ಅಧ್ಯಾಯ ಎಂಟು
ಯೆಹೋವ ದೇವರು ತನ್ನ ಪವಿತ್ರ ಆಲಯದಲ್ಲಿದ್ದಾನೆ
1, 2. (ಎ) ಪ್ರವಾದಿ ಯೆಶಾಯನು ದೇವಾಲಯದ ದರ್ಶನವನ್ನು ಯಾವಾಗ ಪಡೆದನು? (ಬಿ) ಉಜ್ಜೀಯ ರಾಜನು ಯೆಹೋವನ ಅನುಗ್ರಹವನ್ನು ಏಕೆ ಕಳೆದುಕೊಂಡನು?
“ಅರಸನಾದ ಉಜ್ಜೀಯನು ಕಾಲವಾದ ವರುಷದಲ್ಲಿ ಯೆಹೋವನು ಉನ್ನತೋನ್ನತ ಸಿಂಹಾಸನಾರೂಢನಾಗಿರುವದನ್ನು ಕಂಡೆನು. ಆತನ ವಸ್ತ್ರದ ನೆರಿಗೆಯು ಮಂದಿರದಲ್ಲೆಲ್ಲಾ ಹರಡಿತ್ತು.” (ಯೆಶಾಯ 6:1) ಪ್ರವಾದಿಯ ಈ ಮಾತುಗಳನ್ನು ಹೇಳುತ್ತ ಯೆಶಾಯ ಪುಸ್ತಕದ 6ನೆಯ ಅಧ್ಯಾಯವು ಆರಂಭಗೊಳ್ಳುತ್ತದೆ. ಇದು ಸಾ.ಶ.ಪೂ. 778ನೆಯ ವರುಷವಾಗಿದೆ.
2 ಯೆಹೂದದ ಅರಸನಾಗಿ ಉಜ್ಜೀಯನು ಆಳಿದ 52 ವರುಷಗಳು ಬಹುಮಟ್ಟಿಗೆ ಅತ್ಯಧಿಕ ಯಶಸ್ಸಿನ ವರುಷಗಳಾಗಿದ್ದವು. “ಯೆಹೋವನ ಚಿತ್ತಾನುಸಾರವಾಗಿ ನಡೆದ” ಅವನು ತನ್ನ ಸೈನ್ಯಗಳ, ಕಟ್ಟಡ ರಚನೆಗಳ ಮತ್ತು ವ್ಯಾವಸಾಯಿಕ ಕೆಲಸಗಳ ವಿಷಯದಲ್ಲಿ ಯೆಹೋವನ ಬೆಂಬಲವನ್ನು ಪಡೆದನು. ಆದರೆ ಅವನ ಯಶಸ್ಸು ಅವನ ಪತನಕ್ಕೂ ಕಾರಣವಾಯಿತು. ಕ್ರಮೇಣ ಅವನು ಅಹಂಕಾರಿಯಾಗಿ, “ತನ್ನ ದೇವರಾದ ಯೆಹೋವನಿಗೆ ದ್ರೋಹಿಯಾಗಿ ಧೂಪವೇದಿಯ ಮೇಲೆ ತಾನೇ ಧೂಪಹಾಕಬೇಕೆಂದು ಯೆಹೋವನ ಆಲಯದೊಳಕ್ಕೆ ಹೋದನು.” ಅವನ ಈ ಅಧಿಕಪ್ರಸಂಗದ ಕಾರಣ ಮತ್ತು ತನ್ನನ್ನು ಗದರಿಸಿದ ಯಾಜಕರ ಮೇಲೆ ಅವನು ತೋರಿಸಿದ ಸಿಟ್ಟಿನ ಕಾರಣ, ಉಜ್ಜೀಯನು ಕುಷ್ಠರೋಗಿಯಾಗಿ ಸತ್ತನು. (2 ಪೂರ್ವಕಾಲವೃತ್ತಾಂತ 26:3-22) ಯೆಶಾಯನು ತನ್ನ ಪ್ರವಾದನಾ ಸೇವೆಯನ್ನು ಆರಂಭಿಸಿದ್ದು ಸುಮಾರು ಈ ಸಮಯದಲ್ಲಿಯೇ.
3. (ಎ) ಯೆಶಾಯನು ಯೆಹೋವನನ್ನು ನಿಜವಾಗಿಯೂ ನೋಡಿದನೊ? ವಿವರಿಸಿ. (ಬಿ) ಯೆಶಾಯನು ಯಾವ ದೃಶ್ಯವನ್ನು ನೋಡುತ್ತಾನೆ, ಮತ್ತು ಯಾವ ಕಾರಣಕ್ಕಾಗಿ?
3 ಯೆಶಾಯನು ಈ ದರ್ಶನವನ್ನು ಕಂಡಾಗ ಎಲ್ಲಿದ್ದನೆಂದು ನಮಗೆ ಹೇಳಲಾಗುವುದಿಲ್ಲ. ಆದರೆ ಅವನು ತನ್ನ ದೈಹಿಕ ಕಣ್ಣುಗಳಿಂದ ಕಂಡದ್ದು ಒಂದು ದರ್ಶನವೇ ಆಗಿತ್ತಲ್ಲದೆ ನಿಜವಾಗಿಯೂ ಸರ್ವಶಕ್ತನ ಸಾಕ್ಷಾತ್ ರೂಪವಲ್ಲ. ಏಕೆಂದರೆ, “ದೇವರನ್ನು ಯಾರೂ ಎಂದೂ ಕಂಡಿಲ್ಲ.” (ಯೋಹಾನ 1:18; ವಿಮೋಚನಕಾಂಡ 33:20) ಆದರೆ ಸೃಷ್ಟಿಕರ್ತನಾದ ಯೆಹೋವನನ್ನು ದರ್ಶನದಲ್ಲಿ ನೋಡುವುದೂ ಭಯಭಕ್ತಿ ಹುಟ್ಟಿಸುವ ವಿಷಯವಾಗಿದೆ. ಏಕೆಂದರೆ ನಿತ್ಯರಾಜನು ಮತ್ತು ನ್ಯಾಯಾಧೀಶನು ಎಂಬ ಪಾತ್ರವನ್ನು ಸೂಚಿಸುವ ಉನ್ನತ ಸಿಂಹಾಸನದಲ್ಲಿ ಕುಳಿತಿರುವಾತನು, ನ್ಯಾಯಹಕ್ಕುಳ್ಳ ಸಕಲ ಆಡಳಿತದ ವಿಶ್ವಪ್ರಭುವೂ ಆದಿಮೂಲನೂ ಆಗಿರುವಾತನೇ ಆಗಿದ್ದಾನೆ! ಆತನ ಉದ್ದದ ಇಳಿಬಿದ್ದಿರುವ ಮೇಲಂಗಿಯ ನೆರಿಗೆಗಳು ದೇವಾಲಯವನ್ನು ತುಂಬುತ್ತವೆ. ಆಗ ಯೆಹೋವನ ಪರಮಾಧಿಕಾರ ಮತ್ತು ನ್ಯಾಯವನ್ನು ವರ್ಧಿಸುವ ಪ್ರವಾದನಾ ಸೇವೆಯನ್ನು ಮಾಡಲು ಯೆಶಾಯನನ್ನು ಕರೆಯಲಾಗುತ್ತದೆ. ಇದಕ್ಕೆ ಸಿದ್ಧವಾಗುವಂತೆ ಅವನಿಗೆ ದೇವರ ಪರಿಶುದ್ಧತೆಯ ದರ್ಶನವನ್ನು ಕೊಡಲಾಗುವುದು.
4. (ಎ) ದರ್ಶನದಲ್ಲಿ ನೋಡಿದ ಮತ್ತು ಬೈಬಲಿನಲ್ಲಿ ದಾಖಲಿಸಿರುವ ಯೆಹೋವನನ್ನು ಕುರಿತ ವರ್ಣನೆಗಳು ಏಕೆ ಸಾಂಕೇತಿಕವಾಗಿರಲೇಬೇಕು? (ಬಿ) ಯೆಶಾಯನು ನೋಡಿದ ದರ್ಶನದಿಂದ ಯೆಹೋವನ ಕುರಿತು ಏನು ಕಲಿಯಲಾಗುತ್ತದೆ?
