಸಿದ್ದನು.
ಗೋದಿ ಮತ್ತು ಹಣಜಿ
8, 9. (ಎ) ಯೇಸುವಿನ ಗೋದಿ ಮತ್ತು ಹಣಜಿಗಳ ಸಾಮ್ಯ ಏನನ್ನು ಸೂಚಿಸಿತು? (ಬಿ) “ಜನರು ನಿದ್ರೆ ಮಾಡುವ ಕಾಲದಲ್ಲಿ” ಏನು ಸಂಭವಿಸಿತು?
8 ಗೋದಿ ಮತ್ತು ಹಣಜಿಯ ಕುರಿತ ತನ್ನ ಸಾಮ್ಯದಲ್ಲಿ ಯೇಸುವು ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ ಮನುಷ್ಯನೊಬ್ಬನ ಕುರಿತಾಗಿ ಮಾತಾಡಿದನು. ಆದರೆ “ಜನರು ನಿದ್ರೆಮಾಡುವ ಕಾಲದಲ್ಲಿ” ವೈರಿಯು ಬಂದು ಅದರ ಮೇಲೆ ಹಣಜಿ ಬಿತ್ತಿಹೋದನು. ಹೀಗೆ ಹಣಜಿಯಿಂದಾಗಿ ಗೋದಿಯು ಮರೆಯಾಯಿತು. ತನ್ನ ಸಾಮ್ಯವನ್ನು ಯೇಸು ಈ ಮಾತುಗಳಲ್ಲಿ ವಿವರಿಸಿದನು: “ಒಳ್ಳೆಯ ಬೀಜವನ್ನು ಬಿತ್ತುವವನಂದರೆ ಮನುಷ್ಯಕುಮಾರನು; ಹೊಲವಂದರೆ ಈ ಲೋಕ; ಒಳ್ಳೆಯ ಬೀಜವಂದರೆ ಪರಲೋಕರಾಜ್ಯದವರು; ಹಣಜಿ ಅಂದರೆ ಸೈತಾನನವರು; ಅದನ್ನು ಬಿತ್ತುವ ವೈರಿ ಅಂದರೆ ಸೈತಾನನು.” ಅನಂತರ ಗೋದಿ ಮತ್ತು ಹಣಜಿಯು ಒತ್ತೊತ್ತಾಗಿ ಬೆಳೆಯುವಂತೆ “ಯುಗದ ಸಮಾಪ್ತಿಯ ವರೆಗೂ” ಸಮಯವನ್ನು ಕೊಡಲಾಯಿತು ಮತ್ತು ಆಗ ದೇವದೂತರು ಸಾಂಕೇತಿಕ ಹಣಜಿಯನ್ನು “ಆರಿಸಿ ತೆಗೆಯುವರು” ಎಂದು ತೋರಿಸಿದನು.—ಮತ್ತಾಯ 13:24-30, 36-43.
9 ಯೇಸು ಮತ್ತು ಅಪೊಸ್ತಲ ಪೌಲ ಮತ್ತು ಪೇತ್ರರು ಯಾವುದರ ವಿಷಯ ಎಚ್ಚರಿಸಿದ್ದರೋ ಅದು ಸಂಭವಿಸಿತು. “ಜನರು ನಿದ್ರೆ ಮಾಡುವ ಕಾಲದಲ್ಲಿ” ಒಂದೇ, ಮರಣದಲ್ಲಿ ಅಪೊಸ್ತಲರು ನಿದ್ರೆಹೋದ ಅನಂತರ, ಯಾ ದೇವರ ಮಂದೆಯ ಜಾಗ್ರತೆ ತೆಗೆದುಕೊಳ್ಳುವುದರಲ್ಲಿ ಕ್ರೈಸ್ತ ಮೇಲ್ವಿಚಾರಕರು ತೂಕಡಿಸಿದಾಗ, ಬಾಬೆಲಿನ ಧರ್ಮಭ್ರಷ್ಟತೆಯು ಸಭೆಯ ನಡುವೆಯೇ ಚಿಗುರೊಡೆಯಿತು. (ಅ. ಕೃತ್ಯಗಳು 20:31) ಬಲುಬೇಗನೆ ಹಣಜಿಯು ಸಂಖ್ಯೆಯಲ್ಲಿ ಗೋದಿಯನ್ನು ಬಹಳವಾಗಿ ಮೀರಿದ್ದರಿಂದ, ಅದು ನೋಟಕ್ಕೆ ಕಾಣದೆ ಮರೆಯಾಯಿತು. ಹಲವಾರು ಶತಮಾನಗಳ ತನಕ ಸ್ತ್ರೀಯ ಸಂತಾನವು ಪೂರ್ಣವಾಗಿ ಮಹಾ ಬಾಬೆಲಿನ ಹಲವು ನಿರಿಗಳುಳ್ಳ ಬಟ್ಟೆಯ ಕೆಳಗೆ ಮುಳುಗಿಹೋಯಿತೋ ಎಂಬಂತೆ ಕಾಣುತ್ತಿತ್ತು.
10. ವರ್ಷ 1870 ಗಳಲ್ಲಿ ಏನು ನಡೆಯಿತು, ಮತ್ತು ಮಹಾ ಬಾಬೆಲ್ ಇದಕ್ಕೆ ಹೇಗೆ ಪ್ರತಿವರ್ತಿಸಿತು?
10 ಅಭಿಷಿಕ್ತ ಕ್ರೈಸ್ತರು 1870 ಗಳಲ್ಲಿ ಮಹಾ ಬಾಬೆಲಿನ ಜಾರತ್ವದ ಮಾರ್ಗಗಳಿಂದ ತಮ್ಮನ್ನು ಬೇರ್ಪಡಿಸಿಕೊಳ್ಳಲು ದೃಢವಾದ ಪ್ರಯತ್ನಗಳನ್ನು ಮಾಡಲು ಆರಂಭಿಸಿದರು. ವಿಧರ್ಮಗಳಿಂದ ಕ್ರೈಸ್ತಪ್ರಪಂಚವು ಒಳತಂದ ಸುಳ್ಳು ಬೋಧನೆಗಳನ್ನು ಅವರು ತ್ಯಜಿಸಿದರು ಮತ್ತು 1914 ರಲ್ಲಿ ಅನ್ಯಜನಾಂಗಗಳ ಸಮಯವು ಅಂತ್ಯಗೊಳ್ಳಲಿದೆ ಎಂದು ಸಾರುವುದರಲ್ಲಿ ಬೈಬಲನ್ನು ಧೈರ್ಯವಾಗಿ ಬಳಸಿದರು. ಸತ್ಯ ಧರ್ಮದ ಪುನಃ ಸ್ಥಾಪನೆಯ ಈ ಚಟುವಟಿಕೆಗಳನ್ನು ಮಹಾ ಬಾಬೆಲಿನ ಮುಖ್ಯ ಸಾಧನವಾದ ಕ್ರೈಸ್ತಪ್ರಪಂಚದ ವೈದಿಕರು ವಿರೋಧಿಸಿದರು. ಮೊದಲನೆಯ ಲೋಕ ಯುದ್ಧದಲ್ಲಿ ಅವರು ಯುದ್ಧಕಾಲದ ಉನ್ಮಾದದ ಅನುಕೂಲತೆಯನ್ನು ಪಡೆದುಕೊಂಡು ನಂಬಿಗಸ್ತ ಕ್ರೈಸ್ತರ ಆ ಚಿಕ್ಕ ಗುಂಪನ್ನು ಅಳಿಸಿಹಾಕಲು ಪ್ರಯತ್ನಿಸಿದರು. ಅವರ ಚಟುವಟಿಕೆಗಳು 1918 ರಲ್ಲಿ ಬಹುಮಟ್ಟಿಗೆ ಪೂರ್ಣವಾಗಿ ದಮನಿಸಲ್ಪಟ್ಟಾಗ, ಮಹಾ ಬಾಬೆಲ್ ಯಶಸ್ಸು ಗಳಿಸಿದಂತೆ ತೋರಿತು. ಅವಳು ಅವರ ಮೇಲೆ ವಿಜಯ ಗಳಿಸಿದಂತೆ ಭಾಸವಾಯಿತು.
11. ಪುರಾತನ ಬಾಬೆಲಿನ ಪತನದಿಂದ ಏನು ಫಲಿಸಿತು?
11 ನಾವು ಮೊದಲು ಗಮನಿಸಿದಂತೆ, ಬಾಬೆಲಿನ ಅಹಂಕಾರದ ನಗರವು ಸಾ. ಶ. ಪೂ. 539 ರಲ್ಲಿ ವಿಪತ್ಕಾರಕ ಪತನವನ್ನು ಅನುಭವಿಸಿತು. ಆಗ ಒಂದು ಕೂಗು ಕೇಳಿಸಲ್ಪಟ್ಟಿತು: “ಬಾಬೆಲ್ ಬಿತ್ತು, ಬಾಬೆಲ್ ಬಿತ್ತು!” ಲೋಕ ಸಾಮ್ರಾಜ್ಯದ ಮಹಾ ಆಸನವು ಮಹಾ ಕೋರೇಷನ ಕೈಕೆಳಗಿನ ಮೇದ್ಯ-ಪಾರಸಿಯ ಸೇನೆಗೆ ಬಲಿಬಿದ್ದತ್ತು. ನಗರವು ತಾನೇ ವಶಪಡಿಸಿಕೊಳ್ಳುವಿಕೆಯಿಂದ ಪಾರಾದರೂ, ಅಧಿಕಾರದಿಂದ ಅವಳ ಪತನವು ನೈಜವಾಗಿತ್ತು, ಮತ್ತು ಅದು ಅವಳ ಯೆಹೂದಿ ಬಂದಿವಾಸಿಗಳ ಬಿಡುಗಡೆಗೆ ನಡಿಸಿತು. ಶುದ್ಧಾರಾಧನೆಯನ್ನು ಪುನಃ ಸ್ಥಾಪಿಸಲು ಅವರು ಯೆರೂಸಲೇಮಿಗೆ ಹಿಂದೆರಳಿದರು.—ಯೆಶಾಯ 21:9; 2 ಪೂರ್ವಕಾಲವೃತ್ತಾಂತ 36:22, 23; ಯೆರೆಮೀಯ 51:7, 8.
12. (ಎ) ನಮ್ಮ ಶತಕದಲ್ಲಿ, ಮಹಾ ಬಾಬೆಲ್ ಪತನಗೊಂಡಿದೆ ಎಂದು ಹೇಗೆ ಹೇಳಸಾಧ್ಯವಿದೆ? (ಬಿ) ಕ್ರೈಸ್ತಪ್ರಪಂಚವನ್ನು ಯೆಹೋವನು ಸಂಪೂರ್ಣವಾಗಿ ತೊರೆದಿರುತ್ತಾನೆ ಎಂದು ಯಾವುದು ರುಜುಪಡಿಸುತ್ತದೆ?
