ಪೇತ್ರ ಬರೆದ ಮೊದಲನೇ ಪತ್ರ
1 ಯೇಸು ಕ್ರಿಸ್ತನ ಅಪೊಸ್ತಲನಾಗಿರೋ+ ಪೇತ್ರ ಅನ್ನೋ ನಾನು ಪೊಂತ, ಗಲಾತ್ಯ, ಕಪ್ಪದೋಕ್ಯ,+ ಏಷ್ಯಾ, ಬಿಥೂನ್ಯದಲ್ಲಿ ಚೆಲ್ಲಾಪಿಲ್ಲಿ ಆಗಿ ವಾಸ ಮಾಡ್ತಿರುವವ್ರಿಗೆ* ಈ ಪತ್ರ ಬರಿತಾ ಇದ್ದೀನಿ. ದೇವರು ನಿಮ್ಮನ್ನ ಆರಿಸ್ಕೊಂಡಿದ್ದಾನೆ. 2 ಸ್ವರ್ಗದಲ್ಲಿರೋ ತಂದೆಯಾದ ದೇವರು+ ಈಗಾಗ್ಲೇ ತೀರ್ಮಾನ ಮಾಡಿರೋ ಪ್ರಕಾರ ನಿಮ್ಮನ್ನ ಆರಿಸ್ಕೊಂಡಿದ್ದಾನೆ. ನಿಮ್ಮನ್ನ ಪವಿತ್ರ ಮಾಡೋಕೆ ಆತನು ಪವಿತ್ರಶಕ್ತಿ ಕೊಟ್ಟನು.+ ನೀವು ಆತನ ಮಾತು ಕೇಳಬೇಕು, ಯೇಸು ಕ್ರಿಸ್ತನ ರಕ್ತದಿಂದ ನಿಮ್ಮನ್ನ ಶುದ್ಧ ಮಾಡ್ಕೋಬೇಕು ಅಂತ ಆತನು ಹೀಗೆ ಮಾಡಿದನು.+
ದೇವರು ನಿಮಗೆ ಅಪಾರ ಕೃಪೆ ತೋರಿಸಬೇಕು, ಸಹಾಯ ಮಾಡಬೇಕು ಅಂತ ನಾನು ದೇವರ ಹತ್ರ ಪ್ರಾರ್ಥನೆ ಮಾಡ್ತೀನಿ.
3 ನಮ್ಮ ಪ್ರಭು ಯೇಸು ಕ್ರಿಸ್ತನ ದೇವರು ಮತ್ತು ತಂದೆ ಆಗಿರೋ ಆತನಿಗೆ ಹೊಗಳಿಕೆ ಸಿಗ್ಲಿ. ದೇವರು ನಮ್ಮ ಕಡೆ ಮಹಾ ಕರುಣೆ ತೋರಿಸಿದ್ದಾನೆ. ಯೇಸು ಕ್ರಿಸ್ತನಿಗೆ ಮತ್ತೆ ಜೀವ ಕೊಟ್ಟು+ ನಮಗೆ ಒಂದು ಹೊಸ ಬದುಕು+ ಕೊಟ್ಟಿದ್ದಾನೆ. ಇದ್ರಿಂದ ನಮಗೊಂದು ನಿರೀಕ್ಷೆ+ ಇದೆ. 4 ನಾಶವಾಗದ, ಹಾಳಾಗದ, ಶಾಶ್ವತ ಜೀವ ನಮಗೆ ಸಿಗಬೇಕು ಅಂತ ದೇವರು ನಮಗೆ ಹೊಸ ಬದುಕು ಕೊಟ್ಟಿದ್ದಾನೆ.+ ಆ ಜೀವವನ್ನ ಸ್ವರ್ಗದಲ್ಲಿ ಆತನು ಭದ್ರವಾಗಿ ನಿಮಗೋಸ್ಕರ ಇಟ್ಟಿದ್ದಾನೆ.+ 5 ನಿಮಗೆ ನಂಬಿಕೆ ಇರೋದ್ರಿಂದ ದೇವರು ತನ್ನ ಶಕ್ತಿಯಿಂದ ನಿಮ್ಮನ್ನ ಕಾಪಾಡ್ತಾ ಇದ್ದಾನೆ. ಕೊನೆ ಕಾಲದಲ್ಲಿ ಸಿಗೋ ರಕ್ಷಣೆಯನ್ನ ನೀವು ಪಡಿಬೇಕು ಅಂತ ದೇವರು ನಿಮ್ಮನ್ನ ಕಾಪಾಡ್ತಾ ಇದ್ದಾನೆ. 6 ಅದಕ್ಕೆ ನೀವು ತುಂಬ ಖುಷಿ ಆಗಿದ್ದೀರ. ಆದ್ರೆ ಸ್ವಲ್ಪ ಸಮಯದ ತನಕ ನೀವು ಬೇರೆಬೇರೆ ತರದ ಕಷ್ಟಗಳನ್ನ ಅನುಭವಿಸಬೇಕಾಗುತ್ತೆ.