ಮಾರ್ಕ
10 ಯೇಸು ಅಲ್ಲಿಂದ ಯೋರ್ದನ್ ನದಿ ದಾಟಿ ಯೂದಾಯದ ಗಡಿಪ್ರದೇಶಕ್ಕೆ ಬಂದನು. ಅಲ್ಲಿ ತುಂಬ ಜನ ಮತ್ತೆ ಆತನ ಹತ್ರ ಬಂದ್ರು. ಆತನು ಯಾವಾಗ್ಲೂ ಮಾಡೋ ತರ ಅವ್ರಿಗೆ ಕಲಿಸೋಕೆ ಶುರುಮಾಡಿದನು.+ 2 ಫರಿಸಾಯರು ಯೇಸು ಹತ್ರ ಬಂದು ಆತನನ್ನ ಪರೀಕ್ಷಿಸೋಕೆ “ಒಬ್ಬ ವ್ಯಕ್ತಿ ಹೆಂಡತಿಗೆ ವಿಚ್ಛೇದನ ಕೊಡೋದು ಸರಿನಾ?” ಅಂತ ಕೇಳಿದ್ರು.+ 3 ಅದಕ್ಕೆ ಆತನು “ಮೋಶೆ ನಿಮಗೆ ಯಾವ ಆಜ್ಞೆ ಕೊಟ್ಟ?” ಅಂತ ಕೇಳಿದನು. 4 ಅದಕ್ಕೆ ಅವರು “ವಿಚ್ಛೇದನ ಪತ್ರ ಕೊಟ್ಟು ಹೆಂಡತಿನ ಕಳಿಸಿಬಿಡಬಹುದು ಅಂತ ಮೋಶೆ ಹೇಳಿದ” ಅಂದ್ರು.+ 5 ಅದಕ್ಕೆ ಯೇಸು “ನಿಮ್ಮ ಮೊಂಡು ಹೃದಯ+ ನೋಡಿ ಮೋಶೆ ಆ ಆಜ್ಞೆ ಬರೆದ.+ 6 ಆದ್ರೆ ಆರಂಭದಲ್ಲೇ ‘ದೇವರು ಗಂಡು ಮತ್ತು ಹೆಣ್ಣನ್ನ ಸೃಷ್ಟಿ ಮಾಡಿದನು.+ 7 ಅದಕ್ಕೇ ಒಬ್ಬ ಪುರುಷ ಅಪ್ಪಅಮ್ಮನನ್ನ ಬಿಟ್ಟು,+ 8 ಅವನೂ ಅವನ ಹೆಂಡತಿನೂ ಒಂದೇ ದೇಹ ಆಗ್ತಾರೆ.’+ ಹಾಗಾಗಿ ಅವರು ಇನ್ನು ಮುಂದೆ ಇಬ್ಬರಲ್ಲ, ಒಂದೇ ಶರೀರವಾಗಿ ಇರ್ತಾರೆ. 9 ಹಾಗಾಗಿ ದೇವರು ಒಂದು ಮಾಡಿದ್ದನ್ನ ಯಾವ ಮನುಷ್ಯನೂ ದೂರ ಮಾಡಬಾರದು” ಅಂದನು.+ 10 ಅವರು ಮನೆಗೆ ವಾಪಸ್ ಬಂದಾಗ ಶಿಷ್ಯರು ಯೇಸು ಹತ್ರ ಅದೇ ವಿಷ್ಯದ ಬಗ್ಗೆ ಪ್ರಶ್ನೆ ಕೇಳೋಕೆ ಶುರುಮಾಡಿದ್ರು. 11 ಆತನು “ಹೆಂಡತಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬಳನ್ನ ಮದುವೆ ಆಗುವವನು ವ್ಯಭಿಚಾರಿ ಆಗಿದ್ದಾನೆ.+ ಹೀಗೆ ಮೊದಲ ಹೆಂಡತಿಗೆ ದ್ರೋಹ ಮಾಡ್ತಾನೆ. 12 ಅದೇ ತರ ಹೆಂಡತಿ ತನ್ನ ಗಂಡನಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬನನ್ನ ಮದುವೆ ಆದ್ರೆ ಅವಳು ವ್ಯಭಿಚಾರ ಮಾಡಿದ ಹಾಗೆ”+ ಅಂದನು.
