ಕೊರಿಂಥದವರಿಗೆ ಬರೆದ ಮೊದಲನೇ ಪತ್ರ
7 ನೀವು ನನಗೆ ಬರೆದು ಕೇಳಿದ ಪ್ರಶ್ನೆಗಳ ಬಗ್ಗೆ ನಾನೀಗ ಬರೀತಾ ಇದ್ದೀನಿ. ಪುರುಷ ಸ್ತ್ರೀಯನ್ನ ಮುಟ್ಟದೆ ಇರೋದೇ* ಒಳ್ಳೇದು. 2 ಆದ್ರೆ ಲೈಂಗಿಕ ಅನೈತಿಕತೆ* ಎಲ್ಲ ಕಡೆ ಸಾಮಾನ್ಯ ಆಗಿರೋದ್ರಿಂದ ಪ್ರತಿಯೊಬ್ಬ ಪುರುಷನಿಗೆ ಸ್ವಂತ ಹೆಂಡತಿ ಇರಲಿ+ ಮತ್ತು ಪ್ರತಿಯೊಬ್ಬ ಸ್ತ್ರೀಗೆ ಸ್ವಂತ ಗಂಡ ಇರಲಿ.+ 3 ಗಂಡ ತನ್ನ ಹೆಂಡತಿಗೆ ಕೊಡಬೇಕಾಗಿರೋದನ್ನ* ಕೊಡಲಿ, ಅದೇ ತರ ಹೆಂಡತಿನೂ ಗಂಡನಿಗೆ ಕೊಡಬೇಕಾಗಿರೋದನ್ನ ಕೊಡಲಿ.+ 4 ಹೆಂಡತಿಗೆ ಅವಳ ದೇಹದ ಮೇಲೆ ಅವಳಿಗೇ ಅಧಿಕಾರ ಇಲ್ಲ, ಆದ್ರೆ ಗಂಡನಿಗೆ ಅವಳ ದೇಹದ ಮೇಲೆ ಅಧಿಕಾರ ಇದೆ. ಅದೇ ತರ ಗಂಡನಿಗೆ ಅವನ ದೇಹದ ಮೇಲೆ ಅವನಿಗೇ ಅಧಿಕಾರ ಇಲ್ಲ, ಆದ್ರೆ ಹೆಂಡತಿಗೆ ಅವನ ದೇಹದ ಮೇಲೆ ಅಧಿಕಾರ ಇದೆ. 5 ಪ್ರಾರ್ಥನೆ ಮಾಡೋಕೆ ಸಮಯ ಕೊಡೋ ಹಾಗೆ ಇಬ್ರೂ ಸೇರಿ ಮಾತಾಡಿ ಒಪ್ಕೊಂಡು ಸ್ವಲ್ಪ ಸಮಯ ಲೈಂಗಿಕ ಸಂಬಂಧದಿಂದ ದೂರ ಇರಬಹುದು ಬಿಟ್ರೆ ಬೇರೆ ಯಾವ ಕಾರಣಕ್ಕೂ ದೂರ ಆಗಬಾರದು. ಆದ್ರೆ ನೀವು ಸ್ವನಿಯಂತ್ರಣ ಕಳ್ಕೊಂಡಾಗ ಪಾಪ ಮಾಡೋ ಹಾಗೆ ಸೈತಾನ ನಿಮ್ಮನ್ನ ಸೆಳೆಯೋಕೆ ಬಿಡದೆ ನೀವಿಬ್ರೂ ಮತ್ತೆ ಒಂದಾಗಬೇಕು. 6 ನಾನು ಇದನ್ನ ಒಂದು ಆಜ್ಞೆ ತರ ಕೊಡ್ತಿಲ್ಲ, ನಿಮಗೆ ಬೇಕಾದ್ರೆ ಇದನ್ನ ಪಾಲಿಸಬಹುದು. 7 ಎಲ್ರೂ ನನ್ನ ತರಾನೇ ಇದ್ದಿದ್ರೆ ಚೆನ್ನಾಗಿತ್ತು. ಹಾಗಿದ್ರೂ ಪ್ರತಿಯೊಬ್ರಿಗೆ ದೇವರು ಒಂದೊಂದು ವರ ಕೊಟ್ಟಿದ್ದಾನೆ.+ ಹಾಗಾಗಿ ಸ್ವಲ್ಪ ಜನ ಮದುವೆ ಆಗ್ತಾರೆ, ಸ್ವಲ್ಪ ಜನ ಮದುವೆ ಆಗಲ್ಲ.