4 ಯೆಹೆಜ್ಕೇಲ, ದಾನಿಯೇಲ ಮತ್ತು ಯೋಹಾನರು ವರದಿ ಮಾಡಿದ ದರ್ಶನಗಳಂತೆ, ಯೆಹೋವನ ತೋರಿಕೆಯ ಕುರಿತಾದ ಯಾವುದೇ ವರ್ಣನೆಯನ್ನು ಯೆಶಾಯನು ಕೊಡುವುದಿಲ್ಲ. ಮತ್ತು ಸ್ವರ್ಗದಲ್ಲಿ ಕಂಡುಬರುವ ಸಂಗತಿಗಳ ಕುರಿತಾದ ಆ ಎಲ್ಲ ವೃತ್ತಾಂತಗಳು ವಿಭಿನ್ನವಾಗಿವೆ. (ಯೆಹೆಜ್ಕೇಲ 1:26-28; ದಾನಿಯೇಲ 7:9, 10; ಪ್ರಕಟನೆ 4:2, 3) ಆದರೆ ಈ ದರ್ಶನಗಳ ಲಕ್ಷಣ ಮತ್ತು ಉದ್ದೇಶವನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅವು ಯೆಹೋವನ ಸನ್ನಿಧಾನದ ಅಕ್ಷರಾರ್ಥದ ವರ್ಣನೆಗಳಲ್ಲ. ಏಕೆಂದರೆ ಶಾರೀರಿಕ ಕಣ್ಣುಗಳಿಗೆ ಆತ್ಮಿಕವಾಗಿರುವುದನ್ನು ನೋಡುವುದು ಅಸಾಧ್ಯವಾಗಿರುವಂತೆಯೇ, ಸೀಮಿತ ಮಾನವ ಮನಸ್ಸಿಗೆ ಆತ್ಮ ಲೋಕವನ್ನು ಅರ್ಥಮಾಡಿಕೊಳ್ಳುವುದೂ ಅಸಾಧ್ಯ. ಆದಕಾರಣ, ರವಾನಿಸಲಿರುವ ಮಾಹಿತಿಯನ್ನು ದರ್ಶನಗಳು ಮಾನವ ಪರಿಭಾಷೆಯಲ್ಲಿ ತೋರಿಸುತ್ತವೆ. (ಹೋಲಿಸಿ ಪ್ರಕಟನೆ 1:1.) ಯೆಶಾಯನ ದರ್ಶನದಲ್ಲಿ ದೇವರು ಹೇಗೆ ಕಾಣುತ್ತಾನೆಂಬ ವರ್ಣನೆಯ ಅಗತ್ಯವಿಲ್ಲ. ಯೆಹೋವನು ತನ್ನ ಪರಿಶುದ್ಧ ಆಲಯದಲ್ಲಿದ್ದಾನೆಂದೂ ಆತನು ಪರಿಶುದ್ಧನು ಮತ್ತು ಆತನ ನ್ಯಾಯತೀರ್ಪು ನಿರ್ಮಲವಾದುದೆಂದೂ ಆ ದರ್ಶನವು ತಿಳಿಸುತ್ತದೆ.
ಸೆರಾಫಿಯರು
5. (ಎ) ಸೆರಾಫಿಯರು ಯಾರು, ಮತ್ತು ಆ ಹೆಸರಿನ ಅರ್ಥವೇನು? (ಬಿ) ಸೆರಾಫಿಯರು ತಮ್ಮ ಮುಖ ಮತ್ತು ಪಾದಗಳನ್ನು ಮುಚ್ಚಿಕೊಳ್ಳುವುದೇಕೆ?
5 ಕೇಳಿ! ಯೆಶಾಯನು ಮುಂದುವರಿಸುವುದು: “ಆತನ ಸುತ್ತ [“ಮೇಲ್ಭಾಗದಲ್ಲಿ,” NW] ಸೆರಾಫಿಯರು ಇದ್ದರು; ಪ್ರತಿಯೊಬ್ಬನು ಆರಾರು ರೆಕ್ಕೆಯುಳ್ಳವನಾಗಿ ಎರಡರಿಂದ ತನ್ನ ಮುಖವನ್ನು, ಎರಡರಿಂದ ತನ್ನ ಕಾಲುಗಳನ್ನು ಮುಚ್ಚಿಕೊಂಡು ಎರಡನ್ನು ಬಡಿಯುತ್ತಾ ನೆಲಸೋಕದೆ ನಿಂತಿದ್ದನು.” (ಯೆಶಾಯ 6:2) ಇಡೀ ಬೈಬಲಿನಲ್ಲಿ ಕೇವಲ ಯೆಶಾಯ ಅಧ್ಯಾಯ 6ರಲ್ಲಿ ಮಾತ್ರ ಸೆರಾಫಿಯರ ಕುರಿತಾಗಿ ಮಾತಾಡಲಾಗಿದೆ. ಇವರು ಯೆಹೋವನ ಸೇವೆಯಲ್ಲಿರುವ ದೇವದೂತರೆಂದೂ ಯೆಹೋವನ ಸ್ವರ್ಗೀಯ ಸಿಂಹಾಸನದ ಸುತ್ತ ನಿಂತಿರುವುದರಿಂದ ವಿಶೇಷ ಕೆಲಸಗಳಲ್ಲಿ ಮತ್ತು ಗೌರವದಲ್ಲಿ ತೀರ ಉನ್ನತ ಹುದ್ದೆಯವರೆಂಬುದೂ ವ್ಯಕ್ತ. ಅಹಂಕಾರಿಯಾಗಿದ್ದ ಉಜ್ಜೀಯ ರಾಜನಿಗೆ ವ್ಯತಿರಿಕ್ತವಾಗಿ, ಇವರು ತಮ್ಮ ಹುದ್ದೆಯನ್ನು ದೈನ್ಯಭಾವ ಮತ್ತು ಅಭಿಮಾನ ಮಿತಿಯಿಂದ ವಹಿಸುತ್ತಾರೆ. ಇವರು ಸ್ವರ್ಗೀಯ ಪರಮಾಧಿಕಾರಿಯ ಸನ್ನಿಧಾನದಲ್ಲಿರುವುದರಿಂದ, ಒಂದು ಜೊತೆ ರೆಕ್ಕೆಯಿಂದ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ ಮತ್ತು ತಾವು ನಿಂತಿರುವ ಪವಿತ್ರ ಸ್ಥಾನಕ್ಕೆ ಪೂಜ್ಯ ಭಾವನೆಯನ್ನು ತೋರಿಸಲಿಕ್ಕಾಗಿ ಇನ್ನೊಂದು ಜೊತೆ ರೆಕ್ಕೆಗಳಿಂದ ತಮ್ಮ ಪಾದಗಳನ್ನು ಮುಚ್ಚಿಕೊಳ್ಳುತ್ತಾರೆ. ವಿಶ್ವದ ಪರಮಾಧಿಕಾರಿಗೆ ಹತ್ತಿರದಲ್ಲಿರುವುದರಿಂದ ದೇವರ ಸ್ವಂತ ಮಹಿಮೆಯನ್ನು ಕುಂದಿಸದಂತೆ ಸೆರಾಫಿಯರು ತಮ್ಮನ್ನು ಅಪ್ರಮುಖರಾಗಿಸಿಕೊಳ್ಳುತ್ತಾರೆ. “ಜ್ವಲಿಸುವವರು” ಅಥವಾ “ಉರಿಯುತ್ತಿರುವವರು” ಎಂಬ ಅರ್ಥದ “ಸೆರಾಫಿಯರು” ಎಂಬ ಪದವು, ಅವರು ಕಾಂತಿಯನ್ನು ಹೊರಸೂಸುತ್ತಾರೆ ಎಂಬುದನ್ನು ಸೂಚಿಸುತ್ತದೆ. ಆದರೂ ಯೆಹೋವನ ಅಧಿಕ ಕಾಂತಿ ಮತ್ತು ಮಹಿಮೆಯನ್ನು ನೇರವಾಗಿ ನೋಡದಿರಲು ಅವರು ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ.
6. ಯೆಹೋವನ ಸಂಬಂಧದಲ್ಲಿ ಸೆರಾಫಿಯರು ಎಲ್ಲಿ ನಿಂತುಕೊಂಡಿದ್ದಾರೆ?
6 ಸೆರಾಫಿಯರು ತಮ್ಮ ರೆಕ್ಕೆಗಳ ಮೂರನೆಯ ಜೊತೆಯನ್ನು ಹಾರಾಡಲಿಕ್ಕಾಗಿ ಇಲ್ಲವೇ ಸಿಂಹಾಸನದ ಸುತ್ತಲೂ, ಅಥವಾ ಮೂಲ ಭಾಷೆಗನುಸಾರ ಅಕ್ಷರಾರ್ಥವಾಗಿ “ಆತನ ಮೇಲ್ಭಾಗದಲ್ಲಿರುವ” ಸ್ಥಾನಗಳಲ್ಲಿ ಸುಳಿದಾಡಲು ಇಲ್ಲವೇ ‘ನಿಲ್ಲಲು’ ನಿಸ್ಸಂದೇಹವಾಗಿಯೂ ಉಪಯೋಗಿಸುತ್ತಾರೆ. (ಹೋಲಿಸಿ ಧರ್ಮೋಪದೇಶಕಾಂಡ 31:15.) ಅವರ ಸ್ಥಾನದ ಕುರಿತಾಗಿ ಪ್ರೊಫೆಸರ್ ಫ್ರಾಂಟ್ಸ್ ಡೆಲಿಟ್ಶ್ ಹೇಳುವುದು: “ಈ ಸೆರಾಫಿಯರು ಸಿಂಹಾಸನಾರೂಢನ ತಲೆಗಿಂತ ಉನ್ನತರಾಗಿರಲಿಲ್ಲವೆಂಬುದು ನಿಶ್ಚಯ. ಬದಲಿಗೆ, ಆಲಯವನ್ನು ತುಂಬಿದ್ದ ಆತನ ಮೇಲಂಗಿಯ ಮೇಲಿಂದ ಸುಳಿದಾಡಿದರು.” (ಕಾಮೆಂಟರಿ ಆನ್ ದಿ ಓಲ್ಡ್ ಟೆಸ್ಟಮೆಂಟ್) ಇದು ಸಮಂಜಸವಾಗಿರುವಂತೆ ತೋರುತ್ತದೆ. ‘ಮೇಲ್ಭಾಗದಲ್ಲಿ ನಿಂತಿದ್ದ’ ಅವರು, ಯೆಹೋವನಿಗಿಂತ ಶ್ರೇಷ್ಠರಾಗಿ ಅಲ್ಲ, ಬದಲಾಗಿ ಆತನ ಸೇವೆಯನ್ನು ವಿಧೇಯರಾಗಿಯೂ ಸಿದ್ಧರಾಗಿಯೂ ಮಾಡಲು ನಿಂತಿರುತ್ತಾರೆ.
7. (ಎ) ಸೆರಾಫಿಯರು ಯಾವ ಕೆಲಸವನ್ನು ಮಾಡುತ್ತಾರೆ? (ಬಿ) ಸೆರಾಫಿಯರು ದೇವರ ಪರಿಶುದ್ಧತೆಯನ್ನು ಮೂರು ಬಾರಿ ಪ್ರಕಟಿಸುವುದೇಕೆ?
