ಅಪೊಸ್ತಲರ ಕಾರ್ಯ
17 ಆಮೇಲೆ ಪೌಲ ಮತ್ತು ಸೀಲ ಅಂಫಿಪೊಲಿ ಮತ್ತು ಅಪೊಲೋನ್ಯ ದಾಟಿ ಥೆಸಲೊನೀಕಕ್ಕೆ ಬಂದ್ರು.+ ಅಲ್ಲಿ ಯೆಹೂದ್ಯರ ಸಭಾಮಂದಿರ ಇತ್ತು. 2 ಹಾಗಾಗಿ ಪೌಲ ಯಾವಾಗ್ಲೂ ಹೋಗೋ ತರ ಅಲ್ಲಿಗೆ ಹೋದ.+ ಮೂರು ವಾರಗಳ ತನಕ ಪ್ರತಿ ಸಬ್ಬತ್ ದಿನ ಅವನು ವಚನಗಳನ್ನ ಅರ್ಥಮಾಡ್ಕೊಳ್ಳೋಕೆ ಅಲ್ಲಿದ್ದವ್ರಿಗೆ ಸಹಾಯ ಮಾಡಿದ.+ 3 ವಚನಗಳನ್ನ ತೋರಿಸಿ ಕ್ರಿಸ್ತ ಕಷ್ಟ ಅನುಭವಿಸಿ ಸಾಯೋದು,+ ಮತ್ತೆ ಜೀವದಿಂದ ಎದ್ದು ಬರೋದು+ ಅಗತ್ಯವಾಗಿತ್ತು ಅಂತ ವಿವರಿಸಿದ. “ನಾನು ನಿಮ್ಗೆ ಹೇಳ್ತಿರೋ ಕ್ರಿಸ್ತ ಬೇರೆ ಯಾರೂ ಅಲ್ಲ, ಆತನು ಯೇಸುನೇ” ಅಂದ. 4 ಇದ್ರಿಂದಾಗಿ ಕೆಲವು ಜನ ಶಿಷ್ಯರಾದ್ರು. ಅವರು ಪೌಲ ಮತ್ತು ಸೀಲನ ಜೊತೆ ಇದ್ರು.+ ದೇವಭಕ್ತಿ ಇದ್ದ ತುಂಬ ಜನ ಗ್ರೀಕರು ಮತ್ತು ಹೆಸ್ರುವಾಸಿಯಾಗಿದ್ದ ಸ್ತ್ರೀಯರು ಸಹ ಅದೇ ತರ ಮಾಡಿದ್ರು.
5 ಇದನ್ನ ನೋಡಿ ಯೆಹೂದ್ಯರಿಗೆ ಹೊಟ್ಟೆಕಿಚ್ಚಾಯ್ತು.+ ಹಾಗಾಗಿ ಕೆಲಸ ಇಲ್ಲದೆ ಪೇಟೆಯಲ್ಲಿ ಅಲೆಯುತ್ತಾ ಇದ್ದ ಕೆಲವು ಪೋಲಿ ಜನ್ರನ್ನ ಸೇರಿಸಿ ಒಂದು ಗುಂಪು ಕಟ್ಟಿದ್ರು. ಪಟ್ಟಣದಲ್ಲಿ ಗಲಾಟೆ, ಗಲಿಬಿಲಿ ಎಬ್ಬಿಸಿದ್ರು. ಪೌಲ ಮತ್ತು ಸೀಲನನ್ನ ಈ ಕೆಟ್ಟ ಜನ್ರಿಗೆ ಒಪ್ಪಿಸಬೇಕು ಅನ್ನೋ ಉದ್ದೇಶದಿಂದ ಅವರು ಯಾಸೋನನ ಮನೆ ಮೇಲೆ ದಾಳಿ ಮಾಡಿದ್ರು. 6 ಆದ್ರೆ ಪೌಲ ಮತ್ತು ಸೀಲ ಅಲ್ಲಿರ್ಲಿಲ್ಲ. ಆ ಜನ ಯಾಸೋನನನ್ನ, ಕೆಲವು ಸಹೋದರರನ್ನ ಪಟ್ಟಣದ ಅಧಿಕಾರಿಗಳ ಹತ್ರ ಎಳ್ಕೊಂಡು ಹೋದ್ರು. ಅಲ್ಲಿ ಅವರು “ಇಡೀ ಲೋಕವನ್ನ ತಲೆಕೆಳಗೆ ಮಾಡ್ತಿದ್ದ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ.+ 7 ಈ ಯಾಸೋನನ ಮನೆಯಲ್ಲಿ ಅವರು ಅತಿಥಿಗಳಾಗಿ ಇದ್ರು. ಯೇಸು ಅನ್ನೋ ಇನ್ನೊಬ್ಬ ರಾಜ ಇದ್ದಾನೆ ಅಂತ ಹೇಳ್ತಾ ನಮ್ಮ ರಾಜನ ಆಜ್ಞೆಗಳಿಗೆ ವಿರುದ್ಧವಾಗಿ ನಡಿತಿದ್ದಾರೆ”+ ಅಂತ ಕೂಗಿದ್ರು. 8 ಇದನ್ನ ಕೇಳಿಸ್ಕೊಂಡಾಗ ಜನ್ರಿಗೆ ಮತ್ತು ಪಟ್ಟಣದ ಅಧಿಕಾರಿಗಳಿಗೆ ತುಂಬ ಕೋಪ ಬಂತು. 9 ಆಗ ಪಟ್ಟಣದ ಅಧಿಕಾರಿಗಳು ಯಾಸೋನನ ಹತ್ರ ಮತ್ತು ಬೇರೆ ಸಹೋದರರ ಹತ್ರ ಜಾಮೀನಾಗಿ ತುಂಬ ಹಣ ತಗೊಂಡು ಅವ್ರನ್ನ ಬಿಟ್ಟುಬಿಟ್ರು.
