ಮತ್ತಾಯ
17 ಆರು ದಿನಗಳ ತರುವಾಯ ಯೇಸುವು ಪೇತ್ರ ಯಾಕೋಬ ಮತ್ತು ಅವನ ತಮ್ಮನಾದ ಯೋಹಾನನನ್ನು ತನ್ನೊಂದಿಗೆ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದನು. 2 ಅಲ್ಲಿ ಅವನು ಅವರ ಮುಂದೆ ರೂಪಾಂತರಗೊಂಡನು; ಅವನ ಮುಖವು ಸೂರ್ಯನಂತೆ ಪ್ರಕಾಶಿಸಿತು ಮತ್ತು ಅವನ ಮೇಲಂಗಿಗಳು ಬೆಳಕಿನಂತೆ ಬೆಳಗಿದವು. 3 ಮತ್ತು ಎಲೀಯನೂ ಮೋಶೆಯೂ ಅವನೊಂದಿಗೆ ಮಾತಾಡುತ್ತಿರುವುದು ಅವರಿಗೆ ಕಾಣಿಸಿತು. 4 ಆಗ ಪೇತ್ರನು ಯೇಸುವಿಗೆ, “ಕರ್ತನೇ, ನಾವು ಇಲ್ಲೇ ಇರುವುದು ಒಳ್ಳೇದು; ನೀನು ಬಯಸುವುದಾದರೆ ನಿನಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದರಂತೆ ನಾನು ಮೂರು ಗುಡಾರಗಳನ್ನು ಕಟ್ಟುವೆನು” ಎಂದು ಹೇಳಿದನು. 5 ಅವನು ಇನ್ನೂ ಮಾತಾಡುತ್ತಿರುವಾಗ ಕಾಂತಿಯುಳ್ಳ ಮೋಡವು ಅವರ ಮೇಲೆ ಕವಿಯಿತು ಮತ್ತು ಆ ಮೋಡದೊಳಗಿಂದ, “ಇವನು ಪ್ರಿಯನಾಗಿರುವ ನನ್ನ ಮಗನು, ಇವನನ್ನು ನಾನು ಮೆಚ್ಚಿದ್ದೇನೆ; ಇವನ ಮಾತಿಗೆ ಕಿವಿಗೊಡಿರಿ” ಎಂಬ ವಾಣಿಯು ಕೇಳಿಬಂತು. 6 ಶಿಷ್ಯರು ಇದನ್ನು ಕೇಳಿ ಬಹಳವಾಗಿ ಹೆದರಿ ಅಧೋಮುಖವಾಗಿ ಬಿದ್ದರು. 7 ಆಗ ಯೇಸು ಅವರ ಬಳಿಗೆ ಬಂದು ಅವರನ್ನು ಮುಟ್ಟಿ, “ಏಳಿರಿ, ಭಯಪಡಬೇಡಿ” ಎಂದನು. 8 ಅವರು ಕಣ್ಣೆತ್ತಿ ನೋಡಿದಾಗ, ಯೇಸುವನ್ನೇ ಹೊರತು ಬೇರೆ ಯಾರನ್ನೂ ಕಾಣಲಿಲ್ಲ. 9 ಅವರು ಬೆಟ್ಟದಿಂದ ಇಳಿದುಬರುತ್ತಿದ್ದಾಗ ಯೇಸು ಅವರಿಗೆ, “ಮನುಷ್ಯಕುಮಾರನು ಸತ್ತವರೊಳಗಿಂದ ಎಬ್ಬಿಸಲ್ಪಡುವ ತನಕ ಈ ದರ್ಶನವನ್ನು ಯಾರಿಗೂ ತಿಳಿಸಬೇಡಿ” ಎಂದು ಆಜ್ಞಾಪಿಸಿದನು.