8 ಇನ್ನೂ ಮದುವೆ ಆಗದೆ ಇರುವವ್ರಿಗೆ, ವಿಧವೆಯರಿಗೆ ನಾನೀಗ ಹೇಳೋದು ಏನಂದ್ರೆ, ಅವರು ನಾನಿರೋ ತರ ಇದ್ರೆ ಚೆನ್ನಾಗಿರುತ್ತೆ.+ 9 ಆದ್ರೆ ಅವ್ರಿಗೆ ಸ್ವನಿಯಂತ್ರಣ ಇಲ್ಲದಿದ್ರೆ ಅವರು ಮದುವೆ ಆಗಲಿ. ಯಾಕಂದ್ರೆ ಕಾಮದ ಬೆಂಕಿಯಲ್ಲಿ ಬೇಯೋದಕ್ಕಿಂತ ಮದುವೆ ಆಗೋದೇ ಒಳ್ಳೇದು.+
10 ಮದುವೆ ಆದವ್ರಿಗೆ ನಾನು ಹೇಳೋದು ಏನಂದ್ರೆ, ನಾನಲ್ಲ ಪ್ರಭು ಹೇಳೋದು ಏನಂದ್ರೆ: ಹೆಂಡತಿ ಗಂಡನನ್ನ ಬಿಡಬಾರದು.+ 11 ಒಂದುವೇಳೆ ಬಿಟ್ಟು ಹೋದ್ರೆ ಅವಳು ಇನ್ನೊಬ್ಬನನ್ನ ಮದುವೆ ಆಗಬಾರದು ಅಥವಾ ಗಂಡನ ಜೊತೆ ಮತ್ತೆ ಸಮಾಧಾನ ಮಾಡ್ಕೊಬೇಕು. ಗಂಡನೂ ಹೆಂಡತಿಯನ್ನ ಬಿಡಬಾರದು.+
12 ಪ್ರಭು ಅಲ್ಲ, ನಾನು ಬೇರೆಯವ್ರಿಗೆ ಹೇಳೋದು ಏನಂದ್ರೆ,+ ಒಬ್ಬ ಸಹೋದರನಿಗೆ ಸತ್ಯದೇವರನ್ನ ನಂಬದ ಹೆಂಡತಿ ಇದ್ರೆ ಮತ್ತು ಅವನ ಜೊತೆ ಬಾಳೋಕೆ ಅವಳು ಒಪ್ಕೊಂಡ್ರೆ ಅವನು ಅವಳನ್ನ ಬಿಡಬಾರದು. 13 ಅದೇ ತರ ಒಬ್ಬ ಸಹೋದರಿಗೆ ಸತ್ಯದೇವರನ್ನ ನಂಬದ ಗಂಡನಿದ್ರೆ ಮತ್ತು ಅವಳ ಜೊತೆ ಬಾಳೋಕೆ ಅವನು ಒಪ್ಕೊಂಡ್ರೆ ಅವಳು ಅವನನ್ನ ಬಿಡಬಾರದು. 14 ಯಾಕಂದ್ರೆ ಸತ್ಯದೇವರನ್ನ ನಂಬದ ಗಂಡ ಹೆಂಡತಿಯಿಂದಾಗಿ ದೇವರ ದೃಷ್ಟಿಯಲ್ಲಿ ಪವಿತ್ರ ಆಗ್ತಾನೆ. ಸತ್ಯದೇವರನ್ನ ನಂಬದ ಹೆಂಡತಿ ಗಂಡನಿಂದಾಗಿ ದೇವರ ದೃಷ್ಟಿಯಲ್ಲಿ ಪವಿತ್ರ ಆಗ್ತಾಳೆ. ಇಲ್ಲಾಂದ್ರೆ ನಿಮ್ಮ ಮಕ್ಕಳು ದೇವರ ದೃಷ್ಟಿಯಲ್ಲಿ ಅಶುದ್ಧರಾಗಿ ಇರ್ತಿದ್ರು, ಆದ್ರೆ ಈಗ ಅವರು ಪವಿತ್ರರಾಗಿದ್ದಾರೆ. 