10 ಕತ್ತಲಾದ ತಕ್ಷಣ ಸಹೋದರರು ಪೌಲ ಮತ್ತು ಸೀಲನನ್ನ ಬೆರೋಯಕ್ಕೆ ಕಳಿಸಿದ್ರು. ಅವರು ಅಲ್ಲಿಗೆ ಹೋದ ಮೇಲೆ ಯೆಹೂದ್ಯರ ಸಭಾಮಂದಿರಕ್ಕೆ ಹೋದ್ರು. 11 ಥೆಸಲೊನೀಕದಲ್ಲಿ ಇದ್ದವ್ರಿಗಿಂತ ಬೆರೋಯದಲ್ಲಿದ್ದ ಯೆಹೂದ್ಯರಿಗೆ ಕಲಿಯೋಕೆ ಜಾಸ್ತಿ ಆಸಕ್ತಿ ಇತ್ತು. ಅದಕ್ಕೇ ಅವರು ಮನಸ್ಸು ಕೊಟ್ಟು ದೇವ್ರ ಸಂದೇಶವನ್ನ ಸ್ವೀಕರಿಸಿದ್ರು. ತಾವು ಕೇಳ್ತಾ ಇರೋ ವಿಷ್ಯಗಳು ನಿಜಕ್ಕೂ ಪವಿತ್ರಗ್ರಂಥದಲ್ಲಿ ಇದ್ಯಾ ಅಂತ ತಿಳ್ಕೊಳ್ಳೋಕೆ ಪ್ರತಿದಿನ ವಚನಗಳನ್ನ ಚೆನ್ನಾಗಿ ಪರೀಕ್ಷಿಸ್ತಿದ್ರು. 12 ಹಾಗಾಗಿ ಅವ್ರಲ್ಲಿ ತುಂಬ ಜನ ಶಿಷ್ಯರಾದ್ರು. ಹೆಸರುವಾಸಿಯಾಗಿದ್ದ ಕೆಲವು ಗ್ರೀಕ್ ಸ್ತ್ರೀ-ಪುರುಷರು ಸಹ ಶಿಷ್ಯರಾದ್ರು. 13 ಬೆರೋಯದಲ್ಲೂ ಪೌಲ ದೇವ್ರ ಸಂದೇಶ ಸಾರುತ್ತಿದ್ದಾನೆ ಅಂತ ಥೆಸಲೊನೀಕದಲ್ಲಿದ್ದ ಯೆಹೂದ್ಯರಿಗೆ ಗೊತ್ತಾಯ್ತು. ಆಗ ಅವರು ಬೆರೋಯದ ಜನ್ರನ್ನ ಅವ್ರ ವಿರುದ್ಧ ಎತ್ತಿಕಟ್ಟೋಕೆ ಅಲ್ಲಿಗೂ ಬಂದ್ರು.+ 14 ಆಗ ಸಹೋದರರು ತಕ್ಷಣ ಪೌಲನನ್ನ ಸಮುದ್ರ ತೀರಕ್ಕೆ ಕಳಿಸ್ಕೊಟ್ರು.+ ಆದ್ರೆ ಸೀಲ ಮತ್ತು ತಿಮೊತಿ ಅಲ್ಲೇ ಉಳ್ಕೊಂಡ್ರು. 15 ಆದ್ರೆ ಪೌಲನ ಜೊತೆ ಇದ್ದ ಸಹೋದರರು ಅವನನ್ನ ಅಥೆನ್ಸ್ ತನಕ ಕರ್ಕೊಂಡು ಹೋದ್ರು. ಪೌಲ ಅವ್ರಿಗೆ ‘ಸಾಧ್ಯ ಆದಷ್ಟು ಬೇಗ ಸೀಲ ಮತ್ತು ತಿಮೊತಿಯನ್ನ+ ತನ್ನ ಹತ್ರ ಕಳಿಸಿ’ ಅಂತ ಹೇಳಿ ಹೋದನು. ಆಮೇಲೆ ಸಹೋದರರು ವಾಪಸ್ ಬಂದ್ರು.
