ಕೊರಿಂಥದವರಿಗೆ ಬರೆದ ಎರಡನೇ ಪತ್ರ
5 ನಮಗೆ ಗೊತ್ತಿರೋ ಹಾಗೆ ಭೂಮಿಯಲ್ಲಿರೋ ನಮ್ಮ ಮನೆ ಅಂದ್ರೆ ಡೇರೆ ಅನ್ನೋ ಈ ದೇಹ ಅಳಿದು ಹೋಗುತ್ತೆ.+ ಆದ್ರೆ ದೇವರು ನಮಗೆ ಸ್ವರ್ಗದಲ್ಲಿ ಶಾಶ್ವತ ಮನೆ ಕೊಡ್ತಾನೆ. ಆ ಮನೆ ಕೈಯಿಂದ ಕಟ್ಟಿದ್ದಲ್ಲ.+ 2 ಭೂಮಿಯಲ್ಲಿರೋ ಈ ಮನೇಲಿ ನಾವು ನಿಜವಾಗ್ಲೂ ನರಳ್ತಾ ಇದ್ದೀವಿ. ದೇವರು ಸ್ವರ್ಗದಲ್ಲಿ ನಮಗೆ ಕೊಡೋದನ್ನ ಹಾಕೊಳ್ಳೋಕೆ ನಮ್ಮ ಮನಸ್ಸು ಹಾತೊರಿತಿದೆ.+ 3 ನಾವು ಅದನ್ನ ಹಾಕೊಂಡ ಮೇಲೆ ಬೆತ್ತಲೆ ಆಗಿರಲ್ಲ. 4 ಹೇಳಬೇಕಂದ್ರೆ ಈ ಡೇರೆಯಲ್ಲಿರೋ ನಾವು ಚಿಂತೆಯಿಂದ ಕುಗ್ಗಿಹೋಗಿ ನರಳ್ತಾ ಇದ್ದೀವಿ. ಹಾಗಾದ್ರೆ ನಮ್ಮ ಮಾತಿನ ಅರ್ಥ ಈ ಡೇರೆಯನ್ನ ಬಿಚ್ಚಿಹಾಕೋಕೆ ನಾವು ಇಷ್ಟ ಪಡ್ತೀವಿ ಅಂತಲ್ಲ, ಬದಲಿಗೆ ನಾವು ಸ್ವರ್ಗದ ಡೇರೆಯನ್ನ ಹಾಕೊಳ್ಳೋಕೆ ಇಷ್ಟ ಪಡ್ತೀವಿ.+ ಹೀಗೆ ಸಾಯೋದನ್ನ ಜೀವ ನುಂಗಿಹಾಕುತ್ತೆ.+ 5 ಇದಕ್ಕಾಗಿ ನಮ್ಮನ್ನ ಸಿದ್ಧಮಾಡಿದವನು ದೇವರು.+ ಆತನು ಮುಂದೆ ನಮಗೆ ಆಶೀರ್ವಾದಗಳನ್ನ* ಕೊಟ್ಟೇ ಕೊಡ್ತಾನೆ ಅಂತ ತೋರಿಸೋಕೆ ಪವಿತ್ರಶಕ್ತಿಯನ್ನ ಕೊಟ್ಟಿದ್ದಾನೆ.+
6 ಹಾಗಾಗಿ ನಾವು ಯಾವಾಗ್ಲೂ ಧೈರ್ಯದಿಂದ ಇದ್ದೀವಿ. ನಮ್ಮ ಮನೆ ಈ ದೇಹದಲ್ಲಿ ಇರುವಾಗ ನಾವು ಪ್ರಭು ಜೊತೆ ಇಲ್ಲ ಅಂತ ನಮಗೆ ಗೊತ್ತು.+ 7 ನಾವು ಕಣ್ಣಿಗೆ ಕಾಣೋ ವಿಷ್ಯಗಳಿಗೆ ತಕ್ಕ ಹಾಗೆ ಜೀವಿಸದೆ, ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ದೀವಿ. 