ಮತ್ತಾಯ
8 ಯೇಸು ಬೆಟ್ಟ ಇಳಿದು ಬಂದ ಮೇಲೆ ತುಂಬ ಜನ ಆತನ ಹಿಂದೆ ಹೋದ್ರು. 2 ಒಬ್ಬ ಕುಷ್ಠರೋಗಿ ಬಂದು ಆತನಿಗೆ ಅಡ್ಡಬಿದ್ದು “ಸ್ವಾಮಿ, ನಿಂಗೆ ಇಷ್ಟ ಇದ್ರೆ ನನ್ನನ್ನ ವಾಸಿಮಾಡು” ಅಂತ ಕೇಳ್ಕೊಂಡ.+ 3 ಯೇಸು ಅವನನ್ನ ಮುಟ್ಟಿ “ನಿನ್ನನ್ನ ವಾಸಿಮಾಡೋಕೆ ನಂಗೆ ಇಷ್ಟ ಇದೆ”+ ಅಂದನು. ತಕ್ಷಣ ಅವನ ಕುಷ್ಠ ವಾಸಿ ಆಯ್ತು.+ 4 ಆಮೇಲೆ ಯೇಸು “ನೋಡು, ಇದನ್ನ ಯಾರಿಗೂ ಹೇಳಬೇಡ.+ ಆದ್ರೆ ಹೋಗಿ ಪುರೋಹಿತನಿಗೆ ನಿನ್ನನ್ನ ತೋರಿಸು.+ ಮೋಶೆಯ ನಿಯಮದಲ್ಲಿ ಹೇಳಿರೋ ಹಾಗೆ+ ಉಡುಗೊರೆ ಅರ್ಪಿಸು. ಇದು ಅವ್ರಿಗೆ ಸಾಕ್ಷಿಯಾಗಿರಲಿ” ಅಂದನು.
5 ಯೇಸು ಕಪೆರ್ನೌಮಿಗೆ ಬಂದಾಗ ಒಬ್ಬ ಸೇನಾಧಿಕಾರಿ* ಆತನ ಹತ್ರ ಬಂದು ಬೇಡ್ಕೊಳ್ತಾ+ 6 “ಸ್ವಾಮಿ, ನನ್ನ ಸೇವಕನಿಗೆ ಲಕ್ವ ಹೊಡೆದಿದೆ. ಮನೇಲಿ ತುಂಬ ನರಳಾಡ್ತಾ ಇದ್ದಾನೆ” ಅಂದ. 7 ಅದಕ್ಕೆ ಯೇಸು “ನಾನು ಅಲ್ಲಿಗೆ ಬರ್ತಾ ಇದ್ದೀನಿ. ಬಂದಾಗ ವಾಸಿಮಾಡ್ತೀನಿ” ಅಂದನು. 8 ಆಗ ಸೇನಾಧಿಕಾರಿ “ಯಜಮಾನ, ನೀನು ನನ್ನ ಮನೆಗೆ ಬರುವಷ್ಟು ಯೋಗ್ಯ ನಾನಲ್ಲ. ನನ್ನ ಸೇವಕ ವಾಸಿ ಆಗಲಿ ಅಂತ ನೀನು ಒಂದು ಮಾತು ಹೇಳಿದ್ರೆ ಸಾಕು, ಅವನು ವಾಸಿ ಆಗ್ತಾನೆ. 9 ನಾನು ಸಹ ಅಧಿಕಾರದ ಕೆಳಗಿರುವವನೇ. ನನ್ನ ಕೆಳಗೂ ಸೈನಿಕರಿದ್ದಾರೆ. ನಾನು ಅವ್ರಲ್ಲಿ ಒಬ್ಬನಿಗೆ ‘ಹೋಗು’ ಅಂದ್ರೆ ಹೋಗ್ತಾನೆ. ಇನ್ನೊಬ್ಬನಿಗೆ ‘ಬಾ’ ಅಂದ್ರೆ ಬರ್ತಾನೆ. ನನ್ನ ಸೇವಕನಿಗೆ ‘ಇದನ್ನ ಮಾಡು’ ಅಂದ್ರೆ ಮಾಡ್ತಾನೆ” ಅಂದ. 10 ಇದನ್ನ ಕೇಳಿ ಯೇಸು ಆಶ್ಚರ್ಯಪಟ್ಟು ಜನ್ರಿಗೆ “ನಿಮಗೆ ನಿಜ ಹೇಳ್ತೀನಿ, ಇಷ್ಟು ನಂಬಿಕೆ ಇರೋನನ್ನ ಇಸ್ರಾಯೇಲಲ್ಲಿ ನೋಡೇ ಇಲ್ಲ.