16 ಸೀಲ ಮತ್ತು ತಿಮೊತಿಗಾಗಿ ಪೌಲ ಅಥೆನ್ಸಿನಲ್ಲಿ ಕಾಯ್ತಾ ಇದ್ದ. ಆ ಪಟ್ಟಣದಲ್ಲಿ ಎಲ್ಲಾ ಕಡೆ ಮೂರ್ತಿಗಳು ಇರೋದನ್ನ ನೋಡಿ ಅವನ ಮನಸ್ಸಿಗೆ ತುಂಬ ಬೇಜಾರಾಯ್ತು. 17 ಹಾಗಾಗಿ ಅವನು ಸಭಾಮಂದಿರದಲ್ಲಿದ್ದ ಯೆಹೂದ್ಯರಿಗೆ, ದೇವಭಕ್ತಿ ಇದ್ದ ಬೇರೆಯವ್ರಿಗೆ, ಅಲ್ಲದೆ ಪ್ರತಿದಿನ ಸಂತೆಯಲ್ಲಿ ಸಿಗ್ತಿದ್ದವ್ರಿಗೆ ವಚನಗಳನ್ನ ತೋರಿಸಿ ಅರ್ಥಮಾಡಿಸೋಕೆ ಶುರುಮಾಡಿದ. 18 ಆದ್ರೆ ಎಪಿಕೂರಿಯ ಮತ್ತು ಸ್ತೋಯಿಕರ ಪಂಡಿತರಲ್ಲಿ ಕೆಲವರು ಪೌಲನ ಜೊತೆ ವಾದ ಮಾಡಿದ್ರು. ಅವ್ರಲ್ಲಿ ಕೆಲವರು “ಈ ಬಾಯಿಬಡಕ ಏನು ಹೇಳ್ತಿದ್ದಾನೆ?” ಅಂದ್ರು. ಇನ್ನು ಕೆಲವರು “ಇವನು ನಮ್ಗೆ ಗೊತ್ತಿಲ್ಲದ ದೇವರುಗಳ ಬಗ್ಗೆ ಪ್ರಚಾರ ಮಾಡ್ತಾ ಇದ್ದಾನೆ ಅನ್ಸುತ್ತೆ” ಅಂದ್ರು. ಯಾಕಂದ್ರೆ ಪೌಲ ಯೇಸು ಬಗ್ಗೆ, ಸತ್ತವರು ಮತ್ತೆ ಬದುಕಿ ಬರೋದ್ರ ಬಗ್ಗೆ ಸಿಹಿಸುದ್ದಿ ಹೇಳ್ತಾ ಇದ್ದ.+ 19 ಹಾಗಾಗಿ ಅವರು ಪೌಲನನ್ನ ಅರಿಯೊಪಾಗಕ್ಕೆ ಕರ್ಕೊಂಡು ಹೋಗಿ ಹೀಗೆ ಕೇಳಿದ್ರು “ನೀನು ಕಲಿಸ್ತಾ ಇರೋ ಆ ಹೊಸ ಬೋಧನೆ ಏನು ಅಂತ ನಾವು ತಿಳ್ಕೊಬಹುದಾ? 20 ಯಾಕಂದ್ರೆ ನೀನು ಹೇಳ್ತಾ ಇರೋ ಆ ವಿಚಿತ್ರ ವಿಷ್ಯಗಳನ್ನ ನಾವು ಯಾವತ್ತೂ ಕೇಳಿಲ್ಲ. ಈಗ ಹೇಳು, ಅದೆಲ್ಲದ್ರ ಅರ್ಥ ನಾವು ತಿಳ್ಕೊಬೇಕು.” 21 ನಿಜ ಹೇಳಬೇಕಂದ್ರೆ, ಅಥೆನ್ಸಿನ ಜನ ಮತ್ತು ಅಲ್ಲಿದ್ದ ವಿದೇಶಿಯರು ಸಮಯ ಸಿಕ್ಕಾಗೆಲ್ಲಾ ಏನಾದ್ರೂ ಹೊಸ ವಿಷ್ಯಗಳನ್ನ ಹೇಳ್ತಾ ಕೇಳ್ತಾ ಇರ್ತಿದ್ರು. 22 ಪೌಲ ಅರಿಯೊಪಾಗದ+ ಮಧ್ಯದಲ್ಲಿ ನಿಂತು ಹೀಗೆ ಹೇಳಿದ