7 ಈಗ ಆ ವಿಶೇಷಾಧಿಕಾರದ ಸೆರಾಫಿಯರಿಗೆ ಕಿವಿಗೊಡಿ! “ಆಗ ಒಬ್ಬನು ಮತ್ತೊಬ್ಬನಿಗೆ—ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು; ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ ಎಂದು ಕೂಗಿ ಹೇಳಿದನು.” (ಯೆಶಾಯ 6:3) ಯೆಹೋವನ ಪವಿತ್ರತೆಯನ್ನು ಪ್ರಕಟಪಡಿಸಬೇಕು ಮತ್ತು ಆತನ ಮಹಿಮೆಯು ವಿಶ್ವವಿಡೀ ಅಂಗೀಕರಿಸಲಾಗುವಂತೆ ನೋಡಿಕೊಳ್ಳುವುದು ಅವರ ಕೆಲಸ. ಆ ವಿಶ್ವದ ಒಂದು ಭಾಗ ಭೂಮಿಯಾಗಿದೆ. ಆತನ ಸೃಷ್ಟಿಕ್ರಿಯೆಗಳಲ್ಲೆಲ್ಲ ಆತನ ಮಹಿಮೆಯು ಕಂಡುಬರುತ್ತದೆ ಮತ್ತು ಭೂನಿವಾಸಿಗಳೆಲ್ಲರಿಂದ ಅದು ಬೇಗನೆ ಗ್ರಹಿಸಲ್ಪಡಲಿದೆ. (ಅರಣ್ಯಕಾಂಡ 14:21; ಕೀರ್ತನೆ 19:1-3; ಹಬಕ್ಕೂಕ 2:14) “ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು” ಎಂಬ ಮುಮ್ಮಡಿ ಪ್ರಕಟನೆಯು ತ್ರಯೈಕ್ಯದ ಘೋಷಣೆಯಾಗಿರುವುದರ ಬದಲಿಗೆ, ದೇವರ ಪವಿತ್ರತೆಯ ಮುಮ್ಮಡಿ ಒತ್ತಿಹೇಳುವಿಕೆಯಾಗಿದೆ. (ಹೋಲಿಸಿ ಪ್ರಕಟನೆ 4:8.) ಅಂದರೆ ಯೆಹೋವನು ಪರಮ ಮಟ್ಟದಲ್ಲಿ ಪರಿಶುದ್ಧನು.
8. ಸೆರಾಫಿಯರ ಪ್ರಕಟನೆಗಳಿಂದ ಏನು ಫಲಿಸುತ್ತದೆ?
8 ಸೆರಾಫಿಯರ ಸಂಖ್ಯೆಯು ಕೊಡಲ್ಪಟ್ಟಿಲ್ಲವಾದರೂ, ಸಿಂಹಾಸನದ ಬಳಿ ಸೆರಾಫಿಯರ ಗುಂಪುಗಳು ಇದ್ದಿರಬಹುದು. ಸುಶ್ರಾವ್ಯ ಗೀತೆಗಳಲ್ಲಿ ಅವರು ದೇವರ ಪಾವಿತ್ರ್ಯ ಮತ್ತು ಮಹಿಮೆಯನ್ನು ಒಬ್ಬರ ಬಳಿಕ ಇನ್ನೊಬ್ಬರು ಪುನರಾವರ್ತಿಸಿ ಹಾಡುತ್ತಾರೆ. ಇದರಿಂದ ಯಾವ ಪರಿಣಾಮವನ್ನು ನಾವು ಗಮನಿಸುತ್ತೇವೆ? ಯೆಶಾಯನು ಮುಂದುವರಿಸಿ ಮಾತಾಡುವಾಗ ಪುನಃ ಕೇಳಿರಿ: “ಕೂಗುವವನ ಶಬ್ದಕ್ಕೆ ದ್ವಾರದ ಅಸ್ತಿವಾರವು ಕದಲಿತು; ಧೂಮವು ಮಂದಿರದಲ್ಲೆಲ್ಲಾ ತುಂಬಿತು.” (ಯೆಶಾಯ 6:4) ಬೈಬಲಿನಲ್ಲಿ, ಹೊಗೆ ಅಥವಾ ಮೋಡವು ದೇವರ ಸಾನ್ನಿಧ್ಯದ ದೃಶ್ಯ ಸಾಕ್ಷ್ಯವನ್ನು ಒದಗಿಸುತ್ತದೆ. (ವಿಮೋಚನಕಾಂಡ 19:18; 40:34, 35; 1 ಅರಸುಗಳು 8:10, 11; ಪ್ರಕಟನೆ 15:5-8) ಮಾನವ ಜೀವಿಗಳಾದ ನಾವು ಸಮೀಪಿಸಲಾಗದಂತಹ ರೀತಿಯ ಮಹಿಮೆಯನ್ನು ಅದು ಸೂಚಿಸುತ್ತದೆ.
ಅಯೋಗ್ಯನಾದರೂ ಶುದ್ಧೀಕರಿಸಲ್ಪಟ್ಟದ್ದು
9. (ಎ) ಆ ದರ್ಶನದಿಂದ ಯೆಶಾಯನ ಮೇಲೆ ಯಾವ ಪರಿಣಾಮವಾಗುತ್ತದೆ? (ಬಿ) ಯೆಶಾಯ ಮತ್ತು ಉಜ್ಜೀಯ ರಾಜನ ಮಧ್ಯೆ ಯಾವ ವ್ಯತ್ಯಾಸವು ತೋರಿಬರುತ್ತದೆ?
9 ಯೆಹೋವನ ಸಿಂಹಾಸನದ ಈ ದರ್ಶನವು ಯೆಶಾಯನ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತದೆ. ಅವನು ಬರೆಯುವುದು: “ಆಗ ನಾನು—ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ! ನಾಶವಾದೆನಲ್ಲಾ; ನಾನು ಹೊಲಸು ತುಟಿಯವನು, ಹೊಲಸುತುಟಿಯವರ ಮಧ್ಯದಲ್ಲಿ ವಾಸಿಸುವವನು; ಇಂಥ ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರನಾದ ಯೆಹೋವನನ್ನು ಕಂಡವು.” (ಯೆಶಾಯ 6:5) ಯೆಶಾಯ ಮತ್ತು ಉಜ್ಜೀಯ ರಾಜನ ಮಧ್ಯೆ ಇದ್ದ ಸ್ಪಷ್ಟವಾದ ವ್ಯತ್ಯಾಸವನ್ನು ನೋಡಿರಿ! ಉಜ್ಜೀಯನು ಅಭಿಷಿಕ್ತ ಯಾಜಕತ್ವದ ಹುದ್ದೆಯನ್ನು ಹಕ್ಕಿಲ್ಲದಿದ್ದರೂ ಆಕ್ರಮಿಸಿ ದೇವಾಲಯದ ಪರಿಶುದ್ಧ ಸ್ಥಳವನ್ನು ಅತಿಕ್ರಮಿಸಿದನು. ಉಜ್ಜೀಯನು ಚಿನ್ನದ ದೀಪಸ್ತಂಭಗಳು, ಚಿನ್ನದ ಧೂಪವೇದಿ ಮತ್ತು “ನೈವೇದ್ಯವಾದ ರೊಟ್ಟಿಗಳ ಮೇಜು”—ಇವುಗಳನ್ನು ಕಂಡರೂ, ಅವನು ಯೆಹೋವನ ಸಮ್ಮತಿಯ ಮೋರೆಯನ್ನು ನೋಡಲೂ ಇಲ್ಲ, ಆತನಿಂದ ವಿಶೇಷವಾದ ನೇಮಕವನ್ನು ಪಡೆಯಲೂ ಇಲ್ಲ. (1 ಅರಸುಗಳು 7:48-50) ಇನ್ನೊಂದು ಕಡೆ ಪ್ರವಾದಿ ಯೆಶಾಯನನ್ನು ನೋಡಿರಿ. ಅವನು ಯಾಜಕತ್ವವನ್ನು ಅಲಕ್ಷ್ಯಮಾಡಿದ್ದೂ ಇಲ್ಲ, ದೇವಾಲಯವನ್ನು ಅತಿಕ್ರಮಿಸಿದ್ದೂ ಇಲ್ಲ. ಆದರೂ ಅವನು ಪವಿತ್ರಾಲಯದಲ್ಲಿ ಯೆಹೋವನ ದರ್ಶನವನ್ನು ಕಂಡು ದೇವರಿಂದ ನೇರವಾದ ನೇಮಕವನ್ನು ಹೊಂದಿ ಗೌರವಿಸಲ್ಪಡುತ್ತಾನೆ. ಸೆರಾಫಿಯರು ದೇವಾಲಯದ ಸಿಂಹಾಸನಾರೂಢನಾದ ಕರ್ತನನ್ನು ನೋಡಲು ಧೈರ್ಯಮಾಡುವುದಿಲ್ಲವಾದರೂ, ಯೆಶಾಯನಿಗೆ ದರ್ಶನದಲ್ಲಿ “ರಾಜಾಧಿರಾಜನನ್ನು, ಸೇನಾಧೀಶ್ವರನಾದ ಯೆಹೋವನನ್ನು” ನೋಡುವ ಅನುಮತಿ ದೊರೆಯುತ್ತದೆ.
10. ದರ್ಶನವನ್ನು ನೋಡಿದಾಗ ಯೆಶಾಯನು ಭಯಪಡುವುದೇಕೆ?
