ಕೊರಿಂಥದವರಿಗೆ ಬರೆದ ಮೊದಲನೇ ಪತ್ರ
9 ನನಗೇನು ಇಷ್ಟಾನೋ ಅದನ್ನ ನಾನು ಮಾಡಬಹುದಲ್ವಾ? ನಾನೂ ಒಬ್ಬ ಅಪೊಸ್ತಲ ತಾನೇ? ನಮ್ಮ ಪ್ರಭುವಾದ ಯೇಸುವನ್ನ ನಾನೂ ನೋಡ್ದೆ ತಾನೇ.+ ಪ್ರಭುಗೋಸ್ಕರ ನಾನು ಮಾಡಿದ ಸೇವೆಗೆ ಸಿಕ್ಕಿದ ಪ್ರತಿಫಲ ನೀವೇ ಅಲ್ವಾ? 2 ಬೇರೆಯವ್ರಿಗೆ ಅಲ್ಲದಿದ್ರೂ ನಿಮಗಂತೂ ನಾನು ಅಪೊಸ್ತಲನೇ. ಒಡೆಯನಿಗೆ ನಾನು ಅಪೊಸ್ತಲ ಅಂತ ಪಕ್ಕಾ ಮಾಡೋ ಮುದ್ರೆ ನೀವೇ.
3 ನನ್ನಲ್ಲಿ ತಪ್ಪು ಹುಡುಕುವವ್ರಿಗೆ ನಾನು ಕೊಡೋ ಉತ್ತರ ಏನಂದ್ರೆ, 4 ತಿನ್ನೋ ಹಕ್ಕು, ಕುಡಿಯೋ ಹಕ್ಕು* ನಮಗಿಲ್ವಾ? 5 ಬೇರೆ ಅಪೊಸ್ತಲರ ತರ, ಪ್ರಭುವಿನ ತಮ್ಮಂದಿರ+ ತರ ಮತ್ತು ಕೇಫನ*+ ತರ ಒಬ್ಬ ಕ್ರೈಸ್ತ ಸಹೋದರಿಯನ್ನ ಮದುವೆಯಾಗಿ ಅವಳನ್ನ ಜೊತೆ ಕರ್ಕೊಂಡು ಹೋಗೋ ಹಕ್ಕು ನಮಗೂ ಇದೆಯಲ್ವಾ?+ 6 ನಾನು ಮತ್ತು ಬಾರ್ನಬ+ ಜೀವನಕ್ಕಾಗಿ ದುಡಿಯದೇ ಇರಬಹುದಲ್ವಾ? ಆ ಹಕ್ಕು ನಮಗಿದೆ ಅಲ್ವಾ? 7 ಸ್ವಂತ ಖರ್ಚಿಂದ ಯಾರಾದ್ರೂ ಸೈನಿಕರಾಗಿ ಕೆಲಸ ಮಾಡ್ತಾರಾ? ದ್ರಾಕ್ಷಿ ತೋಟ ಮಾಡೋ ಯಾವನಾದ್ರೂ ಅದ್ರ ಹಣ್ಣನ್ನ ತಿನ್ನದೆ ಇರ್ತಾನಾ?+ ಕುರಿ ಕಾಯೋ ಕುರುಬ ಅದ್ರ ಹಾಲನ್ನ ಸ್ವಲ್ಪನಾದ್ರೂ ಕುಡಿದೇ ಇರ್ತಾನಾ?