12 ನಮ್ಮ ಶತಮಾನದಲ್ಲಿ ಮಹಾ ಬಾಬೆಲ್ ಪತನಗೊಂಡಿದೆ ಎಂಬ ಕೂಗು ಕೂಡ ಕೇಳಿಸಲ್ಪಟ್ಟಿದೆ! ಯೋಹಾನ ವರ್ಗವಾದ ಅಭಿಷಿಕ್ತರಲ್ಲಿ ಉಳಿದವರು ಆತ್ಮಿಕ ಪುನರುತ್ಥಾನವೊಂದರಿಂದ 1919 ರಲ್ಲಿ ಪುನಃ ಸ್ಥಾಪಿಸಲ್ಪಟ್ಟಾಗ, ಬಾಬೆಲಿನ ಕ್ರೈಸ್ತಪ್ರಪಂಚದ 1918ರ ತಾತ್ಕಾಲಿಕ ಯಶಸ್ಸು ತೀರ ವಿಪರ್ಯಸ್ತವಾಯಿತು. ದೇವಜನರನ್ನು ಬಂಧಿಸಿ ಹಿಡಿಯುವ ಸಂಬಂಧದಲ್ಲಿ ಮಹಾ ಬಾಬೆಲು ಬಿದ್ದತ್ತು. ಮಿಡಿತೆಗಳಂತೆ, ಕ್ರಿಸ್ತನ ಅಭಿಷಿಕ್ತ ಸಹೋದರರು ಅಧೋಲೋಕದಿಂದ ಹೊರಬಂದು ಕಾರ್ಯಾಚರಣೆಗೆ ಸಿದ್ಧರಾದರು. (ಪ್ರಕಟನೆ 9:1-3; 11:11, 12) ಅವರು ಆಧುನಿಕ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಗಿದ್ದರು ಮತ್ತು ಯಜಮಾನನು ಭೂಮಿಯ ಮೇಲಿನ ತನ್ನ ಎಲ್ಲಾ ಆಸ್ತಿಯ ಮೇಲೆ ಅವರನ್ನು ನೇಮಿಸಿದನು. (ಮತ್ತಾಯ 24:45-47) ಅವರನ್ನು ಬಳಸಿದ ಈ ರೀತಿಯು, ಭೂಮಿಯ ಮೇಲೆ ಯೆಹೋವನ ಪ್ರತಿನಿಧಿಗಳಾಗಿದ್ದೇವೆಂದು ಕ್ರೈಸ್ತಪ್ರಪಂಚವು ವಾದಿಸುವುದಾದರೂ, ಆತನು ಅವರನ್ನು ಪೂರ್ಣವಾಗಿ ತೊರೆದಿದ್ದಾನೆ ಎಂದು ಸಿದ್ಧಪಡಿಸಿತು. ಶುದ್ಧಾರಾಧನೆಯು ಪುನಃ ಸ್ಥಾಪಿಸಲ್ಪಟ್ಟಿತು ಮತ್ತು 1,44,000 ಮಂದಿಯಲ್ಲಿ—ಮಹಾ ಬಾಬೆಲಿನ ಬಹುಕಾಲದ ವೈರಿಯಾದ ಸ್ತ್ರೀಯ ಸಂತಾನದವರಲ್ಲಿ—ಉಳಿದವರ ಮೇಲೆ ಮುದ್ರೆಯೊತ್ತುವ ಕಾರ್ಯವು ಪೂರ್ಣಗೊಳಿಸಲು ದಾರಿಯನ್ನು ತೆರೆಯಿತು. ಇದೆಲ್ಲವೂ ಆ ಸೈತಾನನ ಸಂಬಂಧಿತ ಧಾರ್ಮಿಕ ಸಂಸ್ಥೆಯ ತಲೆಯೆತ್ತಲಾಗದಂಥ ಸೋಲಿನ ಸಂಕೇತವನ್ನು ನೀಡಿತು.
ದೇವಜನರ ತಾಳ್ಮೆ
13. (ಎ) ಮೂರನೆಯ ದೇವದೂತನು ಏನನ್ನು ಪ್ರಕಟಿಸುತ್ತಾನೆ? (ಬಿ) ಕಾಡು ಮೃಗದ ಗುರುತು ಪಡೆದಿರುವವರಿಗೆ ಯೆಹೋವನು ಯಾವ ನ್ಯಾಯತೀರ್ಪನ್ನು ಮಾಡುತ್ತಾನೆ?
13 ಈಗ ಮೂರನೆಯ ದೇವದೂತನು ಮಾತಾಡುತ್ತಾನೆ. ಆಲಿಸಿರಿ! “ಮತ್ತು ಇನ್ನೊಬ್ಬ ದೇವದೂತನು, ಮೂರನೆಯವನು, ಗಟ್ಟಿಯಾದ ಸರ್ವದಲ್ಲಿ ಹೀಗೆ ಹೇಳುತ್ತಾ ಅವರನ್ನು ಹಿಂಬಾಲಿಸಿದನು: ‘ಯಾವನಾದರೂ ಕಾಡು ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸಿದರೆ, ಮತ್ತು ತನ್ನ ಹಣೆಯ ಮೇಲೆ ಯಾ ತನ್ನ ಕೈಯ ಮೇಲೆ ಗುರುತು ಪಡೆದುಕೊಂಡರೆ ಅವನು ಸಹ ಯಾವುದು ಅವನ ಕೋಪದ ಪಾತ್ರೆಗೆ ಸಾರಗುಂದಿಸಲ್ಪಡದೆ ಹೊಯ್ಯಲ್ಪಡುತ್ತದೋ ಆ ದೇವರ ಕೋಪವೆಂಬ ದ್ರಾಕ್ಷಾಮದ್ಯವನ್ನು ಕುಡಿಯುವನು.” (ಪ್ರಕಟನೆ 14:9, 10ಎ, NW) ಪ್ರಕಟನೆ 13:16, 17 ರಲ್ಲಿ ಕಾಡು ಮೃಗದ ವಿಗ್ರಹವನ್ನು ಆರಾಧಿಸದವರು ಕರ್ತನ ದಿನದಲ್ಲಿ ಸಂಕಟಕ್ಕೊಳಗಾಗುವರು—ಕೊಲ್ಲಲ್ಪಡಲೂ ಬಹುದು—ಎಂದು ಪ್ರಕಟಿಸಲಾಗಿದೆ. “ಆ ಗುರುತು ಯಾವದೆಂದರೆ ಕಾಡು ಮೃಗದ ಹೆಸರು ಯಾ ಅದರ ಹೆಸರನ್ನು ಸೂಚಿಸುವ ಅಂಕೆ” ಇರುವವರಿಗೆ ನ್ಯಾಯದಂಡನೆಯನ್ನು ತರಲು ಯೆಹೋವನು ದೃಢನಿಶ್ಚಯಮಾಡಿದ್ದಾನೆಂದು ಈಗ ನಾವು ಕಲಿಯುತ್ತೇವೆ. ಯೆಹೋವನ ಕೋಪದ ಕಹಿ ‘ರೋಷದ ಪಾತ್ರೆ’ ಯಲ್ಲಿ ಕುಡಿಯುವಂತೆ ಅವರು ಬಲಾತ್ಕರಿಸಲ್ಪಡುವರು. ಅದು ಅವರಿಗೆ ಯಾವ ಅರ್ಥದಲ್ಲಿರುವುದು? ಸಾ. ಶ. ಪೂ. 607 ರಲ್ಲಿ ಯೆರೂಸಲೇಮ್ “ತನ್ನ ರೋಷವನ್ನು ತುಂಬಿಕೊಟ್ಟ ಪಾತ್ರೆಯಲ್ಲಿ” ಕುಡಿಯುವಂತೆ ಯೆಹೋವನು ಬಲಾತ್ಕರಿಸಿದಾಗ, ನಗರವು ಬಾಬೆಲಿನವರ ಹಸ್ತದಿಂದ ‘ಹಾಳುಪಾಳಾಗುವ, ಕ್ಷಾಮವೂ ಖಡ್ಗವೂ ಪ್ರಾಪ್ತವಾಗುವ’ ಅನುಭವವನ್ನು ಪಡೆಯಿತು. (ಯೆಶಾಯ 51:17, 19) ಅದೇ ರೀತಿಯಲ್ಲಿ, ಭೂಮಿಯ ರಾಜಕೀಯ ಶಕ್ತಿಗಳ ಮತ್ತು ಅವುಗಳ ವಿಗ್ರಹವಾದ ಸಂಯುಕ್ತ ರಾಷ್ಟ್ರ ಸಂಘದ ಮೂರ್ತಿಪೂಜಕರು ಯೆಹೋವನ ರೋಷದ ಪಾತ್ರೆಯಿಂದ ಕುಡಿದಾಗ, ಅವರಿಗೆ ಅದು ವಿಪತ್ತಾಗಿ ಪರಿಣಮಿಸುವುದು. (ಯೆರೆಮೀಯ 25:17, 32, 33) ಅವರು ಸಂಪೂರ್ಣವಾಗಿ ನಾಶಮಾಡಲ್ಪಡುವರು.
14. ಕಾಡು ಮೃಗ ಮತ್ತು ಅದರ ವಿಗ್ರಹದ ಆರಾಧನೆ ಮಾಡುವವರ ನಾಶನದ ಮೊದಲೇ, ಅಂತಹವರು ಏನನ್ನು ಅನುಭವಿಸಬೇಕು, ಮತ್ತು ಯೋಹಾನನು ಇದನ್ನು ಹೇಗೆ ವರ್ಣಿಸುತ್ತಾನೆ?
14 ಆದಾಗ್ಯೂ, ಅದು ಸಂಭವಿಸುವ ಮೊದಲು, ಮೃಗದ ಗುರುತು ಇರುವವರು ಯೆಹೋವನ ಅಪ್ರಸನ್ನತೆಯ ಯಾತನಾಮಯ ಪರಿಣಾಮಗಳನ್ನು ಅನುಭವಿಸಲಿಕ್ಕದೆ. ಕಾಡು ಮೃಗದ ಮತ್ತು ಅದರ ವಿಗ್ರಹದ ಆರಾಧಕನ ಕುರಿತು ಮಾತಾಡುತ್ತಾ, ದೇವದೂತನು ಯೋಹಾನನಿಗೆ ಹೇಳುವುದು: “ಮತ್ತು ಪರಿಶುದ್ಧ ದೇವದೂತರ ಮುಂದೆ ಮತ್ತು ಕುರಿಮರಿಯ ಮುಂದೆ ಅವನನ್ನು ಬೆಂಕಿ ಮತ್ತು ಗಂಧಕದಿಂದ ಯಾತನೆಗೊಳಪಡಿಸಲಾಗುವುದು. ಮತ್ತು ಅವರ ಯಾತನೆಯ ಹೊಗೆಯು ಎಂದೆಂದಿಗೂ ಏರುತ್ತಾ ಹೋಗುತ್ತದೆ, ಮತ್ತು ಕಾಡು ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಿಗೆ ಮತ್ತು ಅದರ ಹೆಸರಿನ ಗುರುತನ್ನು ಪಡೆದುಕೊಳ್ಳುವವರಿಗೆ ಹಗಲಿರುಳು ಉಪಶಮನವಿಲ್ಲ.”—ಪ್ರಕಟನೆ 14:10ಬಿ, 11, NW.
15, 16. ಪ್ರಕಟನೆ 14:10 ರಲ್ಲಿ “ಬೆಂಕಿಯಿಂದಲೂ ಗಂಧಕದಿಂದಲೂ” ಎಂಬ ಮಾತುಗಳ ಪ್ರಾಮುಖ್ಯವೇನು?
