ಲೂಕ
2 ಆ ಕಾಲದಲ್ಲಿ ಜನ್ರೆಲ್ಲ ಹೆಸ್ರು ನೋಂದಾಯಿಸಬೇಕು ಅಂತ ರೋಮಿನ ರಾಜ ಅಗಸ್ಟಸ್ ಆಜ್ಞೆ ಕೊಟ್ಟ. 2 (ಮುಂಚೆ ಸಿರಿಯದ ರಾಜ್ಯಪಾಲ ಕುರೇನ್ಯನು ಜನ್ರ ಹೆಸ್ರನ್ನ ನೋಂದಾಯಿಸಿದ್ದ.) 3 ಜನ್ರು ಹೆಸ್ರನ್ನ ನೋಂದಾಯಿಸೋಕೆ ತಮ್ಮತಮ್ಮ ಊರಿಗೆ ಹೋದ್ರು. 4 ಯೋಸೇಫ+ ದಾವೀದನ ವಂಶದವನು ಆಗಿದ್ರಿಂದ ಗಲಿಲಾಯದ ನಜರೇತಿಂದ ಯೂದಾಯದ ಬೆತ್ಲೆಹೇಮ್+ ಅನ್ನೋ ದಾವೀದನ ಊರಿಗೆ ಹೋದ. 5 ಅವನು ಹೆಸ್ರನ್ನ ನೋಂದಾಯಿಸೋಕೆ ಮರಿಯಳನ್ನೂ ಕರ್ಕೊಂಡು ಹೋದ. ಆಗ ಅವಳು ತುಂಬು ಗರ್ಭಿಣಿ.+ 6 ಅವರು ಬೆತ್ಲೆಹೇಮಿಗೆ ಬಂದಾಗ ಹೆರಿಗೆ ಸಮಯ ಬಂತು. 7 ಅವಳು ಗಂಡುಮಗು ಹೆತ್ತಳು. ಅದು ಅವಳ ಮೊದಲನೇ ಮಗು.+ ಮಗುಗೆ ಬಟ್ಟೆ ಸುತ್ತಿ ಮೇವು ಹಾಕೋ ಸ್ಥಳದಲ್ಲಿ ಮಲಗಿಸಿದಳು.+ ಯಾಕಂದ್ರೆ ಛತ್ರದಲ್ಲಿ ಉಳ್ಕೊಳ್ಳೋಕೆ ಸ್ಥಳ ಸಿಕ್ಕಿರಲಿಲ್ಲ.
8 ಆ ಪ್ರದೇಶದಲ್ಲೇ ಕುರುಬರು ಊರ ಹೊರಗೆ ರಾತ್ರಿ ಮಂದೆ ಕಾಯ್ತಾ ಇದ್ರು. 9 ತಟ್ಟಂತ ಯೆಹೋವನ* ದೂತ ಅವ್ರ ಮುಂದೆ ನಿಂತ. ಯೆಹೋವನ* ಮಹಿಮೆ ಅವ್ರ ಸುತ್ತ ಪ್ರಕಾಶಿಸ್ತು. ಅವ್ರಿಗೆ ತುಂಬ ಭಯ ಆಯ್ತು. 10 ಆಗ ದೇವದೂತ “ಹೆದ್ರಬೇಡಿ. ಒಂದು ಸಿಹಿಸುದ್ದಿ ಹೇಳೋಕೆ ಬಂದೆ. ಅದು ಜನ್ರಿಗೆಲ್ಲ ತುಂಬ ಖುಷಿ ತರುತ್ತೆ. 11 ಯಾಕಂದ್ರೆ ದಾವೀದನ ಊರಲ್ಲಿ+ ಇವತ್ತು ನಿಮಗೋಸ್ಕರ ಒಬ್ಬ ರಕ್ಷಕ ಹುಟ್ಟಿದ್ದಾನೆ.+ ಅವನು ಒಡೆಯನಾಗಿರೋ ಕ್ರಿಸ್ತ.+ 12 ಅವನನ್ನ ನೀವು ಹೇಗೆ ಕಂಡುಹಿಡಿಬಹುದು ಅಂದ್ರೆ ಮೇವು ಹಾಕೋ ಸ್ಥಳದಲ್ಲಿ ಬಟ್ಟೆಯಲ್ಲಿ ಸುತ್ತಿರೋ ಒಂದು ಚಿಕ್ಕ ಮಗು ಮಲಗಿರೋದನ್ನ ನೋಡ್ತೀರ” ಅಂದ. 13 ತಕ್ಷಣ ಆ ದೇವದೂತನ ಜೊತೆ ಸ್ವರ್ಗದ ಸೈನ್ಯದಲ್ಲಿದ್ದ+ ತುಂಬ ದೇವದೂತರು ಕಾಣಿಸ್ಕೊಂಡು ದೇವರನ್ನ ಹೊಗಳ್ತಾ 14 “ಸ್ವರ್ಗದಲ್ಲಿ ದೇವರಿಗೆ ಮಹಿಮೆ ಸಿಗಲಿ, ಭೂಮಿಯಲ್ಲಿ ದೇವ್ರಿಗೆ ಇಷ್ಟವಾಗಿರೋ ಜನ್ರಿಗೆ ಶಾಂತಿ ಸಿಗಲಿ” ಅಂದ್ರು.
