ಯೋಹಾನ
11 ಬೇಥಾನ್ಯದಲ್ಲಿ ಲಾಜರ ಅನ್ನೋ ಒಬ್ಬ ಇದ್ದ. ಅವನಿಗೆ ಹುಷಾರಿರ್ಲಿಲ್ಲ. ಮರಿಯ ಮತ್ತು ಮಾರ್ಥ+ ಅನ್ನೋ ಅವನ ಅಕ್ಕಂದಿರು* ಸಹ ಆ ಊರಲ್ಲೇ ಇದ್ರು. 2 ಈ ಮರಿಯ ಬೇರೆ ಯಾರೂ ಅಲ್ಲ, ಪ್ರಭು ಕಾಲಿಗೆ ಸುಗಂಧ ತೈಲ ಹಚ್ಚಿ ಸುರಿದು ತನ್ನ ತಲೇಕೂದಲಿಂದ ಒರಸಿದವಳೇ.+ ಈಗ ಅವಳ ತಮ್ಮ ಲಾಜರ ಕಾಯಿಲೆ ಬಿದ್ದಿದ್ದ. 3 ಹಾಗಾಗಿ ಅವನ ಅಕ್ಕಂದಿರು ಯೇಸುಗೆ “ಪ್ರಭು, ನೀನು ತುಂಬ ಪ್ರೀತಿಸೋ ನಿನ್ನ ಗೆಳೆಯನಿಗೆ ಹುಷಾರಿಲ್ಲ” ಅಂತ ಹೇಳಿ ಕಳಿಸಿದ್ರು. 4 ಈ ಸುದ್ದಿ ಯೇಸುಗೆ ತಲಪಿತು. ಆಗ ಯೇಸು “ಈ ಕಾಯಿಲೆ ಬಂದಿರೋದು ಅವನ ಪ್ರಾಣ ತೆಗಿಯೋಕಲ್ಲ, ದೇವರಿಗೆ ಹೊಗಳಿಕೆ ಸಿಗಲಿ ಅಂತ.+ ಇದ್ರಿಂದ ದೇವರ ಮಗನಿಗೂ ಗೌರವ ಸಿಗುತ್ತೆ” ಅಂದನು.
5 ಯೇಸುಗೆ ಮಾರ್ಥ, ಅವಳ ತಂಗಿ ಮರಿಯ ಮತ್ತು ಲಾಜರ ಅಂದ್ರೆ ತುಂಬ ಪ್ರೀತಿ. 6 ಆದ್ರೂ ಲಾಜರನಿಗೆ ಹುಷಾರಿಲ್ಲ ಅಂತ ಕೇಳಿಸ್ಕೊಂಡ ಮೇಲೂ ಯೇಸು ಅಲ್ಲೇ ಎರಡು ದಿನ ಉಳ್ಕೊಂಡನು. 7 ಆಮೇಲೆ ಶಿಷ್ಯರಿಗೆ “ನಾವು ಮತ್ತೆ ಯೂದಾಯಕ್ಕೆ ಹೋಗೋಣ” ಅಂದನು. 8 ಆಗ ಶಿಷ್ಯರು “ರಬ್ಬೀ,+ ಮೊನ್ನೆ ತಾನೇ ಯೂದಾಯದವರು ನಿನಗೆ ಕಲ್ಲು ಹೊಡಿಬೇಕಂತ ಇದ್ರು.+ ಇಂಥ ಸಮಯದಲ್ಲಿ ಮತ್ತೆ ಹೋಗ್ತೀಯಾ?” ಅಂತ ಕೇಳಿದ್ರು. 9 ಅದಕ್ಕೆ ಯೇಸು “ಹಗಲಲ್ಲಿ 12 ತಾಸು ಇದೆ ಅಲ್ವಾ?+ ಹಗಲಲ್ಲಿ ನಡಿಯೋರು ಈ ಲೋಕದ ಬೆಳಕನ್ನ ನೋಡೋದ್ರಿಂದ ಮುಗ್ಗರಿಸಿ ಬೀಳಲ್ಲ. 10 ಆದ್ರೆ ರಾತ್ರಿಯಲ್ಲಿ ನಡಿಯೋರು ಬೆಳಕು ಇಲ್ಲದೇ ಇರೋದ್ರಿಂದ ಮುಗ್ಗರಿಸಿ ಬೀಳ್ತಾರೆ” ಅಂದನು.