13 ಯೇಸು ಮಕ್ಕಳ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಬೇಕು ಅಂತ ಜನ ಚಿಕ್ಕ ಮಕ್ಕಳನ್ನ ಆತನ ಹತ್ರ ಕರ್ಕೊಂಡು ಬಂದ್ರು. ಆದ್ರೆ ಶಿಷ್ಯರು ಅವ್ರಿಗೆ ಬೈದ್ರು.+ 14 ಇದನ್ನ ನೋಡಿ ಯೇಸುಗೆ ಕೋಪ ಬಂತು. ಶಿಷ್ಯರಿಗೆ “ಆ ಚಿಕ್ಕ ಮಕ್ಕಳನ್ನ ತಡಿಬೇಡಿ, ಅವರು ನನ್ನ ಹತ್ರ ಬರ್ಲಿ. ಈ ಚಿಕ್ಕ ಮಕ್ಕಳ ತರ ಇರೋರೇ ದೇವರ ಆಳ್ವಿಕೆಯಲ್ಲಿ ಇರ್ತಾರೆ.+ 15 ನಿಮಗೆ ನಿಜ ಹೇಳ್ತೀನಿ, ಚಿಕ್ಕ ಮಕ್ಕಳ ಮನಸ್ಸನ್ನ ಬೆಳೆಸ್ಕೊಂಡು ದೇವರ ಆಳ್ವಿಕೆಯನ್ನ ಯಾರು ಸ್ವೀಕರಿಸಲ್ವೋ ಅವರು ಅದ್ರಲ್ಲಿ ಹೋಗೋದೇ ಇಲ್ಲ” ಅಂದನು.+ 16 ಆಮೇಲೆ ಯೇಸು ಮಕ್ಕಳನ್ನ ಎತ್ಕೊಂಡು ಅವ್ರ ಮೇಲೆ ಕೈಯಿಟ್ಟು+ ಆಶೀರ್ವಾದ ಮಾಡಿದನು.
17 ಯೇಸು ಆ ಮನೆಯಿಂದ ಹೊರಟು ದಾರಿಯಲ್ಲಿ ಹೋಗ್ತಿದ್ದಾಗ ಒಬ್ಬ ವ್ಯಕ್ತಿ ಓಡೋಡಿ ಬಂದು ಮಂಡಿಯೂರಿ “ಒಳ್ಳೇ ಬೋಧಕನೇ, ಶಾಶ್ವತ ಜೀವ ಸಿಗಬೇಕಾದ್ರೆ ನಾನೇನು ಮಾಡಬೇಕು?” ಅಂತ ಕೇಳಿದ.+ 18 ಅದಕ್ಕೆ ಯೇಸು “ನನ್ನನ್ನ ಯಾಕೆ ಒಳ್ಳೆಯವನು ಅಂತಿದ್ದೀಯಾ? ದೇವರನ್ನ ಬಿಟ್ಟು ಬೇರೆ ಯಾರೂ ಒಳ್ಳೆಯವ್ರಲ್ಲ.+ 19 ‘ಕೊಲೆ ಮಾಡಬಾರದು,+ ವ್ಯಭಿಚಾರ ಮಾಡಬಾರದು,+ ಕದಿಬಾರದು,+ ಸುಳ್ಳು ಸಾಕ್ಷಿ ಹೇಳಬಾರದು,+ ಮೋಸ ಮಾಡಬಾರದು,+ ಅಪ್ಪಅಮ್ಮಗೆ ಗೌರವ ಕೊಡಬೇಕು’+ ಅನ್ನೋ ಆಜ್ಞೆಗಳು ನಿನಗೆ ಗೊತ್ತಿದೆ ಅಲ್ವಾ?” ಅಂದನು. 