“ಅಥೆನ್ಸಿನ ಜನ್ರೇ, ಬೇರೆಯವ್ರಿಗಿಂತ ನಿಮ್ಗೆ ದೇವ್ರ ಮೇಲೆ ಹೆಚ್ಚು ಭಕ್ತಿ ಇರೋದನ್ನ ನಾನು ನೋಡಿದ್ದೀನಿ.+ 23 ಉದಾಹರಣೆಗೆ ನಾನು ನಿಮ್ಮ ಪಟ್ಟಣದಲ್ಲಿ ನಡ್ಕೊಂಡು ಹೋಗ್ತಾ ಇದ್ದಾಗ ನೀವು ಆರಾಧಿಸೋ ಮೂರ್ತಿಗಳನ್ನ ಚೆನ್ನಾಗಿ ನೋಡಿದೆ. ಒಂದು ಬಲಿಪೀಠನೂ ನನಗೆ ಕಾಣಿಸ್ತು. ಅದ್ರ ಮೇಲೆ ‘ನಮ್ಗೆ ಗೊತ್ತಿಲ್ಲದ ದೇವ್ರಿಗೆ’ ಅಂತ ಬರೆದಿತ್ತು. ಹಾಗಾಗಿ ನೀವು ಆರಾಧಿಸ್ತಿರೋ ಆ ಗೊತ್ತಿಲ್ಲದ ದೇವ್ರ ಬಗ್ಗೆನೇ ನಾನು ಹೇಳೋಕೆ ಬಂದಿದ್ದೀನಿ. 24 ಇಡೀ ಜಗತ್ತನ್ನ, ಅದ್ರಲ್ಲಿರೋ ಎಲ್ಲವನ್ನ ಸೃಷ್ಟಿ ಮಾಡಿರೋ ದೇವರು ಭೂಮಿ-ಆಕಾಶದ ಒಡೆಯನಾಗಿ ಇರೋದ್ರಿಂದ+ ಮನುಷ್ಯರ ಕೈಯಿಂದ ಕಟ್ಟಿದ ಗುಡಿಗಳಲ್ಲಿ+ ವಾಸಮಾಡಲ್ಲ. 25 ಅಷ್ಟೇ ಅಲ್ಲ ದೇವ್ರಿಗೆ ಮನುಷ್ಯರ ಸಹಾಯದ ಅಗತ್ಯ ಇಲ್ಲ.+ ಯಾಕಂದ್ರೆ ಆತನೇ ಎಲ್ರಿಗೂ ಜೀವವನ್ನ, ಉಸಿರನ್ನ,+ ಎಲ್ಲವನ್ನೂ ಕೊಡ್ತಾನೆ. 26 ಇಡೀ ಭೂಮಿ ತುಂಬ್ಕೊಳ್ಳೋಕೆ ದೇವರು ಒಬ್ಬ ಮನುಷ್ಯನಿಂದಾನೇ+ ಎಲ್ಲಾ ದೇಶದ ಜನ್ರನ್ನ ಸೃಷ್ಟಿ ಮಾಡಿದ್ದಾನೆ.+ ಎಲ್ಲದಕ್ಕೂ ಒಂದು ಸಮಯ ಅಂತ ಇಟ್ಟಿದ್ದಾನೆ. ಮನುಷ್ಯರು ಎಲ್ಲಿ ತನಕ ವಾಸಮಾಡಬೇಕು ಅಂತ ಮೇರೆಗಳನ್ನ ತೀರ್ಮಾನಿಸಿದ್ದಾನೆ.+ 27 ಯಾಕಂದ್ರೆ ಜನ ತನ್ನನ್ನ ಹುಡುಕಬೇಕು ಅನ್ನೋದು ಆತನ ಆಸೆ. ಆತನು ಖಂಡಿತ ನಮಗೆ ಸಿಗ್ತಾನೆ.+ ನಿಜ ಹೇಳಬೇಕಂದ್ರೆ ದೇವರು ನಮ್ಮಲ್ಲಿ ಒಬ್ರಿಗೂ ದೂರವಾಗಿಲ್ಲ. 28 ಆತನಿಂದಾನೇ ನಾವು ಬದುಕಿದ್ದೀವಿ, ನಡೆದಾಡ್ತೀವಿ, ಇವತ್ತು ಇಲ್ಲಿದ್ದೀವಿ. ನಿಮ್ಮಲ್ಲಿರೋ ಕೆಲವು ಕವಿಗಳು ಸಹ ಇದನ್ನ ಒಪ್ಕೊಳ್ತಾ ‘ನಾವು ಆತನ ಮಕ್ಕಳೇ’ ಅಂದಿದ್ದಾರೆ.