11 ಯೇಸು ಇದನ್ನೆಲ್ಲ ಹೇಳಿದ ಮೇಲೆ “ನಮ್ಮ ಗೆಳೆಯ ಲಾಜರ ನಿದ್ದೆ+ ಮಾಡ್ತಿದ್ದಾನೆ. ಅವನನ್ನ ಎಬ್ಬಿಸೋಕೆ ನಾನು ಹೋಗ್ತಾ ಇದ್ದೀನಿ” ಅಂದನು. 12 ಅದಕ್ಕೆ ಶಿಷ್ಯರು “ಪ್ರಭು, ಅವನು ನಿದ್ದೆ ಮಾಡಿದ್ರೆ ವಾಸಿ ಆಗಿಬಿಡ್ತಾನೆ” ಅಂದ್ರು. 13 ಲಾಜರ ಸತ್ತುಹೋಗಿದ್ದಾನೆ ಅಂತ ಯೇಸು ಹೇಳೋಕೆ ಬಯಸಿದನು. ಆದ್ರೆ ನಿದ್ದೆ ಮಾಡ್ತಾ ಇರೋದರ ಬಗ್ಗೆ ಯೇಸು ಹೇಳ್ತಿದ್ದಾನೆ ಅಂತ ಶಿಷ್ಯರು ಅಂದ್ಕೊಂಡ್ರು. 14 ಆಗ ಯೇಸು ನೇರವಾಗಿ “ಲಾಜರ ಸತ್ತುಹೋಗಿದ್ದಾನೆ.+ 15 ಆದ್ರೆ ನಿಮ್ಮ ಬಗ್ಗೆ ನೆನಸುವಾಗ ಅವನು ಸತ್ತಾಗ ನಾನಲ್ಲಿ ಇಲ್ಲದೆ ಇದ್ದಿದ್ದೇ ಒಳ್ಳೇದಾಯ್ತು ಅನಿಸುತ್ತೆ. ಯಾಕಂದ್ರೆ ನಾನಲ್ಲಿ ಮಾಡೋ ವಿಷ್ಯ ನಿಮ್ಮ ನಂಬಿಕೆ ಹೆಚ್ಚು ಮಾಡುತ್ತೆ. ಬನ್ನಿ ಹೋಗೋಣ” ಅಂದನು. 16 ಆಗ ಅವಳಿ ಅಂತ ಅಡ್ಡಹೆಸ್ರಿದ್ದ ತೋಮ ತನ್ನ ಜೊತೆ ಇದ್ದ ಶಿಷ್ಯರಿಗೆ “ಬನ್ನಿ ಹೋಗೋಣ, ಯೇಸು ಜೊತೆ ಸಾಯೋಣ” ಅಂದ.+
17 ಯೇಸು ಬೇಥಾನ್ಯಕ್ಕೆ ಬಂದಾಗ ಲಾಜರನನ್ನ ಸಮಾಧಿ ಮಾಡಿ ನಾಲ್ಕು ದಿನ ಆಗಿದೆ ಅಂತ ಗೊತ್ತಾಯ್ತು. 18 ಬೇಥಾನ್ಯ ಯೆರೂಸಲೇಮಿಂದ ಸುಮಾರು ಮೂರು ಕಿಲೋಮೀಟರ್* ದೂರದಲ್ಲಿತ್ತು. 19 ತುಂಬ ಜನ ಯೆಹೂದ್ಯರು ತಮ್ಮನನ್ನ ಕಳ್ಕೊಂಡಿದ್ದ ಮಾರ್ಥ ಮತ್ತು ಮರಿಯಗೆ ಸಾಂತ್ವನ ಹೇಳೋಕೆ ಬಂದಿದ್ರು. 