15 ದೇವದೂತರು ಸ್ವರ್ಗಕ್ಕೆ ಹೋದ ಮೇಲೆ ಆ ಕುರುಬರು “ಈಗಲೇ ಬೆತ್ಲೆಹೇಮಿಗೆ ಹೋಗಿ ಯೆಹೋವ* ನಮಗೆ ಹೇಳಿದ್ದನ್ನ ನೋಡೋಣ” ಅಂದ್ರು. 16 ಅಲ್ಲಿಂದ ಬೇಗಬೇಗ ಹೋದ್ರು. ಅಲ್ಲಿ ಮರಿಯಳನ್ನ, ಯೋಸೇಫನನ್ನ ಮತ್ತು ಮೇವು ಹಾಕೋ ಸ್ಥಳದಲ್ಲಿ ಮಲಗಿದ್ದ ಕೂಸನ್ನ ನೋಡಿದ್ರು. 17 ಆ ಮಗುವನ್ನ ನೋಡಿದಾಗ ದೇವದೂತರು ಹೇಳಿದ್ದನ್ನ ತಿಳಿಸಿದ್ರು. 18 ಕುರುಬರು ಹೇಳಿದ ವಿಷ್ಯ ಕೇಳಿ ಜನ್ರಿಗೆಲ್ಲ ತುಂಬ ಆಶ್ಚರ್ಯ ಆಯ್ತು. 19 ಮರಿಯ ಆ ಮಾತನ್ನೆಲ್ಲ ಮನಸ್ಸಲ್ಲಿ ಜೋಪಾನವಾಗಿ ಇಟ್ಕೊಂಡಳು. ಅದ್ರ ಬಗ್ಗೆ ಧ್ಯಾನಿಸಿದಳು.+ 20 ಕುರುಬರು ನೋಡಿದ, ಕೇಳಿದ ಎಲ್ಲ ವಿಷ್ಯಗಳು ದೇವರು ತಮಗೆ ಹೇಳಿದ ಹಾಗೇ ಇದ್ದಿದ್ರಿಂದ ದೇವರನ್ನ ಹೊಗಳ್ತಾ ವಾಪಸ್ ಹೋದ್ರು.
21 ಎಂಟು ದಿನ ಆದಮೇಲೆ ಮಗುಗೆ ಸುನ್ನತಿ ಮಾಡಿಸೋ ಸಮಯ ಬಂತು.+ ಆಗ ಮಗುಗೆ ಯೇಸು ಅಂತ ಹೆಸ್ರಿಟ್ರು. ಈ ಹೆಸ್ರನ್ನೇ ಇಡಬೇಕಂತ ದೇವದೂತ ಮಗು ಹುಟ್ಟೋ ಮುಂಚೆನೇ ಹೇಳಿದ್ದ.+
22 ಮೋಶೆ ನಿಯಮದ ಪ್ರಕಾರ ಶುದ್ಧೀಕರಿಸ್ಕೊಳ್ಳೋ ಸಮಯ ಬಂದಾಗ+ ಅವರು ಆ ಮಗುವನ್ನ ಯೆಹೋವನಿಗೆ* ಸಮರ್ಪಿಸೋಕೆ ಯೆರೂಸಲೇಮಿಗೆ ತಂದ್ರು. 23 ಯಾಕಂದ್ರೆ ಯೆಹೋವನ* ನಿಯಮದಲ್ಲಿ “ಮೊದಲು ಹುಟ್ಟೋ ಗಂಡು ಮಗುವನ್ನ ಯೆಹೋವನಿಗೆ* ಸಮರ್ಪಿಸಬೇಕು” ಅಂತ ಬರೆದಿತ್ತು.+ 24 ಅಷ್ಟೇ ಅಲ್ಲ “ಎರಡು ದೊಡ್ಡ ಪಾರಿವಾಳ ಅಥವಾ ಎರಡು ಮರಿ ಪಾರಿವಾಳ” ಬಲಿಯಾಗಿ ಕೊಡಬೇಕು ಅಂತ ಯೆಹೋವನ* ನಿಯಮದಲ್ಲಿತ್ತು. ಅವರು ಹಾಗೇ ಮಾಡಿದ್ರು.+