8 ನಾನು ಏನಾದ್ರೂ ಮನುಷ್ಯರ ಯೋಚ್ನೆ ಪ್ರಕಾರ ಮಾತಾಡ್ತಾ ಇದ್ದೀನಾ? ನಿಯಮ ಪುಸ್ತಕದಲ್ಲೂ ಇದ್ರ ಬಗ್ಗೆ ಹೇಳಿದೆ ಅಲ್ವಾ. 9 ಮೋಶೆಗೆ ಕೊಟ್ಟ ನಿಯಮ ಪುಸ್ತಕದಲ್ಲಿ “ಹೋರಿ ಕಣ ತುಳಿವಾಗ ಧಾನ್ಯ ತಿನ್ನುತ್ತೆ ಅಂತ ಅದ್ರ ಬಾಯಿ ಕಟ್ಟಬಾರದು”+ ಅಂತ ಬರೆದಿದೆ. ದೇವರು ಹೋರಿಗಳ ಬಗ್ಗೆ ಮಾತ್ರ ಯೋಚಿಸಿ ಹಾಗೆ ಹೇಳಿದ್ನಾ? 10 ಅಥವಾ ನಮ್ಮ ಬಗ್ಗೆನೂ ಯೋಚಿಸಿ ಹಾಗೆ ಹೇಳಿದ್ನಾ? ಹೌದು, ಅದನ್ನ ನಮಗೋಸ್ಕರಾನೇ ಬರೆದಿರೋದು. ಯಾಕಂದ್ರೆ ಉಳುವವನು, ತೆನೆ ಬಡಿಯುವವನು ಆ ಬೆಳೆಯಿಂದ ಅವನಿಗೂ ಪಾಲು ಸಿಗುತ್ತೆ ಅನ್ನೋ ನಿರೀಕ್ಷೆಯಿಂದ ಕೆಲಸ ಮಾಡೋದು ತಪ್ಪಲ್ಲ.
11 ನಾವು ನಿಮ್ಮಲ್ಲಿ ದೇವರ ಮಾತುಗಳನ್ನ ಬಿತ್ತಿರೋದ್ರಿಂದ ಈಗ ನಮಗೆ ಬೇಕಾಗಿರೋ ಕೆಲವೊಂದನ್ನ ನಿಮ್ಮಿಂದ ಪಡ್ಕೊಂಡ್ರೆ ಅದು ತಪ್ಪಾಗುತ್ತಾ?+ 12 ಅಗತ್ಯ ಇರೋದನ್ನ ನಿಮ್ಮಿಂದ ಪಡ್ಕೊಳ್ಳೋ ಹಕ್ಕು ಬೇರೆಯವ್ರಿಗೇ ಇದೆ ಅಂದ್ಮೇಲೆ ನಮಗೆ ಇನ್ನೂ ಜಾಸ್ತಿ ಹಕ್ಕು* ಇದೆ ಅಲ್ವಾ? ಆದ್ರೂ ನಾವು ನಿಮ್ಮ ಹತ್ರ ಏನೂ ಕೇಳಲಿಲ್ಲ.+ ಕ್ರಿಸ್ತನ ಬಗ್ಗೆ ಇರೋ ಸಿಹಿಸುದ್ದಿ ಹಬ್ಬಿಸೋಕೆ ನಮ್ಮಿಂದ ಯಾವ ತಡೆನೂ ಆಗಬಾರದು ಅಂತ ಎಲ್ಲಾನೂ ಸಹಿಸ್ಕೊಳ್ತಾ ಇದ್ದೀವಿ.