20 ಯೇಸು ಬರ್ತಿದ್ದಾನೆ ಅಂತ ಮಾರ್ಥಗೆ ಗೊತ್ತಾಯ್ತು. ಅವಳು ಆತನನ್ನ ಭೇಟಿಮಾಡೋಕೆ ಹೋದಳು. ಮರಿಯ+ ಮನೆಯಲ್ಲೇ ಇದ್ದಳು. 21 ಮಾರ್ಥ ಯೇಸುಗೆ “ಪ್ರಭು, ನೀನು ಇಲ್ಲಿ ಇರ್ತಿದ್ರೆ ನನ್ನ ತಮ್ಮ ಸಾಯ್ತಿರಲಿಲ್ಲ. 22 ಆದ್ರೆ ಈಗ್ಲೂ ನೀನು ದೇವರ ಹತ್ರ ಏನೇ ಕೇಳ್ಕೊಂಡ್ರೂ ಕೊಡ್ತಾನೆ ಅನ್ನೋ ನಂಬಿಕೆ ನನಗಿದೆ” ಅಂದಳು. 23 ಆಗ ಯೇಸು “ನಿನ್ನ ತಮ್ಮನಿಗೆ ಮತ್ತೆ ಜೀವ ಬರುತ್ತೆ” ಅಂದನು. 24 ಅದಕ್ಕೆ ಮಾರ್ಥ “ಕೊನೇ ದಿನದಲ್ಲಿ ಸತ್ತವ್ರಿಗೆ ನೀನು ಮತ್ತೆ ಜೀವ ಕೊಡುವಾಗ+ ನನ್ನ ತಮ್ಮನೂ ಬರ್ತಾನೆ ಅಂತ ನಂಗೊತ್ತು” ಅಂದಳು. 25 ಆಗ ಯೇಸು “ಸತ್ತವ್ರನ್ನ ಬದುಕಿಸೋದೂ ಅವ್ರಿಗೆ ಜೀವ ಕೊಡೋದೂ ನಾನೇ.+ ನನ್ನ ಮೇಲೆ ನಂಬಿಕೆ ಇಡುವವರು ಸತ್ರೂ ಮತ್ತೆ ಜೀವ ಪಡ್ಕೊಳ್ತಾರೆ. 26 ಈಗ ಬದುಕಿರುವವರು ನನ್ನಲ್ಲಿ ನಂಬಿಕೆ ಇಟ್ರೆ ಸಾಯೋದೇ ಇಲ್ಲ.+ ಅದನ್ನ ನೀನು ನಂಬ್ತೀಯಾ?” ಅಂತ ಕೇಳಿದನು. 27 ಅದಕ್ಕೆ ಮಾರ್ಥ “ಹೌದು ಪ್ರಭು, ನೀನು ದೇವರ ಮಗನಾದ ಕ್ರಿಸ್ತ ಅಂತ, ಲೋಕಕ್ಕೆ ಬರಬೇಕಾದವನು ನೀನೇ ಅಂತ ನಂಬ್ತೀನಿ” ಅಂದಳು. 28 ಈ ಮಾತು ಹೇಳಿ ಅಲ್ಲಿಂದ ಹೋದಳು. ತನ್ನ ತಂಗಿ ಮರಿಯಳನ್ನ ಪಕ್ಕಕ್ಕೆ ಕರೆದು “ಗುರು+ ಬಂದಿದ್ದಾನೆ. ನಿನ್ನನ್ನ ಕರಿತಾ ಇದ್ದಾನೆ” ಅಂದಳು. 29 ಮರಿಯ ಈ ಮಾತು ಕೇಳಿದ ತಕ್ಷಣ ಎದ್ದು ಯೇಸು ಹತ್ರ ಹೋದಳು.