+ 7 ಹೀಗೆ ಕಷ್ಟ ಬಂದಾಗ ನಿಮ್ಮ ನಂಬಿಕೆಗೆ ಪರೀಕ್ಷೆ ಬರುತ್ತೆ.+ ಅಂಥ ನಂಬಿಕೆಗೆ ಚಿನ್ನಕ್ಕಿಂತ ತುಂಬ ಬೆಲೆ ಇದೆ. ಯಾಕಂದ್ರೆ ಚಿನ್ನ ಬೆಂಕಿಯ ಪರೀಕ್ಷೆಯನ್ನ ಗೆದ್ದು ಬಂದ್ರೂ ಆಮೇಲೆ ನಾಶವಾಗಿ ಹೋಗುತ್ತೆ. ಆದ್ರೆ ಪರೀಕ್ಷೆಯನ್ನ ಗೆಲ್ಲೋ ನಿಮ್ಮ ನಂಬಿಕೆ ಯೇಸು ಕ್ರಿಸ್ತ ಮತ್ತೆ ಬರುವಾಗ ನಿಮಗೆ ಹೊಗಳಿಕೆ, ಮಹಿಮೆ, ಗೌರವ ತರುತ್ತೆ.+ 8 ನೀವು ಕ್ರಿಸ್ತನನ್ನ ಯಾವತ್ತೂ ನೋಡಿಲ್ಲ, ಆದ್ರೂ ಆತನನ್ನ ಪ್ರೀತಿಸ್ತೀರ. ನಿಮಗೆ ಆತನು ಈಗ್ಲೂ ಕಾಣಿಸ್ತಾ ಇಲ್ಲ ಆದ್ರೂ ಆತನ ಮೇಲೆ ನಂಬಿಕೆ ಇಟ್ಟಿದ್ದೀರ. ತುಂಬ ಖುಷಿಯಾಗಿ ಇದ್ದೀರ. ಆ ಸಂತೋಷವನ್ನ ಮಾತಲ್ಲಿ ಹೇಳಕ್ಕಾಗಲ್ಲ. 9 ಯಾಕಂದ್ರೆ ನಿಮ್ಮ ನಂಬಿಕೆ ನಿಮ್ಮ ಪ್ರಾಣ ಕಾಪಾಡುತ್ತೆ ಅನ್ನೋ ಭರವಸೆ ನಿಮಗಿದೆ.+
10 ಈ ರಕ್ಷಣೆ ಬಗ್ಗೆ ಪ್ರವಾದಿಗಳು ಕುತೂಹಲದಿಂದ ಕೇಳಿ ಚೆನ್ನಾಗಿ ತಿಳ್ಕೊಂಡಿದ್ರು. ನಿಮಗೆ ದೇವರು ಕೊಡೋ ಅಪಾರ ಕೃಪೆ ಬಗ್ಗೆ ಭವಿಷ್ಯ ಹೇಳಿದ್ರು.+ 11 ಕ್ರಿಸ್ತ ಕಷ್ಟಪಡ್ತಾನೆ, ಆಮೇಲೆ ಆತನಿಗೆ ಮಹಿಮೆ ಸಿಗುತ್ತೆ ಅಂತ ದೇವರು ತನ್ನ ಪವಿತ್ರಶಕ್ತಿ ಮೂಲಕ ಪ್ರವಾದಿಗಳಿಗೆ ಮುಂಚೆನೇ ಹೇಳಿದನು.+ ಅದಕ್ಕೆ ಅವರು ಕ್ರಿಸ್ತನಿಗೆ ಯಾವಾಗ ಏನಾಗುತ್ತೆ ಅಂತ ಕಂಡುಹಿಡಿಯೋಕೆ ಪ್ರಯತ್ನ ಮಾಡ್ತಾ ಇದ್ರು.+ 12 ಅವರು ಭವಿಷ್ಯ ಹೇಳ್ತಾ ಇದ್ದಿದ್ದು ಅವ್ರಿಗೋಸ್ಕರ ಅಲ್ಲ ನಿಮಗೋಸ್ಕರ ಅಂತ ದೇವರು ಅವ್ರಿಗೆ ಹೇಳಿದನು. ಪ್ರವಾದಿಗಳು ಬರೆದಿರೋ ವಿಷ್ಯಗಳನ್ನೇ ನೀವು ಈಗ ಕೇಳಿಸ್ಕೊಂಡಿದ್ದೀರ. ಸ್ವರ್ಗದಿಂದ ಬಂದ ಪವಿತ್ರಶಕ್ತಿಯ ಸಹಾಯದಿಂದ ಸಿಹಿಸುದ್ದಿ ಹೇಳ್ತಿದ್ದವ್ರ ಮೂಲಕ ಕೇಳಿಸ್ಕೊಂಡಿದ್ದೀರ.+ ಈ ವಿಷ್ಯಗಳ ಬಗ್ಗೆ ದೇವದೂತರೂ ಕುತೂಹಲದಿಂದ ಕಾಯ್ತಾ ಬಗ್ಗಿ ನೋಡ್ತಿದ್ದಾರೆ.
