ಪಾಠ 38
ಜೀವ ಅಮೂಲ್ಯ ಅದಕ್ಕೆ ಕೃತಜ್ಞತೆ ತೋರಿಸಿ
ಜೀವ ಇರೋದ್ರಿಂದ ನಮ್ಮ ಸುತ್ತಮುತ್ತ ಇರೋ ಸುಂದರ ವಿಷಯಗಳನ್ನ ಆನಂದಿಸೋಕೆ ಆಗ್ತಿದೆ. ನಮ್ಮ ಜೀವನದಲ್ಲಿ ಕಷ್ಟಸಮಸ್ಯೆಗಳು ಇರೋದು ನಿಜ, ಹಾಗಿದ್ರೂ ನಾವು ಜೀವನವನ್ನ ಆನಂದಿಸಬಹುದು. ದೇವರು ಕೊಟ್ಟಿರುವ ಅಮೂಲ್ಯ ಜೀವಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು? ನಾವು ಹಾಗೆ ಮಾಡಲು ಮುಖ್ಯ ಕಾರಣ ಏನು? ಅಂತ ನೋಡೋಣ.
1. ನಾವು ಯಾಕೆ ಜೀವವನ್ನ ಅಮೂಲ್ಯವಾಗಿ ನೋಡಬೇಕು?
ಜೀವ ನಮ್ಮ ಪ್ರೀತಿಯ ತಂದೆಯಾದ ಯೆಹೋವ ಕೊಟ್ಟಿರುವ ಅಮೂಲ್ಯ ಉಡುಗೊರೆ. ಹಾಗಾಗಿ ನಾವು ಅದಕ್ಕೆ ಕೃತಜ್ಞರಾಗಿರಬೇಕು. ‘ಜೀವದ ಮೂಲ ಯೆಹೋವ,’ ಯಾಕಂದ್ರೆ ಆತನೇ ಎಲ್ಲ ಜೀವಿಗಳನ್ನ ಸೃಷ್ಟಿ ಮಾಡಿದ್ದು. (ಕೀರ್ತನೆ 36:9) “ಆತನೇ ಎಲ್ರಿಗೂ ಜೀವವನ್ನ, ಉಸಿರನ್ನ, ಎಲ್ಲವನ್ನೂ ಕೊಡ್ತಾನೆ” ಅಂತ ಬೈಬಲ್ ಹೇಳುತ್ತೆ. (ಅಪೊಸ್ತಲರ ಕಾರ್ಯ 17:25, 28) ಆತನು ನಮಗೆ ಬದುಕೋಕೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಕೊಟ್ಟಿದ್ದಾನೆ. ಅಷ್ಟೇ ಅಲ್ಲ ಜೀವನವನ್ನ ಆನಂದಿಸಲು ತುಂಬ ವಿಷಯಗಳನ್ನ ಕೊಟ್ಟಿದ್ದಾನೆ.—ಅಪೊಸ್ತಲರ ಕಾರ್ಯ 14:17 ಓದಿ.
2. ಯೆಹೋವನು ಕೊಟ್ಟ ಜೀವವನ್ನ ಅಮೂಲ್ಯವಾಗಿ ನೋಡ್ತೇವೆ ಅಂತ ಹೇಗೆ ತೋರಿಸಬಹುದು?
