ಲೂಕ
9 ಆಮೇಲೆ ಯೇಸು 12 ಶಿಷ್ಯರನ್ನ ಕರೆದು ಅವ್ರಿಗೆ ಕೆಟ್ಟ ದೇವದೂತರನ್ನ ಬಿಡಿಸೋ,+ ರೋಗಗಳನ್ನ ವಾಸಿಮಾಡೋ ಶಕ್ತಿ ಮತ್ತು ಅಧಿಕಾರ ಕೊಟ್ಟನು.+ 2 ಅಷ್ಟೇ ಅಲ್ಲ ದೇವರ ಆಳ್ವಿಕೆ ಬಗ್ಗೆ ಸಾರೋಕೆ, ಜನ್ರನ್ನ ವಾಸಿಮಾಡೋಕೆ ಅವ್ರನ್ನ ಕಳಿಸ್ತಾ 3 ಹೀಗಂದನು “ನೀವು ಹೋಗುವಾಗ ಕೋಲು, ಆಹಾರದ ಚೀಲ, ರೊಟ್ಟಿ, ಹಣದ ಚೀಲ* ತಗೊಂಡು ಹೋಗಬೇಡಿ. ಇನ್ನೊಂದು ಜೊತೆ ಬಟ್ಟೆ ಸಹ ಇಟ್ಕೊಬೇಡಿ.+ 4 ಒಂದು ಮನೆಗೆ ಹೋದ ಮೇಲೆ ಅಲ್ಲಿಂದ ಹೋಗೋ ತನಕ ಆ ಮನೆಯಲ್ಲೇ ಇರಿ.+ 5 ಯಾವುದೇ ಮನೆಯವರು, ಊರಿನವರು ನಿಮ್ಮನ್ನ ಒಳಗೆ ಕರಿದೆ ಇದ್ರೆ, ನಿಮ್ಮ ಸಂದೇಶ ಕೇಳದಿದ್ರೆ ಅಲ್ಲಿಂದ ಹೋಗುವಾಗ ನಿಮ್ಮ ಕಾಲಿನ ಧೂಳನ್ನ ಝಾಡಿಸಿ.”+ 6 ಆಗ ಶಿಷ್ಯರು ಆ ಪ್ರದೇಶದಲ್ಲಿದ್ದ ಹಳ್ಳಿಹಳ್ಳಿಗೂ ಹೋಗಿ ಎಲ್ಲ ಕಡೆ ಸಿಹಿಸುದ್ದಿ ಸಾರಿದ್ರು ಮತ್ತು ಜನ್ರನ್ನ ವಾಸಿಮಾಡಿದ್ರು.+
7 ನಡಿತಿದ್ದ ವಿಷ್ಯಗಳ ಬಗ್ಗೆ ಕೇಳಿಸ್ಕೊಂಡಾಗ ಅಧಿಪತಿಯಾಗಿದ್ದ ಹೆರೋದನಿಗೆ* ತುಂಬ ಗಾಬರಿ ಆಯ್ತು. ಯಾಕಂದ್ರೆ ಯೋಹಾನ ಮತ್ತೆ ಬದುಕಿ ಬಂದಿದ್ದಾನೆ ಅಂತ ಜನ ಹೇಳ್ತಿದ್ರು.+ 8 ಇನ್ನು ಸ್ವಲ್ಪ ಜನ ಅವನನ್ನ ಎಲೀಯ ಅಂತ, ಹಳೇ ಕಾಲದ ಒಬ್ಬ ಪ್ರವಾದಿ ಅಂತ ಹೇಳ್ತಿದ್ರು.+ 9 ಆಗ ಹೆರೋದ “ನಾನೇ ಯೋಹಾನನ ತಲೆ ಕಡಿಸಿದ್ದು.+ ಅಂದಮೇಲೆ ಇವನು ಯಾರು?” ಅಂದ. ಹಾಗಾಗಿ ಆತನನ್ನ ನೋಡಬೇಕಂತ ಇದ್ದ.+
