ಯೋಹಾನನಿಗೆ ಕೊಟ್ಟ ಪ್ರಕಟನೆ
1 ಈ ಮಾತುಗಳನ್ನ* ಯೇಸು ಹೇಳಿದನು. ಇದನ್ನ ಯೇಸುಗೆ ಹೇಳಿದ್ದು ದೇವರು.+ ಮುಂದೆ ಏನಾಗುತ್ತೆ ಅಂತ ತನ್ನ ದಾಸರಿಗೆ ಗೊತ್ತಾಗೋಕೆ+ ಈ ವಿಷ್ಯಗಳನ್ನ ಹೇಳಿದನು. ಆಗ ಯೇಸು ತನ್ನ ದೇವದೂತನನ್ನ ತನ್ನ ದಾಸ ಯೋಹಾನನ+ ಹತ್ರ ಕಳಿಸಿ ಕನಸಿನ ರೂಪದಲ್ಲಿ ಈ ಮಾತುಗಳನ್ನ ಹೇಳಿಸಿದನು. 2 ದೇವರು ಕೊಟ್ಟ ಸಂದೇಶವನ್ನ, ಯೇಸು ಹೇಳಿದ ಮಾತುಗಳನ್ನ ಮತ್ತು ತಾನು ನೋಡಿದ ಎಲ್ಲ ವಿಷ್ಯಗಳನ್ನ ಯೋಹಾನ ಹೇಳಿದ. 3 ಈ ಭವಿಷ್ಯವಾಣಿಯಲ್ಲಿ ಇರೋ ಮಾತುಗಳನ್ನ ಜೋರಾಗಿ ಓದುವವರು, ಅದನ್ನ ಕೇಳಿಸ್ಕೊಳ್ಳುವವರು, ಅದ್ರಲ್ಲಿ ಬರೆದ ಹಾಗೆ ನಡಿಯುವವರು ಖುಷಿಯಾಗಿ ಇರ್ತಾರೆ.+ ಯಾಕಂದ್ರೆ ಈ ಮಾತುಗಳೆಲ್ಲ ನಿಜ ಆಗೋ ಸಮಯ ಹತ್ರ ಇದೆ.
4 ಯೋಹಾನನಾದ ನಾನು ಏಷ್ಯಾದಲ್ಲಿ ಇರೋ ಏಳು ಸಭೆಗಳಿಗೆ+ ಹೀಗೆ ಬರಿತಾ ಇದ್ದೀನಿ:
“ಈಗ ಇರುವವನು, ಮುಂಚೆ ಇದ್ದವನು, ಮುಂದೆ ಬರುವವನು ಆಗಿರೋ ದೇವರು”+ ಮತ್ತು ಆತನ ಸಿಂಹಾಸನದ ಮುಂದೆ ಇರೋ ಏಳು ಶಕ್ತಿಗಳು+ ನಿಮಗೆ ಅಪಾರ ಕೃಪೆ, ಶಾಂತಿಯನ್ನ ಕೊಡ್ಲಿ ಅಂತ ನಾನು ಪ್ರಾರ್ಥಿಸ್ತೀನಿ. 5 “ನಂಬಿಗಸ್ತ ಸಾಕ್ಷಿ,”+ “ಸತ್ತವ್ರಲ್ಲೇ ಮೊದ್ಲು ಎದ್ದು ಬಂದವನು”+ ಮತ್ತು “ಭೂಮಿಯಲ್ಲಿ ಇರೋ ರಾಜರಿಗೇ ರಾಜನು”+ ಆಗಿರೋ ಯೇಸು ಕ್ರಿಸ್ತನ ಅಪಾರ ಕೃಪೆ ನಿಮ್ಮ ಮೇಲಿರಲಿ. ನಿಮ್ಮಲ್ಲಿ ಶಾಂತಿ ಇರಲಿ.