30 ಯೇಸು ಇನ್ನೂ ಆ ಹಳ್ಳಿಯೊಳಗೆ ಬಂದಿರಲಿಲ್ಲ. ಮಾರ್ಥಳ ಹತ್ರ ಮಾತಾಡಿದ ಅದೇ ಜಾಗದಲ್ಲಿದ್ದನು. 31 ಮರಿಯಳಿಗೆ ಸಾಂತ್ವನ ಹೇಳೋಕೆ ಬಂದಿದ್ದ ಯೆಹೂದ್ಯರು ಅವಳು ಥಟ್ಟಂತ ಎದ್ದು ಹೋಗಿದ್ದನ್ನ ನೋಡಿದ್ರು. ಅವಳು ಸಮಾಧಿ+ ಹತ್ರ ಅಳೋಕೆ ಹೋಗ್ತಿದ್ದಾಳೆ ಅಂತ ಅಂದ್ಕೊಂಡು ಅವಳ ಹಿಂದೆ ಹೋದ್ರು. 32 ಮರಿಯ ಯೇಸು ಹತ್ರ ಬಂದು ಕಾಲಿಗೆ ಬಿದ್ದು “ಪ್ರಭು, ನೀನು ಇಲ್ಲಿ ಇರ್ತಿದ್ರೆ ತಮ್ಮ ಸಾಯ್ತಿರಲಿಲ್ಲ” ಅಂದಳು. 33 ಅವಳು, ಅವಳ ಜೊತೆ ಬಂದಿದ್ದ ಯೆಹೂದ್ಯರು ಅಳೋದನ್ನ ನೋಡಿ ಯೇಸು ಒಳಗೊಳಗೇ ನೊಂದ್ಕೊಂಡು ದುಃಖಪಟ್ಟನು. 34 ಆಮೇಲೆ “ಲಾಜರನನ್ನ ಎಲ್ಲಿ ಇಟ್ಟಿದ್ದೀರಾ?” ಅಂತ ಕೇಳಿದನು. ಅವರು “ಪ್ರಭು, ಬಾ ತೋರಿಸ್ತೀವಿ” ಅಂದ್ರು. 35 ಯೇಸು ಕಣ್ಣೀರು ಸುರಿಸಿದನು.+ 36 ಅದನ್ನ ನೋಡಿ ಯೆಹೂದ್ಯರು “ಇವನಿಗೆ ಲಾಜರನ ಮೇಲೆ ಎಷ್ಟು ಪ್ರೀತಿ ನೋಡಿ!” ಅಂದ್ರು. 37 ಆದ್ರೆ ಅವ್ರಲ್ಲಿ ಕೆಲವರು “ಆ ಕುರುಡನಿಗೆ ಕಣ್ಣು ಬರೋ ತರ ಮಾಡಿದ+ ಇವನಿಗೆ ಲಾಜರ ಸಾಯದೇ ಇರೋ ತರ ಮಾಡ್ಬಹುದಿತ್ತಲ್ವಾ?” ಅಂದ್ರು.
38 ಯೇಸು ಮತ್ತೆ ಒಳಗೊಳಗೇ ತುಂಬ ನೊಂದ್ಕೊಳ್ತಾ ಸಮಾಧಿ ಹತ್ರ ಬಂದನು. ನಿಜ ಹೇಳಬೇಕಂದ್ರೆ ಆ ಸಮಾಧಿ ಒಂದು ಗವಿ. ಅದನ್ನ ಒಂದು ದೊಡ್ಡ ಕಲ್ಲಿಂದ ಮುಚ್ಚಿದ್ರು. 39 ಯೇಸು “ಆ ಕಲ್ಲನ್ನ ಪಕ್ಕಕ್ಕೆ ಸರಿಸಿ” ಅಂದನು. ಸತ್ತುಹೋಗಿದ್ದ ಲಾಜರನ ಅಕ್ಕ ಮಾರ್ಥ “ಪ್ರಭು, ಅವನು ಸತ್ತು ನಾಲ್ಕು ದಿನ ಆಗಿದೆ. ಈಗ ಅವನ ದೇಹ ವಾಸನೆ ಬರುತ್ತಿರುತ್ತೆ” ಅಂದಳು. 