ಮಾರ್ಕ
6 ಅವನು ಅಲ್ಲಿಂದ ಹೊರಟು ತನ್ನ ಸ್ವಂತ ಊರಿಗೆ ಬಂದನು ಮತ್ತು ಅವನ ಶಿಷ್ಯರು ಅವನೊಂದಿಗಿದ್ದರು. 2 ಸಬ್ಬತ್ ದಿನ ಬಂದಾಗ ಅವನು ಸಭಾಮಂದಿರದಲ್ಲಿ ಬೋಧಿಸಲಾರಂಭಿಸಿದನು; ಅದಕ್ಕೆ ಕಿವಿಗೊಡುತ್ತಿದ್ದ ಹೆಚ್ಚಿನವರು ಅತ್ಯಾಶ್ಚರ್ಯಪಟ್ಟು, “ಇವನು ಈ ವಿಷಯಗಳನ್ನು ಎಲ್ಲಿಂದ ಪಡೆದುಕೊಂಡನು? ಈ ವಿವೇಕವು ಇವನಿಗೆ ಏಕೆ ಕೊಡಲ್ಪಟ್ಟಿರಬೇಕು? ಇವನ ಮೂಲಕವೇ ಈ ಮಹತ್ಕಾರ್ಯಗಳು ಏಕೆ ನಡೆಸಲ್ಪಡಬೇಕು? 3 ಇವನು ಬಡಗಿಯಲ್ಲವೆ? ಇವನು ಮರಿಯಳ ಮಗನಲ್ಲವೆ? ಇವನು ಯಾಕೋಬ, ಯೋಸೇಫ, ಯೂದ ಮತ್ತು ಸೀಮೋನರ ಅಣ್ಣನಲ್ಲವೆ? ಇವನ ತಂಗಿಯರು ನಮ್ಮಲ್ಲಿದ್ದಾರಲ್ಲವೆ?” ಎಂದು ಹೇಳಿ ಅವನನ್ನು ತಾತ್ಸಾರಮಾಡಿದರು. 4 ಆದರೆ ಯೇಸು ಅವರಿಗೆ, “ಪ್ರವಾದಿಗೆ ಬೇರೆ ಎಲ್ಲ ಕಡೆಯಲ್ಲಿ ಮರ್ಯಾದೆ ಸಿಗುತ್ತದೆ, ಆದರೆ ಸ್ವಂತ ಪ್ರದೇಶದಲ್ಲಿ, ಸಂಬಂಧಿಕರ ನಡುವೆ ಮತ್ತು ಸ್ವಂತ ಮನೆಯಲ್ಲಿ ಮರ್ಯಾದೆ ಸಿಗುವುದಿಲ್ಲ” ಎಂದು ಹೇಳಿದನು. 5 ಆದುದರಿಂದ ಅಲ್ಲಿ ಅವನು ಕೆಲವು ಮಂದಿ ರೋಗಿಗಳ ಮೇಲೆ ಕೈಯಿಟ್ಟು ಅವರನ್ನು ವಾಸಿಮಾಡಿದನೇ ಹೊರತು ಬೇರೆ ಯಾವ ಅದ್ಭುತಕಾರ್ಯವನ್ನೂ ಮಾಡುವುದಕ್ಕಾಗಲಿಲ್ಲ. 6 ಅವರಲ್ಲಿದ್ದ ನಂಬಿಕೆಯ ಕೊರತೆಯನ್ನು ನೋಡಿ ಅವನು ಆಶ್ಚರ್ಯಪಟ್ಟನು. ತದನಂತರ ಅವನು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೋಧಿಸುತ್ತಾ ಹೋದನು.