15 ಸತ್ಯದೇವರನ್ನ ನಂಬದ ಸಂಗಾತಿ ಬಿಟ್ಟು ಹೋಗಬೇಕು ಅಂತಿದ್ರೆ ಬಿಟ್ಟು ಹೋಗ್ಲಿ. ಅಂಥ ಸಂದರ್ಭದಲ್ಲಿ ಸತ್ಯದೇವರನ್ನ ನಂಬೋ ಗಂಡ ಅಥವಾ ಹೆಂಡತಿ ಆ ಸಂಗಾತಿ ಜೊತೆ ಇರ್ಲೇಬೇಕು ಅಂತೇನಿಲ್ಲ. ನೀವು ಶಾಂತಿಯಿಂದ ಬದುಕಬೇಕು ಅಂತಾನೇ ದೇವರು ನಿಮ್ಮನ್ನ ಆರಿಸ್ಕೊಂಡಿದ್ದಾನೆ.+ 16 ಹೆಂಡತಿಯೇ, ನಿನ್ನ ಗಂಡನ ಜೊತೆ ಇದ್ರೆ ನೀನು ಅವನನ್ನ ರಕ್ಷಿಸೋಕೆ ಆಗುತ್ತೇನೋ?+ ಗಂಡನೇ, ನಿನ್ನ ಹೆಂಡತಿ ಜೊತೆ ಇದ್ರೆ ನೀನು ಅವಳನ್ನ ರಕ್ಷಿಸೋಕೆ ಆಗುತ್ತೇನೋ? ಯಾರಿಗೆ ಗೊತ್ತು?
17 ಯೆಹೋವ* ಪ್ರತಿಯೊಬ್ಬನಿಗೆ ಯಾವ ಪರಿಸ್ಥಿತಿಯಲ್ಲಿ ಇರೋಕೆ ಬಿಟ್ಟಿದ್ದಾನೋ ಅಥವಾ ಸತ್ಯದೇವರನ್ನ ನಂಬಿದಾಗ ಯಾವ ಪರಿಸ್ಥಿತಿಯಲ್ಲಿ ಇದ್ನೋ ಈಗ್ಲೂ ಅದೇ ಪರಿಸ್ಥಿತಿಯಲ್ಲಿ ಜೀವನ ಮಾಡ್ಲಿ.+ ನಾನು ಈ ನಿರ್ದೇಶನವನ್ನ ಎಲ್ಲ ಸಭೆಗೂ ಕೊಡ್ತಾ ಇದ್ದೀನಿ. 18 ಸತ್ಯದೇವರನ್ನ ನಂಬಿದಾಗ ಅವನಿಗೆ ಸುನ್ನತಿ ಆಗಿದ್ರೆ+ ಅವನು ಹಾಗೇ ಇರಲಿ. ಸತ್ಯದೇವರನ್ನ ನಂಬಿದಾಗ ಅವನಿಗೆ ಸುನ್ನತಿ ಆಗಿಲ್ಲಾಂದ್ರೆ ಅವನು ಸುನ್ನತಿ ಮಾಡಿಸ್ಕೊಳ್ಳೋದು ಬೇಡ.+ 19 ಸುನ್ನತಿ ಆಗಿದ್ಯಾ ಇಲ್ವಾ ಅನ್ನೋದು ಮುಖ್ಯ ಅಲ್ಲ,+ ದೇವರ ಆಜ್ಞೆಗಳನ್ನ ಪಾಲಿಸೋದೇ ಮುಖ್ಯ.+ 20 ದೇವರು ನಿಮ್ಮನ್ನ ಸತ್ಯಕ್ಕೆ* ಕರೆದಾಗ ಪ್ರತಿಯೊಬ್ಬನೂ ಯಾವ ಸ್ಥಿತಿಯಲ್ಲಿ ಇದ್ದನೋ ಅದೇ ಸ್ಥಿತಿಯಲ್ಲಿ ಇರಲಿ.+ 21 ಸತ್ಯದೇವರನ್ನ ನಂಬಿದಾಗ ನೀನು ದಾಸನಾಗಿದ್ಯಾ? ಅದಕ್ಕೆ ಚಿಂತೆ ಮಾಡಬೇಡ.