ಮತ್ತಾಯ
17 ಯೇಸು ಆರು ದಿನ ಆದಮೇಲೆ ಪೇತ್ರ, ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನ ಕರ್ಕೊಂಡು ಎತ್ರದ ಒಂದು ಬೆಟ್ಟಕ್ಕೆ ಹೋದನು.+ 2 ಶಿಷ್ಯರ ಮುಂದೆ ಯೇಸುವಿನ ರೂಪ ಬದಲಾಯ್ತು. ಆತನ ಮುಖ ಸೂರ್ಯನ ತರ, ಆತನ ಬಟ್ಟೆ ಬೆಳಕಿನ ತರ* ಹೊಳಿತು.+ 3 ಆಗ ಅಚಾನಕ್ಕಾಗಿ ಮೋಶೆ, ಎಲೀಯ ಆತನ ಜೊತೆ ಮಾತಾಡ್ತಿರೋದು ಅವ್ರಿಗೆ ಕಾಣಿಸ್ತು. 4 ಆಗ ಪೇತ್ರ ಯೇಸುಗೆ “ಸ್ವಾಮಿ, ನಾವಿಲ್ಲಿ ಬಂದಿದ್ದು ಒಳ್ಳೇದಾಯ್ತು. ನಿನಗೆ ಇಷ್ಟ ಇದ್ರೆ, ಮೂರು ಡೇರೆ ಹಾಕ್ತೀನಿ. ಒಂದು ನಿನಗೆ, ಒಂದು ಮೋಶೆಗೆ, ಇನ್ನೊಂದು ಎಲೀಯನಿಗೆ” ಅಂದ. 5 ಪೇತ್ರ ಮಾತಾಡ್ತಾ ಇದ್ದಾಗಲೇ ಅವ್ರ ಮೇಲೆ ಬಿಳಿ ಮೋಡ ಕವಿಯಿತು. ಆ ಮೋಡದಿಂದ “ಇವನು ನನ್ನ ಪ್ರೀತಿಯ ಮಗ. ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ.+ ಇವನ ಮಾತು ಕೇಳಿ”+ ಅನ್ನೋ ಧ್ವನಿ ಕೇಳಿಸ್ತು. 6 ಶಿಷ್ಯರು ಇದನ್ನ ಕೇಳಿ ಹೆದ್ರಿ ನೆಲದಲ್ಲಿ ಅಡ್ಡಬಿದ್ರು. 7 ಆಗ ಯೇಸು ಹತ್ರ ಬಂದು ಅವ್ರನ್ನ ಮುಟ್ಟಿ “ಭಯಪಡಬೇಡಿ ಎದ್ದೇಳಿ” ಅಂದನು. 8 ಅವರು ತಲೆಯೆತ್ತಿ ನೋಡಿದಾಗ ಯೇಸು ಬಿಟ್ಟು ಬೇರೆ ಯಾರೂ ಕಾಣಲಿಲ್ಲ. 9 ಅವರು ಬೆಟ್ಟ ಇಳಿದು ಬರ್ತಿದ್ದಾಗ ಯೇಸು ಅವ್ರಿಗೆ “ಮನುಷ್ಯಕುಮಾರ ಸತ್ತು ಮತ್ತೆ ಎದ್ದು ಬರೋ ತನಕ ನೀವು ನೋಡಿದ್ದನ್ನ ಯಾರಿಗೂ ಹೇಳಬೇಡಿ”+ ಅಂತ ಅಪ್ಪಣೆ ಕೊಟ್ಟನು.