ನೀವು ನಿಮ್ಮ ತಾಯಿಯ ಹೊಟ್ಟೆಯಲ್ಲಿ ಬೆಳೆಯೋಕೆ ಆರಂಭವಾದ ದಿನದಿಂದ ಯೆಹೋವ ದೇವರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಿದ್ದಾನೆ. ದೇವರ ಸೇವಕನಾದ ದಾವೀದ ಅದರ ಬಗ್ಗೆ, “ನಾನು ಇನ್ನೂ ಪಿಂಡವಾಗಿ ಇದ್ದಾಗಲೇ ನಿನ್ನ ಕಣ್ಣು ನನ್ನನ್ನ ನೋಡ್ತು” ಅಂತ ಹೇಳಿದ. (ಕೀರ್ತನೆ 139:16) ನಿಮ್ಮ ಜೀವ ಯೆಹೋವನಿಗೆ ತುಂಬ ಅಮೂಲ್ಯ. (ಮತ್ತಾಯ 10:29-31 ಓದಿ.) ನಾವು ನಮ್ಮ ಜೀವವನ್ನ ಅಥವಾ ಬೇರೆಯವರ ಜೀವವನ್ನ ಬೇಕು ಬೇಕಂತನೇ ತೆಗೆಯೋದಾದ್ರೆ ಯೆಹೋವನಿಗೆ ತುಂಬ ನೋವಾಗುತ್ತೆ.a (ವಿಮೋಚನಕಾಂಡ 20:13) ನಮ್ಮ ಜೀವಕ್ಕೆ ಅಥವಾ ಬೇರೆಯವರ ಜೀವಕ್ಕೆ ಅಪಾಯ ಆಗೋ ತರ ನಡೆದುಕೊಂಡರೂ ಯೆಹೋವ ದೇವರಿಗೆ ತುಂಬ ನೋವಾಗುತ್ತೆ. ಬೇರೆಯವರ ಮತ್ತು ನಮ್ಮ ಜೀವವನ್ನ ಕಾಪಾಡಿಕೊಳ್ಳೋಕೆ ಬೇಕಾದ ಸುರಕ್ಷಾ ಕ್ರಮಗಳನ್ನ ತೆಗೆದುಕೊಳ್ಳದಿದ್ರೂ ಯೆಹೋವನಿಗೆ ತುಂಬ ಬೇಜಾರಾಗುತ್ತೆ. ಹಾಗಾಗಿ ಜೀವವನ್ನ ಕಾಪಾಡಿಕೊಳ್ಳೋಕೆ ಬೇಕಾದ ಎಲ್ಲವನ್ನ ಮಾಡೋ ಮೂಲಕ ಜೀವ ತುಂಬ ಅಮೂಲ್ಯ ಅಂತ ತೋರಿಸಿಕೊಡುತ್ತೇವೆ.
ಹೆಚ್ಚನ್ನ ತಿಳಿಯೋಣ
ಜೀವ ಅನ್ನೋ ಉಡುಗೊರೆಯನ್ನ ಅಮೂಲ್ಯವಾಗಿ ನೋಡ್ತೇವೆ ಅಂತ ಹೇಗೆಲ್ಲಾ ತೋರಿಸಬಹುದು ಅನ್ನೋದನ್ನ ಕಲಿಯೋಣ.
3. ನಿಮ್ಮ ಆರೋಗ್ಯವನ್ನ ಚೆನ್ನಾಗಿ ನೋಡಿಕೊಳ್ಳಿ
ಯಾವಾಗ್ಲೂ ಯೆಹೋವ ದೇವರಿಗೆ ಇಷ್ಟ ಆಗುವ ರೀತಿಯಲ್ಲಿ ನಡೆದುಕೊಳ್ತೇವೆ ಅಂತ ನಾವು ಸಮರ್ಪಣೆಯಲ್ಲಿ ಮಾತುಕೊಟ್ಟಿದ್ದೇವೆ. ಹಾಗಾಗಿ ನಮ್ಮ ಇಡೀ ಜೀವನವನ್ನ ಆತನ ಸೇವೆಗಾಗಿ ಬಳಸ್ತೇವೆ. ಹೀಗೆ ಮಾಡುವಾಗ ನಮ್ಮ ಜೀವವನ್ನ ದೇವರು ಮೆಚ್ಚುವ ಬಲಿಯಾಗಿ ಕೊಟ್ಟಂತೆ ಇರುತ್ತೆ. ರೋಮನ್ನರಿಗೆ 12:1, 2 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ನಿಮ್ಮ ಆರೋಗ್ಯವನ್ನ ಯಾಕೆ ಚೆನ್ನಾಗಿ ನೋಡಿಕೊಳ್ಳಬೇಕು?