7 ಅವನು ಹನ್ನೆರಡು ಮಂದಿಯನ್ನು ಕರೆದು ಅವರನ್ನು ಇಬ್ಬಿಬ್ಬರಾಗಿ ಕಳುಹಿಸತೊಡಗಿದನು ಮತ್ತು ಅವರಿಗೆ ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ಕೊಟ್ಟನು. 8 ಮಾತ್ರವಲ್ಲದೆ, ಅವನು ಅವರಿಗೆ ಆಜ್ಞಾಪಿಸಿದ್ದು: “ಪ್ರಯಾಣಕ್ಕಾಗಿ ನಿಮ್ಮೊಂದಿಗೆ ಕೋಲನ್ನು ಹೊರತು ಬೇರೇನನ್ನೂ ತೆಗೆದುಕೊಂಡು ಹೋಗಬೇಡಿ; ರೊಟ್ಟಿಯನ್ನಾಗಲಿ ಆಹಾರದ ಚೀಲವನ್ನಾಗಲಿ ನಡುಪಟ್ಟಿಯ ಜೇಬಿನಲ್ಲಿ ತಾಮ್ರದ ಕಾಸನ್ನಾಗಲಿ ತೆಗೆದುಕೊಂಡು ಹೋಗಬೇಡಿ; 9 ಆದರೆ ಕೆರಗಳನ್ನು ಬಿಗಿದುಕೊಳ್ಳಿ ಮತ್ತು ನೀವು ಧರಿಸಿಕೊಂಡಿರುವ ಉಡುಪೇ ಸಾಕು, ಇನ್ನೊಂದು ಉಡುಪು ಬೇಡ.”* 10 ಇದಲ್ಲದೆ ಅವನು ಅವರಿಗೆ, “ನೀವು ಒಂದು ಮನೆಗೆ ಹೋದಾಗ ಆ ಸ್ಥಳದಿಂದ ಹೋಗುವ ತನಕ ಅಲ್ಲಿಯೇ ಉಳಿದುಕೊಳ್ಳಿರಿ. 11 ಯಾವ ಸ್ಥಳದವರಾದರೂ ನಿಮ್ಮನ್ನು ಬರಮಾಡಿಕೊಳ್ಳದಿದ್ದರೆ ಅಥವಾ ನಿಮ್ಮ ಮಾತುಗಳಿಗೆ ಕಿವಿಗೊಡದಿದ್ದರೆ ಅಲ್ಲಿಂದ ಹೋಗುವಾಗ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಅವರಿಗೆ ಸಾಕ್ಷಿಯಾಗಿ ಝಾಡಿಸಿಬಿಡಿರಿ” ಎಂದು ಹೇಳಿದನು. 12 ಶಿಷ್ಯರು ಅಲ್ಲಿಂದ ಹೊರಟುಹೋಗಿ, ಜನರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಡುವಂತೆ ಸಾರಿಹೇಳಿದರು; 13 ಮತ್ತು ಅನೇಕ ದೆವ್ವಗಳನ್ನು ಬಿಡಿಸಿದರು ಹಾಗೂ ಅನೇಕ ರೋಗಿಗಳಿಗೆ ಎಣ್ಣೆಹಚ್ಚಿ ವಾಸಿಮಾಡಿದರು.