10 ಆಗ ಶಿಷ್ಯರು ಅವನಿಗೆ, “ಹಾಗಾದರೆ ಮೊದಲು ಎಲೀಯನು ಬರಬೇಕು ಎಂದು ಶಾಸ್ತ್ರಿಗಳು ಏಕೆ ಹೇಳುತ್ತಾರೆ?” ಎಂದು ಪ್ರಶ್ನಿಸಿದರು. 11 ಅದಕ್ಕೆ ಪ್ರತ್ಯುತ್ತರವಾಗಿ ಅವನು, “ಎಲೀಯನು ಬರುವುದು ನಿಜ ಮತ್ತು ಅವನು ಎಲ್ಲವನ್ನೂ ಪುನಸ್ಸ್ಥಾಪಿಸುವನು. 12 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಎಲೀಯನು ಈಗಾಗಲೇ ಬಂದಿದ್ದಾನೆ ಮತ್ತು ಅವರು ಅವನನ್ನು ಗುರುತಿಸದೆ ತಮಗೆ ಇಷ್ಟಬಂದಂತೆ ಅವನಿಗೆ ಮಾಡಿದರು. ಇದೇ ರೀತಿಯಲ್ಲಿ ಮನುಷ್ಯಕುಮಾರನು ಸಹ ಅವರ ಕೈಯಲ್ಲಿ ಕಷ್ಟಗಳನ್ನು ಅನುಭವಿಸಲಿಕ್ಕಿದ್ದಾನೆ” ಎಂದು ಹೇಳಿದನು. 13 ಆಗ ಶಿಷ್ಯರು ಅವನು ಸ್ನಾನಿಕನಾದ ಯೋಹಾನನ ಕುರಿತು ಮಾತಾಡಿದನು ಎಂದು ಗ್ರಹಿಸಿದರು.
14 ಅವರು ಜನರ ಗುಂಪಿನ ಬಳಿಗೆ ಬಂದಾಗ ಒಬ್ಬ ಮನುಷ್ಯನು ಅವನ ಹತ್ತಿರ ಬಂದು ಮೊಣಕಾಲೂರಿ, 15 “ಸ್ವಾಮಿ, ನನ್ನ ಮಗನಿಗೆ ಕರುಣೆ ತೋರಿಸು; ಅವನು ಮೂರ್ಛೆರೋಗದಿಂದ ನರಳುತ್ತಿದ್ದಾನೆ; ಅವನು ಪದೇಪದೇ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಬೀಳುತ್ತಾನೆ; 16 ಅವನನ್ನು ನಿನ್ನ ಶಿಷ್ಯರ ಬಳಿಗೆ ಕರೆದುಕೊಂಡು ಬಂದೆ, ಆದರೆ ಅವರಿಂದ ವಾಸಿಮಾಡಲು ಸಾಧ್ಯವಾಗಲಿಲ್ಲ” ಎಂದು ಹೇಳಿದನು. 17 ಅದಕ್ಕೆ ಯೇಸು, “ನಂಬಿಕೆಯಿಲ್ಲದ ವಕ್ರ ಸಂತತಿಯೇ, ನಾನು ಇನ್ನೆಷ್ಟು ಸಮಯ ನಿಮ್ಮೊಂದಿಗಿರಬೇಕು? ಇನ್ನೆಷ್ಟು ಸಮಯ ನಿಮ್ಮನ್ನು ಸಹಿಸಿಕೊಳ್ಳಬೇಕು? ಅವನನ್ನು ನನ್ನ ಬಳಿಗೆ ತನ್ನಿರಿ” ಎಂದು ಹೇಳಿದನು. 18 ಯೇಸು ದೆವ್ವವನ್ನು ಗದರಿಸಿದಾಗ ಅದು ಅವನನ್ನು ಬಿಟ್ಟುಹೋಯಿತು; ಆ ಗಳಿಗೆಯಿಂದ ಹುಡುಗನು ವಾಸಿಯಾದನು. 19 ಅನಂತರ ಶಿಷ್ಯರು ಯೇಸುವಿನ ಬಳಿಗೆ ಪ್ರತ್ಯೇಕವಾಗಿ ಬಂದು, “ನಮ್ಮಿಂದ ಯಾಕೆ ಅದನ್ನು ಬಿಡಿಸಲು ಆಗಲಿಲ್ಲ?” ಎಂದು ಕೇಳಿದರು. 