15 ಇಲ್ಲಿ ಹೇಳಲ್ಪಟ್ಟ ಬೆಂಕಿ ಮತ್ತು ಗಂಧಕ (“ಬೆಂಕಿ ಮತ್ತು ನರಕಾಗ್ನಿಯ ಇಂಧನ” ಕಿಂಗ್ ಜೇಮ್ಸ್ ವರ್ಷನ್) ನರಕಾಗ್ನಿ ಅಸ್ತಿತ್ವದಲ್ಲಿದೆ ಎಂಬುದರ ಒಂದು ರುಜುವಾತು ಎಂದು ಕೆಲವರು ವೀಕ್ಷಿಸಿದ್ದಾರೆ. ಆದರೆ ತದ್ರೀತಿಯ ಪ್ರವಾದನೆಯ ಕಡೆಗೆ ಒಂದು ಸಂಕ್ಷಿಪ್ತ ನೋಟವು, ಈ ಪೂರ್ವಾಪರದಲ್ಲಿ ಈ ಮಾತುಗಳ ನಿಜಾರ್ಥವನ್ನು ತೋರಿಸುತ್ತದೆ. ಹಿಂದೆ ಯೆಶಾಯನ ದಿನಗಳಲ್ಲಿ, ಇಸ್ರಾಯೇಲಿನ ಕಡೆಗಿನ ಅವರ ವೈರತ್ವದ ಕಾರಣ, ಎದೋಮ್ಯ ಜನಾಂಗವನ್ನು ದಂಡಿಸಲಾಗುವುದೆಂದು ಯೆಹೋವನು ಎಚ್ಚರಿಸಿದನು. ಅವನಂದದ್ದು: “ಅಲ್ಲಿ ತೊರೆಗಳು ಶಿಲಾಜತುವಾಗಿ ಹರಿಯುವವು, ದೂಳು ಗಂಧಕವಾಗುವುದು, ದೇಶವೆಲ್ಲಾ ಉರಿಯುವ ಶಿಲಾಜತುವಾಗುವುದು, ಅದು ಹಗಲಿರುಳೂ ಆರದು, ಅದರ ಹೊಗೆ ನಿರಂತರ ಏರುತ್ತಿರುವುದು. ದೇಶವು ತಲತಲಾಂತರಕ್ಕೂ ಹಾಳು ಬಿದ್ದಿರುವುದು, ಯುಗಯುಗಾಂತರಕ್ಕೂ ಅಲ್ಲಿ ಯಾರೂ ಹಾದುಹೋಗರು.”—ಯೆಶಾಯ 34:9, 10.
16 ಎದೋಮ್ ಸದಾಕಾಲ ಉರಿಯಲ್ಪಡಲಿಕ್ಕಾಗಿ, ಯಾವುದೋ ಪೌರಾಣಿಕ ನರಕಾಗ್ನಿಗೆ ಎಸೆಯಲ್ಪಟ್ಟಿತೋ? ಎಂದಿಗೂ ಇಲ್ಲ. ಬದಲಾಗಿ, ಬೆಂಕಿ ಮತ್ತು ಗಂಧಕದಿಂದ ಅದು ಮೊತ್ತದಲ್ಲಿ ಆಹುತಿಗೊಂಡಿತೋ ಎಂಬಂತೆ ಲೋಕ ದೃಶ್ಯದಿಂದ ಆ ಜನಾಂಗವು ಪೂರ್ಣವಾಗಿ ಕಾಣೆಯಾಯಿತು. ಅದರ ದಂಡನೆಯ ಕಟ್ಟಕಡೆಯ ಫಲಿತಾಂಶವು ನಿತ್ಯ ಯಾತನೆಯಲ್ಲ, ಬದಲಿಗೆ “ಹಾಳು . . . ಪಾಳು . . . ಇಲ್ಲವಾಗುವುದು.” (ಯೆಶಾಯ 34:11, 12) ‘ಹೊಗೆ ನಿರಂತರ ಏರುತ್ತಿರುವುದು’ ಎಂಬದು ಇದನ್ನು ಸವಿವರವಾಗಿ ಚಿತ್ರಿಸುತ್ತದೆ. ಮನೆಯೊಂದು ಭಸ್ಮಗೊಂಡಾಗ, ಬೆಂಕಿಜ್ವಾಲೆಯು ನಂದಿದ ಅನಂತರವೂ ಸ್ವಲ್ಪ ಸಮಯದ ತನಕ ಬೂದಿಯಿಂದ ಹೊಗೆಯು ಬರುವುದು, ಅಲ್ಲೊಂದು ನಾಶಕರ ದಳ್ಳುರಿಯಾಗಿತ್ತು ಎಂಬುದರ ಪುರಾವೆಯನ್ನು ನೋಡುವವರಿಗೆ ಒದಗಿಸುತ್ತದೆ. ಎದೋಮಿನ ನಾಶನದಿಂದ ಕಲಿಯಬೇಕಾದ ಪಾಠವನ್ನು ಇಂದು ಕೂಡ ದೇವರ ಜನರು ನೆನಪಿಸುತ್ತಾರೆ. ಈ ರೀತಿಯಲ್ಲಿ ‘ಅವಳ ದಹಿಸುವಿಕೆಯ ಹೊಗೆಯು’ ಸಾಂಕೇತಿಕ ರೀತಿಯಲ್ಲಿ ಇಂದೂ ಏರುತ್ತಾ ಇದೆ.
17, 18. (ಎ) ಕಾಡು ಮೃಗದ ಗುರುತನ್ನು ಪಡೆಯುವವರಿಗಾಗುವ ಫಲಿತಾಂಶವೇನು? (ಬಿ) ಕಾಡು ಮೃಗದ ಆರಾಧಕರು ಯಾವ ವಿಧದಲ್ಲಿ ಯಾತನೆ ಪಡುತ್ತಾರೆ? (ಸಿ) “ಅವರ ಯಾತನೆಯ ಹೊಗೆಯು ಎಂದೆಂದಿಗೂ ಏರುತ್ತಾ ಹೋಗುತ್ತದೆ” ಹೇಗೆ?
17 ಕಾಡು ಮೃಗದ ಗುರುತು ಇರುವವರೆಲ್ಲರೂ, ಬೆಂಕಿಯಿಂದಲೋ ಎಂಬಂತೆ, ಸಂಪೂರ್ಣವಾಗಿ ನಾಶಮಾಡಲ್ಪಡುವರು. ಪ್ರವಾದನೆಯು ತದನಂತರ ಪ್ರಕಟಿಸುವಂತೆ, ಪ್ರಾಣಿಗಳು ಮತ್ತು ಪಕ್ಷಿಗಳು ತಿನ್ನಲಿಕ್ಕಾಗಿ, ಅವರ ಹೆಣಗಳನ್ನು ಹೂಣಿಡದೆ ಹಾಗೆಯೇ ಬಿಡಲಾಗುವುದು. (ಪ್ರಕಟನೆ 19:17, 18) ಆದುದರಿಂದ, ಸ್ಪಷ್ಟವಾಗಿ ಅವರು ಅಕ್ಷರಾರ್ಥವಾಗಿ ಸದಾಕಾಲವೂ ಯಾತನೆಗೊಳಪಡುವದಿಲ್ಲ! ಅವರು “ಬೆಂಕಿ ಮತ್ತು ಗಂಧಕದಿಂದ ಯಾತನೆ” ಪಡುವುದು ಹೇಗೆ? ಸತ್ಯದ ಸಾರೋಣವು ಅವರನ್ನು ಬಯಲುಗೊಳಿಸುತ್ತದೆ ಮತ್ತು ದೇವರ ಬರಲಿರುವ ನ್ಯಾಯತೀರ್ಪಿನ ಎಚ್ಚರಿಕೆಯನ್ನು ಅವರಿಗೆ ನೀಡುತ್ತದೆ. ಆದಕಾರಣ ಅವರು ದೇವ ಜನರ ಹೆಸರು ಕೆಡಿಸುತ್ತಾರೆ ಮತ್ತು ಎಲ್ಲಿ ಸಾಧ್ಯವೂ ಅಲ್ಲಿ ಯೆಹೋವನ ಸಾಕ್ಷಿಗಳನ್ನು ಹಿಂಸಿಸಲು ಮತ್ತು ಕೊಲ್ಲಲು ಕೂಡ ಅವರು ರಾಜಕೀಯ ಕಾಡು ಮೃಗಕ್ಕೆ ಮೋಸಕರವಾಗಿ ಒತ್ತಾಸೆಯನ್ನು ಕೊಡುತ್ತಾರೆ. ಪರಾಕಾಷ್ಠೆಯೋಪಾದಿ, ಈ ವಿರೋಧಿಗಳು ಬೆಂಕಿ ಮತ್ತು ಗಂಧಕಗಳಿಂದ ನಾಶಮಾಡಲ್ಪಡುವರು. ಅನಂತರ “ಹೊಗೆಯು ಸದಾ ಸರ್ವದಾ ಏರುತ್ತಾ ಹೋಗುತ್ತದೆ”, ಆ ಮೂಲಕ ಇನ್ನು ಮುಂದಕ್ಕೆ ಯಾರೇ ಆದರೂ ಯೆಹೋವನ ನ್ಯಾಯಯುಕ್ತ ಸಾರ್ವಭೌಮತೆಯನ್ನು ಪಂಥಾಹ್ವಾನಕ್ಕೊಡ್ಡಿದರೆ, ದೇವರ ಈ ನ್ಯಾಯತೀರ್ಪು ಒಂದು ಒರೆಗಲ್ಲಾಗಿ ಕಾರ್ಯನಿರ್ವಹಿಸುತ್ತದೆ. ಸದಾ ಸರ್ವದಾ ಆ ವಿವಾದವು ಇತ್ಯರ್ಥವಾಗಿರುವುದು.
18 ಇಂದು ಯಾತನೆಯ ಸಂದೇಶವನ್ನು ಯಾರು ನೀಡುತ್ತಾರೆ? ನೆನಪಿನಲ್ಲಿಡಿ, ಹಣೆಗಳ ಮೇಲೆ ದೇವರ ಮುದ್ರೆಯಿಲ್ಲದ ಮನುಷ್ಯರನ್ನು ಪೀಡಿಸಲು ಸಾಂಕೇತಿಕ ಮಿಡಿತೆಗಳಿಗೆ ಅಧಿಕಾರವಿದೆ. (ಪ್ರಕಟನೆ 9:5) ಸಾಕ್ಷತ್ ದೇವದೂತರ ಮಾರ್ಗದರ್ಶನದ ಕೆಳಗೆ ಇರುವ ಇವರು ಪೀಡಕರಾಗಿದ್ದಾರೆ. ಸಾಂಕೇತಿಕ ಮಿಡಿತೆಗಳ ಪಟ್ಟುಹಿಡಿಯುವಿಕೆಯು ಎಷ್ಟೊಂದು ಅಂದರೆ “ಕಾಡು ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಿಗೆ ಮತ್ತು ಅದರ ಹೆಸರಿನ ಗುರುತನ್ನು ಪಡೆದುಕೊಂಡವರಿಗೆ ಹಗಲಿರುಳು ಉಪಶಮನವಿಲ್ಲ.” ಮತ್ತು ಕೊನೆಗೆ, ಅವರ ನಾಶಾನಂತರ ಯೆಹೋವನ ಸಾರ್ವಭೌಮತೆಯ ನಿರ್ದೋಷೀಕರಣದ ಶಾಶ್ವತ ರುಜುವಾತಾದ “ಅವರ ಯಾತನೆಯ ಹೊಗೆಯು” ಎಂದೆಂದಿಗೂ ಮೇಲೇರುವುದು. ಆ ನಿರ್ದೋಷೀಕರಣವು ಪೂರ್ಣಗೊಳ್ಳುವ ತನಕ ಯೋಹಾನ ವರ್ಗದವರು ತಾಳಿಕೊಳ್ಳಲಿ! ದೇವದೂತನು ಕೊನೆಗೊಳಿಸುವಂತೆ: “ಪವಿತ್ರ ಜನರಿಗೆ, ದೇವರ ಆಜ್ಞೆಗಳನ್ನು ಮತ್ತು ಯೇಸುವಿನ ನಂಬಿಕೆಯನ್ನು ಪಾಲಿಸುವವರಿಗೆ ತಾಳ್ಮೆಯ ಅರ್ಥವಿರುವುದು ಇಲ್ಲಿಯೇ.”—ಪ್ರಕಟನೆ 14:12, NW.
