ಯೋಹಾನ
4 ಯೇಸು ಯೋಹಾನನಿಗಿಂತ ಹೆಚ್ಚು ಶಿಷ್ಯರನ್ನ ಮಾಡ್ಕೊಳ್ತಿದ್ದಾನೆ ಮತ್ತು ಅವ್ರಿಗೆ ದೀಕ್ಷಾಸ್ನಾನ ಮಾಡಿಸ್ತಿದ್ದಾನೆ+ ಅಂತ ಫರಿಸಾಯರು ಕೇಳಿಸ್ಕೊಂಡ್ರು. ಅವರು ಕೇಳಿಸ್ಕೊಂಡಿರೋ ವಿಷ್ಯ ಯೇಸುಗೆ* ಗೊತ್ತಾಯ್ತು. 2 (ಯೇಸು ದೀಕ್ಷಾಸ್ನಾನ ಮಾಡಿಸ್ತಾ ಇರ್ಲಿಲ್ಲ, ಆತನ ಶಿಷ್ಯರು ಮಾಡಿಸ್ತಿದ್ರು) 3 ಆಗ ಆತನು ಯೂದಾಯವನ್ನ ಬಿಟ್ಟು ಮತ್ತೆ ಗಲಿಲಾಯಕ್ಕೆ ಹೋದನು. 4 ಹೋಗುವಾಗ ಸಮಾರ್ಯ ದಾಟಿ ಹೋಗಬೇಕಿತ್ತು. 5 ಹಾಗಾಗಿ ಆತನು ಸಿಖರ್ ಅನ್ನೋ ಸಮಾರ್ಯದ ಊರಿಗೆ ಬಂದನು. ಯಾಕೋಬ ತನ್ನ ಮಗ ಯೋಸೇಫನಿಗೆ ಕೊಟ್ಟ ಹೊಲದ ಹತ್ರ ಈ ಊರಿತ್ತು.+ 6 ಅಲ್ಲಿ ಯಾಕೋಬನ ಬಾವಿ ಸಹ ಇತ್ತು.+ ನಡೆದು ಸುಸ್ತಾಗಿದ್ದರಿಂದ ಯೇಸು ಆ ಬಾವಿ ಹತ್ರ ಕೂತ. ಆಗ ಮಧ್ಯಾಹ್ನ ಸುಮಾರು 12 ಗಂಟೆ.*
7 ಅದೇ ಸಮಯಕ್ಕೆ ಸಮಾರ್ಯದ ಒಬ್ಬ ಸ್ತ್ರೀ ನೀರು ಸೇದೋಕೆ ಆ ಬಾವಿ ಹತ್ರ ಬಂದಳು. ಯೇಸು ಅವಳಿಗೆ “ಕುಡಿಯೋಕೆ ಸ್ವಲ್ಪ ನೀರು ಕೊಡು” ಅಂತ ಕೇಳಿದನು. 8 (ಶಿಷ್ಯರು ಊಟ ತರೋಕೆ ಊರೊಳಗೆ ಹೋಗಿದ್ರು.) 9 ಆ ಸಮಾರ್ಯದ ಸ್ತ್ರೀ “ನೀನೊಬ್ಬ ಯೆಹೂದಿಯಾಗಿ ನನ್ನ ಹತ್ರ ನೀರು ಹೇಗೆ ಕೇಳ್ತಿದ್ದೀಯಾ? ನಾನು ಸಮಾರ್ಯದವಳು” ಅಂದಳು. (ಸಾಮಾನ್ಯವಾಗಿ ಯೆಹೂದ್ಯರು ಸಮಾರ್ಯದವರ ಜೊತೆ ಮಾತಾಡ್ತಾ ಇರ್ಲಿಲ್ಲ.)