ಒಂದನೇ ಅರಸು
16 ಆಗ ಯೆಹೋವ ಹನಾನೀಯನ+ ಮಗ ಯೇಹು+ ಮೂಲಕ ಬಾಷನ ವಿರುದ್ಧ ಒಂದು ಸಂದೇಶ ಕಳಿಸಿದನು. ಅದೇನಂದ್ರೆ: 2 “ನಾನು ನಿನ್ನನ್ನ ಧೂಳಿಂದ ಎತ್ತಿ ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿ ಮಾಡ್ದೆ.+ ಆದ್ರೆ ನೀನು ಯಾರೊಬ್ಬಾಮನ ತರ ನಡ್ಕೊಂಡು ನನ್ನ ಜನ್ರಾದ ಇಸ್ರಾಯೇಲ್ಯರು ಪಾಪ ಮಾಡೋ ಹಾಗೆ ಮಾಡ್ದೆ. ಅವರು ಪಾಪ ಮಾಡಿ ನನ್ನನ್ನ ರೇಗಿಸಿದ್ರು.+ 3 ಹಾಗಾಗಿ ನಾನು ನಿನ್ನನ್ನ ಮತ್ತು ನಿನ್ನ ಮನೆತನವನ್ನ ಸಂಪೂರ್ಣವಾಗಿ ಅಳಿಸಿಹಾಕ್ತೀನಿ. ನೆಬಾಟನ ಮಗ ಯಾರೊಬ್ಬಾಮನ ಮನೆತನಕ್ಕೆ ತಂದ ಗತಿನೇ ನಿನ್ನ ಮನೆತನಕ್ಕೂ ತರ್ತೀನಿ.+ 4 ನಿನ್ನವರು ಯಾರಾದ್ರೂ ಪಟ್ಟಣದಲ್ಲಿ ಸತ್ತರೆ ಅವ್ರನ್ನ ನಾಯಿಗಳು ತಿನ್ನುತ್ತೆ. ಯಾರಾದ್ರೂ ಹೊಲದಲ್ಲಿ ಸತ್ತರೆ ಅವ್ರನ್ನ ಪಕ್ಷಿಗಳು ತಿನ್ನುತ್ತೆ.”
5 ಬಾಷನ ಉಳಿದ ಜೀವನಚರಿತ್ರೆ, ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಬರೆಯಲಾಗಿದೆ. 6 ಕೊನೆಗೆ ಬಾಷ ತೀರಿಹೋದ. ಅವನನ್ನ ತಿರ್ಚದಲ್ಲಿ+ ಸಮಾಧಿ ಮಾಡಿದ್ರು. ಅವನ ನಂತ್ರ ಅವನ ಮಗ ಏಲಾ ರಾಜನಾದ. 7 ಬಾಷ ಯೆಹೋವನ ದೃಷ್ಟಿಯಲ್ಲಿ ಕೆಟ್ಟದನ್ನೇ ಮಾಡಿ ಆತನನ್ನ ರೇಗಿಸಿದ. ಹೀಗೆ ಯಾರೊಬ್ಬಾಮನ ಕುಟುಂಬದವರು ಮಾಡಿದ್ದನ್ನೇ ಮಾಡಿದ. ಅಷ್ಟೇ ಅಲ್ಲ ಅವನು ನಾದಾಬನನ್ನ ಕೊಂದ. ಈ ಎರಡು ಕಾರಣಕ್ಕಾಗಿ ಯೆಹೋವ ಹನಾನೀಯ ಮಗನಾದ ಪ್ರವಾದಿ ಯೇಹು ಮೂಲಕ ಬಾಷನಿಗೂ ಅವನ ಮನೆತನಕ್ಕೂ ಆ ಸಂದೇಶ ಕೊಟ್ಟನು.+
8 ಯೆಹೂದದ ರಾಜ ಆಸನ ಆಳ್ವಿಕೆಯ 26ನೇ ವರ್ಷದಲ್ಲಿ ಬಾಷನ ಮಗ ಏಲಾ ತಿರ್ಚದಲ್ಲಿ ಇಸ್ರಾಯೇಲಿನ ರಾಜನಾಗಿ ಎರಡು ವರ್ಷ ಆಳಿದ. 9 ಏಲಾಗೆ ಜಿಮ್ರಿ ಅನ್ನೋ ಸೇವಕ ಇದ್ದ. ಅವನು ಏಲಾ ಹತ್ರ ಇದ್ದ ರಥಸೇನೆಯ ಅರ್ಧ ಭಾಗಕ್ಕೆ ಅಧಿಪತಿ ಆಗಿದ್ದ. ತಿರ್ಚದಲ್ಲಿ ರಾಜಮನೆತನದ ಮೇಲ್ವಿಚಾರಕನಾಗಿದ್ದ ಅರ್ಚನ ಮನೇಲಿ ಏಲಾ ಕುಡಿದು ಅಮಲಿನಲ್ಲಿದ್ದ. ಆಗ ಜಿಮ್ರಿ ಏಲಾ ವಿರುದ್ಧ ಸಂಚು ಮಾಡಿ 10 ಅಲ್ಲಿಗೆ ಬಂದು ಅವನ ಮೇಲೆ ದಾಳಿ ಮಾಡಿ ಅವನನ್ನ ಕೊಂದುಬಿಟ್ಟ.