13 ಹಾಗಾಗಿ ಕಷ್ಟಪಟ್ಟು ಕೆಲಸ ಮಾಡೋಕೆ ನಿಮ್ಮ ಮನಸ್ಸನ್ನ ಪೂರ್ತಿ ಸಿದ್ಧಮಾಡ್ಕೊಳ್ಳಿ.+ ನಿಮ್ಮ ಬುದ್ಧಿಶಕ್ತಿಯನ್ನ ಚೆನ್ನಾಗಿ ಬಳಸಿ.+ ಯೇಸು ಕ್ರಿಸ್ತ ಮತ್ತೆ ಬರುವಾಗ ನಿಮಗೆ ಅಪಾರ ಕೃಪೆ ಸಿಗುತ್ತೆ ಅಂತ ನಂಬಿ ಕಾಯ್ತಾ ಇರಿ. 14 ನಿಮಗೆ ದೇವರ ಬಗ್ಗೆ ಗೊತ್ತಿಲ್ದೆ ಇದ್ದಾಗ ನಿಮಗೆ ಇಷ್ಟ ಬಂದ ಹಾಗೆ ನಡ್ಕೊಳ್ತಾ ಇದ್ರಿ. ಆದ್ರೆ ಈಗ ನೀವು ದೇವರ ಮಕ್ಕಳಾಗಿ ಇದ್ದೀರ. ಹಾಗಾಗಿ ಮುಂಚಿನ ತರ ಕೆಟ್ಟ ಆಸೆಗಳ ಹಿಂದೆ ಮತ್ತೆ ಹೋಗಬೇಡಿ. 15 ನಿಮ್ಮನ್ನ ಕರೆದಿರೋ ದೇವರು ಪವಿತ್ರನು. ಹಾಗಾಗಿ ಆತನ ತರ ನೀವೂ ನಿಮ್ಮ ನಡೆನುಡಿಯಲ್ಲಿ ಪವಿತ್ರರಾಗಿ ಇರಬೇಕು.+ 16 ಯಾಕಂದ್ರೆ ಪವಿತ್ರ ಗ್ರಂಥದಲ್ಲಿ “ನಾನು ಪವಿತ್ರನಾಗಿ ಇರೋದ್ರಿಂದ ನೀವೂ ಪವಿತ್ರರಾಗಿ ಇರಬೇಕು” ಅಂತ ಬರೆದಿದೆ.+
17 ಭೇದಭಾವ ಮಾಡ್ದೆ ಅವ್ರವ್ರ ಕೆಲಸಕ್ಕೆ ತಕ್ಕ ಹಾಗೆ ತೀರ್ಪು ಕೊಡೋ ತಂದೆಗೆ ನೀವು ಪ್ರಾರ್ಥನೆ ಮಾಡ್ತೀರಲ್ವಾ?+ ಹಾಗಿದ್ರೆ ಈ ಲೋಕದಲ್ಲಿ ಸ್ವಲ್ಪ ದಿನ ಇರೋಕೆ ಬಂದಿರೋ ಜನ್ರ ತರ ಇಲ್ಲಿರೋ ತನಕ ದೇವರಿಗೆ ಭಯಪಟ್ಟು ನಡ್ಕೊಳ್ಳಿ.+ 18 ನಿಮ್ಮ ಪೂರ್ವಜರ ಸುಳ್ಳು ಆಚಾರವಿಚಾರಗಳನ್ನ ನೀವು ಮಾಡ್ತಾ ಇದ್ರಿ. ಆದ್ರೆ ಅದ್ರಿಂದ ನಿಮಗೆ ಬಿಡುಗಡೆ ಸಿಕ್ತು.+ ಆ ಬಿಡುಗಡೆ ನಾಶವಾಗೋ ಬೆಳ್ಳಿಬಂಗಾರದಿಂದ ಸಿಗಲಿಲ್ಲ ಅಂತ ನಿಮಗೆ ಗೊತ್ತು. 