19. ದೇವಜನರ ಕಡೆಯಿಂದ ತಾಳ್ಮೆಯು ಯಾಕೆ ಅಪೇಕ್ಷಿಸಲ್ಪಡುತ್ತದೆ, ಮತ್ತು ಅವರನ್ನು ಬಲಪಡಿಸುವ ಯಾವುದನ್ನು ಯೋಹಾನನು ವರದಿಸುತ್ತಾನೆ?
19 ಹೌದು, “ಪವಿತ್ರ ಜನರಿಗೆ . . . ತಾಳ್ಮೆ” ಅಂದರೆ ಯೇಸು ಕ್ರಿಸ್ತನ ಮೂಲಕ ಸಂಪೂರ್ಣ ಭಕ್ತಿಯಿಂದ ಯೆಹೋವನನ್ನು ಅವರು ಆರಾಧಿಸುವುದು ಎಂದರ್ಥ. ಅವರ ಸಂದೇಶವು ಜನಪ್ರಿಯವಲ್ಲ. ಅದು ವಿರೋಧಕ್ಕೆ, ಹಿಂಸೆಗೆ, ಧರ್ಮಬಲಿಯಾಗುವುದಕ್ಕೂ ಕೂಡ ನಡಿಸುತ್ತದೆ. ಆದರೆ ಯೋಹಾನನು ಅನಂತರ ಏನು ವರದಿಸುತ್ತಾನೊ ಅದರಿಂದ ಅವರು ಬಲಗೊಳಿಸಲ್ಪಡುತ್ತಾರೆ: “ಮತ್ತು ಪರಲೋಕದಿಂದ ಒಂದು ಶಬ್ದವು ಹೀಗೆ ಹೇಳುವುದು ನನಗೆ ಕೇಳಿಸಿತು: ‘ಬರೆ: ಈ ಸಮಯದಿಂದ ಕರ್ತನೊಂದಿಗೆ ಐಕ್ಯದಲ್ಲಿ ಸಾಯುವ ಮೃತರು ಧನ್ಯರು. ಹೌದು, ಅವರ ಶ್ರಮದಿಂದ ಅವರು ವಿಶ್ರಮಿಸಲಿ, ಯಾಕಂದರೆ ಅವರು ಗೈದ ಕೃತ್ಯಗಳು ಅವರೊಂದಿಗೇ ಹೋಗುವುವು ಎಂದು ಆತ್ಮವು ಹೇಳುತ್ತದೆ.’”—ಪ್ರಕಟನೆ 14:13, NW.
20. (ಎ) ಯೇಸುವಿನ ಸಾನ್ನಿಧ್ಯದ ಕುರಿತ ಪೌಲನ ಪ್ರವಾದನೆಯೊಂದಿಗೆ ಯೋಹಾನನಿಂದ ವರದಿಸಲ್ಪಟ್ಟ ವಾಗ್ದಾನವು ಹೇಗೆ ಹೊಂದಿಕೆಯಾಗುತ್ತದೆ? (ಬಿ) ಪರಲೋಕದಿಂದ ಸೈತಾನನನ್ನು ಹೊರದಬ್ಬಿದ ಅನಂತರ ಸಾಯುವ ಅಭಿಷಿಕ್ತರಿಗೆ ಯಾವ ವಿಶೇಷ ಸುಯೋಗವು ವಾಗ್ದಾನಿಸಲಾಗುತ್ತದೆ?
20 ಈ ವಾಗ್ದಾನವು ಯೇಸುವಿನ ಸಾನ್ನಿಧ್ಯದ ಕುರಿತಾದ ಪೌಲನ ಪ್ರವಾದನೆಯೊಂದಿಗೆ ಬಹಳ ಒಳ್ಳೆಯದಾಗಿ ಹೊಂದಿಕೊಳ್ಳುತ್ತದೆ: “ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದುಬರುವರು. ಆ ಮೇಲೆ ಜೀವದಿಂದುಳಿದಿರುವ [ಕರ್ತನ ದಿನದೊಳಗೆ ಪಾರಾಗುವ ಅಭಿಷಿಕ್ತರು] ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಅವರ ಸಂಗಡಲೇ ಮೇಘವಾಹನರಾಗಿ ಫಕ್ಕನೆ ಒಯ್ಯಲ್ಪಡುವೆವು.” (1 ಥೆಸಲೊನೀಕ 4:15-17) ಪರಲೋಕದಿಂದ ಸೈತಾನನನ್ನು ಹೊರದಬ್ಬಿದ ಅನಂತರ, ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದರು. (ಹೋಲಿಸಿರಿ ಪ್ರಕಟನೆ 6:9-11.) ತದನಂತರ, ಕರ್ತನ ದಿನದಲ್ಲಿ ಸಾಯುವ ಅಭಿಷಿಕ್ತರು ಒಂದು ವಿಶೇಷ ಸುಯೋಗ ಪಡೆಯುವ ಆಶ್ವಾಸನೆ ಹೊಂದಿದ್ದಾರೆ. ಪರಲೋಕಕ್ಕೆ ಆತ್ಮ ಜೀವವಾಗಿ ಅವರ ಪುನರುತ್ಥಾನವು ಕ್ಷಣಮಾತ್ರದಲ್ಲಿ “ರೆಪ್ಪೆಬಡಿಯುವಷ್ಟರೊಳಗಾಗಿ” ಆಗುವುದು. (1 ಕೊರಿಂಥ 15:52) ಇದು ಎಂಥ ಅದ್ಭುತ! ಮತ್ತು ನೀತಿಯ ಅವರ ಕೃತ್ಯಗಳು ಪರಲೋಕ ಕ್ಷೇತ್ರದಲ್ಲಿ ಮುಂದರಿಯುವವು.
ಭೂಮಿಯ ಬೆಳೆ
21. “ಭೂಮಿಯ ಬೆಳೆಯ” ಕುರಿತಾಗಿ ಯೋಹಾನನು ನಮಗೇನು ಹೇಳುತ್ತಾನೆ?
21 ನ್ಯಾಯತೀರ್ಪಿನ ಈ ದಿನದಲ್ಲಿ ಇತರರೂ ಪ್ರಯೋಜನ ಹೊಂದುತ್ತಾರೆ ಯೋಹಾನನು ನಮಗೆ ಹೇಳುತ್ತಾ ಮುಂದರಿಯುವಂತೆ: “ಮತ್ತು ನಾನು ನೋಡಿದೆನು ಮತ್ತು ಇಗೋ! ಒಂದು ಬಿಳಿ ಮೇಘ, ಮತ್ತು ತಲೆಯ ಮೇಲೆ ಚಿನ್ನದ ಕಿರೀಟ ಮತ್ತು ಆತನ ಕೈಯಲ್ಲಿ ಹದ ಕುಡುಗೋಲು ಇರುವ ಮನುಷ್ಯಕುಮಾರನಂತಿರುವ ಯಾರೋ ಒಬ್ಬನು ಆ ಮೇಘದ ಮೇಲೆ ಕೂತಿದ್ದನು. ಆಗ ಇನ್ನೊಬ್ಬ ದೂತನು [ನಾಲ್ಕನೆಯವನು] ದೇವಾಲಯದ ಪವಿತ್ರಾಲಯದಿಂದ ಬಂದು ಮೇಘದ ಮೇಲೆ ಕುಳಿತಿದ್ದವನಿಗೆ ಗಟ್ಟಿಯಾದ ಧ್ವನಿಯಿಂದ ಕೂಗಿ ಹೀಗೆ ಹೇಳಿದನು—‘ನಿನ್ನ ಕುಡುಗೋಲನ್ನು ಹಾಕಿ ಕೊಯ್ಯು, ಯಾಕಂದರೆ ಭೂಮಿಯ ಬೆಳೆ ಪೂರ್ಣವಾಗಿ ಮಾಗಿದೆ; ಕೊಯ್ಯುವ ಗಳಿಗೆ ಬಂದಿದೆ. ಮತ್ತು ಮೇಘದ ಮೇಲೆ ಕುಳಿತಿದ್ದಾತನು ತನ್ನ ಕುಡುಗೋಲನ್ನು ಚಾಚಿ ಭೂಮಿಯ ಮೇಲೆ ಹಾಕಿದನು ಮತ್ತು ಭೂಮಿಯ ಬೆಳೆ ಕೊಯ್ಯಲ್ಪಟ್ಟಿತು.”—ಪ್ರಕಟನೆ 14:14-16, NW.
22. (ಎ) ಚಿನ್ನದ ಕಿರೀಟವನ್ನು ಧರಿಸಿ, ಬಿಳಿ ಮೇಘದ ಮೇಲೆ ಕುಳಿತಿದ್ದಾತನು ಯಾರು? (ಬಿ) ಕೊಯ್ಲಿನ ಪರಾಕಾಷ್ಠೆಯು ಯಾವಾಗ ನಡೆಯುತ್ತದೆ, ಮತ್ತು ಹೇಗೆ?