ನಿಮ್ಮ ಆರೋಗ್ಯವನ್ನ ಚೆನ್ನಾಗಿ ನೋಡಿಕೊಳ್ಳೋಕೆ ಇನ್ನೂ ಏನೆಲ್ಲಾ ಮಾಡಬಹುದು?
4. ಪ್ರಾಣಾಪಾಯ ಮತ್ತು ಗಾಯಗಳು ಆಗದಂತೆ ಎಚ್ಚರವಹಿಸಿ
ನಮ್ಮ ಶರೀರಕ್ಕೆ ಅಥವಾ ಜೀವಕ್ಕೆ ಅಪಾಯ ತರುವಂಥ ವಿಷಯಗಳಿಂದ ದೂರ ಇರುವಂತೆ ಬೈಬಲ್ ನಮ್ಮನ್ನ ಎಚ್ಚರಿಸುತ್ತೆ. ವಿಡಿಯೋ ನೋಡಿ ನಾವು ಯಾವೆಲ್ಲಾ ರೀತಿಯಲ್ಲಿ ಸುರಕ್ಷಿತರಾಗಿ ಇರಬಹುದು ಅಂತ ತಿಳಿದುಕೊಳ್ಳಿ.
ಜ್ಞಾನೋಕ್ತಿ 22:3 ಓದಿ, ನಂತರ ನೀವು ಮತ್ತು ಬೇರೆಯವರು ಹೇಗೆ ಸುರಕ್ಷಿತರಾಗಿರಬಹುದು ಅಂತ ಚರ್ಚಿಸಿ:
ಮನೆಯಲ್ಲಿ
ಕೆಲಸದ ಸ್ಥಳದಲ್ಲಿ
ಆಟ ಆಡುವಾಗ
ಮಷೀನುಗಳನ್ನ ಬಳಸುವಾಗ ಅಥವಾ ವಾಹನ ಓಡಿಸುತ್ತಿರುವಾಗ
5. ಹೊಟ್ಟೆಯಲ್ಲಿರುವ ಮಗುವಿನ ಜೀವ ತುಂಬ ಅಮೂಲ್ಯ
ತಾಯಿಯ ಹೊಟ್ಟೆಯಲ್ಲಿರುವ ಜೀವವನ್ನ ಮತ್ತು ಆ ಜೀವ ಬೆಳೆಯೋದನ್ನ ಯೆಹೋವನು ತುಂಬ ಆಸಕ್ತಿಯಿಂದ ನೋಡುತ್ತಾ ಇರುತ್ತಾನೆ ಅಂತ ದೇವರ ಸೇವಕನಾದ ದಾವೀದ ಹೇಳಿದ. ಕೀರ್ತನೆ 139:13-17 ಓದಿ, ನಂತರ ಈ ಪ್ರಶ್ನೆ ಚರ್ಚಿಸಿ:
ಯೆಹೋವ ದೇವರ ದೃಷ್ಟಿಯಲ್ಲಿ ಒಬ್ಬ ವ್ಯಕ್ತಿಯ ಜೀವ ಯಾವಾಗ ಆರಂಭವಾಗುತ್ತೆ? ತಾಯಿ ಗರ್ಭಿಣಿ ಆದಾಗ್ಲಾ ಅಥವಾ ಮಗು ಹುಟ್ಟಿದ ಮೇಲೇನಾ?
ತಾಯಂದಿರಿಗೆ ಮತ್ತು ಹೊಟ್ಟೆಯಲ್ಲಿರುವ ಮಗುವಿಗೆ ಸಂರಕ್ಷಣೆ ಕೊಡುವ ನಿಯಮಗಳನ್ನ ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟನು. ವಿಮೋಚನಕಾಂಡ 21:22, 23 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಯಾರಾದ್ರೂ ಗೊತ್ತಿಲ್ಲದೆ ಹೊಟ್ಟೆಯಲ್ಲಿರುವ ಮಗುವಿನ ಸಾವಿಗೆ ಕಾರಣರಾದ್ರೆ ಯೆಹೋವನಿಗೆ ಹೇಗನಿಸುತ್ತೆ?