ಯೇಸು ನಮ್ಮನ್ನ ಪ್ರೀತಿಸ್ತಾನೆ+ ಮತ್ತು ತನ್ನ ರಕ್ತ ಸುರಿಸಿ ನಮ್ಮನ್ನ ಪಾಪದಿಂದ ಬಿಡಿಸಿದ್ದಾನೆ.+ 6 ಅಷ್ಟೇ ಅಲ್ಲ ತನ್ನ ತಂದೆ ಅಂದ್ರೆ ದೇವರಿಗೋಸ್ಕರ ನಮ್ಮನ್ನ ರಾಜರಾಗಿ,+ ಪುರೋಹಿತರಾಗಿ+ ಮಾಡ್ತಾನೆ. ಆ ಯೇಸುಗೆ ಯಾವಾಗ್ಲೂ ಗೌರವ, ಶಕ್ತಿ ಸಿಗಲಿ. ಆಮೆನ್.
7 ನೋಡಿ, ಆತನು ಮೋಡಗಳಲ್ಲಿ ಬರ್ತಾನೆ.+ ಎಲ್ರೂ ಆತನನ್ನ ನೋಡ್ತಾರೆ. ಆತನನ್ನ ಚೂಪಾದ ಈಟಿಯಿಂದ ಚುಚ್ಚಿದವರೂ ಆತನನ್ನ ನೋಡ್ತಾರೆ. ಭೂಮಿ ಮೇಲಿರೋ ಎಲ್ಲ ಜಾತಿಯ ಜನ್ರು ದುಃಖದಲ್ಲಿ ತಮ್ಮ ಎದೆ ಬಡ್ಕೊಳ್ತಾರೆ.+ ಹೌದು, ಇದು ಆಗೇ ಆಗುತ್ತೆ. ಆಮೆನ್.
8 “ನಾನೇ ಆಲ್ಫ, ನಾನೇ ಒಮೇಗ.*+ ನಾನು ಯಾವಾಗ್ಲೂ ಇದ್ದೆ, ಈಗ್ಲೂ ಇದ್ದೀನಿ, ಮುಂದೆನೂ ಬರ್ತಿನಿ. ನಾನು ಸರ್ವಶಕ್ತ”+ ಅಂತ ಯೆಹೋವ* ದೇವರು ಹೇಳ್ತಿದ್ದಾನೆ.
9 ಯೋಹಾನನಾದ ನಾನು ನಿಮ್ಮ ಸಹೋದರ. ಯೇಸುವಿನ ಶಿಷ್ಯನಾಗಿ ಇರೋದ್ರಿಂದ+ ನಿಮ್ಮ ತರಾನೇ ನಾನು ಕಷ್ಟಪಟ್ಟೆ,+ ಕಷ್ಟಗಳನ್ನ ಸಹಿಸ್ಕೊಂಡೆ.+ ನಿಮ್ಮ ಜೊತೆ ನಾನೂ ರಾಜನಾಗ್ತೀನಿ.+ ದೇವರ ಬಗ್ಗೆ ಮಾತಾಡಿದ್ರಿಂದ, ಯೇಸು ಬಗ್ಗೆ ಸತ್ಯ ಹೇಳಿದ್ರಿಂದ ನಾನು ಪತ್ಮೋಸ್ ದ್ವೀಪದಲ್ಲಿದ್ದೆ. 10 ಪವಿತ್ರಶಕ್ತಿ ನನ್ನನ್ನ ಒಡೆಯನ ದಿನಕ್ಕೆ ಕರ್ಕೊಂಡು ಹೋಯ್ತು. ನನ್ನ ಹಿಂದಿಂದ ಯಾರೋ ಒಬ್ರು ತುತ್ತೂರಿ ತರ ಜೋರಾಗಿ ಕೂಗ್ತಿದ್ರು. 11 ಅವರು ನನಗೆ “ನೀನು ಏನು ನೋಡ್ತೀಯೋ ಅದನ್ನ ಒಂದು ಸುರುಳಿಯಲ್ಲಿ ಬರಿ. ಅದನ್ನ ಎಫೆಸ,+ ಸ್ಮುರ್ನ,+ ಪೆರ್ಗಮ,+ ಥುವತೈರ,+ ಸಾರ್ದಿಸ್,+ ಫಿಲದೆಲ್ಫಿಯ+ ಮತ್ತು ಲವೊದಿಕೀಯ+ ಅನ್ನೋ ಏಳು ಸಭೆಗಳಿಗೆ ಕಳಿಸು” ಅಂದ್ರು.