20 ಆ ವ್ಯಕ್ತಿ “ಗುರು, ಇದನ್ನೆಲ್ಲ ಚಿಕ್ಕ ವಯಸ್ಸಿಂದ ಪಾಲಿಸ್ತಾ ಇದ್ದೀನಿ” ಅಂದ. 21 ಯೇಸು ಅವನನ್ನ ಪ್ರೀತಿಯಿಂದ ನೋಡಿ “ನಿನ್ನಲ್ಲಿ ಒಂದು ಕೊರತೆ ಇದೆ. ಹೋಗಿ, ನಿನ್ನ ಆಸ್ತಿನೆಲ್ಲ ಮಾರಿ ಬಡವ್ರಿಗೆ ಕೊಡು. ಆಗ ಸ್ವರ್ಗದಲ್ಲಿ ನಿನಗೆ ಆಸ್ತಿ ಸಿಗುತ್ತೆ. ಆಮೇಲೆ ಬಂದು ನನ್ನ ಶಿಷ್ಯನಾಗು” ಅಂದನು.+ 22 ಈ ಮಾತು ಕೇಳಿ ಬೇಜಾರಾಗಿ ಅವನು ದುಃಖದಿಂದ ಹೋದ. ಯಾಕಂದ್ರೆ ಅವನ ಹತ್ರ ತುಂಬ ಆಸ್ತಿ ಇತ್ತು.+
23 ಆಮೇಲೆ ಯೇಸು ಸುತ್ತಲೂ ನೋಡಿ ಶಿಷ್ಯರಿಗೆ ಹೀಗಂದನು “ಹಣವಂತರು ದೇವರ ಆಳ್ವಿಕೆಯಲ್ಲಿ ಇರೋದು ತುಂಬ ಕಷ್ಟ.”+ 24 ಈ ಮಾತು ಕೇಳಿ ಶಿಷ್ಯರಿಗೆ ಆಶ್ಚರ್ಯ ಆಯ್ತು. ಆಗ ಯೇಸು ಶಿಷ್ಯರಿಗೆ ಮತ್ತೆ ಹೀಗಂದನು “ಮಕ್ಕಳೇ, ದೇವರ ಆಳ್ವಿಕೆಯಲ್ಲಿ ಇರೋದು ತುಂಬ ಕಷ್ಟ! 25 ಒಂದು ಒಂಟೆ ಸೂಜಿಯ ತೂತಲ್ಲಿ ಹೋಗೋದು ಸುಲಭ. ಆದ್ರೆ ಒಬ್ಬ ಶ್ರೀಮಂತ ದೇವರ ಆಳ್ವಿಕೆಯಲ್ಲಿ ಇರೋದು ತುಂಬ ಕಷ್ಟ.”+ 26 ಇದನ್ನ ಕೇಳಿ ಅವ್ರಿಗೆ ಇನ್ನೂ ಆಶ್ಚರ್ಯ ಆಯ್ತು. ಅವರು ಯೇಸುಗೆ* “ಹಾಗಾದ್ರೆ ಯಾರಿಗೆ ತಾನೇ ರಕ್ಷಣೆ ಸಿಗೋಕೆ ಸಾಧ್ಯ?” ಅಂತ ಕೇಳಿದ್ರು.+ 27 ಯೇಸು ಅವ್ರನ್ನೇ ನೋಡ್ತಾ “ಮನುಷ್ಯರಿಗೆ ಇದು ಅಸಾಧ್ಯ, ಆದ್ರೆ ದೇವರಿಗಲ್ಲ. ದೇವರಿಗೆ ಎಲ್ಲಾ ಸಾಧ್ಯ” ಅಂದನು.+ 28 ಪೇತ್ರ ಆತನಿಗೆ “ಗುರು, ನಾವು ಎಲ್ಲ ಬಿಟ್ಟು ನಿನ್ನ ಹಿಂದೆ ಬಂದಿದ್ದೀವಿ” ಅಂದ.+ 29 ಅದಕ್ಕೆ ಯೇಸು ಶಿಷ್ಯರಿಗೆ “ನಿಮಗೆ ನಿಜ ಹೇಳ್ತೀನಿ, ನನ್ನ ಶಿಷ್ಯರಾಗಿರೋ ಕಾರಣ ಮತ್ತು ಸಿಹಿಸುದ್ದಿಯ ಕಾರಣ ಮನೆ, ಅಣ್ಣತಮ್ಮ, ಅಕ್ಕತಂಗಿ, ಅಪ್ಪಅಮ್ಮ, ಮಕ್ಕಳು, ಹೊಲಗದ್ದೆಯನ್ನ ಬಿಟ್ಟುಬಂದವನಿಗೆ+ 30 ಈಗಿನ ಲೋಕದಲ್ಲಿ ಹಿಂಸೆಯ+ ಜೊತೆಗೆ ಮನೆ, ಅಣ್ಣತಮ್ಮ, ಅಕ್ಕತಂಗಿ, ಅಮ್ಮ, ಮಕ್ಕಳು, ಹೊಲ ನೂರರಷ್ಟು ಸಿಗುತ್ತೆ ಮತ್ತು ಮುಂದೆ ಬರೋ ಹೊಸ ಲೋಕದಲ್ಲಿ ಶಾಶ್ವತ ಜೀವ ಸಿಗುತ್ತೆ. 