+ 10 ಅದಕ್ಕೆ ಯೇಸು “ದೇವರ ಉಚಿತ ಕೊಡುಗೆ+ ಅಂದ್ರೇನು ಮತ್ತು ನಿನ್ನ ಹತ್ರ ನೀರು ಕೇಳ್ತಾ ಇರೋನು ಯಾರು ಅಂತ ನಿನಗೆ ಗೊತ್ತಿದ್ರೆ ನೀನೇ ಆತನ ಹತ್ರ ನೀರು ಕೇಳ್ತಿದ್ದೆ. ಆತನು ಜೀವ ಕೊಡೋ ನೀರನ್ನ+ ನಿನಗೆ ಕೊಡ್ತಿದ್ದನು” ಅಂದನು. 11 ಅದಕ್ಕವಳು “ಸ್ವಾಮಿ, ನೀರು ಸೇದೋಕೆ ನಿನ್ನ ಹತ್ರ ಏನೂ ಇಲ್ಲ. ಬಾವಿ ಬೇರೆ ಆಳ ಇದೆ. ಹಾಗಿರುವಾಗ ಈ ಜೀವ ಕೊಡೋ ನೀರನ್ನ ಎಲ್ಲಿಂದ ತರ್ತಿಯಾ? 12 ಪೂರ್ವಜನಾದ ಯಾಕೋಬ ನಮಗೆ ಈ ಬಾವಿ ಕೊಟ್ಟ. ಅವನು, ಅವನ ಮಕ್ಕಳು, ಅವನ ದನಕುರಿಗಳು ಕುಡಿದಿದ್ದು ಇದೇ ಬಾವಿ ನೀರು. ನೀನು ಯಾಕೋಬನಿಗಿಂತ ದೊಡ್ಡವನಾ?” ಅಂದಳು. 13 ಅದಕ್ಕೆ ಯೇಸು “ಈ ಬಾವಿ ನೀರನ್ನ ಕುಡಿದ್ರೆ ಮತ್ತೆ ಬಾಯಾರಿಕೆ ಆಗುತ್ತೆ. 14 ಆದ್ರೆ ನಾನು ಕೊಡೋ ನೀರನ್ನ ಕುಡಿದ್ರೆ ಯಾವತ್ತೂ ಬಾಯಾರಿಕೆ ಆಗಲ್ಲ.+ ನಾನು ಕೊಡೋ ನೀರು ಅವನಲ್ಲಿ ನೀರಿನ ಬುಗ್ಗೆಯಾಗಿ ಅವನಿಗೆ ಶಾಶ್ವತ ಜೀವ ಕೊಡೋಕೆ ಉಕ್ಕಿ ಹರಿಯುತ್ತೆ”+ ಅಂದನು. 15 ಆಗ ಆ ಸ್ತ್ರೀ “ಸ್ವಾಮಿ, ಆ ನೀರನ್ನ ನನಗೆ ಕೊಡು. ಆಗ ನನಗೆ ಬಾಯಾರಿಕೆನೂ ಆಗಲ್ಲ ಮತ್ತು ನೀರು ಸೇದೋಕೆ ಇಲ್ಲಿ ಪದೇಪದೇ ಬರೋ ಅವಶ್ಯಕತೆನೂ ಇರಲ್ಲ” ಅಂದಳು.