+ ಯೆಹೂದದ ರಾಜ ಆಸನ ಆಳ್ವಿಕೆಯ 27ನೇ ವರ್ಷದಲ್ಲಿ ಜಿಮ್ರಿ ಏಲಾ ಸ್ಥಾನದಲ್ಲಿ ರಾಜನಾದ. 11 ಅವನು ರಾಜನಾಗಿ ಆಳೋಕೆ ಶುರುಮಾಡಿದ ತಕ್ಷಣ ಬಾಷನ ಮನೆತನದವರನ್ನೆಲ್ಲ ಕೊಂದುಬಿಟ್ಟ. ಅವನು ಬಾಷನ ಸಂಬಂಧಿಕರಲ್ಲಾಗಲಿ,* ಸ್ನೇಹಿತರಲ್ಲಾಗಲಿ ಒಬ್ಬನನ್ನೂ ಉಳಿಸಲಿಲ್ಲ. 12 ಹೀಗೆ ಜಿಮ್ರಿ ಬಾಷನ ಮನೆತನದವ್ರನ್ನೆಲ್ಲ ನಾಶಮಾಡಿದ. ಇದ್ರಿಂದ ಯೆಹೋವ ಪ್ರವಾದಿ ಯೇಹು ಮೂಲಕ ಬಾಷನ ವಿರುದ್ಧ ಹೇಳಿದ್ದ ಸಂದೇಶ ನಿಜ ಆಯ್ತು.+ 13 ಬಾಷ ಮತ್ತು ಅವನ ಮಗ ಏಲಾ ಪಾಪ ಮಾಡಿದ್ದಲ್ಲದೆ ಇಸ್ರಾಯೇಲ್ಯರ ಕೈಯಲ್ಲೂ ಪಾಪ ಮಾಡಿಸಿದ್ರು. ಅದಕ್ಕೇ ಬಾಷನ ಮನೆತನಕ್ಕೆ ಈ ಗತಿ ಬಂತು. ಇಸ್ರಾಯೇಲ್ಯರು ಪ್ರಯೋಜನಕ್ಕೆ ಬಾರದ ಮೂರ್ತಿಗಳನ್ನ ಆರಾಧಿಸಿ ತಮ್ಮ ದೇವರಾದ ಯೆಹೋವನನ್ನ ರೇಗಿಸಿದ್ರು.+ 14 ಏಲಾನ ಉಳಿದ ಜೀವನಚರಿತ್ರೆಯ ಬಗ್ಗೆ, ಅವನು ಮಾಡಿದ ಕೆಲಸಗಳ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ.
15 ಯೆಹೂದದ ರಾಜ ಆಸನ ಆಳ್ವಿಕೆಯ 27ನೇ ವರ್ಷದಲ್ಲಿ ಜಿಮ್ರಿ ರಾಜನಾಗಿ ಏಳು ದಿನಗಳ ತನಕ ತಿರ್ಚದಲ್ಲಿ ಆಳಿದ. ಆ ಸಮಯದಲ್ಲಿ ಸೈನಿಕರ ಗುಂಪು ಫಿಲಿಷ್ಟಿಯರಿಗೆ ಸೇರಿದ ಗಿಬ್ಬೆತೋನಿನ+ ವಿರುದ್ಧ ಪಾಳೆಯ ಹೂಡಿತ್ತು. 16 “ಜಿಮ್ರಿ ಸಂಚು ಮಾಡಿ ರಾಜನನ್ನ ಕೊಂದ” ಅನ್ನೋ ಸುದ್ದಿ ಆ ಸೈನಿಕರ ಕಿವಿಗೆ ಬಿತ್ತು. ಆಗ ಎಲ್ಲ ಇಸ್ರಾಯೇಲ್ಯರು ಸೇರಿ ಸೇನಾಪತಿ ಒಮ್ರಿನ+ ಅದೇ ದಿನ ಪಾಳೆಯದಲ್ಲಿ ಇಸ್ರಾಯೇಲ್ ರಾಜನಾಗಿ ಮಾಡಿದ್ರು. 17 ಒಮ್ರಿ ಮತ್ತು ಅವನ ಜೊತೆ ಇದ್ದ ಎಲ್ಲ ಇಸ್ರಾಯೇಲ್ಯರು ಗಿಬ್ಬೆತೋನಿನಿಂದ ಹೊರಟು ತಿರ್ಚಗೆ ಮುತ್ತಿಗೆ ಹಾಕಿದ್ರು. 18 ಪಟ್ಟಣಕ್ಕೆ ಮುತ್ತಿಗೆ ಹಾಕಿರೋದನ್ನ ನೋಡಿದ ಜಿಮ್ರಿ ರಾಜನ ಅರಮನೆಯ ಭದ್ರ ಕೋಟೆಗೆ ಹೋಗಿ ಅದಕ್ಕೆ ಬೆಂಕಿ ಹಚ್ಚಿ, ಆ ಬೆಂಕಿಯಲ್ಲಿ ಅವನೂ ಸತ್ತ.