14 ಯೇಸುವಿನ ಹೆಸರು ಪ್ರಸಿದ್ಧವಾದುದರಿಂದ ಈ ವಿಷಯ ಅರಸನಾದ ಹೆರೋದನ ಕಿವಿಗೂ ಬಿತ್ತು. ಮತ್ತು ಜನರು ಅವನ ಕುರಿತು, “ಸ್ನಾನಿಕನಾದ ಯೋಹಾನನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ; ಆದುದರಿಂದಲೇ ಈ ಮಹತ್ಕಾರ್ಯಗಳು ಇವನಿಂದ ನಡೆಯುತ್ತಿವೆ” ಎಂದು ಹೇಳುತ್ತಿದ್ದರು. 15 ಆದರೆ ಇನ್ನು ಕೆಲವರು, “ಇವನು ಎಲೀಯನು” ಎಂದೂ ಬೇರೆ ಕೆಲವರು, “ಇವನು ಪ್ರವಾದಿಗಳಲ್ಲೊಬ್ಬನು” ಎಂದೂ ಹೇಳುತ್ತಿದ್ದರು. 16 ಆದರೆ ಹೆರೋದನು ಇದನ್ನು ಕೇಳಿಸಿಕೊಂಡಾಗ, “ನಾನು ಶಿರಚ್ಛೇದನ ಮಾಡಿಸಿದ ಯೋಹಾನನೇ ಪುನಃ ಬದುಕಿಬಂದಿದ್ದಾನೆ” ಎಂದು ಹೇಳಿದನು. 17 ಹೆರೋದನು ತಾನು ವಿವಾಹವಾಗಿದ್ದ ಹೆರೋದ್ಯಳ ನಿಮಿತ್ತ ಯೋಹಾನನನ್ನು ಹಿಡಿದುತರಿಸಿ ಸೆರೆಯಲ್ಲಿ ಕಟ್ಟಿಹಾಕಿಸಿದ್ದನು; ಈ ಹೆರೋದ್ಯಳು ಹೆರೋದನ ಅಣ್ಣನಾದ ಫಿಲಿಪ್ಪನ ಹೆಂಡತಿ. 18 ಯೋಹಾನನು ಹೆರೋದನಿಗೆ, “ನಿನ್ನ ಅಣ್ಣನ ಹೆಂಡತಿಯನ್ನು ಇಟ್ಟುಕೊಂಡಿರುವುದು ನ್ಯಾಯವಲ್ಲ” ಎಂದು ಆಗಾಗ ಹೇಳುತ್ತಿದ್ದನು. 19 ಇದಕ್ಕೆ ಹೆರೋದ್ಯಳು ಅವನ ವಿರುದ್ಧ ದ್ವೇಷವನ್ನು ಬೆಳೆಸಿಕೊಂಡು, ಅವನನ್ನು ಕೊಲ್ಲಲು ಬಯಸಿದ್ದರೂ ಸಾಧ್ಯವಾಗಿರಲಿಲ್ಲ. 20 ಏಕೆಂದರೆ ಹೆರೋದನು ಯೋಹಾನನನ್ನು ನೀತಿವಂತನೂ ಪರಿಶುದ್ಧನೂ ಎಂದು ತಿಳಿದು ಭಯಪಟ್ಟು ಅವನನ್ನು ಸುರಕ್ಷಿತವಾಗಿರಿಸಿದ್ದನು. ಆದರೆ ಅವನು ಹೇಳಿದ್ದನ್ನು ಕೇಳಿಸಿಕೊಂಡಾಗ ಹೆರೋದನಿಗೆ ಏನು ಮಾಡಬೇಕೆಂದು ತೋಚುತ್ತಿರಲಿಲ್ಲವಾದರೂ ಅವನಿಗೆ ಸಂತೋಷದಿಂದ ಕಿವಿಗೊಡುತ್ತಿದ್ದನು.