12 ನನ್ನ ಜೊತೆ ಯಾರು ಮಾತಾಡ್ತಿದ್ದಾರೆ ಅಂತ ನೋಡೋಕೆ ನಾನು ಹಿಂದೆ ತಿರುಗಿದೆ. ಆಗ ನನಗೆ ಏಳು ಬಂಗಾರದ ದೀಪಸ್ತಂಭಗಳು+ ಕಾಣಿಸಿದ್ವು. 13 ಆ ದೀಪಸ್ತಂಭಗಳ ಮಧ್ಯ ಮನುಷ್ಯಕುಮಾರನ ತರ ಕಾಣಿಸ್ತಿದ್ದ ಒಬ್ಬ ವ್ಯಕ್ತಿ ಇದ್ದನು.+ ಆತನು ಉದ್ದ ಬಟ್ಟೆ ಹಾಕೊಂಡು ಎದೆ ಸುತ್ತ ಚಿನ್ನದ ಪಟ್ಟಿ ಕಟ್ಕೊಂಡಿದ್ದನು. 14 ಅಷ್ಟೇ ಅಲ್ಲ ಆತನ ತಲೆ, ತಲೆಕೂದಲು ಉಣ್ಣೆ ತರ, ಹಿಮದ ತರ ಬೆಳ್ಳಗೆ ಇತ್ತು. ಆತನ ಕಣ್ಣುಗಳು ಬೆಂಕಿ ತರ ಉರಿತಿದ್ವು.+ 15 ಆತನ ಕಾಲುಗಳು ದೊಡ್ಡ ಬೆಂಕಿಯಲ್ಲಿ ಕಾಯಿಸಿದ ತಾಮ್ರದ ತರ+ ಇದ್ವು. ಆತನ ಸ್ವರ ಜಲಪಾತದ ತರ ಇತ್ತು. 16 ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ವು.+ ಆತನ ಬಾಯಿಂದ ಎರಡು ಕಡೆ ಚೂಪಾಗಿದ್ದ ಉದ್ದ ಕತ್ತಿ ಹೊರಗೆ ಬರ್ತಿತ್ತು.+ ಆತನ ಮುಖ ಎಷ್ಟು ಹೊಳೀತಾ ಇತ್ತಂದ್ರೆ ಸೂರ್ಯನ ತರ ಕಾಣ್ತಿತ್ತು.+ 17 ನಾನು ಆತನನ್ನ ನೋಡಿದಾಗ ಸತ್ತವನ ತರ ಆತನ ಕಾಲ ಹತ್ರ ಬಿದ್ದುಬಿಟ್ಟೆ.
ಆತನು ನನ್ನ ಮೇಲೆ ಬಲಗೈ ಇಟ್ಟು ಹೀಗಂದ: “ಭಯಪಡಬೇಡ. ನಾನೇ ಮೊದಲನೆಯವನು,+ ನಾನೇ ಕೊನೆಯವನು.+ 18 ನಾನು ಸತ್ತು ಹೋಗಿದ್ದೆ.+ ಆದ್ರೆ ಈಗ ಜೀವಿಸ್ತಾ ಇದ್ದೀನಿ.+ ಶಾಶ್ವತವಾಗಿ ಜೀವಿಸ್ತೀನಿ.+ ನನ್ನ ಹತ್ರ ಸಾವಿನ ಮತ್ತು ಸಮಾಧಿಯ* ಬೀಗದ ಕೈಗಳಿವೆ.+ 19 ಹಾಗಾಗಿ ನೀನು ನೋಡಿದ್ದನ್ನ, ನಡಿತಾ ಇರೋದನ್ನ, ಮುಂದೆ ನಡಿಯೋದನ್ನ ಬರಿ. 20 ನನ್ನ ಬಲಗೈಯಲ್ಲಿ ನೀನು ನೋಡಿದ ಏಳು ನಕ್ಷತ್ರಗಳ ಬಗ್ಗೆ, ಏಳು ಚಿನ್ನದ ದೀಪಸ್ತಂಭಗಳ ಬಗ್ಗೆ ಪವಿತ್ರ ರಹಸ್ಯ ಇದೆ. ಆ ಏಳು ನಕ್ಷತ್ರಗಳು ಏನಂದ್ರೆ ಏಳು ಸಭೆಗಳ ದೇವದೂತರು. ಆ ಏಳು ದೀಪಸ್ತಂಭಗಳು ಏನಂದ್ರೆ ಏಳು ಸಭೆಗಳು.”+