10 ಆಗ ಶಿಷ್ಯರು “ಹಾಗಾದ್ರೆ ಕ್ರಿಸ್ತನಿಗಿಂತ ಮೊದಲು ಎಲೀಯ ಬರಬೇಕು ಅಂತ ಪಂಡಿತರು ಯಾಕೆ ಹೇಳ್ತಾರೆ?”+ ಅಂತ ಕೇಳಿದ್ರು. 11 ಅದಕ್ಕೆ ಯೇಸು “ಎಲೀಯ ಖಂಡಿತ ಬರ್ತಾನೆ. ಎಲ್ಲ ವಿಷ್ಯವನ್ನ ಸರಿ ಮಾಡ್ತಾನೆ.+ 12 ನಾನು ನಿಮಗೆ ಹೇಳ್ತೀನಿ, ಎಲೀಯ ಬಂದಿದ್ದ. ಆದ್ರೆ ಅವರು ಗುರುತಿಸಲಿಲ್ಲ. ಅವನ ಜೊತೆ ಮನಸ್ಸಿಗೆ ಬಂದ ಹಾಗೆ ನಡ್ಕೊಂಡು ಕೊಂದುಬಿಟ್ರು.+ ಅದೇ ತರ ನನ್ನನ್ನೂ ಕೊಂದುಬಿಡ್ತಾರೆ”+ ಅಂದನು. 13 ಯೇಸು ಮಾತಾಡಿದ್ದು ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನ ಬಗ್ಗೆ ಅಂತ ಶಿಷ್ಯರಿಗೆ ಗೊತ್ತಾಯ್ತು.
14 ಅವರು ಜನ್ರ ಹತ್ರ ಹೋದಾಗ+ ಒಬ್ಬ ಮನುಷ್ಯ ಯೇಸುವಿಗೆ ಮೊಣಕಾಲೂರಿ 15 “ಸ್ವಾಮಿ, ನನ್ನ ಮಗನಿಗೆ ಕರುಣೆ ತೋರಿಸು. ಅವನಿಗೆ ಹುಷಾರಿಲ್ಲ, ಮೂರ್ಛೆರೋಗ ಇದೆ. ಅವನು ಆಗಾಗ ಬೆಂಕಿಯಲ್ಲಿ, ನೀರಲ್ಲಿ ಬೀಳ್ತಾನೆ.+ 16 ಅವನನ್ನ ನಿನ್ನ ಶಿಷ್ಯರ ಹತ್ರ ಕರ್ಕೊಂಡು ಬಂದೆ. ಆದ್ರೆ ಅವ್ರಿಗೆ ವಾಸಿಮಾಡೋಕೆ ಆಗ್ಲಿಲ್ಲ” ಅಂದ. 17 ಅದಕ್ಕೆ ಯೇಸು “ನಂಬಿಕೆ ಇಲ್ಲದವ್ರೇ, ಪಾಪಿಗಳೇ,+ ನಾನಿನ್ನೂ ಎಷ್ಟು ಸಮಯ ನಿಮ್ಮ ಜೊತೆ ಇರ್ಬೇಕು? ಎಷ್ಟು ದಿನ ಅಂತ ನಿಮ್ಮನ್ನ ಸಹಿಸ್ಕೋಬೇಕು? ಅವನನ್ನ ಕರ್ಕೊಂಡು ಬನ್ನಿ” ಅಂದನು. 18 ಯೇಸು ಆ ಹುಡುಗನನ್ನ ಹಿಡಿದಿದ್ದ ಕೆಟ್ಟ ದೇವದೂತನಿಗೆ ಜೋರು ಮಾಡಿದಾಗ ಅವನು ಬಿಟ್ಟುಹೋದ. ಆ ಹುಡುಗನಿಗೆ ತಕ್ಷಣ ವಾಸಿ ಆಯ್ತು.+ 19 ಯೇಸು ಒಬ್ಬನೇ ಇದ್ದಾಗ ಶಿಷ್ಯರು ಬಂದು “ನಮ್ಮಿಂದ ಯಾಕೆ ಆ ಕೆಟ್ಟ ದೇವದೂತನನ್ನ ಬಿಡಿಸೋಕೆ ಆಗ್ಲಿಲ್ಲ?” ಅಂತ ಕೇಳಿದ್ರು. 