21 ಹೀಗಿರಲಾಗಿ ಅನುಕೂಲವಾದ ಒಂದು ಸಮಯ ಬಂತು; ತಾನು ಹುಟ್ಟಿದ ದಿನದಂದು ಹೆರೋದನು ಪ್ರಭುಗಳಿಗೆ, ಸಹಸ್ರಾಧಿಪತಿಗಳಿಗೆ ಮತ್ತು ಗಲಿಲಾಯದ ಮುಖ್ಯಸ್ಥರಿಗೆ ಸಂಧ್ಯಾ ಭೋಜನವನ್ನು ಏರ್ಪಡಿಸಿದನು. 22 ಈ ಹೆರೋದ್ಯಳ ಮಗಳು ಬಂದು ನಾಟ್ಯವಾಡಿ ಹೆರೋದನನ್ನೂ ಅವನೊಂದಿಗೆ ಊಟಕ್ಕೆ ಕುಳಿತಿದ್ದವರನ್ನೂ ಮೆಚ್ಚಿಸಿದಳು. ಅರಸನು ಆ ಹುಡುಗಿಗೆ, “ನಿನಗೆ ಬೇಕಾದದ್ದನ್ನು ಕೇಳಿಕೋ, ಕೊಡುತ್ತೇನೆ” ಎಂದನು. 23 ಮಾತ್ರವಲ್ಲ, “ನೀನು ಏನು ಕೇಳಿದರೂ ಸರಿ, ನನ್ನ ರಾಜ್ಯದಲ್ಲಿ ಅರ್ಧದಷ್ಟನ್ನು ಕೇಳಿದರೂ ಕೊಡುತ್ತೇನೆ” ಎಂದು ಪ್ರಮಾಣಮಾಡಿದನು. 24 ಅವಳು ತಾಯಿಯ ಬಳಿಗೆ ಹೋಗಿ, “ನಾನೇನು ಕೇಳಲಿ?” ಎಂದು ಕೇಳಿದಾಗ ತಾಯಿಯು ಅವಳಿಗೆ, “ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳು” ಎಂದಳು. 25 ಕೂಡಲೆ ಅವಳು ಅವಸರವಾಗಿ ಅರಸನ ಬಳಿಗೆ ಹೋಗಿ, “ಈಗಲೇ ನೀನು ನನಗೆ ಸ್ನಾನಿಕನಾದ ಯೋಹಾನನ ತಲೆಯನ್ನು ದೊಡ್ಡ ತಟ್ಟೆಯಲ್ಲಿ ತಂದುಕೊಡಬೇಕು” ಎಂದು ಕೇಳಿಕೊಂಡಳು. 26 ಇದನ್ನು ಕೇಳಿ ಅರಸನಿಗೆ ತೀರ ದುಃಖವಾಯಿತಾದರೂ, ತನ್ನ ಪ್ರಮಾಣದ ನಿಮಿತ್ತವಾಗಿಯೂ ತನ್ನೊಂದಿಗೆ ಊಟಕ್ಕೆ ಕುಳಿತಿದ್ದವರ ನಿಮಿತ್ತವಾಗಿಯೂ ಅವಳ ಕೋರಿಕೆಯನ್ನು ಅಲಕ್ಷ್ಯ ಮಾಡಲು ಅವನು ಇಷ್ಟಪಡಲಿಲ್ಲ. 27 ಆದುದರಿಂದ ಅರಸನು ಕೂಡಲೆ ತನ್ನ ಮೈಗಾವಲಿನ ಸಿಪಾಯಿಗಳಲ್ಲಿ ಒಬ್ಬನನ್ನು ಕಳುಹಿಸಿ ಯೋಹಾನನ ತಲೆಯನ್ನು ತರುವಂತೆ ಆಜ್ಞಾಪಿಸಿದನು. ಅವನು ಸೆರೆಮನೆಗೆ ಹೋಗಿ ಅವನ ತಲೆಯನ್ನು ಕಡಿದು 28 ತಟ್ಟೆಯಲ್ಲಿ ತಂದನು. ನಂತರ ಅದನ್ನು ಆ ಹುಡುಗಿಗೆ ಕೊಟ್ಟಾಗ ಅವಳು ಅದನ್ನು ತನ್ನ ತಾಯಿಗೆ ಕೊಟ್ಟಳು. 29 ಅವನ ಶಿಷ್ಯರು ಇದನ್ನು ಕೇಳಿಸಿಕೊಂಡಾಗ ಅಲ್ಲಿಗೆ ಬಂದು ಅವನ ಶವವನ್ನು ತೆಗೆದುಕೊಂಡು ಹೋಗಿ ಸ್ಮರಣೆಯ ಸಮಾಧಿಯಲ್ಲಿ ಇಟ್ಟರು.