ಯಾರಾದ್ರೂ ಬೇಕು ಬೇಕಂತನೇ ಹಾಗೆ ಮಾಡಿದ್ರೆ ಯೆಹೋವನಿಗೆ ಹೇಗನಿಸುತ್ತೆ?b
ಯೆಹೋವ ದೇವರ ಅನಿಸಿಕೆಯ ಬಗ್ಗೆ ನಿಮಗೇನು ಅನಿಸುತ್ತೆ?
ಒಬ್ಬ ಸ್ತ್ರೀಗೆ ಜೀವ ಅಮೂಲ್ಯ ಅಂತ ಗೊತ್ತಿದ್ದರೂ ಕೆಲವೊಂದು ಕಾರಣಗಳಿಂದ ‘ಗರ್ಭಪಾತ (ಭ್ರೂಣಹತ್ಯೆ) ಮಾಡದೆ ಬೇರೆ ದಾರಿ ಇಲ್ಲ’ ಅಂತ ಅನಿಸಬಹುದು. ಯೆಶಾಯ 41:10 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಒಬ್ಬ ಸ್ತ್ರೀಗೆ ಗರ್ಭಪಾತ ಮಾಡಲೇ ಬೇಕು ಅನ್ನೋ ಒತ್ತಾಯ ಬರುವಾಗ ಯಾರ ಸಹಾಯ ಕೇಳಬೇಕು? ಯಾಕೆ?
ಕೆಲವರು ಹೀಗಂತಾರೆ: “ಗರ್ಭಪಾತ ಮಾಡಿಸಬೇಕಾ ಬೇಡ್ವಾ ಅಂತ ತೀರ್ಮಾನ ಮಾಡುವ ಹಕ್ಕು ಒಬ್ಬ ಸ್ತ್ರೀಗೆ ಇದೆ, ಯಾಕಂದ್ರೆ ಅದು ಅವಳ ಶರೀರ.”
ತಾಯಿಯ ಜೀವ ಮಾತ್ರವಲ್ಲ ಅವಳ ಹೊಟ್ಟೆಯಲ್ಲಿರುವ ಮಗುವಿನ ಜೀವ ಕೂಡ ಯೆಹೋವನಿಗೆ ತುಂಬ ಅಮೂಲ್ಯ ಅಂತ ನೀವು ಹೇಗೆ ಹೇಳ್ತೀರಾ?
ನಾವೇನು ಕಲಿತ್ವಿ
ನಮ್ಮ ಜೀವ ಆಗಿರಲಿ ಬೇರೆಯವರ ಜೀವ ಆಗಿರಲಿ ಯೆಹೋವನಿಗೆ ತುಂಬ ಅಮೂಲ್ಯ. ಈ ಅಮೂಲ್ಯ ಉಡುಗೊರೆಯನ್ನ ನಾವು ಪ್ರೀತಿಸಬೇಕು, ಗೌರವಿಸಬೇಕು ಮತ್ತು ಕಾಪಾಡಬೇಕು ಅಂತ ಬೈಬಲ್ ಕಲಿಸುತ್ತೆ.
ನೆನಪಿದೆಯಾ
ಮನುಷ್ಯರ ಜೀವವನ್ನ ಯೆಹೋವ ಯಾಕೆ ಅಮೂಲ್ಯವಾಗಿ ನೋಡ್ತಾನೆ?
ಒಬ್ಬ ವ್ಯಕ್ತಿ ಬೇಕುಬೇಕಂತನೇ ಯಾರನ್ನಾದ್ರೂ ಸಾಯಿಸಿದ್ರೆ ಯೆಹೋವನಿಗೆ ಹೇಗನಿಸುತ್ತೆ?
ನೀವು ಜೀವವನ್ನ ಅಮೂಲ್ಯವಾಗಿ ನೋಡ್ತೀರ ಅಂತ ಹೇಗೆ ತೋರಿಸ್ತೀರಾ?