10 ದೇವರ ಪರಿಶುದ್ಧತೆ ಮತ್ತು ತನ್ನ ಸ್ವಂತ ಪಾಪಪೂರ್ಣತೆಯ ಮಧ್ಯೆ ಇದ್ದ ತಾರತಮ್ಯವನ್ನು ನೋಡಿ ಯೆಶಾಯನಿಗೆ ತಾನು ತೀರ ಅಶುದ್ಧನೆಂಬ ಅನಿಸಿಕೆಯಾಗುತ್ತದೆ. ಭಯಭರಿತನಾಗಿ, ತಾನೀಗ ಸಾಯುವೆನೆಂದು ಅವನು ನೆನಸುತ್ತಾನೆ. (ವಿಮೋಚನಕಾಂಡ 33:20) ಸೆರಾಫಿಯರು ಶುದ್ಧ ತುಟಿಗಳಿಂದ ದೇವರನ್ನು ಸ್ತುತಿಸಬೇಕೆಂದು ಅವನು ಕೇಳುತ್ತಾನಾದರೂ, ತನ್ನ ಸ್ವಂತ ತುಟಿಗಳ ಅಶುದ್ಧತೆ ಮತ್ತು, ತಾನು ಯಾರ ಮಧ್ಯೆ ವಾಸಿಸುತ್ತಿದ್ದೇನೊ ಹಾಗೂ ತಾನು ಯಾರ ಮಾತುಗಳನ್ನು ಕೇಳುತ್ತಿದ್ದೇನೊ ಅವರ ತುಟಿಗಳ ಅಶುದ್ಧತೆಯು ಅವನನ್ನು ಇನ್ನೂ ಮಲಿನಗೊಳಿಸುತ್ತದೆ. ಯೆಹೋವನು ಪರಿಶುದ್ಧನು ಮತ್ತು ಆತನ ಸೇವಕರು ಅದೇ ಗುಣವನ್ನು ಪ್ರತಿಬಿಂಬಿಸತಕ್ಕದ್ದು. (1 ಪೇತ್ರ 1:15, 16) ಯೆಶಾಯನನ್ನು ಆಗಲೇ ದೇವರ ವದನಕನಾಗಿ ಆರಿಸಿಕೊಳ್ಳಲಾಗಿತ್ತು. ಆದರೂ ಅವನು ತನ್ನ ಪಾಪಪೂರ್ಣ ಸ್ಥಿತಿಯ ನಿಜತ್ವದಿಂದ ತೀರ ಮನಮುರಿದವನಾಗಿದ್ದನು. ಆ ಮಹಿಮಾಭರಿತನೂ ಪವಿತ್ರನೂ ಆದ ಅರಸನ ವದನಕನಾಗಲು ತಾನು ಅಶುದ್ಧನೆಂದವನು ನೆನಸುತ್ತಾನೆ. ಇದಕ್ಕೆ ಸ್ವರ್ಗೀಯ ಪ್ರತ್ಯುತ್ತರವೇನಾಗಿದ್ದೀತು?
11. (ಎ) ಒಬ್ಬ ಸೆರಾಫಿಯನು ಏನು ಮಾಡುತ್ತಾನೆ, ಮತ್ತು ಈ ಕ್ರಿಯೆ ಏನನ್ನು ಸೂಚಿಸಿತು? (ಬಿ) ದೇವರ ಸೇವಕರಾಗಿರುವ ನಮಗೆ ಅಯೋಗ್ಯರೆಂಬ ಅನಿಸಿಕೆಯಾಗುವಾಗ, ಸೆರಾಫಿಯನು ಯೆಶಾಯನಿಗೆ ಹೇಳಿದ ಮಾತುಗಳನ್ನು ಜ್ಞಾಪಿಸಿಕೊಳ್ಳುವುದು ನಮಗೆ ಹೇಗೆ ಸಹಾಯ ಮಾಡಬಲ್ಲದು?
11 ಯೆಹೋವನ ಸಾನ್ನಿಧ್ಯದಿಂದ ದೀನಭಾವದ ಯೆಶಾಯನನ್ನು ಅಟ್ಟುವ ಬದಲಿಗೆ, ಸೆರಾಫಿಯರು ಅವನಿಗೆ ಸಹಾಯಮಾಡಲು ಮುಂದೆ ಬರುತ್ತಾರೆ. ದಾಖಲೆಯು ತಿಳಿಸುವುದು: “ಸೆರಾಫಿಯರಲ್ಲಿ ಒಬ್ಬನು ಯಜ್ಞವೇದಿಯಿಂದ ತಾನು ತಂಡಸದಲ್ಲಿ ತೆಗೆದ ಕೆಂಡವನ್ನು ಕೈಯಲ್ಲಿ ಹಿಡಿದುಕೊಂಡು ನನ್ನ ಬಳಿಗೆ ಹಾರಿ ಬಂದು ನನ್ನ ಬಾಯಿಗೆ ಮುಟ್ಟಿಸಿ—ಇಗೋ, ಇದು ನಿನ್ನ ತುಟಿಗಳಿಗೆ ತಗಲಿತು; ನಿನ್ನ ದೋಷವು ನೀಗಿತು, ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತವಾಯಿತು ಅಂದನು.” (ಯೆಶಾಯ 6:6, 7) ಸಾಂಕೇತಿಕ ಅರ್ಥದಲ್ಲಿ, ಬೆಂಕಿಗೆ ಶುದ್ಧೀಕರಿಸುವ ಶಕ್ತಿಯಿದೆ. ಯಜ್ಞವೇದಿಯ ಪವಿತ್ರ ಬೆಂಕಿಯಿಂದ ಜ್ವಲಿಸುವ ಕೆಂಡವನ್ನು ಯೆಶಾಯನ ತುಟಿಗಳಿಗೆ ತಗಲಿಸಿದ್ದು ಏನನ್ನು ಸೂಚಿಸಿತು? ಏನೆಂದರೆ ಸೆರಾಫಿಯು, ದೇವರ ಅನುಗ್ರಹ ಮತ್ತು ಆಜ್ಞೆಯನ್ನು ಪಡೆಯಲು ಯೋಗ್ಯವಾಗುವಷ್ಟರ ಮಟ್ಟಿಗೆ ಯೆಶಾಯನ ಪಾಪಗಳಿಗೆ ಪ್ರಾಯಶ್ಚಿತ್ತ ದೊರಕಿದೆ ಎಂಬ ಆಶ್ವಾಸನೆಯನ್ನು ಅವನಿಗೆ ನೀಡುತ್ತಿದ್ದಾನೆ. ಇದು ನಮಗೆ ಎಂತಹ ಪುನರಾಶ್ವಾಸನೆಯ ಸಂಗತಿ! ದೇವರನ್ನು ಸಮೀಪಿಸುವ ವಿಷಯದಲ್ಲಿ ನಾವೂ ಪಾಪಭರಿತರು ಮತ್ತು ಅಯೋಗ್ಯರು. ಆದರೆ ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಬೆಲೆಯಿಂದಾಗಿ ನಾವು ಬಿಡುಗಡೆಹೊಂದಿ, ದೇವರ ಅನುಗ್ರಹವನ್ನು ಪಡೆದು ಈಗ ಆತನನ್ನು ಪ್ರಾರ್ಥನೆಯಲ್ಲಿ ಸಮೀಪಿಸಬಲ್ಲೆವು.—2 ಕೊರಿಂಥ 5:18, 21; 1 ಯೋಹಾನ 4:10.
12. ಯೆಶಾಯನು ಯಾವ ಯಜ್ಞವೇದಿಯನ್ನು ನೋಡುತ್ತಾನೆ, ಮತ್ತು ಬೆಂಕಿಯ ಪರಿಣಾಮವೇನು?
12 ಇದೊಂದು ದರ್ಶನವಾಗಿದೆಯೆಂದು ನಮಗೆ ಪುನಃ ನೆನಪು ಹುಟ್ಟಿಸುವುದು “ಯಜ್ಞವೇದಿ”ಯ ಪ್ರಸ್ತಾಪವೇ. (ಹೋಲಿಸಿ ಪ್ರಕಟನೆ 8:3; 9:13.) ಯೆರೂಸಲೇಮ್ ದೇವಾಲಯದಲ್ಲಿ ಎರಡು ಯಜ್ಞವೇದಿಗಳಿದ್ದವು. ಅತಿ ಪರಿಶುದ್ಧ ಸ್ಥಳದ ಪರದೆಗೆ ತುಸು ಹತ್ತಿರದಲ್ಲಿ ಧೂಪಹಾಕುವ ಚಿಕ್ಕ ವೇದಿಯಿತ್ತು. ಮತ್ತು ದೇವಾಲಯದ ಪ್ರವೇಶದ್ವಾರದ ಮುಂದೆ ಯಜ್ಞಕ್ಕಾಗಿ ದೊಡ್ಡ ವೇದಿಯಿತ್ತು. ಇಲ್ಲಿ ಬೆಂಕಿಯನ್ನು ಸದಾ ಉರಿಸಲಾಗುತ್ತಿತ್ತು. (ಯಾಜಕಕಾಂಡ 6:12, 13; 16:12, 13) ಆದರೆ ಈ ಭೌಮಿಕ ಯಜ್ಞವೇದಿಗಳು ಹೆಚ್ಚು ದೊಡ್ಡ ಸಂಗತಿಗಳನ್ನು ಪ್ರತಿನಿಧಿಸಿದವು ಅಥವಾ ಚಿತ್ರಿಸಿದವು. (ಇಬ್ರಿಯ 8:5; 9:23; 10:5-10) ಸೊಲೊಮೋನ ರಾಜನು ದೇವಾಲಯವನ್ನು ಪ್ರತಿಷ್ಠಿಸಿದಾಗ ಯಜ್ಞವೇದಿಯ ಮೇಲಿದ್ದ ಸರ್ವಾಂಗಹೋಮವನ್ನು ದಹಿಸಿದ್ದು ಸ್ವರ್ಗದಿಂದ ಬಂದ ಅಗ್ನಿಯಾಗಿತ್ತು. (2 ಪೂರ್ವಕಾಲವೃತ್ತಾಂತ 7:1-3) ಹಾಗೆಯೇ, ಈಗ ಯೆಶಾಯನ ತುಟಿಗಳ ಅಶುದ್ಧತೆಯನ್ನು ನೀಗಿಸುವುದು ನಿಜವಾದ, ಸ್ವರ್ಗೀಯ ಯಜ್ಞವೇದಿಯಿಂದ ಬಂದ ಬೆಂಕಿಯೇ.