+ 19 ಜಿಮ್ರಿ ಯಾರೊಬ್ಬಾಮನ ತರಾನೇ ನಡ್ಕೊಂಡು ಯೆಹೋವನ ದೃಷ್ಟಿಯಲ್ಲಿ ಕೆಟ್ಟದನ್ನೇ ಮಾಡಿ ಪಾಪ ಮಾಡಿದ. ಅಷ್ಟೇ ಅಲ್ಲ ಇಸ್ರಾಯೇಲ್ಯರೂ ಪಾಪ ಮಾಡೋ ಹಾಗೆ ಮಾಡಿದ.+ ಅದಕ್ಕೇ ಅವನಿಗೆ ಈ ಗತಿ ಬಂತು. 20 ಜಿಮ್ರಿಯ ಉಳಿದ ಜೀವನಚರಿತ್ರೆ, ಅವನು ಮಾಡಿದ ಸಂಚಿನ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ.
21 ಇದಾದ್ಮೇಲೆ ಇಸ್ರಾಯೇಲ್ಯರಲ್ಲಿ ಎರಡು ಗುಂಪಾಯ್ತು. ಒಂದು ಗುಂಪಿನವರು ಗೀನತನ ಮಗ ತಿಬ್ನಿಯನ್ನ ರಾಜನಾಗಿ ಮಾಡೋಕೆ ಹೋದ್ರು. ಇನ್ನೊಂದು ಗುಂಪಿನವರು ಒಮ್ರಿನ ರಾಜನಾಗಿ ಮಾಡೋಕೆ ಹೋದ್ರು. 22 ಆದ್ರೆ ಒಮ್ರಿಯ ಹಿಂಬಾಲಕರು ಗೀನತನ ಮಗ ತಿಬ್ನಿಯ ಹಿಂಬಾಲಕರನ್ನ ಸೋಲಿಸಿದ್ರು. ಹಾಗಾಗಿ ತಿಬ್ನಿ ತೀರಿಹೋದ, ಒಮ್ರಿ ರಾಜನಾದ.
23 ಯೆಹೂದದ ರಾಜ ಆಸನ ಆಳ್ವಿಕೆಯ 31ನೇ ವರ್ಷದಲ್ಲಿ ಒಮ್ರಿ ಇಸ್ರಾಯೇಲಿನ ರಾಜನಾದ. ಅವನು 12 ವರ್ಷ ಆಳಿದ. ಅವನು ತಿರ್ಚದಿಂದ ಆರು ವರ್ಷ ಆಳಿದ. 24 ಅವನು ಶೆಮೆರಿಂದ ಸಮಾರ್ಯ ಬೆಟ್ಟನ ಎರಡು ತಲಾಂತು* ಬೆಳ್ಳಿಗೆ ಕೊಂಡ್ಕೊಂಡು ಅದ್ರ ಮೇಲೆ ಒಂದು ಪಟ್ಟಣನ ಕಟ್ಟಿದ. ಆ ಪಟ್ಟಣಕ್ಕೆ ಆ ಬೆಟ್ಟದ ಒಡೆಯ ಶೆಮೆರನ ನೆನಪಿಗಾಗಿ ಸಮಾರ್ಯ*+ ಅಂತ ಹೆಸ್ರಿಟ್ಟ. 25 ಒಮ್ರಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡ್ತಾ ಹೋದ. ಅವನು ಅವನ ಮುಂಚೆ ಇದ್ದ ಎಲ್ರಿಗಿಂತ ತುಂಬ ದೊಡ್ಡ ಪಾಪಗಳನ್ನ ಮಾಡಿದ.+ 26 ಒಮ್ರಿನೂ ನೆಬಾಟನ ಮಗ ಯಾರೊಬ್ಬಾಮನ ತರಾನೇ ನಡ್ಕೊಂಡ. ಅವನ ತರಾನೇ ಇವನೂ ಇಸ್ರಾಯೇಲ್ಯರಿಂದ ಪಾಪ ಮಾಡಿಸಿದ. ಇಸ್ರಾಯೇಲ್ಯರು ಪ್ರಯೋಜನಕ್ಕೆ ಬಾರದ ಮೂರ್ತಿಗಳನ್ನ ಆರಾಧಿಸಿ ತಮ್ಮ ದೇವರಾದ ಯೆಹೋವನನ್ನ ರೇಗಿಸಿದ್ರು.+ 27 ಒಮ್ರಿಯ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಕೆಲಸಗಳ ಬಗ್ಗೆ ಮತ್ತು ಬೇರೆ ಕೆಲಸಗಳ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 28 ಕೊನೆಗೆ ಒಮ್ರಿ ತೀರಿಹೋದ. ಅವನನ್ನ ಸಮಾರ್ಯದಲ್ಲಿ ಸಮಾಧಿ ಮಾಡಿದ್ರು. ಅವನ ನಂತ್ರ ಅವನ ಮಗ ಅಹಾಬ+ ರಾಜನಾದ.