40 ಆಗ ಯೇಸು “ನೀನು ನಂಬಿದ್ರೆ ದೇವರ ಮಹಾ ಶಕ್ತಿಯನ್ನ ನೋಡ್ತೀಯ ಅಂತ ಹೇಳಿರಲಿಲ್ವಾ?” ಅಂದನು.+ 41 ಜನ ಆ ಕಲ್ಲನ್ನ ಸರಿಸಿದ್ರು. ಯೇಸು ಆಕಾಶದ ಕಡೆ+ ನೋಡ್ತಾ “ಅಪ್ಪಾ, ನನ್ನ ಪ್ರಾರ್ಥನೆ ಕೇಳಿದ್ದಕ್ಕೆ ತುಂಬ ಧನ್ಯವಾದ. 42 ನೀನು ಯಾವಾಗ್ಲೂ ನನ್ನ ಪ್ರಾರ್ಥನೆ ಕೇಳ್ತೀಯ ಅಂತ ನಂಗೊತ್ತು. ಆದ್ರೆ ನೀನೇ ನನ್ನನ್ನ ಕಳಿಸಿದ್ದೀಯ ಅನ್ನೋ ನಂಬಿಕೆ ನನ್ನ ಸುತ್ತ ಇರೋ ಜನ್ರಿಗೆ ಬರಲಿ ಅಂತ ಹೀಗೆ ಹೇಳ್ತಾ ಇದ್ದೀನಿ” ಅಂದನು.+ 43 ಈ ಮಾತನ್ನ ಹೇಳಿದ ಮೇಲೆ “ಲಾಜರ, ಎದ್ದು ಹೊರಗೆ ಬಾ” ಅಂತ ಜೋರಾಗಿ ಹೇಳಿದನು.+ 44 ಆಗ ಸತ್ತಿದ್ದ ಲಾಜರ ಎದ್ದು ಹೊರಗೆ ಬಂದ. ಅವನ ಕೈಕಾಲಿಗೆ ಬಟ್ಟೆಯ ಪಟ್ಟಿ ಸುತ್ತಿದ್ರು. ಮುಖಕ್ಕೂ ಬಟ್ಟೆ ಕಟ್ಟಿದ್ರು. ಯೇಸು ಜನ್ರಿಗೆ “ಆ ಪಟ್ಟಿಗಳನ್ನ ಬಿಚ್ಚಿ, ಅವನು ನಡಿಲಿ” ಅಂದನು.
45 ಮರಿಯಳ ಜೊತೆ ಬಂದಿದ್ದ ಯೆಹೂದ್ಯರಲ್ಲಿ ತುಂಬ ಜನ ಯೇಸು ಮಾಡಿದ್ದನ್ನ ನೋಡಿ ಆತನ ಮೇಲೆ ನಂಬಿಕೆ ಇಟ್ರು.+ 46 ಆದ್ರೆ ಕೆಲವರು ಯೇಸು ಮಾಡಿದ್ದನ್ನ ಫರಿಸಾಯರ ಹತ್ರ ಹೇಳಿದ್ರು. 47 ಆಗ ಮುಖ್ಯ ಪುರೋಹಿತರು, ಫರಿಸಾಯರು ಹಿರೀಸಭೆಯಲ್ಲಿ ಸೇರಿ “ನಾವೇನು ಮಾಡೋಣ? ಈ ಮನುಷ್ಯ ತುಂಬ ಅದ್ಭುತಗಳನ್ನ ಮಾಡ್ತಿದ್ದಾನೆ.+ 48 ನಾವು ಇವನನ್ನ ಹೀಗೇ ಬಿಟ್ರೆ ಎಲ್ರೂ ಅವನ ಮೇಲೆ ನಂಬಿಕೆ ಇಡ್ತಾರೆ. ಆಗ ರೋಮನ್ನರು ಬಂದು ದೇವಾಲಯದ ಮೇಲೆ, ದೇಶದ ಮೇಲೆ ನಮಗಿರೋ ಅಧಿಕಾರವನ್ನ ಕಿತ್ಕೊಳ್ತಾರೆ” ಅಂದ್ರು. 49 ಅವ್ರಲ್ಲಿ ಆ ವರ್ಷಕ್ಕೆ ಮಹಾ ಪುರೋಹಿತನಾಗಿದ್ದ ಕಾಯಫನೂ+ ಇದ್ದ. ಅವನು “ನಿಮಗರ್ಥ ಆಗ್ತಿಲ್ವಾ? 