2 ಕೊರಿಂಥ
4 ಆದುದರಿಂದ ನಮಗೆ ತೋರಿಸಲ್ಪಟ್ಟಿರುವ ಕರುಣೆಯಿಂದಾಗಿ ಈ ಶುಶ್ರೂಷೆಯು ನಮಗಿರುವುದರಿಂದ ನಾವು ಬಿಟ್ಟುಬಿಡುವುದಿಲ್ಲ. 2 ನಾಚಿಕೆಪಡುವಂಥ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು, ಕುತಂತ್ರದಿಂದ ನಡೆಯದೆ, ದೇವರ ವಾಕ್ಯವನ್ನು ಕಲಬೆರಕೆಮಾಡದೆ, ಸತ್ಯವನ್ನು ಪ್ರಕಟಪಡಿಸುತ್ತಾ ದೇವರ ದೃಷ್ಟಿಯಲ್ಲಿ ಎಲ್ಲ ಮನುಷ್ಯರ ಮನಸ್ಸಾಕ್ಷಿಗೆ ನಮ್ಮನ್ನು ಶಿಫಾರಸ್ಸು ಮಾಡಿಕೊಳ್ಳುತ್ತೇವೆ. 3 ನಾವು ಪ್ರಕಟಪಡಿಸುವ ಸುವಾರ್ತೆಯು ಮುಸುಕಿನಿಂದ ಮರೆಮಾಡಲ್ಪಟ್ಟಿರುವುದಾದರೆ ಅದು ನಾಶನಮಾರ್ಗದಲ್ಲಿರುವವರಿಗೆ ಮರೆಯಾಗಿದೆ. 4 ಏಕೆಂದರೆ ದೇವರ ಸ್ವರೂಪವಾಗಿರುವ ಕ್ರಿಸ್ತನ ಕುರಿತಾದ ಮಹಿಮಾಭರಿತ ಸುವಾರ್ತೆಯ ಬೆಳಕು ಪ್ರಕಾಶಿಸಬಾರದೆಂದು ಈ ವಿಷಯಗಳ ವ್ಯವಸ್ಥೆಯ ದೇವನು ಅವಿಶ್ವಾಸಿಗಳ ಮನಸ್ಸನ್ನು ಕುರುಡುಮಾಡಿದ್ದಾನೆ. 5 ನಾವು ನಮ್ಮ ಕುರಿತಾಗಿ ಸಾರದೆ, ಕ್ರಿಸ್ತ ಯೇಸುವನ್ನು ಕರ್ತನೆಂದೂ ನಾವು ಯೇಸುವಿನ ನಿಮಿತ್ತ ನಿಮ್ಮ ದಾಸರೆಂದೂ ಸಾರುತ್ತಿದ್ದೇವೆ. 6 “ಕತ್ತಲೆಯೊಳಗಿಂದ ಬೆಳಕು ಪ್ರಕಾಶಿಸಲಿ” ಎಂದು ಹೇಳಿದ ದೇವರು ತಾನೇ ಕ್ರಿಸ್ತನ ಮುಖದ ಮೂಲಕ ನಮ್ಮ ಹೃದಯಗಳು ಹೊಳೆಯುವಂತೆ ತನ್ನ ಮಹಿಮಾಭರಿತ ಜ್ಞಾನದಿಂದ ಅವುಗಳನ್ನು ಪ್ರಕಾಶಿಸಿದ್ದಾನೆ.
7 ಆದರೆ ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಯು ದೇವರಿಂದಲೇ ಹೊರತು ನಮ್ಮೊಳಗಿಂದ ಬರುವಂಥದ್ದಲ್ಲ ಎಂಬುದನ್ನು ತೋರಿಸಲಿಕ್ಕಾಗಿ ಈ ನಿಕ್ಷೇಪವು ಮಣ್ಣಿನ ಪಾತ್ರೆಗಳಲ್ಲಿ ನಮಗಿದೆ. 8 ನಾವು ಎಲ್ಲ ವಿಧಗಳಲ್ಲಿ ಅದುಮಲ್ಪಟ್ಟಿದ್ದೇವೆ, ಆದರೆ ಅಲುಗಾಡಲು ಸಾಧ್ಯವಿಲ್ಲದಷ್ಟು ನಿರ್ಬಂಧಿಸಲ್ಪಟ್ಟಿಲ್ಲ; ನಾವು ದಿಕ್ಕುಕಾಣದವರಾಗಿದ್ದೇವೆ, ಆದರೆ ಸಂಪೂರ್ಣವಾಗಿ ದಾರಿಕಾಣದವರಲ್ಲ; 9 ನಾವು ಹಿಂಸಿಸಲ್ಪಟ್ಟಿದ್ದೇವೆ, ಆದರೆ ಕೈಬಿಡಲ್ಪಟ್ಟವರಲ್ಲ; ನಾವು ಕೆಡವಲ್ಪಟ್ಟಿದ್ದೇವೆ, ಆದರೆ ನಾಶಮಾಡಲ್ಪಟ್ಟವರಲ್ಲ. 10 ಯೇಸುವಿನ ಜೀವವು ನಮ್ಮ ದೇಹದಲ್ಲಿ ಪ್ರಕಟಿಸಲ್ಪಡುವಂತೆ ಯೇಸುವಿಗೆ ಕೊಡಲ್ಪಟ್ಟ ಮರಣಕಾರಕ ದುರುಪಚಾರವನ್ನು ನಾವು ನಮ್ಮ ದೇಹದಲ್ಲಿ ಎಲ್ಲ ಕಡೆ ಯಾವಾಗಲೂ ತಾಳಿಕೊಳ್ಳುತ್ತೇವೆ. 11 ಯೇಸುವಿನ ಜೀವವು ನಮ್ಮ ನಶ್ವರ ಶರೀರದಲ್ಲಿ ಪ್ರಕಟಿಸಲ್ಪಡುವಂತೆ ಬದುಕಿರುವ ನಾವು ಯೇಸುವಿನ ನಿಮಿತ್ತ ಮರಣಕ್ಕೆ ಮುಖಾಮುಖಿಯಾಗಿ ತರಲ್ಪಡುತ್ತಲೇ ಇದ್ದೇವೆ. 12 ಹೀಗೆ ನಮ್ಮಲ್ಲಿ ಮರಣವು ಕೆಲಸಮಾಡುತ್ತಿದೆ, ಆದರೆ ನಿಮ್ಮಲ್ಲಿ ಜೀವವು ಕೆಲಸಮಾಡುತ್ತಿದೆ.