19 ಬದಲಿಗೆ ಕ್ರಿಸ್ತನ+ ಅಮೂಲ್ಯವಾದ ರಕ್ತದಿಂದ+ ಬಿಡುಗಡೆ ಸಿಕ್ತು. ಅದು ಯಾವ ಕಳಂಕ, ಕುಂದುಕೊರತೆ ಇಲ್ಲದ ಕುರಿಮರಿಯ+ ರಕ್ತ. 20 ಈ ಲೋಕ ಹುಟ್ಟೋ ಮುಂಚೆನೇ ದೇವರು ಕ್ರಿಸ್ತನನ್ನ ಆರಿಸ್ಕೊಂಡಿದ್ದನು.+ ಆದ್ರೆ ನಿಮಗೋಸ್ಕರ ಈ ಕಾಲದ ಕೊನೆಯಲ್ಲಿ ಆತನು ಬಂದನು.+ 21 ಕ್ರಿಸ್ತನಿಂದ ನೀವು ದೇವರ ಮೇಲೆ ನಂಬಿಕೆ ಇಡೋ ತರ ಆಯ್ತು.+ ನೀವು ದೇವರ ಮೇಲೆ ನಂಬಿಕೆ ಇಡಬೇಕು, ಭರವಸೆ ಇಡಬೇಕು ಅಂತ ಸತ್ತುಹೋದ ಕ್ರಿಸ್ತನಿಗೆ ದೇವರು ಮತ್ತೆ ಜೀವ ಕೊಟ್ಟು+ ಗೌರವಿಸಿದನು.+
22 ನೀವು ದೇವರ ಸಂದೇಶದಲ್ಲಿರೋ ಸತ್ಯವಾದ ಮಾತುಗಳನ್ನ ಕೇಳಿರೋದ್ರಿಂದ ನೀವು ಶುದ್ಧರಾಗಿದ್ದೀರ, ಒಬ್ರು ಇನ್ನೊಬ್ರನ್ನ ಒಡಹುಟ್ಟಿದವ್ರ+ ತರ ನೋಡ್ತೀರ. ಹಾಗಾಗಿ ಒಬ್ರನ್ನೊಬ್ರು ಮನಸಾರೆ ಪ್ರೀತಿಸಿ.+ 23 ನಿಮಗೆ ಹೊಸ ಬದುಕು ಸಿಕ್ಕಿದೆ.+ ಅದು ನಾಶವಾಗೋ ಬೀಜದಿಂದಲ್ಲ, ನಾಶವಾಗದ ಬೀಜದಿಂದ+ ಜೀವ ಇರೋ ಮತ್ತು ಸಹನೆ ಇರೋ ದೇವರ ಸಂದೇಶದ ಮೂಲಕ ಸಿಕ್ಕಿದೆ.+ 24 ಯಾಕಂದ್ರೆ “ಮನುಷ್ಯರೆಲ್ಲ ಹಸಿರು ಹುಲ್ಲಿನ ತರ ಇದ್ದಾರೆ. ಅವ್ರ ಅಂದಚಂದ ಹೊಲದ ಹೂವಿನ ತರ ಇದೆ. ಹುಲ್ಲು ಬಾಡಿಹೋಗುತ್ತೆ, ಹೂವು ಉದುರಿಹೋಗುತ್ತೆ. 25 ಆದ್ರೆ ಯೆಹೋವನ* ಮಾತು ಯಾವಾಗ್ಲೂ ಇರುತ್ತೆ.”+ ಆ ‘ಮಾತೇ’ ನಿಮಗೆ ಹೇಳಿರೋ ಸಿಹಿಸುದ್ದಿ.+