16 ಯೇಸು ಅವಳಿಗೆ “ಹೋಗಿ ನಿನ್ನ ಗಂಡನ್ನ ಕರ್ಕೊಂಡು ಬಾ” ಅಂದನು. 17 ಅದಕ್ಕೆ ಆ ಸ್ತ್ರೀ “ನನಗೆ ಗಂಡ ಇಲ್ಲ” ಅಂದಳು. ಆಗ ಯೇಸು “‘ಗಂಡ ಇಲ್ಲ’ ಅಂತ ನೀನು ಹೇಳಿದ್ದು ಸರಿನೇ. 18 ಯಾಕಂದ್ರೆ ನಿನಗೆ ಐದು ಗಂಡಂದಿರು ಇದ್ರು. ಈಗ ನಿನ್ನ ಜೊತೆ ಇರೋನು ನಿನ್ನ ಗಂಡ ಅಲ್ಲ. ನೀನು ನಿಜಾನೇ ಹೇಳಿದೆ” ಅಂದನು. 19 ಅದಕ್ಕೆ “ಸ್ವಾಮಿ, ನೀನು ಪ್ರವಾದಿ ಅನಿಸುತ್ತೆ.+ 20 ನಮ್ಮ ಪೂರ್ವಜರು ಈ ಬೆಟ್ಟದ ಮೇಲೆ ದೇವರ ಆರಾಧನೆ ಮಾಡ್ತಾ ಇದ್ರು. ಆದ್ರೆ ಯೆರೂಸಲೇಮಲ್ಲೇ ಆರಾಧನೆ ಮಾಡಬೇಕು ನೀವು ಅಂತೀರಲ್ಲಾ?”+ ಅಂದಳು. 21 ಅದಕ್ಕೆ ಯೇಸು “ಅಮ್ಮಾ, ನನ್ನನ್ನ ನಂಬು. ಒಂದು ಸಮಯ ಬರುತ್ತೆ, ಆಗ ನೀವು ಈ ಬೆಟ್ಟದ ಮೇಲೆ ಆಗಲಿ, ಯೆರೂಸಲೇಮಲ್ಲಿ ಆಗಲಿ ಆರಾಧಿಸೋ ಅಗತ್ಯ ಇರಲ್ಲ. 22 ನೀವು ಯಾರನ್ನ ಆರಾಧನೆ ಮಾಡ್ತಿರೋ ಆತನು ಯಾರಂತ ನಿಮಗೆ ಗೊತ್ತಿಲ್ಲ.+ ಆದ್ರೆ ನಾವು ಯಾರಿಗೆ ಆರಾಧನೆ ಮಾಡ್ತಾ ಇದ್ದೀವಿ ಅಂತ ನಮಗೆ ಗೊತ್ತು. ಯಾಕಂದ್ರೆ ದೇವರು ಜನ್ರನ್ನ ಹೇಗೆ ರಕ್ಷಿಸ್ತಾನೆ ಅಂತ ಯೆಹೂದ್ಯರಿಗೆ ಮೊದಲು ಗೊತ್ತಾಯ್ತು.+ 23 ಆದ್ರೂ ದೇವರನ್ನ ಪವಿತ್ರಶಕ್ತಿಯಿಂದ, ಸತ್ಯದಿಂದ ಸರಿಯಾಗಿ ಆರಾಧನೆ ಮಾಡೋ ಸಮಯ ಬರುತ್ತೆ. ಆ ಸಮಯ ಈಗಾಗಲೇ ಬಂದಾಗಿದೆ. ಯಾಕಂದ್ರೆ ತನ್ನನ್ನ ಆ ರೀತಿ ಆರಾಧಿಸೋಕೆ ಬಯಸೋ ಜನ್ರಿಗಾಗಿ ದೇವರು ಹುಡುಕ್ತಾ ಇದ್ದಾನೆ.+ 24 ದೇವರು ಕಣ್ಣಿಗೆ ಕಾಣಿಸಲ್ಲ.*+ ಆತನನ್ನ ಆರಾಧಿಸುವವರು ಪವಿತ್ರಶಕ್ತಿಗೆ ಮತ್ತು ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು”+ ಅಂದನು. 25 ಆಗ ಆ ಸ್ತ್ರೀ “ಮೆಸ್ಸೀಯ ಬರ್ತಾನೆ ಅಂತ ನಂಗೊತ್ತು. ಆತನಿಗೆ ಕ್ರಿಸ್ತ ಅಂತ ಕರಿತಾರೆ. ಆತನು ಬಂದಾಗ ಎಲ್ಲ ವಿಷ್ಯಗಳನ್ನ ನಮಗೆ ವಿವರವಾಗಿ ಹೇಳ್ತಾನೆ” ಅಂದಳು. 26 ಆಗ ಯೇಸು “ನಾನೇ ಅವನು”+ ಅಂದನು.