25 ಯೆರೂಸಲೇಮಲ್ಲಿ ಸಿಮೆಯೋನ ಅನ್ನೋ ವ್ಯಕ್ತಿಯಿದ್ದ. ಅವನು ನೀತಿವಂತನಾಗಿದ್ದ, ಅವನಲ್ಲಿ ದೇವಭಯ ಇತ್ತು. ಪವಿತ್ರಶಕ್ತಿ ಅವನ ಮೇಲಿತ್ತು. ದೇವರು ಇಸ್ರಾಯೇಲ್ಯರನ್ನ ಯಾವಾಗ ರಕ್ಷಿಸ್ತಾನೆ+ ಅಂತ ಕಾಯ್ತಾ ಇದ್ದ. 26 ಅಷ್ಟೇ ಅಲ್ಲ ಯೆಹೋವ* ಕಳಿಸೋ ಕ್ರಿಸ್ತನನ್ನ ನೋಡೋ ತನಕ ನೀನು ಸಾಯಲ್ಲ ಅಂತ ಪವಿತ್ರಶಕ್ತಿಯ ಮೂಲಕ ದೇವರೇ ಅವನಿಗೆ ಹೇಳಿದ್ದನು. 27 ಅವನು ಪವಿತ್ರಶಕ್ತಿಯ ಪ್ರೇರಣೆಯಿಂದ ದೇವಾಲಯಕ್ಕೆ ಬಂದ. ಆಗ ಯೇಸುವಿನ ಅಪ್ಪಅಮ್ಮ ನಿಯಮ ಪುಸ್ತಕದಲ್ಲಿ ಹೇಳಿದ ಪ್ರಕಾರ ಮಾಡೋಕೆ ಪುಟ್ಟ ಯೇಸುನ ಅಲ್ಲಿಗೆ ಕರ್ಕೊಂಡು ಬಂದ್ರು.+ 28 ಸಿಮೆಯೋನ ಆ ಮಗುವನ್ನ ತಗೊಂಡು ದೇವರನ್ನ ಹೊಗಳ್ತಾ ಹೀಗಂದ 29 “ವಿಶ್ವದ ರಾಜ, ನೀನು ಹೇಳಿದ ಹಾಗೆ ಮಗುವನ್ನ ನೋಡಿದೆ. ಈಗ ನಾನು ಸತ್ರೂ ಪರ್ವಾಗಿಲ್ಲ. ಸಂತೋಷವಾಗಿ ಜೀವಬಿಡ್ತೀನಿ.+ 30 ಯಾಕಂದ್ರೆ ನೀನು ಹೇಗೆ ನಮ್ಮನ್ನ ರಕ್ಷಿಸ್ತೀಯ ಅಂತ ನನಗೆ ಕಾಣ್ತಿದೆ.+ 31 ಆತನನ್ನ ಎಲ್ಲ ದೇಶದ ಜನ ನೋಡಬೇಕಂತಾನೇ ನೀನು ಕಳಿಸಿದ್ದೀಯ.+ 32 ಆತನು, ಜನ್ರನ್ನ ಮುಚ್ಚಿರೋ ಕತ್ತಲೆಯನ್ನ+ ತೆಗೆದುಹಾಕೋ ಬೆಳಕು.+ ನಿನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ಬೀರೋ ಬೆಳಕು.” 33 ಮಗು ಬಗ್ಗೆ ಸಿಮೆಯೋನ್ ಹೇಳ್ತಿದ್ದ ಮಾತು ಕೇಳಿ ಹೆತ್ತವ್ರಿಗೆ ತುಂಬ ಆಶ್ಚರ್ಯ ಆಗ್ತಿತ್ತು. 34 ಆಮೇಲೆ ಸಿಮೆಯೋನ ಅವ್ರಿಗೆ ದೇವರ ಆಶೀರ್ವಾದ ಸಿಗಲಿ ಅಂತ ಹಾರೈಸಿದ. ಮಗುವಿನ ಅಮ್ಮ ಮರಿಯಗೆ “ದೇವರು ಇವನನ್ನ ಕಳಿಸಿದ್ದಾನೆ. ಅವನಿಂದ ಕೆಲವರು ಬಿದ್ದು ಹೋಗ್ತಾರೆ.+ ಇನ್ನು ಕೆಲವರು ಎದ್ದೇಳ್ತಾರೆ.+ ದೇವರು ಅವನ ಜೊತೆ ಇದ್ದಾನೆ ಅಂತ ತೋರಿಸೋಕೆ ಗುರುತನ್ನ ಕೊಟ್ರೂ ತುಂಬ ಜನ ಅವನ ವಿರುದ್ಧ ಮಾತಾಡ್ತಾರೆ.+ 35 ಅದ್ರಿಂದ ತುಂಬ ಜನ್ರ ಹೃದಯದಲ್ಲಿರೋ ಯೋಚನೆ ಬಯಲಾಗುತ್ತೆ. ನಿನ್ನ ವಿಷ್ಯಕ್ಕೆ ಬಂದ್ರೆ, ಒಂದು ಉದ್ದ ಕತ್ತಿ ನಿನ್ನನ್ನ ತೂರ್ಕೊಂಡು ಹೋಗುತ್ತೆ”+ ಅಂದ.