13 “ನಾನು ನಂಬಿಕೆಯನ್ನು ಅಭ್ಯಾಸಿಸಿದೆನು, ಆದುದರಿಂದ ಮಾತಾಡಿದೆನು” ಎಂದು ಬರೆದಿರುವಂತೆಯೇ ನಮಗೂ ಅದೇ ನಂಬಿಕೆಯ ಮನೋಭಾವವಿರುವುದರಿಂದ ನಾವೂ ನಂಬಿಕೆಯನ್ನು ಅಭ್ಯಾಸಿಸುತ್ತೇವೆ, ಆದುದರಿಂದ ಮಾತಾಡುತ್ತೇವೆ. 14 ಯೇಸುವನ್ನು ಎಬ್ಬಿಸಿದಾತನು ನಮ್ಮನ್ನು ಸಹ ಯೇಸುವಿನೊಂದಿಗೆ ಎಬ್ಬಿಸುವನು ಮತ್ತು ನಿಮ್ಮೊಂದಿಗೆ ನಮ್ಮನ್ನು ತನ್ನ ಮುಂದೆ ನಿಲ್ಲಿಸುವನೆಂದು ತಿಳಿದವರಾಗಿದ್ದೇವೆ. 15 ಈ ಎಲ್ಲ ಸಂಗತಿಗಳು ನಿಮ್ಮ ನಿಮಿತ್ತ ಸಂಭವಿಸುತ್ತವೆ; ಹೀಗೆ ಅಧಿಕವಾಗಿ ದೊರಕುವ ಅಪಾತ್ರ ದಯೆಯು ದೇವರ ಮಹಿಮೆಗಾಗಿ ಇನ್ನು ಅನೇಕರು ಸಲ್ಲಿಸುವ ಕೃತಜ್ಞತಾಸ್ತುತಿಯಿಂದಾಗಿ ಮತ್ತಷ್ಟು ಅಧಿಕವಾಗುವಂತಾಗುವುದು.
16 ಆದುದರಿಂದ, ನಾವು ಬಿಟ್ಟುಬಿಡುವುದಿಲ್ಲ; ನಮ್ಮ ಹೊರಗಣ ಮನುಷ್ಯನು ನಶಿಸಿ ಹೋಗುತ್ತಿರುವುದಾದರೂ, ನಮ್ಮ ಒಳಗಣ ಮನುಷ್ಯನು ನಿಶ್ಚಯವಾಗಿಯೂ ದಿನೇ ದಿನೇ ನವೀಕರಿಸಲ್ಪಡುತ್ತಿದ್ದಾನೆ. 17 ಸಂಕಟವು ಕ್ಷಣಮಾತ್ರದ್ದೂ ಹಗುರವಾದದ್ದೂ ಆಗಿರುತ್ತದೆಯಾದರೂ, ಅದು ನಮಗೆ ಹೆಚ್ಚೆಚ್ಚು ಉತ್ಕೃಷ್ಟವಾದ ತೂಕವುಳ್ಳದ್ದೂ ನಿರಂತರವಾದದ್ದೂ ಆದ ಮಹಿಮೆಯನ್ನು ಫಲಿಸುತ್ತದೆ. 18 ನಮ್ಮ ಕಣ್ಣುಗಳನ್ನು ನಾವು ಕಾಣುವಂಥ ಸಂಗತಿಗಳ ಮೇಲಲ್ಲ, ಕಾಣದಿರುವಂಥ ಸಂಗತಿಗಳ ಮೇಲೆ ಇಡುವವರಾಗಿದ್ದೇವೆ. ಕಾಣುವಂಥ ಸಂಗತಿಗಳು ತಾತ್ಕಾಲಿಕವಾಗಿವೆ, ಆದರೆ ಕಾಣದಿರುವಂಥ ಸಂಗತಿಗಳು ನಿರಂತರವಾಗಿವೆ.