20 ಅದಕ್ಕೆ ಅವನು ಅವರಿಗೆ, “ನಿಮ್ಮ ನಂಬಿಕೆಯ ಕೊರತೆಯಿಂದಲೇ. ನಿಮಗೆ ಸಾಸಿವೆ ಕಾಳಿನ ಗಾತ್ರದಷ್ಟು ನಂಬಿಕೆಯಿರುವುದಾದರೆ ನೀವು ಈ ಬೆಟ್ಟಕ್ಕೆ ‘ಇಲ್ಲಿಂದ ಅಲ್ಲಿಗೆ ಸ್ಥಳಾಂತರಿಸು’ ಎಂದು ಹೇಳಿದರೆ ಅದು ಹೋಗುವುದು ಮತ್ತು ಯಾವುದೂ ನಿಮಗೆ ಅಸಾಧ್ಯವಾದದ್ದಾಗಿರುವುದಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ” ಎಂದನು. 21 *——
22 ಅವರು ಗಲಿಲಾಯದಲ್ಲಿ ಕೂಡಿಬಂದಿದ್ದಾಗ ಯೇಸು ಅವರಿಗೆ, “ಮನುಷ್ಯಕುಮಾರನನ್ನು ಜನರ ಕೈಗೆ ದ್ರೋಹದಿಂದ ಒಪ್ಪಿಸಿಕೊಡಲಾಗುತ್ತದೆ 23 ಮತ್ತು ಅವರು ಅವನನ್ನು ಕೊಲ್ಲುವರು; ಅವನನ್ನು ಮೂರನೆಯ ದಿನ ಎಬ್ಬಿಸಲಾಗುವುದು” ಎಂದು ಹೇಳಿದನು. ಇದನ್ನು ಕೇಳಿ ಅವರು ತುಂಬ ದುಃಖಿತರಾದರು.
24 ಅವರು ಕಪೆರ್ನೌಮಿಗೆ ಬಂದ ಬಳಿಕ ದೇವಾಲಯಕ್ಕಾಗಿ ತೆರಿಗೆಯನ್ನು * ವಸೂಲಿಮಾಡುವವರು ಪೇತ್ರನ ಬಳಿಗೆ ಬಂದು, “ನಿಮ್ಮ ಬೋಧಕನು ದೇವಾಲಯದ ತೆರಿಗೆಯನ್ನು ಸಲ್ಲಿಸುವುದಿಲ್ಲವೊ?” ಎಂದು ಕೇಳಿದರು. 25 ಅದಕ್ಕೆ ಅವನು, “ಸಲ್ಲಿಸುತ್ತಾನೆ” ಎಂದನು. ಆದರೆ ಅವನು ಮನೆಯೊಳಗೆ ಬಂದಾಗ ಯೇಸು ಅವನು ಮಾತಾಡುವ ಮೊದಲೇ, “ಸೀಮೋನನೇ, ನಿನ್ನ ಅಭಿಪ್ರಾಯವೇನು? ಭೂರಾಜರು ಯಾರಿಂದ ತೆರಿಗೆಯನ್ನು ಅಥವಾ ತಲೆಗಂದಾಯವನ್ನು ತೆಗೆದುಕೊಳ್ಳುತ್ತಾರೆ? ತಮ್ಮ ಪುತ್ರರಿಂದಲೋ ಅಥವಾ ಹೊರಗಿನವರಿಂದಲೊ?” ಎಂದು ಕೇಳಿದನು. 26 “ಹೊರಗಿನವರಿಂದ” ಎಂದು ಅವನು ಹೇಳಿದಾಗ ಯೇಸು ಅವನಿಗೆ, “ಹಾಗಾದರೆ ಪುತ್ರರು ತೆರಿಗೆಯಿಂದ ಮುಕ್ತರಾಗಿದ್ದಾರೆ. 27 ಆದರೆ ನಾವು ಅವರಿಗೆ ಎಡವಲು ಕಾರಣವನ್ನು ಕೊಡುವುದು ಬೇಡ; ನೀನು ಸಮುದ್ರಕ್ಕೆ ಹೋಗಿ ಗಾಳಹಾಕಿ ಮೊದಲು ಸಿಗುವ ಮೀನನ್ನು ತೆಗೆದುಕೊಂಡು ಅದರ ಬಾಯನ್ನು ತೆರೆದು ನೋಡಿದರೆ ಒಂದು ಬೆಳ್ಳಿ ನಾಣ್ಯವನ್ನು * ಕಾಣುವಿ. ಅದನ್ನು ತೆಗೆದುಕೊಂಡು ನಮ್ಮಿಬ್ಬರಿಗಾಗಿ ಅವರಿಗೆ ಕೊಡು” ಎಂದು ಹೇಳಿದನು.