+ 11 ಆದ್ರೆ ನಾನು ಹೇಳ್ತೀನಿ, ಪೂರ್ವ ಪಶ್ಚಿಮದಿಂದ ತುಂಬ ಜನ ಬರ್ತಾರೆ, ಅವರು ದೇವರ ಆಳ್ವಿಕೆಯಲ್ಲಿ ಅಬ್ರಹಾಮ, ಇಸಾಕ, ಯಾಕೋಬರ ಜೊತೆ ಊಟಕ್ಕೆ ಕೂತ್ಕೊಳ್ತಾರೆ.+ 12 ಆದ್ರೆ ಆ ಆಳ್ವಿಕೆಯಲ್ಲಿ ಯಾರು ಇರಬೇಕಿತ್ತೋ ಅವ್ರನ್ನ* ದೇವರು ಕತ್ತಲೆಗೆ ಎಸಿತಾನೆ. ಅಲ್ಲಿ ಅವರು ಗೋಳಾಡ್ತಾರೆ, ಅಳ್ತಾರೆ”*+ ಅಂದನು. 13 ಆಮೇಲೆ ಯೇಸು ಆ ಸೇನಾಧಿಕಾರಿಗೆ “ಮನೆಗೆ ಹೋಗು, ನೀನು ನಂಬಿದ ತರಾನೇ ನಿನ್ನ ಸೇವಕನಿಗೆ ಆಗಲಿ”+ ಅಂದನು. ಆಗಲೇ ಆ ಸೇವಕನಿಗೆ ವಾಸಿ ಆಯ್ತು.+
14 ಯೇಸು ಪೇತ್ರನ ಮನೆಗೆ ಬಂದಾಗ ಅವನ ಅತ್ತೆ+ ಜ್ವರ ಬಂದು ಹಾಸಿಗೆ ಹಿಡಿದಿರೋದನ್ನ ನೋಡಿದನು.+ 15 ಯೇಸು ಅವಳ ಕೈ ಮುಟ್ಟಿದಾಗ+ ಅವಳು ಹುಷಾರಾದಳು. ಅವಳು ಎದ್ದು ಅವ್ರಿಗೆ ಅಡುಗೆ ಮಾಡೋಕೆ ಶುರುಮಾಡಿದಳು. 16 ಸಂಜೆ ಆದಾಗ ಜನ್ರು ಕೆಟ್ಟ ದೇವದೂತರ ನಿಯಂತ್ರಣದಲ್ಲಿದ್ದ ತುಂಬ ಜನ್ರನ್ನ ಆತನ ಹತ್ರ ಕರ್ಕೊಂಡು ಬಂದ್ರು. ಆತನು ಒಂದೇ ಮಾತಲ್ಲಿ ಆ ಕೆಟ್ಟ ದೇವದೂತರನ್ನ ಓಡಿಸಿಬಿಟ್ಟನು. ಹುಷಾರಿಲ್ಲದ ಜನ್ರನ್ನೆಲ್ಲ ವಾಸಿಮಾಡಿದನು. 17 “ನಮ್ಮ ಕಾಯಿಲೆಗಳನ್ನ ಆತನೇ ತಗೊಂಡು, ನಮ್ಮ ರೋಗಗಳನ್ನ ಹೊತ್ಕೊಂಡನು” ಅಂತ ಪ್ರವಾದಿ ಯೆಶಾಯ ಹೇಳಿದ ಮಾತು ಹೀಗೆ ನಿಜ ಆಯ್ತು.+