+ 13 ಪವಿತ್ರ ಸೇವೆ ಮಾಡುವವರು ದೇವಾಲಯದಲ್ಲಿ ಸಿಗೋ ಆಹಾರ ತಿಂತಾರೆ, ಯಜ್ಞವೇದಿ ಹತ್ರ ಯಾವಾಗ್ಲೂ ಕೆಲಸ ಮಾಡುವವ್ರಿಗೆ ಯಜ್ಞವೇದಿ ಮೇಲೆ ಅರ್ಪಿಸಿದ್ರಲ್ಲಿ ಒಂದು ಪಾಲು ಸಿಗುತ್ತೆ ಅಂತ ನಿಮಗೆ ಗೊತ್ತಿಲ್ವಾ?+ 14 ಅದೇ ತರ ಸಿಹಿಸುದ್ದಿಯನ್ನ ಹೇಳುವವರು ಅದ್ರಿಂದಾನೇ ಜೀವನ ಮಾಡೋ ತರ ಪ್ರಭು ಆಜ್ಞೆ ಕೊಟ್ಟನು.+
15 ಆದ್ರೆ ನಾನು ನಿಮ್ಮ ಹತ್ರ ಏನೂ ಕೇಳಲಿಲ್ಲ.+ ನಾನು ಇದನ್ನ ಬರೆದಿರೋದು ನೀವು ನನಗೆ ಬೇಕಾಗಿರೋದನ್ನ ಕೊಡಬೇಕು ಅಂತಲ್ಲ. ನಾನು ಹಾಗೆ ಮಾಡೋದಕ್ಕಿಂತ ಸಾಯೋದೇ ಒಳ್ಳೇದು. ಏನೂ ತಗೊಳ್ಳದೆ ಸಿಹಿಸುದ್ದಿ ಸಾರಿದೆ ಅಂತ ಹೊಗಳಿಕೊಳ್ಳೋಕೆ ನನಗಿರೋ ಹಕ್ಕನ್ನ ನಾನು ಯಾವತ್ತೂ ಬಿಟ್ಟುಕೊಡಲ್ಲ.+ 16 ನಾನು ಸಿಹಿಸುದ್ದಿ ಸಾರುತ್ತಿದ್ದೀನಿ ಅಂತ ಹೆಮ್ಮೆಯಿಂದ ಕೊಚ್ಕೊಳ್ಳೋಕೆ ನನಗೆ ಯಾವ ಕಾರಣನೂ ಇಲ್ಲ. ಯಾಕಂದ್ರೆ ಸಾರೋದು ನನ್ನ ಕರ್ತವ್ಯ. ನಿಜ ಏನಂದ್ರೆ ನಾನು ಸಿಹಿಸುದ್ದಿ ಸಾರದೆ ಇದ್ರೆ ನನ್ನ ಗತಿ ಅಷ್ಟೆ!+ 17 ನಾನು ಇದನ್ನ ಮನಸಾರೆ ಮಾಡಿದ್ರೆ ನನಗೆ ಬಹುಮಾನ ಸಿಗುತ್ತೆ. ಒಂದುವೇಳೆ ಇಷ್ಟ ಇಲ್ದೆ ಮಾಡಿದ್ರೂ ದೇವರು ನನಗೆ ಕೊಟ್ಟಿರೋ ಜವಾಬ್ದಾರಿಯನ್ನೇ ಮಾಡ್ತಾ ಇದ್ದೀನಿ.+ 18 ಹಾಗಾದ್ರೆ ನನಗೆ ಸಿಗೋ ಬಹುಮಾನ ಯಾವುದು? ಏನೂ ತಗೊಳ್ಳದೆ ಸಿಹಿಸುದ್ದಿ ಸಾರೋದೇ ಆ ಬಹುಮಾನ. ಸಿಹಿಸುದ್ದಿ ಸಾರೋಕೆ ನನಗಿರೋ ಹಕ್ಕನ್ನ* ದುರುಪಯೋಗ ಮಾಡ್ಕೊಳ್ಳೋಕೆ ನನಗಿಷ್ಟ ಇಲ್ಲ.