10 ಅಪೊಸ್ತಲರು ವಾಪಸ್ ಬಂದಾಗ ಏನೇನು ಮಾಡಿದ್ರು ಅಂತ ಯೇಸುಗೆ ಹೇಳಿದ್ರು.+ ಆಗ ಆತನು ಅವ್ರನ್ನ ಮಾತ್ರ ಕರ್ಕೊಂಡು ಬೇತ್ಸಾಯಿದ ಅನ್ನೋ ಊರಿಗೆ ಹೋದನು.+ 11 ಜನ್ರಿಗೆ ಇದು ಗೊತ್ತಾದಾಗ ಆತನ ಹಿಂದೆನೇ ಹೋದ್ರು. ಆತನು ಅವ್ರನ್ನ ಪ್ರೀತಿಯಿಂದ ಹತ್ರ ಕರೆದು ದೇವರ ಆಳ್ವಿಕೆ ಬಗ್ಗೆ ಹೇಳೋಕೆ ಶುರುಮಾಡಿದನು. ರೋಗಿಗಳನ್ನೆಲ್ಲ ವಾಸಿಮಾಡಿದನು.+ 12 ಸಂಜೆ ಆದಾಗ 12 ಶಿಷ್ಯರು ಬಂದು “ನಾವು ತುಂಬ ದೂರ ಬಂದುಬಿಟ್ಟಿದ್ದೀವಿ. ಈ ಜನ್ರನ್ನೆಲ್ಲ ಕಳಿಸಿಬಿಡು. ಅವರು ಅಕ್ಕಪಕ್ಕದ ಹಳ್ಳಿಗೆ ಹೋಗಿ ಛತ್ರದಲ್ಲಿ ಉಳ್ಕೊಳ್ತಾರೆ, ಏನಾದ್ರೂ ತಗೊಂಡು ತಿಂತಾರೆ” ಅಂದ್ರು.+ 13 ಆದ್ರೆ ಆತನು “ನೀವೇ ಅವ್ರಿಗೆ ಏನಾದ್ರೂ ತಿನ್ನೋಕೆ ಕೊಡಿ”+ ಅಂದನು. ಅದಕ್ಕೆ “ನಮ್ಮ ಹತ್ರ ಐದು ರೊಟ್ಟಿ ಎರಡು ಮೀನು ಬಿಟ್ಟು ಬೇರೇನೂ ಇಲ್ಲ. ನಾವು ಹೋಗಿ ಇವ್ರಿಗೆಲ್ಲ ಆಗೋಷ್ಟು ಊಟ ತರಬೇಕಾ?” ಅಂದ್ರು. 14 ಅಲ್ಲಿ ಗಂಡಸರೇ ಸುಮಾರು 5,000 ಜನ ಇದ್ರು. ಆತನು ಶಿಷ್ಯರಿಗೆ “ಅವ್ರನ್ನ 50-50 ಮಂದಿ ಇರೋ ತರ ಗುಂಪು ಮಾಡಿ ಕೂರಿಸಿ” ಅಂದನು. 15 ಅವರು ಹಾಗೇ ಕೂರಿಸಿದ್ರು. 16 ಆಮೇಲೆ ಯೇಸು ಐದು ರೊಟ್ಟಿ ಎರಡು ಮೀನು ತಗೊಂಡು ಆಕಾಶದ ಕಡೆ ನೋಡಿ ಪ್ರಾರ್ಥಿಸಿದನು. ರೊಟ್ಟಿ ಮುರಿದು ಶಿಷ್ಯರಿಗೆ ಕೊಟ್ಟು ಜನ್ರಿಗೆ ಹಂಚಿ ಅಂದನು. 17 ಎಲ್ರೂ ತೃಪ್ತಿ ಆಗುವಷ್ಟು ತಿಂದ್ರು. ಶಿಷ್ಯರು ಉಳಿದ ರೊಟ್ಟಿ ತುಂಡುಗಳನ್ನ ಕೂಡಿಸಿದಾಗ 12 ಬುಟ್ಟಿ ತುಂಬಿತು.+
18 ಆಮೇಲೆ ಆತನೊಬ್ಬನೇ ಪ್ರಾರ್ಥಿಸ್ತಿದ್ದಾಗ ಶಿಷ್ಯರು ಬಂದ್ರು. ಆಗ ಆತನು ಅವ್ರಿಗೆ “ನಾನು ಯಾರಂತ ಜನ ಹೇಳ್ತಾರೆ?”+ ಅಂತ ಕೇಳಿದನು. 19 ಅದಕ್ಕೆ “ಕೆಲವರು ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಅಂತಾರೆ, ಕೆಲವರು ಎಲೀಯ ಅಂತಾರೆ, ಇನ್ನು ಕೆಲವರು ಹಳೇ ಕಾಲದ ಪ್ರವಾದಿ ಮತ್ತೆ ಎದ್ದು ಬಂದಿದ್ದಾನೆ ಅಂತಾರೆ”+ ಅಂದ್ರು. 