36 ಅಲ್ಲಿ ಪ್ರವಾದಿನಿ ಅನ್ನ ಇದ್ದಳು. ಅವಳು ಅಶೇರನ ಕುಲಕ್ಕೆ ಸೇರಿದ ಫನುವೇಲನ ಮಗಳು. ಅವಳಿಗೆ ತುಂಬ ವಯಸ್ಸಾಗಿತ್ತು. ಮದುವೆಯಾಗಿ ಏಳು ವರ್ಷ ಗಂಡನ ಜೊತೆ ಇದ್ದಳು. 37 ಆಮೇಲೆ ವಿಧವೆ ಆದಳು. ಈಗ 84 ವರ್ಷ ಆಗಿತ್ತು. ಅವಳು ಆಲಯಕ್ಕೆ ತಪ್ಪದೆ ಹೋಗ್ತಿದ್ದಳು. ಉಪವಾಸ ಮಾಡ್ತಿದ್ದಳು. ಹಗಲುರಾತ್ರಿ ಪ್ರಾರ್ಥನೆ ಮಾಡ್ತಾ ಆಲಯದಲ್ಲಿ ಪವಿತ್ರ ಸೇವೆ ಮಾಡ್ತಾ ಇದ್ದಳು. 38 ಯೋಸೇಫ ಮತ್ತು ಮರಿಯ ದೇವಾಲಯಕ್ಕೆ ಬಂದಾಗ ಅವಳೂ ಬಂದು ದೇವ್ರಿಗೆ ಧನ್ಯವಾದ ಹೇಳಿದಳು. ಯೆರೂಸಲೇಮಿನ ಬಿಡುಗಡೆಗಾಗಿ ಕಾಯ್ತಾ ಇದ್ದ ಜನ್ರ ಹತ್ರ ಆ ಮಗು ಬಗ್ಗೆ ಮಾತಾಡೋಕೆ ಶುರುಮಾಡಿದಳು.+
39 ಯೋಸೇಫ ಮತ್ತು ಮರಿಯ ಯೆಹೋವನ* ನಿಯಮದ ಪ್ರಕಾರ+ ಎಲ್ಲ ಮಾಡಿದ ಮೇಲೆ ಸ್ವಂತ ಊರಾದ ಗಲಿಲಾಯದ ನಜರೇತಿಗೆ ವಾಪಸ್ ಹೋದ್ರು.+ 40 ಆ ಚಿಕ್ಕ ಮಗು ಬೆಳೆದು ಬಲಿಷ್ಠನಾದ, ವಿವೇಕಿಯಾದ. ದೇವರ ಆಶೀರ್ವಾದ ಆತನ ಮೇಲೆ ಯಾವಾಗ್ಲೂ ಇತ್ತು.+
41 ಆತನ ಅಪ್ಪಅಮ್ಮಗೆ ಪ್ರತಿವರ್ಷ ಪಸ್ಕ ಹಬ್ಬಕ್ಕಾಗಿ ಯೆರೂಸಲೇಮಿಗೆ ಹೋಗೋ ರೂಢಿ ಇತ್ತು.+ 42 ಯೇಸುಗೆ 12 ವರ್ಷ ಆದಾಗ ಅವರು ಯಾವಾಗ್ಲೂ ಹೋಗೋ ತರ ಹಬ್ಬಕ್ಕೆ ಹೋದ್ರು.+ 43 ಹಬ್ಬ ಮುಗಿಯೋ ತನಕ ಅಲ್ಲಿದ್ರು. ವಾಪಸ್ ಬರ್ತಿದ್ದಾಗ ಯೇಸು ಯೆರೂಸಲೇಮಲ್ಲೇ ಇದ್ದುಬಿಟ್ಟ. ಆತನ ಅಪ್ಪಅಮ್ಮ ಇದನ್ನ ಗಮನಿಸ್ಲಿಲ್ಲ. 44 ತಮ್ಮ ಜೊತೆ ಪ್ರಯಾಣ ಮಾಡ್ತಾ ಇದ್ದ ಗುಂಪಲ್ಲೇ ಯೇಸು