ಎಫೆಸ
6 ಮಕ್ಕಳೇ, ಕರ್ತನೊಂದಿಗೆ ಐಕ್ಯದಲ್ಲಿ ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ; ಇದು ನೀತಿಯಾಗಿದೆ. 2 ವಾಗ್ದಾನಸಹಿತವಾದ ಮೊದಲ ಆಜ್ಞೆಯೇನೆಂದರೆ, “ನಿನ್ನ ತಂದೆತಾಯಿಗಳನ್ನು ಸನ್ಮಾನಿಸು. 3 ಸನ್ಮಾನಿಸಿದರೆ ನಿನಗೆ ಮೇಲಾಗುವುದು ಮತ್ತು ನೀನು ಭೂಮಿಯ ಮೇಲೆ ಬಹುಕಾಲ ಬಾಳುವಿ.” 4 ತಂದೆಗಳೇ, ನಿಮ್ಮ ಮಕ್ಕಳಿಗೆ ಕಿರಿಕಿರಿ ಉಂಟುಮಾಡುವವರಾಗಿರದೆ, ಅವರನ್ನು ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ ಬೆಳೆಸುತ್ತಾ ಬನ್ನಿರಿ.
5 ದಾಸರೇ, ಶಾರೀರಿಕ ರೀತಿಯಲ್ಲಿ ನಿಮಗೆ ಯಜಮಾನರಾಗಿರುವವರಿಗೆ ಕ್ರಿಸ್ತನಿಗೋ ಎಂಬಂತೆ ಭಯದಿಂದಲೂ ನಡುಕದಿಂದಲೂ ಯಥಾರ್ಥ ಹೃದಯಗಳಿಂದ ವಿಧೇಯರಾಗಿರಿ. 6 ಮನುಷ್ಯರನ್ನು ಮೆಚ್ಚಿಸುವವರಂತೆ ಯಜಮಾನನ ಕಣ್ಣೆದುರಲ್ಲಿ ಮಾತ್ರ ಸೇವೆಮಾಡುವವರಾಗಿರದೆ ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಪೂರ್ಣ ಪ್ರಾಣದಿಂದ ಮಾಡಿರಿ. 7 ಮನುಷ್ಯರಿಗೋಸ್ಕರ ಅಲ್ಲ, ಯೆಹೋವನಿಗೋಸ್ಕರವೇ ಎಂದು ಒಳ್ಳೇ ಉದ್ದೇಶಗಳಿಂದ ಸೇವೆಮಾಡಿರಿ. 8 ಏಕೆಂದರೆ ಪ್ರತಿಯೊಬ್ಬನು, ಒಬ್ಬ ದಾಸನಾಗಿರಲಿ ಸ್ವತಂತ್ರನಾಗಿರಲಿ ತಾನು ಮಾಡಬಹುದಾದ ಯಾವುದೇ ಒಳ್ಳೇ ಕಾರ್ಯಕ್ಕಾಗಿ ಯೆಹೋವನಿಂದ ಪ್ರತಿಫಲವನ್ನು ಪಡೆಯುವನು ಎಂಬುದು ನಿಮಗೆ ತಿಳಿದಿದೆ. 9 ಇದಲ್ಲದೆ ಯಜಮಾನರೇ, ನೀವು ಬೆದರಿಸುವುದನ್ನು ಬಿಟ್ಟುಬಿಟ್ಟು ಅವರನ್ನು ಅದೇ ರೀತಿ ಉಪಚರಿಸಿರಿ; ಏಕೆಂದರೆ ನಿಮಗೂ ಅವರಿಗೂ ಯಜಮಾನನಾಗಿರುವಾತನು ಸ್ವರ್ಗದಲ್ಲಿದ್ದಾನೆಂದೂ ಆತನಲ್ಲಿ ಯಾವುದೇ ಪಕ್ಷಪಾತವಿಲ್ಲವೆಂದೂ ನಿಮಗೆ ತಿಳಿದಿದೆ.
10 ಕಡೆಯದಾಗಿ, ಕರ್ತನಲ್ಲಿಯೂ ಆತನ ಪರಾಕ್ರಮಭರಿತ ಶಕ್ತಿಯಲ್ಲಿಯೂ ನೀವು ಬಲವನ್ನು ಪಡೆದುಕೊಳ್ಳುತ್ತಾ ಇರಿ. 11 ಪಿಶಾಚನ ತಂತ್ರೋಪಾಯಗಳ ವಿರುದ್ಧ ದೃಢರಾಗಿ ನಿಲ್ಲಲು ಶಕ್ತರಾಗುವಂತೆ ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳಿರಿ. 12 ಏಕೆಂದರೆ ನಮಗಿರುವ ಹೋರಾಟವು ರಕ್ತಮಾಂಸಗಳ ವಿರುದ್ಧವಾಗಿ ಅಲ್ಲ; ಸರಕಾರಗಳ ವಿರುದ್ಧವಾಗಿಯೂ ಅಧಿಕಾರಗಳ ವಿರುದ್ಧವಾಗಿಯೂ ಈ ಅಂಧಕಾರದ ಲೋಕಾಧಿಪತಿಗಳ ವಿರುದ್ಧವಾಗಿಯೂ ಸ್ವರ್ಗೀಯ ಸ್ಥಳಗಳಲ್ಲಿ ಇರುವ ದುಷ್ಟಾತ್ಮ ಸೇನೆಗಳ ವಿರುದ್ಧವಾಗಿಯೂ ಇದೆ. 13 ಆದಕಾರಣ, ಆ ದುಷ್ಟ ದಿನದಲ್ಲಿ ನೀವು ಎದುರಿಸಶಕ್ತರಾಗುವಂತೆ ಮತ್ತು ಮಾಡಬೇಕಾದದ್ದೆಲ್ಲವನ್ನು ಸಂಪೂರ್ಣವಾಗಿ ಮಾಡಿದ ಬಳಿಕ ದೃಢರಾಗಿ ನಿಲ್ಲಶಕ್ತರಾಗುವಂತೆ ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ತೆಗೆದುಕೊಳ್ಳಿರಿ.