18 ಯೇಸು ಸುತ್ತಲೂ ಇದ್ದ ಜನ್ರನ್ನ ನೋಡಿ ದೋಣಿನ ಆಕಡೆ ದಡಕ್ಕೆ ನಡಿಸಿ ಅಂತ ಶಿಷ್ಯರಿಗೆ ಹೇಳಿದ.+ 19 ಆಗ ಒಬ್ಬ ಪಂಡಿತ ಯೇಸು ಹತ್ರ ಬಂದು “ಗುರು, ನೀನು ಎಲ್ಲಿ ಹೋದ್ರೂ ನಾನು ನಿನ್ನ ಹಿಂದೆ ಬರ್ತೀನಿ”+ ಅಂದ. 20 ಅದಕ್ಕೆ ಯೇಸು “ನರಿಗಳಿಗೆ ಗುಹೆ ಇದೆ, ಪಕ್ಷಿಗಳಿಗೆ ಗೂಡು ಇದೆ. ಆದ್ರೆ ಮನುಷ್ಯಕುಮಾರನಿಗೆ ತಲೆ ಇಡೋಕೂ ಜಾಗ ಇಲ್ಲ”+ ಅಂದನು. 21 ಆಗ ಇನ್ನೊಬ್ಬ ಶಿಷ್ಯ “ಸ್ವಾಮಿ, ನಾನು ಮೊದ್ಲು ಹೋಗಿ ನನ್ನ ತಂದೆನ ಮಣ್ಣುಮಾಡಿ ಬರೋಕೆ ಅನುಮತಿ ಕೊಡು”+ ಅಂದ. 22 ಯೇಸು ಅವನಿಗೆ “ನೀನು ನನ್ನ ಶಿಷ್ಯನಾಗು. ಸತ್ತವರನ್ನ ಸತ್ತವರೇ ಮಣ್ಣುಮಾಡಲಿ”+ ಅಂದನು.
23 ಯೇಸು ದೋಣಿ ಹತ್ತಿ ಹೋಗ್ತಿದ್ದಾಗ ಶಿಷ್ಯರು ಆತನ ಜೊತೆ ಹೋದ್ರು.+ 24 ಹೀಗೆ ಹೋಗ್ತಿರುವಾಗ ಇದ್ದಕ್ಕಿದ್ದಂತೆ ಸಮುದ್ರ ಅಲ್ಲೋಲಕಲ್ಲೋಲ ಆಯ್ತು. ಅಲೆಗಳಿಂದ ದೋಣಿಯಲ್ಲಿ ನೀರು ತುಂಬ್ತಿತ್ತು. ಆದ್ರೆ ಯೇಸು ನಿದ್ದೆ ಮಾಡ್ತಿದ್ದನು.+ 25 ಶಿಷ್ಯರು ಆತನನ್ನ ಎಬ್ಬಿಸ್ತಾ “ಸ್ವಾಮಿ, ಕಾಪಾಡು, ನಾವು ಸತ್ತು ಹೋಗ್ತೀವಿ” ಅಂದ್ರು. 26 ಆದ್ರೆ ಆತನು “ನಂಬಿಕೆ ಕೊರತೆ ಇರುವವರೇ, ಯಾಕಿಷ್ಟು ಹೆದರುತ್ತಾ ಇದ್ದೀರಾ?”+ ಅಂತ ಹೇಳಿ, ಎದ್ದುನಿಂತು ಗಾಳಿ ಮತ್ತು ಸಮುದ್ರವನ್ನ ಗದರಿಸಿದನು. ಆಗ ಎಲ್ಲ ಶಾಂತ ಆಯ್ತು.+ 27 ಶಿಷ್ಯರು ಇದನ್ನ ನೋಡಿ “ಗಾಳಿ, ಸಮುದ್ರನೂ ಇವನ ಮಾತು ಕೇಳುತ್ತಲ್ಲಾ? ಇವನು ಯಾರಪ್ಪಾ?” ಅಂತ ಆಶ್ಚರ್ಯಪಟ್ರು.