ಇರಬಹುದು ಅಂತ ಅಂದ್ಕೊಂಡ್ರು. ಒಂದಿನ ಆದ ಮೇಲೆ ದಾರಿಯಲ್ಲಿ ಸಂಬಂಧಿಕರ ಹತ್ರ, ಪರಿಚಯದವರ ಹತ್ರ ಹುಡುಕಿದಾಗ ಯೇಸು ಸಿಗ್ಲಿಲ್ಲ. 45 ಯೆರೂಸಲೇಮಿಗೆ ವಾಪಸ್ ಹೋಗಿ ಎಲ್ಲ ಕಡೆ ಹುಡುಕಿದ್ರು. 46 ಮೂರು ದಿನ ಆದಮೇಲೆ ಯೇಸು ದೇವಾಲಯದಲ್ಲಿ ಗುರುಗಳ ಮಧ್ಯ ಕೂತಿರೋದನ್ನ ಅವರು ನೋಡಿದ್ರು. ಆತನು ಗುರುಗಳು ಹೇಳೋದನ್ನ ಕೇಳಿಸ್ಕೊಂಡು ಅವ್ರಿಗೆ ಪ್ರಶ್ನೆ ಕೇಳ್ತಾ ಇದ್ದನು. 47 ಆತನ ಮಾತುಗಳನ್ನ ಕೇಳಿಸ್ಕೊಳ್ತಿದ್ದ ಜನ್ರೆಲ್ಲ ಆತನ ಬುದ್ಧಿ ನೋಡಿ, ಕೊಡ್ತಿದ್ದ ಉತ್ರ ಕೇಳಿ ತುಂಬ ಆಶ್ಚರ್ಯಪಡ್ತಿದ್ರು.+ 48 ಆತನ ಅಪ್ಪಅಮ್ಮ ಸಹ ಬೆಚ್ಚಿಬೆರಗಾದ್ರು. ಆಗ ಆತನ ಅಮ್ಮ “ಕಂದಾ, ನೀನು ಯಾಕೆ ಹೀಗೆ ಮಾಡಿದೆ? ಅಪ್ಪಗೂ ನಂಗೂ ತುಂಬ ಗಾಬರಿಯಾಗಿತ್ತು. ಎಲ್ಲ ಕಡೆ ಹುಡುಕ್ತಾ ಇದ್ವಿ” ಅಂದಳು. 49 ಅದಕ್ಕೆ ಯೇಸು “ನನ್ನನ್ನ ಯಾಕೆ ಹುಡುಕ್ತೀರ? ನಾನು ನನ್ನ ಅಪ್ಪನ ಮನೆಯಲ್ಲಿ ಇರಬೇಕು ಅಂತ ನಿಮಗೆ ಗೊತ್ತಿಲ್ವಾ?”+ ಅಂದನು. 50 ಆದ್ರೆ ಆತನು ಏನು ಹೇಳ್ತಾ ಇದ್ದಾನೆ ಅಂತ ಅವ್ರಿಗೆ ಅರ್ಥ ಆಗಲಿಲ್ಲ.
51 ಆಮೇಲೆ ಆತನು ಅವ್ರ ಜೊತೆ ನಜರೇತಿಗೆ ಹೋದನು. ಯೇಸು ಯಾವಾಗ್ಲೂ ಅಪ್ಪಅಮ್ಮನ ಮಾತು ಕೇಳ್ತಿದ್ದನು.*+ ಆತನ ತಾಯಿ ಈ ಎಲ್ಲ ಮಾತನ್ನ ಹೃದಯದಲ್ಲಿ ಜೋಪಾನವಾಗಿ ಇಟ್ಕೊಂಡಳು.+ 52 ಯೇಸು ದೊಡ್ಡವನಾಗಿ ಬೆಳಿತಾ ಇನ್ನೂ ವಿವೇಕಿಯಾದನು. ದೇವರ, ಮನುಷ್ಯರ ಮೆಚ್ಚಿಕೆ ಆತನಿಗೆ ಸಿಗ್ತಾ ಇತ್ತು.