29 “ನಾವು ದೇವ್ರ ಮಕ್ಕಳು ಆಗಿರೋದ್ರಿಂದ+ ದೇವರು ಬೆಳ್ಳಿ, ಬಂಗಾರ ಅಥವಾ ಕಲ್ಲಿಂದ ಮಾಡಿರೋ ಮೂರ್ತಿ ತರ ಇದ್ದಾನೆ ಅಂತ ನಾವು ಅಂದ್ಕೊಳ್ಳಬಾರದು. ಮನುಷ್ಯ ಕಲ್ಪಿಸಿಕೊಂಡು ಮಾಡಿದ ಕಲೆಯ ಹಾಗೆ, ಕೆತ್ತನೆಯ ಹಾಗೆ ಇದ್ದಾನೆ ಅಂತ ನೆನಸಬಾರದು.+ 30 ಒಂದು ಕಾಲದಲ್ಲಿ ಜನ ಗೊತ್ತಿಲ್ಲದೆ ಇದನ್ನೆಲ್ಲ ಮಾಡಿದ್ರು.+ ದೇವರು ಅದನ್ನ ನೋಡಿಯೂ ನೋಡದ ಹಾಗೆ ಇದ್ದನು. ಆದ್ರೆ ದೇವರು ಈಗ ಹಾಗಿಲ್ಲ. ಅವ್ರೆಲ್ಲ ತಿದ್ಕೊಂಡು ಬದಲಾಗಬೇಕು ಅಂತ ಆತನು ಎಲ್ರಿಗೂ ಹೇಳ್ತಾ ಇದ್ದಾನೆ. 31 ಯಾಕಂದ್ರೆ ದೇವರು ಒಂದು ದಿನವನ್ನ ನಿಶ್ಚಯಿಸಿದ್ದಾನೆ.+ ಆ ದಿನ ಆತನು ಭೂಮಿ ಮೇಲಿರೋ ಎಲ್ರಿಗೆ ಸರಿಯಾಗಿ ತೀರ್ಪು ಮಾಡ್ತಾನೆ. ಅದಕ್ಕಾಗಿ ಆತನು ಒಬ್ಬ ವ್ಯಕ್ತಿಯನ್ನ ಆರಿಸ್ಕೊಂಡಿದ್ದಾನೆ. ಆ ದಿನ ಬಂದೆ ಬರುತ್ತೆ ಅಂತ ಪಕ್ಕಾ ಮಾಡೋಕೆ ಆತನು ಆ ವ್ಯಕ್ತಿಯನ್ನ ಮತ್ತೆ ಎಬ್ಬಿಸಿ ಜೀವ ಕೊಟ್ಟಿದ್ದಾನೆ.”+
32 ಸತ್ತವ್ರಿಗೆ ಮತ್ತೆ ಜೀವ ಬರುತ್ತೆ ಅನ್ನೋದನ್ನ ಕೇಳಿಸ್ಕೊಂಡಾಗ ಕೆಲವರು ತಮಾಷೆ ಮಾಡೋಕೆ ಶುರುಮಾಡಿದ್ರು.+ ಇನ್ನೂ ಕೆಲವರು “ಇದ್ರ ಬಗ್ಗೆ ನಾವು ಇನ್ನೊಂದು ಸಾರಿ ಕೇಳಿಸ್ಕೊಳ್ತೀವಿ” ಅಂದ್ರು. 33 ಆಗ ಪೌಲ ಅಲ್ಲಿಂದ ಹೋಗಿಬಿಟ್ಟ. 34 ಆದ್ರೆ ಕೆಲವರು ಪೌಲನ ಜೊತೆನೇ ಹೋಗಿ ಯೇಸುವಿನ ಶಿಷ್ಯರಾದ್ರು. ಅವ್ರಲ್ಲಿ ಅರಿಯೊಪಾಗದ ನ್ಯಾಯಾಧೀಶ ದಿಯೊನುಸ್ಯ, ದಾಮರಿ ಅನ್ನೋ ಸ್ತ್ರೀ ಮತ್ತು ಇನ್ನು ಕೆಲವರು ಇದ್ರು.