8 ನಾವು ತುಂಬ ಧೈರ್ಯದಿಂದ ಇದ್ದೀವಿ, ಈ ದೇಹದಿಂದ ದೂರ ಇದ್ದು ಪ್ರಭು ಜೊತೆ ನಮ್ಮ ಮನೆ ಮಾಡ್ಕೊಳ್ಳೋಕೆ ಇಷ್ಟಪಡ್ತೀವಿ.+ 9 ಅದಕ್ಕೇ ಆತನ ಜೊತೆ ವಾಸಿಸ್ತಿರಲಿ ಇಲ್ದೆ ಇರಲಿ ಆತನಿಗೆ ಇಷ್ಟ ಆಗೋ ತರ ನಡಿಯೋದೇ ನಮ್ಮ ಗುರಿ. 10 ನಾವೆಲ್ಲ ಕ್ರಿಸ್ತನ ನ್ಯಾಯಾಸನದ ಮುಂದೆ ನಿಲ್ಲಬೇಕು. ಈ ದೇಹದಲ್ಲಿರುವಾಗ ಒಳ್ಳೇದು ಮಾಡಿರಲಿ ಕೆಟ್ಟದು ಮಾಡಿರಲಿ ಅದಕ್ಕೆ ತಕ್ಕ ಹಾಗೆ ಪ್ರತಿಯೊಬ್ಬನಿಗೂ ತೀರ್ಪಾಗುತ್ತೆ.+
11 ಪ್ರಭುಗೆ ಭಯಪಡಬೇಕು ಅಂತ ನಮಗೆ ಗೊತ್ತಿರೋದ್ರಿಂದ ಜನ್ರ ಮನಸ್ಸಿಗೆ ಮುಟ್ಟೋ ತರ ನಾವು ಅವ್ರಿಗೆ ಕಲಿಸ್ತಾ ಇದ್ದೀವಿ. ನಾವು ಎಂಥವರಂತ ದೇವರಿಗೆ ಚೆನ್ನಾಗಿ ಗೊತ್ತು, ನಿಮಗೂ* ಗೊತ್ತು ಅಂತ ನಾನು ನಂಬ್ತೀನಿ. 12 ನಾವು ನಮ್ಮ ಬಗ್ಗೆ ದೊಡ್ಡದಾಗಿ ಕೊಚ್ಕೊಳ್ಳೋಕೆ ಇದೆಲ್ಲ ಹೇಳ್ತಿಲ್ಲ, ನೀವು ನಮ್ಮ ಬಗ್ಗೆ ಹೆಮ್ಮೆಪಡಿ ಅಂತ ಪ್ರೋತ್ಸಾಹಿಸೋಕೆ ಹೇಳ್ತಾ ಇದ್ದೀವಷ್ಟೆ. ಇದ್ರಿಂದ, ಹೃದಯ ನೋಡ್ದೆ ಹೊರತೋರಿಕೆ ನೋಡಿ ಹೊಗಳುವವ್ರಿಗೆ ಉತ್ತರ ಕೊಡೋಕೆ ನಿಮ್ಮಿಂದ ಆಗುತ್ತೆ.+ 13 ನಮ್ಮ ತಲೆಕೆಟ್ಟಿದ್ರೆ+ ಅದು ದೇವ್ರಿಗಾಗಿ. ನಮ್ಮ ತಲೆ ಸರಿ ಇದ್ರೆ ಅದು ನಿಮಗಾಗಿ. 14 ಕ್ರಿಸ್ತ ತೋರಿಸಿದ ಪ್ರೀತಿ ನಮ್ಮನ್ನ ಒತ್ತಾಯ ಮಾಡುತ್ತೆ. ಯಾಕಂದ್ರೆ ಎಲ್ರೂ ಸತ್ತಿದ್ರಿಂದ ಒಬ್ಬ ಮನುಷ್ಯ ಎಲ್ರಿಗಾಗಿ ಸತ್ತ+ ಅಂತ ನಮಗೆ ಅರ್ಥ ಆಗಿದೆ. 15 ಜೀವಿಸುವವರು ಇನ್ಮುಂದೆ ತಮಗಾಗಿ ಜೀವಿಸಬಾರದು,+ ತಮಗೋಸ್ಕರ ಸತ್ತು ಮತ್ತೆ ಜೀವಂತವಾಗಿ ಎದ್ದುಬಂದವನಿಗಾಗಿ ಜೀವಿಸಬೇಕು ಅನ್ನೋ ಕಾರಣಕ್ಕೆ ಆತನು ಎಲ್ರಿಗೋಸ್ಕರ ಸತ್ತನು.