30 ಮತ್ತು ಅಪೊಸ್ತಲರು ಯೇಸುವಿನ ಬಳಿ ಕೂಡಿಬಂದು ತಾವು ಮಾಡಿದ ಮತ್ತು ಬೋಧಿಸಿದ ಎಲ್ಲ ವಿಷಯಗಳ ಕುರಿತು ಅವನಿಗೆ ವರದಿಮಾಡಿದರು. 31 ಆಗ ಅವನು ಅವರಿಗೆ, “ನೀವು ಏಕಾಂತವಾದ ಸ್ಥಳಕ್ಕೆ ಬಂದು ತುಸು ದಣಿವಾರಿಸಿಕೊಳ್ಳಿರಿ” ಎಂದು ಹೇಳಿದನು. ಏಕೆಂದರೆ ಅನೇಕರು ಅಲ್ಲಿಗೆ ಬರುತ್ತಾ ಹೋಗುತ್ತಾ ಇದ್ದುದರಿಂದ ಅವರಿಗೆ ಊಟವನ್ನು ಮಾಡಲು ಸಹ ಸಮಯವಿರಲಿಲ್ಲ. 32 ಆದುದರಿಂದ ಅವರು ದೋಣಿಯನ್ನು ಹತ್ತಿ ಒಂದು ಏಕಾಂತವಾದ ಸ್ಥಳಕ್ಕೆ ಹೊರಟರು. 33 ಆದರೆ ಜನರು ಅವರು ಹೋಗುತ್ತಿರುವುದನ್ನು ನೋಡಿದರು ಮತ್ತು ಅನೇಕರಿಗೆ ಅದು ತಿಳಿದುಬಂತು; ಅವರು ಎಲ್ಲ ಊರುಗಳಿಂದ ಕಾಲ್ನಡಿಗೆಯಾಗಿ ಓಡಿ ಅವರಿಗಿಂತ ಮುಂಚೆ ಅಲ್ಲಿಗೆ ತಲಪಿದರು. 34 ದೋಣಿಯಿಂದ ಕೆಳಗೆ ಇಳಿದಾಗ ಅವನು ಜನರ ದೊಡ್ಡ ಗುಂಪನ್ನು ನೋಡಿ ಇವರು ಕುರುಬನಿಲ್ಲದ ಕುರಿಗಳ ಹಾಗೆ ಇದ್ದಾರಲ್ಲ ಎಂದು ಕನಿಕರಪಟ್ಟು ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದನು.
35 ಅಷ್ಟರೊಳಗೆ ಬಹಳ ಹೊತ್ತಾದುದರಿಂದ ಶಿಷ್ಯರು ಅವನ ಬಳಿಗೆ ಬಂದು, “ಇದು ನಿರ್ಜನ ಸ್ಥಳ ಮತ್ತು ಈಗಾಗಲೇ ಬಹಳ ಹೊತ್ತಾಗಿದೆ. 36 ಈ ಜನರು ಸುತ್ತಲಿನ ಹಳ್ಳಿಗಳಿಗೆ ಹೋಗಿ ಊಟಕ್ಕೆ ಏನನ್ನಾದರೂ ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿಬಿಡು” ಎಂದು ಹೇಳಿದರು. 37 ಪ್ರತ್ಯುತ್ತರವಾಗಿ ಅವನು, “ನೀವೇ ಅವರಿಗೆ ಏನನ್ನಾದರೂ ಊಟಕ್ಕೆ ಕೊಡಿರಿ” ಅಂದನು. ಅದಕ್ಕವರು, “ನಾವು ಹೋಗಿ ಇನ್ನೂರು ದಿನಾರುಗಳಿಗೆ* ರೊಟ್ಟಿಗಳನ್ನು ಕೊಂಡುಕೊಂಡು ಜನರಿಗೆ ಊಟಕ್ಕೆ ಕೊಡಬೇಕೊ?” ಎಂದು ಕೇಳಿದರು. 