27 ಆಗಲೇ ಆತನ ಶಿಷ್ಯರು ಬಂದ್ರು. ಯೇಸು ಒಬ್ಬ ಸ್ತ್ರೀ ಜೊತೆ ಮಾತಾಡ್ತಾ ಇರೋದನ್ನ ನೋಡಿ ಆಶ್ಚರ್ಯಪಟ್ರು. ಆದ್ರೆ ಅವ್ರಲ್ಲಿ ಯಾರೂ “ನೀನು ಯಾಕೆ ಅವಳ ಹತ್ರ ಮಾತಾಡ್ತಾ ಇದ್ದೆ?” ಅಂತಾಗಲಿ “ನಿನಗೆ ಏನು ಬೇಕಿತ್ತು?” ಅಂತಾಗಲಿ ಕೇಳಲಿಲ್ಲ. 28 ಆ ಸ್ತ್ರೀ ಕೊಡವನ್ನ ಅಲ್ಲೇ ಬಿಟ್ಟು ಊರೊಳಗೆ ಹೋಗಿ ಜನ್ರಿಗೆ 29 “ನನ್ನ ಜೊತೆ ಬನ್ನಿ. ಒಬ್ಬ ವ್ಯಕ್ತಿ ನಾನು ಮಾಡಿದ ಎಲ್ಲವನ್ನೂ ಸರಿಯಾಗಿ ಅದೇ ತರ ಹೇಳ್ತಾ ಇದ್ದಾನೆ. ಆತನೇ ಕ್ರಿಸ್ತ ಆಗಿರಬಹುದು!” ಅಂದಳು. 30 ಜನ್ರು ಆತನನ್ನ ನೋಡೋಕೆ ಊರಿಂದ ಬಂದ್ರು.
31 ಅಷ್ಟರಲ್ಲಿ ಶಿಷ್ಯರು ಯೇಸುಗೆ “ರಬ್ಬೀ,+ ಊಟಮಾಡು” ಅಂತ ಹೇಳ್ತಾ ಇದ್ರು. 32 ಆದ್ರೆ ಯೇಸು “ನಿಮಗೆ ಗೊತ್ತಿಲ್ಲದೆ ಇರೋ ಊಟ ನನ್ನ ಹತ್ರ ಇದೆ” ಅಂದನು. 33 ಆಗ ಶಿಷ್ಯರು “ಯೇಸುಗೆ ಯಾರು ಊಟ ಕೊಟ್ರು?” ಅಂತ ಅವರವ್ರೇ ಮಾತಾಡ್ಕೊಂಡ್ರು. 34 ಅದಕ್ಕೆ ಯೇಸು “ನನ್ನನ್ನ ಕಳಿಸಿದ ದೇವರ ಇಷ್ಟ ಮಾಡಿ+ ಆತನು ಕೊಟ್ಟ ಕೆಲಸ ಮುಗಿಸೋದೇ ನನ್ನ ಊಟ.+ 35 ಕೊಯ್ಲಿಗೆ ಇನ್ನೂ ನಾಲ್ಕು ತಿಂಗಳಿದೆ ಅಂತ ನೀವು ಹೇಳ್ತೀರಲ್ವಾ? ಆದ್ರೆ ನಾನು ನಿಮಗೆ ಹೇಳ್ತೀನಿ, ಕಣ್ಣೆತ್ತಿ ಹೊಲಗಳನ್ನ ನೋಡಿ. ಅವು ಕೊಯ್ಲಿಗೆ+ ಸಿದ್ಧವಾಗಿವೆ. 36 ಕೊಯ್ಯುವವನಿಗೆ ಈಗಾಗಲೇ ಕೂಲಿ ಸಿಗ್ತಾ ಇದೆ. ಅವನು ಶಾಶ್ವತ ಜೀವಕ್ಕಾಗಿ ಫಸಲನ್ನ ಕೂಡಿಸ್ತಾ ಇದ್ದಾನೆ. ಇದ್ರಿಂದಾಗಿ ಬಿತ್ತುವವನಿಗೂ ಕೊಯ್ಯುವವನಿಗೂ ಖುಷಿ ಆಗುತ್ತೆ.+ 37 ‘ಒಬ್ಬ ಬಿತ್ತಿದ್ರೆ ಇನ್ನೊಬ್ಬ ಕೊಯ್ತಾನೆ’ ಅನ್ನೋ ಗಾದೆ ಈ ವಿಷ್ಯದಲ್ಲಿ ನಿಜ ಆಗಿದೆ. 38 ನೀವು ಕಷ್ಟಪಡದ ಫಸಲನ್ನ ಕೊಯ್ಯೋಕೆ ನಾನು ನಿಮ್ಮನ್ನ ಕಳಿಸಿದೆ. ಬೇರೆಯವರು ಕಷ್ಟಪಟ್ರು, ಅವ್ರ ಕಷ್ಟದಿಂದ ನಿಮಗೆ ಪ್ರಯೋಜನ ಆಯ್ತು” ಅಂದನು.