13. ಯೆಹೋವನು ಯಾವ ಪ್ರಶ್ನೆಯನ್ನು ಕೇಳುತ್ತಾನೆ, ಮತ್ತು “ನಮಗೆ” ಎಂದು ಹೇಳುವಾಗ ಆತನು ಯಾರನ್ನು ಸೇರಿಸುತ್ತಾನೆ?
13 ನಾವು ಈಗ ಯೆಶಾಯನು ಏನನ್ನು ಕೇಳಿಸಿಕೊಂಡನೊ ಅದಕ್ಕೆ ಅವನ ಜೊತೆಯಲ್ಲಿ ಕಿವಿಗೊಡೋಣ. “ಆಗ, ಯಾವನನ್ನು [“ನಾನು”, NW] ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು ಎಂಬ ಯೆಹೋವನ ನುಡಿಯನ್ನು ಕೇಳಿ, ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು ಅಂದೆನು.” (ಯೆಶಾಯ 6:8) ಯೆಹೋವನಿಂದ ಕೇಳಲ್ಪಟ್ಟ ಪ್ರಶ್ನೆಯು, ಯೆಶಾಯನಿಂದ ಉತ್ತರ ಪಡೆಯುವಂತೆ ರಚಿಸಲಾಗಿತ್ತು ಎಂಬುದು ಸ್ಪಷ್ಟ. ಏಕೆಂದರೆ ದರ್ಶನದಲ್ಲಿ ಇನ್ನಾವ ಮಾನವ ಪ್ರವಾದಿಯೂ ಕಂಡುಬರುವುದಿಲ್ಲ. ಯೆಶಾಯನು ಯೆಹೋವನ ಸಂದೇಶವಾಹಕನಾಗುವಂತೆ ಇದೊಂದು ಆಮಂತ್ರಣವಾಗಿತ್ತೆಂಬುದು ಖಂಡಿತ. ಆದರೆ, “ಯಾವನು ನಮಗೋಸ್ಕರ ಹೋಗುವನು” ಎಂದು ಯೆಹೋವನು ಕೇಳುವುದೇಕೆ? ಸರ್ವನಾಮ ಏಕವಚನವಾದ “ನಾನು” ಎಂಬುದರಿಂದ ಸರ್ವನಾಮ ಬಹುವಚನವಾದ “ನಮಗೆ” ಎಂಬುದಕ್ಕೆ ಮಾಡಿದ ಬದಲಾವಣೆಯಿಂದ ಯೆಹೋವನು ಕಡಿಮೆ ಪಕ್ಷ ಇನ್ನೊಬ್ಬ ವ್ಯಕ್ತಿಯನ್ನಾದರೂ ತನ್ನೊಂದಿಗೆ ಸೇರಿಸಿಕೊಳ್ಳುತ್ತಾನೆ. ಯಾರದು? ಇವನು ಕೊನೆಗೆ ಮಾನವನಾದ ಯೇಸು ಕ್ರಿಸ್ತನಾಗಿ ಪರಿಣಮಿಸಿದ ಯೆಹೋವನ ಏಕಜಾತ ಪುತ್ರನಲ್ಲವೊ? ಖಂಡಿತವಾಗಿಯೂ. ದೇವರು ಇದೇ ಪುತ್ರನಿಗೆ, “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ” ಎಂದು ಹೇಳಿದ್ದನು. (ಆದಿಕಾಂಡ 1:26; ಜ್ಞಾನೋಕ್ತಿ 8:30, 31) ಹೌದು, ಸ್ವರ್ಗೀಯ ಆಸ್ಥಾನಗಳಲ್ಲಿ ಯೆಹೋವನೊಂದಿಗೆ ಇರುವವನು ಆತನ ಏಕಜಾತ ಪುತ್ರನೇ.—ಯೋಹಾನ 1:14.
14. ಯೆಹೋವನ ಆಮಂತ್ರಣಕ್ಕೆ ಯೆಶಾಯನು ಹೇಗೆ ಪ್ರತಿವರ್ತಿಸುತ್ತಾನೆ, ಮತ್ತು ಅವನು ನಮಗೆ ಯಾವ ಮಾದರಿಯನ್ನಿಡುತ್ತಾನೆ?
14 ಯೆಶಾಯನು ಪ್ರತ್ಯುತ್ತರಿಸಲು ಹಿಂಜರಿಯುವುದಿಲ್ಲ! ಸಂದೇಶವು ಏನೇ ಆಗಿದ್ದರೂ ಅವನು ಒಡನೆ ಉತ್ತರಿಸುವುದು: “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು.” ಆ ನೇಮಕವನ್ನು ಅಂಗೀಕರಿಸಿದರೆ ತನಗೇನು ಲಾಭವೆಂದು ಸಹ ಅವನು ಕೇಳುವುದಿಲ್ಲ. ‘ಸುವಾರ್ತೆಯನ್ನು ಲೋಕದಲ್ಲೆಲ್ಲಾ ಸಾರಬೇಕು’ ಎಂಬ ಆಜ್ಞೆಯಿರುವ ಇಂದಿನ ಎಲ್ಲ ದೇವರ ಸೇವಕರಿಗೆ ಅವನ ಸಿದ್ಧಮನಸ್ಸು ಉತ್ತಮ ಮಾದರಿಯಾಗಿದೆ. (ಮತ್ತಾಯ 24:14) ಯೆಶಾಯನಂತೆಯೇ, ಅವರು ನಂಬಿಕೆಯಿಂದ ತಮ್ಮ ನೇಮಕಕ್ಕೆ ಅಂಟಿಕೊಂಡು, ಅಧಿಕಾಂಶ ಜನರು ಅನುಕೂಲಕರವಾಗಿ ಪ್ರತಿಕ್ರಿಯಿಸದಿದ್ದರೂ, “ಎಲ್ಲಾ ಜನಾಂಗಗಳಿಗೆ ಸಾಕ್ಷಿ”ಯನ್ನು ನೀಡುತ್ತಾರೆ. ಮತ್ತು ಯೆಶಾಯನಂತೆಯೇ, ತಮ್ಮ ಆಜ್ಞೆಗೆ ಪರಮಾಧಿಕಾರಿಯ ಮನ್ನಣೆ ಇದೆಯೆಂದು ತಿಳಿದವರಾಗಿ, ಅವರು ಭರವಸೆಯಿಂದ ಮುಂದೆ ಸಾಗುತ್ತಾರೆ.
ಯೆಶಾಯನಿಗೆ ಕೊಡಲ್ಪಟ್ಟ ಆಜ್ಞೆ
15, 16. (ಎ) ಯೆಶಾಯನು ‘ಈ ಜನರಿಗೆ’ ಏನು ಹೇಳಬೇಕಾಗಿತ್ತು, ಮತ್ತು ಅವರ ಪ್ರತಿವರ್ತನೆಯೇನು? (ಬಿ) ಜನರ ಆ ಪ್ರತಿವರ್ತನೆಯು ಯೆಶಾಯನು ಮಾಡಿದ ಯಾವುದೇ ತಪ್ಪಿನಿಂದಾಯಿತೊ? ವಿವರಿಸಿ.
15 ಈಗ ಯೆಹೋವನು ಯೆಶಾಯನು ಹೇಳಬೇಕಾದ ಸಂಗತಿಗಳನ್ನೂ ಅದಕ್ಕೆ ಜನರ ಪ್ರತಿವರ್ತನೆಯನ್ನೂ ತಿಳಿಸುತ್ತಾನೆ: “ನೀನು ಆ ಜನರ ಬಳಿಗೆ ಹೋಗಿ—ನೀವು [“ಪದೇ ಪದೇ,” NW] ಕಿವಿಯಾರೆ ಕೇಳಿದರೂ ತಿಳಿಯಬಾರದು, ಕಣ್ಣಾರೆ ಕಂಡರೂ ಗ್ರಹಿಸಬಾರದು ಎಂದು ತಿಳಿಸಿ, ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ಗ್ರಹಿಸಿ ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದದ ಹಾಗೆ ಈ ಜನರ ಹೃದಯಕ್ಕೆ ಕೊಬ್ಬೇರಿಸಿ ಕಿವಿಯನ್ನು ಮಂದಮಾಡಿ ಕಣ್ಣಿಗೆ ಅಂಟುಬಳಿ.” (ಯೆಶಾಯ 6:9, 10) ಅಂದರೆ, ಯೆಶಾಯನು ಒರಟಾಗಿಯೂ ನಯವಿಲ್ಲದವನಾಗಿಯೂ ಮಾತಾಡಿ, ಯೆಹೂದ್ಯರನ್ನು ಹಿಮ್ಮೆಟ್ಟಿಸಿ, ಅವರು ಯೆಹೋವನಿಗೆ ಪ್ರತಿಕೂಲವಾಗಿರುವಂತೆ ಮಾಡಬೇಕೆಂದು ಇದರ ಅರ್ಥವೊ? ಖಂಡಿತವಾಗಿಯೂ ಅಲ್ಲ! ಏಕೆಂದರೆ ಇವರು ಯೆಶಾಯನ ಸ್ವಂತ ಜನರಾಗಿದ್ದಾರೆ, ಅವನ ಸಂಬಂಧಿಗಳಾಗಿದ್ದಾರೆ. ಆದರೆ ಯೆಶಾಯನು ತನ್ನ ಕೆಲಸವನ್ನು ಎಷ್ಟೇ ನಂಬಿಗಸ್ತಿಕೆಯಿಂದ ನೆರವೇರಿಸಲಿ, ತನ್ನ ಸಂದೇಶಕ್ಕೆ ಆ ಜನರು ಹೇಗೆ ಪ್ರತಿವರ್ತಿಸುವರೆಂದು ಯೆಹೋವನ ಮಾತುಗಳು ಸೂಚಿಸುತ್ತವೆ.