31 ಆದ್ರೆ ಮುಂದೆ ಇರೋ ತುಂಬ ಜನ ಹಿಂದೆ ಹೋಗ್ತಾರೆ. ಹಿಂದೆ ಇರೋ ತುಂಬ ಜನ ಮುಂದೆ ಬರ್ತಾರೆ” ಅಂದನು.+
32 ಅವ್ರೆಲ್ಲ ಯೆರೂಸಲೇಮಿಗೆ ಹೋಗ್ತಾ ಇದ್ರು. ಯೇಸು ಶಿಷ್ಯರಿಗಿಂತ ಮುಂದೆ ನಡಿತಿದ್ದನು. ಶಿಷ್ಯರು ಆಶ್ಚರ್ಯದಿಂದ ಆತನ ಹಿಂದೆ ನಡಿತಾ ಇದ್ರು. ಅವ್ರ ಹಿಂದೆ ಬರ್ತಿದ್ದ ಜನ ಏನಾಗುತ್ತೋ ಅಂತ ಭಯದಲ್ಲಿ ಮುಳುಗಿದ್ರು. ಯೇಸು ಆ 12 ಶಿಷ್ಯರನ್ನ ಹತ್ರ ಕರೆದು ಇನ್ನೊಮ್ಮೆ ಮುಂದೆ ಆಗೋ ವಿಷ್ಯಗಳ ಬಗ್ಗೆ ಹೇಳಿದನು.+ 33 “ನೋಡಿ, ನಾವು ಯೆರೂಸಲೇಮಿಗೆ ಹೋಗ್ತಿದ್ದೀವಿ. ಅಲ್ಲಿ ಮನುಷ್ಯಕುಮಾರನನ್ನ ಮುಖ್ಯ ಪುರೋಹಿತರ ಮತ್ತು ಪಂಡಿತರ ಕೈಗೆ ಹಿಡ್ಕೊಡ್ತಾರೆ. ಅವರು ಅವನಿಗೆ ಮರಣದಂಡನೆ ವಿಧಿಸಿ ಯೆಹೂದ್ಯರಲ್ಲದ ಜನ್ರ ಕೈಗೆ ಒಪ್ಪಿಸ್ತಾರೆ. 34 ಆ ಜನ ಅವನನ್ನ ಅವಮಾನ ಮಾಡ್ತಾರೆ, ಉಗುಳ್ತಾರೆ, ಚಾಟಿಯಿಂದ ಹೊಡಿತಾರೆ, ಸಾಯಿಸ್ತಾರೆ. ಆದ್ರೆ ಮೂರು ದಿನ ಆದ ಮೇಲೆ ಮತ್ತೆ ಎದ್ದು ಬರ್ತಾನೆ” ಅಂದನು.+
35 ಜೆಬೆದಾಯನ ಇಬ್ಬರು ಮಕ್ಕಳು ಯಾಕೋಬ, ಯೋಹಾನ+ ಆತನ ಹತ್ರ ಬಂದು “ಗುರು, ನಾವು ಏನೇ ಕೇಳಿದ್ರೂ ನೀನು ಇಲ್ಲ ಅನ್ನಬಾರದು” ಅಂದ್ರು.+ 36 ಅದಕ್ಕೆ ಯೇಸು “ನಾನೇನು ಮಾಡಬೇಕು ಹೇಳಿ?” ಅಂದನು. 37 ಅದಕ್ಕೆ ಅವರು “ನೀನು ರಾಜ ಆಗುವಾಗ ನಮ್ಮಲ್ಲಿ ಒಬ್ಬರಿಗೆ ನಿನ್ನ ಬಲಗಡೆಲಿ ಇನ್ನೊಬ್ರಿಗೆ ನಿನ್ನ ಎಡಗಡೆಲಿ ಕೂತ್ಕೊಳ್ಳೋ ಅವಕಾಶ ಕೊಡು” ಅಂದ್ರು.