19 ನಾನು ಯಾವ ಮನುಷ್ಯನಿಗೂ ದಾಸನಲ್ಲ. ಆದ್ರೂ ಆದಷ್ಟು ತುಂಬ ಜನ್ರನ್ನ ಕ್ರಿಸ್ತನ ದಾರಿಗೆ ತರೋಕೆ ನನ್ನನ್ನ ಎಲ್ರಿಗೂ ದಾಸನಾಗಿ ಮಾಡ್ಕೊಂಡಿದ್ದೀನಿ. 20 ಹಾಗಾಗಿ ನಾನು ಯೆಹೂದ್ಯರನ್ನ ಕ್ರಿಸ್ತನ ದಾರಿಗೆ ತರೋಕೆ ಅವ್ರಿಗೆ ಯೆಹೂದ್ಯನಾದೆ.+ ನಾನು ನಿಯಮ ಪುಸ್ತಕ ಪಾಲಿಸುವವನಲ್ಲ, ಆದ್ರೂ ಅದನ್ನ ಪಾಲಿಸುವವ್ರನ್ನ ಕ್ರಿಸ್ತನ ದಾರಿಗೆ ತರೋಕೆ ಅವ್ರಿಗೆ ನಿಯಮ ಪುಸ್ತಕ ಪಾಲಿಸುವವನಾದೆ.+ 21 ನಾನು ದೇವರ ನಿಯಮ ಪಾಲಿಸ್ತೀನಿ, ಅಷ್ಟೇ ಅಲ್ಲ ಕ್ರಿಸ್ತನ ನಿಯಮವನ್ನೂ ಪಾಲಿಸ್ತೀನಿ. ಆದ್ರೂ ನಿಯಮ ಪುಸ್ತಕ ಪಾಲಿಸದವ್ರನ್ನ ಕ್ರಿಸ್ತನ ದಾರಿಗೆ ತರೋಕೆ ಅವ್ರಿಗೆ ನಿಯಮ ಪುಸ್ತಕ ಪಾಲಿಸದವನಾದೆ.+ 22 ಬಲ ಇಲ್ಲದವ್ರನ್ನ ಕ್ರಿಸ್ತನ ದಾರಿಗೆ ತರೋಕೆ ಅವ್ರಿಗೋಸ್ಕರ ಬಲ ಇಲ್ಲದವನಾದೆ.+ ಹೀಗೆ, ಹೇಗಾದ್ರೂ ಮಾಡಿ ಸ್ವಲ್ಪ ಜನ್ರನ್ನಾದ್ರೂ ರಕ್ಷಿಸಬೇಕಂತ ನಾನು ಎಲ್ಲ ತರದ ಜನ್ರಿಗೆ ಎಲ್ಲ ಆದೆ. 23 ಸಿಹಿಸುದ್ದಿಗಾಗಿ ಮತ್ತು ಅದನ್ನ ಬೇರೆಯವ್ರಿಗೆ ಸಾರೋದಕ್ಕಾಗಿ ನಾನು ಎಲ್ಲ ಮಾಡ್ತೀನಿ.+
24 ಓಟದ ಸ್ಪರ್ಧೆಯಲ್ಲಿ ಎಲ್ರೂ ಓಡ್ತಾರೆ, ಆದ್ರೆ ಒಬ್ಬನಿಗೆ ಮಾತ್ರ ಬಹುಮಾನ ಸಿಗುತ್ತೆ ಅಂತ ನಿಮಗೆ ಗೊತ್ತಿಲ್ವಾ? ನೀವು ಗೆಲ್ಲೋ ತರ ಓಡಿ.+ 25 ಸ್ಪರ್ಧೆಯಲ್ಲಿ ಭಾಗವಹಿಸುವವರು* ಎಲ್ಲ ವಿಷ್ಯಗಳಲ್ಲಿ ಸ್ವನಿಯಂತ್ರಣ ತೋರಿಸ್ತಾರೆ. ಅವರು ಇದನ್ನ ಮಾಡೋದು ಹಾಳಾಗೋ ಕಿರೀಟ ಪಡಿಯೋಕೆ,+ ಆದ್ರೆ ನಾವು ಇದನ್ನ ಮಾಡೋದು ಹಾಳಾಗದ ಕಿರೀಟ ಪಡಿಯೋಕೆ.+ 26 ಹಾಗಾಗಿ ನಾನು ಗುರಿಯಿಲ್ದೆ ಓಡ್ತಿಲ್ಲ,+ ಗಾಳಿಯನ್ನ ಗುದ್ದೋ ತರ ಗುದ್ದುತ್ತಿಲ್ಲ. 27 ನಾನು ಬೇರೆಯವ್ರಿಗೆ ಸಾರಿದ ಮೇಲೆ ಯಾವ ಕಾರಣಕ್ಕೂ ದೇವರ ದೃಷ್ಟಿಯಲ್ಲಿ ಅಯೋಗ್ಯನಾಗಬಾರದು ಅಂತ ನನ್ನ ದೇಹವನ್ನೇ ಜಜ್ಜಿ ಜಜ್ಜಿ*+ ದಾಸನ ತರ ಮಾಡ್ಕೊಳ್ತೀನಿ.