20 “ಆದ್ರೆ ನೀವು ನನ್ನನ್ನ ಯಾರಂತ ಹೇಳ್ತೀರಾ?” ಅಂತ ಕೇಳಿದನು. ಅದಕ್ಕೆ ಪೇತ್ರ “ನೀನು ದೇವರು ಕಳಿಸಿದ ಕ್ರಿಸ್ತ”+ ಅಂದ. 21 ಇದನ್ನ ಯಾರಿಗೂ ಹೇಳಬಾರದು ಅಂತ ಯೇಸು ಕಟ್ಟುನಿಟ್ಟಾಗಿ ಹೇಳ್ತಾ+ 22 “ಮನುಷ್ಯಕುಮಾರ ತುಂಬ ಕಷ್ಟಪಡಬೇಕಾಗುತ್ತೆ. ಅಧಿಕಾರಿಗಳು, ಮುಖ್ಯ ಪುರೋಹಿತರು, ಪಂಡಿತರು ಅವನನ್ನ ಒಪ್ಕೊಳ್ಳದೆ ಕೊಲ್ತಾರೆ.+ ಆದ್ರೆ ಮೂರನೇ ದಿನ ಮತ್ತೆ ಬದುಕಿ ಬರ್ತಾನೆ”+ ಅಂದನು.
23 ಆಮೇಲೆ ಆತನು “ಯಾರಿಗಾದ್ರೂ ನನ್ನ ಶಿಷ್ಯನಾಗೋಕೆ ಮನಸ್ಸಿದ್ರೆ ಅವನು ಇನ್ಮುಂದೆ ತನಗೋಸ್ಕರ ಜೀವಿಸದೆ+ ಪ್ರತಿದಿನ ತನ್ನ ಹಿಂಸಾ ಕಂಬ* ಹೊತ್ಕೊಂಡು ನನ್ನ ಹಿಂದೆನೇ ಬರಲಿ.+ 24 ಯಾಕಂದ್ರೆ ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಆಸೆಪಡುವವನು ಅದನ್ನ ಕಳ್ಕೊಳ್ತಾನೆ. ಆದ್ರೆ ನನ್ನ ಶಿಷ್ಯನಾಗಿರೋ ಕಾರಣ ಪ್ರಾಣ ಕಳಕೊಳ್ಳುವವನಿಗೆ ಅದು ಮತ್ತೆ ಸಿಗುತ್ತೆ.+ 25 ಒಬ್ಬ ಮನುಷ್ಯ ಲೋಕಾನೇ ಗೆದ್ದು ತನ್ನ ಪ್ರಾಣ ಕಳ್ಕೊಂಡ್ರೆ ಅಥವಾ ಹಾಳಾಗಿ ಹೋದ್ರೆ ಏನು ಪ್ರಯೋಜನ?+ 26 ಯಾರಾದ್ರೂ ನನ್ನಲ್ಲಿ, ನನ್ನ ಮಾತಲ್ಲಿ ನಂಬಿಕೆ ಇಡೋಕೆ ನಾಚಿಕೆಪಟ್ರೆ ಮನುಷ್ಯಕುಮಾರ ಸಹ ತನ್ನ ಅಪ್ಪನಿಂದ ಅಧಿಕಾರ ಪಡ್ಕೊಂಡು ಪವಿತ್ರ ದೂತರ ಜೊತೆ ಬರುವಾಗ ಅವನ ಬಗ್ಗೆ ನಾಚಿಕೆಪಡ್ತಾನೆ.+ 27 ನಿಮಗೆ ನಿಜ ಹೇಳ್ತೀನಿ, ದೇವರ ಆಳ್ವಿಕೆ ಬರೋದನ್ನ ನೋಡೋ ತನಕ ಇಲ್ಲಿ ಇರುವವರಲ್ಲಿ ಸ್ವಲ್ಪ ಜನ ಸಾಯೋದೇ ಇಲ್ಲ”+ ಅಂದನು.