+ ಆದ್ರೆ ಸ್ವತಂತ್ರನಾಗೋಕೆ ನಿನಗೆ ಅವಕಾಶ ಸಿಕ್ಕಿದ್ರೆ ಅದನ್ನ ಬಿಡಬೇಡ. 22 ಒಬ್ಬನು ದಾಸನಾಗಿದ್ದಾಗ ಪ್ರಭುವಿನ ಶಿಷ್ಯನಾಗೋಕೆ ದೇವರು ಅವನನ್ನ ಕರೆದ್ರೆ ಅವನು ಸ್ವತಂತ್ರನಾಗಿ ಪ್ರಭುಗೆ ಸೇರಿದವನಾಗ್ತಾನೆ.+ ಅದೇ ತರ ಸ್ವತಂತ್ರನಾಗಿದ್ದಾಗ ದೇವರು ಅವನನ್ನ ಕರೆದ್ರೆ ಅವನು ಕ್ರಿಸ್ತನಿಗೆ ದಾಸನಾಗ್ತಾನೆ. 23 ದೇವರು ನಿಮ್ಮನ್ನ ಬೆಲೆಕೊಟ್ಟು ತಗೊಂಡಿದ್ದಾನೆ.+ ಹಾಗಾಗಿ ಇನ್ಮುಂದೆ ಮನುಷ್ಯರಿಗೆ ದಾಸರಾಗಬೇಡಿ. 24 ಸಹೋದರರೇ, ದೇವರು ಕರೆದಾಗ ಪ್ರತಿಯೊಬ್ಬನೂ ಯಾವ ಸ್ಥಿತಿಯಲ್ಲಿ ಇದ್ನೋ ದೇವರ ಮುಂದೆ ಅವನು ಅದೇ ಸ್ಥಿತಿಯಲ್ಲಿ ಉಳಿಲಿ.
25 ಮದುವೆ ಆಗದೆ ಇರುವವ್ರ ಬಗ್ಗೆ ಪ್ರಭು ನನಗೆ ಯಾವ ಆಜ್ಞೆನೂ ಕೊಟ್ಟಿಲ್ಲ. ಆದ್ರೆ ಪ್ರಭುವಿನ ಕರುಣೆಯಿಂದ ನಂಬಿಗಸ್ತನಾಗಿರೋ ನಾನು ನನ್ನ ಅಭಿಪ್ರಾಯ ಹೇಳ್ತೀನಿ.+ 26 ಈಗಿರೋ ಕಷ್ಟ ನೋಡಿದ್ರೆ ಒಬ್ಬ ಗಂಡಸು ಈಗ ಹೇಗಿದ್ದಾನೋ ಹಾಗೇ ಇದ್ರೆ ಒಳ್ಳೇದು ಅಂತ ನನಗನಿಸುತ್ತೆ. 27 ನಿನಗೆ ಹೆಂಡತಿ ಇದ್ದಾಳಾ? ಹಾಗಿದ್ರೆ ಅವಳನ್ನ ಬಿಡೋಕೆ ಪ್ರಯತ್ನ ಮಾಡಬೇಡ.+ ನಿನಗೆ ಹೆಂಡತಿ ಇಲ್ವಾ? ಹಾಗಿದ್ರೆ ಹೆಂಡತಿಯನ್ನ ಪಡಿಯೋಕೆ ಪ್ರಯತ್ನ ಮಾಡಬೇಡ. 28 ನಿನಗೆ ಮದುವೆ ಆಗಿದ್ರೂ ಪಾಪ ಅಲ್ಲ. ಮದುವೆ ಆಗದವರು ಮದುವೆ ಆದ್ರೂ ಪಾಪ ಅಲ್ಲ. ಆದ್ರೆ ಮದುವೆ ಆದವ್ರಿಗೆ ಜೀವನದಲ್ಲಿ* ಕಷ್ಟಸಂಕಟ ಇರುತ್ತೆ. ಇದ್ರಿಂದ ನಿಮ್ಮನ್ನ ತಪ್ಪಿಸಬೇಕು ಅನ್ನೋದೇ ನನ್ನಾಸೆ.