16 ತಪ್ಪು ಜನರದ್ದೇ. ಯೆಶಾಯನು ಅವರಿಗೆ “ಪದೇ ಪದೇ” ಮಾತಾಡಲಿದ್ದನು. ಆದರೆ ಅವರು ಸಂದೇಶವನ್ನು ಅಂಗೀಕರಿಸುವುದೂ ಇಲ್ಲ, ತಿಳಿವಳಿಕೆಯನ್ನು ಪಡೆಯುವುದೂ ಇಲ್ಲ. ಹೆಚ್ಚಿನವರು, ಪೂರ್ತಿ ಕುರುಡರೂ ಕಿವುಡರೂ ಆಗಿದ್ದಾರೊ ಎಂಬಂತೆ ಹಟಮಾರಿಗಳೂ ಕಿವಿಗೊಡದವರೂ ಆಗಲಿದ್ದರು. ಯೆಶಾಯನು ಅವರ ಬಳಿಗೆ ಪದೇ ಪದೇ ಹೋಗುವ ಮೂಲಕ, “ಈ ಜನರು” ಅರ್ಥಮಾಡಿಕೊಳ್ಳಲು ಬಯಸದವರು ಎಂದು ತೋರಿಸಿಕೊಡುವಂತೆ ಬಿಡುವನು. ಅವರಿಗೆ ಯೆಶಾಯನು ಕೊಡುವ ಅಂದರೆ ದೇವರು ಕೊಡುವ ಸಂದೇಶಕ್ಕೆ ಅವರು ತಮ್ಮ ಹೃದಮನಗಳನ್ನು ಮುಚ್ಚಿಬಿಟ್ಟಿದ್ದಾರೆಂದು ಅವರು ತೋರಿಸಿಕೊಡಲಿದ್ದರು. ಇಂದಿನ ಜನರ ವಿಷಯದಲ್ಲೂ ಇದು ಎಷ್ಟು ಸತ್ಯ! ಬೇಗನೆ ಬರಲಿರುವ ದೇವರ ರಾಜ್ಯದ ಕುರಿತ ಸುವಾರ್ತೆಯನ್ನು ಯೆಹೋವನ ಸಾಕ್ಷಿಗಳು ಸಾರುವಾಗ ಎಷ್ಟೋ ಮಂದಿ ಅದನ್ನು ಆಲಿಸಲು ನಿರಾಕರಿಸುತ್ತಾರೆ.
17. “ಎಂದಿನ ತನಕ” ಎಂದು ಯೆಶಾಯನು ಕೇಳುವಾಗ, ಅವನು ಯಾವುದನ್ನು ಸೂಚಿಸಿ ಮಾತಾಡುತ್ತಾನೆ?
17 ಯೆಶಾಯನು ಚಿಂತಿತನಾಗುತ್ತಾನೆ: “ಅದಕ್ಕೆ ನಾನು—ಯೆಹೋವನೇ, ಇದು ಎಂದಿನ ತನಕ? ಎಂದು ಕೇಳಲು ಆತನು—ಯೆಹೋವನು ಜನರನ್ನು ದೂರ ತೊಲಗಿಸಿ ದೇಶದಲ್ಲಿ ಹಾಳು ಹೆಚ್ಚಿ ಪಟ್ಟಣಗಳು ಜನರಿಲ್ಲದೆ ಮನೆಗಳು ನಿವಾಸಿಗಳಿಲ್ಲದೆ ಧ್ವಂಸವಾಗಿ ಭೂಮಿಯು ತೀರಾ ಹಾಳಾಗುವ ತನಕ ಹೀಗಿರುವದು.” (ಯೆಶಾಯ 6:11, 12) “ಇದು ಎಂದಿನ ತನಕ?” ಎಂದು ಕೇಳುವಾಗ, ಆ ಆಲಿಸದ ಜನರಿಗೆ ಅವನು ಎಷ್ಟು ಕಾಲದ ತನಕ ಸಾರಬೇಕೆಂದು ಯೆಶಾಯನು ಕೇಳುತ್ತಿಲ್ಲ. ಬದಲಿಗೆ, ಅವನು ಜನರ ಕುರಿತು ಚಿಂತಿತನಾಗಿ, ಅವರ ಕೆಟ್ಟ ಆತ್ಮಿಕ ಸ್ಥಿತಿಯು ಎಷ್ಟು ಕಾಲ ಮುಂದುವರಿಯುವುದೆಂದೂ ಭೂಮಿಯಲ್ಲಿ ಯೆಹೋವನ ನಾಮವು ಎಷ್ಟು ಕಾಲದ ತನಕ ಅಗೌರವಕ್ಕೊಳಗಾಗುವುದೆಂದೂ ಪ್ರಶ್ನಿಸುತ್ತಾನೆ. (ಕೀರ್ತನೆ 74:9-11ನ್ನು ನೋಡಿರಿ.) ಹಾಗಾದರೆ, ಈ ಅರ್ಥಹೀನ ಪರಿಸ್ಥಿತಿಯು ಎಷ್ಟು ಕಾಲ ಮುಂದುವರಿಯಲಿಕ್ಕಿತ್ತು?
18. ಜನರ ಕೆಟ್ಟ ಆತ್ಮಿಕ ಸ್ಥಿತಿಯು ಎಂದಿನ ತನಕ ಮುಂದುವರಿಯಲಿತ್ತು, ಮತ್ತು ಆ ಪ್ರವಾದನೆಯ ಪೂರ್ತಿ ನೆರವೇರಿಕೆಯನ್ನು ನೋಡಲು ಯೆಶಾಯನು ಬದುಕಿ ಉಳಿಯಲಿದ್ದನೊ?
18 ಜನರ ಕೆಟ್ಟ ಆತ್ಮಿಕ ಸ್ಥಿತಿಯು, ದೇವರಿಗೆ ಅವರು ಅವಿಧೇಯರಾದುದಕ್ಕೆ ಆತನ ಒಡಂಬಡಿಕೆಯಲ್ಲಿ ಕೊಡಲ್ಪಟ್ಟಿರುವ ಎಲ್ಲ ದುಷ್ಪರಿಣಾಮಗಳನ್ನು ಅವರು ಅನುಭವಿಸುವ ತನಕ ಮುಂದುವರಿಯುವುದೆಂದು ಯೆಹೋವನ ಉತ್ತರವು ತಿಳಿಯಪಡಿಸುತ್ತದೆ. (ಯಾಜಕಕಾಂಡ 26:21-33; ಧರ್ಮೋಪದೇಶಕಾಂಡ 28:49-68) ಜನಾಂಗವು ಹಾಳಾಗಿ, ಜನರು ದೇಶಭ್ರಷ್ಟರಾಗಿ, ದೇಶವು ನಿರ್ಜನವಾಗುವುದು. ಯೆಶಾಯನು 40ಕ್ಕೂ ಹೆಚ್ಚು ವರ್ಷಕಾಲ ಪ್ರವಾದಿಸುತ್ತಾ, ಉಜ್ಜೀಯ ರಾಜನ ಮರಿಮಗನಾದ ಹಿಜ್ಕೀಯನ ಆಳಿಕೆಯ ವರೆಗೆ ಮುಂದುವರಿದರೂ, ಬಾಬೆಲಿನ ಸೈನ್ಯವು ಸಾ.ಶ.ಪೂ. 607ರಲ್ಲಿ ಯೆರೂಸಲೇಮನ್ನೂ ಅದರ ದೇವಾಲಯವನ್ನೂ ನಾಶಪಡಿಸುವುದನ್ನು ನೋಡಲು ಬದುಕಿರುವುದಿಲ್ಲ. ಆದರೂ, ಯೆಶಾಯನು ತನಗೆ ದೊರಕಿದ ನೇಮಕವನ್ನು ಸಾಯುವ ವರೆಗೆ ಅಥವಾ ಆ ರಾಷ್ಟ್ರೀಯ ವಿಪತ್ತು ಸಂಭವಿಸುವ ಸರಿಸುಮಾರು 100 ವರ್ಷಗಳ ಮುಂಚೆ ನಂಬಿಗಸ್ತಿಕೆಯಿಂದ ಪೂರೈಸಲಿದ್ದನು.
19. ಆ ಜನಾಂಗವು ಮರದಂತೆ ಕಡಿಯಲ್ಪಡಲಿದ್ದರೂ, ದೇವರು ಯೆಶಾಯನಿಗೆ ಯಾವ ಆಶ್ವಾಸನೆಯನ್ನು ಕೊಡುತ್ತಾನೆ?