50 ನಾನು ನಿಮ್ಮ ಒಳ್ಳೇದಕ್ಕೆ ಹೇಳ್ತಾ ಇದ್ದೀನಿ. ಇಡೀ ದೇಶ ನಾಶ ಆಗೋದಕ್ಕಿಂತ ಒಬ್ಬ ಮನುಷ್ಯ ಎಲ್ರಿಗೋಸ್ಕರ ಸಾಯೋದೇ ಒಳ್ಳೇದು. ಏನಂತೀರಾ?” ಅಂದ. 51 ಆದ್ರೆ ಇದು ಅವನ ಯೋಚನೆ ಆಗಿರ್ಲಿಲ್ಲ. ಆ ವರ್ಷ ಅವನು ಮಹಾ ಪುರೋಹಿತ ಆಗಿದ್ರಿಂದ ದೇವರೇ ಅವನನ್ನ ಬಳಸಿ ಒಂದು ಭವಿಷ್ಯವಾಣಿ ಹೇಳೋ ತರ ಮಾಡಿದ್ದ. ಯೇಸು ತನ್ನ ಜನ್ರಿಗೋಸ್ಕರ ಸಾಯ್ತಾನೆ. 52 ಆ ಜನ್ರಿಗೋಸ್ಕರ ಮಾತ್ರ ಅಲ್ಲ ಚೆಲ್ಲಾಪಿಲ್ಲಿ ಆಗಿರೋ ದೇವರ ಮಕ್ಕಳನ್ನ ಒಟ್ಟುಸೇರಿಸೋಕೆ ಪ್ರಾಣ ಕೊಡ್ತಾನೆ ಅನ್ನೋದೇ ಆ ಭವಿಷ್ಯವಾಣಿ. 53 ಹಾಗಾಗಿ ಅವತ್ತಿಂದ ಯೇಸುವನ್ನ ಕೊಲ್ಲೋಕೆ ಅವರು ಪಿತೂರಿ ಹೂಡ್ತಾ ಇದ್ರು.
54 ಈ ಕಾರಣದಿಂದಾನೇ ಯೇಸು ಯೆಹೂದ್ಯರ ಕಣ್ಣಿಗೆ ಬೀಳದೆ ಪ್ರಯಾಣ ಮಾಡ್ತಾ ಇದ್ದನು. ಅಲ್ಲಿಂದ ಕಾಡಿನ ಹತ್ರ ಇದ್ದ ಎಫ್ರಾಯಿಮ್+ ಅನ್ನೋ ಊರಿಗೆ ಹೋದನು. ಶಿಷ್ಯರ ಜೊತೆ ಅಲ್ಲೇ ಉಳ್ಕೊಂಡನು. 55 ಯೆಹೂದ್ಯರ ಪಸ್ಕ ಹಬ್ಬ+ ಹತ್ರ ಆಗಿತ್ತು. ಹಾಗಾಗಿ ತುಂಬ ಜನ ಆಚಾರದ ಪ್ರಕಾರ ಶುದ್ಧ ಮಾಡ್ಕೊಳ್ಳೋಕೆ ಹಬ್ಬಕ್ಕಿಂತ ಮುಂಚೆನೇ ಹಳ್ಳಿಗಳಿಂದ ಯೆರೂಸಲೇಮಿಗೆ ಬರ್ತಾ ಇದ್ರು. 56 ಅವರು ಅಲ್ಲಿ ಯೇಸುಗಾಗಿ ಹುಡುಕ್ತಾ ದೇವಾಲಯದಲ್ಲಿ ನಿಂತ್ಕೊಂಡು “ನಿಮಗೇನು ಅನಿಸುತ್ತೆ? ಹಬ್ಬಕ್ಕೆ ಯೇಸು ಬರಲ್ವಾ?” ಅಂತ ಮಾತಾಡ್ಕೊಳ್ತಾ ಇದ್ರು. 57 ಆದ್ರೆ ಮುಖ್ಯ ಪುರೋಹಿತರು, ಫರಿಸಾಯರು ಯೇಸುವನ್ನ ಹಿಡಿಬೇಕಂತ ಇದ್ದಿದ್ರಿಂದ ಯೇಸು ಎಲ್ಲಿದ್ದಾನೆ ಅಂತ ಗೊತ್ತಾದ ತಕ್ಷಣ ನಮಗೆ ಹೇಳಬೇಕು ಅಂತ ಅಪ್ಪಣೆ ಕೊಟ್ಟಿದ್ರು.