22 ಬಿಳಿ ಮೇಘದ ಮೇಲೆ ಕುಳಿತವನ ಗುರುತಿನ ಕುರಿತು ಸಂದೇಹವಿಲ್ಲ. ಚಿನ್ನದ ಕಿರೀಟವನ್ನು ಧರಿಸಿ ಬಿಳಿ ಮೇಘದ ಮೇಲೆ ಕುಳಿತಿದ್ದಾತನು ಸ್ಪಷ್ಟವಾಗಿ ಮನುಷ್ಯಕುಮಾರನಂತಿರುವ, ದರ್ಶನದಲ್ಲಿ ದಾನಿಯೇಲನೂ ನೋಡಿದ ಮೆಸ್ಸೀಯ ಸಂಬಂಧಿತ ಅರಸನಾದ ಯೇಸುವಾಗಿದ್ದಾನೆ. (ದಾನಿಯೇಲ 7:13, 14; ಮಾರ್ಕ 14:61, 62) ಆದರೆ ಇಲ್ಲಿ ಪ್ರವಾದಿಸಲ್ಪಟ್ಟ ಬೆಳೆ ಏನಾಗಿದೆ? ಭೂಮಿಯಲ್ಲಿರುವಾಗ ಮಾನವಜಾತಿಯ ಲೋಕ ಕ್ಷೇತ್ರದ ಕೊಯ್ಲಿನ ಕೆಲಸವನ್ನು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಯೇಸುವು ಸರಿದೂಗಿಸಿದ್ದನು. (ಮತ್ತಾಯ 9:37, 38; ಯೋಹಾನ 4:35, 36) ಯೇಸುವು ರಾಜನಾಗಿ ಕಿರೀಟಧಾರಿಯಾಗುವ ಮತ್ತು ತನ್ನ ತಂದೆಯ ಪರವಾಗಿ ನ್ಯಾಯತೀರ್ಪನ್ನು ಜಾರಿಗೊಳಿಸುವ ಕರ್ತನ ದಿನದಲ್ಲಿ, ಈ ಕೊಯ್ಲು ಪರಾಕಾಷ್ಠೆಗೆ ಬರುವುದು. ಹೀಗೆ, 1914 ರಿಂದ ಅವನ ಆಳಿಕ್ವೆಯ ಸಮಯವು ಕೂಡ ಕೊಯ್ಲನ್ನು ಒಳಗೆ ತರುವ ಒಂದು ಆನಂದದ ಸಮಯವಾಗಿರುತ್ತದೆ.—ಹೋಲಿಸಿರಿ ಧರ್ಮೋಪದೇಶಕಾಂಡ 16:13-15.
23. (ಎ) ಕೊಯ್ಯಲು ಆರಂಭಿಸುವಂತೆ ಮಾತು ಯಾರಿಂದ ಬಂತು? (ಬಿ) ಯಾವ ಕೊಯ್ಲು 1919 ರಿಂದ ಹಿಡಿದು ಇಂದಿನ ತನಕ ನಡೆದಿದೆ?
23 ತಾನು ರಾಜನೂ, ನ್ಯಾಯಾಧಿಪತಿಯೂ ಆಗಿರುವುದಾದರೂ, ಬೆಳೆಯನ್ನು ಕೊಯ್ಯಲು ಆರಂಭಿಸುವ ಮೊದಲು ತನ್ನ ದೇವರಾದ ಯೆಹೋವನಿಂದ ಒಂದು ಮಾತು ಬರಲಿಕ್ಕಾಗಿ ಯೇಸು ಕಾಯುತ್ತಾನೆ. ಆ ಮಾತು “ದೇವಾಲಯದ ಪವಿತ್ರಸ್ಥಾನದಿಂದ” ಒಬ್ಬ ದೇವದೂತನ ಮೂಲಕ ಬರುತ್ತದೆ. ಯೇಸುವು ಕೂಡಲೇ ವಿಧೇಯನಾಗುತ್ತಾನೆ. ಮೊದಲು, 1919 ರಿಂದ ಹಿಡಿದು ಅವನ ದೇವದೂತರು 1,44,000 ಮಂದಿಯ ಕೊಯ್ಲನ್ನು ಪೂರ್ಣಗೊಳಿಸುವಂತೆ ಮಾಡುತ್ತಾನೆ. (ಮತ್ತಾಯ 13:39, 43; ಯೋಹಾನ 15: 1, 5, 16) ಅನಂತರ, ಬೇರೆ ಕುರಿಗಳ ಮಹಾ ಸಮೂಹದ ಬೆಳೆಯ ಒಟ್ಟುಗೂಡಿಸುವಿಕೆಯು ನಡೆಯುತ್ತದೆ. (ಮತ್ತಾಯ 25:31-33; ಯೋಹಾನ 10:16; ಪ್ರಕಟನೆ 7:9) ಇತಿಹಾಸವು ತೋರಿಸುವದೇನಂದರೆ 1931 ಮತ್ತು 1935ರ ನಡುವೆ ಬೇರೆ ಕುರಿಗಳ ಬಹಳಷ್ಟು ಸಂಖ್ಯೆಯು ತೋರಿಬರಲಾರಂಭಿಸಿತು. ಯೆಹೋವನು 1935 ರಲ್ಲಿ ಪ್ರಕಟನೆ 7:9-17ರ ಮಹಾ ಸಮೂಹದವರ ನೈಜ ಗುರುತನ್ನು ಯೋಹಾನ ವರ್ಗದವರ ತಿಳಿವಳಿಕೆಗೆ ತೆರೆದನು. ಅಂದಿನಿಂದ, ಈ ಸಮೂಹದ ಒಟ್ಟುಗೂಡಿಸುವಿಕೆಯ ಮೇಲೆ ಬಹಳಷ್ಟು ಒತ್ತರವನ್ನು ಹಾಕಲಾಯಿತು. ಅದರ ಸಂಖ್ಯೆಯು 1993 ನೆಯ ವರ್ಷದೊಳಗೆ ನಲ್ವತ್ತು ಲಕ್ಷ ಗುರುತನ್ನು ಮೀರಿತು ಮತ್ತು ಅದು ಇನ್ನೂ ವರ್ಧಿಸುತ್ತಾ ಇದೆ. ಖಂಡಿತವಾಗಿಯೂ, ಮನುಷ್ಯಕುಮಾರನಂತಿರುವವನು ಈ ಅಂತ್ಯದ ಸಮಯದಲ್ಲಿ ಒಂದು ಸಂತಸದ ಕೊಯ್ಲನ್ನು ಹೇರಳವಾಗಿ ಕೊಯ್ದಿರುತ್ತಾನೆ.—ಹೋಲಿಸಿರಿ ವಿಮೋಚನಕಾಂಡ 23:16; 34:22.
ಭೂಮಿಯ ದ್ರಾಕ್ಷೇಬಳ್ಳಿಯನ್ನು ತುಳಿಯುವುದು
24. ಐದನೆಯ ದೇವದೂತನ ಕೈಯಲ್ಲಿ ಏನಿತ್ತು, ಮತ್ತು ಆರನೆಯ ದೇವದೂತನು ಏನನ್ನು ಕೂಗಿಹೇಳಿದನು?
24 ರಕ್ಷಣೆಯ ಕೊಯ್ಲನ್ನು ಪೂರ್ಣಗೊಳಿಸಿದ ಮೇಲೆ, ಇನ್ನೊಂದು ಕೊಯ್ಲಿಗೆ ಸಮಯ ಬರುತ್ತದೆ. ಯೋಹಾನನು ವರದಿಸುವುದು: “ಮತ್ತು ಇನ್ನೂ ಒಬ್ಬ ದೇವದೂತನು [ಐದನೆಯವನು] ಪರಲೋಕದಲ್ಲಿರುವ ದೇವಾಲಯದ ಪವಿತ್ರಸ್ಥಾನದಿಂದ ಹೊರಬಂದನು. ಅವನಲ್ಲಿ ಸಹ ಹದವಾದ ಕುಡುಗೋಲು ಇತ್ತು. ಮತ್ತು ಇನ್ನೂ ಮತ್ತೊಬ್ಬ ದೇವದೂತನು [ಆರನೆಯವನು] ಯಜ್ಞವೇದಿಯಿಂದ ಹೊರಬಂದನು ಮತ್ತು ಅವನಿಗೆ ಬೆಂಕಿಯ ಮೇಲೆ ಅಧಿಕಾರವಿತ್ತು ಮತ್ತು ಅವನು ಆ ಹದವಾದ ಕುಡುಗೋಲು ಇದ್ದವನಿಗೆ ಹೀಗನ್ನುತ್ತಾ ಗಟ್ಟಿಯಾದ ಧ್ವನಿಯಿಂದ ಕರೆದನು: ‘ನಿನ್ನ ಹದವಾದ ಕುಡುಗೋಲನ್ನು ಹಾಕು ಮತ್ತು ಭೂಮಿಯ ದ್ರಾಕ್ಷೇಬಳ್ಳಿಯ ಗೊಂಚಲುಗಳನ್ನು ಕೊಯ್ಯು, ಯಾಕಂದರೆ ಅದರ ಹಣ್ಣುಗಳು ಮಾಗಿವೆ’.” (ಪ್ರಕಟನೆ 14:17, 18, NW) ಕರ್ತನ ದಿನದಲ್ಲಿ ದೇವದೂತ ಗಣಗಳಿಗೆ ಕೆಟ್ಟದ್ದರಿಂದ ಒಳ್ಳೆಯದನ್ನು ಪ್ರತ್ಯೇಕಿಸುವ ಬಹಳಷ್ಟು ಕೊಯ್ಲಿನ ಕೆಲಸವನ್ನು ವಹಿಸಿಕೊಡಲಾಗುತ್ತದೆ!
25. (ಎ) ದೇವಾಲಯದಿಂದ ಐದನೆಯ ದೇವದೂತನು ಬಂದಿರುವ ವಾಸ್ತವಾಂಶದಿಂದ ಏನು ಸೂಚಿಸಲ್ಪಡುತ್ತದೆ? (ಬಿ) “ಯಜ್ಞವೇದಿಯಿಂದ ಬಂದ” ದೇವದೂತನಿಂದ ಕೊಯ್ಯಲು ಆರಂಭಿಸುವಂತೆ ಆಜ್ಞಾಪನೆ ಕೊಡಲ್ಪಟ್ಟದ್ದು ಯಾಕೆ ಸಮಂಜಸವಾಗಿದೆ?
25 ಐದನೆಯ ದೇವದೂತನು ದೇವಾಲಯದ ಪವಿತ್ರಸ್ಥಾನದಲ್ಲಿ ಯೆಹೋವನ ಸನ್ನಿಧಾನದಿಂದ ಬರುತ್ತಾನೆ; ಆದಕಾರಣ, ಕೊನೆಯ ಕೊಯ್ಲು ಕೂಡ ಯೆಹೋವನ ಚಿತ್ತಕ್ಕನುಸಾರ ನಡೆಯುತ್ತದೆ. ದೇವದೂತನು ಆತನ ಕೆಲಸವನ್ನು ಆರಂಭಿಸಲು, “ಯಜ್ಞವೇದಿಯಿಂದ ಹೊರಬಂದ” ಇನ್ನೊಬ್ಬ ದೇವದೂತನಿಂದ ದಾಟಿಸಲ್ಪಟ್ಟ ಸಂದೇಶದ ಮೂಲಕ ಆಜ್ಞಾಪಿಸಲ್ಪಡುತ್ತಾನೆ. ಈ ವಾಸ್ತವಾಂಶವು ಬಹಳ ವೈಶಿಷ್ಟ್ಯದ್ದಾಗಿದೆ, ಯಾಕಂದರೆ ಯಜ್ಞವೇದಿಯ ಕೆಳಗಿರುವ ನಂಬಿಗಸ್ತ ಆತ್ಮಗಳು ವಿಚಾರಿಸಿದ್ದು: “ಪವಿತ್ರನು ಮತ್ತು ಸತ್ಯನಾದ ಸಾರ್ವಭೌಮ ಕರ್ತನೇ, ನೀನು ಎಂದಿನ ತನಕ ಭೂನಿವಾಸಿಗಳ ಮೇಲೆ ನಮ್ಮ ರಕ್ತಕ್ಕೆ ನ್ಯಾಯತೀರಿಸದೆ ಮತ್ತು ಸೇಡು ತೀರಿಸದೆ ಇರುವಿ?” (ಪ್ರಕಟನೆ 6:9, 10 NW) ಭೂಮಿಯ ದ್ರಾಕ್ಷೇಬಳ್ಳಿಗಳ ಕೊಯ್ಯುವಿಕೆಯೊಂದಿಗೆ, ಪ್ರತಿದಂಡನೆಯ ಈ ಕೂಗು ತೃಪ್ತಿಗೊಳಿಸಲ್ಪಡುವುದು.