ಇದನ್ನೂ ನೋಡಿ
ನಮಗೆ ಜೀವ ಕೊಟ್ಟಿದ್ದಕ್ಕೆ ನಾವು ಯೆಹೋವನಿಗೆ ಹೇಗೆ ಥ್ಯಾಂಕ್ಸ್ ಹೇಳಬಹುದು?
ಗರ್ಭಪಾತ ಮಾಡಿಸಿರುವ ಸ್ತ್ರೀಯನ್ನ ಯೆಹೋವ ದೇವರು ಕ್ಷಮಿಸ್ತಾನಾ?
ನಮ್ಮ ಜೀವಕ್ಕೆ ಹಾನಿಯಾಗುವಂಥ ಆಟ ಅಥವಾ ಮನರಂಜನೆಯನ್ನ ಆರಿಸಿಕೊಂಡರೆ ಯೆಹೋವನಿಗೆ ಹೇಗನಿಸುತ್ತೆ?
ಒಬ್ಬ ವ್ಯಕ್ತಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಅನಿಸಿದ್ರೆ ಅದ್ರಿಂದ ಹೊರಗೆ ಬರಲು ಬೈಬಲ್ ಹೇಗೆ ಸಹಾಯ ಮಾಡುತ್ತೆ ಅಂತ ನೋಡಿ.
“ನನಗೆ ಸಾಯಬೇಕು ಅಂತ ಅನಿಸ್ತಿದೆ—ಇದ್ರಿಂದ ಹೊರಗೆ ಬರೋಕೆ ಬೈಬಲ್ ಸಹಾಯ ಮಾಡುತ್ತಾ?” (jw.org ಲೇಖನ)
a ಹೃದಯ ಒಡೆದು ಹೋಗುವಷ್ಟು ದುಃಖದಲ್ಲಿ ಇರುವವರನ್ನ ಯೆಹೋವ ತುಂಬ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಾನೆ. (ಕೀರ್ತನೆ 34:18) ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಅನಿಸುವವರಿಗೆ ಆಗುವ ನೋವು ಆತನಿಗೆ ಚೆನ್ನಾಗಿ ಅರ್ಥ ಆಗುತ್ತೆ. ಅಂಥ ಯೋಚನೆಯಿಂದ ಹೊರಬರೋಕೆ ಆತನು ಸಹಾಯ ಮಾಡಕ್ಕೆ ಬಯಸ್ತಾನೆ. ಯೆಹೋವ ದೇವರು ಕೊಡುವ ಸಹಾಯದ ಬಗ್ಗೆ ತಿಳಿದುಕೊಳ್ಳಲು “ಇದನ್ನೂ ನೋಡಿ” ಭಾಗದಲ್ಲಿರುವ “ನನಗೆ ಸಾಯಬೇಕು ಅಂತ ಅನಿಸ್ತಿದೆ—ಇದ್ರಿಂದ ಹೊರಗೆ ಬರೋಕೆ ಬೈಬಲ್ ಸಹಾಯ ಮಾಡುತ್ತಾ?” ಅನ್ನೋ ಲೇಖನ ನೋಡಿ.
b ಹಿಂದೆ ಬೇಕು ಬೇಕಂತ ಗರ್ಭಪಾತ ಮಾಡಿಸಿಕೊಂಡವರು ಮನಸ್ಸಿನಲ್ಲಿ ತುಂಬ ಕೊರಗುತ್ತಾ ಇರುತ್ತಾರೆ. ಅಂಥವರನ್ನ ಕೂಡ ಯೆಹೋವನು ಕ್ಷಮಿಸ್ತಾನೆ. ಇದರ ಬಗ್ಗೆ ಹೆಚ್ಚನ್ನ ತಿಳಿಯಲು “ಇದನ್ನೂ ನೋಡಿ” ವಿಭಾಗದಲ್ಲಿರುವ “ಗರ್ಭಪಾತದ ಬಗ್ಗೆ ಬೈಬಲ್ ಏನು ಹೇಳುತ್ತೆ?” ಅನ್ನೋ ಲೇಖನ ನೋಡಿ.