39 ಆ ಸ್ತ್ರೀ “ನಾನು ಮಾಡಿದ ಎಲ್ಲವನ್ನೂ ಸರಿಯಾಗಿ ಅದೇ ತರ ಹೇಳ್ತಾ ಇದ್ದಾನೆ”+ ಅಂತ ಹೇಳಿದ್ರಿಂದ ಆ ಊರಿನ ತುಂಬ ಜನ ಸಮಾರ್ಯದವರು ಯೇಸು ಮೇಲೆ ನಂಬಿಕೆ ಇಟ್ರು. 40 ತಮ್ಮ ಜೊತೆ ಉಳ್ಕೊಳ್ಳೋಕೆ ಆತನ ಹತ್ರ ಕೇಳ್ಕೊಂಡ್ರು. ಯೇಸು ಎರಡು ದಿನ ಅವ್ರ ಜೊತೆ ಉಳ್ಕೊಂಡನು. 41 ಇದ್ರಿಂದಾಗಿ ಆತನು ಕಲಿಸಿದ್ದನ್ನ ಕೇಳಿಸ್ಕೊಂಡು ಇನ್ನೂ ತುಂಬ ಜನ ಆತನಲ್ಲಿ ನಂಬಿಕೆ ಇಟ್ರು. 42 ಅವರು ಆ ಸ್ತ್ರೀಗೆ “ಮುಂಚೆ ನಾವು ನಿನ್ನ ಮಾತು ಕೇಳಿ ನಂಬಿದ್ವಿ. ಆದ್ರೆ ಈಗ ನಾವೇ ಆತನ ಮಾತನ್ನ ಕಿವಿಯಾರೆ ಕೇಳಿಸ್ಕೊಂಡ್ವಿ. ಈ ವ್ಯಕ್ತಿ ನಿಜವಾಗ್ಲೂ ಲೋಕದ ರಕ್ಷಕ ಅಂತ ನಮಗೆ ಗೊತ್ತಾಗಿದೆ”+ ಅಂದ್ರು.