26. “ಭೂಮಿಯ ದ್ರಾಕ್ಷೇಬಳ್ಳಿ” ಅಂದರೇನು?
26 ಆದರೆ “ಭೂಮಿಯ ದ್ರಾಕ್ಷೇಬಳ್ಳಿಗಳು” ಏನು? ಹೀಬ್ರು ಶಾಸ್ತ್ರಗ್ರಂಥದಲ್ಲಿ, ಯೆಹೂದಿ ಜನಾಂಗವನ್ನು ಯೆಹೋವನ ದ್ರಾಕ್ಷಾಲತೆಯಾಗಿ ಮಾತಾಡಲಾಗಿದೆ. (ಯೆಶಾಯ 5:7; ಯೆರೆಮೀಯ 2:21) ತದ್ರೀತಿಯಲ್ಲಿ ಯೇಸು ಕ್ರಿಸ್ತನು ಮತ್ತು ಅವನೊಂದಿಗೆ ದೇವರ ರಾಜ್ಯದಲ್ಲಿ ಸೇವಿಸುವವರನ್ನು ದ್ರಾಕ್ಷೇಬಳ್ಳಿಯಾಗಿ ಮಾತಾಡಲಾಗಿದೆ. (ಯೋಹಾನ 15:1-8) ಈ ಸನ್ನಿವೇಶದಲ್ಲಿ, ದ್ರಾಕ್ಷೇಬಳ್ಳಿಯ ವೈಶಿಷ್ಟ್ಯಮಯ ಲಕ್ಷಣವೇನಂದರೆ ಅದು ಫಲವನ್ನು ಉತ್ಪಾದಿಸುವುದು, ಮತ್ತು ನಿಜ ಕ್ರೈಸ್ತ ದ್ರಾಕ್ಷೇಬಳ್ಳಿಯು ಯೆಹೋವನ ಸ್ತುತಿಗಾಗಿ ವಿಪುಲವಾದ ಫಲವನ್ನು ಉತ್ಪಾದಿಸಿದೆ. (ಮತ್ತಾಯ 21:43) ಆದಕಾರಣ “ಭೂಮಿಯ ದ್ರಾಕ್ಷೇಬಳ್ಳಿ” ಈ ಸಾಚ ದ್ರಾಕ್ಷೇಬಳ್ಳಿಯಲ್ಲ, ಬದಲಿಗೆ ಸೈತಾನನ ಅದರ ನಕಲಿ, ಶತಮಾನಗಳಿಂದ ಉತ್ಪಾದಿಸಿದ ಪೈಶಾಚಿಕ ಫಲಗಳ ವಿವಿಧ “ಗೊಂಚಲುಗಳಿಂದ” ಕೂಡಿದ ಮಾನವ ಕುಲದ ಮೇಲಿನ ಅವನ ಭ್ರಷ್ಟ, ದೃಶ್ಯ ಸರಕಾರದ ವ್ಯವಸ್ಥೆಯಾಗಿದೆ. ಯಾವುದರಲ್ಲಿ ಧರ್ಮಭ್ರಷ್ಟ ಕ್ರೈಸ್ತತ್ವವು ಅಷ್ಟೊಂದು ಪ್ರಧಾನವಾಗಿದೆಯೋ ಆ ಮಹಾ ಬಾಬೆಲ್, ಈ ವಿಷಮಯ ದ್ರಾಕ್ಷೇಬಳ್ಳಿಯ ಮೇಲೆ ಮಹಾ ಪ್ರಭಾವವನ್ನು ಚಲಾಯಿಸಿದೆ.—ಹೋಲಿಸಿರಿ ಧರ್ಮೋಪದೇಶಕಾಂಡ 32:32-35.
27. (ಎ) ಕುಡುಗೋಲು ಇದ್ದ ದೇವದೂತನು ಭೂಮಿಯ ದ್ರಾಕ್ಷೆಬಳ್ಳಿಯನ್ನು ಒಟ್ಟುಮಾಡುವಾಗ, ಏನು ನಡೆಯುತ್ತದೆ? (ಬಿ) ಕೊಯ್ಲಿನ ವ್ಯಾಪಕತೆಯನ್ನು ಹೀಬ್ರು ಶಾಸ್ತ್ರಗ್ರಂಥಗಳಲ್ಲಿ ಯಾವ ಪ್ರವಾದನೆಗಳು ಸೂಚಿಸುತ್ತವೆ?
27 ನ್ಯಾಯದಂಡನೆಯನ್ನು ಜಾರಿಗೊಳಿಸಲೇಬೇಕಾಗಿದೆ! “ಮತ್ತು ಆ ದೇವದೂತನು ತನ್ನ ಕುಡುಗೋಲನ್ನು ಭೂಮಿಗೆ ಚಾಚಿದನು ಮತ್ತು ಭೂಮಿಯ ದ್ರಾಕ್ಷೇಬಳ್ಳಿಯನ್ನು ಒಟ್ಟುಗೂಡಿಸಿದನು ಮತ್ತು ಅವನು ದೇವರ ರೋಷದ ದೊಡ್ಡ ದ್ರಾಕ್ಷೇತೊಟ್ಟಿಗೆ ಅದನ್ನು ಎಸೆದನು. ಮತ್ತು ನಗರದ ಹೊರಗೆ ಆ ದ್ರಾಕ್ಷೇತೊಟ್ಟಿಯನ್ನು ತುಳಿಯಲಾಯಿತು, ಮತ್ತು ಆ ತೊಟ್ಟಿಯೊಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಎತ್ತರಕ್ಕೆ ಒಂದು ಸಾವಿರ ಆರುನೂರು ಫರ್ಲಾಂಗುಗಳಷ್ಟು ದೂರದ ವರೆಗೆ ಬಂದಿತು.” (ಪ್ರಕಟನೆ 14:19, 20, NW) ಈ ದ್ರಾಕ್ಷೇಬಳ್ಳಿಯ ವಿರುದ್ಧವಾಗಿ ಯೆಹೋವನ ರೋಷವು ಬಹಳ ಹಿಂದೆಯೇ ಪ್ರಕಟಿಸಲ್ಪಟ್ಟಿತ್ತು. (ಚೆಫನ್ಯ 3:8) ದ್ರಾಕ್ಷೇತೊಟ್ಟಿಯು ತುಳಿದಾಡಲ್ಪಟ್ಟಾಗ ಇಡೀ ಜನಾಂಗಗಳು ನಾಶಗೊಳಿಸಲ್ಪಡುವವು ಎಂಬುದರಲ್ಲಿ ಯೆಶಾಯನ ಪುಸ್ತಕದಲ್ಲಿನ ಪ್ರವಾದನೆಯೊಂದು ಯಾವ ಸಂದೇಹಕ್ಕೂ ಎಡೆಕೊಟ್ಟಿರುವದಿಲ್ಲ. (ಯೆಶಾಯ 63:3-6) ಯೋವೇಲನು ಕೂಡ ಮಹಾ “ಜನಾಂಗಗಳು”, ಇಡೀ ಜನಾಂಗಗಳು “ನ್ಯಾಯತೀರ್ಪಿನ ತಗ್ಗಿನಲ್ಲಿ” ರುವ “ದ್ರಾಕ್ಷೇತೊಟ್ಟಿ” ಯಲ್ಲಿ ನಾಶಗೊಳ್ಳುವಂತೆ ತುಳಿಯಲ್ಪಡುವರು ಎಂದು ಪ್ರವಾದಿಸಿದನು. (ಯೋವೇಲ 3:12-14) ಒಂದು ಅತಿ ಭಾರಿ ಪ್ರಮಾಣದ ಇನ್ನೆಂದೂ ಸಂಭವಿಸದ ಕೊಯ್ಲು ಇದಾಗಿದೆ ಎಂಬುದು ಸತ್ಯ! ಯೋಹಾನನ ದರ್ಶನಕ್ಕನುಸಾರ, ದ್ರಾಕ್ಷೇಹಣ್ಣುಗಳು ಮಾತ್ರವೇ ಕೊಯ್ಯಲ್ಪಟ್ಟದ್ದಲ್ಲ, ತುಳಿಯಲಿಕ್ಕಾಗಿ ಇಡೀ ಸಾಂಕೇತಿಕ ದ್ರಾಕ್ಷೇಬಳ್ಳಿಯನ್ನೇ ಕೊಯ್ದು ದ್ರಾಕ್ಷೇತೊಟ್ಟಿಯೊಳಗೆ ಹಾಕಲಾಯಿತು. ಆದುದರಿಂದ ಭೂಮಿಯ ದ್ರಾಕ್ಷೇಬಳ್ಳಿಯು ನಿರ್ಮೂಲನಗೊಳಿಸಲ್ಪಡುವುದು ಮತ್ತು ಮುಂದೆ ಎಂದೆಂದಿಗೂ ಅದು ಪುನಃ ಬೆಳೆಯಲು ಸಾಧ್ಯವಿಲ್ಲ.
28. ಭೂಮಿಯ ದ್ರಾಕ್ಷೇಬಳ್ಳಿಯ ತುಳಿಯುವಿಕೆಯನ್ನು ಯಾರು ಮಾಡುತ್ತಾರೆ, ಮತ್ತು ದ್ರಾಕ್ಷೇತೊಟ್ಟಿಯನ್ನು “ನಗರದ ಹೊರಗೆ ತುಳಿದರು” ಎಂಬುದರ ಅರ್ಥವೇನಾಗಿದೆ?