38 ಅವನು ಅವರಿಗೆ, “ನಿಮ್ಮ ಬಳಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿ!” ಎಂದನು. ಅದನ್ನು ಖಚಿತಪಡಿಸಿಕೊಂಡ ಮೇಲೆ ಅವರು ಬಂದು, “ಐದು ರೊಟ್ಟಿಗಳು ಎರಡು ಮೀನುಗಳು” ಅಂದರು. 39 ಆಗ ಅವನು ಎಲ್ಲರಿಗೂ ಹುಲ್ಲುಹಾಸಿನ ಮೇಲೆ ಪಂಕ್ತಿಪಂಕ್ತಿಯಾಗಿ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟನು. 40 ಅವರು ನೂರು ಮಂದಿ ಮತ್ತು ಐವತ್ತು ಮಂದಿಯಂತೆ ಗುಂಪು ಗುಂಪಾಗಿ ಕುಳಿತುಕೊಂಡರು. 41 ಆಗ ಅವನು ಐದು ರೊಟ್ಟಿಗಳು ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಸ್ತೋತ್ರಮಾಡಿ ರೊಟ್ಟಿಗಳನ್ನು ಮುರಿದು, ಅವುಗಳನ್ನು ತನ್ನ ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚುವಂತೆ ತಿಳಿಸಿದನು; ಅದರಂತೆಯೇ ಎರಡು ಮೀನುಗಳನ್ನು ಜನರೆಲ್ಲರಿಗೆ ಹಂಚಿಸಿದನು. 42 ಅವರೆಲ್ಲರೂ ಊಟಮಾಡಿ ತೃಪ್ತರಾದರು; 43 ಮತ್ತು ಉಳಿದಿದ್ದ ಮೀನುಗಳಲ್ಲದೆ ಬರೇ ರೊಟ್ಟಿತುಂಡುಗಳನ್ನು ಕೂಡಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿದವು. 44 ಊಟಮಾಡಿದವರು ಐದು ಸಾವಿರ ಮಂದಿ ಗಂಡಸರು.
45 ಇದಾದ ಕೂಡಲೆ ಅವನು ತಾನೇ ಜನರ ಗುಂಪನ್ನು ಕಳುಹಿಸಿಬಿಡಲಾಗಿ, ತನ್ನ ಶಿಷ್ಯರಿಗೆ ದೋಣಿಯನ್ನು ಹತ್ತಿ ತನಗಿಂತ ಮುಂಚೆ ಆಚೇದಡದಲ್ಲಿರುವ ಬೇತ್ಸಾಯಿದಕ್ಕೆ ಹೋಗುವಂತೆ ಒತ್ತಾಯಿಸಿದನು. 46 ಅವರನ್ನು ಬೀಳ್ಕೊಟ್ಟ ಬಳಿಕ ಅವನು ಪ್ರಾರ್ಥಿಸಲಿಕ್ಕಾಗಿ ಬೆಟ್ಟಕ್ಕೆ ಹೋದನು. 47 ಈಗ ಹೊತ್ತು ಮುಳುಗಿರಲಾಗಿ ದೋಣಿಯು ಸಮುದ್ರದ ಮಧ್ಯದಲ್ಲಿತ್ತು, ಆದರೆ ಅವನು ಒಬ್ಬನೇ ದಡದಲ್ಲಿದ್ದನು. 