16 ಯಾರನ್ನೂ ನಾವು ಇನ್ಮುಂದೆ ಮನುಷ್ಯರ ದೃಷ್ಟಿಕೋನದಿಂದ ನೋಡಲ್ಲ.+ ಒಂದುವೇಳೆ ನಾವು ಮೊದ್ಲು ಕ್ರಿಸ್ತನನ್ನ ಮನುಷ್ಯರ ದೃಷ್ಟಿಕೋನದಿಂದ ನೋಡಿದ್ರೂ ನಿಜವಾಗ್ಲೂ ಇನ್ಮುಂದೆ ಹಾಗೆ ನೋಡಲ್ಲ.+ 17 ಹಾಗಾಗಿ ಒಬ್ಬ ವ್ಯಕ್ತಿ ಕ್ರಿಸ್ತನ ಜೊತೆ ಒಂದಾಗಿದ್ರೆ ಅವನು ಹೊಸ ಸೃಷ್ಟಿಯಾಗಿದ್ದಾನೆ.+ ಹಳೇ ವಿಷ್ಯಗಳು ನಾಶ ಆಗಿ ಹೊಸ ವಿಷ್ಯಗಳು ಬಂದಿವೆ. 18 ಎಲ್ಲವನ್ನ ದೇವರೇ ಮಾಡಿದನು. ಆತನು ಕ್ರಿಸ್ತನ ಮೂಲಕ ನಮ್ಮನ್ನ ತನ್ನ ಜೊತೆ ಶಾಂತಿ ಸಂಬಂಧಕ್ಕೆ ತಂದನು.+ ಅಷ್ಟೇ ಅಲ್ಲ, ಬೇರೆಯವ್ರನ್ನ ಆತನ ಜೊತೆ ಶಾಂತಿ ಸಂಬಂಧಕ್ಕೆ ತರೋ ಸೇವೆಯನ್ನ ನಮಗೆ ಕೊಟ್ಟನು.+ 19 ಅಂದ್ರೆ, ದೇವರು ಕ್ರಿಸ್ತನ ಮೂಲಕ ಜನ್ರನ್ನ ತನ್ನ ಜೊತೆ ಶಾಂತಿ ಸಂಬಂಧಕ್ಕೆ ತರ್ತಿದ್ದಾನೆ.+ ಅವ್ರ ಪಾಪಗಳನ್ನ ಆತನು ಲೆಕ್ಕಕ್ಕೆ ತಗೊಳ್ತಿಲ್ಲ.+ ಜನ್ರು ದೇವರ ಸ್ನೇಹಿತರಾಗಬಹುದು ಅಂತ ಅವ್ರಿಗೆ ಹೇಳೋ ಕೆಲಸವನ್ನ ಆತನು ನಮಗೆ ಕೊಟ್ಟಿದ್ದಾನೆ.+
20 ಹಾಗಾಗಿ ನಾವು ಕ್ರಿಸ್ತನ ಬದಲಿಗೆ*+ ರಾಯಭಾರಿಗಳಾಗಿ+ ಕೆಲಸ ಮಾಡ್ತಿದ್ದೀವಿ. “ದೇವರ ಜೊತೆ ಶಾಂತಿ ಸಂಬಂಧಕ್ಕೆ ಬನ್ನಿ” ಅಂತ ನಾವು ಕ್ರಿಸ್ತನ ಪರವಾಗಿ ಬೇಡ್ತಾ ಇದ್ದೀವಿ. ದೇವರು ನಮ್ಮ ಮೂಲಕ ನಿಮಗೆ ಈ ಬೇಡಿಕೆ ಮಾಡ್ತಿದ್ದಾನೆ ಅಂತ ನೆನಸಿ. 21 ಕ್ರಿಸ್ತನು ಯಾವತ್ತೂ ಪಾಪ ಮಾಡಲಿಲ್ಲ.+ ದೇವರು ಆತನನ್ನ ನಮ್ಮ ಪಾಪಗಳಿಗೋಸ್ಕರ ಬಲಿಯಾಗಿ ಕೊಟ್ಟನು. ಇದ್ರಿಂದ ನಾವು ಆತನ ಮೂಲಕ ದೇವರ ಮುಂದೆ ನೀತಿವಂತರಾಗೋಕೆ ಆಯ್ತು.+