28 ಈ ಮಾತು ಹೇಳಿ ಸುಮಾರು ಎಂಟು ದಿನ ಆದಮೇಲೆ ಆತನು ಪೇತ್ರ, ಯೋಹಾನ, ಯಾಕೋಬನನ್ನ ಕರ್ಕೊಂಡು ಪ್ರಾರ್ಥಿಸೋಕೆ ಬೆಟ್ಟಕ್ಕೆ ಹೋದನು.+ 29 ಪ್ರಾರ್ಥಿಸ್ತಿದ್ದಾಗ ಆತನ ಮುಖದ ರೂಪ ಬದಲಾಯ್ತು. ಉಡುಪು ಬೆಳ್ಳಗೆ ಮಿಂಚ್ತಿತ್ತು. 30 ಅಷ್ಟೇ ಅಲ್ಲ ಇಬ್ರು ಆತನ ಜೊತೆ ಮಾತಾಡ್ತಾ ಇದ್ರು. ಅವರು ಮೋಶೆ ಮತ್ತು ಎಲೀಯ. 31 ಅವರು ಬೆಳ್ಳಗೆ ಹೊಳಿತಾ ಇದ್ರು. ಯೇಸು ಈ ಲೋಕ ಬಿಟ್ಟು ಹೋಗೋದರ ಬಗ್ಗೆ ಅಂದ್ರೆ ಆತನಿಗೆ ಯೆರೂಸಲೇಮಲ್ಲಿ ಆಗೋ ವಿಷ್ಯಗಳ ಬಗ್ಗೆ ಮಾತಾಡ್ತಿದ್ರು.+ 32 ಆಗ ಪೇತ್ರ ಮತ್ತು ಅವನ ಜೊತೆ ಇದ್ದವರು ನಿದ್ದೆಯ ಗುಂಗಲ್ಲಿದ್ರು. ಅವರು ನಿದ್ದೆಯಿಂದ ಎದ್ದಾಗ ಯೇಸು ಬೆಳ್ಳಗೆ ಹೊಳಿತಾ+ ಇರೋದನ್ನ ಮತ್ತು ಆತನ ಜೊತೆ ಇಬ್ರು ನಿಂತಿರೋದನ್ನ ನೋಡಿದ್ರು. 33 ಆ ಇಬ್ರು ಯೇಸುವನ್ನ ಬಿಟ್ಟು ಹೋಗ್ತಿದ್ದಾಗ ಪೇತ್ರ ಯೇಸುಗೆ “ಗುರು, ನಾವಿಲ್ಲಿ ಬಂದಿದ್ದು ಒಳ್ಳೇದಾಯ್ತು. ಇಲ್ಲಿ ಮೂರು ಡೇರೆ ಹಾಕ್ತೀವಿ. ಒಂದು ನಿನಗೆ, ಒಂದು ಮೋಶೆಗೆ, ಇನ್ನೊಂದು ಎಲೀಯನಿಗೆ” ಅಂದ. ಪೇತ್ರನಿಗೆ ಏನು ಹೇಳಬೇಕು ಅಂತ ಗೊತ್ತಾಗದೆ ಹಾಗೆ ಹೇಳಿದ್ದ. 34 ಪೇತ್ರ ಮಾತಾಡ್ತಾ ಇದ್ದಾಗಲೇ ಅವ್ರ ಮೇಲೆ ಬಿಳಿ ಮೋಡ ಕವಿತು. ಅವ್ರಿಗೆ ತುಂಬ ಭಯ ಆಯ್ತು. 35 ಆ ಮೋಡದಿಂದ “ಇವನು ನನ್ನ ಮಗ. ನಾನು ಇವನನ್ನ ಆರಿಸ್ಕೊಂಡಿದ್ದೀನಿ.+ ಇವನ ಮಾತು ಕೇಳಿ”+ ಅನ್ನೋ ಧ್ವನಿ+ ಕೇಳಿಸ್ತು. 36 ಆಗ ಶಿಷ್ಯರು ಅಲ್ಲಿ ಯೇಸುವನ್ನ ಮಾತ್ರ ನೋಡಿದ್ರು. ಅವರು ಇದ್ರ ಬಗ್ಗೆ ಸುಮಾರು ದಿನಗಳ ತನಕ ಯಾರಿಗೂ ಹೇಳಲಿಲ್ಲ.+