43 ಎರಡು ದಿನ ಆದಮೇಲೆ ಯೇಸು ಅಲ್ಲಿಂದ ಗಲಿಲಾಯಕ್ಕೆ ಹೋದನು. 44 ಒಬ್ಬ ಪ್ರವಾದಿಗೆ ಅವನ ಸ್ವಂತ ಊರಲ್ಲೇ ಮರ್ಯಾದೆ ಸಿಗಲ್ಲ ಅಂತ ಯೇಸು ಈ ಮುಂಚೆ ಹೇಳಿದ್ದನು.+ 45 ಆದ್ರೆ ಯೇಸು ಗಲಿಲಾಯಕ್ಕೆ ಬಂದಾಗ ಅಲ್ಲಿನ ಜನ ಆತನನ್ನ ಸ್ವಾಗತಿಸಿದ್ರು.+ ಯಾಕಂದ್ರೆ ಅವರು ಹಬ್ಬಕ್ಕೆ ಯೆರೂಸಲೇಮಿಗೆ ಹೋದಾಗ ಆತನು ಮಾಡಿದ ಎಲ್ಲ ಅದ್ಭುತಗಳನ್ನ ನೋಡಿದ್ರು.+
46 ಆಮೇಲೆ ಆತನು ಮತ್ತೆ ಗಲಿಲಾಯದ ಕಾನಾ ಊರಿಗೆ ಬಂದನು. ಆತನು ನೀರನ್ನ ದ್ರಾಕ್ಷಾಮದ್ಯ ಮಾಡಿದ್ದು ಇಲ್ಲೇ.+ ಕಪೆರ್ನೌಮಲ್ಲಿ ರಾಜನ ಒಬ್ಬ ಸೇವಕನಿದ್ದ. ಅವನ ಮಗನಿಗೆ ಹುಷಾರಿರಲಿಲ್ಲ. 47 ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದಿರೋದು ಆ ಸೇವಕನಿಗೆ ಗೊತ್ತಾಯ್ತು. ಅವನು ಯೇಸು ಹತ್ರ ಬಂದು ತನ್ನ ಮಗನನ್ನ ವಾಸಿಮಾಡು ಅಂತ ಬೇಡ್ಕೊಂಡ. ಅವನ ಮಗ ಸಾಯೋ ಸ್ಥಿತಿಯಲ್ಲಿದ್ದ. 48 ಆದ್ರೆ ಯೇಸು ಅವನಿಗೆ “ಅದ್ಭುತ, ಆಶ್ಚರ್ಯದ ವಿಷ್ಯಗಳನ್ನ ನೋಡದೆ ನೀವು ನಂಬೋದೇ ಇಲ್ಲ”+ ಅಂದನು. 49 ಆಗ ರಾಜನ ಸೇವಕ “ಸ್ವಾಮಿ, ನನ್ನ ಮಗ ಸಾಯೋ ಮುಂಚೆನೇ ನನ್ನ ಜೊತೆ ಬಾ” ಅಂದ. 50 ಅದಕ್ಕೆ ಯೇಸು “ನೀನು ಹೋಗು, ನಿನ್ನ ಮಗನಿಗೆ ವಾಸಿಯಾಗಿದೆ”+ ಅಂದನು. ಆ ಸೇವಕ ಯೇಸು ಹೇಳಿದ್ದನ್ನ ನಂಬಿ ಹೋದ. 51 ಅವನು ದಾರಿಯಲ್ಲಿ ಹೋಗುವಾಗಲೇ ಆಳುಗಳು ಬಂದು ಅವನ ಮಗ ವಾಸಿಯಾದ ಅಂದ್ರು. 52 ಆಗ ಅವನು ‘ಎಷ್ಟು ಹೊತ್ತಿಗೆ?’ ಅಂತ ವಿಚಾರಿಸಿದ. “ನಿನ್ನೆ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಜ್ವರ ಕಮ್ಮಿ ಆಯ್ತು” ಅಂದ್ರು. 53 ಸರಿಯಾಗಿ ಅದೇ ಸಮಯಕ್ಕೆ ಯೇಸು “ನಿನ್ನ ಮಗನಿಗೆ ವಾಸಿಯಾಗಿದೆ”+ ಅಂತ ಹೇಳಿದ್ದು ಅವನಿಗೆ ನೆನಪಾಯ್ತು. ಇದ್ರಿಂದಾಗಿ ಅವನೂ ಅವನ ಕುಟುಂಬದವರು ಯೇಸು ಮೇಲೆ ನಂಬಿಕೆ ಇಟ್ರು. 54 ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೇ ಅದ್ಭುತ+ ಇದಾಗಿತ್ತು.