28 ಯೇಸು ಆಕಡೆ ದಡದಲ್ಲಿದ್ದ ಗದರೇನರ ಪ್ರದೇಶಕ್ಕೆ ಬಂದಾಗ, ಕೆಟ್ಟ ದೇವದೂತರ ನಿಯಂತ್ರಣದಲ್ಲಿದ್ದ ಇಬ್ಬರು ಸ್ಮಶಾನದ ಮಧ್ಯದಿಂದ ಆತನ ಎದುರು ಬಂದ್ರು.+ ಅವರು ತುಂಬ ಕ್ರೂರಿಗಳಾಗಿದ್ದ ಕಾರಣ ಆ ದಾರಿಯಲ್ಲಿ ಹೋಗೋಕೆ ಎಲ್ರೂ ಭಯಪಡ್ತಿದ್ರು. 29 ಅವರು ಯೇಸುಗೆ “ದೇವರ ಮಗನೇ, ಯಾಕೆ ಇಲ್ಲಿಗೆ ಬಂದೆ?+ ಸಮಯಕ್ಕೆ ಮುಂಚೆನೇ ನಮ್ಮನ್ನ ಶಿಕ್ಷಿಸೋಕೆ ಬಂದ್ಯಾ?”+ ಅಂತ ಕಿರಿಚಿದ್ರು.+ 30 ತುಂಬ ದೂರದಲ್ಲಿ ಹಂದಿಗಳ ಒಂದು ಹಿಂಡು ಮೇಯ್ತಾ ಇತ್ತು.+ 31 ಹಾಗಾಗಿ ಆ ಕೆಟ್ಟ ದೇವದೂತರು ಆತನಿಗೆ “ನೀನು ನಮ್ಮನ್ನ ಕಳಿಸೋದಾದ್ರೆ ಆ ಹಂದಿಗಳ ಒಳಗೆ ಕಳಿಸು” ಅಂತ ಬೇಡ್ಕೊಂಡ್ರು.+ 32 ಯೇಸು “ಹೋಗಿ!” ಅಂದನು. ಆ ಕೆಟ್ಟ ದೇವದೂತರು ಹೊರಗೆ ಬಂದು ಹಂದಿಗಳ ಒಳಗೆ ಸೇರ್ಕೊಂಡ್ರು. ಆ ಹಂದಿಗಳು ಓಡಿ ಬೆಟ್ಟದ ತುದಿಯಿಂದ ಜಿಗಿದು ಸಮುದ್ರದಲ್ಲಿ ಬಿದ್ದು ಸತ್ತವು. 33 ಅವುಗಳನ್ನ ಕಾಯ್ತಿದ್ದವರು ಅಲ್ಲಿಂದ ಪಟ್ಟಣದ ಒಳಗೆ ಓಡಿಹೋಗಿ ಏನೇನು ಆಯ್ತು ಅಂತ ಜನ್ರಿಗೆ ಹೇಳಿದ್ರು. ಕೆಟ್ಟ ದೇವದೂತರ ಬಗ್ಗೆನೂ ಹೇಳಿದ್ರು. 34 ಆಗ ಪಟ್ಟಣದವರೆಲ್ಲ ಯೇಸುನ ಭೇಟಿಮಾಡೋಕೆ ಬಂದ್ರು. ಆತನನ್ನ ನೋಡಿ ಅಲ್ಲಿಂದ ಹೋಗಿಬಿಡು ಅಂತ ಬೇಡ್ಕೊಂಡ್ರು.+