19 ಯೆಹೂದವನ್ನು ‘ತೀರಾ ಹಾಳಾಗಿಸುವ’ ನಾಶನವು ಬರುವುದು ಖಂಡಿತವಾಗಿದ್ದರೂ, ಪರಿಸ್ಥಿತಿಯು ಅಷ್ಟೊಂದು ನಿರೀಕ್ಷಾಹೀನವಾಗಿರುವುದಿಲ್ಲ. (2 ಅರಸುಗಳು 25:1-26) ಯೆಹೋವನು ಯೆಶಾಯನಿಗೆ ಆಶ್ವಾಸನೆ ನೀಡುವುದು: “ಆಗ ದೇಶದಲ್ಲಿ ಹತ್ತನೆಯ ಒಂದು ಭಾಗ ಉಳಿದಿದ್ದರೂ ಅದೂ ಕೂಡಾ ನಾಶವಾಗುವದು; ಏಲಾ ಅಲ್ಲೋನ್ ಮರಗಳನ್ನೂ ಕಡಿದ ಮೇಲೆ ಅವುಗಳ ಬುಡವು ನಿಲ್ಲುವ ಹಾಗೆ ದೇವಕುಲವು ಮೋಟು ಬುಡವಾಗಿ ನಿಲ್ಲುವದು.” (ಯೆಶಾಯ 6:13) ಹೌದು, ದೊಡ್ಡ ಮರವನ್ನು ಕಡಿದುಹಾಕಿದ ಮೇಲೆ ಅದರ ಬುಡವು ಉಳಿಯುವಂತೆಯೇ, “ಹತ್ತನೆಯ ಒಂದು ಭಾಗ . . . ದೇವಕುಲವು” ಉಳಿಯುವುದು. ಒಂದು ಪವಿತ್ರ ಜನಶೇಷವು ತನ್ನ ಜನರ ಮಧ್ಯೆ ಕಂಡುಬರುವುದೆಂಬ ಈ ಆಶ್ವಾಸನೆಯು ಯೆಶಾಯನನ್ನು ಸಂತೈಸಿತೆಂಬುದರಲ್ಲಿ ಸಂಶಯವಿಲ್ಲ. ಆ ಜನಾಂಗವು, ಕಟ್ಟಿಗೆಗಾಗಿ ಕಡಿಯಲ್ಪಟ್ಟ ಒಂದು ದೊಡ್ಡ ಮರದಂತೆ ಪುನಃ ಒಮ್ಮೆ ಸುಡಲ್ಪಡುತ್ತದಾದರೂ ಸಾಂಕೇತಿಕವಾದ ಇಸ್ರಾಯೇಲ್ ಮರದ ಮಹತ್ವವುಳ್ಳ ಬುಡವೊಂದು ಉಳಿಯುವುದು. ಅದು ಯೆಹೋವನಿಗೆ ಒಂದು ಪರಿಶುದ್ಧವಾದ ಸಂತಾನ ಅಥವಾ ಸಂತತಿಯಾಗಿರುವುದು. ತಕ್ಕ ಸಮಯದಲ್ಲಿ ಅದು ಪುನಃ ಚಿಗುರಿ, ಮರವು ಪುನಃ ಬೆಳೆಯುವುದು.—ಹೋಲಿಸಿ ಯೋಬ 14:7-9; ದಾನಿಯೇಲ 4:26.
20. ಯೆಶಾಯನ ಪ್ರವಾದನೆಯ ಕೊನೆಯ ಭಾಗದ ಮೊದಲನೆಯ ನೆರವೇರಿಕೆಯು ಹೇಗಾಯಿತು?
20 ಆ ಪ್ರವಾದನಾ ಮಾತುಗಳು ನಿಜವಾಗಿ ಪರಿಣಮಿಸಿದವೊ? ಹೌದು. ಹೇಗೆಂದರೆ, ಯೆಹೂದ ದೇಶವು ಹಾಳುಬಿದ್ದು ಎಪ್ಪತ್ತು ವರ್ಷಗಳ ನಂತರ ದೇವಭಯವಿದ್ದ ಒಂದು ಜನಶೇಷವು ಬಾಬೆಲಿನ ದೇಶಭ್ರಷ್ಟತೆಯಿಂದ ಹಿಂದಿರುಗಿ ಬಂತು. ಅವರು ದೇವಾಲಯವನ್ನೂ ನಗರವನ್ನೂ ಪುನಃ ಕಟ್ಟಿ ದೇಶದಲ್ಲಿ ಸತ್ಯಾರಾಧನೆಯನ್ನು ಸ್ಥಾಪಿಸಿದರು. ತಮ್ಮ ದೇವದತ್ತ ಸ್ವದೇಶಕ್ಕೆ ಯೆಹೂದ್ಯರಿಗಾದ ಈ ಪುನಸ್ಸ್ಥಾಪನೆಯು ಯೆಹೋವನು ಯೆಶಾಯನಿಗೆ ಕೊಟ್ಟಿದ್ದ ಈ ಪ್ರವಾದನೆಯ ಎರಡನೆಯ ನೆರವೇರಿಕೆಯನ್ನು ಸಾಧ್ಯಗೊಳಿಸಿತು. ಅದು ಯಾವ ನೆರವೇರಿಕೆಯಾಗಲಿತ್ತು?—ಎಜ್ರ 1:1-4.
ಇನ್ನಿತರ ನೆರವೇರಿಕೆಗಳು
21-23. (ಎ) ಯೆಶಾಯನ ಪ್ರವಾದನೆಯ ಪ್ರಥಮ ಶತಮಾನದ ನೆರವೇರಿಕೆಯು ಯಾರಲ್ಲಾಯಿತು, ಮತ್ತು ಹೇಗೆ? (ಬಿ) ಒಂದನೆಯ ಶತಮಾನದಲ್ಲಿನ “ದೇವಕುಲವು” ಯಾರನ್ನು ಒಳಗೊಂಡಿದೆ, ಮತ್ತು ಅದು ಹೇಗೆ ರಕ್ಷಿಸಲ್ಪಟ್ಟಿತು?
21 ಯೆಶಾಯನ ಈ ಪ್ರವಾದನಾತ್ಮಕ ಕೆಲಸವು ಮೆಸ್ಸೀಯನಾದ ಯೇಸು ಕ್ರಿಸ್ತನು ಸುಮಾರು 800 ವರ್ಷಗಳ ನಂತರ ಮಾಡಲಿದ್ದ ಕೆಲಸದ ಮುನ್ಛಾಯೆಯಾಗಿತ್ತು. (ಯೆಶಾಯ 8:18; 61:1, 2; ಲೂಕ 4:16-21; ಇಬ್ರಿಯ 2:13, 14) ಯೇಸುವು, ಯೆಶಾಯನಿಗಿಂತ ಹೆಚ್ಚು ಶ್ರೇಷ್ಠನಾಗಿದ್ದರೂ, “ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ,” ಎಂದು ಹೇಳುತ್ತ, ತನ್ನ ಸ್ವರ್ಗೀಯ ತಂದೆಯಿಂದ ಕಳುಹಿಸಲ್ಪಡಲು ಅಷ್ಟೇ ಸಿದ್ಧಮನಸ್ಸಿನವನಾಗಿದ್ದನು.—ಇಬ್ರಿಯ 10:5-9; ಕೀರ್ತನೆ 40:6-8.
22 ಯೆಶಾಯನಂತೆಯೇ, ಯೇಸುವು ತನ್ನ ನಿಯಮಿತ ಕೆಲಸವನ್ನು ನಂಬಿಗಸ್ತಿಕೆಯಿಂದ ನಡೆಸುತ್ತ, ಜನರಿಂದ ಅದೇ ರೀತಿಯ ಪ್ರತಿವರ್ತನೆಗೆ ಒಳಗಾದನು. ಪ್ರವಾದಿ ಯೆಶಾಯನು ಯಾರಿಗೆ ಸಾರಿದನೊ ಅವರು ಸಂದೇಶವನ್ನು ಅಂಗೀಕರಿಸಲು ಹೇಗೆ ಮನಸ್ಸಿಲ್ಲದವರಾಗಿದ್ದರೊ ಹಾಗೆಯೇ ಯೇಸುವಿನ ದಿನಗಳ ಯೆಹೂದ್ಯರೂ ಮನಸ್ಸಿಲ್ಲದವರಾಗಿದ್ದರು. (ಯೆಶಾಯ 1:4) ಸಾಮ್ಯಗಳ ಉಪಯೋಗವು ಯೇಸುವಿನ ಶುಶ್ರೂಷೆಯ ಭಾಗವಾಗಿದ್ದವು. ಇದು ಶಿಷ್ಯರು, “ಯಾಕೆ ಸಾಮ್ಯರೂಪವಾಗಿ ಅವರ ಸಂಗಡ ಮಾತಾಡುತ್ತೀ” ಎಂದು ಕೇಳುವಂತೆ ಅವರನ್ನು ಪ್ರೇರೇಪಿಸಿತು. “ಅದಕ್ಕಾತನು ಅವರಿಗೆ—ಪರಲೋಕರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೇ ಕೊಟ್ಟದೆ; ಅವರಿಗೆ ಕೊಟ್ಟಿಲ್ಲ. ನಾನು ಅವರ ಸಂಗಡ ಸಾಮ್ಯರೂಪವಾಗಿ ಮಾತಾಡುವದಕ್ಕೆ ಕಾರಣವೇನಂದರೆ ಅವರಿಗೆ ಕಣ್ಣಿದ್ದರೂ ನೋಡುವದಿಲ್ಲ, ಕಿವಿಯಿದ್ದರೂ ಕೇಳುವದಿಲ್ಲ ಮತ್ತು ತಿಳುಕೊಳ್ಳುವದಿಲ್ಲ. ಯೆಶಾಯನು ಹೇಳಿದ ಪ್ರವಾದನೆಯು ಅವರಲ್ಲಿ ನೆರವೇರುತ್ತದೆ; ಅದೇನಂದರೆ—ನೀವು ಕಿವಿಯಿದ್ದು ಕೇಳಿದರೂ ತಿಳುಕೊಳ್ಳುವದೇ ಇಲ್ಲ; ಕಣ್ಣಿದ್ದು ನೋಡಿದರೂ ಕಾಣುವದೇ ಇಲ್ಲ. ಈ ಜನರ ಹೃದಯವು ಕೊಬ್ಬಿತು; ಇವರ ಕಿವಿ ಮಂದವಾಯಿತು; ಇವರು ಕಣ್ಣು ಮುಚ್ಚಿಕೊಂಡಿದ್ದಾರೆ. ತಾವು ಕಣ್ಣಿನಿಂದ ಕಂಡು ಕಿವಿಯಿಂದ ಕೇಳಿ ಹೃದಯದಿಂದ ತಿಳಿದು ನನ್ನ ಕಡೆಗೆ ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೇಗೂ ಹೊಂದಬಾರದೆಂದು ಮಾಡಿಕೊಂಡಿದ್ದಾರೆ ಎಂಬದು.”—ಮತ್ತಾಯ 13:10, 11, 13-15; ಮಾರ್ಕ 4:10-12; ಲೂಕ 8:9, 10.