37 ಮಾರನೇ ದಿನ ಅವರು ಬೆಟ್ಟ ಇಳಿದು ಬಂದಾಗ ತುಂಬ ಜನ ಆತನನ್ನ ಭೇಟಿಮಾಡೋಕೆ ಬಂದ್ರು.+ 38 ಅವ್ರಲ್ಲಿ ಒಬ್ಬ “ಗುರು, ದಯವಿಟ್ಟು ಬಂದು ನನ್ನ ಮಗನನ್ನ ನೋಡು. ನನಗಿರೋದು ಒಬ್ಬನೇ ಮಗ.+ 39 ಅವನು ಒಬ್ಬ ಕೆಟ್ಟ ದೇವದೂತನ ಹತೋಟಿಯಲ್ಲಿದ್ದಾನೆ. ಆ ಕೆಟ್ಟ ದೇವದೂತ ಮೈಯಲ್ಲಿ ಬಂದ ತಕ್ಷಣ ಅವನು ಕೂಗ್ತಾನೆ, ನೆಲಕ್ಕೆ ಬಿದ್ದು ಒದ್ದಾಡ್ತಾನೆ, ಬಾಯಲ್ಲಿ ನೊರೆ ಬರುತ್ತೆ. ಹೀಗೆ ತುಂಬ ಕಷ್ಟ ಕೊಟ್ಟ ಮೇಲೆ ಆ ಕೆಟ್ಟ ದೇವದೂತ ಬಿಟ್ಟುಬಿಡ್ತಾನೆ. 40 ಆ ಕೆಟ್ಟ ದೇವದೂತನಿಂದ ನನ್ನ ಮಗನನ್ನ ಬಿಡಿಸೋಕೆ ನಿನ್ನ ಶಿಷ್ಯರ ಹತ್ರ ಕರ್ಕೊಂಡು ಬಂದೆ. ಆದ್ರೆ ವಾಸಿಮಾಡೋಕೆ ಅವ್ರಿಂದ ಆಗ್ಲಿಲ್ಲ” ಅಂದ. 41 ಅದಕ್ಕೆ ಯೇಸು “ನಂಬಿಕೆ ಇಲ್ಲದವ್ರೇ, ಪಾಪಿಗಳೇ,+ ನಾನಿನ್ನೂ ಎಷ್ಟು ಸಮಯ ನಿಮ್ಮ ಜೊತೆ ಇರಬೇಕು? ಎಷ್ಟು ದಿನ ಅಂತ ನಿಮ್ಮನ್ನ ಸಹಿಸ್ಕೊಬೇಕು? ನಿನ್ನ ಮಗನನ್ನ ಕರ್ಕೊಂಡು ಬಾ”+ ಅಂದನು. 42 ಅವನು ಹತ್ರ ಬರ್ತಿರೋವಾಗ ಆ ಕೆಟ್ಟ ದೇವದೂತ ಹುಡುಗನನ್ನ ನೆಲಕ್ಕೆ ಬೀಳಿಸಿ, ಒದ್ದಾಡಿಸಿ, ಹಿಂಸೆ ಮಾಡಿದ. ಆದ್ರೆ ಯೇಸು ಆ ಕೆಟ್ಟ ದೇವದೂತನನ್ನ ಗದರಿಸಿ, ಆ ಹುಡುಗನನ್ನ ವಾಸಿ ಮಾಡಿ ಅವನ ತಂದೆಗೆ ಒಪ್ಪಿಸಿದನು. 43 ಆಗ ಅವ್ರೆಲ್ಲ ದೇವರ ಮಹಾಶಕ್ತಿ ನೋಡಿ ಬೆರಗಾದ್ರು.