+ 38 ಆಗ ಯೇಸು “ನೀವೇನು ಕೇಳ್ತಾ ಇದ್ದೀರಾ ಅಂತ ನಿಮಗೆ ಗೊತ್ತಿಲ್ಲ. ನಾನು ಕುಡಿಯೋ ಪಾತ್ರೆಯಲ್ಲಿ ನಿಮ್ಮಿಬ್ರಿಗೂ ಕುಡಿಯೋಕಾಗುತ್ತಾ? ನಾನು ತಗೊಳ್ತಿರೋ ದೀಕ್ಷಾಸ್ನಾನವನ್ನ ನಿಮ್ಮಿಂದ ತಗೊಳ್ಳೋಕಾಗುತ್ತಾ?” ಅಂತ ಕೇಳಿದನು.+ 39 ಅದಕ್ಕೆ ಅವರು “ಹೌದು ಆಗುತ್ತೆ” ಅಂದ್ರು. ಯೇಸು “ನಾನು ಕುಡಿಯೋ ಪಾತ್ರೆಯಲ್ಲಿ ನೀವು ಖಂಡಿತ ಕುಡಿತೀರ. ನಾನು ತಗೊಳ್ಳೋ ದೀಕ್ಷಾಸ್ನಾನವನ್ನ ನೀವೂ ತಗೊಳ್ತೀರ.+ 40 ಆದ್ರೆ ನನ್ನ ಬಲಗಡೆಯಲ್ಲಿ, ಎಡಗಡೆಯಲ್ಲಿ ಯಾರು ಕೂರಬೇಕು ಅಂತ ನಿರ್ಧಾರ ಮಾಡೋದು ನನ್ನ ಕೈಲಿಲ್ಲ. ಅದನ್ನ ನನ್ನ ತಂದೆ ನಿರ್ಧಾರ ಮಾಡ್ತಾನೆ” ಅಂದನು.
41 ಉಳಿದ 10 ಶಿಷ್ಯರಿಗೆ ಇದು ಗೊತ್ತಾದಾಗ ಅವ್ರಿಗೆ ಯಾಕೋಬ ಮತ್ತು ಯೋಹಾನನ ಮೇಲೆ ತುಂಬ ಕೋಪ ಬಂತು.+ 42 ಆದ್ರೆ ಯೇಸು ಶಿಷ್ಯರನ್ನ ಹತ್ರ ಕರೆದು “ಲೋಕದ ಅಧಿಕಾರಿಗಳು ಜನ್ರ ಮೇಲೆ ಅಧಿಕಾರ ಚಲಾಯಿಸ್ತಾರೆ, ದೊಡ್ಡವರು ಅವ್ರ ಮೇಲೆ ದಬ್ಬಾಳಿಕೆ ಮಾಡ್ತಾರೆ ಅಂತ ನಿಮಗೆ ಗೊತ್ತು.+ 43 ಆದ್ರೆ ನೀವು ಹಾಗೆ ಇರಬಾರದು. ನಿಮ್ಮಲ್ಲಿ ದೊಡ್ಡವನು ಆಗಬೇಕು ಅಂತ ಇರುವವನು ಬೇರೆಯವ್ರ ಸೇವೆ ಮಾಡಬೇಕು.+ 44 ಎಲ್ರಿಗಿಂತ ಮುಖ್ಯ ಸ್ಥಾನದಲ್ಲಿ ಇರೋಕೆ ಆಸೆಪಡುವವನು ಎಲ್ರ ಸೇವಕನಾಗಿರಬೇಕು. 45 ಮನುಷ್ಯಕುಮಾರ ಸಹ ಸೇವೆ ಮಾಡಿಸ್ಕೊಳ್ಳೋಕೆ ಬರಲಿಲ್ಲ, ಸೇವೆ ಮಾಡೋಕೆ ಬಂದ.+ ತುಂಬ ಜನ್ರಿಗಾಗಿ ತನ್ನ ಪ್ರಾಣವನ್ನ ಬಿಡುಗಡೆಯ ಬೆಲೆಯಾಗಿ ಕೊಡೋಕೆ ಬಂದ”+ ಅಂದನು.