23 ಯೆಶಾಯನಿಂದ ಉಲ್ಲೇಖಿಸಿದ್ದರಲ್ಲಿ, ತನ್ನ ದಿನಗಳಲ್ಲಿ ಆ ಪ್ರವಾದನೆಯು ನೆರವೇರಿತೆಂದು ಯೇಸು ತೋರಿಸಿದನು. ಒಟ್ಟಿನಲ್ಲಿ, ಆಗಿನ ಜನರ ಮನೋಭಾವವೂ ಯೆಶಾಯನ ದಿನಗಳ ಯೆಹೂದ್ಯರಂತೆಯೇ ಇತ್ತು. ಅವರು ಅವನ ಸಂದೇಶಕ್ಕೆ ತಮ್ಮನ್ನು ಕುರುಡರಾಗಿಯೂ ಕಿವುಡರಾಗಿಯೂ ಮಾಡಿಕೊಂಡು ಹಿಂದಿನಂತೆಯೇ ನಾಶನಕ್ಕೆ ಒಳಗಾದರು. (ಮತ್ತಾಯ 23:35-38; 24:1, 2) ಸಾ.ಶ. 70ರಲ್ಲಿ, ಸೇನಾಪತಿ ಟೈಟಸನು ರೋಮನ್ ಸೈನ್ಯದೊಂದಿಗೆ ಯೆರೂಸಲೇಮಿಗೆ ಬಂದು ಆ ನಗರವನ್ನೂ ಅದರ ದೇವಾಲಯವನ್ನೂ ಕೆಡವಿದಾಗ ಇದು ಸಂಭವಿಸಿತು. ಆದರೂ, ಕೆಲವರು ಯೇಸುವಿಗೆ ಕಿವಿಗೊಟ್ಟು ಅವನ ಶಿಷ್ಯರಾಗಿದ್ದರು. ಯೇಸು ಅವರನ್ನು “ಧನ್ಯರು” ಎಂದು ಕರೆದಿದ್ದನು. (ಮತ್ತಾಯ 13:16-23, 51) ‘ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ಕಾಣುವಾಗ’ ‘ಬೆಟ್ಟಗಳಿಗೆ ಓಡಿಹೋಗ’ಬೇಕೆಂದು ಯೇಸು ಅವರಿಗೆ ಹೇಳಿದ್ದನು. (ಲೂಕ 21:20-22) ಹೀಗೆ, ನಂಬಿಕೆಯಿಟ್ಟಿದ್ದ ಮತ್ತು ಆತ್ಮಿಕ ಜನಾಂಗವಾಗಿ ರಚಿಸಲ್ಪಟ್ಟಿದ್ದ “ದೇವರ ಇಸ್ರಾಯೇಲ್ಯ”ರಾದ “ದೇವಕುಲವು” ರಕ್ಷಿಸಲ್ಪಟ್ಟಿತು.a—ಗಲಾತ್ಯ 6:16.
24. ಯೆಶಾಯನ ಪ್ರವಾದನೆಯ ಯಾವ ಅನ್ವಯವನ್ನು ಪೌಲನು ಮಾಡಿದನು, ಮತ್ತು ಇದು ಏನನ್ನು ಸೂಚಿಸುತ್ತದೆ?
24 ಸುಮಾರು ಸಾ.ಶ. 60ರಲ್ಲಿ ಅಪೊಸ್ತಲ ಪೌಲನಿಗೆ ರೋಮ್ನಲ್ಲಿ ಗೃಹಬಂಧನವಾಯಿತು. ಆಗ ಅವನು ಅಲ್ಲಿ “ಯೆಹೂದ್ಯರಲ್ಲಿ ಪ್ರಮುಖ”ರೊಂದಿಗೆ ಮತ್ತು ಇತರರೊಂದಿಗೆ ಕೂಡಿಬಂದು ಅವರಿಗೆ “ದೇವರ ರಾಜ್ಯದ ಕುರಿತು ಪ್ರಮಾಣವಾಗಿ ಸಾಕ್ಷಿ” ಕೊಟ್ಟನು. ಅನೇಕರು ಈ ಸಂದೇಶವನ್ನು ಅಂಗೀಕರಿಸದಿದ್ದಾಗ, ಇದು ಯೆಶಾಯನ ಪ್ರವಾದನೆಯ ನೆರವೇರಿಕೆಯೆಂದು ಪೌಲನು ವಿವರಿಸಿದನು. (ಅ. ಕೃತ್ಯಗಳು 28:17-27; ಯೆಶಾಯ 6:9, 10) ಹೀಗೆ ಯೇಸುವಿನ ಶಿಷ್ಯರು ಯೆಶಾಯನದ್ದಕ್ಕೆ ಸರಿಹೋಲುವ ಆಜ್ಞೆಯನ್ನು ನೆರವೇರಿಸಿದರು.
25. ದೇವರ ಆಧುನಿಕ ಸಾಕ್ಷಿಗಳು ಏನನ್ನು ಗ್ರಹಿಸಿದ್ದಾರೆ, ಮತ್ತು ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ?
25 ತದ್ರೀತಿ, ಯೆಹೋವನು ತನ್ನ ಪವಿತ್ರ ಆಲಯದಲ್ಲಿದ್ದಾನೆಂದು ಇಂದು ಯೆಹೋವನ ಸಾಕ್ಷಿಗಳು ಗ್ರಹಿಸುತ್ತಾರೆ. (ಮಲಾಕಿಯ 3:1) ಅವರು ಯೆಶಾಯನಂತೆಯೇ, “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ಹೇಳುತ್ತಾರೆ. ಅಲ್ಲದೆ, ಅವರು ಹುರುಪಿನಿಂದ ಈ ದುಷ್ಟ ವ್ಯವಸ್ಥೆಯ ಸಮೀಪಿಸುತ್ತಿರುವ ಅಂತ್ಯದ ಮುನ್ನೆಚ್ಚರಿಕೆಯನ್ನು ಸಾರುತ್ತಾರೆ. ಆದರೆ, ಯೇಸು ಸೂಚಿಸಿದಂತೆ, ಕೇವಲ ಕೆಲವರೇ ನೋಡಿ, ಕೇಳಿ, ರಕ್ಷಿಸಲ್ಪಡುವಂತೆ ತಮ್ಮ ಕಣ್ಣು, ಕಿವಿಗಳನ್ನು ತೆರೆಯುತ್ತಾರೆ. (ಮತ್ತಾಯ 7:13, 14) ಆಲಿಸಲಿಕ್ಕಾಗಿ ಮತ್ತು “ಸ್ವಸ್ಥತೆಯನ್ನು” ಪಡೆಯಲಿಕ್ಕಾಗಿ ತಮ್ಮ ಹೃದಯಗಳನ್ನು ತೆರೆಯುವವರು ಧನ್ಯರೇ ಸರಿ!—ಯೆಶಾಯ 6:8, 10.
[ಪಾದಟಿಪ್ಪಣಿ]
a ಸಾ.ಶ. 66ರಲ್ಲಿ, ದಂಗೆಯೆದ್ದಿದ್ದ ಯೆಹೂದ್ಯರಿಗೆದುರಾಗಿ ಸೆಸ್ಟಿಯಸ್ ಗ್ಯಾಲಸ್ನ ಅಧಿಕಾರದಲ್ಲಿದ್ದ ರೋಮನ್ ಸೈನ್ಯವು ಯೆರೂಸಲೇಮಿಗೆ ಮುತ್ತಿಗೆ ಹಾಕಿ, ನಗರವನ್ನು ಹೊಕ್ಕಿ ದೇವಾಲಯದ ಗೋಡೆಗಳ ವರೆಗೆ ಮುಂದುವರಿಯಿತು. ಬಳಿಕ ಅವರು ಹಿಮ್ಮೆಟ್ಟಲಾಗಿ, ಯೇಸುವಿನ ಶಿಷ್ಯರು ಸಾ.ಶ. 70ರಲ್ಲಿ ರೋಮನರು ಹಿಂದಿರುಗುವ ಮೊದಲು, ಪೆರೀಯ ಬೆಟ್ಟಗಳಿಗೆ ಓಡಿಹೋಗುವಂತೆ ಇದು ದಾರಿಮಾಡಿಕೊಟ್ಟಿತು.
[ಪುಟ 94ರಲ್ಲಿರುವ ಚಿತ್ರ]
“ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು”
[ಪುಟ 97ರಲ್ಲಿರುವ ಚಿತ್ರ]
‘ಪಟ್ಟಣಗಳು ಜನರಿಲ್ಲದೆ ನಿವಾಸಿಗಳಿಲ್ಲದೆ ಧ್ವಂಸವಾಗುವ ತನಕ’