ಯೇಸು ಮಾಡ್ತಿದ್ದ ವಿಷ್ಯಗಳನ್ನೆಲ್ಲ ನೋಡಿ ಜನ ಆಶ್ಚರ್ಯಪಡ್ತಿದ್ದಾಗ ಆತನು ಶಿಷ್ಯರಿಗೆ 44 “ಈ ಮಾತನ್ನ ಚೆನ್ನಾಗಿ ಕೇಳಿಸ್ಕೊಂಡು ನೆನಪಿಟ್ಕೊಳ್ಳಿ. ಮನುಷ್ಯಕುಮಾರನಿಗೆ ಮೋಸ ಮಾಡಿ ಶತ್ರುಗಳ ಕೈಗೆ ಒಪ್ಪಿಸ್ತಾರೆ”+ ಅಂದನು. 45 ಆದ್ರೆ ಅವ್ರಿಗೆ ಅದು ಅರ್ಥ ಆಗಲಿಲ್ಲ. ನಿಜ ಹೇಳಬೇಕಂದ್ರೆ ಅವ್ರಿಗೆ ಅರ್ಥ ಆಗದ ಹಾಗೆ ಆ ಮಾತನ್ನ ರಹಸ್ಯವಾಗಿ ಇಡಲಾಗಿತ್ತು. ಅವರು ಸಹ ಇದ್ರ ಬಗ್ಗೆ ಆತನ ಹತ್ರ ಕೇಳೋಕೆ ಭಯಪಟ್ರು.
46 ಆಮೇಲೆ ಯಾರು ದೊಡ್ಡವರು ಅನ್ನೋ ವಿಷ್ಯದಲ್ಲಿ ಅವ್ರ ಮಧ್ಯ ಜಗಳ ಶುರುವಾಯ್ತು.+ 47 ಅವರು ಮನಸ್ಸಲ್ಲಿ ಏನು ಅಂದ್ಕೊಳ್ತಿದ್ದಾರೆ ಅಂತ ಗೊತ್ತಿದ್ದ ಯೇಸು ಚಿಕ್ಕ ಮಗುವನ್ನ ಕರೆದು ಪಕ್ಕದಲ್ಲಿ ನಿಲ್ಲಿಸಿ 48 “ನನ್ನ ಮೇಲಿನ ಗೌರವದಿಂದ* ಇಂಥ ಒಂದು ಚಿಕ್ಕ ಮಗುನ ಸ್ವೀಕರಿಸಿದ್ರೆ ನನ್ನನ್ನೂ ಸ್ವೀಕರಿಸ್ತಾರೆ. ನನ್ನನ್ನ ಜನ ಸ್ವೀಕರಿಸಿದ್ರೆ ನನ್ನನ್ನ ಕಳಿಸಿದ ದೇವರನ್ನೂ ಸ್ವೀಕರಿಸ್ತಾರೆ.+ ನಿಮ್ಮಲ್ಲಿ ಯಾರು ಚಿಕ್ಕವನಾಗಿ ಇರ್ತಾನೋ ಅವನೇ ದೊಡ್ಡವನು”+ ಅಂದನು.
49 ಆಗ ಯೋಹಾನ ಯೇಸುಗೆ “ಗುರು, ಅಲ್ಲೊಬ್ಬ ನಿನ್ನ ಹೆಸ್ರಲ್ಲಿ ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ದ. ಅವನನ್ನ ತಡೆದ್ವಿ. ಯಾಕಂದ್ರೆ ಅವನು ನಮ್ಮವನಲ್ಲ”+ ಅಂದ. 50 ಅದಕ್ಕೆ ಯೇಸು “ಅವನನ್ನ ತಡಿಬೇಡಿ. ಯಾಕಂದ್ರೆ ನಮಗೆ ವಿರುದ್ಧವಾಗಿ ಇಲ್ಲದವ್ರೆಲ್ಲ ನಮ್ಮವರೇ” ಅಂದನು.