20 ಅದಕ್ಕೆ ಆತನು “ಯಾಕಂದ್ರೆ ನಿಮಗೆ ನಂಬಿಕೆ ಕಮ್ಮಿ ಇದೆ. ನಿಜ ಹೇಳ್ತೀನಿ, ಸಾಸಿವೆ ಕಾಳಷ್ಟು ನಂಬಿಕೆ ಇದ್ರೂ ಸಾಕು, ನೀವು ಈ ಬೆಟ್ಟಕ್ಕೆ ‘ಇಲ್ಲಿಂದ ಅಲ್ಲಿ ಹೋಗು’ ಅಂತ ಹೇಳಿದ್ರೆ ಅದು ಹೋಗುತ್ತೆ. ನಿಮಗೆ ಏನು ಬೇಕಾದ್ರೂ ಮಾಡೋಕಾಗುತ್ತೆ”+ ಅಂದನು. 21 *——
22 ಯೇಸು ಮತ್ತು ಶಿಷ್ಯರು ಗಲಿಲಾಯಕ್ಕೆ ಬಂದಾಗ ಯೇಸು “ಮನುಷ್ಯಕುಮಾರನಿಗೆ ಮೋಸ ಮಾಡಿ ಶತ್ರುಗಳ ಕೈಗೆ ಒಪ್ಪಿಸ್ತಾರೆ.+ 23 ಅವರು ಅವನನ್ನ ಕೊಲ್ತಾರೆ. ಆದ್ರೆ ಮೂರನೇ ದಿನ ಅವನು ಬದುಕಿ ಬರ್ತಾನೆ”+ ಅಂದನು. ಇದನ್ನ ಕೇಳಿ ಶಿಷ್ಯರಿಗೆ ತುಂಬ ಬೇಜಾರಾಯ್ತು.
24 ಅವರು ಕಪೆರ್ನೌಮಿಗೆ ಬಂದಾಗ ದೇವಾಲಯದ ತೆರಿಗೆ* ವಸೂಲಿ ಮಾಡುವವರು ಪೇತ್ರನ ಹತ್ರ ಬಂದು “ನಿಮ್ಮ ಗುರು ದೇವಾಲಯದ ತೆರಿಗೆ ಕೊಡಲ್ವಾ?”+ ಅಂತ ಕೇಳಿದ್ರು. 25 ಅದಕ್ಕೆ ಪೇತ್ರ “ಕೊಡ್ತಾನೆ” ಅಂದ. ಅವನು ಮನೆಯೊಳಗೆ ಬಂದು ಮಾತಾಡೋ ಮುಂಚೆನೇ ಯೇಸು “ಸೀಮೋನ, ನಿನ್ನ ಅಭಿಪ್ರಾಯ ಏನು? ರಾಜರು ಯಾರಿಂದ ತೆರಿಗೆ, ಕಂದಾಯ* ತಗೊಳ್ತಾರೆ? ಅವ್ರ ಮಕ್ಕಳಿಂದನಾ ಅಥವಾ ಬೇರೆಯವ್ರಿಂದನಾ?” ಅಂತ ಕೇಳಿದನು. 26 ಅದಕ್ಕೆ ಪೇತ್ರ “ಬೇರೆಯವ್ರಿಂದ” ಅಂತ ಹೇಳಿದ. ಯೇಸು “ಹಾಗಾದ್ರೆ ಮಕ್ಕಳು ತೆರಿಗೆ ಕಟ್ಟಬೇಕಾಗಿಲ್ಲ. 27 ಆದ್ರೂ ನಮ್ಮ ಬಗ್ಗೆ ತಪ್ಪು ಅಭಿಪ್ರಾಯ ಬರೋದು ಬೇಡ.+ ನೀನು ಸಮುದ್ರಕ್ಕೆ ಹೋಗಿ ಗಾಳಹಾಕು. ಅಲ್ಲೊಂದು ಮೀನು ಸಿಗುತ್ತೆ. ಅದ್ರ ಬಾಯಲ್ಲಿ ಒಂದು ಬೆಳ್ಳಿ ನಾಣ್ಯ ಇರುತ್ತೆ.* ಅದನ್ನ ತಗೊಂಡು ನಮ್ಮಿಬ್ಬರ ತೆರಿಗೆ ಕಟ್ಟು” ಅಂದನು.