29 ಯೆಹೂದದ ರಾಜ ಆಸನ ಆಳ್ವಿಕೆಯ 38ನೇ ವರ್ಷದಲ್ಲಿ ಒಮ್ರಿಯ ಮಗ ಅಹಾಬ ಇಸ್ರಾಯೇಲಿನ ರಾಜನಾದ. ಅವನು ಇಸ್ರಾಯೇಲನ್ನ ಸಮಾರ್ಯದಿಂದ+ 22 ವರ್ಷ ಆಳಿದ. 30 ಯೆಹೋವನ ದೃಷ್ಟಿಯಲ್ಲಿ ಇವನೂ ಮುಂಚೆ ಇದ್ದ ಎಲ್ರಿಗಿಂತ ತುಂಬ ಕೆಟ್ಟವನಾಗಿದ್ದ.+ 31 ಅಹಾಬ ನೆಬಾಟನ ಮಗ ಯಾರೊಬ್ಬಾಮನ ತರಾನೇ ನಡ್ಕೊಂಡ.+ ಅಷ್ಟು ಮಾಡಿದ್ದು ಸಾಕಾಗಿಲ್ಲ ಅಂತ ಅವನು ಸೀದೋನ್ಯರ+ ರಾಜ ಎತ್ಬಾಳನ ಮಗಳು ಈಜೆಬೇಲಳನ್ನ+ ಮದುವೆ ಮಾಡ್ಕೊಂಡು ಬಾಳ್+ ದೇವರುಗಳನ್ನ ಆರಾಧಿಸೋಕೆ, ಅಡ್ಡಬೀಳೋಕೆ ಶುರುಮಾಡಿದ. 32 ಜೊತೆಗೆ ಅವನು ಸಮಾರ್ಯದಲ್ಲಿ ಕಟ್ಟಿಸಿದ್ದ ಬಾಳನ+ ದೇವಾಲಯದಲ್ಲಿ ಬಾಳನಿಗಾಗಿ ಒಂದು ಯಜ್ಞವೇದಿ ಮಾಡಿಸಿದ. 33 ಅಹಾಬ ಪೂಜಾಕಂಬವನ್ನೂ*+ ಮಾಡಿಸಿದ. ಅವನು ತನಗಿಂತ ಮುಂಚೆ ಇದ್ದ ಬೇರೆಲ್ಲ ಇಸ್ರಾಯೇಲ್ ರಾಜರಿಗಿಂತ ತುಂಬ ಕೆಟ್ಟ ಕೆಲಸಗಳನ್ನ ಮಾಡಿ ಇಸ್ರಾಯೇಲ್ ದೇವರಾದ ಯೆಹೋವನನ್ನ ಅವ್ರೆಲ್ಲರಿಗಿಂತ ಜಾಸ್ತಿ ರೇಗಿಸಿದ.
34 ಅಹಾಬನ ಕಾಲದಲ್ಲೇ ಬೆತೆಲಿನವನಾದ ಹೀಯೇಲ ಯೆರಿಕೋ ಪಟ್ಟಣನ ಮತ್ತೆ ಕಟ್ಟಿದ. ನೂನನ ಮಗ ಯೆಹೋಶುವನ ಮೂಲಕ ಯೆಹೋವ ಹೇಳಿದ ತರಾನೇ ಯೆರಿಕೋಗೆ ಬುನಾದಿ ಹಾಕುವಾಗ ಅವನ ದೊಡ್ಡ ಮಗ ಅಬೀರಾಮನನ್ನ ಮತ್ತು ಅದಕ್ಕೆ ಬಾಗಿಲು ನಿಲ್ಲಿಸುವಾಗ ಚಿಕ್ಕ ಮಗ ಸೆಗೂಬನನ್ನ ಕಳ್ಕೊಂಡ.+