29 ಅಷ್ಟೇ ಅಲ್ಲ ಸಹೋದರರೇ ನಾನು ಹೇಳೋದು ಏನಂದ್ರೆ, ಇನ್ನು ಸ್ವಲ್ಪಾನೇ ಸಮಯ ಉಳಿದಿದೆ.+ ಹಾಗಾಗಿ ಇನ್ಮೇಲೆ ಹೆಂಡತಿ ಇರುವವರು ಹೆಂಡತಿ ಇಲ್ಲದವ್ರ ತರ, 30 ಅಳುವವರು ಅಳದವ್ರ ತರ, ಖುಷಿಪಡುವವರು ಖುಷಿಪಡದವ್ರ ತರ, ಕೊಂಡುಕೊಳ್ಳೋರು ತಗೊಂಡಿದ್ದು ಅವರದ್ದಲ್ಲ ಅನ್ನೋ ತರ, 31 ಈ ಲೋಕದಿಂದ ಪ್ರಯೋಜನ ಪಡಿಯುವವರು ಅದ್ರಿಂದ ಪೂರ್ತಿ ಪ್ರಯೋಜನ ಪಡಿಯದವ್ರ ತರ ಇರಲಿ. ಯಾಕಂದ್ರೆ ಈ ಲೋಕ ಬದಲಾಗ್ತಾನೇ ಇದೆ. 32 ನಿಜ ಏನಂದ್ರೆ, ನಿಮಗೆ ಏನೂ ಚಿಂತೆ ಇರಬಾರದು ಅನ್ನೋದು ನನ್ನಾಸೆ. ಮದುವೆ ಆಗದೆ ಇರುವವನು ಕ್ರಿಸ್ತನನ್ನ ಮೆಚ್ಚಿಸೋಕೆ ಇಷ್ಟ ಪಡೋದ್ರಿಂದ ಆತನ ಸೇವೆ ಮಾಡೋದ್ರ ಬಗ್ಗೆನೇ ಚಿಂತಿಸ್ತಾನೆ. 33 ಆದ್ರೆ ಮದುವೆ ಆದವನು ಹೆಂಡತಿಯನ್ನ ಮೆಚ್ಚಿಸೋಕೆ ಇಷ್ಟ ಪಡೋದ್ರಿಂದ ಈ ಲೋಕದ ವಿಷ್ಯಗಳ ಬಗ್ಗೆ ಚಿಂತಿಸ್ತಾನೆ.+ 34 ಅವನ ಮನಸ್ಸು ಎರಡೂ ಕಡೆ ಎಳೀತಾ ಇರುತ್ತೆ. ಹಾಗೇ, ಮದುವೆ ಆಗದಿರೋ ಸ್ತ್ರೀಯರು, ಕನ್ಯೆಯರು ತಮ್ಮ ದೇಹದಲ್ಲೂ ಮನಸ್ಸಲ್ಲೂ ಪವಿತ್ರರಾಗಿ ಇರಬೇಕು ಅಂತ ಕ್ರಿಸ್ತನ ಸೇವೆ ಮಾಡೋದ್ರ ಬಗ್ಗೆನೇ ಚಿಂತಿಸ್ತಾರೆ.+ ಆದ್ರೆ ಮದುವೆಯಾದ ಸ್ತ್ರೀ ಗಂಡನನ್ನ ಮೆಚ್ಚಿಸೋಕೆ ಇಷ್ಟ ಪಡೋದ್ರಿಂದ ಈ ಲೋಕದ ವಿಷ್ಯಗಳ ಬಗ್ಗೆ ಚಿಂತಿಸ್ತಾಳೆ. 35 ನಾನು ಇದನ್ನ ನಿಮ್ಮ ಒಳ್ಳೇದಕ್ಕೇ ಹೇಳ್ತಿದ್ದೀನಿ, ನಿಮ್ಮನ್ನ ತಡಿಯೋಕಲ್ಲ. ಸರಿಯಾಗಿ ಇರೋದನ್ನ ಮಾಡೋಕೆ ಮತ್ತು ಗಮನ ಬೇರೆ ಕಡೆ ಹೋಗದೆ ಪೂರ್ಣ ಮನಸ್ಸಿಂದ ಕ್ರಿಸ್ತನ ಸೇವೆ ಮಾಡೋಕೆ ನಿಮ್ಮನ್ನ ಹೀಗೆ ಹುರಿದುಂಬಿಸ್ತಾ ಇದ್ದೀನಿ.