51 ಆತನು ಸ್ವರ್ಗಕ್ಕೆ ಹೋಗೋ ಸಮಯ ಹತ್ರ ಆಗಿತ್ತು.+ ಹಾಗಾಗಿ ಯೆರೂಸಲೇಮಿಗೆ ಹೋಗಬೇಕಂತ ತೀರ್ಮಾನ ಮಾಡಿದನು. 52 ಮೊದಲು ಕೆಲವು ಶಿಷ್ಯರನ್ನ ಕಳಿಸಿದನು. ಅವರು ಯೇಸುಗೆ ಉಳ್ಕೊಳ್ಳೋಕೆ ಸ್ಥಳ ಹುಡುಕೋಕೆ ಸಮಾರ್ಯದವರ ಒಂದು ಹಳ್ಳಿಗೆ ಹೋದ್ರು. 53 ಆದ್ರೆ ಆತನು ಯೆರೂಸಲೇಮಿಗೆ ಹೋಗೋಕೆ ತೀರ್ಮಾನ ಮಾಡಿದ್ರಿಂದ ಸಮಾರ್ಯದವರು ಆತನನ್ನ ಊರೊಳಗೆ ಸೇರಿಸ್ಕೊಳ್ಳಲಿಲ್ಲ.+ 54 ಶಿಷ್ಯರಾದ ಯಾಕೋಬ ಮತ್ತು ಯೋಹಾನ+ ಇದನ್ನ ನೋಡಿ “ಸ್ವಾಮಿ, ಇವ್ರನ್ನ ನಾಶಮಾಡೋಕೆ ಆಕಾಶದಿಂದ ಬೆಂಕಿಮಳೆ ಬರೋ ತರ ಮಾಡಬೇಕಾ?”+ ಅಂತ ಕೇಳಿದ್ರು. 55 ಆದ್ರೆ ಆತನು ಅವ್ರ ಕಡೆ ತಿರುಗಿ ಅವ್ರನ್ನ ಬೈದನು. 56 ಆಮೇಲೆ ಅವ್ರೆಲ್ಲ ಬೇರೆ ಊರಿಗೆ ಹೋದ್ರು.
57 ಅವರು ದಾರಿಯಲ್ಲಿ ಹೋಗ್ತಿದ್ದಾಗ ಯೇಸು ಹತ್ರ ಒಬ್ಬ ಬಂದು “ನೀನು ಎಲ್ಲೇ ಹೋದ್ರೂ ನಿನ್ನ ಹಿಂದೆ ಬರ್ತಿನಿ” ಅಂದ. 58 ಅದಕ್ಕೆ ಯೇಸು “ನರಿಗಳಿಗೆ ಗುಹೆ ಇದೆ, ಪಕ್ಷಿಗಳಿಗೆ ಗೂಡು ಇದೆ. ಆದ್ರೆ ಮನುಷ್ಯಕುಮಾರನಿಗೆ ತಲೆ ಇಡೋಕೂ ಜಾಗ ಇಲ್ಲ”+ ಅಂದನು. 59 ಆಮೇಲೆ ಇನ್ನೊಬ್ಬನಿಗೆ “ಬಾ, ನನ್ನ ಶಿಷ್ಯನಾಗು” ಅಂದನು. ಅದಕ್ಕೆ ಅವನು “ಸ್ವಾಮೀ, ನಾನು ಮೊದ್ಲು ಹೋಗಿ ನನ್ನ ತಂದೆನ ಮಣ್ಣುಮಾಡಿ ಬರೋಕೆ ಅನುಮತಿ ಕೊಡು”+ ಅಂದ. 60 ಆದ್ರೆ ಯೇಸು “ಸತ್ತವ್ರನ್ನ ಸತ್ತವ್ರೇ ಮಣ್ಣುಮಾಡಲಿ.+ ನೀನು ಹೋಗಿ ದೇವರ ಆಳ್ವಿಕೆ ಬಗ್ಗೆ ಎಲ್ಲ ಕಡೆ ಸಾರಿ ಹೇಳು”+ ಅಂದನು. 61 ಆಮೇಲೆ ಇನ್ನೊಬ್ಬ “ಸ್ವಾಮಿ, ನಾನು ನಿನ್ನ ಶಿಷ್ಯನಾಗ್ತೀನಿ. ಆದ್ರೆ ಮೊದಲು ಹೋಗಿ ನನ್ನ ಮನೆಯವ್ರಿಗೆ ಹೇಳಿ ಬರೋಕೆ ಅನುಮತಿ ಕೊಡು” ಅಂದನು. 62 ಆಗ ಯೇಸು ಅವನಿಗೆ “ನೇಗಿಲ ಮೇಲೆ ಕೈ ಇಟ್ಟು ಹಿಂದೆ ಇರೋ ವಿಷ್ಯಗಳನ್ನ ನೋಡುವವರು+ ದೇವರ ಆಳ್ವಿಕೆಯಲ್ಲಿ ಇರೋಕೆ ಲಾಯಕ್ಕಿಲ್ಲ”+ ಅಂದನು.