28 ದಾರ್ಶನಿಕ ತುಳಿದಾಡುವಿಕೆಯು ಕುದುರೆಗಳಿಂದ ಮಾಡಲ್ಪಡುತ್ತದೆ, ಯಾಕಂದರೆ ದ್ರಾಕ್ಷೇಬಳ್ಳಿಯ ತುಳಿದಾಡುವಿಕೆಯಿಂದ ಹೊರಟ ರಕ್ತವು “ಕುದುರೆಗಳ ಕಡಿವಾಣಗಳನ್ನು” ಮುಟ್ಟುವಷ್ಟು ಇತ್ತು. “ಕುದುರೆಗಳು” ಎಂಬ ಶಬ್ದವು ಸಾಮಾನ್ಯವಾಗಿ ಯುದ್ಧ ಕಾರ್ಯಾಚರಣೆಗಳಿಗೆ ಸೂಚಿಸುವುದರಿಂದ, ಇದು ಒಂದು ಯುದ್ಧದ ಸಮಯವಾಗಿರಬೇಕು. ಸೈತಾನನ ವಿಷಯಗಳ ವ್ಯವಸ್ಥೆಯ ವಿರುದ್ಧದ ಕೊನೆಯ ಯುದ್ಧದಲ್ಲಿ ಯೇಸುವನ್ನು ಹಿಂಬಾಲಿಸುವ ಪರಲೋಕದ ಸೈನ್ಯಗಳು “ಸರ್ವಶಕ್ತನಾದ ದೇವರ ಉಗ್ರ ರೋಷವೆಂಬ ದ್ರಾಕ್ಷೆಯ ತೊಟ್ಟಿಯಲ್ಲಿರುವುದನ್ನು” ತುಳಿಯುತ್ತಾರೆ ಎಂದು ಹೇಳಲ್ಪಟ್ಟಿದೆ. (ಪ್ರಕಟನೆ 19:11-16) ಇವರು ಸ್ಪಷ್ಟವಾಗಿ ಭೂಮಿಯ ದ್ರಾಕ್ಷೇಬಳ್ಳಿಯ ತುಳಿದಾಡುವಿಕೆಯನ್ನು ಮಾಡುವವರಾಗಿದ್ದಾರೆ. ದ್ರಾಕ್ಷೇತೊಟ್ಟಿಯನ್ನು “ನಗರದ ಹೊರಗೆ . . . ತುಳಿದರು,” ಅಂದರೆ ಸ್ವರ್ಗೀಯ ಚೀಯೋನಿನ ಹೊರಗೆ. ಖಂಡಿತವಾಗಿಯೂ, ಭೂಮಿಯ ದ್ರಾಕ್ಷೇಬಳ್ಳಿಯು ಭೂಮಿಯ ಮೇಲೆಯೇ ತುಳಿಯಲ್ಪಡುವುದು ಸಮಂಜಸವಾಗಿದೆ. ಆದರೆ ಭೂಮಿಯಲ್ಲಿ ಸ್ವರ್ಗೀಯ ಚೀಯೋನನ್ನು ಪ್ರತಿನಿಧೀಕರಿಸುವ ಸ್ತ್ರೀಯ ಸಂತಾನದಲ್ಲಿ ಉಳಿದಿರುವವರಿಗೆ ಯಾವ ಹಾನಿಯೂ ಆಗುವುದಿಲ್ಲ ಎಂಬ ಅರ್ಥದಲ್ಲಿ ಅದನ್ನು “ನಗರದ ಹೊರಗೆ”ಯೂ ತುಳಿಯಲಾಗುವುದು. ಮಹಾ ಸಮೂಹದೊಂದಿಗೆ ಜತೆಗೂಡಿ ಇವರು ಯೆಹೋವನ ಐಹಿಕ ಸಂಸ್ಥೆಯ ಏರ್ಪಾಡಿನೊಳಗೆ ಸುರಕ್ಷಿತವಾಗಿ ಮರೆಮಾಡಲ್ಪಡುವರು.—ಯೆಶಾಯ 26:20, 21.
29. ದ್ರಾಕ್ಷೇತೊಟ್ಟಿಯಿಂದ ರಕ್ತವು ಎಷ್ಟು ಆಳವಾಗಿದೆ, ಅದು ಎಷ್ಟು ದೂರದ ತನಕ ವ್ಯಾಪಿಸುತ್ತದೆ, ಮತ್ತು ಇದೆಲ್ಲವೂ ಏನನ್ನು ಸೂಚಿಸುತ್ತದೆ?
29 ಈ ವೈವಿಧ್ಯಮಯ ದರ್ಶನಕ್ಕೆ, ದಾನಿಯೇಲ 2:34, 44 ರಲ್ಲಿ ವರ್ಣಿಸಲ್ಪಟ್ಟ ರಾಜ್ಯ ಬಂಡೆಕಲ್ಲಿನಿಂದ ಭೂಮಿಯ ರಾಜ್ಯಗಳೆಲ್ಲವೂ ನುಜ್ಜುಗೊಳಿಸಲ್ಪಡುವುದಕ್ಕೆ ಒಂದು ಸಮಾಂತರವು ಇದೆ. ಅಲ್ಲಿ ನಿರ್ಮೂಲನವಿರುವುದು. ದ್ರಾಕ್ಷೇತೊಟ್ಟಿಯಿಂದ ಹೊರಡುವ ರಕ್ತದ ನದಿಯು ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಬಹಳ ಆಳವಾಗಿರುತ್ತದೆ ಮತ್ತು ಅದು 1,600 ಫರ್ಲಾಂಗುಗಳಷ್ಟು ದೂರದ ತನಕ ವ್ಯಾಪಿಸುತ್ತದೆ.a ನಾಲ್ಕರ ವರ್ಗವನ್ನು ಹತ್ತರ ವರ್ಗದೊಂದಿಗೆ ಗುಣಿಸಿದಾಗ (4x4x10x10) ಉಂಟಾಗುವ ಈ ಮಹಾ ಸಂಖ್ಯೆಯು ನಾಶನದ ರುಜುವಾತಾಗಿ ಇಡೀ ಭೂಮಿಯು ಸೇರಿರುವುದು ಎಂಬ ಸಂದೇಶವನ್ನು ಒತ್ತಾಗಿ ದಾಟಿಸುತ್ತದೆ. (ಯೆಶಾಯ 66:15, 16) ನಾಶನವು ಪೂರ್ಣವೂ, ಬದಲಾಯಿಸಲಾಗದ್ದೂ ಆಗಿರುವುದು. ಎಂದಿಗೂ, ಇನ್ನು ಎಂದೆಂದಿಗೂ ಸೈತಾನನ ಭೂಮಿಯ ದ್ರಾಕ್ಷೇಬಳ್ಳಿಯು ಬೇರನ್ನು ಬಿಡುವುದೇ ಇಲ್ಲ!—ಕೀರ್ತನೆ 83:17, 18.
30. ಸೈತಾನನ ದ್ರಾಕ್ಷೇಬಳ್ಳಿಯ ಫಲಗಳೇನು, ಮತ್ತು ನಮ್ಮ ನಿರ್ಧಾರವೇನಾಗಿರತಕ್ಕದ್ದು?
30 ಅಂತ್ಯಸಮಯದ ಬಹಳ ಕೊನೆಯಲ್ಲಿ ಜೀವಿಸುತ್ತಿರುವ ನಮಗೆ, ಎರಡು ಕ್ಲೊಯುಗಳ ದರ್ಶನವು ಅತಿ ಅರ್ಥಭರಿತವಾಗಿದೆ. ಸೈತಾನನ ದ್ರಾಕ್ಷೇಬಳ್ಳಿಯ ಫಲಗಳನ್ನು ಕಾಣಬೇಕಾದರೆ ನಮ್ಮ ಸುತ್ತಲೂ ಕೇವಲ ನೋಡಿದರೆ ಸಾಕು. ಗರ್ಭಪಾತಗಳು ಮತ್ತು ಕೊಲೆಯ ಇತರ ವಿಧಗಳು; ಸಲಿಂಗಕಾಮ, ವ್ಯಭಿಚಾರ, ಮತ್ತು ಅನೈತಿಕತೆಯ ಇತರ ವಿಧಗಳು; ಅಪ್ರಾಮಾಣಿಕತೆ ಮತ್ತು ಸ್ವಾಭಾವಿಕ ಮಮತೆಯ ಕೊರತೆ—ಇವೆಲ್ಲಾ ಸಂಗತಿಗಳು ಯೆಹೋವನ ದೃಷ್ಟಿಯಲ್ಲಿ ಈ ಲೋಕವನ್ನು ದುಷ್ಟತನದ್ದಾಗಿ ಮಾಡುತ್ತವೆ. ಸೈತಾನನ ದ್ರಾಕ್ಷೇಬಳ್ಳಿಯು “ವಿಷಲತೆಯ ಮತ್ತು ಮಾಚಿಪತ್ರೆಯ ಫಲಗಳನ್ನು” (NW) ಫಲಿಸುತ್ತದೆ. ಅದರ ವಿನಾಶಕಾರಿ, ವಿಗ್ರಹಾರಾಧಕ ಮಾರ್ಗವು ಮಾನವ ಕುಲದ ಮಹಾ ನಿರ್ಮಾಣಿಕನನ್ನು ಅಗೌರವಿಸುತ್ತದೆ. (ಧರ್ಮೋಪದೇಶಕಾಂಡ 29:18; 32:5; ಯೆಶಾಯ 42:5, 8) ಯೆಹೋವನ ಸ್ತುತಿಗಾಗಿ ಯೇಸುವು ತರುವ ಹಿತಕರ ಫಲಗಳ ಕೊಯ್ಲಿನಲ್ಲಿ ಯೋಹಾನ ವರ್ಗದವರೊಂದಿಗೆ ಕ್ರಿಯಾತ್ಮಕವಾಗಿ ಜತೆಗೂಡುವುದು ಅದೆಂತಹ ಸುಯೋಗವಾಗಿದೆ! (ಲೂಕ 10:2) ಈ ಲೋಕದ ದ್ರಾಕ್ಷೇಬಳ್ಳಿಯಿಂದ ನಾವೆಂದಿಗೂ ಕಲುಷಿತರಾಗದಂತೆ ನಾವೆಲ್ಲರೂ ದೃಢನಿಶ್ಚಯ ಮಾಡೋಣ, ಮತ್ತು ಹೀಗೆ ಯೆಹೋವನ ಪ್ರತಿಕೂಲ ನ್ಯಾಯತೀರ್ಪು ಜಾರಿಗೊಳಿಸಲ್ಪಡುವಾಗ ಭೂಮಿಯ ದ್ರಾಕ್ಷೇಬಳ್ಳಿಯೊಂದಿಗೆ ತುಳಿಯಲ್ಪಡುವುದನ್ನು ಹೋಗಲಾಡಿಸೋಣ.
[ಅಧ್ಯಯನ ಪ್ರಶ್ನೆಗಳು]
a ಒಂದು ಸಾವಿರದ ಆರುನೂರು ಫರ್ಲಾಂಗುಗಳು ಸುಮಾರು 300 ಕಿಲೊಮೀಟರುಗಳು ಯಾ 180 ಇಂಗ್ಲಿಷ್ ಮೈಲುಗಳಾಗುತ್ತವೆ.—ಪ್ರಕಟನೆ 14:20, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ರೆಫರೆನ್ಸ್ ಬೈಬಲ್, ಪಾದಟಿಪ್ಪಣಿ.