48 ಎದುರುಗಾಳಿಯು ಬೀಸುತ್ತಾ ಇದ್ದುದರಿಂದ ಶಿಷ್ಯರು ದೋಣಿಯನ್ನು ನಡೆಸಲು ಒದ್ದಾಡುತ್ತಿರುವುದನ್ನು ಕಂಡು, ಹೆಚ್ಚುಕಡಮೆ ರಾತ್ರಿಯ ನಾಲ್ಕನೆಯ ಜಾವದಲ್ಲಿ* ಸಮುದ್ರದ ಮೇಲೆ ನಡೆಯುತ್ತಾ ಅವರ ಬಳಿಗೆ ಬಂದನು; ಆದರೆ ಅವನು ಅವರನ್ನು ದಾಟಿ ಮುಂದಕ್ಕೆ ಹೋಗಬೇಕೆಂದಿದ್ದನು. 49 ಅವನು ಸಮುದ್ರದ ಮೇಲೆ ನಡೆಯುತ್ತಿರುವುದನ್ನು ಅವರು ಕಂಡಾಗ, “ಅಲ್ಲಿ ಏನೋ ಇದೆ” ಎಂದು ಭಾವಿಸಿ ಗಟ್ಟಿಯಾಗಿ ಚೀರಿದರು. 50 ಅವರೆಲ್ಲರೂ ಅವನನ್ನು ನೋಡಿ ಗಲಿಬಿಲಿಗೊಂಡಿದ್ದರು. ಕೂಡಲೆ ಅವನು ಅವರಿಗೆ, “ಧೈರ್ಯವಾಗಿರಿ, ನಾನೇ; ಭಯಪಡಬೇಡಿರಿ” ಎಂದು ಹೇಳಿದನು. 51 ತರುವಾಯ ಅವನು ಅವರಿದ್ದ ದೋಣಿಯನ್ನು ಹತ್ತಿದಾಗ ಗಾಳಿಯು ನಿಂತುಹೋಯಿತು. ಇದನ್ನು ನೋಡಿ ಅವರು ಬಹು ಆಶ್ಚರ್ಯಗೊಂಡರು, 52 ಏಕೆಂದರೆ ಅವರು ರೊಟ್ಟಿಗಳ ವಿಷಯವಾದ ಗೂಢಾರ್ಥವನ್ನು ಗ್ರಹಿಸಿರಲಿಲ್ಲ; ಅವರ ಹೃದಯಗಳು ವಿಷಯಗಳನ್ನು ಅರ್ಥಮಾಡಿಕೊಳ್ಳಲಾರದಷ್ಟು ಮಂದವಾಗಿದ್ದವು.
53 ಅವರು ಸಮುದ್ರವನ್ನು ದಾಟಿ ಗೆನೆಜರೇತ್ ಊರಿನ ದಡಕ್ಕೆ ಬಂದು ಹತ್ತಿರದಲ್ಲಿಯೇ ದೋಣಿಯನ್ನು ಕಟ್ಟಿದರು. 54 ಅವರು ದೋಣಿಯಿಂದ ಇಳಿದ ಕೂಡಲೆ ಜನರು ಅವನ ಗುರುತು ಹಿಡಿದು, 55 ಸುತ್ತಮುತ್ತಲಿನ ಸ್ಥಳಗಳಿಗೆ ಓಡಿ ಅಲ್ಲಿದ್ದ ರೋಗಿಗಳನ್ನು ಹಾಸಿಗೆಗಳಲ್ಲಿ ಹೊತ್ತುಕೊಂಡು ಅವನು ಎಲ್ಲಿದ್ದಾನೆಂದು ಕೇಳಿಸಿಕೊಂಡರೋ ಅಲ್ಲಿಗೆ ತಂದರು. 56 ಅವನು ಯಾವೆಲ್ಲ ಹಳ್ಳಿಗಳಿಗೆ, ಊರುಗಳಿಗೆ ಅಥವಾ ಗ್ರಾಮಗಳಿಗೆ ಹೋದನೋ ಅಲ್ಲೆಲ್ಲ ಜನರು ರೋಗಿಗಳನ್ನು ಸಂತೆಬೀದಿಗಳಲ್ಲಿ ಇಟ್ಟು, ಅವನ ಮೇಲಂಗಿಯ ಅಂಚನ್ನಾದರೂ ಮುಟ್ಟಲು ಅನುಮತಿಸುವಂತೆ ಅವನನ್ನು ಬೇಡಿಕೊಂಡರು. ಅವನನ್ನು ಎಷ್ಟು ಮಂದಿ ಮುಟ್ಟಿದರೊ ಅವರೆಲ್ಲರೂ ವಾಸಿಯಾದರು.