36 ಮದುವೆ ಆಗದೆ ಇರೋ ಒಬ್ಬ ವ್ಯಕ್ತಿಗೆ ತನ್ನ ಲೈಂಗಿಕ ಆಸೆಗಳನ್ನ ಹತೋಟಿಯಲ್ಲಿ ಇಡೋಕೆ ಆಗದಿದ್ರೆ ಮತ್ತು ಯುವಪ್ರಾಯ ದಾಟಿದ್ರೆ* ಅವನು ಇಷ್ಟಪಡೋ ಹಾಗೆ ಮದುವೆಯಾಗಲಿ. ಅದು ಪಾಪ ಅಲ್ಲ.+ 37 ಆದ್ರೆ ಒಬ್ಬನಿಗೆ ಮದುವೆ ಆಗೋದು ಬೇಡ ಅಂತ ಅನಿಸೋದ್ರಿಂದ ಮತ್ತು ಅವನಲ್ಲಿರೋ ಆಸೆಗಳನ್ನ ಹತೋಟಿಯಲ್ಲಿ ಇಡೋ ಸಾಮರ್ಥ್ಯ ಇರೋದ್ರಿಂದ ಮದುವೆ ಆಗಬಾರದು ಅಂತ ಅವನು ಮನಸ್ಸಲ್ಲಿ ತೀರ್ಮಾನಿಸಿ, ಆ ತೀರ್ಮಾನ ಬದಲಾಯಿಸದೆ ಇದ್ರೆ ಅವನಿಗೆ ತುಂಬ ಪ್ರಯೋಜನ ಇದೆ.+ 38 ಮದುವೆ ಆದ್ರೂ ಪ್ರಯೋಜನ ಇದೆ. ಮದುವೆ ಆಗದೇ ಇದ್ರೆ ಇನ್ನೂ ಪ್ರಯೋಜನ ಇದೆ.+
39 ಗಂಡ ಬದುಕಿರೋ ತನಕ ಹೆಂಡತಿ ಮದುವೆ ಬಂಧದಲ್ಲಿ ಇರ್ತಾಳೆ.+ ಗಂಡ ಸತ್ರೆ ತನಗೆ ಇಷ್ಟ ಆದವನನ್ನ ಮದುವೆ ಆಗೋ ಸ್ವಾತಂತ್ರ್ಯ ಅವಳಿಗಿದೆ. ಆದ್ರೆ ಸತ್ಯದಲ್ಲಿ ಇರುವವ್ರನ್ನ* ಮಾತ್ರ ಮದುವೆ ಆಗಬೇಕು.+ 40 ನನ್ನ ಅಭಿಪ್ರಾಯ ಏನಂದ್ರೆ, ಅವಳು ಮತ್ತೆ ಮದುವೆ ಆಗದೇ ಇದ್ರೆ ಖುಷಿಯಾಗಿ ಇರ್ತಾಳೆ. ಈ ಮಾತುಗಳನ್ನ ಹೇಳೋಕೆ ದೇವರ ಪವಿತ್ರಶಕ್ತಿನೇ ನನ್ನನ್ನ ಮಾರ್ಗದರ್ಶಿಸಿದೆ ಅನ್ನೋ ಭರವಸೆ ನನಗಿದೆ.