[ಪುಟ 319 ರಲ್ಲಿರುವ ಚೌಕ]
‘ಅವಳ ಜಾರತ್ವದ ದ್ರಾಕ್ಷಾಮದ್ಯ’
ಮಹಾ ಬಾಬೆಲಿನ ಒಂದು ಪ್ರಧಾನ ಭಾಗ ರೋಮನ್ ಕ್ಯಾತೊಲಿಕ್ ಚರ್ಚ್ ಆಗಿದೆ. ರೋಮ್ನಲ್ಲಿರುವ ಪೋಪರಿಂದ ಚರ್ಚ್ನ ಆಡಳಿತ ನಡಿಸಲ್ಪಡುತ್ತದೆ ಮತ್ತು ಪ್ರತಿಯೊಬ್ಬ ಪೋಪರು ಅಪೊಸ್ತಲ ಪೇತ್ರನ ಉತ್ತರಾಧಿಕಾರಿ ಎಂದು ಚರ್ಚು ವಾದಿಸುತ್ತದೆ. ಹಾಗೆ ಉತ್ತರಾಧಿಕಾರಿಗಳೆಂದು ಕರೆಯಲ್ಪಡುವ ಕೆಲವರ ಕುರಿತು ಪ್ರಕಾಶಿಸಲ್ಪಟ್ಟ ವಾಸ್ತವಾಂಶಗಳು ಈ ಕೆಳಗಿನಂತಿವೆ:
ಫಾರ್ಮೋಸಸ್ (891-96): “ಅವನ ಮರಣದ ಒಂಬತ್ತು ತಿಂಗಳುಗಳ ಅನಂತರ, ಫಾರ್ಮೋಸಸ್ನ ದೇಹವನ್ನು ಪೋಪರ ನೆಲಮಾಳಿಗೆಯ ಗೋರಿಯಿಂದ ಹೊರಗೆ ತೆಗೆಯಲಾಯಿತು ಮತ್ತು ‘ಹೆಣಕ್ಕೆ ಸಂಬಂಧಿಸಿದ’ ಕೌನ್ಸಿಲ್ನ ಮುಂದೆ ವಿಚಾರಣೆಗಾಗಿ ಇಡಲಾಯಿತು, ಇದಕ್ಕೆ ಸೀಫ್ಟನ್ [ಹೊಸ ಪೋಪ್] ಅಧ್ಯಕ್ಷತೆ ವಹಿಸಿದ್ದನು. ಪೋಪರ ಹುದ್ದೆಗಾಗಿ ಮೃತನಾದ ಪೋಪನಿಗೆ ಹದ್ದುಮೀರಿದ ಮಹತ್ವಾಕಾಂಕ್ಷೆ ಇತ್ತು ಎಂದು ಆರೋಪಣೆ ಹೊರಿಸಲಾಯಿತು ಮತ್ತು ಅವನ ಎಲ್ಲಾ ಕೃತ್ಯಗಳನ್ನು ಅಸಮರ್ಥನೀಯವೆಂದು ಘೋಷಿಸಲಾಯಿತು. . . . ಹೆಣದಿಂದ ಪೋಪನ ಉಡುಪು ಪೋಷಾಕನ್ನು ಬಿಚ್ಚಲಾಯಿತು; ಬಲಗೈಯ ಬೆರಳುಗಳನ್ನು ಕತ್ತರಿಸಲಾಯಿತು.”—ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ.
ಸೀಫ್ಟನ್ VI (896-97): “[ಫಾರ್ಮೋಸಸನ ವಿಚಾರಣೆಯ] ಕೆಲವೇ ತಿಂಗಳುಗಳೊಳಗೆ, ಒಂದು ಹಿಂಸಾತ್ಮಕ ಪ್ರತಿಕ್ರಿಯೆಯು ಪೋಪ್ ಸೀಫ್ಟನ್ನ ಪೋಪ್ ಹುದ್ದೆಯನ್ನು ಕೊನೆಗೊಳಿಸಿತು; ಅವನು ಪೋಪನ ಚಿಹ್ನೆ ಇಲ್ಲದವನಾದನು, ಸೆರೆಮನೆಗೆ ಹಾಕಲ್ಪಟ್ಟನು ಮತ್ತು ಕುತ್ತಿಗೆ ಹಿಸುಕಿ ಕೊಲ್ಲಲ್ಪಟ್ಟನು.”—ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ.
ಸೆರ್ಜಿಯಸ್ III (904-11): “ಅವನ ಮುಂಚಿನ ಇಬ್ಬರು ಪೋಪರು . . . ಸೆರೆಮನೆಯಲ್ಲಿ ಕತ್ತು ಹಿಸುಕಿ ಕೊಲ್ಲಲ್ಪಟ್ಟರು. . . . ರೋಮಿನಲ್ಲಿ ಥಿಯೊಫಲಾಕಸ್ಟ್ ಪರಿವಾರದಿಂದ ಬೆಂಬಲಿಸಲ್ಪಟ್ಟನು, ಅವರ ಪುತ್ರಿಯರಲ್ಲಿ ಒಬ್ಬಳಾದ ಮರೊಜಿಯಳಿಂದ ಅವನಿಗೆ ಒಬ್ಬ ಪುತ್ರನಿದಿರ್ದಬೇಕೆಂದು (ನಂತರದ ಪೋಪ್ ಜಾನ್ XI) ಎಣಿಸಲಾಗಿದೆ.”—ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ.
ಸೀಫ್ಟನ್ VII (928-31): “ಅವನ ಪೋಪ್ ಹುದ್ದೆಯ ಕೊನೆಯ ವರ್ಷಗಳಲ್ಲಿ, ಪೋಪ್ ಜಾನ್ X . . . ರೋಮಿನ ಡೊನಾ ಸೆನಟ್ರಿಕ್ಸ್ ಆಗಿದ್ದ ಮರೊಜಿಯಳ ಕೋಪಕ್ಕೆ ಬಲಿಯಾದನು, ಮತ್ತು ಸೆರೆಮನೆಗೆ ಹಾಕಲ್ಪಟ್ಟು, ಕೊಲೆಗೈಯಲ್ಪಟ್ಟನು. ಮರೊಜಿಯಳು ಅನಂತರ ಪೋಪ್ ಹುದ್ದೆಯನ್ನು ಪೋಪ್ ಲಿಯೋ VI ನಿಗೆ ಕೊಟ್ಟಳು, ಅವನು ಆರೂವರೆ ತಿಂಗಳುಗಳ ತನಕ ಹುದ್ದೆಯಲ್ಲಿದ್ದು, ಅನಂತರ ಸತ್ತನು. ಸೀಫ್ಟನ್ VII ಯವನು ಅವನ ಸ್ಥಾನಕ್ಕೆ ಬಂದನು, ಪ್ರಾಯಶಃ ಮರೊಜಿಯಳ ಪ್ರಭಾವದಿಂದಲೇ. . . . ಪೋಪ್ ಆಗಿದ್ದ ಅವನ ಎರಡು ವರ್ಷಗಳಲ್ಲಿ, ಮರೊಜಿಯಳ ಹಿಡಿತದ ಕೆಳಗೆ ಅವನು ಅಧಿಕಾರವಿಲ್ಲದವನಂತೆ ಇದ್ದನು.”—ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ.
ಜಾನ್ XI (931-35): “ಸೀಫ್ಟನ್ VII ಯವನ ಮರಣದಲ್ಲಿ. . . ಥಿಯೊಫಲಾಕಸ್ಟ್ ಮನೆತನದ ಮರೊಜಿಯಳು ಅವಳ ಮಗ ಜಾನ್ಗಾಗಿ ಪೋಪ್ ಹುದ್ದೆಯನ್ನು ಸಂಪಾದಿಸಿದಳು, ಅವನು ತನ್ನ 20 ಗಳ ಪೂರ್ವಾರ್ಧದಲ್ಲಿದ್ದನು. . . . ಪೋಪನಾಗಿ, ಅವನ ತಾಯಿಯ ಹಿಡಿತದಲ್ಲಿದ್ದನು.”—ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ.
ಜಾನ್ XII (955-64): “ಅವನು ಇನ್ನೂ ಹದಿನೆಂಟು ವರ್ಷದವನಾಗಿರಲಿಲ್ಲ. ಮತ್ತು ಸಮಕಾಲೀನ ವರದಿಗಳು, ಆತ್ಮಿಕ ವಿಷಯಗಳಲ್ಲಿ ಅವನು ಅನಾಸಕ್ತಿಯವನಾಗಿದ್ದನು, ಒರಟುತನದ ಮೋಜುಗಳ ಚಟವಿದ್ದವನು ಮತ್ತು ನಿರ್ಲಜ್ಜೆಯ ಲಂಪಟತನದ ಜೀವನ ನಡಿಸುವವನಾಗಿದ್ದನು ಎಂದು ಒಪ್ಪುತ್ತವೆ.”—ದಿ ಆಕ್ಸ್ಫರ್ಡ್ ಡಿಕ್ಷನರಿ ಆಫ್ ಪೋಪ್ಸ್.
ಬೆನಡಿಕ್ಟ್ IX (1032-44; 1045; 1047-48): “ಅವನ ಧರ್ಮೀಯ ಪಿತನಿಗೆ ಪೋಪ್ ಹುದ್ದೆಯನ್ನು ಮಾರಿರುವುದಕ್ಕಾಗಿ ಮತ್ತು ಎರಡು ಬಾರಿ ಪುನಃ ಅದನ್ನು ಪಡೆದಿರುವುದಕ್ಕಾಗಿ ಅವನು ಕುಖ್ಯಾತನಾಗಿದ್ದನು.”—ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ.
ಹೀಗೆ, ನಂಬಿಗಸ್ತ ಪೇತ್ರನ ಮಾದರಿಯನ್ನು ಅನುಸರಿಸುವ ಬದಲಾಗಿ, ಇವರು ಮತ್ತು ಇತರ ಪೋಪರು ದುಷ್ಟ ಪ್ರಭಾವದವರಾಗಿದ್ದರು. ಅವರು ರಕ್ತಪಾತದ ದೋಷ ಮತ್ತು ಆತ್ಮಿಕ ಹಾಗೂ ಶಾರೀರಿಕ ಜಾರತ್ವ ಮತ್ತು ಇಸಬೇಲಳಂಥ ಪ್ರಭಾವವನ್ನು ಅವರು ಆಡಳಿತ ನಡಿಸಿದ ಚರ್ಚನ್ನು ಭ್ರಷ್ಟಗೊಳಿಸಲು ಅನುಮತಿಸಿದರು. (ಯಾಕೋಬ 4:4) ವಾಚ್ ಟವರ್ ಸೊಸೈಟಿಯ ದ ಫಿನಿಶ್ಡ್ ಮಿಸ್ಟರಿ ಎಂಬ ಪುಸ್ತಕವು 1917 ರಲ್ಲಿ ಇವೆಲ್ಲಾ ವಾಸ್ತವಾಂಶಗಳನ್ನು ವಿವರವಾಗಿ ಕೊಟ್ಟಿತು. ಬೈಬಲ್ ವಿದ್ಯಾರ್ಥಿಗಳು ಆ ದಿನಗಳಲ್ಲಿ ‘ಎಲ್ಲಾ ವಿಧವಾದ ಪೀಡೆಗಳಿಂದ ಭೂಮಿಯನ್ನು ಬಾಧಿಸಿದ’ ಒಂದು ವಿಧ ಇದಾಗಿತ್ತು.—ಪ್ರಕಟನೆ 11:6; 14:8; 17:1, 2, 5.
[Picture on page 206]
ಸಿಂಹಾಸನಾಸೀನನಾಗಿರುವ ಕ್ರಿಸ್ತನು ದೇವದೂತರ ಬೆಂಬಲದೊಂದಿಗೆ ನ್ಯಾಯತೀರ್ಪನ್ನು ಜಾರಿಮಾಡುತ್ತಾನೆ
[Picture on page 207]
ಸಾ. ಶ. ಪೂ. 539 ರಲ್ಲಿ ಬಾಬೆಲು ಪತನಗೊಂಡ ಅನಂತರ ಅವಳ ಸೆರೆವಾಸಿಗಳು ಬಿಡುಗಡೆಗೊಳಿಸಲ್ಪಟ್ಟರು