14 ಆದುದರಿಂದ, ನಿಮ್ಮ ಸೊಂಟವನ್ನು ಸತ್ಯದಿಂದ ಬಿಗಿದು, ನೀತಿಯ ಎದೆಕವಚವನ್ನು ಧರಿಸಿ, 15 ನಿಮ್ಮ ಪಾದಗಳಿಗೆ ಶಾಂತಿಯ ಸುವಾರ್ತೆಯ ಸಲಕರಣೆಯನ್ನು ತೊಡಿಸಿ ಸ್ಥಿರವಾಗಿ ನಿಲ್ಲಿರಿ. 16 ಎಲ್ಲಕ್ಕಿಂತಲೂ ಮಿಗಿಲಾಗಿ, ನಂಬಿಕೆಯೆಂಬ ದೊಡ್ಡ ಗುರಾಣಿಯನ್ನು ಹಿಡಿದುಕೊಳ್ಳಿರಿ; ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸಲು ಶಕ್ತರಾಗುವಿರಿ. 17 ಇದಲ್ಲದೆ, ರಕ್ಷಣೆಯ ಶಿರಸ್ತ್ರಾಣವನ್ನು ಮತ್ತು ಪವಿತ್ರಾತ್ಮದ ಕತ್ತಿಯನ್ನು ಅಂದರೆ ದೇವರ ವಾಕ್ಯವನ್ನು ಸ್ವೀಕರಿಸಿರಿ. 18 ಪ್ರಾರ್ಥನೆ ಮತ್ತು ಯಾಚನೆಯ ಪ್ರತಿಯೊಂದು ರೂಪದಲ್ಲಿ, ಪ್ರತಿಯೊಂದು ಸನ್ನಿವೇಶದಲ್ಲಿ ಪವಿತ್ರಾತ್ಮ ಪ್ರೇರಿತರಾಗಿ ಪ್ರಾರ್ಥಿಸುತ್ತಾ ಇರಿ. ಆ ಉದ್ದೇಶದಿಂದಾಗಿ ನೀವು ಸಕಲ ಸ್ಥಿರತೆಯಿಂದ ಮತ್ತು ಪವಿತ್ರ ಜನರೆಲ್ಲರ ಪರವಾಗಿ ಎಚ್ಚರವಾಗಿದ್ದು ಯಾಚಿಸಿರಿ. 19 ನನಗೋಸ್ಕರವೂ ನಾನು ಬಾಯಿ ತೆರೆದು ವಾಕ್ಸರಳತೆಯಿಂದ ಸುವಾರ್ತೆಯ ಪವಿತ್ರ ರಹಸ್ಯವನ್ನು ಪ್ರಕಟಪಡಿಸುವಂತೆ ವಾಕ್ಸಾಮರ್ಥ್ಯವು ನನಗೆ ಕೊಡಲ್ಪಡುವಂತೆ ಪ್ರಾರ್ಥಿಸಿರಿ. 20 ಸುವಾರ್ತೆಗೋಸ್ಕರವೇ ನಾನು ಬೇಡಿಯಲ್ಲಿ ಬಿದ್ದಿರುವ ರಾಯಭಾರಿಯಾಗಿ ಕಾರ್ಯನಡಿಸುತ್ತಿದ್ದೇನೆ; ಅದರ ವಿಷಯದಲ್ಲಿ ನಾನು ಮಾತಾಡಬೇಕಾಗಿರುವಂತೆಯೇ ಧೈರ್ಯದಿಂದ ಮಾತಾಡುವಂತೆ ನನಗಾಗಿ ಬೇಡಿಕೊಳ್ಳಿರಿ.
21 ನನ್ನ ಕಾರ್ಯಗಳ ಕುರಿತು, ನಾನು ಏನು ಮಾಡುತ್ತಿದ್ದೇನೆ ಎಂಬುದರ ಕುರಿತು ನೀವು ಸಹ ತಿಳಿದುಕೊಳ್ಳಬೇಕೆಂಬ ಕಾರಣದಿಂದ ಪ್ರಿಯ ಸಹೋದರನೂ ಕರ್ತನಲ್ಲಿ ನಂಬಿಗಸ್ತ ಶುಶ್ರೂಷಕನೂ ಆಗಿರುವ ತುಖಿಕನು ನಿಮಗೆ ಎಲ್ಲವನ್ನು ತಿಳಿಸುವನು. 22 ನೀವು ನಮ್ಮ ಕುರಿತಾದ ಸಂಗತಿಗಳನ್ನು ತಿಳಿದುಕೊಳ್ಳುವಂತೆಯೂ ಅವನು ನಿಮ್ಮ ಹೃದಯಗಳನ್ನು ಸಾಂತ್ವನಗೊಳಿಸುವ ಉದ್ದೇಶದಿಂದಲೂ ನಾನು ಅವನನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ.
23 ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಂಬಿಕೆಯಿಂದ ಕೂಡಿದ ಶಾಂತಿಯೂ ಪ್ರೀತಿಯೂ ಸಹೋದರರಿಗೆ ಇರಲಿ. 24 ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನಿರಂತರವಾದ ಪ್ರೀತಿಯಿಂದ ಪ್ರೀತಿಸುವವರೆಲ್ಲರೊಂದಿಗೆ ದೇವರ ಅಪಾತ್ರ ದಯೆಯು ಇರಲಿ.