46 ಆಮೇಲೆ ಅವರು ಯೆರಿಕೋಗೆ ಬಂದ್ರು. ಯೇಸು, ಶಿಷ್ಯರು ಮತ್ತು ತುಂಬ ಜನ ಯೆರಿಕೋ ಬಿಟ್ಟು ಹೋಗ್ತಿದ್ದಾಗ ಕುರುಡನಾಗಿದ್ದ (ತಿಮಾಯನ ಮಗ) ಬಾರ್ತಿಮಾಯ ಅನ್ನೋ ಭಿಕ್ಷುಕ ದಾರಿ ಪಕ್ಕದಲ್ಲಿ ಕೂತಿದ್ದ.+ 47 ನಜರೇತಿನ ಯೇಸು ಆ ದಾರಿಯಲ್ಲಿ ಹೋಗ್ತಿದ್ದಾನೆ ಅಂತ ಅವನಿಗೆ ಗೊತ್ತಾಯ್ತು. ಆಗ ಅವನು “ದಾವೀದನ ಮಗನಾದ ಯೇಸುವೇ,+ ನನಗೆ ಕರುಣೆ ತೋರಿಸು” ಅಂತ ಗಟ್ಟಿಯಾಗಿ ಕೂಗ್ತಿದ್ದ.+ 48 ಜನ ಅವನಿಗೆ ಸುಮ್ಮನಿರು ಅಂತ ಬೈದ್ರು. ಆದ್ರೂ “ದಾವೀದನ ಮಗನೇ, ನನಗೆ ಕರುಣೆ ತೋರಿಸು” ಅಂತ ಕೂಗ್ತಾನೇ ಇದ್ದ. 49 ಯೇಸು ಅಲ್ಲೇ ನಿಂತು “ಅವನನ್ನ ಕರಿರಿ” ಅಂದನು. ಜನ ಆ ಕುರುಡನಿಗೆ “ಹೆದರಬೇಡ! ಬಾ ಏಳು, ಆತನು ನಿನ್ನನ್ನ ಕರಿತಿದ್ದಾನೆ” ಅಂದ್ರು. 50 ತಕ್ಷಣ ಅವನು ಹೊದ್ದುಕೊಂಡಿದ್ದ ಬಟ್ಟೆನ ತೆಗೆದುಹಾಕಿ ಎದ್ದು ಯೇಸು ಹತ್ರ ಹೋದ. 51 ಯೇಸು ಅವನಿಗೆ “ನಿನಗೆ ಏನು ಸಹಾಯ ಮಾಡಲಿ?” ಅಂತ ಕೇಳಿದನು. ಅದಕ್ಕೆ ಆ ಕುರುಡ “ಗುರು,* ನನಗೆ ಕಣ್ಣು ಕಾಣೋ ತರ ಮಾಡು” ಅಂದ. 52 ಆಗ ಯೇಸು “ಹೋಗು, ನಿನ್ನ ನಂಬಿಕೆನೇ ನಿನ್ನನ್ನ ವಾಸಿಮಾಡಿದೆ”+ ಅಂದನು. ತಕ್ಷಣ ಅವನಿಗೆ ಕಣ್ಣು ಕಾಣಿಸ್ತು+ ಮತ್ತು ಯೇಸುವನ್ನ ಹಿಂಬಾಲಿಸಿದ.